Saturday 14 November, 2009

ನಾನೂ ಮಕ್ಕಳ ದಿನಾಚರಣೆ ಆಚರಿಸಿದೆ

ಈ ದಿನ ನಮ್ಮ ದೇಶದಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಾರೆ. ಈ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ಆಚರಿಸುತ್ತಾರೆ. ಬಹುಶಃ ಒಬ್ಬ ವ್ಯಕ್ತಿಯ ಹುಟ್ಟು ಹಬ್ಬವನ್ನು ಹೀಗೆ ಆಚಾರಿಸುತ್ತಿರುವುದು ಕೇವಲ ಭಾರತ ಅಂತ ನನ್ನ ಅಭಿಪ್ರಾಯ. ಈಗ ನೇರವಾಗಿ ವಿಷಯಕ್ಕೆ ಬರುತ್ತೇನೆ.

ಮಕ್ಕಳ ದಿನಾಚರಣೆಗೆ ನಾನು ಮಗುವಾಗಿ ಬಿಡುತ್ತೇನೆ. ನಾನು ಹೇಗೆ ಆಚರಿಸುತ್ತೇನೆಂದರೆ... ಅಮ್ಮನಿಗೆ ಹೇಳುತ್ತೀನಿ.. "ಇವತ್ತು ಮಕ್ಕಳ ದಿನಾಚರಣೆ. ಹಾಗಾಗಿ, ಊಟ, ತಿಂಡಿಯನ್ನು ನೀನೆ ತಿನ್ನಿಸ ಬೇಕು. ಹಾಲು, ಕಾಫಿ ನೀನೇ ಕುಡಿಸ ಬೇಕು."  ಈ ರೀತಿಯಾದ ಆಚರಣೆ ನಡೆಯುತ್ತಾ ಬಂದಿದೆ, ಮುಂದೂ ನಡೆಯುತ್ತೆ. ಯಾಕೆಂದರೆ ಅವರಿಗೆ ನಾನಿನ್ನೂ ಮಗು! ಮತ್ತೊಂದು ಸ್ವಾರಸ್ಯಕರ ವಿಷಯವೇನೆಂದರೆ ಈ ತಾಯಿನಿಂದ ತಿನ್ನಿಸಿಕೊಳ್ಳುವ ಸೌಭಾಗ್ಯಕ್ಕೆ ನಾನು ನವೆಂಬರ್ ೧೪ಕ್ಕೇ ಕಾಯಬೇಕಿಲ್ಲ.  ನನಗೆ ಯಾವಾಗ ಬೇಕೋ ಆವಾಗ ಮಕ್ಕಳ ದಿನಾಚರಣೆ ಆಚರಿಸುತ್ತೇನೆ. ನನಗೆ ಕಾಲು ಶತಮಾನವಾದರೂ ಈಗಲೂ ತಿನ್ನಿಸುತ್ತಾರೆ.

ಆದರೆ ಈ ಸಲ ವಿಶೇಷವಾಗಿತ್ತು ಈ ಆಚರಣೆ. ಅದು ಹೇಗೆಂದರೆ... ನಮ್ಮ ಮನೆಯ ಹಿಂದೆ, ಕೆಲವು ಗುಡಿಸಲುಗಳಿವೆ. ಅಲ್ಲಿಯ ಮಕ್ಕಳ ಪ್ರತಿದಿನ ನಮ್ಮ ಮನೆಯ ಮುಂದೆ ಬಂದು ಆಡುತ್ತಾ ಇರುತ್ತಾರೆ. ಈ ೭-೮ ಮಕ್ಕಳ ಗುಂಪಿಗೆ ಒಬ್ಬ ನಾಯಕನಿದ್ದಾನೆ. ಅವನ ಮಾತು ಅಂದ್ರೆ ಎಲ್ಲಾರೂ ಕೇಳುತ್ತಾರೆ. ಅವನನ್ನು ನಾನು ಹೀರೋ ಅಂತ ಕರಿಯುತ್ತೇನೆ.

ಮೊನ್ನೆ ಅವರೆಲ್ಲಾ ಬಂದುರು. ಆ ನಾಯಕ,  ನನ್ನ ಕೇಳಿದ. "ಅಂಕಲ್... ಪೇಡಾ ಇದೆಯಾ?".. "ಇಲ್ಲ ಕಣೋ" ಅಂದೆ. ಸುಮ್ಮನೆ ಹೋಗುತ್ತಾನೆ ಅಂತ ತಿಳಿದಿದ್ದೆ.. ಆದರೆ ಹೋಗಲಿಲ್ಲ. ಮತ್ತೇ "ಅಂಕಲ್... ಚಾಕೇಟ್ ಇದೆಯಾ?" "ಇಲ್ಲ ಕಣೋ..."  ಅವನಿಗೆ ನಿರಾಶೆ ಯಾಗಿತ್ತು ಅನಿಸುತ್ತೆ... ಅದಕ್ಕೆ. " ಹೋಗಲಿ...ಕಲ್ಸಕ್ಕರೇ ಆದರೋ ಇದೆಯಾ???"...ಅವನು ಕೇಳಿದ ರೀತಿ ನನ್ನ ಮನಕ್ಕೆ ತಟ್ಟಿತು. "ಇಲ್ಲ ಕಣೋ.. ನಾಳೆ ಬಾ ಚಾಕ್ಲೇಟು ಕೊಡ್ತೀನಿ" ಅಂದೆ. ಎಲ್ಲಾರೂ ಆಡುತ್ತಿದ್ದರು ರಸ್ತೆಯೇ ಬ್ಲಾಕಾಗಿತ್ತು. ಅದಕ್ಕೆ ಆ ಹೀರೋ.."ಲೋ.. ಅಂಕಲ್ ಸಿಟಿ ಕಡೆಗೆ ಹೋಗ್ತಾರೆ..ಜಾಗ ಬಿಡ್ರೋ..." ಅಂತ ಹೇಳಿ... ಎಲ್ಲರೂ ನನ್ನ ಹಿಂಬಾಲಿಸಿ,  "ಟಾಟಾ ಅಂಕಲ್... ಟಾಟಾ ಅಂಕಲ್" ಅಂತ ಸುಮಾರು ೧೦೦ ಮೀಟರು ನನ್ನ ಹಿಂದೆ ಬಂದು... ಒಬ್ಬೊಬ್ಬರು ಕಡೇ ಪಕ್ಷ...೧೫-೨೦ ಬಾರಿ ಟಾಟಾ ಮಾಡಿದರು. ಈ ಸಂತಸ ಅನುಭವಿಸುವವರಿಗೆ ಮಾತ್ರ ಗೊತ್ತಿರುತ್ತೆ. ಅದಲ್ಲದೆ.. ಮಕ್ಕಳೆಂದರೆ ನನಗೆ ಪ್ರಾಣ. ಆರ್ಕಟ್ಟಿನಲ್ಲೂ ಅಷ್ಟೇ..ನನ್ನ ಫೋಟೋಗಳಿಗಿಂತ ಹೆಚ್ಚು.. ನನ್ನ ಅಕ್ಕನ ಮಕ್ಕಳ ಫೋಟೋ..ವಿಡಿಯೋ ಇವೆ.

ನಾನು ಒಂದಷ್ಟು ಚಾಕ್ಲೇಟ್ ತಂದಿಟ್ಟು.. ಕಾಯುತ್ತಿದ್ದೆ. ಈ ಸಂಜೆ..ಅವರಲ್ಲಿ ಆ ಹೀರೋನ ಕರೆದೆ. ಅವನೊಬ್ಬನೆ ಬರಲಿಲ್ಲ.. ಇಡೇ ಸೈನ್ಯದೊಂದಿಗೆ ಓಡೋಡಿ ಬಂದ. ಅವನ ಮುಖದಲ್ಲಿ ನಗು ಎದ್ದು ಕಾಣುತ್ತಿತ್ತು. ಅವನಿಗೆ ಅರಿವಿತ್ತು.. ಈ ಅಂಕಲ್ ಚಾಕೇಟ್ ಕೊಡ್ತಾರೆ ಅಂತ..ಎಲ್ಲರೂ ಬಂದು ಸೇರಿದ ಮೇಲೆ, ನೋಡೋ..ಚಾಕ್ಲೇಟ್ ತಂದಿದ್ದೀನಿ ನಿಮಗೆಲ್ಲ.. ಅಂತ ಹೇಳಿದೆ. ಎಲ್ಲರ ಮುಖದಲ್ಲಿ ಸಂತಸ ಮತ್ತಷ್ಟು ಹೆಚ್ಚಾಗುತ್ತಿತ್ತು. ಎಲ್ಲ ಚಾಕಲೇಟನ್ನು ಹಂಚಿದೆ. ಕಡೆಯಲ್ಲಿ ನನಗೊಂದು ಅಂತ ಇಟ್ಟುಕೊಂಡಿದ್ದೆ. ( ನಾನೂ ಮಗು ಅಲ್ವಾ?) ಯಾಕೋ ಅದನ್ನೂ ಆ ಹೀರೋಗೆ ಕೊಟ್ಟೆ. ಎಲ್ಲರ ಮುಖದಲ್ಲಿ ತುಂಬು ನಗು ಇತ್ತು. ಎಲ್ಲರೂ ಚಾಕೇಟ್ ಹಿಡಿದು.. ಅವರ ಗುಡುಸಲು ಕಡೆ ಓಡಿದರು..


[ ಯಾವುದೇ ಹಬ್ಬವಾಗಲಿ ಅಥವಾ ಈ ರೀತಿಯಾದ ದಿನಾಚರಣೆಗೆ ನಾನು ಪೋಸ್ಟ್ ಮಾಡಲ್ಲ. ಕಾರಣವಿಷ್ಟೆ.. ಅನೇಕ ಬ್ಲಾಗಿಗರು ಅದೇ ವಿಷಯ ಬರೆದಿರುತ್ತಾರೆ. ಆದರೆ  ಇಂದಿನ ಘಟನೆ ಮನಸ್ಸಿಗೆ ನಾಟಿದೆ. ಹಾಗಾಗಿ ಈ ಲೇಖನ ಬರೆದೆ. ಮುಂದೆ ಈ ರೀತಿ ಆಚರಣೆ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಬ್ಲಾಗಿನಲ್ಲಿದ್ದರೆ... ಇದನ್ನು ಮತ್ತೆ ಓದಿ... ನೆನೆಯ ಬಹುದು.]

ಮತ್ತೊಮ್ಮೆ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ನಿಮಗೆ ಮಕ್ಕಳಿರ ಬಹುದು ಅಥವಾ ಮೊಮ್ಮಕ್ಕಳಿರ ಬಹುದು ಆದರೆ ನಿಮ್ಮ ಹೆತ್ತವರಿಗೆ ನೀವಿನ್ನೂ ಮಕ್ಕಳ. :)

3 ಜನ ಸ್ಪಂದಿಸಿರುವರು:

Lakshmi Shashidhar Chaitanya said...

nijvaaglu manassige naatatte idu. naavu namma appa ammanige yaavaaglu makkale annodu nijavaada maate !

sunaath said...

ಜಯಶಂಕರ,
ಮಕ್ಕಳ ದಿನಾಚರಣೆಯನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸಿದಿರಿ.ನಿಮಗೆ ಅಭಿನಂದನೆಗಳು.

ಸುಧೇಶ್ ಶೆಟ್ಟಿ said...

vow!

ಅನ್ನುತ್ತೀನಿ ಜೇ ನೀವು ಮಕ್ಕಳ ದಿನವನ್ನು ಆಚರಿಸಿದ ರೀತಿಗೆ.....