Saturday 30 August, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಆಫೀಸು <-->ಹೋಟೆಲ್ಲು

ಹಿಂದಿನ ಭಾಗ ಇಲ್ಲಿದೆ.

ನಾವು ಹೋಟೆಲನ್ನು ತಲುಪಿದೆವು. ಅಲ್ಲಿ ಭಾರತದ ಮುಖಗಳನ್ನು ನೋಡಿ ಸ್ವಲ್ಪ ಸಮಾಧಾನವಾಯಿತು. ಆದರೆ ಒಂದು ತೊಂದರೆ ನನಗಾದದ್ದು ಎಂದರೆ, ಸಸ್ಯಹಾರಿ ಹಾಗು ಮಾಂಸಹಾರಿಯ ಭೋಜನಾಲಯವದು. ನನಗಂತೂ ಮುಜುಗರವಾಯಿತು. ಸಸ್ಯಹಾರಿಯ ತಿನಿಸು ಕೊಡು ಅಂತ waiterಗೆ ಹೇಳಿದೆ. ಅವರೆಲ್ಲಾ ಮಾಂಸಾಹಾರವನ್ನು ತೆಗೆದು ಕೊಂಡರು. ಒಂದೇ ಟೇಬಲ್ಲಿನಲ್ಲಿ ಕುಳಿತು ಭೋಜನ ಮುಗಿಸಿದೆವು.

ಅಲ್ಲಿಂದ ನಾವು ಆಫೀಸಿಗೆ ಬಂದೆವು. ನಮ್ಮ ಕರ್ತವ್ಯ ನಿಭಾಯಿಸುತ್ತಾಯಿದ್ದೆವು. ಸಮಯ 3.30 - 4 PM ಇರಬೇಕು, ಆಗ ಯಾರ್ಕ್ಕೊ ಬಂದು, "Hey!!... Go and have fruits" ಅಂದರು. ಇದೇನಪ್ಪಾ ಅಂತ ನಮ್ಮ ಕಾಫಿ ಕೇಂದ್ರದ ಕಡೆಗೆ ಹೋದ್ವಿ.

ಅಲ್ಲಿ ಒಂದು ಬುಟ್ಟಿಯಷ್ಟು ಹಣ್ಣುಗಳನ್ನು ಇಟ್ಟಿದ್ದರು. ನಿಮಗೆ ಯಾವುದ್ ಬೇಕೋ Select ಮಾಡ್ಕೊ ಅಂತ ಹೇಳುತ್ತಾಯಿದ್ದವು. ನಾನು ಮೊದಲಿಗೆ ಹಸಿರು ಸೇಬನ್ನು ತೆಗೆದುಕೊಂಡು ಪಕ್ಕದಲ್ಲೆ ಇದ್ದ ಟೇಬಲ್ಲಿನ ಮೇಲೆ ಕೂತೆ. "ಸೇಬಿದ್ದರೆ ವೈದ್ಯರ ಜೇಬಿಗೆ ಹಣವಿಲ್ಲ!" ("ಸೇಬು ತಿಂದರೆ... ವೈದ್ಯರ ಜೇಬು ತುಂಬಲ್ಲ") ಎಂಬ ಆಂಗ್ಲ ಗಾದೆ ನೆನಪಾಯಿತು. Suomi Newspaper ಹಿಡಿದು ಪುಟಗಳನ್ನು ತಿರುಗಿಸಿ ನೋಡುತ್ತಾಯಿದ್ದೆ... (ಓದೋದಕ್ಕೆ ಆಗಲ್ಲವಲ್ಲಾ ಅದಕ್ಕೆ).


ಆಮೇಲೆ ಒಂದು ಗ್ಲಾಸ್ ಕಾಫಿ ಹೀರಿದ ಮೇಲೆ ಕೆಲಸದ ಕಡೆ ಗಮನ ಕೊಟ್ಟೆ. ಸುಮಾರು ಐದು ಗಂಟೆಗೆ ಎಲ್ಲಾರು ಮನೆಗೆ ಹೊರಟರು. ನಾನಂತೂ Orkut, GTalk ನಲ್ಲಿ ಮುಳುಗಿದ್ದೆ. ಅಲ್ಲಿ ಸಿಕ್ಕವರಿಗೆ ನನ್ನ ಅನುಭವಗಳನ್ನು ಹೇಳುತ್ತಾ ಇದ್ದೆ. ಸ್ವಲ್ಪ ಸಮಯಕ್ಕೆ ನನ್ನ ತಾಯಿ, ತಂದೆ online ಬಂದರು. ಅವರ ಜೊತೆ ಹರಟೆ ಹೊಡೆದು.. ನಮ್ಮ ಹೊಟೆಲಿಗೆ ಹೊರಟೆ.

ಹೊಟೆಲ್ ನಲ್ಲಿ ನಮಗೊಂದು Oven ಇಡಲು ಹೇಳಿದೆವು. ಅದರಂತೆ ಅವರು ತಂದಿಟ್ಟರು. ಅದನ್ನು ನನ್ನ ಸಹೋದ್ಯೋಗಿಯ ರೂಮಿನಲ್ಲಿ ಇಡಲು ಹೇಳಿದೆನು. ತದನಂತರ, Fresh ಆದಮೇಲೆ, ನನ್ನ ರೂಮಿನ ಫೋನ್ ನಂಬರನ್ನು ಹೊಟೆಲಿನ ಸಿಬ್ಬಂದಿಯವರಿಂದ ತಿಳಿದುಕೊಂಡೆ. ಆಮೇಲೆ ನನ್ನ ಮನೆಗೆ ಫೋನು ಹಾಯಿಸಿ ಸ್ವಲ್ಪ ಕಾಲ ಮಾತಾಡಿದೆ. ಆಮೇಲೆ T.Vಯನ್ನು On ಮಾಡಿದೆ. "Welcome Mr Jayashankar!..." ಅಂತ ಪರದೆಯ ಮೇಲೆ ಬಂತು. ಆಮೇಲೆ ಏನೇನು ಚಾನೆಲ್ಲುಗಳು ಬರುತ್ತವೆ ಅಂತ ನೋಡಿದೆ. ಒಂದು Sports ಚಾನೆಲ್ ಇತ್ತು (Euro Sports). ಅದನ್ನು ನೋಡುತ್ತಾಯಿದ್ದೆ. ಸ್ವಲ್ಪ ಸಮಯವಾದ ಮೇಲೆ ಊಟದ ಸಮಯ ಬಂದಿದೆ ಅಂತ ಹೊಟ್ಟೆಯು ಹೇಳಿತು. ನಾನು, ಅಮ್ಮ ಮಾಡಿಕೊಟ್ಟಿದ್ದ ಚಪಾತಿಗಳನ್ನು ಹಿಡಿದು ಅವನ ರೂಮಿಗೆ ಹೋದೆ. ಅದರೊಂದಿಗೆ ಇದ್ದ ಕೆಲವು ತಿನಿಸುಗಳನ್ನೂ ತೆಗೆದುಕೊಂಡು ಹೋಗಿದ್ದೆ. ಅವನಿಗೆ ಅವನ್ನು ಕೊಟ್ಟೆ. ಅವನಿಗೆ ಅದು ತುಂಬಾ ಇಷ್ಟವಾಯಿತು. ಇಬ್ಬರೂ ಎರಡೆರಡು ಚಪಾತಿಗಳನ್ನು ತಿಂದೆವು. ಆಮೇಲೆ ನನ್ನ ರೂಮಿಗೆ ಬಂದು ಬೇಗ ಮಲಗಿದೆ. ಬೆಳಿಗ್ಗೆ ೭ ರಿಂದ ತಿಂಡಿ ಸಿಗುವುದಾಗಿ ಮೊದಲೇ ಹೊಟೆಲ್ಲಿನವರು ನಮಗೆ ಹೇಳಿದ್ದರು. ಅದಕ್ಕೆ ನಾನು ೬ ಕ್ಕೆ alarm set ಮಾಡಿಕೊಂಡು ಮಲಗಿದೆ. ಬೆಳಿಗ್ಗೆ alarm ಹೊಡೆಯಿತು. ಅದನ್ನು off ಮಾಡಿ ಮತ್ತೆ ೨೦ ನಿಮಿಷಗಳ ಕಾಲ ಮಲಗಿದೆ.

ಆಮೇಲೆ ಏಳಲೇ ಬೇಕು ಅಂತ ಎದ್ದು, ಸ್ನಾನವನ್ನು ಮುಗಿಸಿ, ನನ್ನ ಸಹೋದ್ಯೋಗಿಗೆ ಫೋನು ಮಾಡಿದೆ. ಅವನ ಉತ್ತರ ಬರಲಿಲ್ಲ. ಇನ್ನು ಸ್ವಲ್ಪ ಹೊತ್ತು ನಾನು ಟಿ.ವಿ. ನೋಡುತ್ತಾಯಿದ್ದೆ. ಆಮೇಲೆ ಇನ್ನೊಮ್ಮೆ ಅವನಿಗೆ ಫೋನು ಮಾಡಿದೆ. ಅವನು ಹೇಳಿದ, ನನ್ನ breakfast ಆಯ್ತು. ಈಗ ಆಫೀಸಿಗೆ ಹೊರಡುತ್ತಾಯಿದ್ದೇನೆ. ೯ಕ್ಕೆ ಅಲ್ವಾ ಆಫೀಸು ಅಂದೆ. ಅದಕ್ಕೆ ಅವನು ಇಲ್ಲ. ೮ಕ್ಕೆ ಅಂದ.
"ಪರಮಾತ್ಮ! ಎರಡನೇ ದಿನವೇ ಆಫೀಸಿಗೆ ಲೇಟಾಗಿ ಹೋಗುವಂತೆ ಮಾಡಿ ಬಿಟ್ಟೆಯಲ್ಲ?" ಅಂತ ದೇವರನ್ನು ಪ್ರಶ್ನಿಸಿದೆ. ಬೇಗ ಹೋಗಿ ತಿಂಡಿ ತಿಂದು ಬರಬೇಕು ಎಂದು "Breakfast Hall" ಗೆ ಹೋದೆ. ಅದು Buffet ಪದ್ದತಿ. ನಾನು ತಿನ್ನ ಬಹುದಾದ ತಿನಿಸು ಕೆಲವು ಮಾತ್ರ!

ಇಲ್ಲಿ ಕಾಣಿಸುತ್ತಾಯಿವೆಯಲ್ಲಾ.. ಅಷ್ಟೆ ನನ್ನ ತಿನಿಸುಗಳು.
1. Bread + Jam
2. Cornflakes with dry grapes, almonds ಜೊತೆಗೆ ೧ ಲೋಟ ಹಾಲು (maito)
3. 1 glass orange / apple (omena) juice
4. watermelon / orange (ಚಿತ್ರದಲ್ಲಿ ಕಾಣಿಸುತ್ತಾಯಿಲ್ಲ..)
5. Coffee / Tea (Optional)

ಇದಾದ ಮೇಲೆ ಸರ ಸರನೆ ಆಫೀಸಿಗೆ ದೌಡಾಯಿಸಿದೆ. ಯಾರ್ಕ್ಕೊ ಗೆ ಶುಭೋದಯ ಹೇಳಿ, ತಡವಾಗಿ ಬಂದದ್ದಕ್ಕೆ ಕ್ಷಮೆ ಯಾಚಿಸಿದೆ. ಅದಕ್ಕೆ ಆತ, "No Problem" ಅಂದರು. ನಾನು ನನ್ನ ಕೆಲಸದ ಕಡೆ ಗಮನ ಕೊಟ್ಟೆ. ಮಧ್ಯಾಹ್ನ ಊಟಕ್ಕೆ ಇಂದು ಬೇರೆಡೆ ಹೋಗೋಣವೆಂದು ಹೇಳಿದರು. ಅಷ್ಟಲ್ಲದೆ ಅಲ್ಲಿ ಸಸ್ಯಾಹಾರಿ ತಿನಿಸು ಸಿಗುವುದಾಗಿ ಭರವಸೆ ಕೊಟ್ಟರು. ನಾನು ಒಪ್ಪಿಕೊಂಡೆ. ನಾವೆಲ್ಲ ಅಲ್ಲಿಗೆ ಹೋದೆವು. ಇಲ್ಲಿ Self service ಪದ್ದತಿಯಿತ್ತು. ಆದರೆ ಭಾರತದ ಹಾಗಲ್ಲ. ಇಲ್ಲಿ ನಮಗೆ ಬೇಕಾದ ತಿನಿಸುಗಳನ್ನು ತೆಗೆದು ಕೊಂಡು Cash Counter ಗೆ ಹೋಗಿ, ಹಣ ನೀಡ ಬೇಕು. ನಾನು ೧ ಲೋಟ ಹಣ್ಣಿನ ರಸವನ್ನು ತೆಗೆದುಕೊಂಡೆ. ನಂತರ ಅಲ್ಲಿಯ ಸಿಬ್ಬಂದಿಯನ್ನು ಎರಡೆರಡು ಬಾರಿ ಇದು ಸಸ್ಯಾಹಾರ ತಿನಿಸೇ? ಎಂದು ವಿಚಾರಿಸಿ.. ಯಾವುದೋ ೨ ಬಗೆಯ ಪಲ್ಯದ ರೀತಿಯಿದ್ದ ತಿನಿಸುಗಳನ್ನು ಮಾತ್ರ ಹಾಕಿಕೊಳ್ಳಲು ಸಾದ್ಯವಾಯ್ತು. ನನ್ನ ತಟ್ಟೆಯನ್ನು ಗಮನಿಸಿದ ಸೈಕಿ, "ಹಾಆಆಆಆಆಆಆಆಆ. You could find at least this much vegetarian food" ಅಂದರು. ತಟ್ಟೆಯನ್ನು ಟೇಬಲ್ಲಿನ ಮೇಲೆ ಇಟ್ಟಾಗ, ಇಷ್ಟು ತಿಂದರೆ ಸಾಕಾಗುತ್ತಾ? ಅಂತ ಪ್ರಶ್ನಿಸಿಕೊಂಡೆ. ಇರಲಿ ಹೇಗೂ ಸಂಜೆಗೆ ಸೇಬು, ಆರೆಂಜು, ಬಾಳೆಹಣ್ಣು ಸಿಗುತ್ತೆ ಅಂತ ಗೊತ್ತಾದಮೇಲೆ, ತಿನ್ನಲಾಗದಿದ್ದರೂ ಪಲ್ಯಗಳನ್ನು ತಿಂದೆ. ಅದು ಸಸ್ಯಾಹಾರವಾದರೂ ಅಲ್ಲಿಯ ಅಡುಗೆ ಶೈಲಿ ವಿಭಿನ್ನ. ಹಾಗಾಗಿ, ನನ್ನ ತುಟಿಗೆ ಅದು ರುಚಿಸಲಿಲ್ಲ.

ಮತ್ತೆ ಎಂದಿನಂತೆ ಕೆಲಸ, ಕಾಫಿ, Scraps, Chats ಹೀಗೆ ಆಫೀಸಿನಲ್ಲಿ ಕಳೆದೆ.

ಆ ದಿನ ಸಂಜೆ ಹೋಟೆಲ್ಲಿಗೆ ಬಂದ ಮೇಲೆ.. ಸ್ವಲ್ಪ ಹೊತ್ತಾದ ಬಳಿಕ, ಊಟಕ್ಕೆ ಹೊರಟೆ. ಅವನು MTR ಪದಾರ್ಥವನ್ನು ತಿನ್ನೋಣವೆಂದು ಹೇಳಿದ. MTR ಅನ್ನವನ್ನು ಬಿಸಿ ಮಾಡಿಕೊಂಡು ತಿಂದೆವು. ಅದರ ಜೊತೆಗೆ Maggi ಸಹಾ ಇತ್ತು. ಅದಕ್ಕೆ sauce ನಾನು ತಂದಿದ್ದೆ. ಅದನ್ನು ತಂದು ಕೊಟ್ಟೆ. ಅದನ್ನು ತೆಗೆಯಲು Opener ಅವಶ್ಯಕತೆ ಇತ್ತು. ನಾನು ಎಲ್ಲಿಂದ ತರೋದು ಅಂತ ಯೋಚನೆ ಮಾಡುತ್ತಾಯಿರುವಾಗಲೇ.. ಅವನು Fridge ತೆಗೆದ ಅಲ್ಲಿದ್ದ Opener ಸಹಾಯದಿಂದ sauce ಮುಚ್ಚಳ ತೆಗೆದಾಯ್ತು. ನಾನು Fridge ಓಳಗೆ ಇದ್ದ ಬಾಟಲ್ಲುಗಳನ್ನು ನೋಡಿದೆ...ಓಹ್! ಇದು ನನ್ನ Department ಅಲ್ಲ ಅಂತ ಗೊತ್ತಾಯ್ತು. ನಮ್ಮ ಭೋಜನವಾದ ಮೇಲೆ ನಾನು ತಂದಿದ್ದು ತಿನಿಸುಗಳನ್ನು ಕೊಟ್ಟೆ.. ಅದನ್ನು ತಿಂದು ಅವನು ತುಂಬಾ ಚೆನ್ನಾಗಿದೆ ಅಂದ. ನನಗೆ ಸಂತೋಷವಾಯಿತು. ಇನ್ನೊಂದು ತೊಗೋ ಅಂತ ಕೊಟ್ಟೆ. ಅವನೇನು ನಿರಾಕರಿಸಲಿಲ್ಲ.

ಆಮೇಲೆ ನನ್ನ ರೂಮಿಗೆ ಬಂದು Fridge ತೆಗೆದೆ.. ಅದೇ ಬಾಟಲ್ಲುಗಳು. ಅಯ್ಯೋ ರಾಮ!........

ನಾನು ಹಾಗು ಅವನು ಇನ್ನುಮುಂದೆ ಹೊರಗಡೆ ಊಟ ಮಾಡೋದು ಬೇಡ ಅಂತ ತೀರ್ಮಾನಿಸಿದೆವು. ನಂತರ ಮಾರನೆ ದಿನ MTR 2 packetsಗಳನ್ನು ಆಫೀಸಿಗೆ ತೆಗೆದುಕೊಂಡು ಹೋದ್ವಿ. ಅದನ್ನೆ ನಮ್ಮ ಭೋಜನಕ್ಕೆ ತಿಂದೆವು. ಹೀಗೆ ಎಲ್ಲಾ ಕೆಲಸದ ದಿನಗಳು ಸಾಗಿದವು.

ಮುಂದಿನ ಭಾಗದಲ್ಲಿ ವಾರಂತ್ಯದ ವಿಚಾರ....

Friday 22 August, 2008

ಬೇಸರದ ಬೀಡು

ಬೇಸರ ಬೀಡು ಬಿಟ್ಟಿದೆ
ಮನದೊಳಗೆ
ಬೇಸರ ಬೀಡು ಬಿಟ್ಟಿದೆ.
ಕಾಣದೊಂದು ನೋವು ಕಾಡಿದೆ
ಕಾರಣ ನನಗೆ ತಿಳಿಯದೆ
ಕಂಬನಿಧಾರೆ ಹರಿಯುತಿದೆ

ಏಕೆ ಹೀಗಾಯಿತೋ ಇದನಾನರಿಯೆ
ಬಯಕೆಗಳು ಬತ್ತು ಹೋಗಿವೆ!
ಮನಶ್ಶಾಂತಿ ಮಡಿದಿದೆ
ಮನದಲ್ಲಿ ಬೇಸರ ಬೀಡು ಬಿಟ್ಟಿದೆ.

ಎತ್ತ ಕಡೆಯಿಂದ ಹಾರಿ ಬಂದು,
ಅಂತರಂಗವ ಸೇರಿತೋ
ಸತ್ತ ಹಾಗೆ ಮಾಡಿ ನನ್ನ
ಅಂಧಕಾರಕ್ಕೆ ನೂಕಿತೋ

ಹರಿವ ತೊರೆಯಂತೆ ಬೇಸರ ಹರಿಯ ಬಾರದೆ?
ಹರಿಯ ನೆರವಿನಿಂದ ಅಂಧಕಾರಕ್ಕೆ ಮುಕ್ತಿ ಸಿಗಬಾರದೆ?

Thursday 14 August, 2008

ಲಕ್ಷ್ಮಿ.....

ಯಾರೀ ಲಕ್ಷ್ಮಿ?.....
ಕ್ಷೀರಸಮುದ್ರ ರಾಜನ ಮಗಳೇ?
ವಿಷ್ಣುವಿನ ಮಡದಿಯೇ?
ದುಡ್ಡಿನ ದೇವತೆಯೇ? ಅಥವಾ
ಇಂದು ಎಲ್ಲಾರು ಆಚರಿಸುತ್ತಾಯಿರುವ ವರಮಹಾಲಕ್ಷ್ಮಿಯೇ?

ಇದೆಲ್ಲವೂ ಸರಿ. ಆದರೆ ನಾನು ಹೇಳೋ ಲಕ್ಷ್ಮಿ ಇವರ್ಯಾರೂ ಅಲ್ಲ. ನನ್ನ ಬಾಲ್ಯ ಜೀವನದಲ್ಲಿ ಕಂಡವಳು. ನನ್ನ ಕಾಲೇಜು ಜೀವನದಲ್ಲೂ ಇವಳನ್ನು ನೋಡಿದ್ದೇನೆ. ನನ್ನ ವೃತ್ತಿ ಪ್ರಾರಂಭವಾದ ಮೇಲೆ ಅವಳನ್ನು ನೋಡಲು ಆಗಲಿಲ್ಲ. ಅವಳ ಕುರಿತು ಬರೆಯಬೇಕೆಂದು ಇಂದು ಅನ್ನಿಸಿ ಬರೆಯ್ಯುತ್ತಿದ್ದೇನೆ.

ಶನಿವಾರ ನಮ್ಮ ಶಾಲೆ ೧೨.೩೦ಕ್ಕೆ ಮುಗಿಯುತ್ತಾಯಿತ್ತು. ಮನೆಗೆ ಬಂದು ಊಟವಾದ ಮೇಲೆ ನಾನು ಹಾಗು ನನ್ನ ಮಾವನ ಮಗ ಇವಳನ್ನು ನೋಡಲು ಹೋಗುತ್ತಾಯಿದ್ದೆವು. ಒಂದು ಹೆಣ್ಣು... ಎರಡು ಗಂಡು ಎಂದು ಯೋಚನೆ ಮಾಡಬೇಡಿ. ನಮ್ಮ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲೇ ಇವಳಿದ್ದಳು. ಅವಳು ಯಾರೆಂದರೆ.. ಸಿನಿಮಾ ಟೆಂಟು! ಆ ಟೆಂಟಿನಲ್ಲಿ ನಾವು ನೋಡುತ್ತಿದ್ದ ಸಿನಿಮಾಗಳ ಸಂಖ್ಯೆ ನಮಗೇ ನೆನಪಿಲ್ಲ! ಅದನ್ನು ಕರೆಯುತ್ತಾಯಿದ್ದದ್ದು ಲಕ್ಷ್ಮಿ ಟೆಂಟ್.

ಅಲ್ಲಿ ೨.೧೫ ಗೆ ಮ್ಯಾಟಿನಿ ಶೋ ಪ್ರಾರಂಭವಾಗುತ್ತಾಯಿತ್ತು. ನಾವು ೧೫ ನಿಮಿಷಗಳು ಮುಂಚಿತವಾಗಿಯೇ ಅಲ್ಲಿ ಇರುತ್ತಾಯಿದ್ದೆವು. ಆ ಸಾಲಿನಲ್ಲಿ ನಿಂತು, ೫ ರೂಪಾಯಿಯ ಎರಡು ಟಿಕೆಟ್ ಪಡೆದುಕೊಂಡು ಬಂದು ಕಬ್ಬಿಣದ ಚೇರಿನ ಮೇಲೆ, ಫ್ಯಾನಿನ ಕೆಳಗೆ ಕೂರಲು ಸಾಲುಗಳಲ್ಲಿ ಮುನ್ನುಗ್ಗುತ್ತಾಯಿದ್ದೆವು. ಅಲ್ಲಿ ಚಿತ್ರ ನೋಡಲು ಏನೋ ಆನಂದ. ಮಧ್ಯಂತರದಲ್ಲಿ ಹೊರಗಡೆ ಬಂದು, ಸೀಬೇ ಹಣ್ಣು, ತೋತಾಪುರಿ ಮಾವಿನ ಹಣ್ಣು ತಿಂದು, ಮತ್ತೆ ನಮ್ಮ ಸೀಟಲ್ಲಿ ಕುಳಿತು ಚಿತ್ರ ಮುಗಿದ ಮೇಲೆ, ಮನೆಗೆ ಹೋಗಿ, ಮನೆಯವರಿಗೆಲ್ಲಾ ಚಿತ್ರದ ಕಥೆಯನ್ನು ಹೇಳುತ್ತಾಯಿದ್ದೆವು. ನಾವು ಆಗ ೨ ಅಥವಾ ೩ ನೆ ತರಗತಿಯಲ್ಲಿದ್ದೆವು.

ಚಿಕ್ಕ ಮಕ್ಕಳನ್ನು ಸಿನಿಮಾಗೆ ಕಳುಹಿಸಲು ಮನೆಯವರಲ್ಲಿ ಆತಂಕ ಹುಟ್ಟುವುದು ಸಹಜವೇ. ಅದಕ್ಕಾಗಿ ಮೊದಲು ನಮ್ಮಿಬ್ಬರನ್ನೇ ಹೋಗಲು ಬಿಡುತ್ತಿರಲಿಲ್ಲ. ಜೊತೆಗೆ ದೊಡ್ಡವರೊಬ್ಬರು ಬರುತ್ತಿದ್ದರು. ಹೀಗಿದ್ದಾಗ, ಒಮ್ಮೆ ಪ್ರೇಮಲೋಕ ಸಿನಿಮಾದ ಹಾಡುಗಳು ಚಿತ್ರಮಂಜರಿಯಲ್ಲೂ ವೀಕ್ಷಿಸಿ, ಅಂತ್ಯಾಕ್ಷರಿಯಲ್ಲೂ ಹಾಡಿ, ನಮಗೆ ಆ ಸಿನಿಮಾ ನೋಡಲು ಆಸೆ ಅತೀಯಾಗಿತ್ತು. ಆ ಸಿನಿಮಾ ಲಕ್ಶ್ಮಿ ಟೆಂಟಿಗೆ ಬಂದಾಗ ಹೋಗೋಣ ಅಂತ ನಾವಿಬ್ಬರೂ ಮಾತಾಡುತ್ತಾಯಿದ್ದೆವು. ಒಂದು ದಿನ ಆ ಕಾಲ ಕೂಡಿ ಬಂದಿತು. ಶುಕ್ರವಾರದಂದು ಶಾಲೆಗೆ ಹೋಗುವ ದಾರಿಯಲ್ಲಿ ವಾಲ್ಪೋಸ್ಟ್ ನೋಡಿದೆವು. ಪ್ರೇಮಲೋಕ ಸಿನಿಮಾ ಲಕ್ಶ್ಮಿ ಟೆಂಟಿನಲ್ಲಿ!

ಶನಿವಾರದ ಊಟ ಮುಗಿಯುತ್ತಾಯಿದ್ದಂತೆ ಅಮ್ಮನಿಗೆ ನಮ್ಮ ಜೊತೆಗೆ ಬರಲು ಕೇಳಿಕೊಂಡೆವು. ಆದರೆ ಅವರಿಗೆ ತುಂಬಾ ಕೆಲಸ ಇದ್ದುದ್ದರಿಂದ ನಮ್ಮ ಅಜ್ಜಿಯವರನ್ನು ನಮ್ಮ ಜೊತೆಗೆ ಕಳುಹಿಸುವುದಾಗಿ ಹೇಳಿದರು. ಜೂಹಿ ಚಾವ್ಲಾ ಇದ್ದಾಳೆ ಸಿನಿಮಾದಲ್ಲಿ ಹಾಗಾಗಿ ಒಮ್ಮೆಯಾದರೂ ಹೋಗಿ ನೋಡ ಬೇಕು ಎನ್ನುವ ಯೋಚನೆ ನಮಗೆ ಆ ವಯಸ್ಸಿನಲ್ಲಿ ಇರಲಿಲ್ಲ. :). ಇದರ ಜೊತೆಗೆ, "ಸುಂದರ ಯುವಕ ದುಶ್ಯಂತ ರಾಜ ಬೇಟೆಯನಾಡಲು ಬಂದ" ಅಂತ ನಮ್ಮ ಗುರು ವಿಷ್ಣು ಕನ್ನಡ ಪುಸ್ತಕವನ್ನು ಕೆಳಗಿಳಿಸಿ ನನಗೆ ಮುಖ ತೋರಿಸಿದ್ದರು. ಇದನ್ನು ಮರೆಯಲು ಆಗುತ್ತಾ ಹೇಳಿ? ನಾವೇನೋ ಸಿನಿಮಾವನ್ನು ಆನಂದದಿಂದ ನೋಡಿದೆವು. ಆದರೆ ಆ ಸಿನಿಮಾದಲ್ಲಿ ಜೂಹಿಯ ಉಡುಗೆ ಹೇಗಿದೆ ಅಂತಾ ಎಲ್ಲಾರಿಗೂ ಗೊತ್ತೇಯಿದೆ. ಇದನ್ನು ನಮ್ಮಜ್ಜಿಗೆ ನೋಡಲು ಅಸಮಾಧಾನವಿತ್ತು. "ಇದೆಂತಾ ಸಿನಿಮಾ! ಇವಳಿಗೆ ಏನು ಮಾನ ಮರ್ಯಾದೆ ಇಲ್ವಾ? ಚಡ್ದಿ ಹಾಕೊಂಡು ಕುಣಿತಾಳೆ" ಅಂತೆಲ್ಲಾ ಹೇಳುತ್ತಾಯಿದ್ದರು. ನಾವು ಅದರ ಕಡೆಗೆ ಗಮನವೇ ಇಡಲಿಲ್ಲ.

ನಾವಿಬ್ಬರೇ ಅಲ್ಲ. ನಮ್ಮ ಕುಟುಂಬ ವರ್ಗದವರೆಲ್ಲಾ ಕೆಲವೊಮ್ಮೆ ಶನಿವಾರದಂದು ಮನೆಗೆ ಬೀಗಾ ಹಾಕಿ, ಎಲ್ಲಾರೂ ಒಟ್ಟಿಗೆ ಸೆಕೆಂಡ್ ಶೋ ಗೆ ಹೋಗುತ್ತಾಯಿದ್ದೆವು. ಅದು ಸುಮಾರು ೯ಕ್ಕೆ ಇರುತಿತ್ತು. ನಿದ್ದೆ ಕಣ್ಣಂಚಿಗೆ ಬಂದರೂ ಸಿನೆಮಾಗೋಸ್ಕರ ಎಚ್ಚರವಾಗಿರುತ್ತಾಯಿದ್ದೆ.

ನಾನು ಹಾಗು ನನ್ನ ಮಾವನ ಮಗ ಒಂದು ನಿನಿಮಾ ನೋಡಿದೆವು. ಅದರ ಹೆಸರು "ನನಗೂ ಹೆಂಡ್ತಿ ಬೇಕು". ಆ ಶೀರ್ಷಿಕೆ ಹೇಳೋ ಕಾಲ ಆಗ ನಮ್ಮದಾಗಿರಲಿಲ್ಲ! ಈಗ?... ಗೊತ್ತಿಲ್ಲ.. ನಾನಿನ್ನೂ ಚಿಕ್ಕ ಹುಡುಗ... :)

ಆಗೊಮ್ಮೆ ....ಈಗೊಮ್ಮ ಹೀಗೆ ಬಾಲ್ಯ ನೆನಪಾದಾಗ... ಒಂದು ಚೂರು ಏನೋ ಬರ್ಕೊತೀನಿ...

Saturday 9 August, 2008

ನಿರೀಕ್ಷೆ

ನಾನೊಬ್ಬ ಸಂಚಾರಿ
ಕೈಮರವಿಲ್ಲದ ದಾರಿಯಲಿ
ಏಕಾಂಗಿ ಸಂಚಾರಿ.

ಗುರಿ ಮುಟ್ಟುವ ಆಸೆ
ಅತಿಯಾಗಿದೆ ಮನದಲ್ಲಿ.
ಸರಿ ದಾರಿಯ ತೋರುವ
ಜೀವವೊಂದೂ ಇಲ್ಲ ಎದುರಲ್ಲಿ.

ನಡೆದು ನಡೆದು ಬಳಲಿಹೆ
ಸರಿ ದಾರಿಯಾವುದಯ್ಯ?
ನಂಬಿರುವೆ ನಾ ದೇವರನ್ನು
ತೋರಿಯಾನು ದಾರಿಯನು
ಮಾಡಿಯಾನು ಪವಾಡವನ್ನು

Wednesday 6 August, 2008

ನಾನಿದ್ದೆ ಆನೆಯಂತೆ!

ಆನೆಯು ಮರಿಯಾಗಿರುವಾಗಲೇ ಕಾಲಿಗೆ ಸರಪಳಿ ಕಟ್ಟಿರ್ತಾರಂತೆ.. ಎಲ್ಲೂ ಹೋಗಬಾರದು ಅಂತ. ಅದು ವಯಸ್ಸಾದ್ರೂ ಅಷ್ಟೆ ತನಗೆ ಅದನ್ನು ಬಿಡಿಸಲು ಆಗುವುದಿಲ್ಲ ಅಂತ ಕಲ್ಪನೆಯಲ್ಲಿರುತ್ತೆಯಂತೆ. ನಾನು ಅಷ್ಟೆ ಹಾಗೆ ಇದ್ದೆ.

ಏನು ವಿಷಯ ಅಂದ್ರೆ, ನಮ್ಮ ಕಛೇರಿಯಲ್ಲಿ ಬ್ಲಾಗುಗಳನ್ನು ಬ್ಲಾಕ್ ಮಾಡಿದ್ದರು. ಬಹಳ ದಿನಗಳಿಂದ ದಟ್ಸ್ಕನ್ನಡ , ಬಾನುಲಿ.ಕಾಂ ಆದಿಯಾಗಿ ಯಾವೊಂದು ವೆಬ್ ಸೈಟು ಓಪನ್ ಆಗುತ್ತಿರಲಿಲ್ಲ. ಇಂದು ಕೆಲಸವೂ ಹೆಚ್ಚಿರಲಿಲ್ಲ. ಅದಕ್ಕೆ ಹಾಗೆ ಸುಮ್ಮನೆ ಕವನ ಬರೆದೆ. ಏಕೋ ದಟ್ಸ್ಕನ್ನಡ ಓಪನ್ ಆಯ್ತು. ಈಗ ಬ್ಲಾಗನ್ನು ಓಪನ್ ಮಾಡಿದೆ. ನನ್ನ ಆಶ್ಚರ್ಯಕ್ಕೆ ಅದೂ ಓಪನ್ ಆಗಿದೆ. ಆನೆ ವಿಚಾರ ನನ್ನ ಜ್ಞಾಪಕಕ್ಕೆ ಬಂದು ನಾನು ಬರೆದೆ ಅಷ್ಟೆ.

ಮಾನವರೇ ಹಾಗೆ ಎರಡು ಮೂರು ಬಾರಿ ಪ್ರಯತ್ನ ಮಾಡಿದಾಗ ಒಂದು ಕೆಲಸ ಆಗದಿದ್ದಲ್ಲಿ ಮತ್ತೆ ಅದರ ಪ್ರಯತ್ನವನ್ನೇ ಮಾಡುವುದಿಲ್ಲ. ಇದಕ್ಕೆ ಹೊಂದುವಂತೆ ಶಾಲೆದಿನಗಳಲ್ಲಿದ್ದ ಜೇಡ ಹಾಗು ಸೋತ ರಾಜನ ಕಥೆ ನೆನಪಾಗದೆ ಇರುವುದಿಲ್ಲ. ಆದರೆ ನಾನಿಲ್ಲ ಪ್ರತಿದಿನ ಸೈಟು ಓಪನ್ ಮಾಡಲು ಪ್ರಯತ್ನ ಪಟ್ಟರೆ ಕಂಪನಿಯ ನಿಯಮದಂತೆ ಎಲ್ಲಾ ಬ್ಲಾಕಾಗಿರುತ್ತೆ!ಇಂದೇಕೋ ಓಪನ್ ಆಗಿದೆ. ಮುಂದೆಯೂ ಹೀಗೆ ಓಪನ್ ಆದರೆ ಸಂತೋಷ ಇಲ್ಲದಿದ್ದರೂ ಸಂತೋಷ!