Tuesday 23 September, 2008

’ಮ’ಕಾರದ ಮಾನಿನಿಯರು!

[ ಇದು ಪೋಸ್ಟ್ ಆಗುತ್ತಾಯಿರುವ ೫೦ನೇ ಕವನ. ಆದರೆ ಇದು ೫೦ನೇ ಕವನ ಅಲ್ಲ. 2006 ರಲ್ಲಿ, ನನ್ನ ತಂಗಿ ಹಾಗು ತಮ್ಮ ಕೆಲವು ಹುಡುಗೀಯರ ಹೆಸರುಗಳನ್ನು ಕೊಟ್ಟು ಒಂದು ಕವನ ರಚಿಸಲು ಹೇಳಿದರು. ಅವರ ಬಲವಂತಕ್ಕೆ ಬರೆದದ್ದು. ಅದೇಕೋ ನನ್ನ ಆರಂಭದ ಕವನಗಳು ’ಮ’ ಕಾರದಿಂದ ಪ್ರಾರಂಭ ಮಾಡಿದ್ದೆ. ಆಮೇಲೆ, ನನ್ನ ಕವನ / ಲೇಖನದ ಶೀರ್ಷಿಕೆಗಳು ಕೆಲವು ’ಮ’ಕಾರದಿಂದ ಆರಂಭವಾಗಿವೆ: ಮೆಲೋಡಿಯಸ್ ಮೋಹನ, ಮಾಲ್ @ಮಲ್ಲೇಶ್ವರ, ಮಲೆಯಲ್ಲೊಂದು ಮಾಣಿಕ್ಯ, ಮರುಳು ಮಾತುಗಳು, ಮಗುವಾಗಬಾರದಿತ್ತೇ? ಇತ್ಯಾದಿಗಳು. ಇಂದಿನ ಕವನದ ಶೀರ್ಷಿಕೆ ಬೇರೆ ಏಕೆ ಇಡಲಿ ಎಂದು ’ಮ’ಕಾರದಿಂದ ಪ್ರಾರಂಭ ಮಾಡಿದೆ. ಖಂಡಿತವಾಗಿಯೂ ಟಿ.ಎನ್.ಸೀತಾರಾಮ್ ಅವರ ಪ್ರಭಾವವಿಲ್ಲ! ]

ಹುಡುಗಿಯರ ಹೆಸರಿನ ಕವನವಿದು
ತಂಗಿಯು ಇಟ್ಟ ಪ್ರಶ್ನೆಯಿದು
ಹತ್ತಾರು ಚೆಲುವೆಯರು ಬರುವ
ಪುಟ್ಟದೊಂದು ಕವನವಿದು.

ಮೀರಾ.. ನಿನ್ನ ಮೆಚ್ಚಿದೆ ಮನಸಾರ
ಕೊಡಲೇ ನಿನಗೆ "ಮುತ್ತಿನ" ಹಾರ?
ಮೀನ, ಮೀನಾ ನೋಡು ನನ್ನ
ಹಾಡುವೆ ನಿನಗೆ ಮೊದಲ ಗಾನ.

ಮಧುವಿನ ಹಾಗಿದ್ದ ನಿನ್ನ ಮಾತು
ಮಗುವಿನ ಹಾಗೆ ನನ್ನ ಮಾಡಿತು.
ಮಾಧುರಿ ನಿನ್ನ ಕಾಣಲು
ಬಿಡಳು ಮಂಡೋದರಿ
ಅವಳಂಥ ನಾರಿ, ರಾವಣನಿಗೆ ಸರಿ.

ಮಲ್ಲಿಕಾ ಜೊತೆಗೆ ಮಂದಿರಕ್ಕೆ ಹೋಗುವೆನೆಂದರೆ
ಹಿಂದೆ ಓಡಿ ಬರುವಳು ಮೇನಕ.
ಮೋನಿಕಾ ಜೊತೆಗೆ ಹಾಡಲು ಹೋಗುವೆನೆಂದರೆ
ಬಂದು ಕಾಡುವಳು ಮಲೈಕಾ.

ಮಧುರವಾದ ಮಾತಿಂದ ಮೌನ ಮಾಡಿದೆ
ಮೇಘ ಸಂದೇಶ ಕಳಿಸಿದರೆ ಮಾಯ ಮಾಡಿದೆ.

ಮನೀಷ ನೀ ಬಾರೆ, ನಗು ನಗುತಾ
ನಿನ್ನ ಮೊಗವ ನೋಡುತ
ಕಾಲ ಕಳೆಯುವ ತವಕ.
ಮಯೂರಿ, ನಿನ್ನ ಲಾಸ್ಯಕೆ
ಗರಿ ಮುಚ್ಚಿತು ಮಯೂರ!

Wednesday 17 September, 2008

ಶ್ರದ್ಧಾ


ಹಾಡಲು ಬಾರದೆ ನಾನು
ಕರೆಸಿಹೆ ಕೋಗಿಲೆಯನ್ನು
ಹಾಡುತ ಹಾರೈಸಲೆಂದು

ನೆಗೆಯಲು ಬಾರದೆ ನಾನು
ಕರೆಸಿಹೆ ಹುಲ್ಲೆಯನ್ನು
ಉಡುಗೊರೆಯ ನೀಡಲೆಂದು

ಇರುಳನ್ನು ಓಡಿಸಲಾಗದೆ ನಾನು
ಕರೆಸಿಹೆ ಚಂದ್ರನನ್ನು
ಚಂದ್ರಮುಖಿಯ ನೋಡಲೆಂದು

ಭುವನ ಸುಂದರಿಯ ಮುಂದೆ
ಅನ್ಯ ಸುಂದರಿಯರೇ?
ಚಲನವಿಲ್ಲದ ನೋಟಕೆ
ಧನ್ಯ ನೀವು ನಯನಗಳೆ!


ಪ್ರೀತಿಯ ಪುಟಾಣಿ ಶದ್ದುಗೆ ಹು.ಹ.ಹಾ ಶುಭಾಶಯಗಳು

Sunday 14 September, 2008

ಹನಿಗವನಗಳು - ೨

ಪತಿ

ಕೆ.ಎಸ್.ಎನ್. ಹೇಳಿದ್ದರು
ನೀ ಕಟ್ಟಿ ಕೊಂಡಾಗಾಗುವೆ
ಕೋಟ್ಯಾಧಿಪತಿ..
ನಾ ಇವಳನ್ನು ಕಟ್ಟಿ ಕೊಂಡಾದೆ
ಕೋತಿಯ ಪತಿ!

Come-ಪನಿ

ಕೂಗಿ ಕೂಗಿ ಕರೆಯಿತು
ನನ್ನ Company,
Come ನನ್ನಲ್ಲಿ
ನಿನಗಿದೆ ಇಲ್ಲಿ
ಮಾಡಲು ಬೇಕಾದಷ್ಟು ಪನಿ*

ಪನಿ= ಕೆಲಸ (ತೆಲುಗು ಮೂಲ)

ಬಿಡುವು

ನಿರಂತರದ ಕೆಲಸದ ಮಧ್ಯ
ಉಸಿರಾಟಕ್ಕೆ ಸಿಗುವ
ಅಮೂಲ್ಯ ಕ್ಷಣ!

ದುಡಿಮೆ

ಕಷ್ಟ ಪಟ್ಟು ದುಡಿದೆ
ಕಂಪನಿಯ Welfareಗೆ
ಕೂಡಲೆ ಬಂದಿತು
ಆಮಂತ್ರಣ Farewellಗೆ!

ಅಣ್ಣಂದಿರು

ಕಾಯಕವೇ ಕೈಲಾಸ
ಅಂದರು ಆಗ ಬಸವಣ್ಣ
ಕಾಯಕದಲ್ಲೇ ವಾಸ
ಅಂದನು ಈಗ ಶಂಕರಣ್ಣ

Saturday 6 September, 2008

ದೇವದಾಸಿ

ಆಕೆಗಿನ್ನು ೧೩. ಶಾಲೆಯಲ್ಲಿ ಓದುತ್ತಾಯಿದ್ದಾಳೆ. ಅದು ಹೇಗೋ ಒಬ್ಬನ ಮೇಲೆ ಪ್ರೀತಿ ಉಂಟಾಗಿತ್ತು. ಆ
ಹುಡುಗ ಇವಳನ್ನು ಓಡಿ ಹೋಗಲು ಕರೆದನಂತೆ. ಆದರೆ ಈಕೆಯ ಮನಸ್ಸು ಒಪ್ಪಲಿಲ್ಲ. ತಂದೆ ತಾಯಿಯರನ್ನು
ಬಿಟ್ಟು ಓಡಿ ಹೋಗ ಬಾರದು ಎಂಬ ಮನಸ್ಸಿತ್ತು. ಆದರೆ ಈ ವಿಷಯವು ಮನೆ ಮಂದಿಗೆ ತಿಳಿದು ಇವಳನ್ನು
ದೇವದಾಸಿ ಮಾಡಲು ಹೊರಟರು.

ಎಲ್ಲರೂ ಸವದತ್ತಿ ಯಲ್ಲಮ್ಮನ ಗುಡ್ದಕ್ಕೆ ಹೋಗಿ ಇವಳನ್ನು ವಧುವಿನಂತೆ ಸಿಂಗರಿಸಿದರು. ಆಕೆಗೆ ಕೈತುಂಬಾ
ಬಳೆಗಳನ್ನು ತೊಡಿಸಿದಾಗ ಬಹಳ ಆನಂದವಾಯಿತಂತೆ. ಎಲ್ಲಾ ಶಾಶ್ತ್ರಗಳನ್ನು ಮುಗಿಸಿ ಕುತ್ತಿಗೆಗೆ ಒಂದು ತಾಳಿ 
ಕಟ್ಟಿದರು. ಈಗ ಇವಳು ದೇವದಾಸಿ! ಈ ಪದವು ಕೇಳಲು ಹಿತವಾಗಿದೆಯಷ್ಟೇ! ಬೇಸರದ ಸಂಗತಿಯಂದರೆ
ಇಷ್ಟನ್ನೆಲ್ಲಾ ಮಾಡಲು ಇವಳ ಹೆತ್ತಮ್ಮನ ಆಶೀರ್ವಾದವೂ ಇತ್ತು.

ಇದೆಲ್ಲಾ ಆದ ನಂತರ ಎಂದಿನಂತೆ ಶಾಲೆಗೆ ಹೋದಳು.ಸಹಪಾಠಿಗಳೆಲ್ಲಾ ಇವಳ ತಾಳಿಯನ್ನು ನೋಡಿ, ನಿನಗೆ
ಯಾವಾಗ ಮದುವೆಯಾಯಿತು? ನಿನ್ನ ಗಂಡ ಯಾರು? ಎಲ್ಲಿದ್ದಾನೆ? ಅಂತೆಲ್ಲಾ ಅನೇಕ ಪ್ರಶ್ನೆಗಳನ್ನಿಟ್ಟರು. ಆಕೆಗೆ
ಯಾವುದಕ್ಕೂ ಉತ್ತರಿಸಲು ಆಗಲಿಲ್ಲ. ಏನು ತೊಚುತ್ತೆ ...? ಪ್ರಿಯತಮ ಕರೆದಾಗ ಈಕೆ ಓಡಿ ಹೋಗಿದ್ದರೆ
ಚೆನ್ನಾಗಿರುತ್ತಿತ್ತೋ ಏನೋ ಅಂತ ನನಗೆ ಅನ್ನಿಸಿತು.

ಇವಳ ಭಾವ, ಈ ಪದ್ಧತಿ ನಡೆಸಲು ಬೇಕಾಗುವ ಖರ್ಚುಗಳನ್ನೆಲ್ಲಾ ಭರಸಿದನಂತೆ.ಹಾಗಾಗಿ ಇವಳ ತಾಯಿ
ಆತನೊಂದಿಗೆ ಮಲಗಲು ಹೇಳಿದ್ದಳಂತೆ. ಅಷ್ಟೇ ಅಲ್ಲ ಸಿಕ್ಕವರೆಲ್ಲರ ಜೊತೆಗೂ ಮಲಗಿದ್ಡಾಳಂತೆ.ಇವಳೇ
ಹೇಳುವಹಾಗೆ ಇವಳ ಅಕ್ಕನ ಸಂಸಾರ ಸರಿಯಿರಬೇಕಾದರೆ ಈಕೆ ಭಾವಾನೊಂದಿಗೆ ರಾತ್ರಿಗಳ ಕಳೆಯಬೇಕಿತ್ತು.
ಹೀಗೆ ದಿನಗಳು ಕಳೆದಂತೆ ಈಕೆ ಗರ್ಭವತಿಯಾದಳು.ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಳು.ಮತ್ತೆರಡು
ವರ್ಷಗಳಲ್ಲಿ ಇನ್ನೊಂದು ಗಂಡು ಮಗುವಿಗೆ ಜನ್ಮವಿತ್ತಳು. ಇಷ್ಟೇ ಈಕೆಯ ಸಂಸಾರ.ನಿನ್ನ ಮಕ್ಕಳು ಏನ್
ಮಾಡ್ತಾಯಿದ್ದರೆ ಅಂತ ಕೇಳಿದಾಗ, ಆಕೆ ಹೆಮ್ಮೆಯಿಂದ ಹೇಳುತ್ತಾಳೆ "ಹೈ ಸ್ಕೋಲ್ ಓದುತ್ತಾಯಿವೆ".
ತಂದೆ ಹೆಸರು ಏನನ್ನು ಕೊಟ್ಟಿದ್ದೀರ ಅಂತ ಕೇಳಿದಾಗ ಆಕೆ ಹೇಳುತ್ತಾಳೆ "ನನ್ನ ಹೆಸರನ್ನೇ ಕೊಟ್ಟಿದ್ದೀನಿ".
ಯಾಕಮ್ಮ ತಂದೆ ಯಾರು ಅಂತ ಗೊತ್ತಿಲ್ಲವೇ? ಅಂತ ಕೇಳಿದ ಪ್ರಶ್ನೆಗೆ "ತಂದೆ ಹೆಸರು ಕೊಟ್ಟರೆ ಅವರು
ಮುಂದೆ ಹಕ್ಕು ಚಲಾಯಿಸ ಬಹುದು.ಹಾಗಾಗಿ ಕೊಟ್ಟಿಲ್ಲ".ಈ ಮಾತನ್ನು ಕೇಳಿದಾಗ ತುಂಬಾ ದುಃಖವಾಯಿತು
ನನಗೆ.

ಈಕೆಯ ತಾಯಿದ ಮಹದಾಸೆ ಇದ್ದದ್ದು ಇವಳನ್ನು ಪುಣೆ, ಮುಂಬೈಗೆ ಕಳುಹಿಸಿ ಹೆಚ್ಚು ಹೆಚ್ಚು ಹಣ
ಸಂಪಾದಿಸುವುದು.
ಆದರೆ ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ.

ಈಕೆಯ ಮಗಳು ಒಮ್ಮೆ ಕೇಳಿದಳಂತೆ "ನಮ್ಮಪ್ಪ ಯಾರಮ್ಮ? ನಮ್ಮಪ್ಪ ಎಲ್ಲಮ್ಮ?... ನಿನ್ನ ಮದುವೆ
ಮಾಡಿಕೊಟ್ಟಿದ್ದರೆ,ನಮ್ಮ ಜೊತೆಗೆ ಅಪ್ಪನೂ ಇರುತ್ತಿದ್ದರಲ್ವೇನಮ್ಮ". ಏನು ಉತ್ತರ ಕೋಟ್ಟಾಳು ಈಕೆ? ನಾನು
ಏನು ಹೇಳುತ್ತೀನಿ ಅಂದರೆ, ಆ ಯಲ್ಲಮ್ಮನ ಸಮ್ಮುಖದಲ್ಲಿ, ಒಂದು ಕೆಟ್ಟ ಪದ್ಧತಿಯನ್ನು ಆಚರಿಸಿ ಎಷ್ಟೋ
ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಿದ್ದಾರೆ. ಈಗಲೂ ಈ ಪದ್ಧತಿಯಿದೆಯಂತೆ.

ಈಕೆಯ ಜೀವನ ಬರೀ ನೋವೆ? ಅಂತ ಯೋಚನೆ ಮಾಡುತ್ತಾಯಿದ್ದೆ. ಆಗ ಈಕೆ ಜೀವನಕ್ಕೆ Turning
Point ಸಿಕ್ಕಿತು. ಮಹಿಳಾ ಹಿತ/ಅಭಿವೃದ್ದಿ ಮಾಡುವ ಸಂಘವೊಂದು ಈಕೆಯಿದ್ದೆ ಊರಿಗೆ ಬಂದು,"ಇಲ್ಲಿ
ದೇವದಾಸಿಯರು ಇದ್ದಾರೆಯೆ? ಅಂಥವರಿಗೆ ತಿಳುವಳಿಕೆ ಮಾತು ಹೇಳಿ, ಮುಂದೆ ಈ ರೀತಿ ಆಗದಿರಲು
ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನಿಮ್ಮ ಊರಲ್ಲಿ ಅಂಥವರು ಇದ್ದರೆ ದಯವಿಟ್ಟು ತೋರಿಸಿ. ಅವರಿಗೆ
ಒಳ್ಳೆ ಭವಿಷ್ಯ ನಿರೂಪಿಸುತ್ತೇವೆ". "ನಮ್ಮೂರಲ್ಲಿ ದೇವದಾಸಿ ಅಂತ ಯಾರೂ ಇಲ್ಲ" ಅಂತ ಹೇಳಿದ್ದಳಂತೆ.
ಆ ಊರಿನ ಜನರಿಗೆ ಇದು ಹೊಸ ಪದ. ಅವರಿಗೆ ಗೊತ್ತಿದ್ದ ಪದವೆಂದರೆ ಸೂX.ಇವರುಗಳು ನಮ್ಮ ತಲೆ
ತಿನ್ನೋಕೆ ಬಂದಿದ್ದಾರೆ ಅಂತ ತಿಳಿದ ದೇವದಾಸಿಯರು,"ನೀವು ನಾಳೆ ಬನ್ನಿ. ನೀವು ರಾತ್ರಿ ೧೦ ಗಂಟೆಗೆ
ಬನ್ನಿ" ಅಂತೆಲ್ಲ ಹೇಳಿ ಕಳುಹಿಸುತ್ತಾಯಿದ್ದರಂತೆ. ಆದರೆ ಆ ಸಂಘದವರು ಅವರು ಹೇಳಿದ ಸಮಯಕ್ಕೆ
ಸರಿಯಾಗಿ ಅವರನ್ನು ಭೇಟಿಮಾಡುತ್ತಾಯಿದ್ದರಂತೆ. ಏನಾದರೂ ಆಗಲಿ ಒಮ್ಮೆ ಅವರ ಭಾಷಣ ಕೇಳಬೇಕು
ಅಂತ ಕೇಳಿದರಂತೆ ಆ ಊರಿನ ದೇವದಾಸಿಯರು. ಅವರ ಮಾತು ಕೇಳಿದ ಮೇಲೆ,ನಮ್ಮ ಮೇಲೆ
ಲೈಂಗಿಕ ಕಿರುಕುಳ ಕೊಡುವವರನ್ನು ಶಿಕ್ಷೆಗೆ ಗುರಿ ಪಡಿಸಬಹುದು ಎಂಬ ವಿಚಾರ ತಿಳಿದು ಕೊಂಡರಂತೆ.
ಎಂದಿನಂತೆ ಈಕೆ ಭಾವ ಒಂದು ರಾತ್ರಿ ಬರಲು ಹೇಳಿದನಂತೆ. ಆಗ ಈಕೆ, "ಹಿಂದೆ ಆಗಿರೋದು ಆಗೋಯ್ತು.
ಇನ್ನು ಮುಂದೆ ನೀನು ಹೀಗೆ ಕರೆದರೆ.. ಪೋಲೀಸಿಗೆ ಹಿಡಿದು ಕೊಡುತ್ತೀನಿ. ಹುಷಾರ್!" ಅಂತ
ಗದರಸಿದಳಂತೆ.ಅಬ್ಬಾ! ಏನಮ್ಮ ನಿನ್ನ ಧೈರ್ಯ.. ಮೆಚ್ಚೆದೆ ಕಣಮ್ಮ..ಅಲ್ಲಿಂದ ಈಕೆ ಹಾಗು ಇವಳಂತೆ
ಇದ್ದ ಕೆಲವರು,ಈ ಪದ್ಧತಿನಿಲ್ಲುಸುವುದರಲ್ಲಿ ತೊಡಗಿದ್ದಾರಂತೆ. ದೇವದಾಸಿ ಶಾಸ್ತ್ರ ನಡಿತಾಯಿದೆ ಅಂತ ವಿಚಾರ
ತಿಳಿದ ತಕ್ಷಣವೇ ಪೋಲೀಸಿಗೆ ದೂರು ನೀಡಿ,ಅವರನ್ನು ಅಲ್ಲಿಗೆ ಕರೆದು ಕೊಂಡು ಹೋಗಿ
ತಡಿಯುತ್ತಾಯಿದ್ದಾಳಂತೆ. ಹೀಗೆ ಮುಂದುವರಿಸಮ್ಮ.

ಈಕೆಯ ಸಂಸಾರಕ್ಕೆ ಮತ್ತೊಬ್ಬರು ಸೇರಿದ್ದಾರಂತೆ. ಯಾರೆಂದರೆ, ಈಕೆಯ ಪ್ರಿಯತಮ! ಅವನು ಇವಳೊಂದಿಗೆ
ಇದ್ದಾನಂತೆ. ಈ ವಿಚಾರ ಕೇಳಿದ ಮೇಲೆ "ಪ್ರೀತಿ ಸುಳ್ಳಲ್ಲ!" ಅಂತ ಗೊತ್ತಾಗುತ್ತೆ ಅಲ್ವಾ?

ಈ ಕೆಟ್ಟ ಪದ್ಧತಿ ನಿಂತು ಹೋಗಲಿ. ಇದಕ್ಕೆ ಯಾರೂ ಬಲಿಯಾಗುವುದು ಬೇಡ.