Friday 27 February, 2009

ಫಿನ್ ಲ್ಯಾಂಡಿಗೆ ಪ್ರವಾಸ(೨) - ಆಫೀಸಿನಲ್ಲಿ ಆಟ

ಹಿಂದಿನ ಭಾಗ

ನಾನು ಆಫೀಸಿನ ಹತ್ತಿರ ಹೋದೆ. ಆದರೆ ನಾಮ ಫಲಕ ಕಾಣದ ಕಾರಣ ದೇವರ ಗುಡಿಯನ್ನು ಪ್ರದರ್ಶಿಸುವ ಭಕ್ತನ ಹಾಗೆ ಪ್ರದಕ್ಷಿಣೆ ಮಾಡಿದೆ. ಆದರೂ ನಾಮ ಫಲಕ ಕಾಣಿಸಲಿಲ್ಲ. ಆದರೆ ತೆರೋ ತೋರಿಸಿದ ಚಿತ್ರ ಇದೇ ಹಾಗು ವಿಳಾಸ ಇದೆ. ಹಾಗಾಗಿ ಒಳಗೆ ಹೋಗಿ ಅಲ್ಲಿ ಕೇಳೋಣವೆಂದು ನುಗ್ಗಿದೆ. ಮೊದಲು ನನ್ನ ಕಣ್ಣಿಗೆ ಕಾಣಿಸಿದ್ದು Reception ಅಲ್ಲ Restaurant! Reception ಕೂಡ ಇತ್ತು. ಅವರಲ್ಲಿ, ನನ್ನ ಕಂಪನಿ ಎಲ್ಲಿದೆ ಎಂದು ಕೇಳಿಕೊಂಡು, ಹೋದೆ.

ಬಾಗಿಲು ತೆರೆದಿರಲಿಲ್ಲ. ಮತ್ತೆ "ಬಾಗಿಲನು ತೆರೆದು ಸೇವೆಯನು ಕೊಡೊ... " ಅಂತ ಹಾಡೋಣ ಅಂದುಕೊಂಡೆ.. ಆದರೆ ನನ್ನ ಕಣ್ಣಿಗೆ ಕಂಡ Switchನ್ನು ಒತ್ತಿದೆ. ನಂತರ Sami Ellonen ಬಂದು ಬಾಗಿಲು ತೆರೆದರು. "Good Morning Sami!"...
"Hey! Good Morning!" "How are you? How is the Hotel? ..." Jarkko (ಯಾರ್ಕ್ಕೊ) informed you will be coming..ಹೀಗೆ ಎಲ್ಲಾ ನಮ್ಮ ಮಾತು ನಡೆಯುತ್ತಿದ್ದಾಗ.. ಹಿಂದಿನಿಂದ ಒಂದು ದನಿ, "ಮೋಓಓಓಓರೋಓಓಓಓಓಓ". ಯಾರಪ್ಪ ಇವನು ಅಂತ ನೋಡಿದರೆ... ಅವರೇ ತೆರೋ!

"ಹಾಆಅಯ್ ಜೇಏಏಏ. ಗೂಊಊಊಊಡ್ ಮಾರ್ನಿಂಗ್". "Good Morning Tero!".. [ತೆರೋ ಅವರ ಸಂಭಾಷಣೆಯನ್ನು ನೀವು ಓದಿದರೆ ಮಜಾ ಇರೋದಿಲ್ಲ. ಅದನ್ನು ನನ್ನ ಧ್ವನಿಯಲ್ಲಿ ಕೇಳ ಬೇಕು. ಮುಂದೆ ಅವರ ದನಿಯನ್ನು ಅನುಕರಣೆ ಮಾಡಿ, ನಿಮಗೆ ಕೇಳಿಸುತ್ತೇನೆ. ] ನಾನು, ತೆರೋ ಹಾಗು ಸಾಮಿ ಕಾಫಿ ಕುಡಿದೆವು. ನಂತರ ಸಾಮಿ, ನನಗೆ Access Key ಕೊಡಿಸಿದರು. ಇದಾದ ಮೇಲೆ ನಾನು ಕೆಲಸ ಪ್ರಾರಂಭಿಸಿದೆ.

"ನಿನ್ನ ಸಹಾಯಕ್ಕೆ ಮತ್ತೊಬ್ಬರು ಬರ ಬೇಕಿದೆ, ಮಧ್ಯಾಹ್ನ ಬರುತ್ತಾರೆ" ಎಂದು ಯಾರ್ಕ್ಕೊ ವಿ-ಅಂಚೆ ಕಳಿಸಿದ್ದರು. ಅಷ್ಟರಲ್ಲಿ ಆಫೀಸ್ ತುಂಬಿತು. ಅಲ್ಲಿದ್ದವರು ತಾವಾಗಿಯೇ ನನ್ನ ಬಳಿ ಬಂದು ಅವರ ಪರಿಚಯ ಮಾಡಿಕೊಂಡರು. ಕಾರಿ, ತಪನಿ, ಕ್ರಿಸ್ಟಾ, ಬೆವೆ. ನಾವಿಷ್ಟೇ ಜನ ಆ ಆಫೀಸಿನಲ್ಲಿದ್ದದ್ದು!

ತೆರೋ ಹಾಗು ಸಾಮಿ Darts ಆಡುತ್ತಾಯಿದ್ದರು. ನಾನು ಅದನ್ನು ನೋಡಲು ಹೋದಾಗ ಆಟದ ಬಗ್ಗೆ ವಿವರಿಸಿ, ನನ್ನನ್ನೂ ಅವರೊಂದಿಗೆ ಸೇರಿಸಿ ಕೊಂಡರು. ಕ್ರಿಸ್ಟಾ ಕೂಡ ಬಂದಳು. ಕಾರಿ ಕೂಡ ಬಂದರು. ಆಫೀಸಿನ ಎಲ್ಲರೂ ಈಗ ಆಟವಾಡುತ್ತಾಯಿದ್ದರು. ಆ ಆಟ ನನಗೆ ತುಂಬಾ ಇಷ್ಟವಾಯಿತು. ಆಟ ಮುಗಿದ ಮೇಲೆ ಎಲ್ಲರೂ ಅವರವರ ಕೆಲಸದ ಕಡೆ ಗಮನ ಕೊಟ್ಟರು.

ಮಧ್ಯಾಹ್ನ ಊಟದ ಸಮಯವಾದಾಗ, ಅವರೆಲ್ಲರೂ ನನ್ನನ್ನು ಕರೆದರು. ಆಗ ನಾನು, "ನನ್ನ ಊಟ ತಂದಿದ್ದೇನೆ. ನೀವು ಹೋಗಿ ಮಾಡಿಕೊಂಡು ಬನ್ನಿ" ಅಂದೆ. ಆಗ ಕ್ರಿಸ್ಟಾ , ಆ ಓವೆನ್ ಉಪಯೋಗಿಸಿಕೋ ಬೇಕಿದ್ದರೆ ಎಂದರು. ನನ್ನ ಊಟವಾದ ಮೇಲೆ, ಸ್ವಲ್ಪ ಹೊತ್ತಿನಲ್ಲೇ "Stanislavs Lielausis" ಬಂದರು. ಇವರೊಂದಿಗೆ ಪರಿಚಯವಾದ ಮೇಲೆ, ನಾನು ಮಾಡ ಬೇಕಿದ್ದ ಕೆಲಸದಲ್ಲಿ ನನಗಿದ್ದ ಸಂದೇಹಗಳನ್ನು ಬಗೆ ಹರಿಸಿಕೊಳ್ಳುತ್ತಿದ್ದೆ. ಆತನೊಂದಿಗೆ ಒಂದೆರಡು ಗಂಟೆ ಚರ್ಚೆಯಾದ ಮೇಲೆ ನನ್ನ ಸಮಸ್ಯೆಗೆ ಉತ್ತರ ಸಿಗಲಾರಂಭಿಸಿತು. ಬಂದ ಕೆಲಸ ನಿರ್ವಿಘ್ನವಾಗಿ ಮುಗಿಯುತ್ತೆ ಎಂಬ ನಂಬಿಕೆ ಬಂತು.

ಈ ವಿಷಯವನ್ನು ಯಾರ್ಕ್ಕೊ ಜೊತೆ ಮಾತಾಡಿದೆವು. ಆಗ ಅವರು "Excellent!" ಅಂದರು. ಈ integration ಕೆಲಸ ಆದ ಮೇಲೆ, ನಾನು ಹಾಗು Stan ಡಾರ್ಟ್ಸ್ ಆಡಿದೆವು. ಅವರು ಕಣ್ಣಲತೆಯ ದೂರದಲ್ಲಿದ್ದ Sokos Ilves ಎಂಬ ಹೋಟೆಲ್ ನಲ್ಲಿ ತಂಗಿದ್ದರು.

ಹೆಲ್ಸಿಂಕೆಯ ಹಾಗೆ ಇಲ್ಲೂ ಕೂಡ ೩-೪ ರ ಸಮಯಕ್ಕೆ ಹಣ್ಣುಗಳನ್ನು ತಂದು ಇಡುತ್ತಿದ್ದರು. ಅದರ ಸೇವೆಯಾದ ಮೇಲೆ ಮತ್ತೆ ಡಾರ್ಟ್ಸ್, ಚಾಟ್, ಕೆಲಸ...

ಅಲ್ಲಿಯವರೆಲ್ಲರೂ ಸಂಜೆ ೫ಕ್ಕೆ ಖಾಲಿ! ನನಗೋ ನನ್ನ ಮನಸ್ಸು ಒಪ್ಪೋದಿಲ್ಲ ಬೇಗ ಹೊಟೆಲಿಗೆ ಹೋಗೋಕೆ. ಆರು ಮೂರಾಗಲಿ ಮೂರು ಆರಾಗಲಿ, ಎಂಟು ಗಂಟೆಗಳ ಕಾಲ ಕೆಲಸ ಮಾಡಲೇ ಬೇಕು. Stan ಕೂಡ ಬೇಗ ಹೋಗುತ್ತೀನಿ, ಆಯಾಸವಾಗಿದೆ ಎಂದು ಹೊರಟ. ನಾನು ಇನ್ನು ಸ್ವಲ್ಪ ಕೆಲಸ ಮಾಡಿ, ಆರು ಗಂಟೆಗೆ ಆಫೀಸಿನಿಂದ ಹೊರಟೆ.

Saturday 21 February, 2009

100 Not Out

ಇದು ನನ್ನ ನೂರನೆ ಪೋಸ್ಟ್!
ನನ್ನ ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ವಂದನೆಗಳು. ಈ ಬಾರಿಯ ವಿಶೇಷವೇನೆಂದರೆ ಏನೂ ವಿಶೇಷವಿಲ್ಲ!

Flashback:

೨೦ನೇ ಪೋಸ್ಟಿಗೆ - ಬ್ಲಾಗಿನ ಟೈಟಲ್ ಇಷ್ಟವಾಗಿರಲಿಲ್ಲ ಹಾಗಾಗಿ "ಅಂತರ್ವಾಣಿ" ಅಂತ ನಾಮಕರಣ.
೫೦ನೇ ಪೋಸ್ಟಿಗೆ - ನನ್ನ ಫೋಟೊ ಚೆನ್ನಾಗಿರಲಿಲ್ಲ ಹಾಗಾಗಿ "ಅಂತರ್ವಾಣಿ ಲೋಗೋ" ಹಾಗು ಟೆಂಪ್ಲೇಟ್ ಬದಲಾವಣೆ.
೭೫ನೆ ಪೋಸ್ಟಿಗೆ - ಲೋಗೋ ತುಂಬಾ ಇಷ್ಟವಾಗಿ ಹೋಗಿತ್ತು ಆದ್ದರಿಂದ ಟೆಂಪ್ಲೇಟ್ ಮಾತ್ರ ಬದಲಾವಣೆ (ಈಗಿರುವ ಟೆಂಪ್ಲೇಟ್)
೧೦೦ನೇ ಪೋಸ್ಟಿಗೆ - ಈಗ ಟೆಂಪ್ಲೇಟೂ ಇಷ್ಟವಾಗಿದೆ ಹಾಗಾಗಿ ಏನೂ ಬದಲಾವಣೆಯಿಲ್ಲ.

ನನಗೆ ಕವನಗಳಲ್ಲಿ ಹೆಚ್ಚು ಒಲವು. ಕಾರಣ ಬೇಕಾದಷ್ಟು ಇವೆ.
೧) ಓದಲು ಹೆಚ್ಚು ಸಮಯ ಬೇಕಿಲ್ಲ
೨) ರಾಗ ಹಾಕಿ ಕೊಂಡು ಹಾಡ ಬಹುದು
೩) ಚೆಂದದ ಪದಗಳನ್ನು ಓದುವುದೇ ಆನಂದ
೪) ಪುಟಗಟ್ಟಲೆ ಬರೆಯುವುದನ್ನು ಕೆಲವೇ ಪದಗಳಲ್ಲಿ ಹೇಳ ಬಹುದು
೫) ಛಂದಸ್ಸಿನಲ್ಲಿ ಬರೆದರಂತೂ ಓದಲು ಆನಂದ.

ಇದುವರೆಗು ೬೧ ಕವನಗಳನ್ನು ಪೋಸ್ಟ್ ಮಾಡಿದ್ದೇನೆ. ಆ ೬೧ರಲ್ಲಿ ಕೇವಲ ೧೭ "ಪ್ರಣಯವಾಣಿ" (Romantic) ಕವನಗಳು. ನಾನು ಪ್ರಣಯವಾಣಿ ಬರೆಯುವ ಪ್ರಯತ್ನ ಮಾಡುತ್ತಿಲ್ಲ. ಆದರೂ ಕೆಲವು ಸಮಯ "ಪರಿಸ್ಠಿತಿ"ಗೆ ಸೋತು ಒಂದರ ಹಿಂದೊಂದು ಬರೆದು ಬಿಡುತ್ತೇನೆ.
ಕನ್ನಡಿಯೊಳಗಿನ ಗಂಟು, ಮರುಳು ಮಾತುಗಳು, ಮಕಾರದ ಮಾನಿನಿಯರು, ಯಾಕೆ ಹೀಗೆ, ಯಾರಿಗಾಗಿ ಇದು ?, ಅಪ್ಸರೆ ಇತ್ಯಾದಿ.

ಪ್ರೊ! ಕೆ.ಎಸ್.ನಿಸಾರ್ ಅಹ್ಮದ್ಅವರ ಒಂದು ಕವನದ ಸಾಲುಗಳನ್ನು ಇಲ್ಲಿ ಹೇಳ ಬಯಸುತ್ತೇನೆ

ನಿನ್ನ ನೆನಪು ಕಾಡದಂತೆ
ಕವನ ಕಟ್ಟಿ ಹಾಡದಂತೆ

ತಡೆ
ದೆ ನಾನು ನನ್ನನೆ

[ರಾಜಕುಮಾರ್ ಭಾರತಿ ಅವರ ಕಂಠದಲ್ಲಿ ಈ ಹಾಡನ್ನು ಕೇಳಿದಾಗ ಸ್ವಪ್ನ ಲೋಕದಲ್ಲೇ ಇದ್ದೆ]

ಇದುವರೆಗೂ ಬರೆದ ಕವನಗಳಲ್ಲಿ ಒಂದು ಅಪೂರ್ಣವಾದ ಕವನವಿದೆ! ಆ ಕವನ ಬರೆಯುವಾಗ ಅದೆಷ್ಟೋ ಬಾರಿ ಕಂಬನಿ ಒರೆಸಿ ಕೊಳ್ಳುತ್ತಿದ್ದೆ. ಕವನವನ್ನು ಪೂರ್ಣಗೊಳಿಸಲು ಆಗುತ್ತಿಲ್ಲ ಎಂದಲ್ಲ, ಆ ಕವನದ ನಾಯಕನ ಸ್ಥಿತಿ ಕುರಿತು ಯೋಚಿಸುತ್ತಾ.

ಆ ಕವನ ಇಲ್ಲಿದೆ.
[ಈ ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ... ಹೇಗೆ ಪೂರ್ಣಗೊಳಿಸಲಿ ಎಂದು ಸಲಹೆ ನೀಡಿ]

Saturday 14 February, 2009

ಫಿನ್ ಲ್ಯಾಂಡಿಗೆ ಪ್ರವಾಸ (೨) - ಶಂಕ್ರಾ ನೀ ಬೇಗನೆ ಬಾರೋ....

ನನ್ನ ಮ್ಯಾನೇಜರ್, "ಶಂಕ್ರಾ ನೀ ಬೇಗನೆ ಬಾರೋ...." ಅಂತ ಕಲ್ಯಾಣಿ ರಾಗದಲ್ಲಿ ಹಾಡುತ್ತಿದ್ದ ಹಾಗೆ ನಾನು ಎರಡನೆ ಬಾರಿ ಫಿನ್ ಲ್ಯಾಂಡಿಗೆ ಹಾರ ಬೇಕಾಯಿತು. ಆಗಸ್ಟ್ ೧೧, ೨೦೦೭

ಮಾರ್ಚ್ ೨೦೦೭ರಲ್ಲಿ ಬೆಂಗಳೂರಿಗೆ ಬಂದು, ಇಲ್ಲಿಯೇ ಕೆಲಸ ನಿರ್ವಹಿಸುತ್ತಾಯಿದ್ದೆ. ಅನೇಕ ರೀತಿಯಾದ ಕಷ್ಟಗಳು ಇದ್ದವು. ಹಾಗೂ ಹೀಗೂ Design & development ಆಯ್ತು. ಇದನ್ನು Integration ಮಾಡ ಬೇಕಿತ್ತು. ನಾನು ಹಲವಾರು ದಿನ ಪ್ರಯತ್ನ ಪಟ್ಟೆ. ಆದರೆ ಆಗಲಿಲ್ಲ. ದಿನಕ್ಕೆ ಹತ್ತಾರು ವಿ-ಅಂಚೆಗಳು, ಫೋನ್ ಕಾಲುಗಳು ನಡೆದರೂ ಏನೂ ಪ್ರಯೋಜನವಾಗಲಿಲ್ಲ. ಆಗ ಯಾರ್ಕ್ಕೊ ನನ್ನನ್ನು ಪುನಃ ಫಿನ್ ಲ್ಯಾಂಡಿಗೆ ಕರೆಸಿಕೊಳ್ಳಲು ನಿರ್ಧಾರ ಮಾಡಿ, ಅದರ ವ್ಯವಸ್ಥೆ ಮಾಡಿಕೊ ಅಂದರು. ಎರಡು ವಾರ ಬರಬೇಕು ಎಂದು ಹೇಳಿದರು. ನಾನು ವೀಸಾ ಅರ್ಜಿ ಹಾಕಿ, ಬೆಂಗಳೂರು - ದೆಹಲಿ, ದೆಹಲಿ - ಹೆಲ್ಸಿಂಕಿ, ಹೆಲ್ಸಿಂಕಿ - ತಾಂಪರೆ ಗೆ ಟಿಕೆಟ್ ಕಾದಿರಿಸಿದೆ. ಆಮೇಲೆ ಅದೇಕೋ ಮನಸ್ಸು ಬದಲಿಸಿ, ಒಂದು ವಾರ ಸಾಕು ಎಂದು ಹೇಳಿದರು. ನಾನು ಅವರಿಗೆ ಹೋಟೆಲ್ ಕಾದಿರಿಸಿ ಎಂದು ಕೇಳಿಕೊಂಡೆ. ಸ್ವಲ್ಪ ಹೊತ್ತಿನಲ್ಲೇ ಹೊಟೆಲಿನ ಕಾದಿರಿಸಿದ ವಿ-ಅಂಚೆಯನ್ನು ಕಳುಹಿಸಿದರು. Scandic Tampere City ಎಂಬ ಹೋಟೆಲು. ಈ ಬಾರಿ ನಾನೊಬ್ಬನೆ ಹೋಗ ಬೇಕಿತ್ತು. ತೆರೋಗೆ ನಾನು ಬರುವ ವಿಚಾರವನ್ನು ಯಾರ್ಕ್ಕೊ ಹೇಳಿದ್ದರಿಂದ, ತೆರೋ ನನಗಾಗಿ ಹೊಟೆಲಿನಿಂದ ಕಚೇರಿಗೆ ಬರುವ ದಾರಿಯನ್ನು ಹೇಳಿದ್ದರು. ಅಲ್ಲದೆ ಕಚೇರಿಯ ಒಂದು ಚಿತ್ರವನ್ನೂ ಸಹ ಕಳುಹಿಸಿ ಕೊಟ್ಟಿದ್ದರು. ಅವರ ದೂರವಾಣಿ ಸಂಖ್ಯೆಯನ್ನೂ ಕೊಟ್ಟರು ತಿಳಿಯದೇ ಇದ್ದಲ್ಲಿ ಕರೆ ಕೊಡು ಎಂದರು.

ನಾನು ಹಿಂದಿನ ಸಲದಂತೆ MTR ತಿನಿಸುಗಳನ್ನು ತೆಗೆದುಕೊಂಡಿದ್ದೆ. ಒಂದು ವಾರದ ಮಟ್ಟಿಗೆ ಆದ್ದರಿಂದ ನಾನು ನಳ ಮಹಾರಾಜನನ್ನು ಆವಾಹನೆ ಮಾಡಲಿಲ್ಲ. ಅಪ್ಪ ಟ್ಯಾಕ್ಸಿಗೆ ಹೇಳಿದ್ದರು. ಹಿಂದಿನ ಬಾರಿ ಬಂದಿದ್ದ Ambassador ಈ ಬರಿಯೂ ಬಂತು. ಅದರಿಂದ ವಿಮಾನ ನಿಲ್ದಾಣ ತಲುಪಿದೆವು. ಸ್ವಲ್ಪ ಹೊತ್ತು ಅಪ್ಪ ಅಮ್ಮರೊಂದಿಗೆ ಮಾತಾಡಿ, Boarding Pass ತೆಗೆದು ಕೊಂಡು Security Checkಗೆ ಹೋದೆ. ಅಲ್ಲಿ ನಟ ಅವಿನಾಶ್ ಅವರನ್ನು ನೋಡಿ, ಮಾತಾಡಿಸಿದೆ. ನನ್ನ ಮುಂದೆಯೇ ಅವರಿದ್ದರು. ಹಸ್ತಲಾಘವ ಆದ ಮೇಲೆ ಬೇರೇನು ಮಾತಾಡಲು ನನಗೆ ತೋಚಲಿಲ್ಲ. ಅವರ ಜಾಗದಲ್ಲಿ ನಮ್ಮ ಗುರು ವಿಷ್ಣು ಇದ್ದಿದ್ದರೆ ಅದರ ಮಜಾನೇ ಬೇರೆ!..

ಈ ಬಾರಿ ನಾನು ಕಿಂಗ್ ಫಿಷರ್ ನಲ್ಲಿ ದೆಹಲಿಗೆ ಹೋಗಿದ್ದು. ಅಲ್ಲಿ ಪುರುಷ ಏರ್ ಹೋಸ್ಟ್ ಇರುವುದು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತು! ಅಲ್ಲಿಯ ಕೆಂಪು ಹುಡುಗಿಯರು ತಂಪು ಪಾನೀಯ ಕೊಟ್ಟಾಗ ಕುಡಿಯೋ ಮಜಾನೇ ಬೇರೆ..ಆದರೆ ಅವರ ಭಾಷೆ ಯಾವರೀತಿವಿರುತ್ತದೆ ಎಂದರೆ, ನನ್ನಂತಹ ಅಲ್ಪ ಆಂಗ್ಲ ಭಾಷೆ ತಿಳಿದವರಿಗೆ ಮೊದಲ ಬಾರಿಗೆ ಅರ್ಥವಾಗದು. ಎರಡು ಮೂರು ಬಾರಿ ಕೇಳ ಬೇಕು.. ಏನಮ್ಮ ಹೇಳಿದ್ದು ನೀನು? ಅಂತ. ಕಿಂಗ್ ಫಿಷರ್ನಲ್ಲಿ ಒಬ್ಬರಿಗೊಂದು ಟಿ.ವಿ. ಕೊಟ್ಟಿರುತ್ತಾರೆ. ಕೆಲವು ಚಾನೆಲ್ಲುಗಳು ಹಾಗು ರೇಡಿಯೋ ಕೂಡ ಬರುತ್ತಿತ್ತು. ನಾನು ಶಾಸ್ತ್ರೀಯ ಸಂಗೀತ ಕೇಳುತ್ತಾ ಪ್ರಯಾಣ ಮುಗಿಸಿದೆ.

ದೆಹಲಿಯಲ್ಲಿ ಇಳಿದು ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವುದು ನನಗೆ ಅನುಭವವಿದ್ದರಿಂದ ಎಲ್ಲೂ ಕಷ್ಟವಾಗಲಿಲ್ಲ. ನಂತರ ಹೆಲ್ಸಿಂಕಿಗೆ Boarding Pass ತೆಗೆದು ಕೊಳ್ಳುವಾಗ, ಆಕೆ ನಿಮ್ಮ Final Destination ಎಲ್ಲಿ ಎಂದು ಕೇಳಿದರು. ನಾನು ತಾಂಪರೆ ಎಂದೆ. ಅದರ ಟಿಕೆಟ್ ನನ್ನಿಂದ ಪಡೆದು ಕೊಂಡು, ಹಲ್ಸಿಂಕಿ - ತಾಂಪರೆಗೂ ಸಹ Boarding Pass ಕೊಟ್ಟರು. ದೆಹಲಿಯಿಂದ ಹೆಲ್ಸಿಂಕಿಗೆ ಪ್ರಯಾಣ ಬೆಳಸಿದೆ. ಅಲ್ಲಿ ಸೇರಿದಾಗ ಸಮಯ ೭.೩೦ -೮ ಇರಬೇಕು. ಹಿಂದ ಬಾರಿಯಂತೆ ನನ್ನ ಒಬ್ಬ ಅಧಿಕಾರಿ ಪ್ರಶ್ನಿಸಿದ, ಟಿಕೆಟ್ ಗಳನ್ನು ಪರಿಶೀಲಿಸಿ ಮುಂದೆ ಸಾಗಲು ಬಿಟ್ಟ. Immigration ಬಳಿ ಸ್ವಲ್ಪ ಕಿರಿಕಿರಿ ಮಾಡಿದರು. ನನ್ನ ಪಾಸ್ಪೋರ್ಟ್ ಹೆಸರು ಹಾಗು ಟಿಕೆಟಿನಲ್ಲಿದ್ದ ಹೆಸರು ಸ್ವಲ್ಪ ವ್ಯತ್ಯಾಸವಿತ್ತು. ನಮ್ಮ ಊರಿನ ಹೆಸರು ಮೊದಲಿತ್ತು ಪಾಸ್ಪೋರ್ಟಿನಲ್ಲಿ. ಆದರೆ ಈ ಸಂಸ್ಥೆಗೆ ಸೇರಿದಾಗ ನನ್ನ ಊರಿನ ಹೆಸರನ್ನು ಕೊನೆಗೆ ಹಾಗಿದ್ದರು. ಮೀಸೆ ತೆಗೆದಿದಾಗಿನ ಚಿತ್ರವನ್ನು ಪಾಸ್ಪೋರ್ಟಿನಲ್ಲಿ ಹಾಕಿದ್ದೆ. ಆಮೇಲೆ ನನ್ನ ಮುಗ್ಧಮೊಗ ನೋಡಿ ಎಲ್ಲಿಗೆ ಹೋಗುತ್ತಾಯಿದ್ದೀಯ ಅಂತ ಕೇಳಿದರು. ತಾಂಪರೆಯೆಂದೆ. By Aircraft? ಎಂದರು... Yes ಎಂದೆ. Domestic ನಿಲ್ದಾಣಕ್ಕೆ ಹೇಗೆ ಹೋಗಬೇಕು ಎಂದು ಕೇಳಿದೆ. ಆತ ದಾರಿ ತೋರಿಸಿದ.

ಅಲ್ಲಿ ಡೊಮೆಸ್ಟಿಕ್ ಏರ್ ಪೋರ್ಟಿಗೆ ಹೋದೆ. ಅಲ್ಲೆಲ್ಲೂ ನನ್ನ ಕಣ್ಣಿಗೆ ದೂರವಾಣಿ ಕಾಣಲಿಲ್ಲ. ಅಲ್ಲೊಬ್ಬರನ್ನು ಕೇಳಲು, International Airport ಹೋಗಬೇಕು ಎಂದರು. ಪುನಃ ಅಲ್ಲಿಯವರೆಗು ನನ್ನ ಆಸ್ತಿಗಳನ್ನು ಎಳೆದು ಕೊಂಡು ಹೋಗಿ, ಮನೆಗೆ ಫೋನು ಮಾಡಿದೆ. ನಂತರ Fresh ಆದೆ. ಸಮಯ ಸುಮಾರು ೮.೩೦ ಇರಬೇಕು. ನನ್ನ ತಾಂಪರೆಯ ವಿಮಾನ ಇದ್ದದ್ದು ಮಧ್ಯಾಹ್ನ ೧.೩೦ ಕ್ಕೆ. ಅಲ್ಲಿಯವರೆಗೂ ಸಮಯ ಕಳೆಯ ಬೇಕಿತ್ತು. ಸರಿಯಾದ ನಿದ್ದೆ ಇಲ್ಲದ ಕಾರಣ, ಮಲಗಲು ಪ್ರಯತ್ನ ಮಾಡಿದೆ. ಅದಕ್ಕಾಗಿ ಮೊದಲಿಗೆ ೯.೩೦ ಕೆ Alarm ಇಟ್ಟುಕೊಂಡೆ. ಆದರೂ ಅದೇಕೋ ನಿದ್ದೆ ಬಾರಲಿಲ್ಲ. ಲಗ್ಗೇಜು ಕಳ್ಳತನವಾಗಬಹುದೇನೋ ಎಂಬ ಭಯ ಒಂದೆಡೆ, ವಿಪರೀತ ನಿದ್ರಿಸಿ, ತಾಂಪರೆ ವಿಮಾನ ತಪ್ಪಿಹೋಗ ಬಹುದೇನೋ ಎಂಬು ಆತಂಕ ಮತ್ತೊಂದೆಡೆ.
ಹೊಟ್ಟೆ ಹಸಿವು ಸ್ವಲ್ಪವಿತ್ತು. ಅಲ್ಲಿದ್ದ ಒಂದು ಅಂಗಡಿಗೆ, Biscuits ತೆಗೆದು ಕೊಳ್ಳೋಣವೆಂದು ಹೋದೆ. ಆಕೆಗೆ ಅದನ್ನು ಕೇಳಿದೆ. ತಿಳಯದವಳಂತೆ ಆಡಿದಳು. ಅದಕ್ಕೆ Cookies ಅಂತ ಕೇಳಿದೆ. ಗೊತ್ತಿಲ್ಲ ಅಂದಳು. ನಾನೇ ಹೋಗಿ ಜಾಲಾಡಿ ಒಂದು ಪ್ಯಾಕ್ ತೆಗೆದುಕೊಂಡು ಬಂದೆ. ಮೊದಲನೆಯದನ್ನು ತಿಂದು.. ನಾಯಿಗೆ ಹಾಕೋ ಬಿಸ್ಕತ್ತು ತಂದು ಬಿಟ್ಟಿದ್ದೀನಾ ಅಂತ ನೋಡಿದೆ. ಅಲ್ಲೇಲ್ಲೂ ನಾಯಿಯ ಚಿತ್ರವಿರಲಿಲ್ಲ. ಹಾಗಾಗಿ ಇದು ಮನುಷ್ಯರು ತಿನ್ನ ಬಹುದೆಂದು ನಿರ್ಧರಿಸಿದೆ. ಆದರೆ ರುಚಿ.... ಕೇಳ ಬೇಡಿ. ಏನೇನು ಪದಾರ್ಥ ಹಾಕಿದ್ದಾರೆ ಎಂದು ನೋಡಿದೆ. ೩ ಅಕ್ಷರದ ಒಂದು ಪದ ಕಾಣಿಸಿತು್, "Egg".

ಅಲ್ಲಿಯೇ ಹೀಗೆ ಸಮಯ ಕಳೆದೆ. ತಾಂಪರೆಗೆ ಸಂಬಂಧಿಸಿದ ಪುಸ್ತಕವನ್ನು ಓದುತ್ತಾಯಿದ್ದೆ. ಅಲ್ಲಿಂದ ಮಧ್ಯಾಹ್ನ ವಿಮಾನ ಹಾರುವ ಮುಂಚೆ, ನನ್ನ ಸೀಟ್ ನಂಬರ್ ಕೊಟ್ಟಿರಲಿಲ್ಲ. ಅದನ್ನು ಅಲ್ಲಿಯ Finnair Counter ಬಳಿ ಕೇಳಿದೆ. ಅದಕ್ಕೆ ಆಕೆ, ಎಲ್ಲಿ ಬೇಕಾದರೂ ಹೋಗಿ ಕುಳಿತುಕೊ ಅಂದಳು. ವಿಮಾನ ತುಂಬಾ ಚಿಕ್ಕದಿತ್ತು. ಅದರ ರೆಕ್ಕೆಗಳು ಬೇರೆ ವಿನ್ಯಾಸದ್ದು. ಕೇವಲ ೬೦-೭೦ ಜನ ಕೂರಬಹುದಾದಂತಹ ವಿಮಾನ. ಇದರಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ವಿಮಾನದಲ್ಲಿ ತಿನ್ನಲು ಒಂದು Chocolate ಕೊಟ್ಟಿದ್ದರು. ವಿಮಾನದ ಹಾರಾಟದಲ್ಲಿ ಅನೇಕ ಬೆಟ್ಟಗಳು, ಕೊಳಗಳು ಕಂಡಿತು. ತಾಂಪರೆಗೆ ಕೇವಲ ೨೦ ನಿಮಿಷದ ಹಾರಾಟ ಮಾತ್ರವೇ ಆಗಿತ್ತು. ಇಪ್ಪತ್ತು ನಿಮಿಷದ ಹಾರಾಟಕ್ಕೆ ಬೆಳಿಗ್ಗೆಯಿಂದ ಕುಳಿತು, ಸಮಯ ವ್ಯರ್ಥ ಮಾಡಿದೆ ಅನಿಸಿತು.

ತಾಂಪರೆಯಲ್ಲಿ ಲಗ್ಗೇಜನ್ನು ತೆಗೆದುಕೊಂಡು ಟ್ಯಾಕ್ಸಿಯೊಂದನ್ನು ಹುಡುಕಿ, Hotel Scandic Tampere City ಗೆ ಕರೆದುಕೊಂಡು ಹೋಗು ಎಂದೆ. ಆತ ನನ್ನ ಆಸ್ತಿಯನ್ನು ಡಿಕ್ಕಿಯಲ್ಲಿ ಹಾಕಿ, ಸ್ವಲ್ಪ ಸಮಯದಲ್ಲೇ ಹೊಟೆಲಿಗೆ ತಲುಪಿಸಿದ. ತಾಂಪರೆಯಲ್ಲಿ ಆಗ ಚಳಿ ಇರಲಿಲ್ಲ. ಸಾಮಾನ್ಯ ಹವಾಮಾನವಿತ್ತು. ನಾನು ಹೋಟೆಲ್ ಸೇರಿದ ಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದು ಕೊಂಡು, ನನ್ನ ಆಫೀಸನ್ನು ನೋಡಿಕೊಂಡು ಬರಲು ಹೊರಟೆ. ಅಲ್ಲಿದ್ದ ತಾಂಪರೆಯ ನಕ್ಷೆಯನ್ನು ತೆಗೆದು ಕೊಂಡು ಹೊರಟೆ. ಹೊಟೆಲಿನ ಎದುರುಗಡೆಯೇ ಅಲ್ಲಿಯ ರೈಲು ನಿಲ್ದಾಣವಿತ್ತು. ಹೋಗುವ ದಾರಿಯಲ್ಲಿ ಒಂದು ಹಳೇ ಚರ್ಚು ಇತ್ತು. ಅದರ ಹತ್ತಿರದಲ್ಲೇ ಬಸ್ ನಿಲ್ದಾಣವಿತ್ತು. ಅದರ ಬಳಿಯೇ ನಮ್ಮ ಕಚೇರಿಯಿತ್ತು. ನಮ್ಮ ಕಚೇರಿಯ ನಾಮ ಫಲಕ್ಕಕಾಗಿ ಹುಡುಕಿದೆ ಆದರೆ ಸಿಗಲಿಲ್ಲ. ತೆರೋ ತೋರಿಸಿದ ಚಿತ್ರವೇನೊ ಇದೇ ಆಗಿತ್ತು. ಆದರೆ ನಾಮ ಫಲಕ ಇಲ್ಲ. ಸರಿ ನಾಳೆ ಬಂದು ನೋಡಿದರಾಯಿತು ಎಂದು ಪುನಃ ಹಿಂದಿರುಗಿದೆ. ಇಷ್ಟು ಹೊತ್ತಿಗೆ ಸಂಜೆ ಆರು. ಸ್ವಲ್ಪ ಸಿಹಿ ಹಾಗು ಖಾರ ತಿನಿಸುಗಳನ್ನು ತಿಂದು, ಟಿ.ವಿ.ಯನ್ನು ನೋಡುತ್ತಾಯಿದ್ದೆ. ೭.೩೦ಕ್ಕೆ ಊಟ ಮಾಡಿ ಮಲಗಿದೆ.

Friday 6 February, 2009

ಮೊದಲ ಭಾಮಿನಿ

ಬಾಳ ದೋಣಿಯ ಅಂಬಿಗ ಶ್ರೀ ಹರೀಶ್, ಭಾಮಿನಿ ಷಟ್ಪದಿಯಲ್ಲೊಂದು ಕವನ ರಚಿಸುವಂತೆ ಹುಳ ಬಿಟ್ಟು, ಭಾಮಿನಿಯ ಕುರಿತು ಮಾಹಿತಿ ಕೊಟ್ಟು, ಈ ಕೆಲಸಕ್ಕೆ ಕೈ ಹಾಕುವಂತೆ ಮಾಡಿದ್ದಕ್ಕೆ ವಂದನೆಗಳನ್ನು ಹೇಳುತ್ತೇನೆ.

ಸದ್ಯದ ನನ್ನ ಪರಿಸ್ಥಿತಿಯನ್ನು ಭಾಮಿನಿಯಲ್ಲೇ ಹೇಳುತ್ತಾಯಿದ್ದೀನಿ.


ಮನದಿ ಭಾಮಿನಿಯ ಆಸೆಯಿಟ್ಟ
ಬಾನ ನೋಡುತ ಯೋಚಿಸಿದೆ ನಾ
ಜೇನಿನ ನುಡಿಗಳು ಸಿಗುವ ಕಾಯಕ ನಡೆದಿದೆ ಈಗ
ಕಾನನದಿ, ಪರಿಸರದಿ ಹುಡುಕಿಹೆ
ಅನವರತ ಮನಸನ್ನು ಕೆದಕಿಹೆ
ನನಗೆ ತಿಳಿಯದ ಶಕ್ತಿ ಬರೆಸಿಹ ಮೊದಲ ಕವನವಿದು