Saturday 31 May, 2008

ಒಬ್ಬನೆ ಮಾತಾಡಿದೆ!

(ಇದು ಯಾವ ಸಂದರ್ಭದಲ್ಲಿ ಬರೆದೆ ಅಂತ ನನಗೆ ಮತ್ತು ನನ್ನ ಈ ಸ್ಥಿತಿಗೆ ಕಾರಣವಾದವರಿಗೆ ಗೊತ್ತು.)

ಒಬ್ಬನೆ ಮಾತಾಡಿದೆ
ಇನ್ನೊಬ್ಬ ಜೊತೆಗಿಲ್ಲದೆ
ಒಬ್ಬನೆ ಮಾತಾಡಿದೆ!

ನಾ ಬಯಸಿದ ಜೀವ
ಸನಿಹ ಬಾರದಿರಲು
ಒಬ್ಬನೆ ಮಾತಾಡಿದೆ!

ಕಲ್ಲ ಬೆಂಚ ಮೇಲೆ ಕೂತು
ಕಾಯುವಲ್ಲಿ ಸುಖವಿಲ್ಲದೆ
ಒಬ್ಬನೆ ಮಾತಾಡಿದೆ!

ಉಸಿರುಸಿರು ಎಣಿಸುತ
ಹಸಿರೆಲೆಯ ವೀಕ್ಷಿಸುತ
ಒಬ್ಬನೆ ಮಾತಾಡಿದೆ!

ನೀ ಬಳಿಗೆ ಬಂದಾಗ
ಬೇಸರ ಸರಿದಾಗ
ಹಿಗ್ಗುತ ಮಾತಾಡಿದೆ!

Monday 26 May, 2008

ಫಿನ್ ಲ್ಯಾಂಡಿಗೆ ಪ್ರವಾಸ - ಮೊದಲನೆ ಬಾರಿ - ೨

ಭಾಗ ೧

ಹೆಲ್ಸಿಂಕಿಯಲ್ಲಿ ವಿಮಾನ ಭೂಸ್ಪರ್ಶ ಮಾಡಿತು. ಆಗ ಮೊದಲು ಮಾಡಿದ್ದ ಕೆಲಸ ಏನು ಅಂದರೆ, ನನ್ನ ಗಡಿಯಾರವನ್ನು 3.30 ಗಂಟೆ ಹಿಂದಕ್ಕೆ ತಿರುಗಿಸಿದೆ. ಆಮೇಲೆ ಕ್ಯಾಬಿನ್ನಿನಲ್ಲಿದ್ದ ನನ್ನ ಬ್ಯಾಗನ್ನು ಇಳಿಸಿದೆ. ಆಮೇಲೆ ಆ ಬ್ಯಾಗ್ ತೆಗೆದುಕೊಂಡು ವಿಮಾನದಿಂದ ಹೊರಗೆ ಸಾಗಲು 15ಕ್ಕೂ ಹೆಚ್ಚು ನಿಮಿಷಗಳು ಕಾಯ ಬೇಕಾಯಿತು. ಅಷ್ಟೊಂದು ್ನರು! ಆಮೇಲೆ ವಿಮಾನದ ಬಾಗಿಲಲ್ಲಿ ಗಗನ ಸಖ, ಗಗನ ಸಖಿಯರು ಪ್ರಯಾಣಿಕರಿಗೆಲ್ಲಾ ಧನ್ಯವಾದಗಳು ಹೇಳಿದರು. "Have a pleasant stay!" ಅನ್ನೋದನ್ನು ಮರೆಯಲಿಲ್ಲ ಅವರು. ಅವರಿಗೋ ಇದು ಅಭ್ಯಾಸ ಆಗೋಗಿರುತ್ತದೆ.

ಅಲ್ಲಿಂದ ನಾವು ಇಮ್ಮೈಗ್ರೇಷನ್ ಬಳಿ ಹೋಗುವಾಗ, ಒಬ್ಬ ನಮ್ಮನ್ನು ತಡೆದು, "Give me your Passport and Tickets" ಅಂದ. ನಾನೇನು ಭಯೋತ್ಪಾದಕನಲ್ಲ. ಆದರೂ ಅವನ ಕರ್ತವ್ಯ ಅದು. ಸರಿ ಅಂತ ನಾನು ತೆಗೆದು ಕೊಟ್ಟೆ. "Where are you coming form? where u wanted to go?" ಅಂತ ಒಂದರ ಹಿಂದೊಂದು ಪ್ರಶ್ನೆಗಳ ಸುರಿ ಮಳೆಗೈದ. ನಾನು ಉತ್ತರಗಳ ಸುರಿ ಮಳೆಗೈದೆ. "I'm from India. I work for a MNC, I've come here for a one month visit. I will stay in Helsinki" ಅಂದೆ. ನನ್ನ ಪಾಸ್ ಪೋರ್ಟ್ ಎಲ್ಲಾ ಪರಿಶೀಲಿಸಿ, ಇಮ್ಮೈಗ್ರೇಷನ್ ಕೌಂಟರ್ ಬಳಿ ಹೋಗು ಅಂತ ಹೇಳಿದ. ನಾವು ಅಲ್ಲಿಗೆ ಹೋದ್ವಿ. ಅಲ್ಲಿ ಪಾಸ್ಪೋರ್ಟ್ ಕೊಟ್ಟೆ. ಅವರು ಮತ್ತೆ ಅದೇ ಪ್ರಶ್ನೆ ಕೇಳಿದರು. ನಾನ ಹಾಗೆ ಉತ್ತರಿಸಿದೆ. ನನ್ನ ವೀಸಾ ಬಳಿ "ಫಿನ್ ಲ್ಯಾಂಡಿಗೆ ಬಂದಿದ್ದಾನೆ" ಅನ್ನೋ ಗುರುತನ್ನು ಮಾಡಿದಳು. ಪಾಸ್ಪೋರ್ಟ್ ಹಿಂದಿರುಗಿಸಿ ಕೊಟ್ಟಳು. ಈ ಕಡೆ ಹೋಗಿ ಅಂತ ದಾರಿ ತೋರಿಸಿದಳು. ಥಾಂಕ್ಸ್ ಕಣಮ್ಮ ಅಂತ ಹೇಳಿ, ಹೋದೆ, ನನ್ನ ದೊಡ್ಡ ಸೂಟ್ ಕೇಸ್ ತೆಗೆದು ಕೊಳ್ಳೋದಕ್ಕೆ!

ಮಧ್ಯದಲ್ಲಿ ಮತ್ತೊಬ್ಬ ನಮ್ಮನ್ನು ಕರೆದ. ಅವನು ಕಸ್ಟಮ್ಸ್ ನವನು ಆಗಿದ್ದ. "I need to check your bag" ಅಂದ. ಆಯ್ತಪ್ಪ, ಚೆಕ್ ಮಾಡ್ಕೊ ಅಂತ ನನ್ನ ಬ್ಯಾಗಿನ Lock ನ ತೆಗೆದೆ. ಅವನು ತನ್ನ ಕೈಗೆ gloves ಹಾಕಿಕೊಂಡು, ನನ್ನ ಬ್ಯಾಗನ್ನು ಪೂರ್ಣವಾಗಿ ಪರೀಕ್ಷಿಸಿದ. ಅವನಿಗೆ Gun, Knife, Bomb ಗಳು ಯಾವು ಸಿಗಲಿಲ್ಲ :) ಆಮೇಲೆ ಅವನು "Thanks" ಅಂತ ಹೇಳಿದ. ನಾವು ನಮ್ಮ ದೊಡ್ಡ ಸೂಟ್ ಕೇಸನ್ನು ತೆಗೆದು ಕೊಳ್ಳಲು ಹೊರಟೆವು. ಅದು ನನ್ನ ಕೈ ಸೇರೋದಕ್ಕೆ ಸ್ವಲ್ಪ ಸಮಯ ಹಿಡಿಯಿತು. ಅದನ್ನು ತೆಗೆದು ಕೊಂಡು, ಹೊಟೆಲ್ಲಿಗೆ ಹೋಗಲು ಟ್ಯಾಕ್ಸಿ ಹುಡುಕಲು ಪ್ರಾರಂಭ ಮಾಡಿದೆವು. ಅಲ್ಲಿ ಸಿಕ್ಕ ಒಬ್ಬರನ್ನು ಕೇಳಿದೆವು, "Hi, where can we get taxi?" ಅದಕ್ಕೆ ಅವನು, ಟ್ಯಾಕ್ಸಿ ಕಚೇರಿ ತೋರಿಸಿದ. ಅವನಿಗೆ ಧನ್ಯವಾದ ತಿಳಿಸಿದೆವು. ಅದಕ್ಕೆ ಅವನು, "Have a pleasant stay in Finland!" ಅಂದ. ಭಾರತದವರು, ಭಾರತೀಯರನ್ನಾದರೂ ಈ ರೀತಿ ಮಾತಾಡಿಸುತ್ತಾರ? ಸ್ವಲ್ಪ ಯೋಚನೆ ಮಾಡಿ. ಪರಿಚಯವಿರೋರೆ ಏನು ಮಾತನಾಡೋದಿಲ್ಲ! ಇನ್ನು ಅಪರಿಚಿತರು? ನನಗೆ ಆಗ ಅನ್ನಿಸಿತು, "Be Roman when you are in Rome!" ಅನ್ನೋ ಹಾಗೆ, "Be Finns when you are in Finland!" ಇದನ್ನು ಪಾಲಿಸ ಬೇಕು.

ನಂತರ ಟ್ಯಾಕ್ಸಿ ಕಚೇರಿ ಬಳಿ ಹೋಗಿ, ಅವನಿಗೆ , "Good Morning" ಅಂದೆ. ಅವನು ಅದಕ್ಕೆ ಪ್ರತಿಯಾಗಿ "Good Morning." ಅಂದ. ನಮ್ಮ ಬಳಿ ಇದ್ದ ಹೋಟೆಲ್ ವಿಳಾಸ ಹೊಂದಿರುವ ಬಿಳಿ ಹಾಳೆಯನ್ನು ತೆಗೆದು, ಅವನ ಮುಂದೆ ಇಟ್ಟು, ಈ ಹೋಟೆಲ್ ಗೆ ಹೋಗ್ಬೇಕು, ಟ್ಯಾಕ್ಸಿ ಕೊಡಿ ಅಂತ ಕೇಳಿದ್ವಿ. "Ok. Just wait for few minutes, I will arrange" ಅಂದ. ಆ ಹೋಟೆಲ್ ಹೆಸರು Raddison SAS Seaside. ನಮಗೆ ಆ ಭಾಷೆಯ ಗಂಧವೇ ಗೊತ್ತಿಲ್ಲದ ಕಾರಣ, ಅಲ್ಲಿಯ ರಸ್ತೆಯ ಹೆಸರುಗಳನ್ನು ಜ್ಞಾಪಕದಲ್ಲಿಟ್ಟು ಕೊಳ್ಳುವುದು ಕಷ್ಟವಾಗಿತ್ತು. ಸದ್ಯ ಸಿಕ್ಕಿತಲ್ಲ ಟ್ಯಾಕ್ಸಿ ಅಂತ, ಅಲ್ಲಿದ್ದ ಆಸನದ ಮೇಲೆ ಕುಳಿತೆವು. ಫಿನ್ ಲ್ಯಾಂಡಿನ ಚಳಿ ಜೊತೆ ಹೆಣಗಾಡಲು, ನಮ್ಮ ವಸ್ತ್ರಗಳನ್ನು ಧರಿಸಿ ಸಿದ್ಧರಾದೆವು. ಆ ವಸ್ತ್ರಗಳು ಯಾವುದೆಂದರೆ, ಜರ್ಕಿನ್, Monkey Cap, Gloves. ತುಸು ಕಾಲವಾದಾಗ, ಒಬ್ಬ ಡ್ರೈವರ್ ಬಂದು, "Your taxi is ready!" ಅಂದ. ನಮ್ಮ "ಆಸ್ತಿ"ಗಳನ್ನು ಹಿಡಿದು, ವಿಮಾನ ನಿಲ್ದಾಣದಿಂದ ಹೊರಗೆ ನಡೆದೆವು.

ನಮ್ಮ ಮೊಗಕ್ಕೆ ಹಿಮ ಮುತ್ತಿಡಲು ಪ್ರಾರಂಭಿಸಿತ! ಆ ಗಾಳಿಯಂತೂ ಕೊರೆಯುತಿತ್ತು! ನಮ್ಮ ದೇಹಕ್ಕೆ, ದಪ್ಪ ಜರ್ಕಿನ್ ಕರ್ಣನ ಕವಚದ ಹಾಗೆ, ಅಂಟಿ ಕೊಂಡಿತ್ತು. ಕಪ್ಪು ಜರ್ಕಿನ್ ಅಂತು ಬಿಳಿ ಚುಕ್ಕಿಗಳಿಂದ, ಕಪ್ಪು ಮುಗಿಲಲ್ಲಿ ತಾರೆಗಳ ಹಾಗೆ ಕಾಣಿಸುತ್ತಿತ್ತು. ಜಯಶಂಕರನ ದೇಹವು ಗೌರಿಶಂಕರಕ್ಕಿಂತಲೂ ಕೊರೆಯುತ್ತಿತ್ತು. ಹಲ್ಲುಗಳು ಗಡ ಗಡ ತಾಳದಲ್ಲಿ, ಕುಣಿಯುತ್ತಿತ್ತು. ಬೇಗ ಹೋಗಿ, ಟ್ಯಾಕ್ಸಿಯೊಳಗೆ ಕೂತ್ವಿ. ಅವನು ಟ್ಯಾಕ್ಸಿ ಡ್ರೈವ್ ಮಾಡಲು ಆರಂಭ ಮಾಡಿದ.

ನಾವು ಹೊರಗಡೆ ನೋಡಿಕೊಂಡು ಕೂತಿದ್ವಿ. ಎಲ್ಲಾ ಕಡೆ ಬರೀ ಬಿಳೀ ಬಣ್ಣ. ಒಂದು ಕಾರ್ಖಾನೆಯ ಮುಂದೆ, Thermometer ಇತ್ತು. ಅದು "-4 C" ಅಂತ ತೋರಿಸುತಿತ್ತು! ಶಂಕರಾ! ನೀನೆ ನನ್ನ ಕಾಪಾಡು ಅಂತ ದೇವರಲ್ಲಿ ಕೇಳಿಕೊಂಡೆ. ಸುಮಾರು 20 ನಿಮಿಷಗಳ ಪ್ರಯಾಣ ಆಗುತ್ತಾಯಿತ್ತು. ಆಗ ದ್ರೈವರ್ ಗೆ, ನಮ್ಮ ಕಂಪನಿಯ ವಿಳಾಸ ತೋರಿಸಿ, ಇದು ಎಲ್ಲಿದೆ ಅಂತ ಕೇಳಿದ್ವಿ? ನಮಗೆ ಗೊತ್ತಿದ್ದ ಮಾಹಿತಿ, ಹೋಟೆಲ್ ನ ಬಳಿಯೇ ಇದೆ ಎಂಬುದು. ಅದಕ್ಕೆ ಅವನು ಆ ರಸ್ತೆ ಬಂದಾಗ ತೋರಿಸಿದ. ಈ ರಸ್ತೆಯಲ್ಲೇ ನಿಮ್ಮ ಕಚೇರಿಯಿರುವುದು ಎಂದ. ಆ ರಸ್ತೆಯ ಹೆಸರು, Itämerenkatu. ಗಮನಿಸುವ ವಿಷಯ, ಹೊಸ ಅಕ್ಷರ "ä" ಇದು, Suomi ಭಾಷೆ. ಅದನ್ನು ಓದುವುದು, "ಇತಾಮೆರೆನ್ಕತು". ಅನೇಕ ರಸ್ತೆಗಳು "ಕತು" ಎಂಬ ಪದದಿಂದ ಕೊನೆಗೊಳ್ಳುತ್ತದೆ ಎಂಬ ವಿಚಾರ ಅಲ್ಲಿಗೆ ಹೋದ ಮೇಲೆ ತಿಳಿಯಿತು. ಆ ರಸ್ತೆಯನ್ನು ನೋಡುತ್ತಿರುವಾಗಲೆ, ನಮ್ಮ ಹೋಟೆಲ್ ಬಂದೇ ಬಿಟ್ಟಿತು. ಟ್ಯಾಕ್ಸಿ ಬಿಲ್ಲ್ 22 euros ಆಗಿತ್ತು. (ಆಗ 1 euro = Rs. ~60). ನಮ್ಮ ಬಳಿ ಚಿಲ್ಲರೆಗಳು ಇರಲಿಲ್ಲ! ಹಾಗಾಗಿ 20 euro ಗಳ 2 ನೋಟುಗಳನ್ನು ಕೊಟೆ. ಬೆಳ್ಳಂಬೆಳಗೆ ನಮ್ಮದೆ ಬೋಣಿ. ಅವನ ಬಳಿನೂ ಚಿಲ್ಲರೆ ಇರಲಿಲ್ಲ. ಅವನು 15 euro ಗಳನ್ನಷ್ಟೇ ಹಿಂದಿರುಗಿಸಲು ಸಾಧ್ಯವಾಗಿತ್ತು. ಇಲ್ಲೂ ಕೆಲವೊಮ್ಮ Autoದಲ್ಲಿ ಚಿಲ್ಲರೆ ಬಿಡುತ್ತೀವಿ 2-3 ರೂ. ಅಲ್ಲಿ 3 euro ಗಳನ್ನು ಬಿಟ್ಟೆ !

ಹೋಟೆಲಿನ ಒಳಗೆ ಏನೇನು ಆಯ್ತು ..... ನಿರೀಕ್ಷಿಸಿ.... ಮುಂದಿನ ಭಾಗದಲ್ಲಿ.

Tuesday 20 May, 2008

ಅಮ್ಮನಿಗೆ


[ಬಾನುಲಿ.ಕಾಂ ನಲ್ಲಿ ಪ್ರಕಟಿತ]



ಬಾಯಿ ತೆರೆದು ಕೂತೆನಮ್ಮ
ಮಮ್ಮು ತಿನಿಸು ಬಾರಮ್ಮ

ಬಾನ ಕಡೆ ತೋರಿಸಮ್ಮ

ಬಂದಿಹನು ಚಂದಮಾಮ

ಅವನಿಗೆ ಉಣಿಸದಿರಮ್ಮ

ತಿಂದು ಗುಂಡಗಾಗಿಹನಮ್ಮ


ತಿನ್ನಲು ಹಠವ ಮಾಡೆನಮ್ಮ
ನಿನ್ನ ಮುದ್ದು ಕಂದಮ್ಮ....ನಾನಮ್ಮ
ಆಡಲು ಹಠವ ಮಾಡದಿರಮ್ಮ
ನನ್ನ ಮುದ್ದು ಅಮ್ಮ........ನೀನಮ್ಮ

ರಾಮ, ಕೃಷ್ಣರ ಕಥೆಯ ಹೇಳಮ್ಮ
ಪಂಚತಂತ್ರದ ನೀತಿ ಬೋಧಿಸಮ್ಮ
ಕಾಗಕ್ಕ, ಗುಬ್ಬಕ್ಕರ ಸ್ನೇಹ ತಿಳಿಸಮ್ಮ
ನನ್ನ ಒಳ್ಳೆ ಪ್ರಜೆಯಾಗಿಸಮ್ಮ

ನನ್ನ ಬೆಳವಣಿಗೆಗೆ ನೀನು ಅಗತ್ಯ
ನಿನ್ನ ಜೊತೆಯಲಿ ನಾನಿರುವೆ ನಿತ್ಯ!
ಈ ಮಾತು ನಾನಿರುವವರೆಗು ಸತ್ಯ
ಇದಕ್ಕೆ ಸಾಕ್ಷಿಗಳೇ ಚಂದ್ರಾದಿತ್ಯ!

Monday 19 May, 2008

ನೂರೊಂದು ನೆನಪು... ಇನ್ಮುಂದೆ ನೆನಪು

ಕನ್ನಡ ಚಿತ್ರ ರಂಗದ ಉತ್ತಮ ಸಾಹಿತಿ, ನಿರ್ದೇಶಕ ಆರ್.ಎನ್.ಜಯಗೋಪಾಲ್ ಅವರು ಇಂದು ನಿಧನರಾರದು. ಅವರಿಗೆ ಶ್ರದ್ಧಾಂಜಲಿ.

ಮರೆಯದ ನೆನಪನು ಎದೆಯಲ್ಲಿ ತಂದು,
ನೂರೊಂದು ನೆನಪನ್ನು ಎದೆಯಾಳದಿಂದ ಹಾಡಿ,
ನೀ ಮೀಟಿದ ನೆನಪೆಲ್ಲವು ಎದೆತುಂಬಿ ಹಾಡಾಗಿಸಿದವರು......
ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ಕೊಟ್ಟವರು....
ನೀರಿನಲ್ಲಿ ಅಲೆಯ ಉಂಗುರ ಎಬ್ಬಿಸಿದವರು...
ಅಪಾರ ಕೀರ್ತಿ ಗಳಿಸಿದವರು....
ರವಿವರ್ಮನ ಕುಂಚದಿಂದ, ಒಲವಿನ ಬಣ್ಣದಿಂದ ಆಟಾಡಿದವರು...
ಕನ್ನಡ ನಾಡಿನ ಜೀವನದಿ ಕಾವೇರಮ್ಮನ ಬಗ್ಗೆ ಹೊಗಳಿದವರು...

ಇನ್ನು ಬರೀತಾ ಹೋದರೆ.. ಕೊನೆಯಿಲ್ಲ..... ಇವರ ಗೀತೆಗಳು ನಮ್ಮ ಕಿವಿ, ಮನಸ್ಸಿಗೆ ಮುದ ನೀಡಿವೆ. ನೀಡುತ್ತಾಯಿವೆ. ಇಂದು ಕೆಲಸದ ಬಿಡುವಿನಲ್ಲಿ ಅಂತರ್ಜಾಲದಲ್ಲಿ R N J ನಿಧನ ವಾರ್ತೆ ತಿಳಿದ ತಕ್ಷಣ ಸ್ವಲ್ಪ ಬೇಜಾರಾಯ್ತು.

ಸಾಹಿತಿ, ನಿರ್ದೇಶಕನ ಅಲ್ಲದೆ, ಅವರು Sound Engineer ಪದವೀದರ, ನಟ, ಸಂಗೀತ ನಿರ್ದೇಶಕ, ಪಿಟೀಲು ವಾದಕ.

ಪ್ರತಿ ಭಾನುವಾರ ಈ ಟಿ.ವಿ. ಕನ್ನಡದಲ್ಲಿ ಅವರ ಕಾರ್ಯಕ್ರಮ "ಬಾಳೊಂದು ಭಾವಗೀತೆ" ಯ ಅಭಿಮಾನಿಯಾಗಿದ್ದೆ. ನಿನ್ನೆ ದಿನ ಅದನ್ನು ನೋಡಿ, ಇವತ್ತು ಅವರ ನಿಧನ ವಾರ್ತೆ ಕೇಳಿದರೆ ಮನಸಿಗೆ ದುಃಖ ಆಗುವುದು ಸರಿ.

ಇಂದು ಸಾಯಂಕಾಲ, ವಿವಿಧಭಾರತಿ ಹಾಗು ಕಾಮನಬಿಲ್ಲಿನಲ್ಲಿ RNJ ಅವರ ಹಾಡುಗಳನ್ನು ಕೇಳಿ, ದುಃಖದ ಸಂತೋಷ!

ಅಂತರ್ವಾಣಿಗೆ ಜಯಗೋಪಾಲ್ ಒಬ್ಬ ವಿಶೇಷ ವ್ಯಕ್ತಿ. ಜಯಗೋಪಾಲ್ ಅವರನ್ನು ಹತ್ತಿರದಿಂದ ನೋಡುವ ಸೌಭಾಗ್ಯ ಒಮ್ಮೆ ನನಗೆ ಒದಗಿತ್ತು. ಕೆಲವು ಕ್ಷಣಗಳನ್ನು ಅವರೊಂದಿಗೆ ಕಳೆದಿದ್ದೆ. ಅವರ ಸ್ಫೂರ್ತಿಯಿಂದ ನಾನು ಬರೆದ ಕವನಗಳು ಇವೆ.

ಅವರೇ ಹೇಳಿದ ಹಾಗೆ, "ನನ್ನ ಕಥೆಗೆ ಅಂತ್ಯ ಬರೆದು, ಕವಿಯು ಹರಸಿದ ನನ್ನನು". ಎಲ್ಲರ ಬಾಳಲ್ಲೂ ಅಂತ್ಯ ಇದ್ದೇ ಇರುತ್ತದೆ.

--ಇದು ದುಃಖದ ವಾಣಿ

[ಬಾನುಲಿ.ಕಾಂ ನಲ್ಲಿ ಪ್ರಕಟಿಸಿದ್ದಾರೆ]

Saturday 17 May, 2008

Hinglish


naavu kanglish bareyuvaaga heege bareyuttEve. ಕನ್ನಡವನ್ನು ಹೀಗೆ ಬರೆಯುತ್ತೇವೆ. Hinglish ಬರೆದಿರುವುದನ್ನು ಚಿತ್ರದಲ್ಲಿ ಸೆರೆ ಹಿಡಿದಿದ್ದೇನೆ.

Friday 9 May, 2008

ಮನಸಿಗೆ ಆಘಾತ!

[ಕನ್ನಡಪ್ರಭ.ಕಾಂ ನಲ್ಲಿ ಪ್ರಕಟಿತ]

ಮೌನ ಮರೆತೆ ನಿನ್ನ ನೋಡಲು
ನೇಹ ಪಡೆದೆ ನಿನ್ನ ಒಲಿಸಲು
ಮಾತು ಮರೆತೆ ನೀ ಮಾತಾಡಲು
ಮಾರ್ಗ ತೋರಿದೆ ನಾ ಪ್ರೀತಿಸಲು

ನಿದ್ದೆ ಮಾಡದೆ ಕಳೆದೆ ರಾತ್ರಿಗಳ
ಸುದ್ದಿ ಮುಟ್ಟಿಸಿದೆ ಬರೆದು ಪತ್ರಗಳ
ನಿನ್ನ ಮೆಚ್ಚಿಸಿದೆ ಹಾಡಿ ಗೀತೆಗಳ
ನಿನ್ನ ಇಚ್ಛೆಗೆ ಗೀಚಿದೆ ಚಿತ್ರಗಳ

ಒಲಿದ ಹುಡುಗಿ ಸಿಗದಾದೆ ಏಕೆ?
ಬಾಳಿಗೆ ಒಡೆದ ಹಾಲಾದೆ ಏಕೆ?
ಪೊಳ್ಳು ಪ್ರೀತಿಯಿದು ಎಂದರಿತೆ ಏಕೆ?
ಕೊಳ್ಳಿ ಇಟ್ಟೆಯಾ ಪ್ರೀತಿ ಸೌಧಕೆ?

ಮನವು ಧಗ ಧಗ ಉರಿದರೂ
ನಿನ್ನ ದೂಷಿಸುವ ಮನಸಿಲ್ಲ
ತನುವು ಪದೇ ಪದೇ ಬೇಡಿದರೂ
ನಿನ್ನ ಬಯಸುವ ಇಚ್ಛೆಯಿಲ್ಲ.