Friday 5 November 2010

ಮೈಸೂರ್ ಗಾಳಿ

ಬಣ್ಣ ನೋಡಿ ಬೆರಗಾದೆ
ಕಣ್ಣ ನೋಡಿ ಕರಗಿದೆ
ಮತ್ತು ತರಿಸೊ ನೋಟಕೆ
ಮುತ್ತೆ ಪ್ರಥಮ ಕಾಣಿಕೆ!

ಮರೆಯಾಗಿ ಹೋಗಿ ನೀನಿಂದು
ತರಿಸುವೇಕೆ ಕಣ್ಣಲ್ಲಿ ಬಿಂದು
ಅಲೆಯುತಿರುವೆ ನಿನ್ನರಸುತ್ತ
ಅಲೆದುಬಂದೆ ಭೂಮಿ ಸುತ್ತ

ಮೌನ ಮುರಿಯ ಬೇಕು ನಾನು
ನಿನ್ನ ರೂಪ ನೋಡಿ
ಗಾನ ಹರಿಸ ಬೇಕು ನಾನು
ರಾಗದಿಂದ ಕೂಡಿ

[ ಮೈಸೂರಿನ ಗಾಳಿ ಸೋಕಿದ ಮೇಲೆ ಈ ರೀತಿ ಕವನ ಬರೆದ ನೆನಪಿಗಾಗಿ ಈ ಕವನಕ್ಕೆ "ಮೈಸೂರ್ ಗಾಳಿ" ಅಂತ ಹೆಸರು :-) ]

Tuesday 23 February 2010

ಫಿನ್ ಲ್ಯಾಂಡಿಗೆ ಪ್ರವಾಸ(೩) - Go Karting..

ನಾಲ್ಕು ಪೋಸ್ಟಿ ನಲ್ಲೂ ಫೋಟೋಗಳನ್ನು ಹಾಕಲು ಮರೆತಿದ್ದೆ. ಕಾರಣ ಮತ್ತೆ ಹೇಳ ಬೇಕಿಲ್ಲ. ಎರಡು ವರ್ಷಗಳಿಂದ ಸಮಯ ಸಿಕ್ಕಾಗೆಲ್ಲಾ ಹೇಳ್ತಾಯಿರ್ತೀನಿ.. "ಸ್ವಲ್ಪ ಮರವು....ವಯಸ್ಸಾಗಿದೆ" ಅಂತ.. ಈ ಸಲ ತೇಜು ಅಕ್ಕ ಜ್ಞಾಪಿಸಿದ್ದರು.
ಈಗ ಮೊದಲ ಪೋಸ್ಟಿನಿಂದ ಬಾಕಿ ಉಳಿದಿದ್ದ ಫೋಟೋಗಳು ಹಾಗು ವಿವರಗಳನ್ನು ಹಾಕುತ್ತಿದ್ದೇನೆ.

 
ಹೆಲ್ಸಿಂಕಿಯ ವಿಮಾನ ನಿಲ್ದಾಣದಿಂದ ತಾಂಪರೆಗೆ ಹೋಗುತ್ತಿರುವಾಗ ಕಂಡ ದೃಶ್ಯ

 ಮನೆಯ ಹತ್ತಿರದ ದೃಶ್ಯ.

  
ಸರೋವರ ನಂ ೧.

ಸ್ಟುಡಿಯೋಗೇ... ಫೋಟೋ!!!

ಬಲ ಭಾಗದ ಗೇಟಿನ ಅಪಾರ್ಟ್ಮೆಂಟಿನಲ್ಲೇ ನಾನು ಇದ್ದದ್ದು.

ಕಷ್ಟ ಪಟ್ಟು ಮಾಡಿಸಿದ ಬಸ್ ಪಾಸ್. ( "ಮಟ್ಕಾ" ಅಂತ ಇದೆ. ಆದರೆ ಅದು "ಪ್ರಯಾಣ" ಅನ್ನುವ ಅರ್ಥ ಸುಯೋಮಿ ಭಾಷೆಯಲ್ಲಿ.)ರೂಟ್ ನಂ ೧೫. ಸರಿಯಾದ ಸಮಯಕ್ಕೆ ಹಾಜರ್!

-----

ಅಲ್ಲಿಗೆ ಹೋಗಿ ಕೆಲವೇ ದಿನದಲ್ಲಿ ಅಲ್ಲಿಯವರು ಒಂದು ದಿನದ Outingಗೆ ಹೋಗುವ ಸಿದ್ಧತೆ ನಡೆಸಿದ್ದರು. ನನ್ನನ್ನೂ ಆಹ್ವಾನಿಸಿದರು. ನಗರದ ಹೊರವಲದಲ್ಲಿ Go Karting ಹಾಗು ಹೊಟೆಲಿನಲ್ಲಿ  ಸೌನಾ (Finnish Sauna)  ಭಾರಿ ಭೋಜನ, ಮದ್ಯ ಪಾನ ಎಲ್ಲಾ ಇರುತ್ತೆ  ಅಂತ ಕ್ರಿಸ್ಟಾ ಹೇಳಿದ್ದಳು.
ನನಗೂ ಗೋ ಕಾರ್ಟಿಂಗ್ ಹೋವುವ ಆಸೆಯಿತು. ಮಧ್ಯಾಹ್ನ ಊಟದ ನಂತರ ಎಲ್ಲರೂ ಗೋ ಕಾರ್ಟಿಂಗೆ ಹೋದೆವು. ನಗರದಿಂದ ಸುಮಾರು ಅರ್ಧ ಗಂಟೆಯ ಪ್ರಯಾಣದ ನಂತರ ಎಲ್ಲರೂ ಅಲ್ಲಿ ಸೇರಿದೆವು. ಮೊದಲಿಗೆ ನೊಂದಾಯಿಸಲು ಎಲ್ಲರೂ ತಮ್ಮ ಹೆಸರುಗಳನ್ನು ಹೇಳುತ್ತಿದ್ದರು. ನನ್ನ ಸರಿದಿ ಬಂದಾಗ, ತುಂಬಾ ಉತ್ಸಾಹದಿಂದ ಹೆಸರು ಹೇಳಿದೆ. ಅದಕ್ಕ ಅಲ್ಲಿಯವರಿಗೆ ಏನೂ ಅರ್ಥ ಆಗಲಿಲ್ಲ. ಮತ್ತೊಮ್ಮೆ ಏನು ಅಂತ ಕೇಳಿದರು. ಈ ಬಾರಿ ಸ್ವಷ್ಟವಾಗಿ ಅಕ್ಷರಗಳನ್ನು ಹೇಳಿದೆ.. J.... A... Y...A..." ಆಗ ಅವನು ಮತ್ತೊಮ್ಮೆ ನನ್ನ ಮುಖ ನೋಡುತ್ತಿದ್ದ. ಆಗ ನನಗೆ ಅರಿವಾಯಿತು...ಈ ಭಾಷೆಯಲ್ಲಿ "ಜ"ಕಾರವಿಲ್ಲ. ನಾನು "J" ಎಂದರೆ ಅವನಿಗೆ ಹೇಗೆ ಅರ್ಥವಾಗುತ್ತದೆ. ಆಗ ನನ್ನ ಸಹಾಯಕ್ಕೆ ತಪನಿ ಬಂದರು. "ಯಾ ಯಾ " ಅಂತ ಹೇಳಿದಾಗ ಅವನು "ಜಯ" ಅಂತ ಹೆಸರು ನೊಂದಾಯಿಸಿದ. 

ನಂತರ ಅಲ್ಲಿಯ ನಿಯಮಗಳನ್ನು ಒಬ್ಬ ಹೇಳ ತೊಡಗಿದ. ಅದನ್ನು ಕ್ರಿಸ್ಟಾ ನನಗೆ ಆಂಗ್ಲ ಭಾಷೆಯಲ್ಲಿ ಹೇಳುತ್ತಿದ್ದಳು. ಇದಾದ ನಂತರ ಅದಕ್ಕಾಗಿಯೇ ಇರುವ ಉಡುಪುಗಳನ್ನು ಧರಿಸಿ ಎಲ್ಲರೂ ಅವರವರ ಲಕ್ಕಿ ನಂಬರಿನ ಕಾರನ್ನು ಏರಿದರು. ಮೊದಲಿಗೆ Trial ರೌಂಡ್ ಇತ್ತು. ಎರಡು ಲ್ಯಾಪ್ ಆಗುವ ಹೊತ್ತಿಗೆ ನನ್ನ ಕಾರ್ ಕೆಟ್ಟು ಹೋಯಿತು. ಕೂತಿರುವ ಜಾಗದಿಂದ ರಾಜಕಾರಣಿಗಳ ತರಹ ಕೈ ಮೇಲೆತ್ತಿದೆ.  ಉಳಿದ ಚಾಲಕರು ತಮ್ಮ ಕಾರನ್ನು ಸ್ವಲ್ಪ ಹೊತ್ತು ನಿಲ್ಲಿಸಿ, ನಾನು Pavillion ಬಂದ ಮೇಲೆ ಪ್ರಾರಂಭ ಮಾಡಿದರು. 

Trial ಆದ ಮೇಲೆ, ನಿಜವಾದ ಆಟ ಪ್ರಾರಂಭವಾಯಿತು. ನಾನು ಕಡೆಯ ಸ್ಥಾನದಿಂದ ಪ್ರಾರಂಭ ಮಾಡ ಬೇಕಾಯಿತು. ೫-೬ ಲ್ಯಾಪುಗಳು ಹೋಗಿ ಬರ ಬೇಕಾಯಿತು. ನನ್ನ ಕೈಯಲ್ಲಿ (ಕಾಲಲ್ಲಿ) ಆದ ಪ್ರಯತ್ನವನ್ನು ನಾನು ಮಾಡಿ, ಯಾರಿಗೂ ಕೊನೆಯ ಸ್ಥಾನ ಕೊಡದೇ ನಾನೇ ಪಡೆದುಕೊಂಡೆ. ಆದರೆ ಮೊದಲ ಲ್ಯಾಪಿಗಿಂತ ಎರಡನೆಯ ಲ್ಯಾಪು ಸ್ವಲ್ಪ ವೇಗವಾಗಿ ಓಡಿಸಿದೆ.
ಕೊನೆಯದಾಗಿ ಕಾರಿ ಈ ಸ್ಪರ್ಧೆಯಲ್ಲಿ ಗೆದ್ದರು. ಅಲ್ಲಿಂದ ನಾವು ಹೊಟೆಲಿಗೆ ಹೋದೆವು. ಅಲ್ಲಿ ನಾವು ಸೌನಾ ಗೆ ಹೋದೆವು. ಹೊರಗಡೆಯ ಚಳಿಯ ವಾತಾವರಣಕ್ಕೆ ಈ ಸೌನಾ ಅವಶ್ಯಕ. ಅದರೊಳಗೆ ಕುಳಿತಿದ್ದರೆ ಹೊರಗಿನ ಚಳಿ ತಿಳಿಯುವುದಿಲ್ಲ.  ತೆರೋ ತಮ್ಮ ಶೈಲಿಯಲ್ಲಿ ಹೇಳುತ್ತಿದ್ದರು.. "Jay.... you can tell there in ಬಾಂಗಲೂರ್ that you have ವೀಸೀಟೆಡ್ Finnish Sauna. Its famous"

ನಂತರ ಎಲ್ಲರೂ ಊಟಕ್ಕ ಹಾಗು ಪಾನಕ್ಕೆ ಬಂದೆವು. ಎಲ್ಲರೂ ತಮ್ಮ ತಮ್ಮ ಬ್ರಾಂಡಿನ ಪಾನವನ್ನು ತರಿಸಿಕೊಳ್ಳುತ್ತಿದ್ದರು. ವೈಟರ್ ಅಮ್ಮ ನನ್ನ ಹತ್ತಿರ ಬಂದು ಆಶ್ಚರ್ಯ ಪಟ್ಟಳು. ನಾನು ಕೇಳಿದ್ದು ಬೇರೆ ಬ್ರಾಂಡು. "So you don't want alcohol?" ಅಂತ ಪ್ರಶ್ನಿಸಿದ್ದಳು. ಆಲ್ಕೊಹಾಲ್  ಬೇಡಮ್ಮ ಅಂತ ಹೇಳಿ ಕಳುಹಿಸಿದೆ. ನಂತರ ಭೋಜನದ ವಿಷಯ ಬಂದಾಗ ಕೇವರ ಸಸ್ಯಹಾರ ತಿನಿಸು ತಗೊಂಡು ಬಾರಮ್ಮ ಅಂತ ಹೇಳಿದ್ದಕ್ಕೆ ಅವಳು "ಓಕೆ ಯು ಆರ್ ವೆಗ್ಗಿಟೇರಿಯನ್" ಅಂತ ಹೇಳಿ ನನಗಾಗಿ ವೆಗ್ಗಿಟೇರಿಯನ್ ತಂದಳು.  ಇದೆಲ್ಲ ಮುಗಿಸಿ ಅಪಾರ್ಟ್ಮೆಂಟಿಗೆ ಬಂದಾಗ ರಾತ್ರಿ ೧೦.೩೦ ಇರಬೇಕು...

ಹೀಗೆ ನನ್ನ ಟೀಮ್ ಔಂಟಿಗ್ ಮುಗಿಯಿತು.

Tuesday 2 February 2010

ಫಿನ್ ಲ್ಯಾಂಡಿಗೆ ಪ್ರವಾಸ (೩) - ಊರು ಸುತ್ತಲು ಹೋಗಿ.............?


Monday 25 January 2010

ಫಿನ್ ಲ್ಯಾಂಡಿಗೆ ಪ್ರವಾಸ(೩) - ಬಸ್ ಪಾಸ್ ಮಾಡಿಸಿದೆ

[ ಹಿಂದಿನ ಭಾಗ ಇಲ್ಲಿದೆ ]
ಬೆಳಿಗ್ಗೆ ಬೇಗ ಎದ್ದೆ ಅಂದರೆ ಸುಳ್ಳಾಗುತ್ತೆ. ಅಮ್ಮ ಕಾಫಿ ಕೊಟ್ಟು ಎಬ್ಬಿಸ್ತಾರೆ ಅಂತ ಮನಸಲ್ಲೇ ಇತ್ತು. ಆಮೇಲೆ ತಿಳಿಯಿತು ಅಮ್ಮನಿಂದ ಸುಮಾರು ೭೫೦೦ ಕಿ.ಮೀ ದೂರದಲ್ಲಿದ್ದೀನಿ ಅಂತ! ಕಷ್ಟ ಪಟ್ಟು ಎದ್ದೆ. ಕಾಫಿ ಮೇಕರ್ ಇತ್ತು. ಹಾಲು ಇರಲಿಲ್ಲ, ಕಾಫಿಪುಡಿಯೂ ಇರಲಿಲ್ಲ. ಸರಿ ಕಾಫಿಯೇ ಬೇಡ ಅಂತ ಸ್ನಾನ ಮಾಡಿ, ತಿಂದು, ಹೊರಡಲನುವಾದೆ.

ಬಸ್ ವೇಳಾ ಪಟ್ಟಿಯನ್ನೂ ನನ್ನೊಡನೆ ಸದಾ ಇರಲಿ ಅಂತ ಇಟ್ಟುಕೊಂಡು ಬಸ್ಸಿಗಾಗಿ ಕಾಯದೇ ಕಾಲ್ನಡಿಗೆಯಲ್ಲೇ ತಾಂಪರೆಯ ಸೌಂದರ್ಯವನ್ನು ನೋಡುತ್ತಾ ಸಾಗಿ, ನಾನು ಹಿಂದಿನ ದಿನ ಬಂದು ಇಳಿದ ಬಸ್ ನಿಲ್ದಾಣದ ಬಳಿ ಬಂದೆ. ಅಲ್ಲಿ ಬಸ್ ಪಾಸನ್ನು ಕೇಳಿದೆ. ನಾನು ಸರಿಯಾದ ಜಾಗಕ್ಕೆ ಬಂದಿಲ್ಲ ಅಂತ ಅಲ್ಲಿಯ ಸಿಬ್ಬಂದಿ ಹೇಳಿ, ಒಂದು ನಕ್ಷೆ ತೆಗೆದು ಕೊಂಡು ಎಲ್ಲಿ ಹೋದರೆ ಪಾಸ್ ಕೊಡುತ್ತಾರೆ ಅಂತ ಹೇಳಿದರು. ಅಲ್ಲಿಂದ ನಾನು ಆ ಜಾಗಕ್ಕೆ ಹೋಗಿ ಸೇರಿದೆ. ಸರಿಯಾದ ಫಲಕ ಕಾಣದ ಕಾರಣ ನನಗೆ ಆ ಜಾಗ ಯಾವುದೆಂದು ತಿಳಿಯಲಿಲ್ಲ. ಅಲ್ಲಿದ್ದೊಬ್ಬರನ್ನು ಕೇಳುತ್ತಿದ್ದ ಹಾಗೆ... ನಾನು ಏನೋ ಮಾಡಿದೆನೆನೋ ಎಂಬಂತೆ ಮಾತಾಡುತ್ತಾ ಹೋದರು. ಸುಓಮಿ ಭಾಷೆಯಲ್ಲಿ ಏನೋ ಹೇಳುತ್ತಿದ್ದರು. ಆಮೇಲೆ ಮತ್ತೊಬ್ಬ ಯುವತಿಯನ್ನು ಕೇಳಿದೆ. ( ಹುಡುಗಿಯರು ಬುದ್ಧಿವಂತರು ಸರಿಯಾಗಿ ಹೇಳುತ್ತಾರೆ ಅಂತ) ಅವಳು ಒಂದು ಜಾಗವನ್ನು ತೋರಿಸಿದಳು. ಥ್ಯಾಂಕ್ಸ್ ಕಣಮ್ಮ ಅಂತ ಹೋಗಿ ಆ ಜಾಗ ನೋದಿದರೆ... ಅದೊಂದು ಮಾಲ್! ಮಾಲ್ ಗಳಲ್ಲಿ ಬಸ್ ಪಾಸ್ ಸಿಗುತ್ತಾ??? ಅಂತ ಪ್ರಶ್ನಿಸಿಕೊಂಡೆ. ಆದರೂ ಯಾಕೋ ನಂಬಿಕೆಯಿರಲಿಲ್ಲ. ಅಲ್ಲಿದ್ದಾಕೆಯನ್ನು ಕೇಳಿದೆ.. ಬಸ್ ಪಾಸ್ ಸಿಗುತ್ತೇನಮ್ಮ ಇಲ್ಲಿ ಅಂತ? ಅವಳು ಹೋ! ನೀನು ದಾರಿ ತಪ್ಪಿದ ಮಗ! ಇಲ್ಲಿ ಅವೆಲ್ಲ ಸಿಗಲ್ಲ ಅಂತ ಹೇಳಿ, ನನ್ನೊಟ್ಟಿಗೆ ಹೊರಗೆ ಬಂದು, "ಎದುರುಗಡೆ ಕಾಣಿಸುತ್ತಿದೆಯಾ ದೊಡ್ಡ ಗಡಿಯಾರ?" ಅದಕ್ಕೆ ನಾನು "ಹು!" ಅಂದೆ. ಅದರ ಕೆಳಗೆ ದೊಡ್ಡ ಗೇಟ್ ಇದೆ ಅಲ್ವಾ? ಅದರೊಳಗೆ ಹೋಗು ಅಲ್ಲಿ ಕೊಡ್ತಾರೆ ಬಸ್ ಪಾಸ್ ಅಂದಳು. ಸರಿ ಕಣಮ್ಮ ಅಂತ ಅಲ್ಲಿ ಹೋಗಿ, ಬಸ್ ಪಾಸ್ ಕೊಡಮ್ಮ.. ೨ ತಿಂಗಳಿಗೆ ಅಂತ ಕೇಳಿದೆ. ಅಲ್ಲಿದ್ದಾಕೆ, ನಿಮ್ಮ ಗುರುತಿನ ಚೀಟಿ ಏನಾದರೂ ಇದೆಯಾ? ಅಂತ ಕೇಳಿದಳು. ಪಾಸ್ ಪೋರ್ಟ್ ಕೊಟ್ಟು ನನ್ನ ಬಸ್ ಪಾಸ್ ಪಡೆದೆ. ಈಗ ೯೪ ಯೂರೋಗಳು ಕೊಡು. ನೀನು ಭಾರತಕ್ಕೆ ಹೋಗುವಾಗ ನಿನಗೆ ೬ ಯೂರೋಗಳನ್ನು ಹಿಂದಿರುಗಿಸುತ್ತೇವೆ. ಅಂತ ಹೇಳಿದಳು. ನಮ್ಮ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ಈ ತರಹದ ವ್ಯವಸ್ಥೆಯಿಲ್ಲ ನೋಡಿ. ಪಾಸಿನಿಂದಿಗೆ ಎರಡು ಹಾಳೆಗಳನ್ನು ಕೊಟ್ಟಳು. ಒಂದು ಸುಓಮಿ ಭಾಷೆಯಲ್ಲಿತ್ತು. ಅದರ ಆಂಗ್ಲ ಭಾಷೆಯ ತರ್ಜುಮೆ ಮತ್ತೊಂದರಲ್ಲಿತ್ತು. ಪಾಸನ್ನು ಬಳಸುವ ನಿಯಮಗಳಿದ್ದವು ಆ ಹಾಳೆಯಲ್ಲಿ.

ಪಾಸಿನೊಂದಿಗೆ ಮೊದಲ ಭಾರಿ ಬಸ್ ಏರಿ,  ಚಾಲಕನ ಹತ್ತಿರವಿದ್ದ ಒಂದು ಯಂತ್ರಕ್ಕೆ ಪಾಸ್ ತೋರಿಸಿದಾಗ ಅದು "ಹಸಿರು" ಬಣ್ಣದ ಚಿಹ್ನೆ ತೋರಿಸಿತು. ನಂತರ ನನ್ನ ಆಫೀಸಿನ ಬಳಿ ಬಂದಿಳಿದೆ. ಆಗ ನನಗೆ ಆರ್ಕುಟ್ ಹುಚ್ಚು ಸ್ವಲ್ಪ ಇತ್ತು.( ಈಗ ಬಿಟ್ಟು ಹೋಗಿದೆ).
ಸ್ವಲ್ಪ ಹೊತ್ತಿನ ನಂತರ, ಮನೆಗೆ ಬಂದು ಊಟ ಮಾಡಿ ಮಲಗಿದೆ. ಅದೇಕೋ ವಿಪರೀತ ನಿದ್ದೆಯಿತ್ತು. ಮಧ್ಯಾಹ್ನ ಮಲಗಿ ಸಂಜೆ ೬ಕ್ಕೆ ಎದ್ದೆ. ಆಮೇಲೆ ಮತ್ತೆ ಮಲಗಿ ೯ಕ್ಕೆ ಎದ್ದು, ಊಟ ಮಾಡಿ ನಿದ್ದೆಗೆ ಜಾರಿದೆ. ಇಷ್ಟು  ಕಾಲ ನಿದ್ದೆಯನ್ನು ನನ್ನ ಜೀವನದಲ್ಲಿ ಮಾಡಿರಲಿಲ್ಲ!