Friday 29 May 2009

ಪೆದ್ದ ನಾನು..

ಹಾರುವ ಹಕ್ಕಿಯ ಹಿಡಿಯಲು ಹೋದ ಪೆದ್ದ ನಾನು
ಬಾನಿನ ಚುಕ್ಕಿಯ ಎಣಿಸಲು ಹೋದ ಪೆದ್ದ ನಾನು
ಮೋಡದಿ ಮಹಲನು ಕಟ್ಟಲು ಹೋದ ಪೆದ್ದ ನಾನು
ಏರುವ ಅಲೆಗಳ ಅಳೆಯಲು ಹೋದ ಪೆದ್ದ ನಾನು

ಹೂವಿನ ಪರಿಮಳ ಮೂಸದೆ ಹೋದ ಪೆದ್ದ ನಾನು
ಬಣ್ಣದ ಚಿತ್ತಾರವ ಅಳಿಸಲು ಹೋದ ಪೆದ್ದ ನಾನು
ಬಿಟ್ಟ ಶರವ ಹಿಂದೆ ತರಲು ಹೋದ ಪೆದ್ದ ನಾನು
ಕೊಟ್ಟ ಜೇನನು ಸವಿಯದೇ ಹೋದ ಪೆದ್ದ ನಾನು

Friday 22 May 2009

ನಾ ಕಂಡ ವಿಮಾನ ದುರಂತ

ನಮ್ಮ ಮನೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸ್ವಲ್ಪ ಮಟ್ಟಿಗೆ ಹತ್ತಿರವೆನ್ನ ಬಹುದು. ಅದೂ ಅಲ್ಲದೆ ಜಕ್ಕೂರಿನಲ್ಲಿ ತರಬೇತಿ ನಡೆಸುವ ಪೈಲಟ್ ಗಳು, ವಿಮಾನವನ್ನು ನಮ್ಮ ಮನೆ ಮೇಲೆ ಹಾರಾಟ ನಡೆಸುತ್ತಾಯಿರುತ್ತಾರೆ.

ಹೀಗಿರುವಾಗ ಒಂದು ದಿನ ನಮ್ಮ ಮನೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ವಿದೇಶಕ್ಕೆ ಹಾರ ಬೇಕಿದ್ದ ವಿಮಾನವು ನಾನು ನೋಡುತ್ತಿದ್ದಂತೆಯೇ..ದುರಂತಕ್ಕೀಡಾಯಿತು. ಕ್ಷಣ ಕಾಲ ಏನೂ ತೋಚದಂತಾಯಿತು. ವಿಮಾನಕ್ಕೆ ಬೆಂಕಿ ತಗುಲಿದ್ದರಿಂದ ಸುತ್ತ ಮುತ್ತಲಿನ ಮನೆಗಳಿಗೆ ಹಾನಿ ಮಾಡ ಬಹುದೆಂದು ತಿಳಿದು ಕೂಡಲೆ ನಮ್ಮ ಮನೆಯಿಂದ ದೊಡ್ಡ ಪೈಪು ತಂದು, ಟ್ಯಾಂಕಿನ ಸಹಾಯದಿಂದ ವಿಮಾನದ ಬೆಂಕಿಯನ್ನು ಆರಿಸ ತೊಡಗಿದೆ. ಅಷ್ಟು ಹೊತ್ತಿಗೆ ನಮ್ಮ ಬಡಾವಣೆಯ ಜನರು ಅಲ್ಲಿ ಸೇರಿದ್ದರು. ಎಂದೂ ಯಾರ ಮೇಲೂ ರೀಗಾಡದ ನಾನು ಅಂದು ಏನಾಯಿತೋ ಗೊತ್ತಿಲ್ಲ. ಎಲ್ಲರ ಮೇಲು ರೇಗಾಡಿಬಿಟ್ಟೆ. "ಇಲ್ಲೇನ್ರಿ ನೋಡುತ್ತಿದ್ದೀರ. ನಿಮ್ಮ ಮನೆಯಿಂದ ನೀರು ತಂದು ವಿಮಾನ ನಂದಿಸಲು ಸಹಾಯ ಮಾಡಿ. ಇನ್ನೊಂದು ವಿಷಯ ಕೇಳಿಸಿಕೊಳ್ಳಿ, ಇವತ್ತಿನಿಂದ ಎಲ್ಲರ ಮನೆಯ ಮುಂದೆ Fire Extinguisher ಇಡಿ. ಇಲ್ಲಿ ತುಂಬಾ ವಿಮಾನಗಳು ಹಾರಾಡುತ್ತಾಯಿರುತ್ತವೆ. ಯಾವಾಗ ಏನು ಆಗುವುದೋ ತಿಳಿಯೋದಿಲ್ಲ"

ಆ ಸಮಯಕ್ಕೆ ಅಗ್ನಿ ಶಾಮಕ ದಳದವರು ಬಂದರು. ಬಂದ ಮೇಲೆ, ನನ್ನ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು..." ಏನಪ್ಪಾ ಇವನು ನಮಗೆ ಜಾಸ್ತಿ ಕೆಲ್ಸ ಉಳಿಸಿಲ್ಲ.. ಬೆಂಕಿyಯನ್ನು ಇವನೇ ನಂದಿಸುತ್ತಾಯಿದ್ದಾನೆ." ನಂತರ ಒಂದು ನಿಮಿಷದೊಳಗೆ ಅವರು ಹೊರಟು ಹೋದರು.

ನನಗೆ ತುಂಬಾ ಬೇಜಾರಾಗಿತ್ತು. ಆ ವಿಮಾನ ದುರಂತದಿಂದ ಒಬ್ಬ ಪ್ರಯಾಣಿಕ ಕೂಡ ಜೀವಂತವಾಗಿರಲು ಸಾಧ್ಯವಿರಲಿಲ್ಲ! ಆ ಕಪ್ಪಾಗಿದ್ದ ಪ್ರದೇಶವನ್ನು ನೋಡಿ ಬರಲು ಹೊರೆಟೆ. ದಾರಿಯಲ್ಲಿ ನಾಲ್ವರು ಮಲಗಿದ್ದರು. ನಾನು ಅವರನ್ನು ಎಚ್ಚರಿಸಿ, "ಇಲ್ಲಿಯಾಕೆ ಮಲಗಿದ್ದೀರಾ?" ಅಂತ ಕೇಳಿದೆ. ಅದಕ್ಕೆ ಅವರಲ್ಲೊಬ್ಬನು "ನಾನು Spainಗೆ ಹೋಗಿಲ್ವಾ? ಎಲ್ಲಿದ್ದೀನಿ?" ಅಂತ ನನ್ನನ್ನೇ ಕೇಳಿದ. "ಅಯ್ಯೋ ನಿನ್ನ!. ನೀನು ಹೋಗುತ್ತಿದ್ದ ವಿಮಾನ ಅಪಘಾತವಾಗಿದೆ. ಅಲ್ಲಿ ನೋಡು. ಅದೇನು ಆಶ್ಚರ್ಯ ನೀವು ಇಷ್ಟೂ ಜನರು ಯಾವ ಪೆಟ್ಟಿಲ್ಲದೆ ಬದುಕುಳಿದ್ದಿದ್ದೀರ?" ಅಂತ ಮತ್ತೆ ಪ್ರಶ್ನಿಸಿದೆ.

ವಿಮಾನ ಈತರ ಕೆಳಕ್ಕೆ ಬಿದ್ದಿರೋದಕ್ಕೆ ಏನು ಕಾರಣವಿರಬಹುದು ಅಂತ ಎಲ್ಲರೂ ಯೋಚಿಸುತ್ತಿದ್ದೆವು. ಆಗ ಅವನು, "Mostly Pilot ಕುಡಿದು ಬಂದಿದ್ದಾನೆ ಅನಿಸುತ್ತೆ. ತಲೆ ಸುತ್ತಿದೆ.. ವಿಮಾನ ಓಡಿಸೋದಕ್ಕೆ ಆಗದೆ ನೆಲಕ್ಕೆ ಉರುಳಿಸಿದ್ದಾನೆ" ಅಂದ. ಅದಕ್ಕೆ ಇನ್ನೊಬ್ಬ ಇರಬಹುದು ಎಂದು ತಲೆಯಾಡಿಸಿದ. ಆಗ ನಾನು " Pilot ಕುಡಿದಿರೋದಕ್ಕೆ ಸಾಧ್ಯವಿಲ್ಲ." ಅಂದೆ. ಆಗ ಮತ್ತೊಬ್ಬ "ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ನಮ್ಮ ಬ್ಯಾಗುಗಳನ್ನು ಚೆಕ್ ಮಾಡುತ್ತಾರೇ ಹೊರತು ನಮ್ಮ ಬಾಯಿಯನ್ನು ಅಲ್ಲ" ಅಂದ. ಹೀಗೆ ನಾವೆಲ್ಲ ಆ pilot ಕುಡಿತದ ಬಗ್ಗೆ ಮಾತಾಡುತ್ತಿರುವಾಗ ಅಮ್ಮ ಬಂದು "ಮಗು... ಎದ್ದೇಳು.. ಕಾಫಿ ಕುಡಿ... ಆಫೀಸಿಗೆ..ಹೋಗ ಬೇಕು...." ಅಂದರು..

Wednesday 6 May 2009

ಹಕ್ಕಿ ಹಾರ ಬಯಸಿದೆ...

ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ

ಹಕ್ಕಿಗಳದೊಂದು ಪುಟ್ಟ ಸಂಸಾರ
ಸಂಬಂಧಗಳು ಸೇರಿದಾಗದು ಸಾಗರ

ಮರವೊಂದ ಹುಡುಕಿತು ಗೂಡು ಕಟ್ಟಲು
ಉಳಿದ ಹಕ್ಕಿಗಳು ಬಂದು ಬೆನ್ನ ತಟ್ಟಲು

ಬಲವಿಲ್ಲದ ರೆಕ್ಕೆಗಳಿರೆ ಹಾರಲಸಾಧ್ಯ
ಬಲ ತುಂಬುವ ಹಕ್ಕಿಗಳಿರಲದು ಸಾಧ್ಯ

ಕಟ್ಟಾಯಿತು ಹಕ್ಕಿಗೊಂದು ಗೂಡು
ಎಷ್ಟು ಚೆಂದವಿದೆ ಅದು ನೀನೆ ನೋಡು

ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ