Wednesday 25 November, 2009

ಫಿನ್ ಲ್ಯಾಂಡಿಗೆ ಪ್ರವಾಸ(೩) - ಬಸ್ಸಿನಿಂದ ತಾಂಪರೆಗೆ

[ ನಾನು ಇದನ್ನು ಬರೆಯೋಕೆ ಈಗ ಶುರು ಮಾಡ್ತಾಯಿದ್ದೀನಿ. ನಾನು ಮೂರನೆ ಬಾರಿ ಪ್ರವಾಸ ಮುಗಿಸಿ ಭಾರತಕ್ಕೆ ಬಂದು ಸುಮಾರು ಎರಡು ವರ್ಷದ ಮೇಲೆ ಒಂದು ತಿಂಗಳು ಕಳೆದು ಹೋಗಿದೆ. ಈಗಲೂ ಬರೆಯದೇ ಇದ್ದರೆ....ವಯಸ್ಸಾಗ್ತಾಯಿದೆ ಮರೆತು ಹೋದರೆ ಅಂತ ಗಾಢವಾದ ಯೋಚನೆಯಲ್ಲಿದ್ದೇನೆ. ಎಲ್ಲಾವುದಕ್ಕೂ ಕಾಲ ಬರಬೇಕು! ]

ಯಾರ್ಕ್ಕೋ ಅವರು "ಶಂಕರಾ.. ನೀನು ಇಲ್ಲಿಗೇ ಬಂದು ಉಳಿದಿರುವ ಕೆಲಸ ಮಾಡು. ನಾವು ಹೀಗೆ ದೂರವಿರುವುದು ಅಷ್ಟು ಸರಿ ಕಾಣಿಸುತ್ತಿಲ್ಲ" ಅಂತ ಹೇಳಿದರು. ಅದಕ್ಕೆ ನಾನು "ತಥಾಸ್ತು" ಅಂದೆ. ಯಾರ್ಕ್ಕೋ ಅವರಿಗೆ ಸ್ಪಷ್ಟವಾಗಿ ಹೇಳಿದ್ದೆ, ನನ್ನ ಅಡುಗೆಯನ್ನು ನಾನೇ ಮಾಡಿಕೊಳ್ಳ ಬೇಕಾಗುತ್ತೆ. ಹಾಗಾಗಿ ಅಪಾರ್ಟ್ಮೆಂಟ್ ಬೇಕೇ ಬೇಕು ಅಂತ. ಅವರು ಯಾವ ತಕರಾರಿಲ್ಲದೆ ಒಪ್ಪಿದರು.

ಆ ದಿನ ಸೆಪ್ಟೆಂಬರ್ ೬. ಚೆನ್ನಾಗಿ ನೆನಪಿದೆ. ನನ್ನ ಅಕ್ಕಳ ಹುಟ್ಟು ಹಬ್ಬ. ಅವಳಿಗೆ ನಾನು ಶುಭಕೋರಿದರೆ ಆಕೆ ನನಗೆ ಶುಭ ಪ್ರಯಾಣ ಕೋರಿದಳು. ನನ್ನ ತಾಂಪರೆಯ ಅಪಾರ್ಟ್ಮೆಂಟ್ ಸಿದ್ಧವಿರುವ ಬಗ್ಗೆ ಯಾವುದೇ ವಿ-ಅಂಚೆಗಳು ಇರಲಿಲ್ಲ. ಅಲ್ಲಿಗೆ ತಲುಪುವ ಹೊತ್ತಿಗೆ ಸೂಕ್ತವಾದ ವ್ಯವಸ್ಥೆ ಮಾಡಿರುತ್ತಾರೆ ಎಂಬ ನಂಬಿಕೆ ನನ್ನಲ್ಲಿತ್ತು. ಅಪ್ಪ ಟ್ಯಾಕ್ಸಿಯ ವ್ಯವಸ್ಥೆ ಮಾಡಿದ್ದರು. ನಾನು ಕಳೆದೆರಡು ಬಾರಿ ಪ್ರಯಾಣಿಸಿದಾಗ ಯಾವ "ರಾಯಭಾರಿ" ಕಾರು ಬಂದಿತ್ತೋ.. ಅದೇ ಕಾರು. ಅದೇ ಚಾಲಕ. ಅಂಗಡಿಯ ಮಾಲಿಕ ನನ್ನ ಹೆಸರು ಹೇಳಿ, ಫೋನ್ ನಂಬರ್ ಕೊಡೋಕೆ ಹೋದಾಗ.. ಆ ಚಾಲಕ "ಇವರ ಮನೆ ಗೊತ್ತು ಬಿಡಿ. ಹೋಗುತ್ತೀನಿ" ಅಂದರಂತೆ.

ಯಥಾ ಪ್ರಕಾರ ಮನೆಯಲ್ಲಿ ಅಮೃತದಂತಹ ತಿನಿಸುಗಳು, ಸಾಂಬಾರ್ ಪುಡಿ, ಉಪ್ಪಿಟ್ ಮಿಕ್ಸ್, ಅವಲಕ್ಕಿ, ಸ್ವಲ್ಪ ಅಕ್ಕಿ, ಬೇಳೆ , ಮಾವಿನ ಕಾಯಿ ತೊಕ್ಕು..(ಈಗಲೂ ಬಾಯಲ್ಲಿ ನೀರು ಬರುತ್ತಿದೆ...ಅಷ್ಟು ಸೊಗಸಾಗಿತ್ತು) ಇತ್ಯಾದಿ ಪದಾರ್ಥಗಳನ್ನು ಹಾಗು ಇವುಗಳೊಂದಿಗೆ MTR ತಿನಿಸುಗಳನ್ನು ಪ್ಯಾಕ್ ಮಾಡಿಕೊಂಡು ಹೆಲ್ಸಿಂಕಿಗೆ ಹಾರಿ, ತಲುಪಿದಾಗ ಸಮಯ ೭ರ ಬೆಳಿಗ್ಗೆ ೭.೩೦ ಇರಬೇಕು.

ನನ್ನ ಲಗ್ಗೇಜು ತೆಗೆದುಕೊಂಡು ಅಮ್ಮನಿಗೆ ಫೋನ್ ಮಾಡಲು ಹೊರಟೆ. ನನ್ನ ಬಳಿ ನಾಣ್ಯಗಳು ಇರಲಿಲ್ಲ. ಅಲ್ಲೇ ಒಂದು ಅಂಗಡಿಯಲ್ಲಿ ೫೦ ಯೂರೋಗಳ ನೋಟ್ ಕೊಟ್ಟು ಚಿಲ್ಲರೆ ಕೊಡಮ್ಮ ಅಂತ ಕೇಳಿದೆ. ಆಕೆ ಬಾಯಿ ಬಿಡುತ್ತಿದ್ದಳು. "ಇಷ್ಟು ದೊಡ್ಡ ಮೊತ್ತದ ಚಿಲ್ಲರೆ ನನ್ನಲ್ಲಿಲ್ಲ" ಅಂತ! ಹೆಚ್ಚಿರಲಿಲ್ಲ ನಮ್ಮ ಲೆಕ್ಕದಲ್ಲಿ ೩ ಸಾವಿರ! ಆಮೇಲೆ ಆಕೆಯೇ ಎದುರುಗಡೆ ನೋಡಿ, ಬ್ಯಾಂಕಿದೆ. ಅಲ್ಲಿ ವಿಚಾರಿಸಿ ಸಿಗಬಹುದು ಎಂದಳು. ಕೂಡಲೆ ಅವಳಿಗೆ ಧನ್ಯವಾದಗಳನ್ನರ್ಪಿಸಿ ಹೊರಟೆ. ಬ್ಯಾಂಕಿನವಳಿಗೆ ಸರಿಯಾಗಿ ಇಂಗ್ಲಿಶ್ ಬರುತ್ತಿರಲಿಲ್ಲ. ಆಮೇಲೆ ನನ್ನ ಬಳಿ ಇದ್ದ ದುಡ್ಡು ನೋಡಿ, ಅರ್ಥ ಮಾಡಿಕೊಂಡು ಚಿಲ್ಲರೆ ಕೊಟ್ಟಳು. ಫೋನ್ ಕಾರ್ಯಗಳು ಆದ ಮೇಲೆ, ನನ್ನ ಮುಖ್ಯ ಕಾರ್ಯಗಳನ್ನು ಮುಗಿಸಿ ಬಂದಾಗ ಸುಮಾರು ೮.೧೦ ಇರಬೇಕು.

ಯಾರ್ಕ್ಕೋ ಅವರು ಮುಂಚೆಯೇ ಹೇಳಿದ್ದರು, ತಾಂಪರೆಗೆ ಬಸ್ಸು ಹೆಲ್ಸಿಂಕಿಯ ವಿಮಾನ ನಿಲ್ದಾಣದಲ್ಲೇ ಸಿಗುತ್ತದೆ. ಅದರಿಂದ ಬಾ ಎಂದು. ಕಳೆದ ಬಾರಿ ಇಲ್ಲಿ ಬಂದು ಸಮಯ ವ್ಯರ್ಥಮಾಡಿದ್ದು ನೆನೆಪಾಯ್ತು. ಹಾಗಾಗಿ ಬಸ್ಸು ಎಷ್ಟು ಹೊತ್ತಿಗೆ ಇದೆಯೆಂದು ತಿಳಿದು ಕೊಂಡೆ. ಅದು ೮.೧೫ ಇತ್ತು. ಅದು ನಿಲ್ಲುವ ಜಾಗಕ್ಕೆ ತಲುಪುವ ಹೊತ್ತಿಗೆ ಬಸ್ಸು ಹೊರಟು ಬಿಟ್ಟಿತ್ತು.

ಒಂದು ಗಂಟೆಯ ನಂತರ ತಾಂಪರೆಗೆ ಹೋಗುವ ಮತ್ತೊಂದು ಬಸ್ಸು ಬಂತು. ಆ ಚಾಲಕ ನನ್ನ ತಾಂಪರೆಗಾ? ಅಂತ ಕೇಳಿದ. ಹೌದು ಎನ್ನಲು, ನನ್ನ ಲಗ್ಗೇಜನ್ನು ಆತನೇ ಬಸ್ಸಿನಲ್ಲಿ ಇರಿಸಿದ. ಆಮೇಲೆ ಈ ಬಸ್ಸು ಸ್ವಲ್ಪ ದೂರಕ್ಕೆ ಹೋಗುತ್ತದೆ. ಅಲ್ಲಿಂದ ನಿಮಗೆ ಬೇರೆ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ ಅಂತ ಹೇಳಿದ. ನಾನು ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆ. ೧೫ ನಿಮಿಷದೊಳಗೆ ನನ್ನನ್ನು ಬೇರೆ ಬಸ್ಸಿನಲ್ಲಿ ಹತ್ತಿಸಿ ಕಳುಹಿಸಿದನು. ತಾಂಪರೆಯ ಪರಿಸರವನ್ನು ನೋಡುತ್ತಿದ್ದಂತೆಯೇ ಯಾವಾಗ ನಿದ್ದೆಗೆ ಜಾರಿದೆನೋ ನನಗರಿವಿಲ್ಲ. ಸ್ವಲ್ಪ ಹೊತ್ತಿನಲ್ಲೇ ಯಾರೋ ಮೈಕಿನಲ್ಲಿ ಮಾತಾಡಿದ ಹಾಗೆ ಕೇಳಿಸಿತು. ಎಚ್ಚರವಾಗಿ ನೋಡಿದರೆ ಸಮಯ ೧೧.೨೫. ಹೋ! ತಾಂಪರೆ ಬಂದಿರಬಹುದು ಎನಿಸಿತು. ತಾಂಪರೆಯು ಸುಮಾರು ೧೭೫ ಕಿ.ಮಿ ಇತ್ತು. ೯.೧೫ ಹೊರಟಿದ ಬಸ್ಸು ೧೧.೩೦ಕ್ಕೆ ಬಂದು ತಾಂಪರೆನ್ನು ಸೇರಿತು. ಒಂದು ಕಡಯೂ ೧೦ ನಿಮಿಷ ವಿರಾಮಕ್ಕೆ ನಿಲ್ಲಿಸಲೇ ಇಲ್ಲ. ನಿಲ್ಲಿಸ ಬೇಕಾಗೂ ಇರಲಿಲ್ಲ. ಕಾರಣ ಬಸ್ಸಿನೊಳಗೇ ಆ ವ್ಯವಸ್ಥೆ ಇತ್ತು!

Saturday 14 November, 2009

ನಾನೂ ಮಕ್ಕಳ ದಿನಾಚರಣೆ ಆಚರಿಸಿದೆ

ಈ ದಿನ ನಮ್ಮ ದೇಶದಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಾರೆ. ಈ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ಆಚರಿಸುತ್ತಾರೆ. ಬಹುಶಃ ಒಬ್ಬ ವ್ಯಕ್ತಿಯ ಹುಟ್ಟು ಹಬ್ಬವನ್ನು ಹೀಗೆ ಆಚಾರಿಸುತ್ತಿರುವುದು ಕೇವಲ ಭಾರತ ಅಂತ ನನ್ನ ಅಭಿಪ್ರಾಯ. ಈಗ ನೇರವಾಗಿ ವಿಷಯಕ್ಕೆ ಬರುತ್ತೇನೆ.

ಮಕ್ಕಳ ದಿನಾಚರಣೆಗೆ ನಾನು ಮಗುವಾಗಿ ಬಿಡುತ್ತೇನೆ. ನಾನು ಹೇಗೆ ಆಚರಿಸುತ್ತೇನೆಂದರೆ... ಅಮ್ಮನಿಗೆ ಹೇಳುತ್ತೀನಿ.. "ಇವತ್ತು ಮಕ್ಕಳ ದಿನಾಚರಣೆ. ಹಾಗಾಗಿ, ಊಟ, ತಿಂಡಿಯನ್ನು ನೀನೆ ತಿನ್ನಿಸ ಬೇಕು. ಹಾಲು, ಕಾಫಿ ನೀನೇ ಕುಡಿಸ ಬೇಕು."  ಈ ರೀತಿಯಾದ ಆಚರಣೆ ನಡೆಯುತ್ತಾ ಬಂದಿದೆ, ಮುಂದೂ ನಡೆಯುತ್ತೆ. ಯಾಕೆಂದರೆ ಅವರಿಗೆ ನಾನಿನ್ನೂ ಮಗು! ಮತ್ತೊಂದು ಸ್ವಾರಸ್ಯಕರ ವಿಷಯವೇನೆಂದರೆ ಈ ತಾಯಿನಿಂದ ತಿನ್ನಿಸಿಕೊಳ್ಳುವ ಸೌಭಾಗ್ಯಕ್ಕೆ ನಾನು ನವೆಂಬರ್ ೧೪ಕ್ಕೇ ಕಾಯಬೇಕಿಲ್ಲ.  ನನಗೆ ಯಾವಾಗ ಬೇಕೋ ಆವಾಗ ಮಕ್ಕಳ ದಿನಾಚರಣೆ ಆಚರಿಸುತ್ತೇನೆ. ನನಗೆ ಕಾಲು ಶತಮಾನವಾದರೂ ಈಗಲೂ ತಿನ್ನಿಸುತ್ತಾರೆ.

ಆದರೆ ಈ ಸಲ ವಿಶೇಷವಾಗಿತ್ತು ಈ ಆಚರಣೆ. ಅದು ಹೇಗೆಂದರೆ... ನಮ್ಮ ಮನೆಯ ಹಿಂದೆ, ಕೆಲವು ಗುಡಿಸಲುಗಳಿವೆ. ಅಲ್ಲಿಯ ಮಕ್ಕಳ ಪ್ರತಿದಿನ ನಮ್ಮ ಮನೆಯ ಮುಂದೆ ಬಂದು ಆಡುತ್ತಾ ಇರುತ್ತಾರೆ. ಈ ೭-೮ ಮಕ್ಕಳ ಗುಂಪಿಗೆ ಒಬ್ಬ ನಾಯಕನಿದ್ದಾನೆ. ಅವನ ಮಾತು ಅಂದ್ರೆ ಎಲ್ಲಾರೂ ಕೇಳುತ್ತಾರೆ. ಅವನನ್ನು ನಾನು ಹೀರೋ ಅಂತ ಕರಿಯುತ್ತೇನೆ.

ಮೊನ್ನೆ ಅವರೆಲ್ಲಾ ಬಂದುರು. ಆ ನಾಯಕ,  ನನ್ನ ಕೇಳಿದ. "ಅಂಕಲ್... ಪೇಡಾ ಇದೆಯಾ?".. "ಇಲ್ಲ ಕಣೋ" ಅಂದೆ. ಸುಮ್ಮನೆ ಹೋಗುತ್ತಾನೆ ಅಂತ ತಿಳಿದಿದ್ದೆ.. ಆದರೆ ಹೋಗಲಿಲ್ಲ. ಮತ್ತೇ "ಅಂಕಲ್... ಚಾಕೇಟ್ ಇದೆಯಾ?" "ಇಲ್ಲ ಕಣೋ..."  ಅವನಿಗೆ ನಿರಾಶೆ ಯಾಗಿತ್ತು ಅನಿಸುತ್ತೆ... ಅದಕ್ಕೆ. " ಹೋಗಲಿ...ಕಲ್ಸಕ್ಕರೇ ಆದರೋ ಇದೆಯಾ???"...ಅವನು ಕೇಳಿದ ರೀತಿ ನನ್ನ ಮನಕ್ಕೆ ತಟ್ಟಿತು. "ಇಲ್ಲ ಕಣೋ.. ನಾಳೆ ಬಾ ಚಾಕ್ಲೇಟು ಕೊಡ್ತೀನಿ" ಅಂದೆ. ಎಲ್ಲಾರೂ ಆಡುತ್ತಿದ್ದರು ರಸ್ತೆಯೇ ಬ್ಲಾಕಾಗಿತ್ತು. ಅದಕ್ಕೆ ಆ ಹೀರೋ.."ಲೋ.. ಅಂಕಲ್ ಸಿಟಿ ಕಡೆಗೆ ಹೋಗ್ತಾರೆ..ಜಾಗ ಬಿಡ್ರೋ..." ಅಂತ ಹೇಳಿ... ಎಲ್ಲರೂ ನನ್ನ ಹಿಂಬಾಲಿಸಿ,  "ಟಾಟಾ ಅಂಕಲ್... ಟಾಟಾ ಅಂಕಲ್" ಅಂತ ಸುಮಾರು ೧೦೦ ಮೀಟರು ನನ್ನ ಹಿಂದೆ ಬಂದು... ಒಬ್ಬೊಬ್ಬರು ಕಡೇ ಪಕ್ಷ...೧೫-೨೦ ಬಾರಿ ಟಾಟಾ ಮಾಡಿದರು. ಈ ಸಂತಸ ಅನುಭವಿಸುವವರಿಗೆ ಮಾತ್ರ ಗೊತ್ತಿರುತ್ತೆ. ಅದಲ್ಲದೆ.. ಮಕ್ಕಳೆಂದರೆ ನನಗೆ ಪ್ರಾಣ. ಆರ್ಕಟ್ಟಿನಲ್ಲೂ ಅಷ್ಟೇ..ನನ್ನ ಫೋಟೋಗಳಿಗಿಂತ ಹೆಚ್ಚು.. ನನ್ನ ಅಕ್ಕನ ಮಕ್ಕಳ ಫೋಟೋ..ವಿಡಿಯೋ ಇವೆ.

ನಾನು ಒಂದಷ್ಟು ಚಾಕ್ಲೇಟ್ ತಂದಿಟ್ಟು.. ಕಾಯುತ್ತಿದ್ದೆ. ಈ ಸಂಜೆ..ಅವರಲ್ಲಿ ಆ ಹೀರೋನ ಕರೆದೆ. ಅವನೊಬ್ಬನೆ ಬರಲಿಲ್ಲ.. ಇಡೇ ಸೈನ್ಯದೊಂದಿಗೆ ಓಡೋಡಿ ಬಂದ. ಅವನ ಮುಖದಲ್ಲಿ ನಗು ಎದ್ದು ಕಾಣುತ್ತಿತ್ತು. ಅವನಿಗೆ ಅರಿವಿತ್ತು.. ಈ ಅಂಕಲ್ ಚಾಕೇಟ್ ಕೊಡ್ತಾರೆ ಅಂತ..ಎಲ್ಲರೂ ಬಂದು ಸೇರಿದ ಮೇಲೆ, ನೋಡೋ..ಚಾಕ್ಲೇಟ್ ತಂದಿದ್ದೀನಿ ನಿಮಗೆಲ್ಲ.. ಅಂತ ಹೇಳಿದೆ. ಎಲ್ಲರ ಮುಖದಲ್ಲಿ ಸಂತಸ ಮತ್ತಷ್ಟು ಹೆಚ್ಚಾಗುತ್ತಿತ್ತು. ಎಲ್ಲ ಚಾಕಲೇಟನ್ನು ಹಂಚಿದೆ. ಕಡೆಯಲ್ಲಿ ನನಗೊಂದು ಅಂತ ಇಟ್ಟುಕೊಂಡಿದ್ದೆ. ( ನಾನೂ ಮಗು ಅಲ್ವಾ?) ಯಾಕೋ ಅದನ್ನೂ ಆ ಹೀರೋಗೆ ಕೊಟ್ಟೆ. ಎಲ್ಲರ ಮುಖದಲ್ಲಿ ತುಂಬು ನಗು ಇತ್ತು. ಎಲ್ಲರೂ ಚಾಕೇಟ್ ಹಿಡಿದು.. ಅವರ ಗುಡುಸಲು ಕಡೆ ಓಡಿದರು..


[ ಯಾವುದೇ ಹಬ್ಬವಾಗಲಿ ಅಥವಾ ಈ ರೀತಿಯಾದ ದಿನಾಚರಣೆಗೆ ನಾನು ಪೋಸ್ಟ್ ಮಾಡಲ್ಲ. ಕಾರಣವಿಷ್ಟೆ.. ಅನೇಕ ಬ್ಲಾಗಿಗರು ಅದೇ ವಿಷಯ ಬರೆದಿರುತ್ತಾರೆ. ಆದರೆ  ಇಂದಿನ ಘಟನೆ ಮನಸ್ಸಿಗೆ ನಾಟಿದೆ. ಹಾಗಾಗಿ ಈ ಲೇಖನ ಬರೆದೆ. ಮುಂದೆ ಈ ರೀತಿ ಆಚರಣೆ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ಬ್ಲಾಗಿನಲ್ಲಿದ್ದರೆ... ಇದನ್ನು ಮತ್ತೆ ಓದಿ... ನೆನೆಯ ಬಹುದು.]

ಮತ್ತೊಮ್ಮೆ ಎಲ್ಲರಿಗೂ ಮಕ್ಕಳ ದಿನಾಚರಣೆಯ ಶುಭಾಶಯಗಳು. ನಿಮಗೆ ಮಕ್ಕಳಿರ ಬಹುದು ಅಥವಾ ಮೊಮ್ಮಕ್ಕಳಿರ ಬಹುದು ಆದರೆ ನಿಮ್ಮ ಹೆತ್ತವರಿಗೆ ನೀವಿನ್ನೂ ಮಕ್ಕಳ. :)