Saturday, 23 February 2008

ಯಾರಿಗಾಗಿ ಇದು...?

ಒಲವಿನ ಉಡುಗೊರೆ ಕೊಡಲೇನು,
ರೆಡ್ ಫಾಂಟ್ ದಿ ಬರೆದೆನು ಇದ ನಾನು.....

ಬತ್ತಿದ ನನ್ನ ಮನವೆಂಬ ಹೊಲದಲಿ

ಒಲವಿನ ಬೀಜ ಬಿತ್ತಿದೆ.


ಅಂಜಿದ ನನ್ನ ಅಂತರಂಗವೆಂಬ ಕಡಲಲಿ

ಅನುರಾಗದ ಅಲೆ ಎಬ್ಬಿಸಿದೆ.

ಘೋರವಾದ ನನ್ನ
ಬುದ್ಧಿಯೆಂಬ ಕಾರಿರುಳಲಿ
ಕರುಣೆಯ ಕಿರಣ ಸೋಕಿಸಿದೆ.


ಬರಡಾದ ನನ್ನ ಮತಿಯೆಂಬ ಮರುಭೂಮಿಯಲಿ

ಮಮತೆಯ ಮಳೆ ಸುರಿಸಿದೆ.

ನಾದವಿರದ ನನ್ನ
ಚಿತ್ತವೆಂಬ ಶಿಲೆಯಲಿ
ಸಂಪ್ರೀತಿಯ ಸಂಗೀತ ನುಡಿಸಿದೆ.



Wednesday, 20 February 2008

ಗಡ್ಡ, ಮೀಸೆ ಜೊತೆ.....ಮಾತುಕತೆ

ರವಿವಾರದ ರವಿ, ತನ್ನ ಕಾರ್ಯ ಪ್ರಾರಂಭಿಸಿ ಬಿಟ್ಟಿದ್ದಾನೆ. ಆತನ ರಶ್ಮಿ, ನಮ್ಮ ಮನೆಯೊಳಗೆ ಪ್ರವೇಶಿಸಿದೆ. ಆದರೂ ನಾನಿನ್ನೂ ಹಾಸಿಗೆಯಿಂದ ಎದ್ದಿಲ್ಲ. ಅಮ್ಮ, ಕೈಯಲ್ಲಿ ಒಂದು ಲೋಟ ಬಿಸಿ ಬಿಸಿ ಕಾಫಿ ಹಿಡಿದು, ನನ್ನ ಕೋಣೆಗೆ ಪ್ರವೇಶಿಸಿದ್ದಾರೆ. " ಜಯು ! ಎದ್ದೇಳೋ. ಕಾಫಿ ಆರೋಗುತ್ತೆ". ನನ್ನಿಂದ ಏನು ಉತ್ತರ ಸಿಗೋದಿಲ್ಲ. ಇನ್ನೊಮ್ಮೆ ಕೂಗುತ್ತಾರೆ.."ಶಂಕರಾ..! ಬೇಗ ಏಳೋ. ರಾತ್ರಿ ೧೨ ಘಂಟೆಗೋ, ೧ ಘಂಟೆಗೋ ಮಲಗಿರುತ್ತೀಯ. ಈಗ ಎಚ್ಚರ ಆಗಲ್ಲ. ಬೇಗ ಏಳು. ನೋಡು ಕಾಫಿ ತಂದೀದ್ದೀನಿ". ಆಗಲೂ ಏನು ಉತ್ತರ ಸಿಗಲ್ಲ. ಆಗ ಹಾಲ್ ನಿಂದ್ ಅಪ್ಪನ ಧ್ವನಿ, "ಮಗೂ! ಎದ್ದೇಳು. ಪೇಪರ್ನಲ್ಲಿ ನೋಡು, ನಿನ್ ವಿಷ್ಣು ಫೊಟೋ ಬಂದಿದೆ". ಅತ್ತಕಡೆ ಟೇಪ್ರೆಕಾರ್ಡರ್ ಯಾವುದಾದರು ಒಂದು ಭಕ್ತಿಗೀತೆ ಹಾಡ್ತಾಯಿರುತ್ತೆ. ಆ ಭಕ್ತಿಗೀತೆಯನ್ನು ಮನಸಲ್ಲೇ ಹಾಡ್ತ ಇರ್ತೀನಿ, ಹಾಸಿಗೆ ಮೇಲೆ ಉರುಳಾಡ್ತಾ ಇರ್ತೀನಿ.. .. ಆದ್ರೆ.. ಈ ಲೋಕದಲ್ಲಿ ಇರೋದಿಲ್ಲ. ಅಮ್ಮ ಈಗ, "ಮಗೂ! ಈಗ ಏಳ್ತೀಯೋ ಇಲ್ವೊ?".. ತಕ್ಷಣ ಎದ್ದು, ದೇವರ ಫೊಟೋ ಮೊದಲು ನೋಡದೇ.. ಅಮ್ಮನ ಮುಖ ನೋಡುತ್ತೀನಿ. ಆಮೇಲೆ ಮುಖ ತೊಳೆದು ಬಂದು, ಉದಯವಾಣಿಯಲ್ಲಿ ಬರುವ ಚಲನ ಚಿತ್ರ ಮಾಹಿತಿಯ ಪುಟ ತೆಗೆದು, ಕಾಫಿ ಕುಡಿಯುತ್ತಾ ಓದುತ್ತೀನಿ. ಕಾಫಿ ಕುಡಿದ ಮೇಲೆ, ಮೈನ್ ಶೀಟ್ ನೋಡುತ್ತೀನಿ. ಆಮೇಲೆ ವಿಜಯ ಕರ್ನಾಟಕದ ಹಾಳೆಗಳನ್ನು ತಿರುವು ಮುರುವು ಮಾಡುತ್ತೇನೆ. ಅಷ್ಟು ಹೊತ್ತಿಗೆ ಅಮ್ಮ, ಕೈಯಲ್ಲಿ ಹರಳೆಣ್ಣೆಯನ್ನು ತಂದು, ತಲೆಗೆ ಹಚ್ಚಿ ಬಿಡುತ್ತಾರೆ. ಆಮೇಲೆ ಅಪ್ಪ ಹೇಳ್ತಾರೆ, " ನನ್ನ ಶೇವಿಂಗ್ ಆಯ್ತು, ನೀನ್ ಹೋಗಿ ಮಾಡ್ಕೊ". ಆಗ ನನ್ನ ಗಡ್ಡದ ಮೇಲೆ ಕೈ ಇಟ್ಕೊಂಡು, "ಎನಪ್ಪಾ! ಹೋದವಾರವಷ್ಟೇ ಮಾಡ್ಕೊಂಡಿದ್ದೆ. ಈ ವಾರಾನೂ ಮಾಡ್ಕೊಬೇಕಾ"? ಅಪ್ಪನಿಂದ ಹಿತನುಡಿಗಳು ಕೇಳಿ ಬರುತ್ತೆ. ಆ ಕಡೆಯಿಂದ ಅಮ್ಮನೂ ಶುರುಹಚ್ಚಿಕೊಳ್ತಾರೆ. ಆಗ ಅಮ್ಮನ ಸಮಾಧಾನಕ್ಕೆ.." ಅಮ್ಮ, ಇವತ್ತು ಅಮಾವಾಸ್ಯೆ .. ಶೇವಿಂಗ್ ಮಾಡ್ಕೊಬಾರದು". ಅಮ್ಮ ಹೇಳ್ತಾರೆ, "ತುಂಬಾ ಹಿಂದೇನೆ ಅಮಾವಾಸ್ಯೆ ಕಳೆದೋಗಿದೆ ". ತಕ್ಷಣ, "ಸರಿ ಮಾಡ್ಕೋತೀನಿ" ಎಂದು ಹೇಳಿ, ಹಾಗೂ ಹೀಗೂ ಕಷ್ಟ ಪಟ್ಟು ಹೋಗ್ತೀನಿ ಶೇವಿಂಗ್ ಮಾಡೋಕೆ. ಕೈಯಲ್ಲಿ ರೇಜ಼ರ್ ಹಿಡಿಡು.. ಕೇಳ್ತೀನಿ,

"ಮುಖದ ಮೇಲಿನ ಗಡ್ಡ, ಮೀಸೆ
ಹೇಳಿ ನಿಮ್ಮ ಕೊನೆಯ ಆಸೆ".

ಆಗ ಅವು ಹೇಳ್ತಾವೆ,
"ಅಣ್ಣಾ, ಒಂದು ವಾರದಿಂದ ಒಟ್ಟಿಗೆ ಇದ್ದೇವೆ. ಈಗ ನಿನ್ನ ಬಿಟ್ಟು ಹೋಗೋಕೆ ಮನಸ್ಸಾಗ್ತಾಯಿಲ್ಲ. ನಾವು ಇಲ್ಲೇ ಇರ್ತೀವಿ."

"ನೀವಿಲ್ಲಿ ಇರೋಕೆ ಆಗಲ್ಲ.. ಅಪ್ಪ, ಅಮ್ಮ ನನ್ ಸುಮ್ನೆ ಬಿಡೋದಿಲ್ಲ".

ಅವರಲ್ಲಿ ತುಂಬಾ ಚುರುಕಾದ ಮೀಸೆ ಹೇಳ್ತಾನೆ, "ಒಂದ ಸೊಗಸಾದ ಹಾಡಿದೆ ನಿನಗೆ ಗೊತ್ತಾ ?"

"ಯಾವುದು?"

"ಯುವಕನ ಅಂದದ ಮೊಗಕೆ
ಮೀಸೆ ಭೂಷಣ.
ನಿನ್ನೀ ಅಂದದ (?) ಮೊಗಕೆ
ನಾನೇ ಭೂಷಣ".

"ಹು ಕಣೋ.. ನಾನು ಇದನ್ನು ಓದಿದ್ದೆ ಆದರೆ ನೀನು ಹಾಡು ಕಟ್ಟಿ ಹೇಳಿದ್ದೀಯ ಅಷ್ಟೆ. ಸರಿ. ನಿನ್ನ ಸುಮ್ನೆ ಬಿಟ್ಟುಬಿಡುತ್ತೀನಿ. ಲೊ! ದಡ್ಡ.... ನನ್ ಗಡ್ಡ, ನಿನ್ನ ತೆಗೆದುಬಿಡುತ್ತೀನಿ ಕಣೋ".

" ಅಣ್ಣಾ, ಆ ಬ್ಲೇಡ್ ನನ್ಗೆ ಚುಚ್ಚಿದರೆ, ಗಾಯ ಆಗೋದು ನನಗಲ್ಲ, ನಿನಗೆ! ರಕ್ತ ಬರೋದು ನನ್ಗಲ್ಲ ನಿನ್ಗೆ!..ಅದಕ್ಕೆ ನನ್ನೂ ಸುಮ್ನೆ ಬಿಟ್ಟಿ ಬಿಡೋ."

"ಲೋ! ಒಂದು ವಾರ ಸುಮ್ನೆ ಬಿಟ್ಟಿದ್ನಲ್ಲಾ, ಅದಕ್ಕೆ ಸಂತಸ ಪಡು. ಏನೋ ದಿನಾ ಬೆಳಿಗ್ಗೆ ಎದ್ದು ಆಫೀಸಿಗೆ ಹೊಗೋದೆ ಕಷ್ಟ.. ಸಮಯ ಇರೋದಿಲ್ಲ ಅಂತಾನೆ ತಾನೆ ಒಂದು ದಿನ ನಿಮಗೆ ಅಂತ ಮೀಸಲು ಇಟ್ಟಿದ್ದೀನಿ. ಜಾಸ್ತಿ ಹಠ ಮಾಡಬೇಡ. ಸುಮ್ನೆ ಇರು."

"ಅಣ್ಣಾ ! ಈಗ ತೆಗಿತ್ತಾಯಿದ್ದೀಯ, ಸರಿ ತೆಗಿ.. ಆದ್ರೆ ಒಂದು ವಿಷಯ ಜ್ಞಾಪಕದಲ್ಲಿ ಇಟ್ಕೋ, ನಾನು ಮತ್ತೆ ಮತ್ತೆ ಹುಟ್ಟಿ ಬರ್ತೀನಿ...".

"ಬಾರೋ ಪರ್ವಾಗಿಲ್ಲ. ಮತ್ತೆ ತೆಗೆದು ಹಾಕ್ತೀನಿ. ನೀನು ನನ್ ಜೊತೆ ಇದ್ದರೆ ಅಪ್ಪ, ಅಮ್ಮ ಸಖತ್ತಾಗಿ ಬಯುತ್ತಾಯಿರ್ತಾರೆ. ನೀನು ಇರ ಬೇಡ. ದಟ್ಸ್ ಬೆಟರ್.."

ಇಷ್ಟು ಸಂಭಾಷಣೆ ಆದ್ಮೇಲೆ, ಕೆಲ ಸಮಯದ ಬಳಿಕ, ಗಡ್ಡ, ಪಾಪ ಹೊರಟು ಹೋಗುತ್ತೆ. ಮೀಸೆ ಅಂತು ಕಿಲ ಕಿಲ ಅಂತ ನಗುತ್ತಾ ಇರುತ್ತೆ. ಆದ್ರೆ ಅದಕ್ಕೂ ಸ್ವಲ್ಪ ಕತ್ತರಿ ಪ್ರಯೋಗ ಮಾಡ್ತೀನಿ.. ಆದರು ಬೇಜಾರಾಗಲ್ಲ ಅದಕ್ಕೆ.

ಅಬ್ಬಾ!!! ಮುಗಿತಪ್ಪ ಈ ಕಷ್ಟ.
ಇನ್ನು ಒಂದು ವಾರದ ಮಟ್ಟಿಗೆ ಏನೂ ತಲೆ ನೋವು ಇಲ್ಲ.. !!

Saturday, 16 February 2008

ರವಿ - ಕವಿ

ರವಿಯೇ ನಿನ್ನ ಉದಯ
ಕಾಣಲು ಬಂದಿರುವೆ
ಕವಿಯೇ ನಿನ್ನ ಹೃದಯ
ಕಾಣುತ ನಿಂತಿರುವೆ!

ತಿಳಿಗೆಂಪು ವರ್ಣಾಧರನೇ..
ನಿನ್ನ ಕಾಂತಿಗೆ ಸಾಟಿಯೇ?
ಸಿಹಿ ಸೊಲ್ಲಿನ ವರ್ಣನೆಗಾರನೇ..
ನಿನ್ನ ಕಲ್ಪನೆಗೆ ಸಾಟಿಯೇ ?

ರವಿಯ ರಥದ ಮೆರವಣಿಗೆ
ಕಣ್ಣಿಗೆ ಹಿತವು
ಕವಿಯ ಕವನ ಬರವಣಿಗೆ
ಮನಸ್ಸಿಗೆ ಹಿತವು

ಇಳೆಯನ್ನು ವರ್ಷವಿಡೀ ಪ್ರದಕ್ಷಿಸಿ
ರವಿ ಕಾಣದ್ದನ್ನು,
ಇಲ್ಲೇ ಹರ್ಷದಿಂದ ರಚಿಸಿ
ಕವಿ ಕಂಡನು


ಅಂತರ್ವಾಣಿ

ನನ್ನ ಬ್ಲಾಗ್ ಶೀರ್ಷಿಕೆ ಬಗ್ಗೆ ನಾಲ್ಕು ಸಾಲು.


ಹೇಳುವೆನು ನನ್ನೀ ಅಂತರ್ವಾಣಿಯ,
ಕೇಳಿದರು ಸರಿ, ಕೇಳದಿದ್ದರೂ ಸರಿ.
ಬರೆಯುವೆನು ನನ್ನೀ ಚೇತನವಿರುವವರಗೂ,
ಓದಿದರು ಸರಿ, ಓದದಿದ್ದರೂ ಸರಿ.