Monday, 23 March 2009

ಗುಬ್ಬಿ ಮರಿ ಎಲ್ಲಮ್ಮ?

ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ
ನನ್ನ ಸಂಗ ಬೇಡವೆಂದು
ತೊರೆದು ಹೋಯಿತೇನಮ್ಮ?

ಕಾಗೆಗೆ ಗೆಳೆಯನಿಲ್ಲಮ್ಮ
ಕಾಳನು ತಿನ್ನುವರಿಲ್ಲಮ್ಮ
ಏಕೆ ಹೀಗಾಯಿತೆಂದು
ಒಮ್ಮೆ ನನಗೆ ಹೇಳಮ್ಮ

ಆಟಿಕೆ ಗುಬ್ಬಿ ಬೇಡಮ್ಮ
ಹಾರುವ ಗುಬ್ಬಿ ತೋರಿಸಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂರುವ ಗುಬ್ಬಿ ಬೇಕಮ್ಮ

Wednesday, 18 March 2009

ಫಿನ್ ಲ್ಯಾಂಡಿಗೆ ಪ್ರವಾಸ (೨) - ಫಿನ್ ಲ್ಯಾಂಡಿಗೆ ಟಾಟ

ಹಿಂದಿನ ಭಾಗ

ಫೊಟೋ ಸೆಶನ್ ಆದ ಮೇಲೆ, ನಮ್ಮ Majestic ಎದುರುಗಡೆ Sangam ಚಿತ್ರಮಂದಿರ ಇತ್ತಲ್ಲಾ.. ಅದೇ ರೀತಿ ಇಲ್ಲೂ ಈ ಚಿತ್ರಮಂದಿರ ಕಾಣಿಸಿತು.
ನಾಯಕನ ೫೦ ಅಡಿಯ ಕಟ್ ಔಟು, ಹೂವಿನ ಹಾರ, ಕ್ಷೀರಾಭಿಷೇಕ, ಸಿಹಿ ಹಂಚಿಕೆ ಇವೆಲ್ಲಾ ಅಲ್ಲಿ ಕಾಣಿಸಲಿಲ್ಲ ಆದರೆ ಹೊರ ಭಾಗದ ನೋಟ ನಮ್ಮ ಪುಟ್ಟಣ್ಣಚೆಟ್ಟಿ ಟೌನ್ ಹಾಲ್ ನ ಜ್ಞಾಪಿಸುತ್ತಿತ್ತು.

ಅಲ್ಲಿದ್ದ ಒಂದೆರಡು ಕಟ್ಟಡಗಳ ಚಿತ್ರ ತೆಗೆದುಕೊಂಡು, ಐಸ್ ಕ್ರೀಂ ತಿನ್ನುತ್ತಾ ಸಂಜೆ ಕಳೆದೆ.

ಗುರುವಾರ ಮತ್ತೊಂದು ಲೇಕ್:

ಆ ದಿನ ನಾನು ರೈಲ್ವೇ ನಿಲ್ದಾಣದ ಹಿಂಭಾಗದ ಕಡೆ ಹೊರಟೆ. ಕಳೆದ ಪೋಸ್ಟಿನಲ್ಲಿ ನನ್ನ ಕೈಯಲ್ಲಿದ್ದ ಪುಸ್ತಕ ದಾರಿ ತೋರಿಸುತ್ತಿತ್ತು. ಇಲ್ಲಿಯ ಸೂರ್ಯನಿಗೆ ಹೇಗೂ Overtime ಕೆಲಸ, ಹಾಗಾಗಿ ನನ್ನ ಕೆಲಸವಾದ ಮೇಲೆ ಸುತ್ತಾಟಕ್ಕೆ ತುಂಬಾ ಸಮಯ ಸಿಗುತ್ತಿತ್ತು. ಫೋಟೋಗ್ರಾಫಿಗೆ Natural light ಹೆಚ್ಚು ಸಿಗುತ್ತಿತ್ತು. ಹಾಗೆ ಸಾಗುತ್ತ ಒಂದು ಸರೋವರದ ಹತ್ತಿರ ಬಂದೆ.

ಎಲ್ಲಿ ನೋಡಿದರಲ್ಲಿ ಲೇಕುಗಳು
ಅಲ್ಲಿ ಕಾಣಿಸಲಿಲ್ಲ ಪ್ರೇಮಿಗಳು

ಕಾಣಿಸಿದ್ದು,
ಗಿಡಗಳಲ್ಲಿ ಹೂವುಗಳು

ಕಣ್ಣಿಗೊಳ್ಳೆ ನೋಟಗಳು


ಇಲ್ಲಿಯ ಹುಲ್ಲುಗಾವಲಿನ ಮೇಲೆ ಅಂದಿನ ಸಂಜೆ ಕಳೆದೆ. ನಂತರ ಹೊಟೆಲಿಗೆ ಬಂದು ಅಲ್ಲಿಯ ಚಿತ್ರಗಳನ್ನು ಸೆರೆ ಹಿಡಿದೆ.

ಇಲ್ಲಿ ಟಿ.ವಿಯನ್ನು ಇಟ್ಟಿದ್ದಾರಲ್ಲ.. cupboard ಅದೇ "ಮಿನಿ ಬಾರ್".

ಶುಕ್ರವಾರ ಶಾಪಿಂಗ್:
ಶುಕ್ರವಾರ ಇದ್ದ ಕೆಲಸವನ್ನು ಬೇಗನೆ ಮುಗಿಸಿ, ಸಾಮಿ, ತೆರೋ ಎಲ್ಲಾರಿಗೂ ಹೋಗಿ ಬರುತ್ತೇನೆಂದು ಹೇಳಿ ಬೇಗನೆ ಹೊರಟೆ. ದಾರಿಯಲ್ಲಿ ಭಾರತದ ವೃದ್ಧ ದಂಪತಿಗಳು ಹೆಲ್ಸಿಂಕಿ ಸುತ್ತಿಕೊಂಡು ತಾಂಪರೆಗೆ ಬಂದಿದ್ದರು. ನನ್ನ ಬಳಿ ಬಂದು ಭಾರತದ ಹೋಟೆಲು ಎಲ್ಲಿದೆ ಅಂತ ಕೇಳಿದರು. ನನಗೆ ಅದು ತಿಳಿದಿದ್ದರಿಂದ ನನ್ನೊಟ್ಟಿಗೆ ಬನ್ನಿ ತೋರಿಸಿತ್ತೇನೆ ಎಂದು ಹೇಳಲು ಅವರು, "ನಿಮಗೆ ಬೇರೆ ಏನಾದರು ಕೆಲಸವಿದ್ದರೆ ತೊಂದರೆಯಾಗ ಬಾರದು. ದಾರಿ ತೋರಿಸಿ ನಾವೇ ಹೋಗುತ್ತೇವೆ" ಅಂದರು. ನಾನು ಹೋಗುವ ಹೋಟೆಲಿನ ದಾರಿಯಲ್ಲಿ ಅದಿದೆ. ನನಗೆ ಏನು ತೊಂದರೆಯಿಲ್ಲ ಎಂದು ಅವರನ್ನು ಹೊಟೆಲಿನ ಬಳಿ ಬಿಟ್ಟು ಹೊರಟೆ.

ತಾಂಪರೆ ಫಿನ್ ಲ್ಯಾಂಡಿನ ಸಾಂಸ್ಕೃತಿಕ ರಾಜಧಾನಿ ಅನ್ನ ಬಹುದು. ಅಲ್ಲಿಯ ಜನರಿಗೆ ಅದು ಮೈಸೂರ! ಹಾಗಾಗಿ ಇಲ್ಲಿಗೆ ಅನೇಕ ಪ್ರವಾಸಿಗರು ಬರುತ್ತಿರುತ್ತಾರೆ. ಮತ್ತೊಂದು ಮಾಹಿತಿಯೆಂದರೆ ಅನೇಕ ಮಂದಿಯ ಕೈಯಲ್ಲಿರುವ "ನೋಕಿಯಾ" ಮೊಬೈಲಿನ ಉಗಮ ಸ್ಥಾನ ಕೂಡ ಈ ಫಿನ್ ಲ್ಯಾಂಡ್ ದೇಶ.

ನಾನು ಕೆಲವು chocolates ತೆಗೆದುಕೊಂಡು, Packing ಮಾಡಿ, ಬೆಳಿಗ್ಗೆ ಸುಮಾರು ೫ಕ್ಕೆ Alarm ಇಟ್ಟು ಮಲಗಿದೆ. ಬೆಳಿಗ್ಗೆ ೫.೩೦ - ೫.೪೫ ಕ್ಕೆ ಹೊಟೆಲ್ ಬಿಟ್ಟೆ. ಹೋಟೆಲ್ ಸಿಬ್ಬಂದಿಗೆ ಒಂದು ಟ್ಯಾಕ್ಸಿ ಬೇಕೆಂದು ಕೇಳಿಕೊಂಡೆ. ಆತ ಕರೆ ಮಾಡಿ ಟ್ಯಾಕ್ಸಿ ಕರೆಸಿದ. ಅದರಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದೆ. ಇಲ್ಲಿಂದ ನಾನು "ಟಾಟ" ಮಾಡುವ ಕೆಲಸಕ್ಕೆ ನಾಂದಿ ಹಾಡಿದೆ. ದಾರಿಯಲ್ಲಿ ಗಮನಿಸಿದ ವಿಷಯ, ರಸ್ತೆ ಖಾಲಿಯಿದ್ದರೂ, ಕೆಂಪು ದೀಪವಿದ್ದಾಗ ಟ್ಯಾಕ್ಸಿ ಚಲಿಸಲೇ ಇಲ್ಲ! ಇಂತಹ ದೃಶ್ಯ ಭಾರತದಲ್ಲಿ ಕಾಣಿಸೋದಿಲ್ಲ.

ನಾನು ತಾಂಪರೆಯಿಂದ ಹೆಲ್ಸಿಂಕಿಗೆ ಬಂದೆ. ಸಮಯ ಸುಮಾರು ೭.೪೫ ಇರಬೇಕು. ನನ್ನ ದೆಹಲಿ ವಿಮಾನ ಇದ್ದದ್ದು, ಮಧ್ಯಾಹ್ನ ೨.೨೦ಕ್ಕೆ. ಅಲ್ಲಿಯವರೆಗು ಅಲ್ಲಿ ಸಮಯಕಳೆಯುತ್ತಿದ್ದೆ. ವಿ-ಅಂಚೆ ಮೂಲಕ ನಾನು ಹೆಲ್ಸಿಂಕಿಯಲ್ಲಿದ್ದೇನೆಂದು ತಾಯಿ ದೇವರಿಗೆ ತಿಳಿಸಿದೆ. ನಂತರ ಜ್ಯೂಸ್ ಕುಡಿದು ನನ್ನ ತಿಂಡಿ ಮುಗಿಸಿ, ಎಲ್ಲಾ ಅಂಗಡಿಗಳಲ್ಲಿ Window Shopping ಮಾಡಿದೆ.

ದೆಹಲಿಯ ವಿಮಾನ ಸಜ್ಜಾಗಿತ್ತು. ಅದು ಗಗನಕ್ಕೆ ಹಾರಿ ತುಸು ನಿಮಿಷದಲ್ಲೇ ಮುಂದಿನ ಆಸನದಲ್ಲಿ ಕೂತಿದ್ದ ಎಳೆ ಕಂದಮ್ಮ ತನ್ನಷ್ಟಕ್ಕೆ ತಾನೆ "ಇಂಡಿಯಾ ಆಗಯಾ....ಇಂಡಿಯಾ ಆಗಯಾ" ಅಂತ ಹರುಷದಲ್ಲಿತ್ತು. ಈ ದೃಶ್ಯ ಕಿರು ನಗು ಮೂಡಿಸಿ, "Good Boy Bad Boy" ಸಿನಿಮಾದತ್ತ ಕಣ್ಣು ಹಾಯಿಸುವಂತೆ ಮಾಡಿತು.

[ ನಾನು ಬರೆದ ಕವನಗಳಿಗೆ ಜಾಗ ಕೊಡುವುದಕ್ಕೋಸ್ಕರ.. "ಫಿನ್ ಲ್ಯಾಂಡಿಗೆ ಪ್ರವಾಸ ಭಾಗ ೩" ಸ್ವಲ್ಪ ದಿನಗಳ ನಂತರ ಪ್ರಾರಂಭವಾಗುತ್ತದೆ.]

Wednesday, 11 March 2009

ಫಿನ್ ಲ್ಯಾಂಡಿಗೆ ಪ್ರವಾಸ (೨) - ಊರು ಸುತ್ತಾಟ

ಹಿಂದಿನ ಭಾಗ

ನಾನು ಈ ಬಾರಿ ಹೊಟೆಲಿನ ಸುತ್ತ ಮುತ್ತ ಇದ್ದ ಸ್ಥಳಗಳನ್ನೆ ನೋಡಿದ್ದು.

ಮೊದಲ ದಿನ: ಪುಟ್ ಬಾಲ್ ಮ್ಯಾಚ್:

ನಾನು ಸಂಜೆ ಹೋಟೆಲಿಗೆ ಬಂದ ಮೇಲೆ, ಸ್ವಲ್ಪ Fresh ಆಗಿ, ಊರು ಸುತ್ತಾಡಲು ಹೊರಟೆ. ಹೋಟೆಲಿನ ಹತ್ತಿರದಲ್ಲೇ ಒಂದು ಪ್ರಸಿದ್ಧವಾದ ಚರ್ಚು ಇತ್ತು. ನಮ್ಮ ದೇವಸ್ಥಾನದ ಎದುರು ಗರುಡಗಂಬ ಹೇಗೆ ಇರುತ್ತೋ ಅದೇ ರೀತಿ ಈ ಚರ್ಚಿನ ಮುಂದೂ ಒಂದು ಕಂಬ ಇತ್ತು.
ಇಲ್ಲಿಂದ ನಾನು ಕಚೇರಿಯ ಕಡೆ ಹೋದೆ. ಕೆಲಸಕ್ಕಲ್ಲ , ನಮ್ಮ ಕಚೇರಿಯ ಎದುರುಗಡೆಯೇ ಒಂದು ಫುಟ್ ಬಾಲ್ ಮೈದಾನವಿತ್ತು. ಅಲ್ಲಿ ಸ್ವಲ್ಪ ಹೊತ್ತು ಕಳೆಯೋಣವೆಂದು ಹೋದೆ. ಅಲ್ಲಿಯ ಜನರಿಗೆ ಅದು ಒಂದು ದೊಡ್ಡ ಮನರಂಜನೆ ನಮ್ಮಲ್ಲಿ ಕ್ರಿಕೆಟ್ ಇದ್ದ ಹಾಗೆ!
Stadium Housefull! ಸ್ವಲ್ಪ ಹೊತ್ತು ನಿಂತು ಕೊಂಡೆ ವೀಕ್ಷಿಸಿದೆ.


ಅಲ್ಲಿ ಆಟ ಇನ್ನು ಮುಗಿದಿರಲಿಲ್ಲ ನಾನು ಹೊರಟು ಬಿಟ್ಟೆ ಪಕ್ಕದಲ್ಲೇ ಇದ್ದ "Koskikeskus"ಗೆ. ಹೆಸರು ವಿಚಿತ್ರವಾಗಿದೆ ಅಲ್ವಾ? ಇದು ಅಲ್ಲಿಯ ಒಂದು ಶಾಪಿಂಗ್ ಮಾಲ್! ಅಲ್ಲಿ ಒಳಗಡೆ ಸುತ್ತಾಡಿ ಸ್ವಲ್ಪ ಹಸಿದಿತ್ತು. ಅಲ್ಲಿದ್ದ ಒಂದು ಬೇಕರಿಯಲ್ಲಿ ಹೋಗಿ, ಮೆನು ಕಾರ್ಡ್ ನೋಡಿ, ಮಾವಿನ ಹಣ್ಣಿನ ಜ್ಯೂಸ್ ತೆಗೆದು ಕೊಂಡೆ (Guarantee Pure Veg). ೨-೩ ನಿಮಿಷದಲ್ಲಿ ಅದು ತಯಾರಾಯ್ತು. ಬಿಲ್ ೩.೬೦ ಯೂರೋ ( ೨೦೦ ರೂಗಳು). ಆದರೆ ಜ್ಯೂಸ್ ಸುಮಾರು ೩೦೦ ಮಿ.ಲಿ ಇರ ಬಹುದೇನೋ.. ಹೆಚ್ಚು ಕಡಿಮೆ ಊಟದ ಹಾಗೆ ಆಗಿತ್ತು ಅಷ್ಟು ಕುಡಿದದ್ದು. ಕುಡಿಯುತ್ತಿರುವಾಗಲೇ ಅಲ್ಲಿಗೆ Stan ಬಂದರು. ಹಾಗೆ ಸ್ವಲ್ಪ ಹೊತು ಮಾತಾಡಿದೆ. ಅವರು ಫುಟ್ ಬಾಲ್ ನೋಡಲು ಹೋಗುತ್ತೇನೆಂದು ಹೊರಟರು. ನನಗೆ ಮತ್ತೇನು ನೋಡುವ ಕುತೂಹಲ ಇರಲಿಲ್ಲ ಹೊಟೆಲಿಗೆ ಬಂದು MTR ಊಟ ಮಾಡಿ ಮಲಗಿದೆ.

ಎರಡನೆ ದಿನ ಕಲ್ಲು ರಸ್ತೆಯಲ್ಲಿ ವಾಕ್!

ನಮ್ಮ ಹೋಟೆಲಿನ ಎಡ ಭಾಗದ ರಸ್ತೆಯೇ ಈ ಕಲ್ಲಿನ ರಸ್ತೆ Hämeenkatu. ಬರೀ ಕಲ್ಲಿನಿಂದ ಈ ರಸ್ತೆ ನಿರ್ಮಿಸಿದ್ದಾರೆ. ಟಾರ್ ಇಲ್ಲವೇ ಇಲ್ಲ! ಇದು ಇಲ್ಲಿಯ ಮುಖ್ಯ ರಸ್ತೆ. ರೈಲ್ವೇ ನಿಲ್ದಾಣದಿಂದ ತಾಂಪರೆ ಸಿಟಿಯ "Majestic bus stand"ಗೆ ಹೋಗುವ ದಾರಿ. ಅಲ್ಲಿಯ majestic ಹೆಸರು Keskustori! ಮತ್ತೆ ವಿಚಿತ್ರವಾದ ಹೆಸರು :). ಆ ರ್ರಸ್ತೆಯ ಚಿತ್ರ ನೋಡಿ ಇಲ್ಲಿ:

ಈ ರಸ್ತೆಯಲ್ಲಿ ಹೋಗಿ, majestic ತಲುಪಿದೆ. ಆಗ ಸಮಯ ರಾತ್ರಿ ೭.೩೦ ಇರಬಹುದೇನೋ.. ಇಷ್ಟು ಬೆಳಕು ಇತ್ತು ಅಷ್ಟೆ. ಆಗ ಅಲ್ಲಿ ಸೂರ್ಯಾಸ್ತ ೯.೩೦ ನಂತರದಲ್ಲಿ ಇರುತ್ತಿತ್ತು. ಇದು ನಿಜಕ್ಕು ಹೊಸ ಅನುಭವ. ಭಾರತದಲ್ಲಿ ಸುಮಾರು ೬.೫೦ - ೬.೫೫ ಕ್ಕೂ ಸೂರ್ಯಾಸ್ತವಾಗಿದ್ದು ನೋಡಿದ್ದೆ.
ಇದಾದ ನಂತರ ಹಿಂದಿರುಗಿ ಬಂದು ಬಿಟ್ಟೆ.

ಮೂರನೆ ದಿನ: "ಮತ್ತದೆ ರಸ್ತೆ.. ಅದೇ ವಾಕು,.. ಅದೇ ಏಕಾಂತ...."
ಈ ಹಾಡನ್ನು ಜ್ಞಾಪಿಸಿಕೊಂಡಾಗ ಮನಸ್ಸಿಗೆ ಬರುವವಳೇ ..’ಕಲ್ಯಾಣಿ’.

ನಾನು ಫಿನ್ ಲ್ಯಾಂಡಿನಲ್ಲಿ ಇದ್ದ ಮೇಲೆ ಅಲ್ಲಿಯ Lake ಗಳನ್ನು ತೋರಿಸದಿದ್ದರೆ ನೀವು ನಂಬುವುದೇ ಇಲ್ಲ ನಾನು ಫಿನ್ ಲ್ಯಾಂಡಿಗೆ ಹೋಗಿದ್ದೆ ಅಂತ. ಏಕೆಂದರೆ ಆ ನಾಡನ್ನು "Land of Thousand Lakes" ಅಂತ ಕರೆಯುತ್ತಾರೆ. ಚಿಕ್ಕವಯಸ್ಸಿನಲ್ಲಿ ಸಾಮಾನ್ಯ ಜ್ಞಾನ (General Knowledge) ಪುಸ್ತಕದಲ್ಲಿ ಓದಿದ್ದಾಗ ನಾನು ಕನಸು ಕಂಡಿರಲಿಲ್ಲ ಇಲ್ಲಿಗೆ ಬರುತ್ತೇನೆಂದು.

Keskustori (majestic) ಯ ಸಮೀಪದಲ್ಲೆ ಈ ಜಾಗವಿತ್ತು. ಅಲ್ಲೊಬ್ಬ ವಿದೇಶಿ (ಕೋರಿಯಾ ಅಥವಾ ಜಪಾನ್ ದೇಶದವನು) ಅನೇಕ ಫೋಟೋ ತೆಗಿತಾಯಿದ್ದ. ಭರ್ಜರಿಯಾದ SLR ಕ್ಯಾಮಾರವೇ ಆ ಚಿತ್ರಗಳನ್ನು ಸೆರೆಹಿಡಿಯುತ್ತಿತ್ತು . ಈತನ ಕೈಯಿಂದ ಫೋಟೋ ತೆಗೆಸಿಕೊಳ್ಳ ಬಹುದು ಎಂದು ಅವನ ಬಳಿ ಹೋಗಿ, "ದಯವಿಟ್ಟು ಒಂದು ಫೋಟೋ ತೆಗೆದು ಕೋಡುತ್ತೀರೇನ್ರಿ?" ಅಂತ ಕೇಳಿದೆ. ಅದಕ್ಕೆ ಆತ ನಿಸ್ಸಂಕೋಚವಾಗಿ "ಆಗಲ್ಲ ಕಣ್ರೀ" ಅನ್ನೋದೆ? ಆಮೇಲೆ "ಏನು ಊರಿಗೊಬ್ಬಳೇನಾ (ಒಬ್ಬನೇನಾ) ಪದ್ಮಾವತಿ (ಶ್ರೀನಿವಾಸ)?" ಅಂತ ಅಲ್ಲಿ ಸಿಕ್ಕ ಮತ್ತೊಬ್ಬರನ್ನು ಕೇಳಿದಾಗ ಆತ, ಸರಿ ತೆಗೆದು ಕೊಡುತ್ತೇನೆಂದು ಹೇಳಿ, ಈ ಫೋಟೋ ತೆಗೆದ.