Wednesday, 12 November 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಭಾನುವಾರದ ಬೀಟ್

ಹಿಂದಿನ ಭಾಗ

ಭಾನುವಾರ ಸುಮನ್ ಮನೆಗೆ ಹೋಗುವುದು ನಿರ್ಧಾರವಾಗಿತ್ತು. ಹಿಂದಿನ ದಿನ ಮೆಟ್ರೋ ನಿಲ್ದಾಣಕ್ಕೆ ಹೋಗಿದ್ದರಿಂದ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಆಸೆಯಾಯಿತು. ನಮ್ಮ ಹೊಟೆಲಿನಿಂದ ಬಸ್ ನಿಲ್ದಾಣಕ್ಕೆ ಹೆಚ್ಚೆಂದರೆ ೧೦ ನಿಮಿಷಗಳ ಕಾಲ್ನಡಿಗೆ. ಅದರ ಬದಲು ರೈಲಿನಲ್ಲಿ ಹೋಗೋಣವೆಂದು ನಮ್ಮ ಹೊಟೆಲಿಗೆ ಸಮೀಪದಲ್ಲಿದ್ದ ನಿಲ್ದಾಣಕ್ಕೆ (Rauhalahti) ಹೋದೆವು. ಮೊದಲಿಗೆ ಅಲ್ಲಿಯ Ticket machine ಇಂದ ಟಿಕೆಟ್ ಪಡೆದು ಸುಮಾರು ಆಳಕ್ಕೆ ಇಳಿದೆವು. ನಂತರ ನಗರ ಬಸ್ ನಿಲ್ದಾಣಕ್ಕೆ ಹೋಗುವ ರೈಲನ್ನು ಏರಿದೆವು. ಹೊರಗಿನಿಂದ ಮೆಟ್ರೋದ ಚಿತ್ರ ಇದು.
ಮೆಟ್ರೋ ರೈಲು ಅದೆಷ್ಟು ವೇಗವಾಗಿ ಚಲಿಸಿತೆಂದರೆ,

ಮೆಟ್ರೋ ರೈಲಿನ ಆಸನಗಳಲ್ಲಿ Cushion ಇರಲಿಲ್ಲ.ಈ ಚಿತ್ರದಲ್ಲಿ ಗಮನಿಸಿ ಹಸಿರು ಅಕ್ಷರದ ಫಲಕವಿದೆ. ಅದು ಮುಂಬರುವ ನಿಲ್ದಾಣವನ್ನು ಸೂಚಿಸುತ್ತದೆ.

ಅದರೊಳಗೆ ಹೆಚ್ಚಿನ ಸಮಯ ಕಳೆಯಲೇ ಇಲ್ಲ. ಅಷ್ಟರಲ್ಲಿ ನಾವು ನಗರದ ಬಸ್ ನಿಲ್ದಾಣದ ಬಳಿ ಇದ್ದ ಮೆಟ್ರೋ ನಿಲ್ದಾಣದಲ್ಲಿ ಇಳಿದೆವು. ಆನಂತರ ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯವರು ಅಲ್ಲಿಯ ಬಸ್ ಸಮಯ ಹಾಗು ಮಾಹಿತಿಗಳನ್ನು ಸೂಚಿಸಲು ಒಂದು computer ಇಟ್ಟಿದ್ದರು. ಅದರೊಂದಿಗೆ ಸ್ವಲ್ಪ ಹೊತ್ತು ಕಳೆದು, ನಾವು ಹತ್ತ ಬೇಕಿದ್ದ ಬಸ್ಸಿನ ಬಳಿ ಬಂದೆವು. ನಂತರ ಬಸ್ಸನ್ನು ಹತ್ತಿ ನಮ್ಮ ಬಳಿಯಿದ್ದ ಟಿಕೆಟನ್ನು ತೋರಿಸಿದೆವು. ನಂತರ ಮುಂದಿನ ಸಾಲಿನಲ್ಲೇ ಕುಳಿತು, ನಮ್ಮ ನಿಲ್ದಾಣದ ಹೆಸರನ್ನು ಹೇಳಿ, ಅದು ಬಂದೊಡನೆ ನಮಗೆ ತಿಳಿಸುವುದಾಗಿ ಕೇಳಿಕೊಂಡೆವು. ಈ ಬಸ್ ಹೋದ ದಾರಿಯಲ್ಲೇ ನಮಗೆ ಕಾಣಿಸಿದ್ದು ಹೆಲ್ಸಿಂಕಿಯ ಸೆನೆಟ್. ಸುತ್ತ ಮುತ್ತಲಿನ ಪರಿಸರವನ್ನು ವೀಕ್ಷಿಸುತ ನಮ್ಮ ನಿಲ್ದಾಣಕ್ಕೆ ತಲುಪಿದೆವು. ಅಲ್ಲಿಂದ ಸುಮನ್ ಮನೆ ಹುಡುಕುವ ಕೆಲಸ ನಮ್ಮದಾಗಿತ್ತು. ಅಲ್ಲಿ ಸಿಕ್ಕವರೊಬ್ಬರನ್ನು ನಮ್ಮ ಬಳಿಯಿದ್ದ ಚೀಟಿಯನ್ನು ತೋರಿಸಿ ವಿಳಾಸವನ್ನು ಕೇಳಿದೆವು. ಅವರಿಗೆ ಆಂಗ್ಲ ಭಾಷೆ ಬಾರದ ಕಾರಣ ತಮ್ಮ ಭಾಷೆಯಲ್ಲಿ ಏನನ್ನೂ ಹೇಳಿ ಹೊರಟು ಹೋದರು. ಈ ವಿಳಾಸ ಗೊತ್ತಿಲ್ಲ ಅಂತಲೋ ಅಥವಾ ಆಂಗ್ಲ ಭಾಷೆ ತಿಳಿಯದು ಅಂತಲೋ ಹೇಳಿರುತ್ತಾರೆ ಅಂತ ಹೇಳಬಲ್ಲೆ. ನಾವು ಸ್ವಲ್ಪ ಮುಂದೆ ಸಾಗಿದೊಡನೆ ಸುಮನ್ ವಿಳಾಸ ಸಿಕ್ಕಿತು. ಆತ ನಮ್ಮನ್ನು ಆದರದಿಂದ ಸ್ವಾಗತಿಸಿದನು. ಎಲ್ಲಾ ಉಭಯ ಕುಶಲೋಪರಿ ಮುಗಿದ ನಂತರ ನಮಗೆ ತಿನ್ನಲು ಚಿಪ್ಸನ್ನು ಹಾಗು ಕುಡಿಯಲು ಜ್ಯೂಸನ್ನು ಕೊಟ್ಟನು.

ಹಾಗೆ ಮಾತಾಡುತ್ತಾ, ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಹಸಿವು ಅದನ್ನು ಜ್ಞಾಪಿಸ ಬೇಕಾಯಿತು. ನಂತರ ಅಡುಗೆ ಮಾಡಲು ಸುಮನ್ ಹೊರಟನು. ಆಗ ನನ್ನನ್ನು ಪ್ರಶ್ನಿಸಿದ, "ನೀನು ಮಾಂಸಾಹಾರ ತಿನ್ನುತ್ತೀಯಾ ಇಲ್ವಾ?" ಎಂದು. ನಾನು ಸಸ್ಯಾಹಾರಿಯೆಂದು ಹೇಳಿದೆ. ಆಗ ಆತ ಮೊದಲು ದಾಲು ಹಾಗು ಅನ್ನವನ್ನು ತಯಾರಿಸಿದನು. ದಾಲಿಗೆ ಬೆಳ್ಳುಳ್ಳಿಯನ್ನೂ ಹಾಕಿದ್ದ. ನನಗೆ ಬೆಳ್ಳುಳ್ಳಿ ಸೇರುವುದಿಲ್ಲವೆಂದು ಆತನಿಗೆ ಗೊತ್ತಿರಲಿಲ್ಲ. ನಂತರ ಅವರಿಬ್ಬರಿಗೆ ಚಿಕನ್ನ್ ತಯಾರಿಸಿದ. ನನಗೆ ಈ ಬೆಳ್ಳುಳ್ಳಿ ದಾಲ್ ಅಷ್ಟೇನು ಇಷ್ಟವಾಗಲಿಲ್ಲ. :( ಆದರೂ ಅವನ ಮನಸ್ಸಿಗೆ ನೋವು ಮಾಡ ಬಾರದೆಂದು ಹಾಗೆ ತಿಂದೆನು. ನಮ್ಮ ಊಟವಾದ ಮೇಲೆ ಸ್ವಲ್ಪ ಹೊತ್ತು ಮಾತಾಡಿ ನಾವು ಹೊರಡಲನುವಾದೆವು. ನಂತರ ಆತ ನಮ್ಮನ್ನು ಬಸ್ ನಿಲ್ದಾಣದವರೆಗೂ ಬಿಟ್ಟನು. ನಾವು Espoo ಇಂದ ಹೆಲ್ಸಿಂಕಿಗೆ ಬಂದೆವು. ಆನಂತರ ಮತ್ತೊಮ್ಮೆ ಮೆಟ್ರೋ ಹತ್ತುವ ಆಸೆಯಾಯುತು. ಹೇಗೂ ೧ ಗಂಟೆವರೆಗೂ ಟಿಕೆಟಿನ ಅವಧಿಯಿತ್ತು. ಅಲ್ಲಿಂದ Itäkeskus shopping centreಗೆ ಹೊದೆವು. ಅಲ್ಲಿದ್ದ ಊಷ್ಣಮಾಪಕದಲ್ಲಿ ನಮ್ಮ ಕಣ್ಣಿಗೆ ಆಶ್ಚರ್ಯ ತುವಂತಹ ದೃಶ್ಯ ಕಂಡಿತು. ಉಷ್ಣಾಂಶವು +೭ C ಇತ್ತು! ಆ ದಿನ ಭಾನುವಾರವಾದ್ದರಿಂದ ಕೆಲವೇ ಅಂಗಡಿಗಳು ಮಾತ್ರ ತೆರೆದಿತ್ತು. ಅಲ್ಲಿ ಅಲೆದಾಡಿ ನಂತರ ನೇರವಾಗಿ Rauhalahtiಗೆ ಬಂದಿಳಿದೆವು. ಅಲ್ಲಿ ಸುತ್ತಾಡಿ, ನಮ್ಮ ಹೊಟೆಲಿನ ಮುಂದಿನ ಸಮುದ್ರಕ್ಕೆ ಬಂದು ಕೆಲವು ಫೋಟೋಗಳನು ತೆಗೆದೆವು.
ಊಷ್ಣಾಂಶ ಹೆಚ್ಚಿರೋದಕ್ಕೆ ಇದೇ ಸಾಕ್ಷಿ! ಇಷ್ಟೆಲ್ಲಾ ಆದ ಮೇಲೆ, ಹೊಟೆಲಿಗೆ ಬಂದ ಇನ್ನುಳಿದ ಪ್ಯಾಕಿಂಗ್ ಕೆಲಸ ಮುಗಿಸಿದೆ. ಆನಂತರ ನಮ್ಮ ರಾತ್ರಿಯ ಭೋಜನ ಮಾಡಿದೆವು. ನಾವು ತಂದಿದ್ದ MTR ಪದಾರ್ಥಗಳು, Maggi, ಸಿಹಿ, ಹಾಗು ಖಾರದ ಪದಾರ್ಥಗಳು ಅಂದಿನ ದಿನಕ್ಕೆ ಎಷ್ಟು ಬೇಕೋ ಅಷ್ಟೇ ಇತ್ತು.

ಮತ್ತಷ್ಟು ವಿಚಾರಗಳು:

ಅಲ್ಲಿ ಸತತ Snowfall ಇದ್ದಿದ್ದರಿಂದ ನಾವು ಓಡಾಡುವಾಗ ಜಾಗರೂಕರಾಗಿರ ಬೇಕಿತ್ತು. ಅಲ್ಲಿಯ ನೆಲ ತುಂಬಾ ಜಾರುವಂತಿತ್ತು. ನನ್ನ ಜಾಗರೂಕತೆಯಿಂದ ಅಲ್ಲಿ ಒಮ್ಮೆಯೂ ಜಾರಿ ಬೀಳಲಿಲ್ಲ!

ಪ್ರತಿದಿನ ಬೆಳಿಗ್ಗೆ ಅಲ್ಲಿ ಬಿದ್ದಿದ್ದ ಮಂಜನ್ನು ಎತ್ತುವ ಕೆಲಸ ನಡೆಯುತ್ತಲೇ ಇತ್ತು. ಅದಕ್ಕಾಗಿ ಕೆಲವರನ್ನು ಸರ್ಕಾರ ನೇಮಿಸಿರುತ್ತಾರೆ.

ನಾವು ಹೊಟೆಲಿನಲ್ಲಿ ಬಹಳ ದಿನಗಳಿಂದ ಇದ್ದಿದ್ದರಿಂದ ಅಲ್ಲಿಯ Waiters ಗಳಿಗೆ ನಮ್ಮ ಮುಖ ಪರಿಚಯವಿತ್ತು. ಆದ್ದರಿಂದ ಒಂದು ದಿನ ನಮ್ಮ ಬಳಿ ಬಂದು"ನೀವು ಬಹಳ ದಿನಗಳಿಂದ ಇಲ್ಲಿದ್ದೀರ. ನಿಮ್ಮಿಂದ ಏನಾದರು ಸಲಹೆ ಸೂಚನೆ ಪಡೆಯ ಬೇಕೆಂಬ ಹೆಬ್ಬಯಕೆ ನಮ್ಮದಾಗಿದೆ" ಅಂತ ಹೇಳಿ, Feedback Form ಕೊಟ್ಟು, ಅದನ್ನು ಭರ್ತಿ ಮಾಡಿಯೆಂದು ಹೇಳಿದಳು. ನಾವು ಅದನ್ನು ಭರ್ತಿ ಮಾಡಿದೆವು. ಅವರ ಪೈಕಿ ಕೆಲವರು ವೃದ್ಧೆಯರೂ ಇದ್ದರು. ಕೆಲವರು ಹದಿ ಹರೆಯರೂ ಇದ್ದರು.

ಇದು ಮುಖ್ಯವಾದ ಘಟನೆ. ಪ್ರತಿಸಲವೂ ನನ್ನ ರೂಮಿನ ಬಾಗಿಲು ತೆಗೆಯುವಾಗ ತಪ್ಪದೆ Shock ಹೊಡೆಸಿಕೊಳ್ಳುತ್ತಾಯಿದ್ದೆ. ಅಪರೂಪಕ್ಕೆ Shock ಹೊಡೆಯದೇ ಇದ್ದಲ್ಲಿ ನನಗೆ ಆಶ್ಚರ್ಯವಾಗುತ್ತಿತ್ತು! ಅದರಿಂದ ತಪ್ಪಿಸಿಕೊಳ್ಳಲು ಮೊದ ಮೊದಲು ನಿಧಾನವಾಗಿ ಬಾಗಿಲ ಹ್ಯಾಂಡಲ್ಲನ್ನು ಮುಟ್ಟುತ್ತಿದ್ದೆ ಆದರೂ Shock ಪ್ರಮಾಣ ಎಂದಿನಂತೆಯೇ ಇರುತ್ತಿತ್ತು. ಇದಕ್ಕಾಗಿ ನಾನು ಬಾಗಿಲು ತೆಗೆಯಲು ಕೆಲವೊಮ್ಮೆ Gloves ಬಳಸುತ್ತಾಯಿದ್ದೆ.


ಪ್ರತಿ ನಿತ್ಯವೂ ನನ್ನ ರೂಮನ್ನು ಸ್ವಚ್ಛಗೊಳಿಸುತ್ತಾಯಿದ್ದರು. ಮಡಿಸದೇ ಇದ್ದ ಹೊದಿಕೆಗಳು ಮಡಿಸಿದಂತಿರುತ್ತಿತ್ತು.

ನಮಗೆ ಒದಗಿಸಿದ "Mini Bar" ನಲ್ಲಿ "ಬಾಟಲ್ಲು"ಗಳ ಜೊತೆಗೆ ನಾನು ಕುಡಿಯ ಬಹುದಾದಂತಹ ಬಾಟಲ್ಲುಗಳೂ ಇದ್ದವು. ಅಲ್ಲದೆ Chocolates ಇದ್ದವು. ಯಾವುದನ್ನೂ ಉಪಯೋಗಿಸಲಿಲ್ಲ.

ಕಚೇರಿಯಲ್ಲಿ, ಒಂದು Fridge ಇತ್ತು. ಅಲ್ಲಿಯ ಜನರು ಅವರು ತಂದ ತಿನಿಸುಗಳನ್ನು ಅದರೊಳಗೆ ಇಡುತ್ತಿದ್ದರು. ನಮಗದು ತಿಳಿಯದೆ ಒಂದು ದಿನ ಯಾರೋ ತಂದಿಟ್ಟಿದ್ದ ಪೈನಾಪಲ್ ಜ್ಯೂಸನ್ನು ಕುಡಿದು ಬಿಟ್ಟಿದ್ದೆವು. ಇದನ್ನು ನೆನೆಸಿಕೊಂಡರೆ ಘೋರವಾದ ಪಾಪ ಮಾಡಿದೆವೇನೋ ಅನಿಸುತ್ತದೆ.

ಅಲ್ಲಿಯ Otto (ATM) ನಲ್ಲಿ ಒಮ್ಮೆ ೨೦ Euroಗಳನ್ನು withdraw ಮಾಡಿದ್ದೆ. ಹೆಚ್ಚಿನ ದುಡ್ಡಿನ ಅವಶ್ಯಕತೆ ಇರಲಿಲ್ಲ. ಇಲ್ಲಿಗೆ ಬರುವ ಮುಂಚೆಯೇ ಸ್ವಲ್ಪ ಹಣ ಇತ್ತು. ಅಲ್ಲದೆ ಅಲ್ಲಿ ಎಲ್ಲಾ ಕಡೆಯಲ್ಲೂ Card!

ಕಚೇರಿಯಲ್ಲಿ ಪ್ರತಿದಿನವೂ ತಪ್ಪದೇ ಹಣ್ಣುಗಳನ್ನು ತರಿಸುತ್ತಿದ್ದರು. ನಾನೂ ಕೂಡ ತಪ್ಪದೆ ಆಪಲ್, ಬಾಳೆಹಣ್ಣು, ಆರೆಂಜ್ ಹಣ್ಣುಗಳನ್ನು ತಿನ್ನುತ್ತಾ Suomi ಭಾಷೆಯ ಪತ್ರಿಕೆಗಳನ್ನು ನೋಡುತ್ತಾಯಿದ್ದೆ. ಒಂದು Oven 40 Euros, Camera 210 Euros, 1 Shirt 25 Euro, ಇತ್ಯಾದಿಗಳು. ನಮ್ಮ ಕಚೇರಿಯಲ್ಲಿ TV ಸಹ ಇತ್ತು.

ಅಲ್ಲಿಯ Tramನಲ್ಲಿ ಪ್ರಯಾಣ ಮಾಡಬೇಕು ಅನಿಸಿತ್ತು ಆದರೆ ಆಗಲಿಲ್ಲ.


ಅಲ್ಲಿಯ ರಸ್ತೆ ದಾಟುವಾಗ, ಹಸಿರು ದೀಪವಿದ್ದಾಗಲೇ ದಾಟುತ್ತಾಯಿದ್ದೆವು. ಒಮ್ಮೆ ನಾವು ಬಹಳ ಕಾಲ ನಿಂತಿದ್ದರೂ ಹಸಿರು ದೀಪವು ಹತ್ತಿರಲಿಲ್ಲ. ಆಗ ಅಲ್ಲಿಯ ಕಾರ್ ಸವಾರನೊಬ್ಬ ನಮಗೆ ಕೈ ಸನ್ನೆ ಮಾಡಿ, ಅಲ್ಲಿದ್ದ ಒಂದು Switch ಒತ್ತಲು ಹೇಳಿದ. ಆನಂತರ ನಮಗೆ ಶೀಘ್ರವಾಗಿ ಹಸಿರು ದೀಪ ಹತ್ತಿ, ರಸ್ತೆ ದಾಟಿದೆವು.


ಈ ಚಿತ್ರದ ಎಡ ಭಾಗದಲ್ಲಿ ಗಮನಿಸಿದರೆ ಸೈಕಲ್ ಚಿತ್ರವಿದೆ. ಇಲ್ಲಿ Footpath ಮೇಲೆ ಸೈಕಲ್ ಹೋಗುವ ಪಥ ಕೂಡ ಇದೆ.

ಅಲ್ಲಿಯ ಪ್ರತಿಯೊಂದು ಹೊಟೆಲು, ಕಚೇರಿ, ಮನೆಗಳಲ್ಲಿ ಸರ್ವದಾ ಬಿಸಿ ನೀರು ಇರುತ್ತದೆ. ಅದಲ್ಲದೆ ಪ್ರತಿಯೊಂದು ಕೋಣೆಯಲ್ಲೂ Room Heater ಇರುತ್ತದೆ. ಇದರಿಂದ ರೂಮೊಳಗಿನ ಉಷ್ಣಾಂಶವು ೨೫ರ ಆಸು ಪಾಸು ಇರುತ್ತಿತ್ತು. ಈ ಅನುಭವವೇ
"ಹೊಟೆಲ್
ಒಳಗೂ, office ಒಳಗೂ
ಕಾಲಿಟ್ಟರೆ ಸಾಕು
ಬದುಕುವುದು ನನ್ನ ಜೀವ " ಈ ಸಾಲುಗಳಾಗಿ ಬಂದಿದೆ.

Thursday, 6 November 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಶನಿವಾರದ ಅಲೆದಾಟ

ಹಿಂದಿನ ಭಾಗ ಇಲ್ಲಿದೆ

ಶನಿವಾರ ನಮಗೆ ಅತಿಯಾದ ಉತ್ಸಾಹವಿತ್ತು. ಏಕೆಂದರೆ ಅದು ನಮ್ಮ ಕೊನೆಯ ವಾರಾಂತ್ಯ. ಇನ್ನೆರಡು ರಾತ್ರಿಗಳನ್ನು ಕಳೆದರೆ, ನಾವು ದೆಹಲಿಗೆ ಹಾರುವ ವಿಮಾನದೊಳಗೆ ಕೂರ ಬಹುದಾಗಿತ್ತು. ಯಾರ್ಕ್ಕೊ ಹೇಳಿದಂತೆ ಕೆಲವು ತಾಣಗಳನ್ನು ನೋಡಲು ಹೋದೆವು. ಹೊಟೆಲಿನ ಪಕ್ಕದ ರಸ್ತೆಯಲ್ಲಿ ಸಾಗುತ್ತಾಯಿದ್ದೆವು. ನಾವು ರಸ್ತೆ ದಾಟುವ ಸಮಯ ಬಂದಾಗ ಆಕಡೆಯಿಂದ ಒಂದು ಕಾರ್ ಬರುತ್ತಾಯಿತ್ತು. ನಾವು ಸುಮ್ಮನೆ ನಿಂತೆವು. ಆಗ ಆ ಕಾರಿನಲ್ಲಿದ್ದವರು, ಕಾರನ್ನು ನಿಲ್ಲಿಸಿದರು. ನಾವು ಅವನು ಸಾಗಲಿ ಎಂದು ಸುಮ್ಮನಿದ್ದರೆ, ಆತ ನಮಗೆ ಕೈ ಸನ್ನೆ ಮಾಡಿ, "ನೀವು ಮೊದಲು ಹೋಗಿ" ಎಂದನು. ಇದನ್ನು ನೋಡಿ ನನಗೆ ಅತೀಯಾದ ಆಶ್ಚರ್ಯವಾಯಿತು. ಭಾರತದಲ್ಲಿ ನಮಗೆ ಕಾರಿನಲ್ಲಿ ಓಡಾಡೋರು ಯಾರು ತಾನೆ ನಿಲ್ಲಿಸಿ, "ನೀವು ಮೊದಲು ಹೋಗಿ" ಎನ್ನುತ್ತಾರೆ? ಈ ಕಾರಿನ ಅನುಭವ ಒಮ್ಮೆ ಮಾತ್ರವಾದದ್ದಲ್ಲ. ಅನೇಕ ಬಾರಿ ಹೀಗಾಗಿದೆ.


ನಾವು chocolates ಖರೀದಿಸಲು ಒಂದು ಮಾಲಿಗೆ ಹೋಗುತ್ತಾಯಿದ್ದೆವು. ಆಗ ಅಲ್ಲಿಯ ವಾತಾವರಣದಲ್ಲಿ ಮಂಜಿನ ಪ್ರಮಾಣ ಕಡಿಮೆಯಾಗಿತ್ತು. ಕೆಲವು ದಿನಗಳಲ್ಲಿ +೪ C ಗೂ ಉಷ್ಣಾಂಶವಿರುತ್ತಿತ್ತು. ಹಾಗಾಗಿ ಅಲ್ಲಲ್ಲಿ ಹಸಿರು ಕಾಣಿಸುತ್ತಾಯಿತ್ತು. ನಮ್ಮ ಎರಡನೆ ವಾರದಲ್ಲಿ ಬಿಳಿ ಮರಳಿದ್ದ ಪ್ರದೇಶದಲ್ಲೇ ಈಗ ಹುಲ್ಲು ಕಾಣಲಾರಂಭಿಸಿತು.
ನಾವು ಆ ಮಾಲಿನಲ್ಲಿ ಅನೇಕ ಸಮಯ ಕಳೆದು, chocolatesಗಳನ್ನು ಕೊಂಡೆವು. ನಂತರ ಹೆಲ್ಸಿಂಕಿಯ ಬಸ್ ನಿಲ್ದಾಣದಲ್ಲಿ ಹಾಗು ರೈಲು ನಿಲ್ದಾಣದಲ್ಲಿ ತಿರುಗಾಡಲು ಹೋಗುವಾಗ ದಾರಿಯಲ್ಲಿ ನಮ್ಮ ಕಣ್ಣಿಗೆ ಬಿದ್ದ ದೃಶ್ಯವಿದು. ಒಬ್ಬ ನಿರುದ್ಯೋಗಿ, ತನ್ನ ಗಿಟಾರನ್ನು ಹಿಡಿದು ಸಂಗೀತ ನುಡಿಸುತ್ತಾಯಿದ್ದ. ಆತನಿಗೆ ಅಲ್ಲಿಯ ಜನರು ಹಣ ಸಹಾಯ ಮಾಡುತ್ತಾಯಿದ್ದರು. ಈತನ ಹಾಗೆ ಇನ್ನು ಅದೆಷ್ಟೋ ಜನರ ಜೀವನದ ಅಲ್ಪ ಭಾರವನ್ನು ಅಲ್ಲಿಯ ಸರ್ಕಾರ ಹೊತ್ತಿದೆ. ನಿರುದ್ಯೋಗಿಗಳಿಗೆ ಸರ್ಕಾರವು ಮಾಸಿಕ ೫೦೦ Euroಗಳನ್ನು ನೀಡುತ್ತದೆ.

ನಾವು ಬಸ್ ನಿಲ್ದಾಣಕ್ಕೆ ಹೋಗಿ, ಅಲ್ಲಿ ಫೋಟೋಗಳನ್ನು ತೆಗೆದು ಕಾಲ ಕಳೆಯುತ್ತಾಯಿದ್ದೆವು. ರೈಲು ನಿಲ್ದಾಣದಲ್ಲಿ ತಿರುಗಾಡುತ್ತಾಯಿದ್ದಾಗ ನಮ್ಮ ಕಣ್ಣಿಗೆ ಬಿದ್ದದ್ದು "Namaskaar" (ಭಾರತದ ಹೊಟೆಲ್) ನಾವು ಅಲ್ಲಿಗೇನು ಭೇಟಿ ನೀಡಲಿಲ್ಲ.

ಬಸ್ ನಿಲ್ದಾಣದ ಎದುರು, Skating ಆಡುತ್ತಾಯಿದ್ದ ಮಂದಿಯನ್ನು ನೋಡಿ ಸ್ವಲ್ಪ ಹೊತ್ತು ಕಳೆದೆವು. ಅಲ್ಲಿ ಎಲ್ಲಾ ವಯಸ್ಸಿನವರಿದ್ದರು. ಕೆಲವು ಚಿಕ್ಕ ಮಕ್ಕಳು ಅತ್ಯುತ್ಸಾಹದಿಂದ ಆಡುತ್ತಾಯಿದ್ದರೆ ಇನ್ನು ಕೆಲವರು ಭಯಗೊಂಡಿದ್ದರು. ಅಲ್ಲಿಂದ ನಾವು Metro ಸಾರಿಗೆ ನಿಲ್ದಾಣಕ್ಕೆ ಸಾಗಿದೆವು. Metro complex ಒಳಗೆ ನಿಲ್ದಾಣಕ್ಕೆ ತಲುಪುವ ಮುನ್ನ ಅನೇಕ ಅಂಗಡಿಗಳು ಇದ್ದವು. ಎಲ್ಲಾ ಅಂಗಡಿಗಳ ಮಧ್ಯೆ ಇದೂ ಸಹ ಇತ್ತು.
ಇದರೊಳಗೆ ಪ್ರವೇಶಿಸಿದೆವು ಏನಾದರು ಕೊಳ್ಳ ಬಹುದೇ ಎಂದು. ಆದರೆ ನಮಗೆ ಅಲ್ಲಿದ್ದ ವಸ್ತುಗಳೆಲ್ಲಾ ದುಬಾರಿ ಎನಿಸಿತು. ಭಾರತದಲ್ಲಿ ೧೦- ೨೦ ರೂಗಳಿಗೆ ಸಿಗುವ ವಸ್ತುಗಳನ್ನೇ ಇಲ್ಲಿ ೫ Euro, ೮ Euroಗೆ ಮಾರಾಟ ಮಾಡುತ್ತಾಯಿದ್ದರು. ಅಲ್ಲಿಗೆ ಹೋಗಿ ಭಾರತದ ಮುಖಗಳನ್ನು ನೋಡಿ ಹಿಂದಿರುಗಿದೆವು. ಅಷ್ಟರಲ್ಲಿ ಹೊಟ್ಟೆ ಹಸಿದು, ಅಲ್ಲಿದ್ದ ಒಂದು ಹೊಟೆಲಿಗೆ ಹೋದೆವು. ಅಲ್ಲಿ ತಿನ್ನೋಕೆ ಏನಾದರೂ ಸರಿ, ಸಸ್ಯಾಹಾರ ಸಿಕ್ಕರೆ ಸಾಕು ಎಂದಿದ್ದೆ. ಹೋಟೆಲಿನವನಿಗೆ, ಸಸ್ಯಾಹಾರ ತಿನಿಸು ಏನಿದೆ ಎಂದು ಕೇಳಿದೆ. ಆಗ ಅಲ್ಲಿದ್ದ ಒಂದು ತಿನಿಸನ್ನು ತೋರಿಸಿದ. ಇನ್ನೊಮ್ಮೆ ಕೇಳಿದೆ ಇದು ಸಸ್ಯಾಹಾರ ತಾನೆ? ಎಂದು. ಅದಕ್ಕೆ ಅವನು ಹೌದು ಎಂದ. ಅದರ ಹೆಸರನ್ನೂ ಕೇಳದೆ, ಅದರ ದರವನ್ನೂ ನೋಡದೆ, "ಅದನ್ನೇ ಒಂದು ಪ್ಲೇಟ್ ಕೋಡು" ಎಂದೆ. ಅದರ ದರ ೮ - ೯ Euro ಇತ್ತು ಅಂತ ನನ ಜ್ಞಾಪಕ. ಅನ್ನ, ಸಾಂಬರು, ಅದರ ಮಧ್ಯದಲ್ಲಿ ಬೊಂಡವನ್ನು ಹೋಲುವಂತಿದ್ದ ಒಂದು ತಿನಿಸಿತ್ತು. ಅಲ್ಪ ಸ್ವಲ್ಪ ತಿಂದು, ಅಲ್ಲಿಂದ ಹೊರಟೆವು.

Metroವು ಭೂಮಿಗಿಂತ ಸಾಕಷ್ಟು ತೆಳ ಭಾಗದಲ್ಲಿ ಇತ್ತು. ತಲುಪಿದ ಮೇಲೆ ಎಷ್ಟು ಆಳಕ್ಕೆ ಇಳಿದೆವೆಂದರೆ:

ಅಲ್ಲಿ ಪ್ರತಿ ೨ ನಿಮಿಷಕ್ಕೆ ಒಂದು ಮೆಟ್ರೋ ರೈಲು ಬರುತ್ತಾಯಿತ್ತು. ನಿಲ್ದಾಣದಲ್ಲಿ ಸಮೂದಿಸುತ್ತಾಯಿದ್ದ ಸಮಯಕ್ಕೆ ಸರಿಯಾಗಿಯೇ ಬರುತ್ತಾಯಿತ್ತು. ಬಂದ ತಕ್ಷಣವೇ ಅದರ ಬಾಗಿಲು ತೆಗೆದು, ೧೫-೨೦ ಸೆಕೆಂಡಿನೊಳಗೆ ಶಬ್ದ ಮಾಡಿ, ಬಾಗಿಲನ್ನು ಮುಚ್ಚಿ, ಮುಂದೆ ಸಾಗುತ್ತಾಯಿತ್ತು. ಆ ಮೆಟ್ರೋದ ಚಾಲಕರ ಪೈಕಿ ಹೆಂಗಸರೂ ಇದ್ದರು.

ಮೆಟ್ರೋದಿಂದ ಹೊರ ಬಂದಾಗ, ಕೆಲವು ಪೋಲೀಸರು ಒಬ್ಬ ಕಳ್ಳನನ್ನು ಹಿಡಿಯುವ ದೃಶ್ಯ ನೋಡಿದೆವು. ಅಲ್ಲಿ ಏನಾಗುತ್ತಾಯಿದೆ ಎನ್ನುವಷ್ಟರಲ್ಲಿ ಕಳ್ಳನನ್ನು ಹಿಡಿದು ಕೊಂಡು ಹೋಗಿ ಬಿಟ್ಟರು. ನನ್ನ ಮೊಬೈಲಿಗೆ ಕೆಲಸವೇ ಸಿಗಲಿಲ್ಲ! ನಂತರ ಅಲ್ಲಿಯ ನಗರದ ಮತ್ತಷ್ಟು ಪ್ರವಾಸಿ ತಾಣದ ಬಗ್ಗೆ ಹೆಲ್ಸಿಂಕಿಯ ಟೂರ್ ಪುಸ್ತಕದಿಂದ ನೋಡಿದೆವು. ಹತ್ತಿರದಲ್ಲೆ ಪೋಸ್ಟ್ ಆಫೀಸ್ ಇತ್ತು. ಅಲ್ಲಿಗೆ ಹೋದೆವು. ಕೋಶಿಯು "ತನ್ನವರಿಗೆ" ಬೇಕೆಂದು ಕೆಲವು Stamps ಹಾಗು ಗ್ರೀಟಿಂಗ್ ಕಾರ್ಡ್ ಖರೀದಿಸಿದ. ನನಗೆ Stampಗಳಲ್ಲಿ ಆಸಕ್ತಿಯಿರಲಿಲ್ಲ. ನನಗೆ ಹೆಲ್ಸಿಂಕಿಗೆ ಬಂದ ಮೇಲಂತೂ ಪ್ರತಿ ಗಂಟೆಗೊಮ್ಮೆ ಉಷ್ಣಾಂಶ ನೋಡುವುದು ರೂಢಿಯಾಗಿತ್ತು. ಕಚೇರಿಗೆ ಬಂದೊಡನೆ, http://weather.yahoo.com ಕ್ಲಿಕ್ಕಿಸಿ, ತಕ್ಷಣದ ಉಷ್ಣಾಂಶ ತಿಳಿಯುತ್ತಾಯಿದ್ದೆ. ಹಾಗಾಗಿ ಅಲ್ಲೊಂದು ಉಷ್ಣಮಾಪಕ ಖರೀದಿಸೋಕೆ ಮುಂದಾದೆ. ಎರಡು ಬೇರೆ ಬೇರೆ ವಿನ್ಯಾಸದ ಉಷ್ಣಮಾಪಕವನ್ನು ಗಮನಿಸಿದೆ. ಎರಡರಲ್ಲೂ ಒಂದೇ ಸಮನಾದ ಉಷ್ಣಾಂಶವಿರಲಿಲ್ಲ! ಯಾವುದು ಸರಿ ಇವುಗಳಲ್ಲಿ ಅಂತ ತಿಳಿಯದೆ ಅದನ್ನು ಖರೀದಿಸುವ ಆಸೆ ಬಿಟ್ಟೆ!

ಮುಂದೆ ನಮ್ಮ ಪಟ್ಟಿಯಲ್ಲಿದ್ದದ್ದು "Kamppi". ಈ ಪ್ರದೇಶವು ಬಸ್ ನಿಲ್ದಾಣಕ್ಕೂ ನಮ್ಮ ಹೋಟೆಲಿಗೂ ಮಧ್ಯ ದಾರಿಯಲ್ಲಿ ಇದೆ. ಇಲ್ಲೂ ನಾವು ಏನನ್ನೂ ಖರೀದಿಸದೆ ಸಾಗುತ್ತಾಯಿದ್ದೆವು. ಆಗ ಅಲ್ಲಿ ಕೆಲವರು ವಿವಿಧ ರೀತಿಯ ಆಟಗಳನ್ನು ಆಡುತ್ತಾಯಿದ್ದರು. ಅದನ್ನು ನೋಡಿಕೊಂಡು ಕಾಲ ಕಳೆದೆವು. ನಾವು ಕಡೆಯ ಮಹಡಿ ಹತ್ತಿದಾಗ ಜನರು ಗುಂಪು ಅವರತ್ತ ಸಾಗುವಂತೆ ಮಾಡಿತು. ವಿಪರೀತ ಕಿರುಚಾಟವಿತ್ತು. ಆಗ ಅಲ್ಲಿ ಫ್ಯಾಶನ್ ಶೋ ನಡಿಯುತ್ತಾಯಿತ್ತು. ಅಂಗನೆಯರು ಬೆಕ್ಕಿನ ನಡಿಗೆಯಲ್ಲಿ ಬಂದು ಹೋಗುತ್ತಾಯಿದ್ದರು. ಅಲ್ಲಿದ್ದವರ ಕ್ಯಾಮರ ಹಾಗು ಮೊಬೈಲಿಗೆ ಕೆಲಸ ಹೆಚ್ಚಾಗಿತ್ತು. ಒಂದು ಅದ್ಭುತವಾದ ಫ್ಯಾಶನ್ ಶೋ ನೋಡಿದೆ. ನಂತರ ಅಲ್ಲಿ ಕುಣಿತವೂ ಇತ್ತು. ಎಲ್ಲದರ ವಿಡಿಯೋ ಮುಂದಿನ ಪೋಸ್ಟ್ ಗಳಲ್ಲಿ ಹಾಕುತ್ತೇನೆ. ಇದನ್ನು ಮುಗಿಸಿಕೊಂಡು ಹೊಟೆಲಿಗೆ ಬಂದು ನನ್ನ Packing ಶುರು ಮಾಡಿದೆ. ಆ ರಾತ್ರಿ "Terminator" ಸಿನೆಮಾ ನೋಡಿದ ನೆನೆಪು.

Monday, 27 October 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಪ್ರಾಜೆಕ್ಟ್ ಡೆಮೊ

ಹಿಂದಿನ ಭಾಗ ಇಲ್ಲಿದೆ

ಮೂರನೆ ವಾರದಲ್ಲಿ:
ನಾವು ಇಲ್ಲಿಗೆ ಬಂದ ಮೊದಲನೆ ಅಥವಾ ಎರಡನೆ ದಿನವೇ ನಮ್ಮ Senior Executive ನನ್ನ ಬಳಿ ಬಂದು, "ನೀನು ಕಲ್ತಿರೋ Toolನಲ್ಲಿ ಪ್ರಾಜೆಕ್ಟ್ ಹೇಗೆ execute ಮಾಡುತ್ತೀಯ? ಅದರ Demo ನ ನೀನು ಹೋಗುವ ಮೊದಲು ತೋರಿಸೋದಕ್ಕೆ ಆಗುತ್ತಾ?" ಅಂತ ಕೇಳಿದರು. ಅವರಿಗೆ ನಾನು ಸರಿ, Basic Module ತೋರಿಸ ಬಹುದು ಎಂದೆ. ಅದಕ್ಕೆ ಅವರು ನಾವು ಹೋಗುವ ಮುನ್ನ ಒಂದು ದಿನವನ್ನು ನಿಶ್ಚಯಿಸಿ ಆ ದಿನಕ್ಕೆ ನಾನು Demo ಕೊಡ ಬೇಕೆಂದು ಹೇಳಿದರು. ಇದಕ್ಕಾಗಿ ನಾನು ಪ್ರಾಜೆಕ್ಟಿನ ಬಹು ಮುಖ್ಯ ವಿಷಯಗಳನ್ನು ಚೆನ್ನಾಗಿ ಅರಿತು ಕೊಳ್ಳುತ್ತಾಯಿದ್ದೆ. ಎರಡು ವಾರಗಳ ಸತತ ಅಭ್ಯಾಸದಿಂದ ಹಾಗು Sergey, Jarkko ರವರಿಂದಲೂ ಮಾರ್ಗದರ್ಶನ ಪಡೆದು Demo ಕೊಡಲು ಸಿದ್ಧತೆ ನೆಡೆಸುತ್ತಾಯಿದ್ದೆ.

ತೆರೋ ಇಲ್ಲಿಗೆ ಬಂದ ದಿನ Execution ಹೇಗೆ ಪ್ರಾರಂಭಿಸಿ ಬೇಕು ಎಂದು KT ತೆಗೆದು ಕೊಂಡಿದ್ದರು. ಆದರೆ ನಾನು ಪ್ರಾರಂಭಿಸುವುದಕ್ಕೆ ಆಗಲಿಲ್ಲ. ಅವರ Laptopನಲ್ಲಿದ್ದ Software ಇಂದ execution ಬಗ್ಗೆ ಹೇಳಿದರು. ಆದರೆ ನನ್ನ Computerನಲ್ಲಿ ಆ Software Install ಆಗಿದ್ದರೂ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಈ ಸಮಸ್ಯೆಗೆ ಕಾರಣ ಹುಡುಕಲು ನನಗಾಗಲೀ, ತೆರೋಗಾಗಲಿ ತಿಳಿಯಲಿಲ್ಲ. ಆದ್ದರಿಂದ ತೆರೋ ಆ Tool ಕಂಪನಿಯ Support Teamಗೆ ಒಂದು Mail ಕಳುಹಿಸಿದರು. ನಮ್ಮ ದುರಾದೃಷ್ಟ, ಮಾರನೆ ದಿನವೇ ಉತ್ತರವು Suomi ಭಾಷೆಯಲ್ಲಿ ಬಂದು ಸೇರಿತು. ಅದರೊಂದಿಗೆ ಕೆಲವು Attachmentsಗಳು ಇದ್ದವು. ಅವೆನ್ನಲ್ಲಾ Download ಮಾಡಿ, ಯಾರ್ಕ್ಕೊ ಬಳಿ ಹೋದೆವು. "ಯಾರ್ಕ್ಕೊ, ಆ Mailನಲ್ಲಿ ಏನು ಬರೆದಿದ್ದಾರೆ ಎಂಬುದನ್ನು ತಿಳಿಸಿ ಎಂದು ಕೇಳಿಕೊಂಡೆವು. ಅದಕ್ಕೆ ಯಾಕ್ಕೊ ತಮ್ಮ mail ನೋಡಿ, ಇದನ್ನು ನಿಮಗೆ ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡಿ ಕಳುಹಿಸುತ್ತೇನೆ ಎಂದು ಹೇಳಿ, ಸ್ವಲ್ಪ ಸಮಯದಲ್ಲೇ ಆಂಗ್ಲ ಆವೃತ್ತಿ ನಮ್ಮ Mailboxಗೆ ಬಂದು ಸೇರುವಂತೆ ಮಾಡಿದರು. ಅದನ್ನು ಓದಿದ ಮೇಲೆ, ನನ್ನ ಸಮಸ್ಯೆಗೆ ತಕ್ಕೆ ಉತ್ತರವನ್ನು ಕಳುಹಿಸಿರುವುದು ತಿಳಿಯಿತು. ತದನಂತರ ನನ್ನ ಕೆಲಸ ಅತಿ ವೇಗದಲ್ಲಿ ಸಾಗಿತು. ನಾನು Demo ಕೊಡಲು ಸಿದ್ಧನಾಗಿದ್ದೆ.

ನಾಲ್ಕನೆ ವಾರ:
ನಾನು Demo ಕೊಡಬೇಕಾದ ದಿನ ಬಂತು. ಆ ದಿನ Tapani,( ನಮ್ಮ Sr. Executive), Jarkko, Michael Bevesdorf ಹಾಗು ಇನ್ನು ಕೆಲವರು ಇದ್ದರು. Demo ಮುಗಿದ ನಂತರ ಅವರಿಗೆ ಪ್ರಾಜೆಕ್ಟ್ ಸಾಗುತ್ತಿರುವ ಬಗ್ಗೆ ಹೆಮ್ಮೆಯಾಯಿತು.

ಆ ದಿನ ಶುಕ್ರವಾರವಾದ್ದರಿಂದ ಎಲ್ಲರೂ ಹೋಗುವ ಮುನ್ನ ನಮ್ಮ ಪ್ರಯಾಣಕ್ಕೆ ಶುಭ ಹಾರೈಸಿದರು. "Convey my regards to ಬಾಂಗಲೋರ್ Team" ಅಂತ ಹೇಳಿದರು. ಅಲ್ಲಿಯವರೆಲ್ಲಾ ನಮಗೆ ಅಲ್ಲಾದ ಅನುಭವವೇನು ಎಂಬುದಾಗಿ ಕೇಳಿ, ಅತೀ ಆತ್ಮೀಯತೆಯಿಂದ ಮಾತನಾಡಿಸಿದರು. ಯಾರ್ಕ್ಕೊ ನಮಗೆ ಮತ್ತಷ್ಟು ಪ್ರವಾಸಿ ತಾಣಗಳ ಬಗ್ಗೆ ಹೇಳಿದರು. Demo ವಿಚಾರವನ್ನು ಈಗ ಮರೆತು, ನನ್ನ ನಾಲ್ಕನೆ ವಾರದ ವಿಷಯಕ್ಕೆ ಬರುತ್ತೇನೆ.

ಇದು ಕಡೆಯ ವಾರವಾದ್ದರಿಂದ ನನಗೆ, ನನ್ನ ಗೆಳಯರಿಂದಲೂ, ನೆಂಟರಿಂದಲೂ ತಮಗಾಗಿ ಏನಾದರು ತರುವುದಕ್ಕೆ ಮೇಲಿಂದ ಮೇಲೆ ಬೇಡಿಕೆಗಳು ಬರುತ್ತಾಯಿದ್ದವು. ಒಂದು ದಿನ ನಮ್ಮ ಕಚೇರಿಯ ಸಮೀಪದಲ್ಲೇ ಇದ್ದ Verkkokauppa mall ಗೆ ಹೋದೆ. ಎಂದಿನಂತೆ ಅಲ್ಲಿ Window shopping ಮಾಡಿ, ಕೆಲವು ಪ್ರತಿಷ್ಠಿತ ಮೊಬೈಲ್ ಫೋನಿನ ಬೆಲೆಗಳನ್ನು ಬರೆದು ಕೊಂಡು ಬಂದೆ. ನನಗಾಗಿ ಬೇಕಾದ ವಸ್ತುವೆಂದರೆ ಒಂದು ಡಿಜಿಟಲ್ ಕ್ಯಾಮರ. ಅದರ ಬೆಲೆಯನ್ನೂ ಬರೆದು ಕೊಂಡು ಬಂದೆ. ನನಗೆ ಅವೆಲ್ಲಾ ತುಂಬಾ ದುಬಾರಿಯೆನಿಸಿತು. ಭಾರತದಲ್ಲಿ ಇಲ್ಲಿಗಿಂತ ಕಡಿಮೆ ದರಕ್ಕೆ ಫೋನುಗಳು ಸಿಗುತ್ತವೆಯೆಂದು ಗೊತ್ತಾಯಿತು. ನಂತರ ನನಗೆ ಕೇಳಿದವರಿಗೆ ಅದರ ಬೆಲೆಯನ್ನು ಹೇಳಿ, ಭಾರತದ ಬೆಲೆಯನ್ನೂ ಹೇಳಿದೆ. ಆಗ ಅವರೆಲ್ಲಾ ಏನೂ ತರ ಬೇಡ ಅಲ್ಲಿಂದ ಎಂದು ಸುಮ್ಮನಾದರು. ನನ್ನ ಡಿಜಿಟಲ್ ಕ್ಯಾಮರಾದ ಕನಸು ಕನಸಾಯಿತು.

ಈ ವಾರಾಂತ್ಯಕ್ಕೆ ನಾವು ಸುಮನ್ ಮನೆಗೆ ಹೋಗ ಬೇಕಿತ್ತು. ಈತ ನಮ್ಮ ಮಾಜಿ ಸಹೋದ್ಯೋಗಿ. ಅವರಿಗೆ ಭಾನುವಾರ ಬರುವುದಾಗಿ Scrap ಮೂಲಕ್ ಕೋಶಿ ಹೇಳಿದ. ಹೀಗಿರುವಾಗ ಒಂದು ಸಂಜೆ ನಾನು ಕೆಲವು Chocolates ಖರೀದಿಸಲು ಅಂಗಡಿಗೆ ಹೋದೆ. ನಾನು ಕೆಲವು ಅಂಗಡಿಗಳಲ್ಲಿ ತಿರುಗಾಡಿ, ಯಾವುದೋ ಒಂದು ಅಂಗಡಿಯಲ್ಲಿ ಕೆಲವು chocolatesಗಳನ್ನು ಖರೀದಿಸಿದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ಒಂದು ಆಟಿಕೆ (Cruise). ಅದನ್ನು ನನ್ನ ಗುಂಡ ನಂಬರ್ ೧ (ಆದಿತ್ಯ)ಗೆ ತೆಗೆದು ಕೊಂಡೆ. ಆಮೇಲೆ ಒಂದು Dianosorus ಆಟಿಕೆಯನ್ನು ನನ್ನ ಪುಟಾಣಿ ನಂ ೨ (ಸಹನ)ಗೆ ತೆಗೆದು ಕೊಂಡೆ. ನನ್ನ ಪುಟಾಣಿ ನಂ ೧ (ಶದ್ದು)ಗೆ ಮೆಚ್ಚುಗೆಯಾಗುವ Barbie ಬೊಂಬೆಗಳು ನನ್ನ ಕಣ್ಣಿಗೆ ಬೀಳಲಿಲ್ಲ. ಇಷ್ಟನ್ನೆಲ್ಲಾ ಕೊಂಡು ಕೊಂಡು ಹೊಟೆಲಿಗೆ ಬಂದೆ. ನಂತರ ನನ್ನ Packing ಕಾರ್ಯವನ್ನು ಸ್ವಲ್ಪ ಸ್ವಲ್ಪವಾಗಿಯೇ ಶುರುಮಾಡಿದೆ.

Tuesday, 21 October 2008

ಫಿನ್ ಲ್ಯಾಂಡಿಗೆ ಪ್ರವಾಸ(೧) - ಕೃಷ್ಣ ದರ್ಶನ - ಭಾರಿ ಭೋಜನ!

Moi (Hi)

ಹಿಂದಿನ ಭಾಗ ಇಲ್ಲಿದೆ

ಬಟ್ಟೆ ಒಗೆಯುವುದು:
ಈ ಭಾಗ ಎರಡನೆ ವಾರದ ಮಧ್ಯದಲ್ಲೆ ಪ್ರಾರಂಭವಾಗ ಬೇಕಿತ್ತು ಆದರೆ ಈಗ ಬರೆಯುತ್ತಿದ್ದೇನೆ. ವಾರದಲ್ಲಿ ಧರಿಸಿದ ಬಟ್ಟೆಯನ್ನು ವಾರಾಂತ್ಯದಲ್ಲಿ ಒಗೆಯುವುದೆಂದು ಅಂದುಕೊಂಡರೂ ವಾರದ ಮಧ್ಯದಲ್ಲೇ ಸಮಯವಿದ್ದರಿಂದ ಆಗಲೆ ಒಗೆಯುವುದಕ್ಕೆ ತೀರ್ಮಾನ ಮಾಡಿದೆ. ಹೊಟೆಲಿನಲ್ಲಿ ಬಟ್ಟೆ ಒಗೆಯುವು ವ್ಯವಸ್ಥೆ ಇದ್ದರೂ ಕೂಡ ನಾನೆ ಒಗೆಯುವುದು ಸರಿ ಎಂದು ಭಾವಿಸಿದ್ದೆ. ನಮ್ಮ ಮನೆಯಲ್ಲಿ ವಾರಾಂತ್ಯಗಳಲ್ಲಿ ಹಾಗು ಈಗಲೂ ಅಮ್ಮನಿಗೆ ಬಟ್ಟೆ ಒಗೆಯಲು ಸಹಾಯ ಮಾಡಿ ಅನುಭವವಿದ್ದರಿಂದ ನನಗೆ ಬಟ್ಟೆ ಒಗೆಯುವುದು ಬೇಜಾರಾಗಲಿಲ್ಲಿ. ಅದಕ್ಕಾಗಿಯೇ ಅಮ್ಮ ನನಗೊಂದು Soapನ್ನೂ ಕೂಡ ಲಗ್ಗೇಜ್ ಜೊತೆ ಇಟ್ಟಿದ್ದರು. ನಾನು ಬಹಳ ಉತ್ಸಾಹದಿಂದ ಬಚ್ಚಲು ಮನೆಗೆ ಬಟ್ಟೆ ನೆನೆಸೋಕೆ ಹೋದೆ. ಆದರೆ ಅಲ್ಲಿ ನೆನೆಸೋಕೆ ಒಂದು bucket ಕೂಡ ಇರಲಿಲ್ಲ. ಆಮೇಲೆ ತಲೆ ಉಪಯೋಗಿಸಿದೆ. Wash basin ನ ನೀರು ಹೋಗದಂತೆ ಮಾಡಿ, ಬಟ್ಟೆಯನ್ನು ಅಲ್ಲಿ ನೆನೆಸಿದೆ.
ನಾನು ಷರ್ಟ್ ಹಾಗು ಪ್ಯಾಂಟನ್ನು ನೆನೆಸಿ ಮೊದಲು ಒಗೆದೆ. ಅದೇನೋ ಸಕ್ಕತ್ತಾಗಿ ಸ್ವಚ್ಛವಾಯಿತು. ಅಲ್ಲಿಯೇ ಇದ್ದ ಒಂದು ಪೈಪಿನ ಮೇಲೆ ಒಣ ಹಾಕಿದೆ. ಆಮೇಲೆ ನನ್ನ Thermal Wearನ್ನು ನೆನೆಸಿದೆ. ಅದನ್ನು ನೆನೆಸಿ ಸ್ವಲ್ಪ ಕ್ಷಣದಲ್ಲೆ ಗಬ್ಬು ವಾಸನೆ ನನ್ನ ರೂಮನ್ನೆಲ್ಲಾ ಆವರಿಸಿತು. ನನಗಂತೂ ಇದನ್ನು ನೆನೆಸಿದ್ದೇ ತಪ್ಪಾಯಿತೇನೋ ಅನಿಸಿತು. ಈಗಲು ಆ ದುರ್ನಾತ ನನ್ನ ಮೂಗಿಗೆ ಬಂದಂತೆ ಆಗುತ್ತಿದೆ. ಆ ದುರ್ನಾತದಲ್ಲೂ ಒಮ್ಮೊಮ್ಮೆ ನನ್ನ ಕೈ ಮೂಸಿಕೊಂಡು ನೋಡಿಕೊಳ್ಳುತ್ತಾಯಿದ್ದೆ. ಈ ದುರ್ನಾತಕ್ಕೆ ಏನು ಕಾರಣವೆಂದು ಕಂಡು ಹಿಡಿಯ ಬೇಕೆಂದು ಕೊಂಡೆ. ಆದರೆ ನಾನು ವಿಜ್ಞಾನಿಯಲ್ಲವೆಂದು ಅಂತರ್ವಾಣಿ ಹೇಳಿತು. ಬಹುಶಃ ಪ್ರಾಣಿಯ ಚರ್ಮದ ವಾಸನೆ ಆಗಿರಬೇಕು.

ಈ ಬಟ್ಟೆ ಒಗೆಯೋ ಕಾರ್ಯ ೨ ವಾರ ನಡೆಯಿತಷ್ಟೆ. ಕಡೆಯ ವಾರದಂದು ಒಗೆಯುವ ಕಾರ್ಯವನ್ನು ಮುಂದೂಡಿಸಿದೆ. ಏಕೆಂದರೆ ಭಾರತಕ್ಕೆ ತರಳ ಬೇಕಿತ್ತು. ಅಲ್ಲಿ ಅಮ್ಮ ನನಗಿಂತಲೂ ಸ್ವಚ್ಛ ಮಾಡುವಾಗ ನಾನೇಕೆ ಒಗೆಯಲಿ ಎಂದು ಸುಮ್ಮನಾದೆ.

ಅಲ್ಲಿಯ ಜನರು:

ಅಲ್ಲಿಯ ಜನರಂತೂ ಸಹಾಯ ಹಸ್ತಕ್ಕೆ ಎತ್ತಿದ ಕೈ ಎನಿಸಿತು. ಯಾರನ್ನಾದರೂ ಸಹಾಯ ಬೇಡ ಬಹುದಾಗಿತ್ತು. ನಮ್ಮ ಪ್ರಾಜೆಕ್ಟ್ ಅಲ್ಲದೇ ಬೇರೊಂಡು ಪ್ರಾಜೆಕ್ಟಿನವರು ಇದ್ದರು. ನನ್ನ ಪರಿಚಯವಿಲ್ಲದಿದ್ದರೂ ಬೆಳಿಗ್ಗೆ ಬಂದ ತಕ್ಷಣ "Terve" (ತೆರ್ವೆ..) (Hello) ಎನ್ನುತ್ತಾಯಿದ್ದರು. ನನಗೆ ಅವರ ಭಾಷೆ ಗೊತ್ತಿಲ್ಲದಿದ್ದರಿಂದ, "Good Morning" ಎನ್ನುತ್ತಿದ್ದೆ.

ಈಗ ಮತ್ತೆ ನನ್ನ ವಾರ ಹಾಗು ವಾರಾಂತ್ಯದ ಬದುಕಿನ ಕಡೆಗೆ.

ಮೂರನೆ ವಾರ:
ಈ ವಾರದಲ್ಲಿ ನಮಗೆ ಇನ್ನೊಂದು Knowledge Transfer (KT) ಕಾರ್ಯಕ್ರಮ ಇತ್ತು. ಬರುವ ವ್ಯಕ್ತಿಯ ಹೆಸರು ತೆರೊ ಮಾಯ್ಸಿಯೋ (Tero Moisio). ಆತ ತಾಂಪರೆ (Tampere) ಊರಿಂದ ಬರಬೇಕಿತ್ತು. ಈ ವ್ಯಕ್ತಿಯನ್ನು ನಾನು ಮುಂದಿನ ಲೇಖನಗಳಲ್ಲೂ ಹೇಳುತ್ತೇನೆ. ಆತನೊಂದಿಗೆ ಬೆಂಗಳೂರಿಂದ ಪ್ರತಿ ವಾರದಲ್ಲೂ Status Call ಮೂಲಕ ಸಂಪರ್ಕದಲ್ಲಿದ್ದೆ. ಅದಲ್ಲದೆ MSN Messenger ಮೂಲಕವೂ ಪ್ರತಿ ದಿನ ನನ್ನ ಮೊದಲ Project ಬಗ್ಗೆ ಮಾತು ಕತೆಯಾಡುತ್ತಾಯಿದ್ದೆವು. ಈಗ ನಾನು ಹೋಗಿದ್ದು ನನ್ನ ಎರಡನೆ ಪ್ರಾಜೆಕ್ಟ್.

ತೆರೋರನ್ನು ಭೇಟಿ ಮಾಡಿ, ಅವರಿಂದ KT ಮುಗಿದ ಮೇಲೆ ಮತ್ತೆ ನನ್ನ ಕೆಲಸದ ಕಡೆ ಗಮನ ಕೊಟ್ಟೆ. ನಮ್ಮ ಇಡೀ ಕಂಪನಿಯಲ್ಲಿ ತೆರೋ ಹಾಗು ನನಗೆ ಬಿಟ್ಟು ಇನ್ನುಳಿದವರಿಗ್ಯಾರಿಗೂ ನಾವು ಉಪಯೋಗಿಸುತ್ತಾಯಿದ್ದ Tool (Software) ತಿಳಿದಿರಲಿಲ್ಲ. ಈ software ಅನ್ನು ಮರೆಯುವಂತಿಲ್ಲ. ಅದರಿಂದಲೇ ನನಗೆ ಫಿನ್ ಲ್ಯಾಂಡಿಗೆ ಬರೋ ಯೋಗ ಸಿಕ್ಕಿತೆಂದು ಭಾವಿಸಿದ್ದೇನೆ. ಇದನ್ನು ಅತಿಶಯೋಕ್ತಿಗೆ ಹೇಳುತ್ತಿಲ್ಲ. ನನಗೆ ಏನಾದರು ಸಂಶಯ ಬಂದರೆ ಅದನ್ನು ಪೂರ್ಣವಾಗಿ ನಾನೇ ನಿಭಾಯಿಸಬೇಕು. ತೆರೊ ಇದ್ದರಾದರೂ ಅವರಿಗೆ Coding ಹೆಚ್ಚಾಗಿ ಬರುತ್ತಿರಲಿಲ್ಲ. ಮೇಲ್ನೋಟದ ವಿಚಾರಗಳನ್ನು ತುಂಬಾ ಸ್ಪಷ್ಟವಾಗಿ ಹೇಳುತ್ತಾಯಿದ್ದರು. ಅದನ್ನು ನಮ್ಮ projectಗೆ ಹೊಂದುವಂತೆ ಮಾಡಬೇಕಾದ ದೊಡ್ಡ ಜವಾಬ್ದಾರಿ ನನ್ನ ಮೇಲೆ ಇತ್ತು.

ಪ್ರತಿ ದಿನ ನನ್ನ ಅಪ್ಪ ಹಾಗು ಅಮ್ಮ ಕೃಷ್ಟನ ದೇವಸ್ಥಾನಕ್ಕೆ ಹೋಗು ಅಂತ ಹೇಳುತ್ತಲೇ ಇದ್ದರು. ಹಾಗಾಗಿ ಒಂದು ದಿನ ಕೆಲಸವಾದ ಮೇಲೆ ಒಮ್ಮೆ ನೋಡಿ ಕೊಂಡು ಬರೋಣ. ಶನಿವಾರ ಹಾಗು ಭಾನುವಾರ ಪ್ರಾರ್ಥನೆ ಹಾಗು ಭೋಜನ ಮಾಡೋಣ ಅಂತ ಯೋಚಿಸಿ, ದೇವಸ್ಥಾನವಿದ್ದ ರಸ್ತೆಯ ಹೆಸರನ್ನು (Ruoholahdenkatu) ಒಂದು ಹಾಳೆಯ ಮೇಲೆ ಬರೆದು ಕೊಂಡು Google Maps ತೋರಿಸಿದ ದಾರಿಯಲ್ಲೇ ನಡೆದೆ. ಅಲ್ಲಿ ರಸ್ತೆಯ ಹೆಸರು ಎಲ್ಲಿ ಹುಡುಕಿದರೂ ನನ್ನ ಕಣ್ಣಿಗೆ ಬೀಳಲೇಯಿಲ್ಲ. ಹಾಗಾಗಿ ಅಲ್ಲಿಂದ ಒಬ್ಬಾಕೆಯ ಬಳಿ ದಾರಿ ಕೇಳಲು ಹೋದೆ. ಆಕೆ ಆಗಲೇ ತನ್ನ ಕಾರನ್ನು ಏರುತ್ತಾಯಿದ್ದಳು. Hi. "Where is this Road?" ಅಂತ ಕೇಳಿದೆ. ಆಗ ಆಕೆ ಕಾರನ್ನು ಏರದೇ.. ಸ್ವಲ್ಪ ನಡೆದು ಬಂದು ಆ ರಸ್ತೆಯ ಕಡೆ ಕೈ ತೋರಿಸುತ್ತಾ, "Here it is" ಎಂದಳು. ಅವಳಿಗೆ ಧನ್ಯವಾದ ಹೇಳಿ, ಕೃಷ್ಣನ ಹುಡುಕುವ ಪ್ರಯತ್ನ ಮಾಡಿದೆ. ಆ ರಸ್ತೆಯಲ್ಲಿ ಹಾಗೆ ಸಾಗಿ ಬಂದು Google ನಮೂದಿಸಿರುವ ನಂಬರನ್ನು ಹುಡುಕಿದೆ. ಅಲ್ಲಿ ದೊಡ್ಡ ಗೇಟೊಂದಿತ್ತು. ತಲೆ ಮೇಲೆತ್ತಿ ನೋಡಿದರೆ ಗೋಪುರವೇ ಇಲ್ಲ! ನನ್ನ ಮನಸ್ಸಿನಲ್ಲಿ ದೇವಸ್ಥಾನ ಭಾರತದಲ್ಲಿಯ ಹಾಗೆಯೇ ಒಂದು ಗೋಪುರವೆಲ್ಲಾ ಇರುತ್ತೆ ಅಂತ ತಿಳಿದಿದ್ದೆ. ಇಲ್ಲಿ ಹಾಗಿರಲಿಲ್ಲ. ಆ ಗೇಟಿಂದ ಇಣುಕಿ ನೋಡಿದೆ. ಒಂದು ಮೈದಾನದ ರೀತಿ ಇತ್ತು. ಅಲ್ಲಿ ದೇವಸ್ಥಾನವಿರ ಬಹುದು ಎಂದು ತೀರ್ಮಾನಿಸಿ, ಈ ವಾರಾಂತ್ಯ ಕಾರ್ಯಕ್ರಮ ಇಲ್ಲೇ ಅಂತ ಅಂದುಕೊಂಡೆ.

ಈ ಮಧ್ಯೆ ನಮ್ಮ ಕಂಪನಿಯ ಮಾಜಿ ನೌಕರರಿಬ್ಬರು Helsinki ಹತ್ತಿರಕ್ಕೆ ಇರುವ ಊರು Espoo ನಲ್ಲಿ ಒಂದು ಕಂಪನಿಗೆ ದುಡಿಯುತ್ತಾಯಿದ್ದರು. ನನ್ನ ಸಹೋದ್ಯೋಗಿ ಅವರೊಂದಿಗೆ ಆರ್ಕುಟ್ ಮೂಲಕ ಸಂಪರ್ಕದಲ್ಲಿದ್ದ. ಅವರು ನಮ್ಮಿಬ್ಬರನ್ನು ಒಂದು ವಾರಾಂತ್ಯಕ್ಕೆ ಅವರ ಮನೆಗೆ ಬರಲು ಆಮಂತ್ರಿಸಿದರು. ಈ ವಿಷಯವನ್ನು ನನಗೆ ಹೇಳಿದ. ನಾನು ಒಪ್ಪಿದೆ. ಹಾಗಾಗಿ ಈ ವಾರಾಂತ್ಯಕ್ಕೆ ಅವರಲ್ಲಿ ಒಬ್ಬನ ಮನೆಯಲ್ಲಿ ಕಳೆಯುವುದು ,ಮುಂದಿನ ವಾರ ಇನ್ನೊಬ್ಬನ ಮನೆಯಲ್ಲಿ ಎಂದು ತೀರ್ಮಾನವಾಯಿತು.


ಶನಿವಾರ ಬಂತು. ನಾವಿಬ್ಬರೂ ಹೊರಡಲು ತಯಾರಾಗಿದ್ದೆವು. ಆಗ ನನ್ನ ಸಹೋದ್ಯೋಗಿ, Espooನಲ್ಲಿದ್ದ ಗಿರೀಶ್ ನ ಜೊತೆ ಚಾಟ್ ಮಾಡಿ, ಅವನಿದ್ದ ಊರನ್ನು ತಲುಪುವುದು ಹೇಗೆಂದು ಪ್ರಶ್ನಿಸಿದನು. ಅವನು ಒಂದು ಬಸ್ಸಿನ ನಂಬರ್ ಹೇಳಿದ. ಹಾಗೆ ಒಂದು ಬಸ ವೇಳಾ ಪಟ್ಟಿಯ Linkನ್ನೂ ಕಳುಹಿಸಿದ. ನಾವು ಆ ಲಿಂಕಿಂದ್ದ ನಮಗೆ ಹತ್ತಿರದ ನಿಲ್ದಾಣಕ್ಕೆ ಎಷ್ಟು ಸಮಯಕ್ಕೆ ಬರುತ್ತದೆ ಎಂಬ ವಿಚಾರ ತಿಳಿದೆವು. ಗಿರೀಶ್ ನಮಗೆ ಹೇಳಿದ್ದು Espoo bus stop ಎದುರುಗಡೆ ದೊಡ್ದದೊಂದು ಮಾಲ್ ಇದೆ. ಅಲ್ಲಿ ಒಂದು ಅಂಗಡಿಯ ಬಳಿ ಬನ್ನಿ. ಅಲ್ಲಿಗೆ ಬರುತ್ತೇನೆ.

ನಾವಿಬ್ಬರು ಬಸ್ಸಿಗೆ ಕಾದೆವು. ಹೇಳಿದ ಸಮಯಕ್ಕೆ ಸರಿಯಾಗಿ ಬಸ್ ಬಂದಿತು. ನಾವಿಬ್ಬರೂ ಹತ್ತಿದೆವು. ನಂತರ Driverಗೆ ಆ ಮಾಲಿನ ಹೆಸರನ್ನು ಹೇಳಿ ಟಿಕೆಟ್ ಪಡೆದು, ಆ ಮಾಲು ಬಂದೊಡನೆ ನಮಗೆ ತಿಳಿಸಿ ಎಂದು ಕೇಳಿಕೊಂಡೆವು. ಟಿಕೆಟಿನ ಬೆಲೆ ೩ Euro ೬೦ Cents ( ಹೆಚ್ಚು ಕಡಿಮೆ.. ೨೧೫ ರೂಗಳು).ಇಲ್ಲೂ ಅಷ್ಟೇ ಟಿಕೆಟಿನ ಅವಧಿ, ೧ ಗಂಟೆ ೩೦ ನಿಮಿಷಗಳು. ನಂತರ ಮೊದಲ ಆಸನದಲ್ಲೇ ಕುಳಿತೆವು. ಭಾರತದ ಹಾಗೆ ಅದು ಮಹಿಳೆಯರಿಗಾಗೇ ಮೀಸಲ್ಪಟ್ಟ ಆಸನವಲ್ಲ! ಬಸ್ಸು ಹಾಗೆ ಸಾಗಿ, ೧೫-೨೦ ನಿಮಿಷಗಳಲ್ಲಿ ನಾವು ಇಳಿಯ ಬೇಕಿದ್ದ ಮಾಲಿನ ಸಮೀಪಕ್ಕೆ ಬಂದಿತು. ಡ್ರೈವರ್ ನಮ್ಮನು ಇಳಿಯಲು ಸೂಚಿಸಿದನು. ಅವನಿಗೆ ಒಂದು ಕಿರು ನಗೆ ಬೀರಿ, ಧನ್ಯವಾದ ಅರ್ಪಿಸಿ ಸಾಗಿದೆವು. ಮಾಲಿನ ಒಳಗೆ ಹೋಗಿ, ಎಲ್ಲಾ ಅಂಗಡಿಗಳಲ್ಲೂ Window Shopping ಮಾಡಿ, ಅವನು ಹೇಳಿದ ಅಂಗಡಿ ಮುಂದೆ ಬಂದೆವು. ಆದರೆ ಅವನು ಅಲ್ಲಿಗೆ ಇನ್ನು ಬಂದಿರಲಿಲ್ಲ. ಸ್ವಲ್ಪ ಸಮಯ ಕಳೆದೆವು. ನಂತರ ಬಂದ ಪುಣ್ಯಾತ್ಮ! ಬಂದೊಡನೆ ಕ್ಷೇಮ ಸಮಾಚಾರ... ಫಿನ್ ಲ್ಯಾಂಡಿನ ಚಳಿ ಬಗ್ಗೆ ಪ್ರಶ್ನಿಸಿದ. ಎಲ್ಲ ವಿಚಾರಗಳು ಆದ ಮೇಲೆ, ಅಂಗಡಿಯೊಂದರಲ್ಲಿ ಕೆಲವು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ. ಎಲ್ಲಾರು ಅವನ ಮನೆಗೆ ಹೋದೆವು. ಅವನೊಂದಿಗೆ ಇನ್ನು ೬-೭ ಜನ ಹುಡುಗರು ವಾಸವಾಗಿದ್ದರು. ಅದೇ ಮನೆಯಲ್ಲಿ ನಮ್ಮ ಇನ್ನೊಬ್ಬ ಮಾಜಿ ಸಹೋದ್ಯಾಗಿಯೂ ಇದ್ದ. ಆದರೆ ಅವನು ಬೇರೇ ಮನೆಯಲ್ಲಿದ್ದ. ವಾರಾಂತ್ಯಕ್ಕೆ ಮಾತ್ರ ಇಲ್ಲಿಗೆ ಬಂದಿದ್ದ. ಅಲ್ಲಿ ಎಲ್ಲರ ಪರಿಚಯವಾಯ್ತು. ನಮ್ಮ ಮನೆಯಲ್ಲಿ ಊದುಬತ್ತಿಯ ವಾಸನೆ ಮಾತ್ರ ಸೇವಿಸಿದ್ದ ನನಗೆ ಸ್ವಲ್ಪ ಹೊತ್ತಿನಲ್ಲೇ ಆ ಮನೆಯಲ್ಲಿ ಧೂಮಪಾನದ ವಾಸನೆ ಸೇವಿಸ ಬೇಕಾಯಿತು. ನನ್ನ ಸಹೋದ್ಯಾಗಿ ಧೂಮಪಾನ ಮಾಡುತ್ತಾಯಿರಲಿಲ್ಲ. ಸದ್ಯ ನನ್ನ ಜೊತೆ ಅವನೊಬ್ಬನಾದರೂ ಇದ್ದಾನಲ್ಲ. ಅಷ್ಟೇ ಸಮಾಧಾನ. ಮಿಕ್ಕವರೆಲ್ಲಾ ಹೊಗೆ ಬಂಡಿ ಬಿಡುತ್ತಾಯಿದ್ದರು.

ಸ್ವಲ್ಪ ಸಮಯದಲ್ಲೆ ನಿಮ್ಮ ತಿಂಡಿ ಆಗಿದೆಯೇ? ಇಲ್ಲದಿದ್ದರೆ ಇಲ್ಲಿ ತಿನ್ನಿ ಅಂತ ಹೇಳಿದರು. ನಾವು ಅದಕ್ಕೆ ಉತ್ತರವಾಗಿ, ತಿಂಡಿ ಆಗಿದೆ ಅಂದೆವು. ನಂತರ ಬಾಳೆಹಣ್ಣಿನ Milk shake ಮಾಡುತ್ತೇವೆ ಎಂದು ಹೇಳಿ, ಮಾಡಿದರು. ಅದನ್ನು ಕುಡಿದ ಮೇಲೆ ಹೀಗೆ ಮಾತು ಕಥೆ ಆಡುತ್ತಾಯಿದ್ದೆವು. ಚಲನ ಚಿತ್ರಕ್ಕೆ ಯಾವ ರೀತಿ ಹಿನ್ನೆಲೆ ಸಂಗೀತ ಇರುತ್ತದೆಯೋ ಅದೇ ರೀತಿ ಇಲ್ಲಿ ಹಿನ್ನೆಲೆ ವಾಸನೆ! ಆಮೇಲೆ ಯಾವುದೋ ಒಂದು ಸಿನೆಮಾ ಹಾಕಿ ಎಲ್ಲರೂ ನೋಡುತ್ತಾಯಿದ್ದರು. ನಾನು ಸೋಫಾದ ಮೇಲೆ ಮಲಗಿಕೊಂಡು ನೋಡುತ್ತಾಯಿದ್ದೆ. ಗೊತ್ತಿಲ್ಲದೆ ಸುಮಾರು ೧ ಗಂಟೆಗಳ ಕಾಲ ನಿದ್ರಿಸಿದೆ. ಈ ಒಂದು ಗಂಟೆಯೇ ನನ್ನ ಮನಸ್ಸು ಸರಿಯಿದ್ದ ಸಮಯವೆಂದು ಈಗ ತಿಳಿಯಿತು.

ಆ ಮನೆಯಲ್ಲಿದ್ದವರು ಯಾರೂ ನನಗೆ ಹೊಂದುವಂತವರಾಗಿರಲಿಲ್ಲ. ಒಂದು ವಾಕ್ಯ ಮಾತಾಡಿದರೆ ಅದರಲ್ಲಿ ಮುಕ್ಕಾಲು ಭಾಗದಷ್ಟು ಅವಾಚ್ಯ ಪದಗಳೇ! ನನಗೆ ಕೇಳೋಕೆ ಅಸಹ್ಯವೆನಿಸಿತು. ಸಂಜೆ ಹೊರಡುತ್ತೇನಲ್ಲ ಹೇಗೋ ಸಹಿಸಿಕೊಳ್ಳೋಣವೆಂದು ಸುಮ್ಮನಿದ್ದೆ.
ಈ ಮನೆಯವರ ಪೈಕಿ ಒಬ್ಬ ಎಲ್ಲಿಂದಲೋ ಇಲ್ಲಿಗೆ ಬರುವವನಿದ್ದ. ಆಗೆ ಅವನಿಗೆ ಇಲ್ಲಿಂದ ಒಂದು ಕರೆ ಹೋಯಿತು. ೧೨ ಬಾಟಲ್ಲುಗಳ ಒಂದು ಕೇಸನ್ನು ತೆಗೆದು ಕೊಂಡು ಬಾ ಅಂತ. ಅವನು ಇವರ ಮಾತಿನಂತೆ ತಂದು ಬಿಟ್ಟು.

Milk Shake ಹಾಗು ಇನ್ನಿತರ ಆಹಾರವನ್ನು ಸೇವಿಸಿದ್ದರಿಂದ ನನಗೆ ಮಧ್ಯಾಹ್ನ ಊಟವನ್ನೇ ಮಾಡಲಿಲ್ಲ. ಸಂಜೆಯಾದ ಮೇಲೆ ಹೊರಡಲು ತಯಾರಿ ನಡೆಸುವಾಗ ಅವರೆಲ್ಲಾ ಬಂದು ಇವತ್ತು ಇಲ್ಲೇ ಇದ್ದು ಬಿಡಿ. Beachಗೆ ಹೋಗೋಣ. Beach ಮೇಲೆ walking ಮಾಡೋಣ ಅಂದರು. ಹೇಗೂ ನೀರೆಲ್ಲಾ ಗೆಡ್ಡೆಯಾಗಿತ್ತು. ನನಗೂ ಹೊಸ ಅನುಭವವಾಗುತ್ತೆ ಅಂತ ಒಪ್ಪಿದೆ. ಆ ಎಲ್ಲಾ ಬಾಟಲ್ಲುಗಳ ಜೊತೆಗೆ ನಾನು ಕುಡಿಯುವ ಬಾಟಲ್ಲು (Orange juice, apple juice) ಎಲ್ಲವನ್ನು ಹೊತ್ತು ಮನೆಯಿಂದ Beachನ ಅತ್ತ ಸಾಗಿದೆವು.

Beachಗೆ ಹೋಗಿ, ಅದರ ಮೇಲೆಲ್ಲಾ ಓಡಾಗಿ, ಅವರೆಲ್ಲರೂ ತಮ್ಮ ತಮ್ಮ ಬಾಟಲ್ಲುಗಳನ್ನು ಮುಗಿಸಿದರು. ನಾನೂ ಕೂಡ ನನ್ನ ಬಾಟಲ್ಲನ್ನು ಮುಗಿಸಿದೆ. ಮನೆಗೆ ಬಾಟಲ್ಲುಗಳನ್ನು ತಂದ ವ್ಯಕ್ತಿಯೇ ನನ್ನೊಂದಿಗೆ ಆರೆಂಜ್ ಜ್ಯೂಸ್, ಆಪಲ್ ಜ್ಯೂಸ್ ಕುಡಿದ. ಸಮುದ್ರದ ಗೆಡ್ಡೆಯಲ್ಲಿ ಒಂದು ರಂಧ್ರ ಮಾಡಿ ಕೇಲಗಿದ್ದ ನೀರನ್ನು ಬಾಟಲಿನೊಳಗೆ ತುಂಬಿ ಆಟವಾಡುತ್ತಾ, ಒಂದು ಖಾಲಿ ಬಾಟಲನ್ನು ಒಬ್ಬ ಸಮುದ್ರದ ಪಾಲು ಮಾಡಿದ. ಆಗ ಇನ್ನೊಬ್ಬ ಬೇಸರ ಪಟ್ಟು, ಎಂಥ ಅನ್ಯಾಯದ ಕೆಲಸ ಮಾಡಿದೆಯಲ್ಲೋ ಅಂತ ಹೇಳಿದ. ಅಲ್ಲಿ ಈ ರೀತಿ ಕುಡಿದ ಬಾಟಲ್ಲನ್ನು ಅಂಗಡಿಯವರಿಗೆ ಹಿಂದಿರುಗಿಸಿದರೆ ೧ ಖಾಲಿ ಬಾಟಲ್ಲಿಗೆ ೧೦ Cents ಕೊಡುತ್ತಾರೆಂಬ ವಿಷಯ ತಿಳಿಯಿತು. ಭಾರತದಲ್ಲಿ ಖಾಲಿ ಬಾಟಲ್ಲನ್ನು ಅಂಗಡಿಯವರು ತೆಗೆದು ಕೊಳ್ಳುತ್ತಾರೋ ಇಲ್ಲವೋ ಎಂಬ ವಿಷಯ ನನಗೆ ತಿಳಿಯದು. ಆದರೂ "ಖಾಲಿ ಬಾಟಲ್ಲಿ... "ಅಂತ ಕೂಗಿ ಕೊಂಡು ಮನೆ ಬಾಗಿಲಿಗೆ ಬರೋರು ಇದ್ದಾರೆ.

ಇನ್ನೇನು ಸೂರ್ಯ ಭೂಮಿಗೆ ಟಾಟಾ ಹೋಳೋ ಸಮಯ ಬಂತು. ನಾವೆಲ್ಲಾ ಮನೆ ಸೇರ ಬೇಕು ಎಂದು ಅವಸರವಸರದಲ್ಲೇ ಸಾಗಿ ಮನೆಗೆ ಬಂದೆವು. ಆನಂತರ ಅವರಲ್ಲಿ ಒಂದಿಬ್ಬರು ಸೇರಿ, ಅಡುಗೆ ಮಾಡಿದರು. ದಾಲ್ ಹಾಗು ಅನ್ನ ಮಾಡಿದರು. ಬೇಗ ತಿಂದು ಯಾವುದೋ ಒಂದು ರೂಮಿನಲ್ಲಿ ಸಿಕ್ಕಿದ್ದನ್ನು ಹಾಸಿಕೊಂಡಿ, ದಿಂಬಿಲ್ಲದೆ ದುಃಖ ತುಂಬಿಕೊಂಡು, ಸಿಕ್ಕಿದ್ದನ್ನು ಹೊದ್ದು ನಿದ್ದೆ ಮಾಡಿದೆ. ಸ್ವಲ್ಪ ಹೊತ್ತಿನಲ್ಲೇ ಯಾರೋ ಬಂದು "Jay.. Jay" ಅಂತ ಕೂಗಿದರು. ನಾನು ಎಚ್ಚರವಾಗಿದ್ದರೂ ಅವರಿಗೆ ಉತ್ತರ ಕೊಡಲಿಲ್ಲ. ಸುಮ್ಮನಿದ್ದೆ. ಮರು ದಿನ ಬೇಗನೇ ಎಚ್ಚರವಾಯಿತು. ಸ್ನಾನವನ್ನು ಮಾಡಿ ಕೂತು ಬಿಟ್ಟೆ.

ಇಷೆಲ್ಲಾ ಆಗುವಾಗಲೇ ಫಿನ್ ಲ್ಯಾಂಡಿಗೆ ಬರುವ ಮುನ್ನ ನಡೆದ ಒಂದು ಕಹಿ ಘಟನೆಗೆ ಕವನ ರೂಪ ಕೊಟ್ಟು ಬರೆಯುತ್ತಿದ್ದ ದುರಾದೃಷ್ಟ ಪೂರ್ತಿಯಾಯಿತು. ಈ ಮಧ್ಯೆ ಅವರಲ್ಲಿ ಒಬ್ಬ ಕ್ಯಾರೆಟ್ ಹಲ್ವಾ ಮಾಡುವುದಾಗಿ ಹೇಳಿದ. ನಂತರ ಅವರ ಮನೆಗೆ ಕರೆ ಮಾಡಿ ಅದರ ವಿಧಾನವನ್ನು ಕೇಳಿ ನಮಗೆಲ್ಲಾ ಸಿಹಿ ಸಿಹಿಯಾದ ಹಲ್ವಾ ತಯಾರಿಸಿದ. ಕಹಿಯ ಜೊತೆ ಸಿಹಿ ಸೇರಿತು. ಅಲ್ಲಿ ಊಟವಾದ ಮೇಲೆ ನಾನು ಹಾಗು ಕೋಶಿ ಹೊಟೆಲಿನ ಕಡೆ ಬಂದೆವು. ಆಮೇಲೆ ಕೃಷ್ಣನ ದೇವಾಲಯಕ್ಕೆ ಹೋಗಬೇಕೆಂದು ತೀರ್ಮಾನಿಸಿದೆ.

ಕೋಶಿಯ ರೂಮಿಗೆ ಹೋಗಿ, ಈ ರಾತ್ರಿ ನಾನು ಊಟಕ್ಕೆ ಇರೋದಿಲ್ಲ. ನೀನೆ ಮಾಡಿಕೊ. ನಾನು ಬೆಳಿಗ್ಗೆ ಸಿಗುತ್ತೇನೆ ಎಂದು ಹೇಳಿ ಕೃಷ್ಣನ ದೇವಾಲಯಕ್ಕೆ ಹೋದೆ. ಆ ಗೇಟನ್ನು ತೆಗೆಯಲು ಪ್ರಯತ್ನ ಪಟ್ಟೆ. ಆದರೆ ಆಗಲಿಲ್ಲ. ಇನ್ನೊಮ್ಮೆ ಪ್ರಯತ್ನ ಪಟ್ಟೆ ಆದರೂ ಆಗಲಿಲ್ಲ. ಒಂದು ಕ್ಷಣ ಏನೂ ತೋಚದಂತಾಯಿತು. ನಂತರ ನನ್ನ ಸಹಾಯಕ್ಕೆ ಬಂದದ್ದು ನಾನು ನೋಡಿದ ಸಿನಿಮಾಗಳು! ಯಾರಾದರು ಒಂದು ವೇಳೆ ಆ ಕಡೆಯಿಂದ ಬಂದರೆ ಅಥವಾ ಈ ಕಡೆಯಿಂದ ಹೋದರೆ, ಬಾಗಿಲು ಮುಚ್ಚುವುದರೊಳಗೆ ಒಳಗೆ ಹೋಗಿ ಬಿಡೋಣ ಅಂತ ಅಂದುಕೊಂಡೆ. ಬಾಗಿಲ ಬಳಿ ಇರುವುದು ಬೇಡವೆಂದು ಸ್ವಲ್ಪ ದೂರದಲ್ಲಿ ನಿಂತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ .. ಕೂಗಿದರು ಧ್ವನಿ ಕೇಳಲಿಲ್ಲವೆ ?" ಅಂತ ಹಾಡುತ್ತಾಯಿದ್ದೆನು. ಕನಕದಾಸರು ನನಗೂ ಅನ್ವಯವಾಗುವಂತೆ ಶತಮಾನಗಳ ಹಿಂದೆಯೇ ಬರೆದಿದ್ದರು. ಕನಕದಾಸರು ಮೈ ಮರೆತು ಹಾಡಿದ ಈ ಹಾಡನ್ನು ನಾನು ಶ್ರುತಿ, ತಾಳ, ರಾಗ, ಭಾವವನ್ನೆಲ್ಲಾ ಮರೆತು ಹಾಡಿದೆ. ಕೊನೆಯ ಸಾಲುಗಳನ್ನು ಹಾಡಿ, "ಬಾಗಿಲನು ತೆರೆದು.. ಟಣ್ ಟಣ್ ಟಣ್ಣ್" ಅಂತ ಹಿನ್ನೆಲೆ ಸಂಗೀತ ಕೊಡುತ್ತಾಯಿದ್ದೆ, ತಕ್ಷಣವೇ ಕೃಷ್ಣನ ಅನುಗ್ರಹವೆಂಬಂತೆ ಆ ಕಡೆಯಿಂದ ಯಾರೋ ವ್ಯಕ್ತಿಯೊಬ್ಬ ಬಂದನು. ಆತ ಬಾಗಿಲನ್ನು ತೆಗೆದು ಹೊರಗಡೆ ಸಾಗಿದೆ. ನಾನು ರಸ್ತೆಯ ಆ ಭಾಗಿದಿಂದ ಸಂತೋಷದಿಂದ ಓಡಿ ಬಂದೆ. ಅಷ್ಟರಲ್ಲಿ ಬಾಗಿಲು ಮುಚ್ಚಿ ಹೋಯಿತು. ಒಟ್ಟು ಸುಮಾರು ೧೫ ನಿಮಿಷಗಳ ಕಾಲ ಅಲ್ಲೇ ಇದ್ದೆ. ಆದರೂ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿ ಯಾರೂ ನನ್ನ ಕಣ್ಣಿಗೆ ಕಾಣಿಸಲಿಲ್ಲ ಸಹಾಯ ಬೇಡೋಣವೆಂದರೆ. ಆಮೇಲೆ ಯಾಕೋ ದೇವರು ನನ್ನನ್ನು ಬಲಗಡೆಗೆ ನೋಡಲು ಹೇಳಿದ ಅನ್ನಿಸುತ್ತೆ. ಅಲ್ಲಿ ೪ Buttons ಇದ್ದವು.

೧. ******
೨ *******
೩ Krishna Temple
೪. ******

ಆಗ ನಾನು ಮೂರನೆ button ಒತ್ತಿ ನಂತರ ಬಾಗಿಲು ತೆಗೆಯಲು ಪ್ರಯತ್ನ ಪಟ್ಟೆ. ಕೃಷ್ಣನ ದಯೆ, ಬಾಗಿಲು ತೆಗೆಯಿತು. ಈಗ ಒಳಗೆ ಹೋಗಿ, ಮೈದಾನ ಹತ್ತಿರ ನೋಡಿದರೆ ದೇವಸ್ಥಾನವೇ ಇಲ್ಲ. ಅಲ್ಲಿ ಮೂರನೆ button ಒತ್ತಿದ್ದರಿಂದ, ಮೂರನೆ ಮಹಡಿಗೆ ಹೋಗಿ ನೋಡೋಣವೆಂದು ಮೂರನೆ ಮಹಡಿಗೆ ಹೋದೆ. ಅಲ್ಲಿ ಆಚೆ ಕಡೆ ಅನೇಕ ಪಾದರಕ್ಷೆಗಳು ಇದ್ದವು. ನನ್ನ shoes ಕಳಚಿ, ಒಳಗೆ ಹೋದೆ. ಅಲ್ಲಿ ಸಿಕ್ಕ ಫಿನ್ ಲ್ಯಾಂಡಿನ ಪ್ರಜೆ ನನಗೆ ಹೇಳಿದ ಮಾತು "ನಮಸ್ಕಾರ್!" ಆಗ ಸ್ವಲ್ಪ ಆಶ್ಚರ್ಯವಾಯಿತು. ನಾನೂ "ನಮಸ್ಕರಾ" ಅಂತ ಹೇಳಿದೆ. ಆತ ಭಾರತದ ಉಡುಪುಗಳಾದ ಪಂಚೆ, ಹಾಗು ಜುಬ್ಬದಲ್ಲಿದ್ದೆ. ಹಣೆಯ ಮೇಲೆ ISKCON ಮುದ್ರೆಯಿತ್ತು. ಆಮೇಲೆ ದೇವಾಲಯದ ಒಳಗೆ ಪ್ರವೇಶ ಮಾಡಿದೆ. ಅಲ್ಲಿ ಕೃಷ್ಣನ ವಿಗ್ರಹಕ್ಕೆ ನಮಿಸಿ, ಕುಳಿತುಕೊಂಡೆ. ದೇವಾಲಯಕ್ಕೆ ಸಂಬಂಧ ಪಟ್ಟ ಅಲ್ಲಿಯ ಪ್ರಜೆಯೊಬ್ಬ ಭಗವದ್ಗೀತೆಯ ಒಂದು ಅಧ್ಯಾಯದ ವಿಚಾರ ಮಾತಾಡುತ್ತಾಯಿದ್ದರು. ಅವರು ಅದನ್ನು ಸಂಸ್ಕೃತದಲ್ಲಿ ಹಾಗು ಆಂಗ್ಲ ಭಾಷೆಯಲ್ಲಿ ಹೇಳುತ್ತಾಯಿದ್ದರು. ಇನ್ನೊಬ್ಬರು Suomi ಭಾಷೆಯಲ್ಲಿ ಅದರ ಅರ್ಥವನ್ನು ಹೇಳುತ್ತಾಯಿದ್ದರು. ಅಲ್ಲಿ ನೆರೆದಿದ್ದವರು ಸುಮಾರು ೨೫ - ೩೦ ಮಂದಿ. ಅವರಲ್ಲಿ ಭಾರತೀಯರೂ ಹಾಗು ಅಲ್ಲಿಯ ಜನರೂ ಸೇರಿದ್ದರು. ದೇವಾಲಯಕ್ಕೆ ಸಂಬಂಧ ಪಟ್ಟವರು ಬ್ರಾಹ್ಮಣರಾಗಿ ಮತಾಂತರ ಗೊಂಡವರಂತೆ ಕಾಣಿಸುತ್ತಿದ್ದರು. ಅಲ್ಲಿಯ ಜನತೆಗೆ ನಮ್ಮ ಭಗವದೀತೆಯ ಮೇಲೆ ಅಪಾರಾದ ಗೌರವ ಇದೆಯೆಂಬುದು ತಿಳಿಯಿತು. ಅಲ್ಲಿಯ ಜನರೆಲ್ಲರೂ ಗೀತೆಯ ಚೆರ್ಚೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. ಅಲ್ಲಿಯ ಹೆಂಗಸರು ಸೀರೆಯನ್ನು ಉಡುವುದನ್ನು ರೂಢಿ ಮಾಡಿಕೊಂಡಿದ್ದರು. ಭಾರತದ ಕೆಲವು ಮಾನಿನಿಯರು ಸೀರೆಯಲ್ಲಿರಲಿಲ್ಲ! ಪಾಶ್ಚಾತ್ಯ ದೇಶದವರು ನಮ್ಮ ಸಂಸ್ಕೃತಿ ಅಳವಡಿಸಿಕೊಂಡರೆ ಇಲ್ಲಿಯವರು ಅವರ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಇದೆಲ್ಲಾ ಆದ ಮೇಲೆ ಪ್ರಸಾದ ವಿನಿಯೋಗವೆಂದು, ಎಲ್ಲರಿಗೂ ತಟ್ಟೆ ಹಾಕಿದರು. ಮಾಡಿದ ಅಡುಗೆಯನ್ನು ಪ್ರತಿಯೊಬ್ಬರಿಗೂ ಚೆನ್ನಾಗಿ ಬಡಿಸಿದರು. ನಾನು ಅಲ್ಲಿ ತಿಂದ ತಿನಿಸು, ಅನ್ನ ಹಾಗು ಸೊಪ್ಪಿನ ಹುಳಿ ಜೊತೆಗೆ ಯಾವುದೋ ಒಂದು ಪಲ್ಯ. ಇದಾದ ಮೇಲೆ ಹಲ್ವಾ ಅನ್ನೋ ಹೆಸರಿನಲ್ಲಿ ಒಂದು ತಿನಿಸನ್ನು ಬಡಿಸಿದರು. ಅದನ್ನು ನೋಡಿದಾಗಲೆ ತಿಳಿಯಿತು ಅದು ಸಜ್ಜಿಗೆ ಅಂತ. (ತಿಂಡಿ ಒಂದೇ ನಾಮ ಹಲವು). ನಾನು ದೇವರ ಸನ್ನಿಧಿಯಲ್ಲಿ ಆ ಸಂಜೆ ಕಳೆದೆನು. ಆದರೆ ಹೀಗೆ apartment ನಲ್ಲಿ ದೇವಸ್ಥಾನ ಇರೋದು ನನಗೆ ಸರಿಯೆನಿಸಲಿಲ್ಲ.


ಅಲ್ಲಿಂದ ಹೊಟೆಲಿಗೆ ಬಂದು ಮಲಗಿದೆ. ಅಲಾರ್ಮ್ ಹೊಡೆದಾಗಲೆ ನನ್ನಗೆ ಎಚ್ಚರ.

ಹೆಲ್ಸಿಂಕಿಯ ಕೃಷ್ಣ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲಿಂಕಿನಲ್ಲಿ ನೋಡ ಬಹುದು:
http://www.saunalahti.fi/~krishna/html/in_english.html

ಈ ವೆಬ್ ಸೈಟಿನಲ್ಲಿ, ಸುಓಮಿ ಭಾಷೆಯನ್ನೂ ಸಹ ನೋಡ ಬಹುದು.

ಮುಂದಿನ ಪೋಸ್ಟ್ ಮಾಡುವವರೆಗು Moi Moi (Bye)