Tuesday, 21 October, 2008

ಫಿನ್ ಲ್ಯಾಂಡಿಗೆ ಪ್ರವಾಸ(೧) - ಕೃಷ್ಣ ದರ್ಶನ - ಭಾರಿ ಭೋಜನ!

Moi (Hi)

ಹಿಂದಿನ ಭಾಗ ಇಲ್ಲಿದೆ

ಬಟ್ಟೆ ಒಗೆಯುವುದು:
ಈ ಭಾಗ ಎರಡನೆ ವಾರದ ಮಧ್ಯದಲ್ಲೆ ಪ್ರಾರಂಭವಾಗ ಬೇಕಿತ್ತು ಆದರೆ ಈಗ ಬರೆಯುತ್ತಿದ್ದೇನೆ. ವಾರದಲ್ಲಿ ಧರಿಸಿದ ಬಟ್ಟೆಯನ್ನು ವಾರಾಂತ್ಯದಲ್ಲಿ ಒಗೆಯುವುದೆಂದು ಅಂದುಕೊಂಡರೂ ವಾರದ ಮಧ್ಯದಲ್ಲೇ ಸಮಯವಿದ್ದರಿಂದ ಆಗಲೆ ಒಗೆಯುವುದಕ್ಕೆ ತೀರ್ಮಾನ ಮಾಡಿದೆ. ಹೊಟೆಲಿನಲ್ಲಿ ಬಟ್ಟೆ ಒಗೆಯುವು ವ್ಯವಸ್ಥೆ ಇದ್ದರೂ ಕೂಡ ನಾನೆ ಒಗೆಯುವುದು ಸರಿ ಎಂದು ಭಾವಿಸಿದ್ದೆ. ನಮ್ಮ ಮನೆಯಲ್ಲಿ ವಾರಾಂತ್ಯಗಳಲ್ಲಿ ಹಾಗು ಈಗಲೂ ಅಮ್ಮನಿಗೆ ಬಟ್ಟೆ ಒಗೆಯಲು ಸಹಾಯ ಮಾಡಿ ಅನುಭವವಿದ್ದರಿಂದ ನನಗೆ ಬಟ್ಟೆ ಒಗೆಯುವುದು ಬೇಜಾರಾಗಲಿಲ್ಲಿ. ಅದಕ್ಕಾಗಿಯೇ ಅಮ್ಮ ನನಗೊಂದು Soapನ್ನೂ ಕೂಡ ಲಗ್ಗೇಜ್ ಜೊತೆ ಇಟ್ಟಿದ್ದರು. ನಾನು ಬಹಳ ಉತ್ಸಾಹದಿಂದ ಬಚ್ಚಲು ಮನೆಗೆ ಬಟ್ಟೆ ನೆನೆಸೋಕೆ ಹೋದೆ. ಆದರೆ ಅಲ್ಲಿ ನೆನೆಸೋಕೆ ಒಂದು bucket ಕೂಡ ಇರಲಿಲ್ಲ. ಆಮೇಲೆ ತಲೆ ಉಪಯೋಗಿಸಿದೆ. Wash basin ನ ನೀರು ಹೋಗದಂತೆ ಮಾಡಿ, ಬಟ್ಟೆಯನ್ನು ಅಲ್ಲಿ ನೆನೆಸಿದೆ.
ನಾನು ಷರ್ಟ್ ಹಾಗು ಪ್ಯಾಂಟನ್ನು ನೆನೆಸಿ ಮೊದಲು ಒಗೆದೆ. ಅದೇನೋ ಸಕ್ಕತ್ತಾಗಿ ಸ್ವಚ್ಛವಾಯಿತು. ಅಲ್ಲಿಯೇ ಇದ್ದ ಒಂದು ಪೈಪಿನ ಮೇಲೆ ಒಣ ಹಾಕಿದೆ. ಆಮೇಲೆ ನನ್ನ Thermal Wearನ್ನು ನೆನೆಸಿದೆ. ಅದನ್ನು ನೆನೆಸಿ ಸ್ವಲ್ಪ ಕ್ಷಣದಲ್ಲೆ ಗಬ್ಬು ವಾಸನೆ ನನ್ನ ರೂಮನ್ನೆಲ್ಲಾ ಆವರಿಸಿತು. ನನಗಂತೂ ಇದನ್ನು ನೆನೆಸಿದ್ದೇ ತಪ್ಪಾಯಿತೇನೋ ಅನಿಸಿತು. ಈಗಲು ಆ ದುರ್ನಾತ ನನ್ನ ಮೂಗಿಗೆ ಬಂದಂತೆ ಆಗುತ್ತಿದೆ. ಆ ದುರ್ನಾತದಲ್ಲೂ ಒಮ್ಮೊಮ್ಮೆ ನನ್ನ ಕೈ ಮೂಸಿಕೊಂಡು ನೋಡಿಕೊಳ್ಳುತ್ತಾಯಿದ್ದೆ. ಈ ದುರ್ನಾತಕ್ಕೆ ಏನು ಕಾರಣವೆಂದು ಕಂಡು ಹಿಡಿಯ ಬೇಕೆಂದು ಕೊಂಡೆ. ಆದರೆ ನಾನು ವಿಜ್ಞಾನಿಯಲ್ಲವೆಂದು ಅಂತರ್ವಾಣಿ ಹೇಳಿತು. ಬಹುಶಃ ಪ್ರಾಣಿಯ ಚರ್ಮದ ವಾಸನೆ ಆಗಿರಬೇಕು.

ಈ ಬಟ್ಟೆ ಒಗೆಯೋ ಕಾರ್ಯ ೨ ವಾರ ನಡೆಯಿತಷ್ಟೆ. ಕಡೆಯ ವಾರದಂದು ಒಗೆಯುವ ಕಾರ್ಯವನ್ನು ಮುಂದೂಡಿಸಿದೆ. ಏಕೆಂದರೆ ಭಾರತಕ್ಕೆ ತರಳ ಬೇಕಿತ್ತು. ಅಲ್ಲಿ ಅಮ್ಮ ನನಗಿಂತಲೂ ಸ್ವಚ್ಛ ಮಾಡುವಾಗ ನಾನೇಕೆ ಒಗೆಯಲಿ ಎಂದು ಸುಮ್ಮನಾದೆ.

ಅಲ್ಲಿಯ ಜನರು:

ಅಲ್ಲಿಯ ಜನರಂತೂ ಸಹಾಯ ಹಸ್ತಕ್ಕೆ ಎತ್ತಿದ ಕೈ ಎನಿಸಿತು. ಯಾರನ್ನಾದರೂ ಸಹಾಯ ಬೇಡ ಬಹುದಾಗಿತ್ತು. ನಮ್ಮ ಪ್ರಾಜೆಕ್ಟ್ ಅಲ್ಲದೇ ಬೇರೊಂಡು ಪ್ರಾಜೆಕ್ಟಿನವರು ಇದ್ದರು. ನನ್ನ ಪರಿಚಯವಿಲ್ಲದಿದ್ದರೂ ಬೆಳಿಗ್ಗೆ ಬಂದ ತಕ್ಷಣ "Terve" (ತೆರ್ವೆ..) (Hello) ಎನ್ನುತ್ತಾಯಿದ್ದರು. ನನಗೆ ಅವರ ಭಾಷೆ ಗೊತ್ತಿಲ್ಲದಿದ್ದರಿಂದ, "Good Morning" ಎನ್ನುತ್ತಿದ್ದೆ.

ಈಗ ಮತ್ತೆ ನನ್ನ ವಾರ ಹಾಗು ವಾರಾಂತ್ಯದ ಬದುಕಿನ ಕಡೆಗೆ.

ಮೂರನೆ ವಾರ:
ಈ ವಾರದಲ್ಲಿ ನಮಗೆ ಇನ್ನೊಂದು Knowledge Transfer (KT) ಕಾರ್ಯಕ್ರಮ ಇತ್ತು. ಬರುವ ವ್ಯಕ್ತಿಯ ಹೆಸರು ತೆರೊ ಮಾಯ್ಸಿಯೋ (Tero Moisio). ಆತ ತಾಂಪರೆ (Tampere) ಊರಿಂದ ಬರಬೇಕಿತ್ತು. ಈ ವ್ಯಕ್ತಿಯನ್ನು ನಾನು ಮುಂದಿನ ಲೇಖನಗಳಲ್ಲೂ ಹೇಳುತ್ತೇನೆ. ಆತನೊಂದಿಗೆ ಬೆಂಗಳೂರಿಂದ ಪ್ರತಿ ವಾರದಲ್ಲೂ Status Call ಮೂಲಕ ಸಂಪರ್ಕದಲ್ಲಿದ್ದೆ. ಅದಲ್ಲದೆ MSN Messenger ಮೂಲಕವೂ ಪ್ರತಿ ದಿನ ನನ್ನ ಮೊದಲ Project ಬಗ್ಗೆ ಮಾತು ಕತೆಯಾಡುತ್ತಾಯಿದ್ದೆವು. ಈಗ ನಾನು ಹೋಗಿದ್ದು ನನ್ನ ಎರಡನೆ ಪ್ರಾಜೆಕ್ಟ್.

ತೆರೋರನ್ನು ಭೇಟಿ ಮಾಡಿ, ಅವರಿಂದ KT ಮುಗಿದ ಮೇಲೆ ಮತ್ತೆ ನನ್ನ ಕೆಲಸದ ಕಡೆ ಗಮನ ಕೊಟ್ಟೆ. ನಮ್ಮ ಇಡೀ ಕಂಪನಿಯಲ್ಲಿ ತೆರೋ ಹಾಗು ನನಗೆ ಬಿಟ್ಟು ಇನ್ನುಳಿದವರಿಗ್ಯಾರಿಗೂ ನಾವು ಉಪಯೋಗಿಸುತ್ತಾಯಿದ್ದ Tool (Software) ತಿಳಿದಿರಲಿಲ್ಲ. ಈ software ಅನ್ನು ಮರೆಯುವಂತಿಲ್ಲ. ಅದರಿಂದಲೇ ನನಗೆ ಫಿನ್ ಲ್ಯಾಂಡಿಗೆ ಬರೋ ಯೋಗ ಸಿಕ್ಕಿತೆಂದು ಭಾವಿಸಿದ್ದೇನೆ. ಇದನ್ನು ಅತಿಶಯೋಕ್ತಿಗೆ ಹೇಳುತ್ತಿಲ್ಲ. ನನಗೆ ಏನಾದರು ಸಂಶಯ ಬಂದರೆ ಅದನ್ನು ಪೂರ್ಣವಾಗಿ ನಾನೇ ನಿಭಾಯಿಸಬೇಕು. ತೆರೊ ಇದ್ದರಾದರೂ ಅವರಿಗೆ Coding ಹೆಚ್ಚಾಗಿ ಬರುತ್ತಿರಲಿಲ್ಲ. ಮೇಲ್ನೋಟದ ವಿಚಾರಗಳನ್ನು ತುಂಬಾ ಸ್ಪಷ್ಟವಾಗಿ ಹೇಳುತ್ತಾಯಿದ್ದರು. ಅದನ್ನು ನಮ್ಮ projectಗೆ ಹೊಂದುವಂತೆ ಮಾಡಬೇಕಾದ ದೊಡ್ಡ ಜವಾಬ್ದಾರಿ ನನ್ನ ಮೇಲೆ ಇತ್ತು.

ಪ್ರತಿ ದಿನ ನನ್ನ ಅಪ್ಪ ಹಾಗು ಅಮ್ಮ ಕೃಷ್ಟನ ದೇವಸ್ಥಾನಕ್ಕೆ ಹೋಗು ಅಂತ ಹೇಳುತ್ತಲೇ ಇದ್ದರು. ಹಾಗಾಗಿ ಒಂದು ದಿನ ಕೆಲಸವಾದ ಮೇಲೆ ಒಮ್ಮೆ ನೋಡಿ ಕೊಂಡು ಬರೋಣ. ಶನಿವಾರ ಹಾಗು ಭಾನುವಾರ ಪ್ರಾರ್ಥನೆ ಹಾಗು ಭೋಜನ ಮಾಡೋಣ ಅಂತ ಯೋಚಿಸಿ, ದೇವಸ್ಥಾನವಿದ್ದ ರಸ್ತೆಯ ಹೆಸರನ್ನು (Ruoholahdenkatu) ಒಂದು ಹಾಳೆಯ ಮೇಲೆ ಬರೆದು ಕೊಂಡು Google Maps ತೋರಿಸಿದ ದಾರಿಯಲ್ಲೇ ನಡೆದೆ. ಅಲ್ಲಿ ರಸ್ತೆಯ ಹೆಸರು ಎಲ್ಲಿ ಹುಡುಕಿದರೂ ನನ್ನ ಕಣ್ಣಿಗೆ ಬೀಳಲೇಯಿಲ್ಲ. ಹಾಗಾಗಿ ಅಲ್ಲಿಂದ ಒಬ್ಬಾಕೆಯ ಬಳಿ ದಾರಿ ಕೇಳಲು ಹೋದೆ. ಆಕೆ ಆಗಲೇ ತನ್ನ ಕಾರನ್ನು ಏರುತ್ತಾಯಿದ್ದಳು. Hi. "Where is this Road?" ಅಂತ ಕೇಳಿದೆ. ಆಗ ಆಕೆ ಕಾರನ್ನು ಏರದೇ.. ಸ್ವಲ್ಪ ನಡೆದು ಬಂದು ಆ ರಸ್ತೆಯ ಕಡೆ ಕೈ ತೋರಿಸುತ್ತಾ, "Here it is" ಎಂದಳು. ಅವಳಿಗೆ ಧನ್ಯವಾದ ಹೇಳಿ, ಕೃಷ್ಣನ ಹುಡುಕುವ ಪ್ರಯತ್ನ ಮಾಡಿದೆ. ಆ ರಸ್ತೆಯಲ್ಲಿ ಹಾಗೆ ಸಾಗಿ ಬಂದು Google ನಮೂದಿಸಿರುವ ನಂಬರನ್ನು ಹುಡುಕಿದೆ. ಅಲ್ಲಿ ದೊಡ್ಡ ಗೇಟೊಂದಿತ್ತು. ತಲೆ ಮೇಲೆತ್ತಿ ನೋಡಿದರೆ ಗೋಪುರವೇ ಇಲ್ಲ! ನನ್ನ ಮನಸ್ಸಿನಲ್ಲಿ ದೇವಸ್ಥಾನ ಭಾರತದಲ್ಲಿಯ ಹಾಗೆಯೇ ಒಂದು ಗೋಪುರವೆಲ್ಲಾ ಇರುತ್ತೆ ಅಂತ ತಿಳಿದಿದ್ದೆ. ಇಲ್ಲಿ ಹಾಗಿರಲಿಲ್ಲ. ಆ ಗೇಟಿಂದ ಇಣುಕಿ ನೋಡಿದೆ. ಒಂದು ಮೈದಾನದ ರೀತಿ ಇತ್ತು. ಅಲ್ಲಿ ದೇವಸ್ಥಾನವಿರ ಬಹುದು ಎಂದು ತೀರ್ಮಾನಿಸಿ, ಈ ವಾರಾಂತ್ಯ ಕಾರ್ಯಕ್ರಮ ಇಲ್ಲೇ ಅಂತ ಅಂದುಕೊಂಡೆ.

ಈ ಮಧ್ಯೆ ನಮ್ಮ ಕಂಪನಿಯ ಮಾಜಿ ನೌಕರರಿಬ್ಬರು Helsinki ಹತ್ತಿರಕ್ಕೆ ಇರುವ ಊರು Espoo ನಲ್ಲಿ ಒಂದು ಕಂಪನಿಗೆ ದುಡಿಯುತ್ತಾಯಿದ್ದರು. ನನ್ನ ಸಹೋದ್ಯೋಗಿ ಅವರೊಂದಿಗೆ ಆರ್ಕುಟ್ ಮೂಲಕ ಸಂಪರ್ಕದಲ್ಲಿದ್ದ. ಅವರು ನಮ್ಮಿಬ್ಬರನ್ನು ಒಂದು ವಾರಾಂತ್ಯಕ್ಕೆ ಅವರ ಮನೆಗೆ ಬರಲು ಆಮಂತ್ರಿಸಿದರು. ಈ ವಿಷಯವನ್ನು ನನಗೆ ಹೇಳಿದ. ನಾನು ಒಪ್ಪಿದೆ. ಹಾಗಾಗಿ ಈ ವಾರಾಂತ್ಯಕ್ಕೆ ಅವರಲ್ಲಿ ಒಬ್ಬನ ಮನೆಯಲ್ಲಿ ಕಳೆಯುವುದು ,ಮುಂದಿನ ವಾರ ಇನ್ನೊಬ್ಬನ ಮನೆಯಲ್ಲಿ ಎಂದು ತೀರ್ಮಾನವಾಯಿತು.


ಶನಿವಾರ ಬಂತು. ನಾವಿಬ್ಬರೂ ಹೊರಡಲು ತಯಾರಾಗಿದ್ದೆವು. ಆಗ ನನ್ನ ಸಹೋದ್ಯೋಗಿ, Espooನಲ್ಲಿದ್ದ ಗಿರೀಶ್ ನ ಜೊತೆ ಚಾಟ್ ಮಾಡಿ, ಅವನಿದ್ದ ಊರನ್ನು ತಲುಪುವುದು ಹೇಗೆಂದು ಪ್ರಶ್ನಿಸಿದನು. ಅವನು ಒಂದು ಬಸ್ಸಿನ ನಂಬರ್ ಹೇಳಿದ. ಹಾಗೆ ಒಂದು ಬಸ ವೇಳಾ ಪಟ್ಟಿಯ Linkನ್ನೂ ಕಳುಹಿಸಿದ. ನಾವು ಆ ಲಿಂಕಿಂದ್ದ ನಮಗೆ ಹತ್ತಿರದ ನಿಲ್ದಾಣಕ್ಕೆ ಎಷ್ಟು ಸಮಯಕ್ಕೆ ಬರುತ್ತದೆ ಎಂಬ ವಿಚಾರ ತಿಳಿದೆವು. ಗಿರೀಶ್ ನಮಗೆ ಹೇಳಿದ್ದು Espoo bus stop ಎದುರುಗಡೆ ದೊಡ್ದದೊಂದು ಮಾಲ್ ಇದೆ. ಅಲ್ಲಿ ಒಂದು ಅಂಗಡಿಯ ಬಳಿ ಬನ್ನಿ. ಅಲ್ಲಿಗೆ ಬರುತ್ತೇನೆ.

ನಾವಿಬ್ಬರು ಬಸ್ಸಿಗೆ ಕಾದೆವು. ಹೇಳಿದ ಸಮಯಕ್ಕೆ ಸರಿಯಾಗಿ ಬಸ್ ಬಂದಿತು. ನಾವಿಬ್ಬರೂ ಹತ್ತಿದೆವು. ನಂತರ Driverಗೆ ಆ ಮಾಲಿನ ಹೆಸರನ್ನು ಹೇಳಿ ಟಿಕೆಟ್ ಪಡೆದು, ಆ ಮಾಲು ಬಂದೊಡನೆ ನಮಗೆ ತಿಳಿಸಿ ಎಂದು ಕೇಳಿಕೊಂಡೆವು. ಟಿಕೆಟಿನ ಬೆಲೆ ೩ Euro ೬೦ Cents ( ಹೆಚ್ಚು ಕಡಿಮೆ.. ೨೧೫ ರೂಗಳು).ಇಲ್ಲೂ ಅಷ್ಟೇ ಟಿಕೆಟಿನ ಅವಧಿ, ೧ ಗಂಟೆ ೩೦ ನಿಮಿಷಗಳು. ನಂತರ ಮೊದಲ ಆಸನದಲ್ಲೇ ಕುಳಿತೆವು. ಭಾರತದ ಹಾಗೆ ಅದು ಮಹಿಳೆಯರಿಗಾಗೇ ಮೀಸಲ್ಪಟ್ಟ ಆಸನವಲ್ಲ! ಬಸ್ಸು ಹಾಗೆ ಸಾಗಿ, ೧೫-೨೦ ನಿಮಿಷಗಳಲ್ಲಿ ನಾವು ಇಳಿಯ ಬೇಕಿದ್ದ ಮಾಲಿನ ಸಮೀಪಕ್ಕೆ ಬಂದಿತು. ಡ್ರೈವರ್ ನಮ್ಮನು ಇಳಿಯಲು ಸೂಚಿಸಿದನು. ಅವನಿಗೆ ಒಂದು ಕಿರು ನಗೆ ಬೀರಿ, ಧನ್ಯವಾದ ಅರ್ಪಿಸಿ ಸಾಗಿದೆವು. ಮಾಲಿನ ಒಳಗೆ ಹೋಗಿ, ಎಲ್ಲಾ ಅಂಗಡಿಗಳಲ್ಲೂ Window Shopping ಮಾಡಿ, ಅವನು ಹೇಳಿದ ಅಂಗಡಿ ಮುಂದೆ ಬಂದೆವು. ಆದರೆ ಅವನು ಅಲ್ಲಿಗೆ ಇನ್ನು ಬಂದಿರಲಿಲ್ಲ. ಸ್ವಲ್ಪ ಸಮಯ ಕಳೆದೆವು. ನಂತರ ಬಂದ ಪುಣ್ಯಾತ್ಮ! ಬಂದೊಡನೆ ಕ್ಷೇಮ ಸಮಾಚಾರ... ಫಿನ್ ಲ್ಯಾಂಡಿನ ಚಳಿ ಬಗ್ಗೆ ಪ್ರಶ್ನಿಸಿದ. ಎಲ್ಲ ವಿಚಾರಗಳು ಆದ ಮೇಲೆ, ಅಂಗಡಿಯೊಂದರಲ್ಲಿ ಕೆಲವು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ. ಎಲ್ಲಾರು ಅವನ ಮನೆಗೆ ಹೋದೆವು. ಅವನೊಂದಿಗೆ ಇನ್ನು ೬-೭ ಜನ ಹುಡುಗರು ವಾಸವಾಗಿದ್ದರು. ಅದೇ ಮನೆಯಲ್ಲಿ ನಮ್ಮ ಇನ್ನೊಬ್ಬ ಮಾಜಿ ಸಹೋದ್ಯಾಗಿಯೂ ಇದ್ದ. ಆದರೆ ಅವನು ಬೇರೇ ಮನೆಯಲ್ಲಿದ್ದ. ವಾರಾಂತ್ಯಕ್ಕೆ ಮಾತ್ರ ಇಲ್ಲಿಗೆ ಬಂದಿದ್ದ. ಅಲ್ಲಿ ಎಲ್ಲರ ಪರಿಚಯವಾಯ್ತು. ನಮ್ಮ ಮನೆಯಲ್ಲಿ ಊದುಬತ್ತಿಯ ವಾಸನೆ ಮಾತ್ರ ಸೇವಿಸಿದ್ದ ನನಗೆ ಸ್ವಲ್ಪ ಹೊತ್ತಿನಲ್ಲೇ ಆ ಮನೆಯಲ್ಲಿ ಧೂಮಪಾನದ ವಾಸನೆ ಸೇವಿಸ ಬೇಕಾಯಿತು. ನನ್ನ ಸಹೋದ್ಯಾಗಿ ಧೂಮಪಾನ ಮಾಡುತ್ತಾಯಿರಲಿಲ್ಲ. ಸದ್ಯ ನನ್ನ ಜೊತೆ ಅವನೊಬ್ಬನಾದರೂ ಇದ್ದಾನಲ್ಲ. ಅಷ್ಟೇ ಸಮಾಧಾನ. ಮಿಕ್ಕವರೆಲ್ಲಾ ಹೊಗೆ ಬಂಡಿ ಬಿಡುತ್ತಾಯಿದ್ದರು.

ಸ್ವಲ್ಪ ಸಮಯದಲ್ಲೆ ನಿಮ್ಮ ತಿಂಡಿ ಆಗಿದೆಯೇ? ಇಲ್ಲದಿದ್ದರೆ ಇಲ್ಲಿ ತಿನ್ನಿ ಅಂತ ಹೇಳಿದರು. ನಾವು ಅದಕ್ಕೆ ಉತ್ತರವಾಗಿ, ತಿಂಡಿ ಆಗಿದೆ ಅಂದೆವು. ನಂತರ ಬಾಳೆಹಣ್ಣಿನ Milk shake ಮಾಡುತ್ತೇವೆ ಎಂದು ಹೇಳಿ, ಮಾಡಿದರು. ಅದನ್ನು ಕುಡಿದ ಮೇಲೆ ಹೀಗೆ ಮಾತು ಕಥೆ ಆಡುತ್ತಾಯಿದ್ದೆವು. ಚಲನ ಚಿತ್ರಕ್ಕೆ ಯಾವ ರೀತಿ ಹಿನ್ನೆಲೆ ಸಂಗೀತ ಇರುತ್ತದೆಯೋ ಅದೇ ರೀತಿ ಇಲ್ಲಿ ಹಿನ್ನೆಲೆ ವಾಸನೆ! ಆಮೇಲೆ ಯಾವುದೋ ಒಂದು ಸಿನೆಮಾ ಹಾಕಿ ಎಲ್ಲರೂ ನೋಡುತ್ತಾಯಿದ್ದರು. ನಾನು ಸೋಫಾದ ಮೇಲೆ ಮಲಗಿಕೊಂಡು ನೋಡುತ್ತಾಯಿದ್ದೆ. ಗೊತ್ತಿಲ್ಲದೆ ಸುಮಾರು ೧ ಗಂಟೆಗಳ ಕಾಲ ನಿದ್ರಿಸಿದೆ. ಈ ಒಂದು ಗಂಟೆಯೇ ನನ್ನ ಮನಸ್ಸು ಸರಿಯಿದ್ದ ಸಮಯವೆಂದು ಈಗ ತಿಳಿಯಿತು.

ಆ ಮನೆಯಲ್ಲಿದ್ದವರು ಯಾರೂ ನನಗೆ ಹೊಂದುವಂತವರಾಗಿರಲಿಲ್ಲ. ಒಂದು ವಾಕ್ಯ ಮಾತಾಡಿದರೆ ಅದರಲ್ಲಿ ಮುಕ್ಕಾಲು ಭಾಗದಷ್ಟು ಅವಾಚ್ಯ ಪದಗಳೇ! ನನಗೆ ಕೇಳೋಕೆ ಅಸಹ್ಯವೆನಿಸಿತು. ಸಂಜೆ ಹೊರಡುತ್ತೇನಲ್ಲ ಹೇಗೋ ಸಹಿಸಿಕೊಳ್ಳೋಣವೆಂದು ಸುಮ್ಮನಿದ್ದೆ.
ಈ ಮನೆಯವರ ಪೈಕಿ ಒಬ್ಬ ಎಲ್ಲಿಂದಲೋ ಇಲ್ಲಿಗೆ ಬರುವವನಿದ್ದ. ಆಗೆ ಅವನಿಗೆ ಇಲ್ಲಿಂದ ಒಂದು ಕರೆ ಹೋಯಿತು. ೧೨ ಬಾಟಲ್ಲುಗಳ ಒಂದು ಕೇಸನ್ನು ತೆಗೆದು ಕೊಂಡು ಬಾ ಅಂತ. ಅವನು ಇವರ ಮಾತಿನಂತೆ ತಂದು ಬಿಟ್ಟು.

Milk Shake ಹಾಗು ಇನ್ನಿತರ ಆಹಾರವನ್ನು ಸೇವಿಸಿದ್ದರಿಂದ ನನಗೆ ಮಧ್ಯಾಹ್ನ ಊಟವನ್ನೇ ಮಾಡಲಿಲ್ಲ. ಸಂಜೆಯಾದ ಮೇಲೆ ಹೊರಡಲು ತಯಾರಿ ನಡೆಸುವಾಗ ಅವರೆಲ್ಲಾ ಬಂದು ಇವತ್ತು ಇಲ್ಲೇ ಇದ್ದು ಬಿಡಿ. Beachಗೆ ಹೋಗೋಣ. Beach ಮೇಲೆ walking ಮಾಡೋಣ ಅಂದರು. ಹೇಗೂ ನೀರೆಲ್ಲಾ ಗೆಡ್ಡೆಯಾಗಿತ್ತು. ನನಗೂ ಹೊಸ ಅನುಭವವಾಗುತ್ತೆ ಅಂತ ಒಪ್ಪಿದೆ. ಆ ಎಲ್ಲಾ ಬಾಟಲ್ಲುಗಳ ಜೊತೆಗೆ ನಾನು ಕುಡಿಯುವ ಬಾಟಲ್ಲು (Orange juice, apple juice) ಎಲ್ಲವನ್ನು ಹೊತ್ತು ಮನೆಯಿಂದ Beachನ ಅತ್ತ ಸಾಗಿದೆವು.

Beachಗೆ ಹೋಗಿ, ಅದರ ಮೇಲೆಲ್ಲಾ ಓಡಾಗಿ, ಅವರೆಲ್ಲರೂ ತಮ್ಮ ತಮ್ಮ ಬಾಟಲ್ಲುಗಳನ್ನು ಮುಗಿಸಿದರು. ನಾನೂ ಕೂಡ ನನ್ನ ಬಾಟಲ್ಲನ್ನು ಮುಗಿಸಿದೆ. ಮನೆಗೆ ಬಾಟಲ್ಲುಗಳನ್ನು ತಂದ ವ್ಯಕ್ತಿಯೇ ನನ್ನೊಂದಿಗೆ ಆರೆಂಜ್ ಜ್ಯೂಸ್, ಆಪಲ್ ಜ್ಯೂಸ್ ಕುಡಿದ. ಸಮುದ್ರದ ಗೆಡ್ಡೆಯಲ್ಲಿ ಒಂದು ರಂಧ್ರ ಮಾಡಿ ಕೇಲಗಿದ್ದ ನೀರನ್ನು ಬಾಟಲಿನೊಳಗೆ ತುಂಬಿ ಆಟವಾಡುತ್ತಾ, ಒಂದು ಖಾಲಿ ಬಾಟಲನ್ನು ಒಬ್ಬ ಸಮುದ್ರದ ಪಾಲು ಮಾಡಿದ. ಆಗ ಇನ್ನೊಬ್ಬ ಬೇಸರ ಪಟ್ಟು, ಎಂಥ ಅನ್ಯಾಯದ ಕೆಲಸ ಮಾಡಿದೆಯಲ್ಲೋ ಅಂತ ಹೇಳಿದ. ಅಲ್ಲಿ ಈ ರೀತಿ ಕುಡಿದ ಬಾಟಲ್ಲನ್ನು ಅಂಗಡಿಯವರಿಗೆ ಹಿಂದಿರುಗಿಸಿದರೆ ೧ ಖಾಲಿ ಬಾಟಲ್ಲಿಗೆ ೧೦ Cents ಕೊಡುತ್ತಾರೆಂಬ ವಿಷಯ ತಿಳಿಯಿತು. ಭಾರತದಲ್ಲಿ ಖಾಲಿ ಬಾಟಲ್ಲನ್ನು ಅಂಗಡಿಯವರು ತೆಗೆದು ಕೊಳ್ಳುತ್ತಾರೋ ಇಲ್ಲವೋ ಎಂಬ ವಿಷಯ ನನಗೆ ತಿಳಿಯದು. ಆದರೂ "ಖಾಲಿ ಬಾಟಲ್ಲಿ... "ಅಂತ ಕೂಗಿ ಕೊಂಡು ಮನೆ ಬಾಗಿಲಿಗೆ ಬರೋರು ಇದ್ದಾರೆ.

ಇನ್ನೇನು ಸೂರ್ಯ ಭೂಮಿಗೆ ಟಾಟಾ ಹೋಳೋ ಸಮಯ ಬಂತು. ನಾವೆಲ್ಲಾ ಮನೆ ಸೇರ ಬೇಕು ಎಂದು ಅವಸರವಸರದಲ್ಲೇ ಸಾಗಿ ಮನೆಗೆ ಬಂದೆವು. ಆನಂತರ ಅವರಲ್ಲಿ ಒಂದಿಬ್ಬರು ಸೇರಿ, ಅಡುಗೆ ಮಾಡಿದರು. ದಾಲ್ ಹಾಗು ಅನ್ನ ಮಾಡಿದರು. ಬೇಗ ತಿಂದು ಯಾವುದೋ ಒಂದು ರೂಮಿನಲ್ಲಿ ಸಿಕ್ಕಿದ್ದನ್ನು ಹಾಸಿಕೊಂಡಿ, ದಿಂಬಿಲ್ಲದೆ ದುಃಖ ತುಂಬಿಕೊಂಡು, ಸಿಕ್ಕಿದ್ದನ್ನು ಹೊದ್ದು ನಿದ್ದೆ ಮಾಡಿದೆ. ಸ್ವಲ್ಪ ಹೊತ್ತಿನಲ್ಲೇ ಯಾರೋ ಬಂದು "Jay.. Jay" ಅಂತ ಕೂಗಿದರು. ನಾನು ಎಚ್ಚರವಾಗಿದ್ದರೂ ಅವರಿಗೆ ಉತ್ತರ ಕೊಡಲಿಲ್ಲ. ಸುಮ್ಮನಿದ್ದೆ. ಮರು ದಿನ ಬೇಗನೇ ಎಚ್ಚರವಾಯಿತು. ಸ್ನಾನವನ್ನು ಮಾಡಿ ಕೂತು ಬಿಟ್ಟೆ.

ಇಷೆಲ್ಲಾ ಆಗುವಾಗಲೇ ಫಿನ್ ಲ್ಯಾಂಡಿಗೆ ಬರುವ ಮುನ್ನ ನಡೆದ ಒಂದು ಕಹಿ ಘಟನೆಗೆ ಕವನ ರೂಪ ಕೊಟ್ಟು ಬರೆಯುತ್ತಿದ್ದ ದುರಾದೃಷ್ಟ ಪೂರ್ತಿಯಾಯಿತು. ಈ ಮಧ್ಯೆ ಅವರಲ್ಲಿ ಒಬ್ಬ ಕ್ಯಾರೆಟ್ ಹಲ್ವಾ ಮಾಡುವುದಾಗಿ ಹೇಳಿದ. ನಂತರ ಅವರ ಮನೆಗೆ ಕರೆ ಮಾಡಿ ಅದರ ವಿಧಾನವನ್ನು ಕೇಳಿ ನಮಗೆಲ್ಲಾ ಸಿಹಿ ಸಿಹಿಯಾದ ಹಲ್ವಾ ತಯಾರಿಸಿದ. ಕಹಿಯ ಜೊತೆ ಸಿಹಿ ಸೇರಿತು. ಅಲ್ಲಿ ಊಟವಾದ ಮೇಲೆ ನಾನು ಹಾಗು ಕೋಶಿ ಹೊಟೆಲಿನ ಕಡೆ ಬಂದೆವು. ಆಮೇಲೆ ಕೃಷ್ಣನ ದೇವಾಲಯಕ್ಕೆ ಹೋಗಬೇಕೆಂದು ತೀರ್ಮಾನಿಸಿದೆ.

ಕೋಶಿಯ ರೂಮಿಗೆ ಹೋಗಿ, ಈ ರಾತ್ರಿ ನಾನು ಊಟಕ್ಕೆ ಇರೋದಿಲ್ಲ. ನೀನೆ ಮಾಡಿಕೊ. ನಾನು ಬೆಳಿಗ್ಗೆ ಸಿಗುತ್ತೇನೆ ಎಂದು ಹೇಳಿ ಕೃಷ್ಣನ ದೇವಾಲಯಕ್ಕೆ ಹೋದೆ. ಆ ಗೇಟನ್ನು ತೆಗೆಯಲು ಪ್ರಯತ್ನ ಪಟ್ಟೆ. ಆದರೆ ಆಗಲಿಲ್ಲ. ಇನ್ನೊಮ್ಮೆ ಪ್ರಯತ್ನ ಪಟ್ಟೆ ಆದರೂ ಆಗಲಿಲ್ಲ. ಒಂದು ಕ್ಷಣ ಏನೂ ತೋಚದಂತಾಯಿತು. ನಂತರ ನನ್ನ ಸಹಾಯಕ್ಕೆ ಬಂದದ್ದು ನಾನು ನೋಡಿದ ಸಿನಿಮಾಗಳು! ಯಾರಾದರು ಒಂದು ವೇಳೆ ಆ ಕಡೆಯಿಂದ ಬಂದರೆ ಅಥವಾ ಈ ಕಡೆಯಿಂದ ಹೋದರೆ, ಬಾಗಿಲು ಮುಚ್ಚುವುದರೊಳಗೆ ಒಳಗೆ ಹೋಗಿ ಬಿಡೋಣ ಅಂತ ಅಂದುಕೊಂಡೆ. ಬಾಗಿಲ ಬಳಿ ಇರುವುದು ಬೇಡವೆಂದು ಸ್ವಲ್ಪ ದೂರದಲ್ಲಿ ನಿಂತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ .. ಕೂಗಿದರು ಧ್ವನಿ ಕೇಳಲಿಲ್ಲವೆ ?" ಅಂತ ಹಾಡುತ್ತಾಯಿದ್ದೆನು. ಕನಕದಾಸರು ನನಗೂ ಅನ್ವಯವಾಗುವಂತೆ ಶತಮಾನಗಳ ಹಿಂದೆಯೇ ಬರೆದಿದ್ದರು. ಕನಕದಾಸರು ಮೈ ಮರೆತು ಹಾಡಿದ ಈ ಹಾಡನ್ನು ನಾನು ಶ್ರುತಿ, ತಾಳ, ರಾಗ, ಭಾವವನ್ನೆಲ್ಲಾ ಮರೆತು ಹಾಡಿದೆ. ಕೊನೆಯ ಸಾಲುಗಳನ್ನು ಹಾಡಿ, "ಬಾಗಿಲನು ತೆರೆದು.. ಟಣ್ ಟಣ್ ಟಣ್ಣ್" ಅಂತ ಹಿನ್ನೆಲೆ ಸಂಗೀತ ಕೊಡುತ್ತಾಯಿದ್ದೆ, ತಕ್ಷಣವೇ ಕೃಷ್ಣನ ಅನುಗ್ರಹವೆಂಬಂತೆ ಆ ಕಡೆಯಿಂದ ಯಾರೋ ವ್ಯಕ್ತಿಯೊಬ್ಬ ಬಂದನು. ಆತ ಬಾಗಿಲನ್ನು ತೆಗೆದು ಹೊರಗಡೆ ಸಾಗಿದೆ. ನಾನು ರಸ್ತೆಯ ಆ ಭಾಗಿದಿಂದ ಸಂತೋಷದಿಂದ ಓಡಿ ಬಂದೆ. ಅಷ್ಟರಲ್ಲಿ ಬಾಗಿಲು ಮುಚ್ಚಿ ಹೋಯಿತು. ಒಟ್ಟು ಸುಮಾರು ೧೫ ನಿಮಿಷಗಳ ಕಾಲ ಅಲ್ಲೇ ಇದ್ದೆ. ಆದರೂ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿ ಯಾರೂ ನನ್ನ ಕಣ್ಣಿಗೆ ಕಾಣಿಸಲಿಲ್ಲ ಸಹಾಯ ಬೇಡೋಣವೆಂದರೆ. ಆಮೇಲೆ ಯಾಕೋ ದೇವರು ನನ್ನನ್ನು ಬಲಗಡೆಗೆ ನೋಡಲು ಹೇಳಿದ ಅನ್ನಿಸುತ್ತೆ. ಅಲ್ಲಿ ೪ Buttons ಇದ್ದವು.

೧. ******
೨ *******
೩ Krishna Temple
೪. ******

ಆಗ ನಾನು ಮೂರನೆ button ಒತ್ತಿ ನಂತರ ಬಾಗಿಲು ತೆಗೆಯಲು ಪ್ರಯತ್ನ ಪಟ್ಟೆ. ಕೃಷ್ಣನ ದಯೆ, ಬಾಗಿಲು ತೆಗೆಯಿತು. ಈಗ ಒಳಗೆ ಹೋಗಿ, ಮೈದಾನ ಹತ್ತಿರ ನೋಡಿದರೆ ದೇವಸ್ಥಾನವೇ ಇಲ್ಲ. ಅಲ್ಲಿ ಮೂರನೆ button ಒತ್ತಿದ್ದರಿಂದ, ಮೂರನೆ ಮಹಡಿಗೆ ಹೋಗಿ ನೋಡೋಣವೆಂದು ಮೂರನೆ ಮಹಡಿಗೆ ಹೋದೆ. ಅಲ್ಲಿ ಆಚೆ ಕಡೆ ಅನೇಕ ಪಾದರಕ್ಷೆಗಳು ಇದ್ದವು. ನನ್ನ shoes ಕಳಚಿ, ಒಳಗೆ ಹೋದೆ. ಅಲ್ಲಿ ಸಿಕ್ಕ ಫಿನ್ ಲ್ಯಾಂಡಿನ ಪ್ರಜೆ ನನಗೆ ಹೇಳಿದ ಮಾತು "ನಮಸ್ಕಾರ್!" ಆಗ ಸ್ವಲ್ಪ ಆಶ್ಚರ್ಯವಾಯಿತು. ನಾನೂ "ನಮಸ್ಕರಾ" ಅಂತ ಹೇಳಿದೆ. ಆತ ಭಾರತದ ಉಡುಪುಗಳಾದ ಪಂಚೆ, ಹಾಗು ಜುಬ್ಬದಲ್ಲಿದ್ದೆ. ಹಣೆಯ ಮೇಲೆ ISKCON ಮುದ್ರೆಯಿತ್ತು. ಆಮೇಲೆ ದೇವಾಲಯದ ಒಳಗೆ ಪ್ರವೇಶ ಮಾಡಿದೆ. ಅಲ್ಲಿ ಕೃಷ್ಣನ ವಿಗ್ರಹಕ್ಕೆ ನಮಿಸಿ, ಕುಳಿತುಕೊಂಡೆ. ದೇವಾಲಯಕ್ಕೆ ಸಂಬಂಧ ಪಟ್ಟ ಅಲ್ಲಿಯ ಪ್ರಜೆಯೊಬ್ಬ ಭಗವದ್ಗೀತೆಯ ಒಂದು ಅಧ್ಯಾಯದ ವಿಚಾರ ಮಾತಾಡುತ್ತಾಯಿದ್ದರು. ಅವರು ಅದನ್ನು ಸಂಸ್ಕೃತದಲ್ಲಿ ಹಾಗು ಆಂಗ್ಲ ಭಾಷೆಯಲ್ಲಿ ಹೇಳುತ್ತಾಯಿದ್ದರು. ಇನ್ನೊಬ್ಬರು Suomi ಭಾಷೆಯಲ್ಲಿ ಅದರ ಅರ್ಥವನ್ನು ಹೇಳುತ್ತಾಯಿದ್ದರು. ಅಲ್ಲಿ ನೆರೆದಿದ್ದವರು ಸುಮಾರು ೨೫ - ೩೦ ಮಂದಿ. ಅವರಲ್ಲಿ ಭಾರತೀಯರೂ ಹಾಗು ಅಲ್ಲಿಯ ಜನರೂ ಸೇರಿದ್ದರು. ದೇವಾಲಯಕ್ಕೆ ಸಂಬಂಧ ಪಟ್ಟವರು ಬ್ರಾಹ್ಮಣರಾಗಿ ಮತಾಂತರ ಗೊಂಡವರಂತೆ ಕಾಣಿಸುತ್ತಿದ್ದರು. ಅಲ್ಲಿಯ ಜನತೆಗೆ ನಮ್ಮ ಭಗವದೀತೆಯ ಮೇಲೆ ಅಪಾರಾದ ಗೌರವ ಇದೆಯೆಂಬುದು ತಿಳಿಯಿತು. ಅಲ್ಲಿಯ ಜನರೆಲ್ಲರೂ ಗೀತೆಯ ಚೆರ್ಚೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. ಅಲ್ಲಿಯ ಹೆಂಗಸರು ಸೀರೆಯನ್ನು ಉಡುವುದನ್ನು ರೂಢಿ ಮಾಡಿಕೊಂಡಿದ್ದರು. ಭಾರತದ ಕೆಲವು ಮಾನಿನಿಯರು ಸೀರೆಯಲ್ಲಿರಲಿಲ್ಲ! ಪಾಶ್ಚಾತ್ಯ ದೇಶದವರು ನಮ್ಮ ಸಂಸ್ಕೃತಿ ಅಳವಡಿಸಿಕೊಂಡರೆ ಇಲ್ಲಿಯವರು ಅವರ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಇದೆಲ್ಲಾ ಆದ ಮೇಲೆ ಪ್ರಸಾದ ವಿನಿಯೋಗವೆಂದು, ಎಲ್ಲರಿಗೂ ತಟ್ಟೆ ಹಾಕಿದರು. ಮಾಡಿದ ಅಡುಗೆಯನ್ನು ಪ್ರತಿಯೊಬ್ಬರಿಗೂ ಚೆನ್ನಾಗಿ ಬಡಿಸಿದರು. ನಾನು ಅಲ್ಲಿ ತಿಂದ ತಿನಿಸು, ಅನ್ನ ಹಾಗು ಸೊಪ್ಪಿನ ಹುಳಿ ಜೊತೆಗೆ ಯಾವುದೋ ಒಂದು ಪಲ್ಯ. ಇದಾದ ಮೇಲೆ ಹಲ್ವಾ ಅನ್ನೋ ಹೆಸರಿನಲ್ಲಿ ಒಂದು ತಿನಿಸನ್ನು ಬಡಿಸಿದರು. ಅದನ್ನು ನೋಡಿದಾಗಲೆ ತಿಳಿಯಿತು ಅದು ಸಜ್ಜಿಗೆ ಅಂತ. (ತಿಂಡಿ ಒಂದೇ ನಾಮ ಹಲವು). ನಾನು ದೇವರ ಸನ್ನಿಧಿಯಲ್ಲಿ ಆ ಸಂಜೆ ಕಳೆದೆನು. ಆದರೆ ಹೀಗೆ apartment ನಲ್ಲಿ ದೇವಸ್ಥಾನ ಇರೋದು ನನಗೆ ಸರಿಯೆನಿಸಲಿಲ್ಲ.


ಅಲ್ಲಿಂದ ಹೊಟೆಲಿಗೆ ಬಂದು ಮಲಗಿದೆ. ಅಲಾರ್ಮ್ ಹೊಡೆದಾಗಲೆ ನನ್ನಗೆ ಎಚ್ಚರ.

ಹೆಲ್ಸಿಂಕಿಯ ಕೃಷ್ಣ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲಿಂಕಿನಲ್ಲಿ ನೋಡ ಬಹುದು:
http://www.saunalahti.fi/~krishna/html/in_english.html

ಈ ವೆಬ್ ಸೈಟಿನಲ್ಲಿ, ಸುಓಮಿ ಭಾಷೆಯನ್ನೂ ಸಹ ನೋಡ ಬಹುದು.

ಮುಂದಿನ ಪೋಸ್ಟ್ ಮಾಡುವವರೆಗು Moi Moi (Bye)

7 ಜನ ಸ್ಪಂದಿಸಿರುವರು:

Lakshmi Shashidhar Chaitanya said...

sakhath anubhava...specially baagilanu teredu...typical jayashankar comedy adu ;-)

sunaath said...

ನಿಮ್ಮ ಈ ಲೇಖನ ಅನೇಕ ಹೊಸ ವಿಚಾರಗಳನ್ನು ತಿಳಿಸಿತು.
ವಿದೇಶಗಳಲ್ಲಿಯ ಜನರ ರೀತಿ ನೀತಿಗಳ ಬಗೆಗೆ ಕುತೂಹಲ ಇರುವದು ಸಹಜವಲ್ಲವೆ! ನನ್ನ ಕುತೂಹಲಕ್ಕೆ ಸಮಾಧಾನ ಸಿಗುತ್ತಾ ಇದೆ.
ಜೈ ಜಯಶಂಕರ!

Sushma Sindhu said...

ಹಾಯ್,
ನಿಮ್ಮ ಪ್ರವಾಸಕಥನ + ಬರವಣಿಗೆ ಇಷ್ಟವಾಯಿತು. ಮತ್ತೆ ಭೇಟಿ ನೀಡಿ ಉಳಿಸಿರುವುದನ್ನು ಮುಗಿಸುತ್ತೇನೆ:)
ಆದರೆ ನೀವು ಹೇಳಿದ೦ತೆ ನಿಮ್ಮ ಕೆಲವು ಕನಸುಗಳಿಗಾಗಿ ಹುಡುಕಾಡಿದೆ. ಸಿಗಲಿಲ್ಲ.. ಇನ್ನೊಮ್ಮೆ ನೋಡುವೆ.

ಅಂತರ್ವಾಣಿ said...

ಧನ್ಯವಾದಗಳು ಸುಷ್ಮ ಅವರೆ.

ನನ್ನ ಕನಸಿನ ಲೇಖನಗಳು
೧. ಕನಸಲ್ಲು ನಿನ್ನ ರೂಪ ಈ ಮನದಲ್ಲಿ ತರಲು ತಾಪ!
೨. Mall @ Malleshwara
೩. ಕನಸು

bhadra said...

ಭಾಷೆ ತಿಳಿಯದ ಪರಸ್ಥಳಕ್ಕೆ ಹೋದರೆ ಜೀವನ ಬಹಳ ಕಷ್ಟ ಅಲ್ವಾ ಜಯ್? ಎಲ್ಲೆಲ್ಲೂ ISKCON ಅವರ ಕೃಷ್ಣ ಮಂದಿರ ಇದ್ದರೆ ಸ್ವಲ್ಪ ಆದರೂ ಸಮಾಧಾನ ದೊರಕುವುದು

ಅಂತರ್ವಾಣಿ said...

ತ.ವಿ.ಶ್ರೀ ಅವರೆ,
ನಿಮ್ಮ ಮಾತು ನಿಜ. ಆದರೆ ನನಗೆ ಒಂದು ಅಸಮಾಧಾನವಿದೆ. ಕೇವಲ ಒಮ್ಮ ಮಾತ್ರವೇ ಅಲ್ಲಿಗೆ ಹೋಗುವ ಹಾಗಾಯಿತು... :(

Harisha - ಹರೀಶ said...

>> ಅಲ್ಲಿಯ ಹೆಂಗಸರು ಸೀರೆಯನ್ನು ಉಡುವುದನ್ನು ರೂಢಿ ಮಾಡಿಕೊಂಡಿದ್ದರು. ಭಾರತದ ಕೆಲವು ಮಾನಿನಿಯರು ಸೀರೆಯಲ್ಲಿರಲಿಲ್ಲ! ಪಾಶ್ಚಾತ್ಯ ದೇಶದವರು ನಮ್ಮ ಸಂಸ್ಕೃತಿ ಅಳವಡಿಸಿಕೊಂಡರೆ ಇಲ್ಲಿಯವರು ಅವರ ಸಂಸ್ಕೃತಿಯನ್ನು ಅನುಸರಿಸುತ್ತಾರೆ.

:-(