Thursday, 19 June 2008

ಮಹಾನ್ ಸತ್ಯ ಹರಿಶ್ಚಂದ್ರ

ಕೆಲವು ದಿನಗಳ ಹಿಂದೆ ನಡೆದ ಸತ್ಯ ಘಟನೆ. ನನ್ನ ಆಫೀಸಿನ ಬಸ್ಸಿನಲ್ಲಿ ಬರುವ ನನ್ನ ಸಹೋದ್ಯೋಗಿ (ಹೆಸರು ಬೇಡ.. ಸದ್ಯಕ್ಕೆ ಅವರನ್ನು ಬಮಿ[ಬಸ್ ಮಿತ್ರ] ಅಂತ ಕರೆಯುತ್ತೀನಿ) ಹಾಗು ನನ್ನ ನಡುವೆ ನಡೆದ ಒಂದು ಗಂಟೆಯ ಮಾತುಕತೆಯ ಮಧುರ ಚಣವನ್ನು ನಿಮ್ಮ ಮುಂದೆ ಹೇಳುತ್ತೇನೆ.

ನನ್ನ ಎಂದಿನ ದಿನಚರಿಯಂತೆ ಬಸ್ಸು ಏರಿದ ನಂತರ, ಕರ್ಣಗಳಿಗೆ ಶಾಸ್ತ್ರೀಯ ಸಂಗೀತ ಕೇಳುವ ಬಯಕೆ ತೀರಿಸೋದು. ಆದರೆ ಆ ದಿನ ಆ ಬಮಿ ನನ್ನ ಮುಂದಿನ ಆಸನದಲ್ಲಿ ಆಸೀನರಾಗಿದ್ದರು. ಬಹಳ ದಿನಗಳ ನಂತರ ಅವರನ್ನು ಮಾತಾಡಿಸೋಕೆ ಕಾಲ ಕೂಡಿ ಬಂದಿತು.

ನಾನು: ಹಾಯ್! ಹೇಗಿದ್ದೀರ?
ಬಮಿ: ಚೆನ್ನಾಗಿದ್ದೀನಿ ಶಂಕರ್.
ನಾನು: ಕೆಲಸ ಹೇಗಿದೆ?
ಬಮಿ: ಅದು ಕೂಡ ಸೂಪರ್!

ನನ್ನ ಕರ್ಣಗಳ ಆಸೆ ಪೂರೈಸೋಕೆ ನನ್ನ ಫೋನನ್ನು ತೆಗೆದೆ. ಆದರೆ, ಅವರೊಂದಿಗೆ ಮಾತಾಡದಿದ್ದಲ್ಲಿ ತಪ್ಪಾಗುತ್ತೆ ಎಂದು ಸುಮ್ಮನಾದೆ. ಅವರು ಬೇರೆ ವಿಚಾರಗಳನ್ನು ಮಾತಾಡಿದರು. ನಾನು ಸಮಂಜಸವಾಗಿಯೇ ಮಾತಾಡಿದೆ.

ಈ ಬಮಿ ಬಗ್ಗೆ ಎರಡು ವಿಚಾರ ಸ್ಪಷ್ಟ ಮಾಡುತ್ತೇನೆ. ಈತ ಬಸ್ಸಿನಲ್ಲಿ ಮಲಗಿದ್ದರೂ ಕಷ್ಟ! ಎಚ್ಚರ ಇದ್ದರೂ ಕಷ್ಟ!.. ಮಲಗಿದ್ದರೆ.... ಇವರ ಗೊರಕೆಯ ಶಬ್ದ ಕೇಳಲಾಗದು. ಎಚ್ಚರವಿದ್ದರೆ... ನನ್ನ ನಿಲ್ದಾಣ ಬರುವವರೆಗು ನನ್ನ ಜೊತೆ ಮಾತಾಡುತ್ತಾರೆ..."Bye. ನಾಳೆ ಮತ್ತೆ continue ಮಾಡೋಣ" ಅಂತಾರೆ. ಈತ "ಮಾತಿನ Machine" ಗಳಿಗೆ ಸರಿ! ನನಗಲ್ಲ.

ನಂತರ, ಈ ಬಮಿ 180 ಡಿಗ್ರಿಗೆ ತಿರುಗಿ ಕೂತ, ನನ್ನ ಜೊತೆ ಮಾತಾಡಲು ಅನುಕೂಲವಾಗುವಂತೆ. ಯಾವುದೋ ವಿಚಾರ ತೆಗೆದು ಮಾತು ಪ್ರಾರಂಭಿಸಿದ. ಸ್ವಲ್ಪ ಸಮಯದಲ್ಲೇ ತುಂಬಾ ಕುತೂಹಲ, ವಿಸ್ಮಯಕಾರಿ ನುಡಿಗಳು ನನ್ನ ಕಿವಿಗಳಿಗೆ ಬಿತ್ತು. ಅವನ್ನು ನಿಮ್ಮ ಮುಂದೆ ಬರೆಯುತ್ತಾಯಿದ್ದೇನೆ.

ಬಮಿ: ನಾನು High School ಓದುತ್ತಾಯಿರೋವಾಗ...International Cannes Film Festival ಬೆಂಗಳೂರಿನಲ್ಲೇ ನಡೆಯಿತು. ನಮ್ಮ ಮನೆ ಹತ್ತಿರಾನೆ.. ಜಯನಗರದಲ್ಲಿ ಮಾಡಿದ್ದು. ಇದು 1986 ಇರಬೇಕು.
ನಾನು: ಹೋ! (ಮನದೊಳಗೆ: ಏನಾಯ್ತೋ ನಿನಗೆ?. ಬೇರೆ ಯಾವ ವಿಷಯ ಸಿಗಲಿಲ್ವಾ??)
ಬಮಿ: ಆಗ ನನಗೆ Holidays ಇತ್ತು. ನಾನು By chance school ಹತ್ತಿರ ಹೋದೆ. ನಮ್ಮ school auditorium ನಲ್ಲೆ function ಮಾಡಿದ್ದರು.
ನಾನು: ಹು. (ಕರ್ಮ!)
ಬಮಿ: ಅಲ್ಲಿಗೆ Hollywood ಎಷ್ಟೋ Stars ಬಂದಿದ್ದರು. Arnold Schwarzenegger, *** , *****
ನಾನು: ಹೌದಾ (ಬೇರೆ ನಟರ ಹೆಸರುಗಳು ನನ್ನ ಜ್ಞಾಪಕದಲ್ಲಿಲ್ಲ. Arnold ಗೊತ್ತಿತ್ತು... ಆದರೆ... Schwarzenegger ಹೆಸರನ್ನು google ಸಹಾಯದೊಂದಿಗೆ ಹುಡುಕಿದೆ. )
ಬಮಿ: ನಾನು ಅವರ ಜೊತೆ ಮಾತಾಡಿದೆ.
ನಾನು: Hmm (ನಿನ್ನ ಪುರಾಣ ಕೇಳಬೇಕಾ ನಾನು... ಕುಡಿದು ಕೊಂಡು ಬಂದಿದ್ದೀಯಾ?)
ಬಮಿ: ಆಮೇಲೆ ನಮ್ಮ classroom ನಲ್ಲಿ Mummy Filmದು shooting ಮಾಡ್ತಾಯಿದ್ದರು.
ನಾನು: ಹು. (ಥು. ನಿನ್ನ)
ಬಮಿ: ಆವಾಗ Computer Technology ಇರಲಿಲ್ಲ ಅದಕ್ಕೆ Mechanical creature ಥರ ಮಾಡಿದ್ದರು. Mummy Film ನಲ್ಲಿ ಯಾವುದೋ ಒಂದು ಪ್ರಾಣಿ ಬರುತ್ತೆ ಅದರ ಹಾಗೆ ಕಾಣುವಂತೆ ಇತ್ತು. ಅದರೊಳಗೆ ಮನುಷ್ಯ ಹೋಗಿ ಅದರ movements ಕೊಡ್ತಾನೆ. ನಾನು ಅದರೊಳಗೆ ಹೋಗಿ Try ಮಾಡಿದೆ. ಆದರೆ movement ಕೊಡೋಕೆ ಆಗಲಿಲ್ಲ. ನೋಡಿ Mummy release ಆಗಿದ್ದು 1999-2000 ಅನ್ನಿಸುತ್ತೆ. ಆದರೆ ಅದರ shooting 1986 ಇಂದ start ಮಾಡಿದ್ದರು.
ನಾನು: ಹೌದು.
ಬಮಿ: ನಾನು ಒಂದು ಸಲ ಗುಲ್ಬರ್ಗಾದಲ್ಲಿ ಇದ್ದಾಗ ಎರಡು English Movie shooting ನಡೆಯುತ್ತಾಯಿತ್ತು. ನಾನು ಕಾಲೇಜಿನ campus ಇಂದ ನೋಡಿದೆ. ಅಲ್ಲಿ ಹೋಗಿ ಎಲ್ಲಾರನ್ನು ಮಾತಾಡಿಸಿದೆ. ಎಲ್ಲಾರು ತುಂಬಾ ಚೆನ್ನಾಗಿ ಮಾತಾಡಿದರು. ಆದರೆ ಅವರು ಯಾರು Media Persons ಅಂತ ನನಗೆ ಗೊತ್ತಿರಲಿಲ್ಲ... ನಾನು Media people ಹಾಗೆ.. ಹೀಗೆ ಅಂತ ತುಂಬಾ ಬೈತಾಯಿದ್ದೆ. ಯಾರು ಮಾತಾಡಲೇ ಇಲ್ಲ.
ನಾನು: (ಬೆಂಗಳೂರಿಂದ ಗುಲ್ಬರ್ಗಾಗೆ ಹೋದ್ಯಾ?)
ಬಮಿ: ಯಾವುದೋ Train Chasing scene...
ನಾನು: (ನೀನು ಬಿಡ್ತಾಯಿರೋದಕ್ಕಿಂತ ದೊಡ್ಡ Train ಅದಾ?)
ಬಮಿ: ಇವೆಲ್ಲಾ ಯಾವಗ ನನಗೆ ಗೊತ್ತಾಯ್ತು ಅಂದರೆ recent ಆಗಿ Star Movies ನಲ್ಲಿ Mummy ನೋಡ್ತಾಯಿದ್ದೆ. ಆಗ ಇವರನ್ನೆಲ್ಲಾ ಮುಂಚೆನೆ ಎಲ್ಲೋ ನೋಡಿದ್ದೀನಿ ಅನ್ನಿಸಿತು. ಹಾಗೆ ಜ್ಞಾಪಕ ಮಾಡಿಕೊಂಡೆ, ಗೊತ್ತಾಯ್ತು, ಇವರನ್ನು Film Festival ನಲ್ಲಿ ನೋಡಿದ್ದೀನಿ ಅಂತ.....
ನಾನು: ಹು
ಬಮಿ: ನಾನು ಹೀಗೆ ಎಷ್ಟೋ Media People ಜೊತೆ ಮಾತಾಡಿರ್ತೀನಿ.. ಅವರನ್ನು ಹಿಗ್ಗಾ ಮುಗ್ಗಾ ಬೈದಿರ್ತೀನಿ. ಆದರೆ ಅವರು Media ದವರು ಅಂತ ನನಗೆ ಗೊತ್ತೇ ಇರೋದಿಲ್ಲ.. (ಜೋರು ನಗು)
ನಾನು: (ಅದಕ್ಕಿಂತ ಜೋರು ನಗು....)
ಬಮಿ: ಆಮೇಲೆ ನಾನು ಸೊಲ್ಲಾಪುರ್ ದಲ್ಲಿ ಒಂದು Shooting ನೋಡುತ್ತಾಯಿದ್ದೆ... 5-6 years ಹಿಂದೆ. ನಿಮಗೆ ಕರೀನಾ ಕಪೂರ್ ಗೊತ್ತಲ್ವಾ?
ನಾನು: (ಅವಳು ನನ್ನ ಅತ್ತೆ ಮಗಳು)
ಬಮಿ: ಅವಳು ಮತ್ತೆ ಶಾಹೀದ್ ಕಪೂರ್ act ಮಾಡ್ತಾಯಿದ್ದರು. ಅದು ಯಾವ್ Film ಗೊತ್ತಾ? "Jab we Met". ನೋಡಿ ಎಷ್ಟೂ ವರ್ಷ ಆದಮೇಲೆ release ಆಗ್ತಾಯಿದೆ ಅಂತ....(ನಗು)
ನಾನು: (ನಗು)
ಬಮಿ: ನಾನು ಜಬ್ ವಿ ಮೆಟ್ ನೋಡಿದಾಗ ಇವರಿಬ್ಬರನ್ನೂ ಎಲ್ಲೋ ನೋಡಿದ್ದೀನಿ ಅನ್ನಿಸಿತು... ಆ shooting locations ನೋಡಿದ್ದೀನಿ ಅನ್ನಿಸಿತು..
ನಾನು: (ಇನ್ನು ಏನೇನು ಅನ್ನಿಸಿತು....?)
ಬಮಿ: ಆಮೇಲೆ ಗೊತ್ತಾಯ್ತು...
ನಾನು: ಹು.
ಬಮಿ: ಆಮೇಲೆ, ನಾನು ಹೊಸೂರಿನಲ್ಲಿ ಒಂದು ಕಡೆಯಿದ್ದೆ. ಅಲ್ಲಿ ಸದಾ ಹೀರೋಯಿನ್ನು, ಸೂರ್ಯ ಹೀರೋ, ತ್ರಿಷಾ ಅವರೆಲ್ಲಾ ಇದ್ದರು.. ಅವರನ್ನೆಲ್ಲಾ ಮಾತಾಡಿಸ್ತಾಯಿದ್ದೆ.. ಈಗ ಕನ್ನಡದಲ್ಲಿ ಹೀರೋಗಳು ಇದ್ದಾರಲ್ವ? ಸುದೀಪ್, ಗಣೇಶ್ ಅವರೆಲ್ಲಾ, ಹುಬ್ಬಳ್ಳಿ ಹತ್ತಿರ Training ತೊಗೋತಾಯಿದ್ದರು...ಸ್ವಲ್ಪ ವರ್ಷ್ಗಳ ಹಿಂದೆ....ಈಗ ನೋಡಿ ಎಷ್ಟು ದೊಡ್ಡ Star ಆಗಿದ್ದಾರೆ...
ನಾನು: ಹೌದಾ?(Hollywood, bollywood, tollywood, sandalwood ಎಲ್ಲಾರ Contact ಇದೆ ನಿನ್ನ ಹತ್ತಿರ.....)
ಬಮಿ: ಜಯನಗರದಲ್ಲಿ ನನ್ ಮನೆ oppositege ಒಂದು ದೊಡ್ದ ಮನೆಯಿತ್ತು. Business Man ಅನ್ಸುತ್ತೆ.. ಅವರ ಮನೆಯನ್ನು Shooting studio ಥರ use ಮಾಡ್ತಾಯಿದ್ದರು..
ನಾನು: ಹು. (ಇದೊಂದು ಮಾತು ಸ್ವಲ್ಪ ಮಟ್ಟಿಗೆ ನಂಬೋತರಹ ಇದೆ...)
ಬಮಿ: ಆ ಮನೇಲಿ ಎಷ್ಟು Film shooting ಆಗಿದೆಯೋ ಲೆಕ್ಕಾನೆ ಇಲ್ಲ! English movie shooting ನಡಿತಾಯಿತ್ತು. ಒಂದು movie ಇದೆ... ***** ಅದರಲ್ಲಿ swimming pool scene ಬರುತ್ತೆ ಅದನ್ನು ಇವರ ಮನೇಲೆ shooting ಮಾಡಿದ್ದ್ರು.
ನಾನು: ಹೋ! (ಹೆಸರು ನೆನಪಿಲ್ಲ.... )
ಬಮಿ: ಆ ಮನೇಲಿ ಒಬ್ಬ ಹುಡುಗಿ ಬಂದಿದ್ದಳು.. ನೋಡೋಕೆ ಚೆನ್ನಾಗಿದ್ದಳು. ಅವಳು ಕಪೂರ್ family ನವಳು ಅಂತ ಗೊತ್ತಿತ್ತು. ಆದರೆ ಯಾರು ಅಂತ ಗೊತ್ತಿರಲಿಲ್ಲ....ಯಾವುದೋ Dance practice ಮಾಡ್ತಾಯಿದ್ದಳು.. ಅದು ಯವ್ದು ಗೊತ್ತಾ? Recent ಆಗಿ Don movie ಬಂತು ಅಲ್ವಾ?
ನಾನು: ಏ ಮೆರಾ ದಿಲ್.....
ಬಮಿ: ಅದೆ ನೋಡಿ..ಅವಳು ಕರೀನಾ ಅಂತ ಆ Film release ಆದಮೇಲೆ ಗೊತ್ತಾಯ್ತು. She has been practising for one song from long time....
ನಾನು: (ಅವಳು ಮುಂದೆ ಇದನ್ನು ಹೇಳು....)
ಬಮಿ: ನಾನು International Level ನಲ್ಲಿ ಒಂದು political party ಮಾಡಬೇಕು ಅಂತ ಇದ್ದೀನಿ..
ನಾನು: ನಿಜ. ಒಂದು International level party ಬೇಕೇ ಬೇಕು... ನೀವು ಮಾಡಿ...
ಬಮಿ: ನಾನು Hitech movie ಮಾಡಬೇಕು ಅಂತ.. ಇದ್ದೀನಿ.. Hollywood ನಲ್ಲೇ ಮಾಡುತ್ತೀನಿ. ಅದಕ್ಕೆ ಅಲ್ಲಿ ಹೋಗ ಬೇಕು first. ಅದಕ್ಕೆ ನನ್ನ manager ge request ಮಾಡಿಕೊಂಡಿದ್ದೀನಿ... ನನ್ನ Los Angeles branch ಗೆ Transfer ಮಾಡಿಸೋಕೆ.. ತುಂಬಾ pressure ಹಾಕುತ್ತಾಯಿದ್ದೀನಿ....
ನಾನು: (ಹಾಕು ಹಾಕು)
ಬಮಿ: ಅದಕ್ಕೆ onsite manager ge phone ಮಾಡಿ ಮಾತಾಡಿದ್ದೀನಿ. Los Angeles ನಲ್ಲಿ ನಮ್ಮ project ಇದೆ ಅಲ್ವಾ? ಅಲ್ಲಿಗೆ ನನ್ನ recommend ಮಾಡಿ ಅಂತ ಕೇಳಿದ್ದೀನಿ.
ನಾನು: ಹು
ಬಮಿ: ಹೇಗು ನನಗೆ ಎಲ್ಲಾ Stars ಪರಿಚಯ ಆಗಿದೆ. ಈಗ ಅವರಿಗೆ ಮತ್ತೆ ಹಳೇದನ್ನು ಜ್ಞಾಪಿಸಿ ಮತ್ತೆ Contact re-establish ಮಾಡ್ಕೋಬೇಕು...
ನಾನು: ಮಾಡಿ..

ಅಷ್ಟರಲ್ಲಿ ಅವರಿಗೆ ಒಂದು ಕರೆ ಬಂತು... ಫೋನು ತೆಗೆದು ಮಾತಾಡಲು ಪ್ರಾರಂಭಿಸಿದರು... ನಾನು ನನ್ನ FM on ಮಾಡಿಕೊಂಡು ನಿದ್ದೆ ಬಂದವನಂತೆ ನಟಿಸುತ್ತಾ ಸೀಟಿಗೆ ಒರಗಿಕೊಂಡೆ.....(ಫೋನ್ ಮಾಡಿದವರನ್ನು ವಂದಿಸುತ್ತಾಯಿದ್ದೆ....)

Saturday, 7 June 2008

ಫಿನ್ ಲ್ಯಾಂಡಿಗೆ ಪ್ರವಾಸ - ಮೊದಲೆನೆ ಬಾರಿ - ಹೊಟೆಲ್ ಒಳಗೆ

ಹಿಂದಿನ ಭಾಗ ಇಲ್ಲಿದೆ

ನಾವಿಬ್ಬರು, ನಮ್ಮ ಆಸ್ತಿಯೊಂದಿಗೆ ಹೊಟೆಲ್ ಒಳಗೆ ಹೋದ್ವಿ. ಹೋಟೆಲ್ದು, ಸ್ವಯಂಚಾಲಿತ ಬಾಗಿಲು. ನಾವು ಅದಕ್ಕೆ ಕಾಣಿಸಿಕೊಂಡ ತಕ್ಷಣವೇ, "ತರೆದಿದೆ ಬಾಗಿಲು, ಒಳಗೆ ಬನ್ನಿ ಅತಿಥಿ" ಅಂತ ನಮ್ಮನ್ನು ಬರ ಮಾಡಿಕೊಂಡಿತು. ನಾವು ಹೊಟೆಲ್ ಒಳಗೆ ಕಾಲಿಟ್ಟ ತಕ್ಷಣ ಅಲ್ಲಿಯ ಉಷ್ಣತೆ ಸುಮಾರು ೨೫ ಡಿಗ್ರಿಯಷ್ಟಿರ ಬಹುದೇನೋ ಅನ್ನಿಸಿತು. ನನ್ನ ಹಲ್ಲುಗಳು ನಾಟ್ಯವಾಡುವುದನ್ನು ನಿಲ್ಲಿಸಿದವು. ಮೈ ಮೇಲಿನ್ ಜರ್ಕಿನ್ ಬೇಡ ಅನ್ನಿಸಿತು. ಕೋತಿ ಟೋಪಿ ಕೂಡ ತೆಗೆದು ಬಿಟ್ಟೆ!. ಅಲ್ಲಿಂದ ನಾವು reception ಗೆ ಹೋದೆವು.

ನಮ್ಮ ನಿರೀಕ್ಷತೆಯಂತೆ, "Good Morning. How may I help you?" ಅನ್ನೋ ನುಡಿಗಳು ಕೇಳಿಸಿದವು.
"We are from India, and working for MNC here. A room should be booked in our names." ಅಂತ ಹೇಳಿದೆ. ಆಗ ಅವರು. "Could you tell your name sir?" ಅದಕ್ಕೆ ನಾವು, "Jayashankar" and "Renjith" ಅಂತ ಹೇಳಿದ್ವಿ. ಅವರ Database ನೋಡಿ, "Yes Sir. Rooms are booked for 28 Days. Kindly fill these forms Sir, I will hand over the keys".

ಎಲ್ಲಾ ಶಾಸ್ತ್ರಗಳು ಮುಗಿದ ಮೇಲೆ, ಕೀ ಕೊಡ್ತಾರೆ ಅಂತ ಕಾದೆ, ಆದರೆ ನನಗೆ Credit Card ನ್ನು ಹೋಲುವ ಒಂದು ಕಾರ್ಡ್ ಕೊಟ್ಟ. ಅದರ ಮೇಲೆ, ನನ್ನ Room number ಬರೆದಿತ್ತು, 820. ಅವನದು, 824.

ನಮ್ಮ ಆಸ್ತಿಗಳನ್ನು ಎಳೆದು ಕೊಂಡು, lift ಬಳಿ ಹೋದ್ವಿ. ಅದರ ಒಳಗೆ ಹೋದ್ವಿ. 8 ಅನ್ನು ಒತ್ತಿದೆವು. ಆದರೆ ಲಿಫ್ಟ್ ಮೇಲೇರಲಿಲ್ಲ! ಏನಾಯಿತು ಅಂತ ಯೋಚನೆ ಮಾಡ್ತಾಯಿದ್ವಿ. ಅಷ್ಟರಲ್ಲಿ, ಬೇರೊಬ್ಬ ಬಂದ, ತನ್ನ, ರೂಮ್ ಕೀ (ಕಾರ್ಡ್)ನ್ನು ಲಿಫ್ಟಿನ ಒಂದು ಜಾಗದಲ್ಲಿ Insert ಮಾಡಿ, ತೆಗೆದೆ. ಆನಂತರ ಅವನು ಹೋಗಬೇಕಿದ್ದ Floor ನ button ಒತ್ತಿದ. ಆಮೇಲೆ ನಾವು, ಒಂದು ಕಾರ್ಡ್ ಹಾಕಿ, 8 ನ್ನು ಒತ್ತಿದೆವು. ಲಿಫ್ಟು ತನ್ನ ಪ್ರಯಾಣ ಪ್ರಾರಂಭ ಮಾಡಿತು. ನಾವು 8 ನೆ ಮಹಡಿ ಬಂದ ಕೂಡಲೆ, ಲಿಫ್ಟಿನ ಹೊರಗೆ ನಡೆದೆವು.

ಸುತ್ತ ಮುತ್ತ ಕಣ್ಣು ಹಾಯಿಸಿದೆವು. ನಮ್ಮ ರೂಮಿನ ದಾರಿ ಕಾಣಿಸಿತು. ಆ ಕಡೆ ನಡೆದೆವು. ಮೊದಲಿಗೆ ನನ್ನ ರೂಮ್ ಸಿಕ್ಕಿತು.

ನನ್ನ ಬಳಿ ಇದ್ದ ಆ ಕಾರ್ಡನ್ನು ಬಾಗಿಲಿಗೆ ಹಾಕಿ ತೆಗೆದೆ. ನಂತರ ಬಾಗಿಲು ತೆಗೆದೆ. ಒಳಗೆ ಹೋಗಿ, ನನ್ನ ಆಸ್ತಿಗಳನ್ನು ಇಟ್ಟೆ.ನಾನು ಗುರುವಾರದ ಸ್ನಾನ ಮಾಡಲು, ಎಲ್ಲ ವಸ್ತ್ರಗಳನ್ನು ತೆಗೆದು ಕೊಂಡು ಬಚ್ಚಲ ಮನೆಗೆ ಹೋದೆ. ಅಲ್ಲಿದ್ದ ಶವರ್ರಿನ ಅದ್ಯಾವುದೋ ಭಾಗವನ್ನು ತಿರುಗಿಸಿ, ವಿಪರೀತ ಬಿಸಿ ನೀರು ಹರಿದು ಬಂದು ನನ್ನ ಕೈಗೆ ಚುರುಕು ಮುಟ್ಟಿಸಿತು. ಆಮೇಲೆ ಇನ್ನೊಂದು ಕಡೆಯಲ್ಲಿ ತಿರುಗಿಸಿದಾಗ ವಿಪರೀತ ತಣ್ಣನೆ ನೀರು ಹರಿದು ಬಂದಿತು. ಇಷ್ಟೆ ಇದರ ತತ್ವ ಅಂತ ತಿಳಿಯಿತು. ಸ್ನಾನ ಆದಮೇಲೆ ಪ್ರತಿದಿನದಂತೆ ದೇವರಿಗೆ ಕೈ ಮುಗಿಯೋದು. ನಾನು ಮನೆಯಿಂದ ಹೊರಗಡೆ ಹೋಗೋವಾಗ ಬರಿದಾದ ಹಣೆಯಲ್ಲಿ ಹೋಗುವವನಲ್ಲ! ಕುಂಕುಮವೋ ಅಥವಾ ವಿಭೂತಿಯೋ ಇಟ್ಟೇ ಹೊರಡೋದು. ಫಿನ್ ಲ್ಯಾಂಡಿನಲ್ಲಿ ಕುಂಕುಮ ಎಲ್ಲಿಂದ ತರಲಿ?? ಅದಕ್ಕೆ ಭಾರತದಿಂದಲೇ ತಂದಿದ್ದೆ.
ಮೊದಲಿಗೆ ಎರಡು ಫೋಟೋಗಳನ್ನು ಟೇಬಲ್ಲಿನ ಮೇಲೆ ಇಟ್ಟು, ತಾಯಿ ಹಾಗು ಮಗನಿಗೆ ನಮಸ್ಕರಿಸಿ, ಆಫೀಸಿಗೆ ಹೊರಟೆ. ನನಗೆ ಸಂಬಂಧಿಸಿದ ಆಸ್ತಿಗಳನ್ನು ಚಿಕ್ಕ ಬ್ಯಾಗಿನಲ್ಲಿ ಇಟ್ಟು, ಸ್ನೇಹಿತನ ರೂಮಿನೆಡೆಗೆ ಹೋದೆ.

ಅವನೂ ಸಹ ತಯಾರಾಗಿದ್ದ. ಇಬ್ಬರೂ ಲಿಫ್ಟಿನಲ್ಲಿ ಇಳಿದೆವು. ಇಲ್ಲಿ ಒಂದು ವಿಷಯವೇನೆಂದರೆ, ಇಳಿಯುವಾಗ ನಾವು ನಮ್ಮ ಕಾರ್ಡನ್ನು ಅದಕ್ಕೆ ತೋರಿಸಬೇಕಿಲ್ಲ! ಈ ವಿಷಯ ಗೊತ್ತಿಲ್ಲದೆ, ತೋರಿಸಿದ್ವಿ. ಏನೂ ತೊಂದರೆ ಆಗಲಿಲ್ಲ. ಹೊಟೆಲಿಂದ ಹೊರಗೆ ಹೋದ್ವಿ. ಆ ಟ್ಯಾಕ್ಸಿ ಚಾಲಕ ಹೇಳಿದ ದಾರಿ ನಮ್ಮ ಕಣ್ಣಿಗೆ ಕಾಣಿಸುತ್ತಾಯಿತ್ತು. ಆ ಕಡೆಗೆ ಹೊರಟೆವು. ನಾವು ಆ ದಾರಿಯನ್ನು ಸಮೀಪಿಸುತ್ತಿದ್ದಂತೆಯೇ, ನಮ್ಮ ಕಂಪನಿಯ ನಾಮಫಲಕ ದೊಡ್ಡದಾಗಿ ಕಾಣಿಸಿತು. ಅದು ಮೈನ್ ರೋಡಿನಲ್ಲೇ ಇತ್ತು. ನಮ್ಮ ಆಫೀಸಿನ reception ಬಳಿ ಹೋದಾಗ, "Good Morning!." ಅಂತ ಸಂದೇಶ ಕೇಳಿಸಿತು.

[ಆಫೀಸಿನಲ್ಲಿ ಏನಾಯ್ತು ಅಂತ ಮುಂದಿನ ಭಾಗದಲ್ಲಿ ]

Thursday, 5 June 2008

ಮಲೆಯಲ್ಲೊಂದು ಮಾಣಿಕ್ಯ!

[ ವಿಶ್ವ ಪರಿಸರ ದಿನಕ್ಕೆ, ಪರಿಸರಕ್ಕೊಂದು ಉಡುಗೊರೆ.]

ಕುಂಚದಿಂದ ಚಿತ್ರಿಸಿದೆ ನಿನ್ನಂದವ
ಇಂದ್ರಲೋಕದೆಡೆಗೆ ಹಾರಿಸಿತು ಮಾರುತ!
ಮಲೆಯೊಂದು ತಡೆಯಿತು ಹಾರಾಟವ,
ನಿನ್ನಂದವಿರಲಿ ಭೂಮಿಗೆ ಎನ್ನುತ!

ಬಾನಾಡಿಗಳಿಗೆ ಹೊಸ ಒಡನಾಡಿ ಸಿಗಲು
ಹಾರಾಡಿ, ಕುಣಿದಾಡಿ, ಸ್ವಾಗತಿಸಿದವು.
ಮಲೆಯ ನಡುವೆ ನೆಲೆಸಲು,
ಚಂದದ ಗೂಡೊಂದ ಕಟ್ಟಿದವು

ಸುರಿವ ಮಳೆಗೆ ನೆನೆಯದೆ
ಸುಡುವ ಬಿಸಿಲಿಗೆ ಮಾಸದೆ
ಕಾಲ ಕಾಲಕ್ಕೂ ಚಿತ್ರವಿರುವಂತೆ
ಕಾಪಾಡುವ ಕಾಯಕ ಬಾನಡಿಗಳದಂತೆ!

ಹೊಂಬಿಸಿಲು ತುಂಬಿಸುವುದು ಮೆರುಗು
ಪ್ರಕೃತಿ ಜೊತೆಗೂಡಿಸುವುದು ಸೊಬಗು!
ಮಲೆಯ ನಡುವೆಯೊಂದು ಮಾಣಿಕ್ಯ!
ಪ್ರಕೃತಿಯೊಂದಿಗೆ ಚಿತ್ರ ಐಕ್ಯ!

[ಹಿಂದಿನ ವರ್ಷದ ಉಡುಗೊರೆ ಇಲ್ಲಿದೆ]

Saturday, 31 May 2008

ಒಬ್ಬನೆ ಮಾತಾಡಿದೆ!

(ಇದು ಯಾವ ಸಂದರ್ಭದಲ್ಲಿ ಬರೆದೆ ಅಂತ ನನಗೆ ಮತ್ತು ನನ್ನ ಈ ಸ್ಥಿತಿಗೆ ಕಾರಣವಾದವರಿಗೆ ಗೊತ್ತು.)

ಒಬ್ಬನೆ ಮಾತಾಡಿದೆ
ಇನ್ನೊಬ್ಬ ಜೊತೆಗಿಲ್ಲದೆ
ಒಬ್ಬನೆ ಮಾತಾಡಿದೆ!

ನಾ ಬಯಸಿದ ಜೀವ
ಸನಿಹ ಬಾರದಿರಲು
ಒಬ್ಬನೆ ಮಾತಾಡಿದೆ!

ಕಲ್ಲ ಬೆಂಚ ಮೇಲೆ ಕೂತು
ಕಾಯುವಲ್ಲಿ ಸುಖವಿಲ್ಲದೆ
ಒಬ್ಬನೆ ಮಾತಾಡಿದೆ!

ಉಸಿರುಸಿರು ಎಣಿಸುತ
ಹಸಿರೆಲೆಯ ವೀಕ್ಷಿಸುತ
ಒಬ್ಬನೆ ಮಾತಾಡಿದೆ!

ನೀ ಬಳಿಗೆ ಬಂದಾಗ
ಬೇಸರ ಸರಿದಾಗ
ಹಿಗ್ಗುತ ಮಾತಾಡಿದೆ!