Sunday 30 March, 2008

ಶ್ವೇತ ಮಯೂರ

ಮೈಸೂರಿನ ಕಾರಂಜಿ ಕೆರೆಯ ಪಕ್ಷಿಗಳ ಪಂಜರದಲ್ಲಿ ನನ್ನ ಕಣ್ಣಿಗೆ ಬಿದ್ದ ಶ್ವೇತ ಮಯೂರ. ನನಗೆ ಇದು ನಿಜವೇ ಅನ್ನಿಸಿತು. ಬಿಳಿ ನವಿಲು ಇರುವುದು ಎಂಬ ವಿಷಯ ಅರಿಯದವನಾಗಿದ್ದೆ.

[ಶ್ವೇತ, ನಿನ್ನ ಗರಿ ತೋರ್ಸಮ್ಮ!]

"ದೇಶ ಸುತ್ತು... ಕೋಶ ಓದು.." ಜ್ಞಾನ ಪಡೆದುಕೊ.
ಈ ಮಾತು ಸತ್ಯ ಅಲ್ವಾ?

Saturday 29 March, 2008

Mall @ Malleshwara

ಕಳೆದ ಶುಕ್ರವಾರ, ನಗರದ ಮಲ್ಲೇಶ್ವರದಲ್ಲಿ ನೂತನವಾಗಿ ಒಂದು ಬಟ್ಟೆಯ ಮಳಿಗೆ ಪ್ರಾರಂಭಗೊಂಡಿತ್ತು. ನನಗೂ ಹೊಸ ಬಟ್ಟೆ ಖರೀದಿಸುವ ಆಸೆ , ವಿದ್ಯಾರಣ್ಯಪುರದಲ್ಲಿ ಬಸ್ ಹತ್ತಿ, ಮಲ್ಲೇಶ್ವರದಲ್ಲಿ ಇಳಿದೆ. ಸಂಪಿಗೆ ರಸ್ತೆಯಲ್ಲಿ ಇದ್ದ ಆ ಮಳಿಗೆಯನ್ನು ಹುಡುಕಿದೆ.
ಅಲ್ಲಿ, ಅಂಗಡಿ ಮುಂದಿದ್ದ ಆಕರ್ಷಕವಾದ ಫಲಕ ನನ್ನ ಕೈ ಬೀಸಿ ಕರೆಯಿತು. ಅದು ಈ ರೀತಿ ಹೇಳಿತು. "ಇಲ್ಲಿ ವಿದೇಶೀ ಬಟ್ಟೆಗಳು ಅತಿ ಕಡಿಮೆ ದರದಲ್ಲಿ ಸಿಗುವುದು ಹಾಗು 2 ಷರ್ಟಿಗೆ 1 ಪ್ಯಾಂಟು ಉಚಿತ". ಸರಿ, ಒಳಗೆ ಹೋದೆ. ಬಾಗಿಲ ಬಳಿಯೇ ಒಬ್ಬ ಎದುರಾದ. ಅವನ ಕೈಯಲ್ಲಿ ಕೆಲವು ಹಾಳೆಗಳು ಇದ್ದವು. ಅವನು ನನಗೆ ಆ ಹಾಳೆಯನ್ನು ಕೆಲವು ಮಾಹಿತಿಯೊಂದಿಗೆ ತುಂಬುವಂತೆ ಹೇಳಿದ. ಕೊನೆಯಲ್ಲಿ ಸಹಿ ಹಾಕಿ ಅಂದ. ನಾನು,ಇದೊಂದು ಸಮೀಕ್ಷೆ ಇರಬಹುದು ಎಂದು ತಿಳಿದೆ. ಕಣ್ಣಿಗೆ ಕಾಣಿಸದ ಹಾಗಿರುವ ಅಕ್ಷರಗಳಿಂದ ಕೂಡಿದ ಮಾಹಿತಿಯು ಇತ್ತು. ನಾನು ಯಾವುದನ್ನೂ ಓದದೆ ಸಹಿ ಹಾಕಿದೆ.

ನನ್ನ ವಿಚಾರಿಸೋದಕ್ಕೆ ಅಂಗಡಿ ಹುಡುಗ ಬಂದ. ನಾನು ಅವನಲ್ಲಿ ಕೇಳಿದೆ, "ಷರ್ಟ್ ಅಳತೆ 40 , ಪ್ಯಾಂಟ್ ಅಳತೆ 32, ಇದಕ್ಕೆ ಬಟ್ಟೆ ತೋರಿಸು". ಅದಕ್ಕೆ ಅವನು, "ಸಾರ್, ಇಲ್ಲಿ 150 ದೇಶದ ಬಟ್ಟೆಗಳು ಇವೆ. ನಿಮಗೆ ಯಾವ ದೇಶದ ಬಟ್ಟೆ ಬೇಕು?". ಆಗ ನಾನು,"2 - 3 ದೇಶದ ಬಟ್ಟೆಗಳನ್ನು ತೋರಿಸು ಅದರಲ್ಲಿ ನಾನಗೆ ಬೇಕಾದದ್ದನ್ನು ಕೊಳ್ಳೂತ್ತೇನೆ". "ನಮ್ಮ ಗೋದಾಮಿನಿಂದ ತರ್ತೀನಿ ಸಾರ್, ಸ್ವಲ್ಪ ಸಮಯ ಆಗುತ್ತೆ. ಇಲ್ಲೆ ಇರಿ" ಅಂದ.

ತುಂಬಾ ಸಮಯ ಕಳೆದರೂ ಹೋದ ಹುಡುಗ ಬರಲೇ ಇಲ್ಲ. ಬೇರೆ ಅಂಗಡಿಗೆ ಹೋಗುವ ನಿರ್ಧಾರ ಮಾಡಿದೆ. ಅಷ್ಟರಲ್ಲಿ ಅಲ್ಲಿದ್ದ ಇನ್ನೊಬ್ಬ, "ಹಾಗೆ ಆಗೋದಿಲ್ಲ ಸಾರ್, ನೀವು ಬಾಗಿಲ ಬಳಿ ಸಹಿ ಹಾಕಿದೀರ, ಅದರಂತೆ ಒಂದು ಜೊತೆ ಬಟ್ಟೆ ಖರೀದಿಸಿಯೇ ಇಲ್ಲಿಂದ ಹೋಗ್ಬೇಕು". ನಾನು ಏನು ಮಾತಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನಂತರ ಅವನು, "ನೀವು ಪಕ್ಕದಲ್ಲೇ ಇರುವ ನಮ್ಮ ಉಪಾಹಾರ ಮಂದಿರಕ್ಕೆ ಹೋಗಿ, ತಿಂಡಿ, ಕಾಫಿ, ಮುಗಿಸಿ ಬನ್ನಿ, ಅಷ್ಟರಲ್ಲಿ ನಿಮಗೆ ಸೂಕ್ತವಾದ ಬಟ್ಟೆ ಬಂದಿರುತ್ತ " ಅಂದ. "ಅದ್ಯಾಕ್ಕೆ? ನಾನು ಇಲ್ಲೆ ಇರ್ತೀನಿ" ಅಂದೆ. ಅದಕ್ಕೆ ಅವನು, ನಾನು ಸಹಿ ಮಾಡಿದ ಹಾಳೇ ಇದೆ, ಅದರಂತೆ ನಡೆದುಕೊಳ್ಳದಿದ್ದರೆ, ಕೋರ್ಟಿನಲ್ಲಿ ಕೇಸೆ ಹಾಕಬಹುದು ಅಂದ. ನಾನು ದಿಗ್ಭ್ರಾಂತನಾದೆ. ಬೇರೆ ದಾರಿಯಿಲ್ಲದೆ ಆ ಉಪಾಹಾರ ಮಂದಿರಕ್ಕೆ ಹೋದೆ.

ಅಲ್ಲಿ, ಟೇಬಲ್ಲಿನಲ್ಲಿ ಕುಳಿತು, ದೋಸೆಯನ್ನು ತರುವಂತ ಸಪ್ಲೈಯರ್ಗೆ ಹೇಳಿದೆ. ಅವನು, ಸ್ವಲ್ಪ ಹೊತ್ತಿನಲ್ಲೇ ಬಂದು ಒಂದು ಹಾಳೆಯನ್ನು ಮುಂದೆ ಇಟ್ಟ. "ನಾನು ಕೇಳಿದ್ದು ದೋಸೆ, ನೀನೇನು ಕೊಡ್ತಾಯಿರೋದು?". "ಇದು ಪದಬಂಧ ಸಾರ್. ನೀವು ಇದನ್ನ ಉತ್ತರಿಸಿ. ಸರಿಯಾದ ಉತ್ತರಕ್ಕೆ ಬಹುಮಾನವಿದೆ."

ಬೇಡವಾದ ಮಾತುಗಳನ್ನು ಕೇಳಿ ಕೇಳಿ ನನ್ನ ಪಿತ್ತ ಈಗಾಗಲೇ ನೆತ್ತಿಗೇರಿತ್ತು. ಎಲ್ಲರ ಮೇಲಿನ ಕೋಪ ಇವನ ಮೇಲೆ ತಿರಿಸೋಣ ಎಂದು, "ಯಾಕಪ್ಪ ಹೇಗಿದೆ ಮೈಗೆ?" ಅಂದಾಗ, ಅವನು ಮತ್ತೆ ಆ ಒಪ್ಪಂದದ ಬಗ್ಗೆ ಹೇಳಿದ. ಮರು ಮಾತನಾಡದೆ, ನಾನು ಅದನ್ನು ಬಿಡಿಸೋಕೆ ಕೂತೆ. ಕೆಲವೇ ಕ್ಷಣಗಳಲ್ಲಿ ಅದನ್ನು ಬಿಡಿಸಿದೆ. ತಕ್ಷಣ ಅವನು ದೋಸೆ ತಂದು ಕೊಟ್ಟ. ದೋಸೆಯು ಆಯ್ತು. ಬಿಸಿ ಬಿಸಿ ಕಾಫಿಯು ಆಯ್ತು. ಪುನಃ ಬಂದೆ ನನ್ನ ಬಟ್ಟೆ ಕೊಂಡುಕೊಳ್ಳಲು.

ಬಟ್ಟೆ ತರಲು ಹೋಗಿದ್ದ ಹುಡುಗ ಆಗಲೆ ಬಂದು ನನ್ನ ಎದುರು ನೋಡುತ್ತಿದ್ದ. ಹೋದ ತಕ್ಷಣವೇ ಅವನು "ಸಾರ್, ನಿಮಗೆ ಹೊಂದುವ ಬಟ್ಟೆಗಳು ಇಲ್ಲಿ ಇವೆ ನೋಡಿ" ಅಂದ. ನೋಡಿದರೆ.. ಅವ್ಯಾವೂ ವಿದೇಶೀ ಉಡುಪು ತರಹ ಕಾಣಿಸಲಿಲ್ಲ! ಆದರೂ ಏನೋ ಖರೀದಿಸಲೇ ಬೆಕಲ್ವಾ ಅಂತ 2 ಷರ್ಟ್ ಆರಿಸಿದೆ. ಅವನಿಗೆ ಪ್ಯಾಂಟ್ ಉಚಿತ ಅಲ್ವ ಅದನ್ನು ಕೊಡು ಅಂತ ಕೇಳಿದೆ. ಅದಕ್ಕೆ ಅವನು, ಒಂದು ಜೀನ್ಸ್ ತೋರಿಸಿದ. ಅದನ್ನು ಬಿಡಿಸಿ ನೋಡಲು ಸುಮಾರು ೨೫ ತೇಪೆಗಳಿದ್ದವು. "ಯಾವುದೋ ಹಳೆ ಪ್ಯಾಂಟಿಗೆ ತೇಪೆ ಮಾಡಿರೋ ಹಾಗೆ ಇದೆ "ಅಂದೆ, ಆಗ ಅವನು, "ಇದು ಲೇಟೆಸ್ಟ್ ಫ್ಯಾಶನ್ ಸಾರ್"ಅಂತ ಹೇಳಿ ನನ್ ಬಾಯಿ ಮುಚ್ಚಿಸಿದ.

ಕೊನೆಗೆ ಆ ಬಟ್ಟೆ ಪ್ಯಾಕ್ ಮಾಡಿಸಿ, ಮನೆಗೆ ತೆಗೆದುಕೊಂಡು ಬರಲು ಸಿದ್ಧನಾದೆ. ಅಷ್ಟರಲ್ಲಿ ಅಮ್ಮ ಬಂದು," ಮಗೂ! 6.15 ಆಯ್ತು, ಆಫೀಸ್ ಗೆ ಹೋಗಲ್ವಾ?" ಅಂತ ಎಚ್ಚರಿಸಿದಾಗಲೇ ತಿಳಿಯಿತು ನಾ ಕಂಡಿದ್ದು ಕನಸು ಅಂತ.

ಎದ್ದ ತಕ್ಷಣ ನನ್ನ ಮನದಲ್ಲಿದ್ದ ಆತಂಕವೆಲ್ಲಾ ಮಾಯವಾಯಿತು. ಸದ್ಯ! ಆ ತೇಪೆ ಪ್ಯಾಂಟ್ ಧರಿಸಿ ಊರೆಲ್ಲಾ ತಿರುಗಾಡುವಂತಿಲ್ಲವಲ್ಲ ಅಂತ.

Thursday 27 March, 2008

ಮರುಳು ಮಾತುಗಳು


ಪದಗಳಿಲ್ಲ ನಿನ್ನ ಕಂಗಳ ವರ್ಣಿಸಲು,
ಮಾತು ಹೊರಡದೆ ಮೂಕನಾದೆ!
ಹಸಿವಿಲ್ಲ ನೀ ಮುಂದಿರಲು
ಏನೂ ತಿನ್ನದೆ ಹೊಟ್ಟೆ ತುಂಬಿದೆ!

ನೋಡಲಿಲ್ಲ ನಿನ್ನ ಮುಂಗುರುಳ
ದೃಷ್ಟಿ ಹೋಗಿ ಕುರುಡನಾದೆ!
ಕೇಳಲಿಲ್ಲ ನಿನ್ನ ಪಿಸು ಮಾತುಗಳ
ಏನೂ ಕೇಳಿಸದೆ ಕಿವುಡನಾದೆ!

ನರ್ತಿಸಿತು ನಿನ್ನ ನಡುವು
ಸುಮ್ಮನೆ ಸೋತು ಹೋದೆ!
ಸಾಟಿಯಿಲ್ಲ ನಿನ್ನ ನಡೆಗೆ
ಹಂಸವೇ ನಾಚಿತು ನಿನ್ನ ಮುಂದೆ!

ನಿನ್ನ ತುಟಿಯ ಜೇನ ಸವಿಯದೆ
ಮಿಡಿತ ಮರೆತಿದೆ ನನ್ನ ಹೃದಯ!
ನನ್ನ ಪ್ರಾಣ ಹೋಗುವುದರೊಳಗೆ
ನೀಡು ನೀ ಸುಧೆಯ!


Wednesday 26 March, 2008

ಪ್ರೇಮ - ಪರೀಕ್ಷೆ

ಬೆಂಬಿಡದೆ ಹಿಂಬಾಲಿಸಿದೆ
ದಟ್ಟ ಇರುಳಿನಲಿ,
ಅತಿಯಾದ ಭೀತಿಯಿಂದ
ನಿನ್ನ ಕಾಣಲು

ಮಾಯವಾಯಿತು ಭೀತಿ
ನಿನ್ನ ಕಂಡ ಮೇಲೆ
ಎಂಥಾ ಪ್ರಶ್ನೆಯೇ ಎದುರಾಗಲಿ
ಉತ್ತರಿಸುವೆ ಭಯವಿಲ್ಲದೆ


ವಿ. ಸೂ: ಇದು ದ್ವಂದ್ವಾರ್ಥವಿರುವ ಕವನ. ಚಿಕ್ಕ ಪ್ರಯತ್ನ ಅಷ್ಟೆ.

ಪ್ರೇಮ: ಹುಡುಗಿಯ ಹಿಂದೆ ಅಲೆಯುವ ತರುಣನ ಕುರಿತಾದ ಪಲ್ಲವಿ. ಚರಣದಲ್ಲಿ, ಆತನ ಪ್ರೇಮ ಫಲಿಸಿರುತ್ತೆ. ಯಾರ ಮುಂದೆಯಾದರೂ ಅದನ್ನು ಹೇಳುವ ಧೈರ್ಯವಿರುತ್ತೆ ಅವನಲ್ಲಿ.

ಪರೀಕ್ಷೆ: ಪಲ್ಲವಿಯಲ್ಲಿ, ಪರೀಕ್ಷೆಗೆ ಸಿದ್ಧನಾಗುತ್ತಿರುವ ಹುಡುಗನ ಕುರಿತು ಬರೆದಿದ್ದೇನೆ. (ರಾತ್ರಿ ವೇಳೆಯಲ್ಲಿ ಪುಸ್ತಕ ಓದೋದು). ಚರಣದಲ್ಲಿ, ಆತ ಪರೀಕ್ಷೆಗೆ ಸಿದ್ಧನಾಗಿರ್ತ್ತಾನೆ.

Tuesday 25 March, 2008

ಕುಂಟೆ ಬಿಲ್ಲೆ


[ಬಾಲ್ಯದ ನೆನಪು ಪದೇ ಪದೇ ಕಾಡುತ್ತೆ. ಹಾಗೆ ನೆನೆಸಿಕೊಂಡು ಬರೆದೆ.]


ಶಾಲೆ ಮುಗಿಸಿ ಬಂದ ಮೇಲೆ
ಆಡುತ್ತಿದ್ದೆ ಕುಂಟೆ ಬಿಲ್ಲೆ !

ಗೆಳೆಯ, ಗೆಳತಿಯರನ್ನು ಒಂದೆಡೆ ಸೇರಿಸಿ

ಕಡ್ಡಿ ಹಿಡಿದು, ಗೆರೆಗಳನ್ನು ಹಾಕಿಸಿ
ಸಿದ್ಧ ಪಡಿಸಿದೆವು ಎಂಟು ಚೌಕದ ಆಟದ ಮನೆಯನ್ನು
ಹೆಸರಿಸಿದೆವು ಇದಕ್ಕೆ ಏರೋಪ್ಲೇನು ಎಂದು
ಹುಡಿಕಿಕೊಂಡೆವು ಸೂಕ್ತವಾದ ಕಲ್ಲೊಂದನ್ನು
ಕರೆದೆವು "ಬಚ್ಚೆ"ಎಂದು ಇದನ್ನು
ನಿರ್ಣಯಿಸಿದೆವು ಆಟದಲ್ಲಿ ನಮ್ಮ ಸರದಿಯನ್ನು

ಬಚ್ಚೆಗೆ ಮುತ್ತಿಟ್ಟು ಎಸೆದೆವು ಒಂದೊಂದು ಮನೆಗೂ
ಬೇಡಿಕೊಂಡೆವು ಆ ದೇವರಲ್ಲಿ
ತಾಕದಿರಲಿ ಬಚ್ಚೆ ಗೆರೆಗೆ.
ಕುಂಟುತಾ ಸುತ್ತಿದೆವು ಉಳಿದೆಲ್ಲಾ ಮನೆಯ,
ಬೇಡಿಕೊಂಡೆವು ಆ ದೇವರಲಿ,
ತಾಕದಿರಲಿ ಪಾದ ಗೆರೆಗೆ.
ಹಿಂತಿರುಗಿ ಬರುವಾಗ ಮರೆಯದೇ ಎತ್ತಿಕೊಂಡೆವು ಆ ಬಚ್ಚೆಯನ್ನು
ಮುಗಿಸಿದೆವು ನಮ್ಮ ಆಟವನ್ನು.

Tuesday 18 March, 2008

ಆತ್ಮಹತ್ಯೆ

[ಕೆಲವು ದಿನಗಳ ಹಿಂದೆ ಬರೆದೆ ಈ ಕವನ. ಅದನ್ನು ಇಂದು ಪ್ರಕಟಿಸಬೇಕೆಂದು.. ಗೂಗಲ್ ಟಾಕ್ ನಲ್ಲಿ "Love Failure.. committing suicide tonight" ಅಂತ ಹಾಕಿದ್ದೆ. ಇದನ್ನು ನೋಡಿದ ನನ್ನ ಮಿತ್ರ ಯುವಕನ ಆತ್ಮಹತ್ಯೆ ಬಗ್ಗೆ ಹೇಳಿದ. ನಾನು ಅದರಿಂದ ಸ್ಪೂರ್ತಿ ಪಡೆದು ಆ ಸಲುಗಳನ್ನು ಹಾಕಿದ್ದೇನೆಂದು ಭಾವಿಸಿದ್ದ. ಇವತ್ತು ನಿಜಕ್ಕು ಇದು ನನಗೆ ಆಶ್ಚರ್ಯ ತಂದಿತು.]

ಹೊತ್ತು ಮುಳುಗುವುದ ಕಾದು
ಹೆತ್ತವರಿಗೂ ತಿಳಿಸದೇ
ಹೊರಟೆನು ಕಡಲ ತೀರಕೆ
ಹೆಣವಾಗಿ ಬರಲು!

ಎದೆಗಾಗಿದೆ ಇಂದು ಬೇಸರ
ಪ್ರೇಮ ವೈಫಲ್ಯದಿಂದ!
ಸಾವೊಂದೇ ಉಳಿದಿರುವ ಗತ್ಯಂತರ
ಸಾಗರದೆಡೆಗೆ ಸಾಗಿದೆ ಸಂಕಟದಿಂದ!

ಸಾಗರವೇ! ನಿನ್ನ ಅಗಲವಾದ
ಕೈಗಳಿಂದ ಬಾಚಿ ನನ್ನ ಅಪ್ಪಿಕೊ
ಕೈಗಳ ಬಿಡದೇ ಹಾಗೆ ನನ್ನ ಎಳೆದುಕೊ
ಹೋಗಲಿ ಪ್ರಾಣ! ಅವಳಿಲ್ಲದ ಜೇವನವೇಕೆ?

ಪೋರನೆ! ಮೇಲೆ ನೋಡು ಪೂರ್ಣ ಚಂದಿರನು,
ನನಗಾಗೆ ಕಾದಿಹನು ಪಕ್ಷದಿಂದ
ಈ ಮಧುರ ಕ್ಷಣಕ್ಕಾಗಿ
ನನ್ನ ಅವನ ಮಿಲನಕ್ಕಾಗಿ!

ನಾನೀಗ ಉಕ್ಕಿಬರುವ ಸಮಯ
ನಿನ್ನ ನುಡಿಯಾಲಿಸಿದೊಡನೆ
ಬದಲಿಸಿದೆ ನನ್ನ ಹೃದಯ
ಶಾಂತಳಾದೆನು ಸುಮ್ಮನೆ!

ಜೀವಿಸು ನಿನಗಾಗಿ; ನಿಮ್ಮವರಿಗಾಗಿ
ಮರೆತೆಯಾ ನಿನ್ನ ಹಡೆದವರ?
ನಿನ್ನ ಸಾಕಲು ಅವರು ಪಟ್ಟ ಕಷ್ಟಗಳಾ?
ಹೋಗು ಮನೆಗೆ ಸಂತೋಷವಾಗಿ

ಸಾಗರ! ಅವಳಿಲ್ಲದ ಬದುಕೂ ಬದುಕೆ
ನಿನ್ನಿಂದಾಯಿತು ಬದುಕುವ ಬಯಕೆ!
ಎದೆಗಾಯಿತು ಇಂದು ಸಂತಸ
ಕಳೆದೆ ನನ್ನ ಜೀವನದ ತಾಮಸ!


ಸೂಚನೆ: "ಪ್ರಾಣವು, ದೇವರ ಇಚ್ಛೆಯೆಂತೆ ಹೋಗಬೇಕು. ನಿಮ್ಮಿಚ್ಛೆಯಿಂದ ದೇವರಿಗೆ ಕೊಡಬೇಡಿ".

ಆತ್ಮಹತ್ಯೆ ಮಹಾಪಾಪ!

Wednesday 12 March, 2008

ಸಂಧ್ಯಾ - ಸುಖ ಜೀವನ

ಅಜ್ಜಿಯ ನೆನಪಿನಿಂದ ಆಚೆ ಸಂಧ್ಯಾ ಬಂದಿರೋದಿಲ್ಲ. ಅಡುಗೆಯ ಪುಸ್ತಕವನ್ನು ಓದುತ್ತಾ, ತನ್ನ ಬಾಲ್ಯವನ್ನೂ ಹಾಗು ಅಜ್ಜಿಯನ್ನು ನೆನೆಸಿಕೊಳ್ಳುತ್ತಾಳೆ. ತನ್ನ ಮುಂದಿನ ಜೀವನ ಹೇಗೆ ಸಾಗಿಸಬೇಕು ಎಂಬ ಯೋಚನೆಯನ್ನು ಅಹೋರಾತ್ರಿ ನಡೆಸುತ್ತಾಳೆ. ತನ್ನ ಒಂಟಿ ಜೀವನಕ್ಕೆ ಇನ್ನೊಬ್ಬರು ಬೇಕೆಂದು ತೀರ್ಮಾನ ಮಾಡುತ್ತಾಳೆ. ತನ್ನ ಶಾಲೆ ಸಮಯ ಕಳೆದ ನಂತರ, ಅವಳ ಬಳಿ ಇದ್ದ ಅಡುಗೆಯ ಬಗ್ಗೆಗಿನ ಮಾಹಿತಿಯನ್ನು ಒಂದು ಪುಸ್ತಕವನ್ನಾಗಿಸಿ ಪ್ರಕಟಿಸ ಬೇಕು ಎಂಬುದಾಗಿ ತೀರ್ಮಾನ ಕೈಗೊಳ್ಳುತ್ತಾಳೆ. ಇದಕ್ಕಾಗಿ ಆರಂಭದಲ್ಲಿ ತುಂಬಾ ಶ್ರಮ ಪಡುತ್ತಾಳೆ. ಪುಸ್ತಕ ಬಿಡುಗಡೆಯ ದಿನ ಬರುವುದೆಂದು ೫-೬ ತಿಂಗಳಿನಿಂದ ಕಾಯುತ್ತಾಯಿರುತ್ತಾಳೆ. ಪುಸ್ತಕಕ್ಕೆ ಬಿಡುಗಡೆ ಆಗುವ ಯೋಗವೇ ಇಲ್ಲ ಎಂದು ಮನಸ್ಸಿನ ಒಂದು ಮೂಲೆ ಕೂಗಿ ಹೇಳುತ್ತದೆ. ಆದರೂ ಅವಳಲ್ಲಿ ಆತ್ಮ ವಿಶ್ವಾಸ ಇರುತ್ತದೆ. ಪುಸ್ತಕ ಬಿಡುಗಡೆ ಮಾಡೇ ತೀರುತ್ತೇನೆ ಅಂತ.

ಒಂದು ದಿನ ಅದು ನನಸಾಗುವ ಕಾಲ ಬರುತ್ತೆ. ಇವಳ ಅಡುಗೆಯ ಪುಸ್ತಕ ಆ ಊರಲ್ಲಿ ಪ್ರಖ್ಯಾತಗೋಳ್ಳುತ್ತದೆ. ಹಾಗೆ ಅದು ಪಕ್ಕದ ಊರಿಗೂ ಹಬ್ಬುತ್ತದೆ. ನಂತರ ಅನೇಕ ಊರುಗಳಲ್ಲಿ ಇವಳ ಪುಸ್ತಕಕ್ಕೆ ಬೇಡಿಕೆ ಬರುತ್ತದೆ. ಹೀಗೆ ಅವಳ ಪುಸ್ತಕಗಳು ಮಾರಾಟವಾದಂತೆ, ಅವಳಿಗೂ ಆದಾಯ ಹೆಚ್ಚುತ್ತದೆ. ಅಡುಗೆ ಬಾರದ ಹೆಂಗಳೆಯರು ಇದನ್ನು ಕೊಳ್ಳಲು ಕಾತುರರಾಗಿರ್ತಾರೆ. ಅಡುಗೆಯ ಅನಿವಾರ್ಯವಿರುವ ಚಿಗುರು ಮೀಸೆಯ ಹುಡುಗರೂ ಸಹ ಇದನ್ನು ಕೊಂಡು, "ಅನ್ನಪೂರ್ಣೇಶ್ವರಿ ಸಂಧ್ಯಾ" ಎಂಬ ಬಿರುದನ್ನು ದಯಪಾಲಿಸಿರುತ್ತಾರೆ. ಒಂದೆರಡು ವರ್ಷ ಕಳೆಯುತ್ತಲೇ, ಇವಳು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಆಗುವಂಥಹ ಪುಸ್ತಕಗಳನ್ನು ಹೊರ ತರುತ್ತಾಳೆ. ಅವಳು ಇದ್ದ ಶಾಲೆಯಲ್ಲದೇ ಬೇರೆ ಶಾಲೆಯ ಮಕ್ಕಳೂ ಅದನ್ನು ಖರೀದಿಸುತ್ತಾರೆ. ಇವಳ ಆದಾಯ ವೃದ್ಧಿಯಾಗುತ್ತದೆ.

ತನ್ನ ೨೫ನೆ ವಯಸ್ಸಿಗೆ ಉತ್ತಮ ವರ ಸಿಕ್ಕರೆ ಮದುವೆ ಇಲ್ಲದಿದ್ದರೆ ಹೀಗೆ ಸಾಹಿತ್ಯ ಸೇವೆ! ಎಂಬುದಾಗಿ ತೀರ್ಮಾನಿಸಿ, ಗಂಡನ್ನು ಹುಡುಕಿ ಕೊಳ್ಳುವ ಕೆಲಸ ತಾನೆ ನೋಡಿ ಕೊಳ್ಳುತ್ತಾಳೆ. ಆಗ, ಈ ವಿಷಯ ತಿಳಿದ ಕಾಲೇಜು ಉಪನ್ಯಾಸಕನೊಬ್ಬ ಇವಳ ಬಳಿ ಮದುವೆಯ ವಿಚಾರ ಪ್ರಸ್ತಾಪಿಸುತ್ತಾನೆ. ನಿರ್ಧಾರ ತಿಳಿಸಲು ಸ್ವಲ್ಪ ಸಮಯ ಕೊಡುವಂತೆ ಕೇಳುತ್ತಾಳೆ. ಸಂಧ್ಯಾಳಿಗೆ ಅವನ ಪರಿಚಯವಿರುತ್ತದೆ. ಅವನ ಸ್ವಭಾವನ್ನು ಅವಳು ಬಹು ಹಿಂದಿನಿಂದಲೂ ಮೆಚ್ಚಿರುತ್ತಾಳೆ. ಈತನನ್ನು ವರಿಸಲು ನಿರ್ಧರಿಸಿ, ಅವನ ಬಳಿ ಸಂತಸದಿಂದ ಹೇಳುತ್ತಾಳೆ. ಆಗ ಶ್ರೀಧರನು, ಅವರ ಹೆತ್ತವರಿಗೆ ಈ ವಿಷಯ ತಿಳಿಸುತ್ತಾನೆ. ಹುಡುಗಿಯು ಬೇರೆ ಜಾತಿಯವಳಾದ್ದರಿಂದ ಸ್ವಲ್ಪ ಮಟ್ಟಿಗೆ ಜೋರು ಜಗಳವೇ ನಡೆಯುತ್ತದೆ. ಶ್ರೀಧರನು ಅವಳ ಜೀವನದ ಘಟನೆಗಳನ್ನೆಲ್ಲಾ ಹೇಳಿದ ಮೇಲೆ, ಇವರಿಗೆ ಅವರು ಈವರೆವಿಗೂ ಆಡಿದ ಮಾತುಗಳು ತಪ್ಪೆಂದು ಅರಿವಾಗುತ್ತದೆ. ಲಲಿತಮ್ಮ ಉಪಯೋಗಿಸುತ್ತಿದ್ದ ಅಡುಗೆಯ ಪುಸ್ತಕದ ಲೇಖಕಿಯೇ ಸೋಸೆಯಾಗುವಾಗ ಪುಸ್ತಕವಿನ್ನೇಕೆ ಎಂದು ಅದನ್ನು ಕೈಗೆ ಸಿಗದಹಾಗೆ ಇಡುತ್ತಾಳೆ. ಈರ್ವರಿಗೂ ಹೆಮ್ಮೆಯಾಗುತ್ತದೆ.

ಸಂಧ್ಯಾ ಮದುವೆಯಾಗಿ, ಕೆಲಸವನ್ನೂ, ಸಾಹಿತ್ಯ ಸೇವೆಯನ್ನು ನಡೆಸುತ್ತಾಳೆ. ತನಗ ಬರುವ ಆದಾಯದ ಕೆಲ ಭಾಗವನ್ನು ಬಡವರಿಗೆ ದೇಣಿಗೆಯಾಗಿ ನೀಡುತ್ತಾ ಇರುತ್ತಾಳೆ.ತುಂಬಾ ಸಂತೋಷದಿಂದ, ತೃಪ್ತಿಯಿಂದ, ಜೀವನ ಸಾಗಿಸುತ್ತಾಳೆ.

(ಮುಗಿಯಿತು)

ಸಂಧ್ಯಾ - ಅಜ್ಜಿಯ ಮಡಿಲು

ತಂದೆಯ ಅಗಲಿಕೆ ಇಂದ ಅತೀವ ದುಃಖದಲ್ಲಿದ್ದ ಸಂಧ್ಯಾಳನ್ನು ಸಮಾಧಾನ ಮಾಡುವುದಕ್ಕೆ ರತ್ನಮ್ಮಜ್ಜಿ ತುಂಬಾ ಕಷ್ಟ ಪಡುತ್ತಿದ್ದರು. ಆಕೆಯ ಸಹಾಯಕ್ಕೆ ಎಲ್ಲಾ ಸಂಬಂಧಿಕರು ಸೇರಿದರು. ತಬ್ಬಲಿಯಾದ ಸಂಧ್ಯಾಳ ಜವಾಬ್ದಾರಿಯನ್ನು ಅಜ್ಜಿಯೇ ವಹಿಸಿ ಕೊಳ್ಳಬೇಕಾಯಿತು. ಹಾಗೂ ಹೀಗೂ ಸ್ವಲ್ಪ ವಾರಗಳಲ್ಲೇ, ಅಲ್ಪ ಪ್ರಮಾಣದಲ್ಲಿ ಸಮಾಧಾನಗೊಂಡಳು. ತನ್ನ ಗೆಳತಿಯರೊಂದಿಗೆ ಮತ್ತೆ ಆಟವಾಡಲು ಪ್ರಾರಂಭಿಸಿದಳು. ಶಾಲೆ ಪುನರಾರಂಭಗೊಂಡಿತು. ತನ್ನ ಪಾಠವನ್ನು ತಪ್ಪದೆ ಓದುತ್ತಿದ್ದಳು. ಶಾಲೆಯಲ್ಲಿ ಎಲ್ಲರಿಗಿಂತಲೂ ಮುಂದಿದ್ದಳು. ಅವಳ ಬಿಡುವಿನ ವೇಳೆಯಲ್ಲಿ, ಅವಳ ಬಳಿಯಿದ್ದ, ಅಡುಗೆ ಪುಸ್ತಕವನ್ನು ಓದುತ್ತಾಯಿದ್ದಳು. ಅಷ್ಟಲ್ಲದೇ, ಅಡುಗೆ ಮಾಡುವಾ ಹಾಗೇನೂ ಕೈಸನ್ನೆಯಿಂದ ಆಟವಾಡುತ್ತಾಯಿದ್ದಳು. ಪ್ರತಿ ದಿನವು ಸಾರು ಮಾಡುವಾಗ, ಬೇಳೆಯನ್ನು ಬೇಯಿಸುವುದರಿಂದ ಹಿಡಿದು, ತುಪ್ಪದ ಒಗ್ಗರಣೆ ಹಾಕುವರೆಗೂ ಎಲ್ಲಾ ಕೈಸನ್ನೆಯೇ! ಹೀಗೆಯೇ ಕೆಲ ವರ್ಷಗಳು ಸಾಗಿದವು.

ಸಂಧ್ಯಾಳಿಗೆ ಈಗ ಬಾಲ್ಯ ಕಳೆದು, ಯೌವನ! ಹತ್ತನೇ ತರಗತಿಯನ್ನು ಶ್ರಮವಿಲ್ಲದೆ ಉತ್ತಮ ದರ್ಜೆಯಲ್ಲಿ ಉತ್ತೀರ್ಣ! ತದನಂತರ, ಕಾಲೇಜ ಮೆಟ್ಟಿಲೇರುವ ಅವಳ ಆಸೆಯನ್ನು ಅಜ್ಜಿ ಸಮ್ಮತಿಸಿದರು. ಅದೆಷ್ಟು ಬೇಗ ಕಾಲೇಜು ಮುಗಿದೇ ಹೋಯಿತು. ಅವಳ ಪಾಲಿಗೆ ಪ್ರಪಂಚವು ಮೋಟಾರು ವಾಹನದ ಚಕ್ರದಂತೆ ವೇಗವಾಗಿ ತಿರುಗುತ್ತಿತ್ತು. ಈಗ ಅಜ್ಜಿಯ ದೊಡ್ಡ ಜವಾಬ್ದಾರಿಯಂದರೆ, ಅವಳ ಲಗ್ನ. ಅದಕ್ಕಾಗಿ ಎಲ್ಲ ಕಡೆಯಿಂದಾಲು ವರನ ಶೋಧ ನಡೆಸುತ್ತಿದ್ದಳು. ಸಂಧ್ಯಾಳ ಮನಸ್ಸು ಇದಕ್ಕೆ ಒಪ್ಪಿರಲಿಲ್ಲ. ಅಜ್ಜಿಯ ಬಲವಂತಕ್ಕೆ ಮನಸ್ಸನ್ನು ಒಪ್ಪಿಸಿದಳು.

ಒಬ್ಬ ರೂಪವಂತ ತರುಣ, ಮುಂದಿನ ವಾರ ಹೆಣ್ಣು ನೋಡೋದಕ್ಕೆ ಬರುವು ವರ್ತಮಾನ ಅಜ್ಜಿಯ ಕಿವಿಗೆ ಬಡಿಯಿತು. ಅಜ್ಜಿಗೆ ಮಹದಾನಂದವಾಗಿತ್ತು! ಮೊಮ್ಮಗಳನ್ನು ಕರೆದು, ಗಂಡಿನ ಕಡೆಯವರ ಎದುರು ಹೇಗೆ ನಡೆದು ಕೊಳ್ಳಬೇಕು ಎಂಬುದರ ಬಗ್ಗೆ ಪ್ರವಚನವನ್ನೇ ಗೈದಳು. ಸಂಧ್ಯಾ ಎಲ್ಲವನ್ನು ಕೇಳುತ್ತಿದ್ದಳು. ಆ ದಿನ ಬಂದೇ ಬಿಟ್ಟಿತು. ಸಂಧ್ಯಾಳ ಮನಸಲ್ಲಿ ಸ್ವಲ್ಪ ಭಯ, ಹೆಚ್ಚಿನ ನಾಚಿಕೆ ಎಲ್ಲಾ ಎದ್ದು ಕಾಣುತ್ತಿತ್ತು. ಅಜ್ಜಿ ಬಂದವರನ್ನು ವಿನಯದಿಂದ, ಆದರದಿಂದ, ಸ್ವಾಗತಿಸಿದರು. ಕುಡಿಯಲು ನೀರನ್ನು ತಂದರು. ಎಲ್ಲರ ಯೋಗಕ್ಷೇಮ ವಿಚಾರಿಸಿದರು. ಸ್ವಲ್ಪ ಹೊತ್ತಿನಲ್ಲೇ ಸಂಧ್ಯಾಳು ಉಪ್ಪಿಟ್ಟು , ಕೇಸರಿಭಾತಿನ ತಟ್ಟೆಯನ್ನು ತಂದು ಹುಡುಗನ ತಂದೆ, ತಾಯಿ ,ನೆಂಟರಿಷ್ಟರಿಗೆಲ್ಲಾ ಕೊಟ್ಟು, ಅವನ ಕಡೆ ಸಾಗಿದಳು. ಆಗ ಅವಳಿಗೆ ನಾಚಿಕೆ ಹೆಚ್ಚಾಯಿತು. ಆ ನಾಚಿಕೆಯಿಂದಲೇ ಓರೆಗಣ್ಣಿನಿಂದ ಆತನನ್ನು ನೋಡಿ, ಒಂದು ಕಿರು ನಗೆ ಬೀರಿದಳು. ಅವನಿಗೂ ಸಹ ನಾಚಿಕೆ ಎದ್ದು ಕಾಣುತ್ತಿತ್ತು. ಆತನೂ ಸಹ ಸಂಧ್ಯಾಳನ್ನು ನೋಡಿದ. ಬಿಸಿಯಾಗಿದ್ದ ಕೇಸರಭಾತನ್ನು ಬಾಯೊಳಗೆ ಹಾಕಿಕೊಂಡು, ಅದರ ಬಿಸಿ ತಾಗಿದಾಗ , ಹಾ! ಎನ್ನಲು, ಸಂಧ್ಯಾಳು, "ಕೇಸರಿಭಾತು ಬಿಸಿ ಇದೆ, ಸ್ವಲ್ಪ ಆರಿದ ಮೇಲೆ ತಿನ್ನಿ", ಎಂದು ನಾಚ್ಚುತ್ತಲೇ ನುಡಿದಳು. ಹುಡುಗ ನಕ್ಕನು. ಆಮೇಲೆ ಕಾಫಿಯೂ ಮುಗಿಯಿತು. ಹಿರಿಯರೆಲ್ಲಾ ಮುಂದಿನ ಮಾತು-ಕಥೆ ಆಡಿದರು. ಕೊಡುವುದು-ತೆಗೆದುಕೊಳ್ಳುವುದರ ಬಗ್ಗೆ ಚರ್ಚೆ ನಡೆಸಿದರು. ಹುಡುಗನ ತಂದೆಯು "ವರದಕ್ಷಿಣೆ ಎಷ್ಟು ಕೊಡ್ತೀರಿ?" ಎಂದರು. ಆಗ ಅಜ್ಜಿಯು, ನಮ್ಮ ಬಳಿ ಹೆಚ್ಚಿಗೆ ಕೊಡುವ ಶಕ್ತಿಯಿಲ್ಲ. ನಮ್ಮ ಶಕ್ತ್ಯಾನುಸಾರ ಮದುವೆ ಮಾಡಿ ಕೊಡ್ತೀವಿ ಅಂದಳು. ಆಗ ಅವರೆಲ್ಲರೂ ತುಂಬಾ ಅಸಡ್ಡೆಯಿಂದ ಮಾತಾಡಿದರು. ಸಂಧ್ಯಾಳು ಈ ಗಂಡು ಬೇಡ ಎಂದು ನಿರ್ಧರಿಸಿದಳು .ಎಲ್ಲರೂ ಹೋದ ಬಳಿಕ, ಅಜ್ಜಿ, ಈ ಗಂಡು ಬೇಡ ಎಂದು ಹೇಳೇ ಬಿಟ್ಟಳು. ಆಗ ಅಜ್ಜಿ,"ನಾನ್ ಸಾಯೋದರೊಳಗೆ ನಿನ್ನ ಮದುವೆ ಮಾಡ್ಬೇಕು ಅಂದುಕೊಂಡಿದೀನಿ. ನೋಡೋಣ ಏನಾಗುತ್ತೆ ಅಂತ"

ಸಂಧ್ಯಾ ಮತ್ತೆ ವಿದ್ಯಾಭ್ಯಾಸ ಮುಂದುವರಿಸುತ್ತಾಳೆ. ಪದವಿಧರೆ ಆದ ನಂತರ, ಶಾಲೆಯಲ್ಲಿ ಶಿಕ್ಷಕಿಯಾಗಿ ನೇಮಕಗೊಳ್ಳುತ್ತಾಳೆ. ಈಗ ಅವಳು ಮನೆಯ ನಿಭಾಯಿಸುವ ಹೊಣೆಯನ್ನು ಹೊರುತ್ತಾಳೆ. ಸಂಜೆಯ ಸಮಯದಲ್ಲಿ, ಬಡವರ ಮನೆ ಮಕ್ಕಳಿಗೆ ಪಾಠ ಹೇಳಿ ಕೊಡುವ ಮೂಲಕ ಕಾಲ ಕಳೆಯುತ್ತಾಳೆ. ಈ ನಡುವೆ, ಅಜ್ಜಿಯು ತನ್ನ ಕೊನೆ ಉಸಿರನ್ನು ಎಳೆಯುತ್ತಾಳೆ. ಅಂತ್ಯ ಸಂಸ್ಕಾರವಾದ ಮೇಲೆ, ಸಂಧ್ಯಾಳಿಗೆ ಏನು ಮಾಡುವುದು ಎಂಬ ಚಿಂತೆ ಹೆಚ್ಚಾಗುತ್ತೆ. ಇವಳ ಸಹಾಯಕ್ಕೆ ಸಂಬಂಧಿಕರು ಅನ್ನಿಸಿಕೊಂಡಿದ್ದವರೆಲ್ಲಾ ಬಾರದೇಯೇಯಿದ್ದದ್ದನ್ನು ಕಂಡು, ಅವಳ ಜೀವನ ಅವಳಿಚ್ಛೆಯಂತೆ ನಡೆಸ ಬೇಕೆಂಬ ನಿರ್ಣಯಕ್ಕೆ ಬರುತ್ತಾಳೆ.

(ಮುಂದುವರಿಯುವುದು...)

Tuesday 11 March, 2008

ಕಂದಮ್ಮ


ಮೊನ್ನೆ ಈ-ಮೈಲ್ ನಲ್ಲಿ ಈ ಚಿತ್ರ ಬಂತು. ತಕ್ಷಣ ನನ್ನ ಕೈಗಳು ಈ ಸಾಲುಗಳನ್ನು ಟೈಪ್ ಮಾಡಿದವು.

ಮುಚ್ಚಿರುವ ಕಣ್ಣುಗಳಿಂದ ಯಾರ ನೆನೆಯುತ್ತಿರುವೆ ?
ಮೆಚ್ಚಿರುವ ಕಂದಮ್ಮ ನೀನಾಗಿರುವೆ.

ಮುದ್ದಾದ ತುಟಿಗೆ ಮುತ್ತಿಟ್ಟು
ನಿದ್ದೆಯಿಂದ ಎಚ್ಚರಿಸುವೆ
ಬರಿದಾದ ಹಣೆಗೆ ಬೊಟ್ಟಿಟ್ಟು
ಚಂದ್ರನನ್ನು ಎಚ್ಚರಿಸುವೆ!

Friday 7 March, 2008

ಸಂಧ್ಯಾ - ಬಾಲ್ಯದ ದಿನಗಳು


[ ಮೊದಲ ಬಾರಿಗೆ ಒಂದು ಸಣ್ಣ ಕಥೆ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ. ದಯವಿಟ್ಟು ಓದಿ. ತುಂಬು ಮನದಿಂದ ನಿಮ್ಮ ಸಲಹೆಗಳನ್ನು ಕೊಡಿ. ತುಂಬು ಹೃದಯದಿಂದ ಸ್ವೀಕರಿಸುತ್ತೇನೆ.]


ಒಂಬತ್ತು ವರ್ಷದ ಹುಡುಗಿ ಸಂಧ್ಯಾ. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದಾಳೆ. ಮರು ವಿವಾಹ ಆಗದೆ ಅವಳ ತಂದೆಯು, ಪೇಟೆಯಲ್ಲಿ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಾ ಇದ್ದಾನೆ. ಅವಳ ಶಾಲೆಯು ಮನೆಯ ಹತ್ತಿರದಲ್ಲೇ ಇದ್ದುದ್ದರಿಂದ ಅವಳಿಗೆ ಸಂಜೆಯ ವೇಳೆ ಹೆಚ್ಚಿನ ಸಮಯ ಸಿಗುತ್ತಿತ್ತು. ಅವಳ ಗೆಳತಿಯರಾದ ಅನು ಹಾಗು ಸೀತಾರೊಡನೆ ಆಟವಾಡುತ್ತಾ, ಪಾಠ ಓದುತ್ತಾ ದಿನ ಕಳೆಯುತ್ತಿದ್ದಳು.

ಒಂದು ದಿನ, "ಅನು, ಇವತ್ತು ಯಾವ ಆಟ ಆಡೋಣ?"
"ಲೇ! ಸಂಧ್ಯಾ, ಇವತ್ತು ಕುಂಟೆ ಬಿಲ್ಲೆ ಆಡೋಣ ಕಣೆ"
"ಸರಿ ಕಣೆ"
ಸ್ವಲ್ಪ ಸಮಯದ ನಂತರ, ಸೀತಾಳ ತಾಯಿ, ಶಾಂತ, "ಸೀತಾ, ಬಾರೆ ಮನೆಗೆ. ಇವತ್ತು ಆಡಿದ್ದು ಸಾಕು"
ಸಂಧ್ಯಾ, "ಯಾಕೆ ಸೀತಾ, ಏನು ಕೆಲ್ಸ ಇದೆ ನಿನಗೆ? ಇಷ್ಟು ಬೇಗ ನಿಮ್ಮ ಅಮ್ಮ ಕರಿತಾ ಇದ್ದರೆ."
"ಏನಿಲ್ಲ ಕಣೆ. ಪರೀಕ್ಷೆ ಹತ್ತಿರ ಇದೆ ಅಲ್ವಾ , ಅದಕ್ಕೆ ನಮ್ಮ ಓದಿನ ಸಮಯ ಹೆಚ್ಚಿಸ್ಕೋಬೇಕು. ನಾನು ಮನೆಗೆ ಹೋಗ್ತೀನಿ. ನಾಳೆ ಸಿಗ್ತೀನಿ."
"ಅನು, ನಿಮ್ಮಮ್ಮ ಕರಿಯಲ್ವಾ ನಿನ್ನ?"
"ಅಯ್ಯೋ! ಅವರು ಊರಲ್ಲೇ ಇಲ್ಲ ಕಣೆ. ನಮ್ಮಜ್ಜಿ ಮನೆಗೆ ಹೋಗಿದ್ದಾರೆ"
ಸಂಧ್ಯಾ, "ನನ್ನ ಕರಿಯೋಕೆ ನಮ್ಮಮ್ಮ ಇಲ್ಲ ಕಣೆ" ಅಂತ ಅಳಲನ್ನು ತೋರಿಕೊಂಡಳು. ತಾಯಿಯಿಲ್ಲದ ದುಃಖ ಅವಳ ಮುಖದಲ್ಲಿ ಈಗಾಗಲೇ ಕಾಣುತ್ತಿತ್ತು. ಇದಕ್ಕೆ ಕಣ್ಣೀರೇ ಸಾಕ್ಷಿ ಆಗಿತ್ತು.

"ಸಂಧ್ಯಾ, ನನಗೆ ಹೊಟ್ಟೆ ಹಸಿವು ಕಣೆ. ನಿಮ್ಮ ಮನೇಲಿ ಏನಾದ್ರು ಇದ್ದರೆ ಕೊಡೆ"
"ಹು. ನಮಪ್ಪ ಅಡುಗೆ ಚೆನ್ನಾಗಿ ಮಾಡ್ತಾರೆ! ಹುರಳಿಕಾಯಿ ಹುಳಿ ಮಾಡಿದ್ದಾರೆ. ಬಾ ಇಬ್ಬರು ಸ್ವಲ್ಪ ತಿನ್ನೋಣ"
ಇಬ್ಬರು ತಟ್ಟೆಗೆ ಅನ್ನ, ಹುಳಿ ಬಡಿಸಿಕೊಂಡು ತಿನ್ನಲು ಆರಂಭಿಸುತ್ತಾರೆ. ಮೊದಲ ತುತ್ತು ಬಾಯಲ್ಲಿ ಇಡುತ್ತಲೇ ಅನು, "ಏನೇ ಇದು. ಥು! ಥೂ! ಅಡುಗೆ ಚೆನ್ನಾಗಿಲ್ಲ. ಹೇಗೆ ತಿನ್ನುತ್ತೀಯ ಇದನ್ನು ದಿನಾಗ್ಲು ನೀನು? ನನಗೆ ವಾಂತಿ ಬರೋ ಹಾಗೆ ಆಗುತ್ತಿದೆ"
"ಅಡುಗೆಗೆ ಏನಾಗಿದೆ ಅನು? ತುಂಬಾ ಚೆನ್ನಾಗಿದೆ ಕಣೆ"
"ಇಲ್ಲ ಸಂಧ್ಯಾ. ಇದು ಚೆನ್ನಾಗಿಲ್ಲ"
"ನಮ್ಮನೇಲಿ ಬೇರೆ ಏನು ಇಲ್ಲ ಕಣೆ ನಿನ್ನ ಹಸಿವನ್ನು ನೀಗಿಸೋಕೆ"
"ಸದ್ಯ!! ಏನು ಬೇಡಮ್ಮ ನಿಮ್ಮನೆಯಿಂದ"

ಪ್ರತಿದಿನ ತಂದೆಯ ಅಡುಗೆ ತಿಂದು, ಅವರು ಮಾಡುವ ಅಡುಗೆಯೇ ರುಚಿಯಾದದ್ದು ಅಂತ ನಂಬಿದವಳು ಸಂಧ್ಯಾ.ತಂದೆಯ ಅಡುಗೆ ಚೆನ್ನಾಗಿಲ್ಲ ಎಂಬ ವಿಷಯ ಅವರಿಗೆ ತಿಳಿದರೆ, ಎಲ್ಲಿ ಬೇಜಾರು ಮಾಡ್ಕೋತಾರೋ ಅಂತ ಎಲ್ಲವನ್ನು ಮುಚ್ಚಿಡುತ್ತಾಳೆ. ಪರೀಕ್ಷೆಗಳು ಮುಗಿದ ನಂತರ, ಬೇಸಿಗೆ ರಜೆಗೆಂದು ಅವಳ ಅಜ್ಜಿಯ ಮನೆಗೆ ಹೋಗಲು ಕಾತುರದಿಂದ ಇದ್ದಾಳೆ. ಪರೀಕ್ಷೆಗಳೆಲ್ಲಾ ಮುಗಿದೇ ಹೋದವು. ಅಜ್ಜಿ ಮನೆಗೆ ಸಂಧ್ಯಾಳನ್ನು ಬಿಟ್ಟು ಬರಲು ಅವಳ ತಂದೆ ಬರುತ್ತಾರೆ.
"ಅಮ್ಮ. ಹೇಗಿದ್ದೀಯ?"
"ಬಾರೋ ರಂಗ. ನಾನು ಚೆನ್ನಾಗಿದ್ದೀನಿ. ನೀನು ಹೇಗಿದ್ದೀಯ?"
"ಚೆನ್ನಾಗಿದ್ದೀನಿ"
.... ಹೀಗೆ ತಾಯಿ-ಮಗನ ಕ್ಷೇಮ ಸಮಾಚಾರ ನಡೆಯುತ್ತಿರುವ ಮಧ್ಯದಲ್ಲೇ
"ಅಜ್ಜಿ. ಹೇಗಿದ್ದೀಯ?"
"ನಾನು ಚೆನ್ನಾಗಿದ್ದೀನಿ ಸಂಧ್ಯಾ"
"ಅಜ್ಜಿ ನೆನ್ನೆ ತಾನೆ ಪರೀಕ್ಷೆಗಳು ಮುಗಿದವು. ಇವತ್ತೆ ನಿನ್ನ ನೋಡಲು ಬಂದೇ ಬಿಟ್ಟೆ"
ಅಷ್ಟು ಹೊತ್ತಿಗೆ ಸೂರ್ಯ, ಪಶ್ಚಿಮದ ದಿಕ್ಕಿನೆಡೆಗೆ ಪ್ರಯಾಣ ಬೆಳೆಸುತ್ತಿದ್ದ. ಗೋಡೆಗೆ ನೇತುಹಾಕಿದ ಗಡಿಯಾರವನ್ನು ನೋಡಿದ ಅಜ್ಜಿ,
"ಇಬ್ಬರು ಕೈ ಕಾಲು ತೊಳೆದುಕೊಳ್ಳಿ. ಊಟ ಮಾಡುವಿರಂತೆ"
ಊಟದ ಮಧ್ಯೆ... "ರಂಗಾ. ನಿನ್ನ ಮದುವೆ ಬಗ್ಗೆ ಏನು ಯೋಚನೆ ಮಾಡಿದೆ?"
"ಯೋಚನೆ ಮಾಡೋಕೆ ಏನೂ ಇಲ್ಲ. ಇನ್ನು ಸ್ವಲ್ಪ ವರ್ಷದಲ್ಲೇ ಮಗಳ ಮದುವೆ ಮಾಡಬೇಕು. ನನಗೆ ಮದುವೆನಾ?"
ಊಟವಾದ ಬಳಿಕ, ಸಂಧ್ಯಾ ಪಕ್ಕದ ಮನೆ ಹುಡುಗಿ ರಮ್ಯಾಳೊಂದಿಗೆ ಆಡಲು ತೆರಳುತ್ತಾಳೆ.

ಮರು ದಿನ ಬೆಳಿಗ್ಗೆ, "ಅಮ್ಮ ಊರಿಗೆ ಹೊರಡುತ್ತೀನಿ"
"ಸರಿ"
"ಸಂಧ್ಯಾ, ಹೊರಗೆ ಒಬ್ಬಳೇ ಎಲ್ಲೂ ಹೋಗಬೇಡ. ಮನೆ ಒಳಗೋ ಅಥವಾ ಪಕ್ಕದ ಮನೆ ಹುಡುಗಿ ಜೊತೆ ಇಲ್ಲೇ ಆಟಾಡು. ಹುಷಾರು. ಮುಂದಿನ ತಿಂಗಳು ಬರ್ತೀನಿ. ಕರೆದು ಕೊಂಡು ಹೋಗ್ತೀನಿ"
"ಆಯ್ತಪ್ಪ. ಟಾಟಾ ಟಾಟಾ"ಎಂದು, ಇನ್ನೂ ಚಪ್ಪಲಿಯನ್ನೂ ಹಾಕದ ಅಪ್ಪನಿಗೆ ಹೇಳುತ್ತಾಳೆ.
ರಂಗಾ ಹೊರಡುತ್ತಾನೆ. ಸಂಧ್ಯಾ ಏನನ್ನೋ ಯೋಚನೆ ಮಾಡುತ್ತಾ ಕೋಣೆಯ ಮೂಲೆಯಲ್ಲಿ ಕುಳಿತಿರುತ್ತಾಳೆ.
"ಸಂಧ್ಯಾ ಏನು ಮಾಡುತ್ತಾ ಇದೀಯ? ನೋಡು ನಿನ್ನ ಗೆಳತಿ ರಮ್ಯಾ ಬಂದಿದ್ದಾಳೆ. ಇಬ್ಬರು ಹೋಗಿ ಆಡಿಕೊಳ್ಳಿ"
"ಹೇ. ರಮ್ಯಾ. ಹೇಗಿದ್ದೀಯಾ?"
"ನಾನು ಆರಾಮವಾಗಿದ್ದೀನಿ. ಬಾರೆ ಆಡೋಣ"
"ಸರಿ ಕಣೆ"
ಸಂಧ್ಯಾಳಿಗೆ ಆಟದ ಕಡೆ ಗಮನವೇ ಇರಲಿಲ್ಲ. ಗೆಳತಿಯ ಮನಸ್ಸು ನೋಯಿಸಬಾರದು ಎಂದು, ಅರ್ಧ ಗಂಟೆಯ ಬಳಿಕ,"ಇವತ್ತು ಸಾಕು ಕಣೆ. ನಾಳೆ ಆಡೋಣ" ಅಂತ ಹೇಳಿ ಮನೆಗೆ ಬರುತ್ತಾಳೆ.
"ಅಜ್ಜಿ..............." ಅಂತ ಓಡೋಡಿ ಅಜ್ಜಿ ಇದ್ದ ಅಡುಗೆ ಮನೆಗೆ ಬರ್ತಾಳೆ.
"ಏನು ಮಾಡ್ತಾಯಿದ್ದೀಯ"
"ಈಗ ಮಧ್ಯಾಹ್ನಕ್ಕೆ ಅಡುಗೆ ಮಾಡ್ತಾಯಿದ್ದೀನಿ"
"ಅಜ್ಜಿ, ನನಗೂ ಅಡುಗೆ ಮಾಡುವುದು ಹೇಗೆ ಅಂತ ಕಲಿಸು"
"ಓದೋ ವಯಸ್ಸಿನಲ್ಲಿ ಈ ಕಷ್ಟ ಯಾಕೆ ಪುಟ್ಟಿ? ಇನ್ನು ಸ್ವಲ್ಪ ವರ್ಷಗಳಾಗಲಿ ಆಮೇಲೆ ಕಲಿಸುತ್ತೀನಿ"
"ಇಲ್ಲ ಈಗಲೇ ನಾನು ಅಡುಗೆ ಕಲಿಬೇಕು... " ಎಂದು ಹಠ ಮಾಡುತ್ತಾಳೆ.
"ಅಪ್ಪ ಅಡುಗೆ ಹೇಗೆ ಮಾಡ್ತಾನ್ಯೇ ?"
"ನಾನು ಚೆನ್ನಾಗಿ ಮಾಡ್ತಾರೆ ಅಂತ ನಂಬಿದ್ದೆ. ಆದರೆ, ಆ ಅನು ಇದ್ದಾಳಲ್ಲಾ, ಅವಳು ಹೇಳಿದ್ಲು, ವಾಂತಿ ಬರುತ್ತೆ ಕಣೆ ನಿಮಪ್ಪ ಮಾಡಿದ್ದು ತಿಂದರೆ. ಅಪ್ಪನ ಅಡುಗೆ ತಿಂದು ತಿಂದು ನನ್ನ ನಾಲಗೆ ಕೆಟ್ಟು ಹೋಗಿದೆ. ಇನ್ಮೇಲೆ ಶಾಲೆಗೆ ಹೋಗುವ ಮೊದಲು ಅಡುಗೆ ಮಾಡಿಟ್ಟು ಹೋಗ್ತೀನಿ.ಅದಕ್ಕೆ ನಾನು ಈಗಲೇ ಕಲಿಯಬೇಕು"
"ಪುಟ್ಟಿ ಎಲ್ಲಾ ದಿನ ಅಡುಗೆ ಚೆನ್ನಾಗಿ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಕೆಲವೊಮ್ಮೆ ಕೆಟ್ಟಿರ ಬಹುದು. ನಾನು ಅಡುಗೆ ಕೆಡಸಿದರೆ, ನಿಮ್ ತಾತ ಇದ್ರಲ್ಲಾ...ರೀಗಾಡಿ ಬಿಡೋರು." ಎಂದು ಹೇಳಿ ತನ್ನ ಗತ ದಿನಗಳನ್ನು ನೆನಪಿಸಿಕೊಳ್ಳುತ್ತಾಳೆ.
ಸಂಧ್ಯಾ ಜೋರಾಗಿ ನಗುವಳು.
ಅಜ್ಜಿ ಎಷ್ಟು ಬಾರಿ ಹೇಳಿದರೂ ಅಕೆಯ ಮಾತನ್ನು ಕೇಳುವ ಸಹನೆ ಸಂಧ್ಯಾಗೆ ಇರಲಿಲ್ಲ. ತುಂಬಾ ಹಠ ಮಾಡುತ್ತಿದ್ದ ಅವಳನ್ನು ಸಮಾಧಾನ ಪಡಿಸಲೇ ಬೇಕಾದ ಸ್ಥಿತಿಯಲ್ಲಿ ರತ್ನಮ್ಮಜ್ಜಿ ಇದ್ದರು.
"ಸರಿ ಕಣೆ ತುಂಟಿ! ನಿನಗೆ ಅಡುಗೆ ಕಲಿಸ್ತೀನಿ. ಒಂದು ಗಾದೆ ಮಾತಿದೆ. ತಾಯಿಗಿಂತ ದೇವರಿಲ್ಲ, ಉಪ್ಪಿಗಿಂತ ರುಚಿಯಿಲ್ಲ, ಗೊತ್ತಾಯ್ತ?"
"ಅಜ್ಜಿ. ಅಮ್ಮ ಮನುಷ್ಯಳು ಅಲ್ವ? ಅವ್ಳು ದೇವರು ಹೇಗೆ ಆಗ್ತಾಳೆ?"
ಅಜ್ಜಿ, ಮನಸ್ಸಲ್ಲೇ ಮಾತಾಡುತ್ತಾಳೆ. "ನಿನಗೊಂದು ಕ್ಷಣ ಕೂಡ ತಾಯಿಯ ಪ್ರೀತಿ ಸಿಕ್ಕಿಲ್ಲ . ಇನ್ನು ಹೇಗೆ ಗೊತ್ತಾಗಬೇಕು ತಾಯಿ ದೇವರಿಗಿಂತ್ಲೂ ಮೇಲು ಅಂತ?"
"ಪುಟ್ಟಿ, ತಾಯಿ ನಮ್ಮನ್ನು ಚಿಕ್ಕ ವಯಸ್ಸಿನಿಂದ ಸಾಕಿರ್ತಾಳೆ. ಪಾಲನೆ, ಪೋಷಣೆ, ವಿದ್ಯಾಭ್ಯಾಸ, ಹೀಗೆ ಹೇಳುತ್ತಾ ಹೋದರೆ, ಕೊನೆಯೇ ಇಲ್ಲ. ಎಲ್ಲಾವುದರ ಜವಾಬ್ದಾರಿ ಹೊತ್ತಿರ್ತಾಳೆ. ದೇವರು ಕೂಡ ನಮ್ಮನ್ನು ಅವಳ ಮಟ್ಟಿಗೆ ನೋಡಿಕೊಳ್ಲೋದಿಲ್ಲ. ಅದಕ್ಕೆ ಹಾಗೆ ನಾಣ್ಣುಡಿ"
ಹೀಗೆ ತಾಯಿಯ ಬಗ್ಗೆ ಕೆಲವು ಮಾತುಗಳನ್ನು ಕೇಳುತ್ತಿದ್ದಂತೆ, ಸಂಧ್ಯಾಳ ಮುಖದಲ್ಲಿ ದುಃಖ ಕಾಣಿಸುತ್ತಿತ್ತು. ಇಲ್ಲಿ ಇರುವಷ್ಟು ದಿನ ಸಂಧ್ಯಾ ತಕ್ಕ ಮಟ್ಟಿಗೆ ಅಡುಗೆ ಕಲಿಯುತ್ತಾಳೆ.ಎಲ್ಲವುದನ್ನು ಒಂದು ಪುಸ್ತಕದಲ್ಲಿ ಅಜ್ಜಿ ಹೇಳಿದಂತೆ ಬರೆದು ಕೊಂಡಳು. "ಅಜ್ಜಿ, ಇದನ್ನು ನಾನು ಮನೆಗೆ ಹೋದ ದಿನವೇ ಮಾಡುತ್ತೇನೆ. ಅಪ್ಪನಿಗೂ ಗೊತ್ತಾಗಲಿ, ನಾನು ಚೆನ್ನಾಗಿ ಅಡುಗೆ ಮಾಡುತ್ತೀನಿ ಅಂತ"

ಹೀಗೆ ತಿಂಗಳು ಕಳೆಯಿತು. ತಂದೆಯ ನಿರೀಕ್ಷೆಯಲ್ಲಿ ಸಂಧ್ಯಾ ಇದ್ದಾಳೆ. ಆಗ ಪಕ್ಕದ ಮನೆ ಶಾಂತಮ್ಮ ಬಂದು,
"ರತ್ನಮ್ಮಾನವರೆ, ನಿಮ್ಗೆ ಫೋನ್ ಬಂದಿದೆ ಬನ್ನಿ"
"ಹೋ!! ಅಜ್ಜಿ, ಅದು ಅಪ್ಪಾನೆ ಮಾಡಿರಬೇಕು. ಇನ್ನು ಸ್ವಲ್ಪ ದಿನ ಇಲ್ಲೇ ಇರಲಿ ಅಂತ ಹೇಳ್ತಾರೆ ಅನ್ನಿಸುತ್ತೆ"
"ಇರು, ಹೋಗಿ ನೋಡಿ ಬರ್ತೀನಿ"
ಫೋನಿನಲ್ಲಿ "ಅಮ್ಮ !!!" ಎಂಬ ಧ್ವನಿ ಕೇಳುತ್ತೆ.
"ಯಾರು? ರಂಗಾ ನೆ..?"
"ಇಲ್ಲ ಅಮ್ಮ. ನಾನು ಅವರ ಪಕ್ಕದ ಮೆನೆ.. ಶ್ರೀನಿವಾಸಪ್ಪ"
"ಏನಪ್ಪ ಸಮಾಚಾರ?"
"ಅಮ್ಮ, ಈ ಕೂಡಲೇ ನೀವು ಸಂಧ್ಯಾಳನ್ನು ಕರೆದು ಕೊಂಡು ಇಲ್ಲಿಗೆ ಬನ್ನಿ"
"ಏನು ವಿಷಯ ಅಂತ ಹೇಳು, ರಂಗಾ ಹುಷಾರಾಗಿದ್ದನೆ ತಾನೆ?"
"ನೀವು ಈ ತಕ್ಷಣ ಹೊರಟು ಬನ್ನಿ ಆಮೇಲೆ ನಾನು ಹೇಳ್ತೀನಿ"
"ಸರಿ ಪಾ"
ಅಜ್ಜಿ ಮನೆಗೆ ಬಂದು, "ಪುಟ್ಟಿ, ಬಾ ನಿಮ್ಮನೆಗೆ ಹೋಗೋಣ"
"ಯಾಕೆ ಅಜ್ಜಿ, ಅಪ್ಪ ಬಾ ಅಂತ ಕರೆದರ?"
"ಹು"
"ನಮ್ಮ ಜೊತೆ ನೀನು ಅಲ್ಲೇ ಇದ್ದು ಬಿಡು. ಚೆನ್ನಾಗಿರುತ್ತೆ"
"ಬಾ ಹೋಗೋಣ"
"ಆಮೇಲೆ ನನಗೆ ಇನ್ನು ಹೆಚ್ಚು ಅಡುಗೆ ಹೇಳಿಕೊಡು"

ಅಜ್ಜಿ ಹಾಗು ಸಂಧ್ಯಾ ಇಬ್ಬರು ರಂಗನ ಮನೆಗೆ ಬರುತ್ತಾರೆ. ಅಲ್ಲಿ ಇದ್ದ ಶ್ರೀನಿವಾಸಪ್ಪ, "ಅಮ್ಮ .. ತುಂಬಾ ದುಃಖವಾಗಿದೆ. ರಂಗಾ ಹೋಗಿಬಿಟ್ಟ್ರು..."
ಅಜ್ಜಿಯ ಕಣ್ಣಲ್ಲಿ ಸಣ್ಣದಾಗಿ ಕಂಬನಿ ಹರಿಯಲು ಪ್ರಾರಂಭಿಸುತ್ತೆ.
"ಅಪ್ಪ ಏನು ಇಷ್ಟು ಹೊತ್ತು ಆದರು ಇನ್ನು ಮಲಗೇ ಇದ್ದೀಯ. ಎದ್ದೇಳಪ್ಪಾ....ಎದ್ದೇಳು."
ಅಳುತಿದ್ದ ಅಜ್ಜಿಯನ್ನು ಗಮನಿಸಿ, ಯಾಕಜ್ಜಿ ಅಳುತ್ತಾಯಿದ್ದೀಯ?
"ಕಣ್ಣಿಗೆ ಕಸ ಬಿತ್ತಮ್ಮಾ..."
"ಅಜ್ಜಿ, ಅಪ್ಪಾ ಹೀಗೆ ಮಲಗಿರೋದು ಒಳ್ಳೇದೇ ಆಯ್ತು ಅಲ್ವಾ? ನಾನು ಈಗ ಅಡುಗೆ ಮಾಡಿ ಅಪ್ಪ ಎದ್ದ ತಕ್ಷಣ ಅವರ ಮುಂದೆ ಇಡುತ್ತೇನೆ. ಜಂಭದಿಂದ ನಾನೆ ಮಾಡಿದೆ ಅಂತ ಹೇಳ್ತೀನಿ." ಇಷ್ಟನ್ನು ಹೇಳಿ, ಅಡುಗೆ ಮನೆಗೆ ಹೋಗಿ ಒಲೆ ಹಚ್ಚಿ, ಅಡುಗೆ ಪ್ರಾರಂಭಿಸೇ ಬಿಡುತ್ತಾಳೆ.

ಸ್ವಲ್ಪ ಹೊತ್ತಿಗೆ ಬೇರೆ ಬೇರೆ ಊರುಗಳಿಂದ ಬರಬೇಕಿದ್ದ ಬಂಧು, ಮಿತ್ರರರೆಲ್ಲಾರೂ ಒಬ್ಬಬ್ಬರಾಗಿ ಬರುತ್ತಿದ್ದರು. ಅರ್ಥ ಅಡುಗೆ ಮುಗಿಸಿದ್ದ ಸಂಧ್ಯಾ ಅವರೆಲ್ಲರನ್ನು ನೋಡಿ, "ಅಜ್ಜಿ, ಇವತ್ತು ನಮ್ಮ ಮನೇಲಿ ಹಬ್ಬ. ಎಲ್ಲರೂ ಬರುತ್ತಾಯಿದ್ದರೆ ನನ್ನ ಕೈ ರುಚಿ ನೋಡೋಕೆ. ಇನ್ನು ಸ್ವಲ್ಪ ಹೊತ್ತು ಅಷ್ಟೆ , ಅಡುಗೆ ಆಗೋಗುತ್ತೆ"

ಏನೂ ಅರಿಯದ ಈ ಕಂದನನ್ನು ನೋಡಿ ಪ್ರತಿಯೊಬ್ಬರು ಕಣ್ಣೀರಿಡುತ್ತಿದ್ದರು. ತುಸು ಸಮಯದ ಬಳಿಕ, ಮಾಡಿದ ಅಡುಗೆಯನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಬಂದು, "ಅಪ್ಪಾ. ಸಾಕು ನಿದ್ದೆ. ಎದ್ದೇಳು. ನಾನೆ ಅಡುಗೆ ಮಾಡಿದ್ದೀನಿ. ಒಂದು ಸಲ ತಿಂದು ಆಮೇಲೆ ಮಲಗು. ಹೇಗಿದೆ ಅಂತ ಹೇಳು. ನೀನು ಮಾಡುತ್ತಿದ್ದ ಅಡುಗೆಗಿಂತ ರುಚಿ ಇದ್ದೇ ಇರುತೆ." ಎಂದು ಪೂರ್ಣವಾದ ಆತ್ಮವಿಶ್ವಾಸದಿಂದ ಹೇಳುತ್ತಾಳೆ.

"ಯಾಕಜ್ಜಿ, ಅಪ್ಪ ಏಳ್ತಾನೆ ಇಲ್ಲ?"
"ಶಾಶ್ವತವಾದ ನಿದ್ದೆಗೆ ಹೋಗಿದ್ದಾನಮ್ಮ ನಿಮ್ಮಪ್ಪ..."

ನಡೆಯಬೇಕಿದ್ದ ಶಾಸ್ತ್ರಗಳೆಲ್ಲ ನಡೆಯುತ್ತೆ. ತಂದೆಯನ್ನು ನಾಲ್ಕು ಜನ ಹೊತ್ತಿಕೊಂಡು ಹೋಗುವುದನ್ನು ನೋಡಿದ ಸಂಧ್ಯಾಳಿಗೆ ಆಗ ಅರಿವಾಗುತ್ತೆ. ತಂದೆ ಇನ್ನಿಲ್ಲಾ ಅಂತ.(ಎರಡನೇ ಭಾಗ ಇಲ್ಲಿದೆ)

Thursday 6 March, 2008

ನೆನಪು - ಕನಸು

ನೆನಪು

ಕಳೆದು ಹೋದ ಬಾಲ್ಯವ
ಹಿಂದಿರುಗಿ ಕರೆದರೆ,
ಬರುವುದು ಬರೀ ನೆನಪು


ವ್ಯರ್ಥ ಮಾಡಿದ ಸಮಯವ
ಮರಳಿ ಬಾ ಎಂದರೆ,
ಸಿಗುವುದು ಬರೀ ನೆನಪು

ಜೊತೆಗೆ ಬೆಳೆದ ಜೀವ
ಅಗ್ನಿಗಾಹುತಿಯಾದರೆ,
ಉಳಿಯುವುದು ಬರೀ ನೆನಪು


ಕನಸು

ಮನದಟ್ಟಾಗದ ಅಕ್ಷರಗಳು
ಹೊತ್ತಿಗೆಯಲ್ಲೇ ಉಳಿದರೆ,
ಜ್ಞಾನಾರ್ಜನೆಯು ಬರೀ ಕನಸು

ಬಾಯಿಗೆ ದೊರೆಯದ ನೀರು
ಬಾವಿಯಲ್ಲೇ ಬತ್ತಿಹೋದರೆ,
ದಾಹ ನೀಗುವುದು ಬರೀ ಕನಸು

ಹಸಿದಾಗ ಉಣ್ಣದ ಗಂಜಿ
ಪಾತ್ರೆಯಲ್ಲೇ ಹಳಸಿದರೆ,
ಹೊಟ್ಟೆ ತುಂಬುವುದು ಬರೀ ಕನಸು

Monday 3 March, 2008

ಐಟಿ ವಾರ

ನಮ್ಮಂಥ ಐಟಿ (IT) ಜನರ ದೃಷ್ಟಿಯಲ್ಲಿ, ವಾರದ ದಿನಗಳು ಹೇಗಿರುತ್ತವೆ ಅಂದರೇ.....

ಸೋಮಾರಿತನದ ಸೋಮವಾರ
ಮಂಕಾದ ಮಂಗಳವಾರ
ಬುದ್ಧಿಹೀನ ಬುಧವಾರ
ಗುರಿ ತಪ್ಪಿದ ಗುರುವಾರ
ಶುಭದಾಯಕ ಶುಕ್ರವಾರ
ಶಕ್ತಿಯುತ ಶನಿವಾರ
ಭಾಗ್ಯದ ಭಾನುವಾರ

ಸೂಚನೆ: ಕೆಲವು ಪುಣ್ಯಾತ್ಮರು ಪಾಪ ಶನಿವಾರ ಹಾಗು ಭಾನುವಾರ ಕೆಲಸ ಮಾಡುತ್ತಾರೆ. ಅವರ ಪಾಲಿಗೆ ವಾರಾಂತ್ಯವು ಹೇಗಿರುತ್ತೆ ಅಂದರೆ...
ಶನಿ ಕಾಟದ ಶನಿವಾರ
ಭಾಗ್ಯ ಕಾಣದ ಭಾನುವಾರ

ಏನಂತೀರ ನೀವು? ನಾನು ಸರಿ ಅಲ್ವಾ?