Thursday, 29 October, 2009

ಸವಿತ

ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ
ಕಾರ್ಮೋಡಗಳ ಹೊದಿಕೆಯ ಪಕ್ಕಕೆ ಸರಿಸುತ
ಕೋಗಿಲೆಗಳ ಕಂಠದಿ ಸುಪ್ರಭಾತವ ಹಾಡಿಸುತ
ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ

ಎಲೆಗಳ ಮೇಲಿನ ಹನಿಗಳ ಕಣ್ಣಿಗೆ ಎರಚುತ
ಅರಳಿದ ಹೂಗಳು ಕಂಪನು ಬೀರುತ
ಹಾರುವ ಹಕ್ಕಿಯ ಸಾಲಿನ ಮೆರವಣಿಗೆಯಿಂದ
ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ

ಆಗಸದಿ ತುಂಬಿಹ ಇಬ್ಬನಿ ಹಾಸು
ಇರುಳೆಂಬ ಭ್ರಮೆಯ ನೀಡುತಿದೆ!
ಗಂಟೆ ಏಳಾದರೂ ನೀ ಏಳ ಬಾರದೆ?
ಇರುಳನ್ನು ನೂಕಿ, ಬೆಳಕ ನೀಡ ಬಾರದೆ?

[ನಮಗಿಂತ ಬೇಗ ಏಳ ಬೇಕಾದ ಸೂರ್ಯ, ಆಲಸ್ಯದಿಂದ ಮಲಗಿದರೆ, ಈ ರೀತಿ ಪ್ರಾರ್ಥನೆ ಮಾಡ ಬಹುದಲ್ವಾ? ]

Tuesday, 13 October, 2009

ದುಡ್ಡಿನ ಗಿಡ

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು

ಚಿಕ್ಕ ವಯಸ್ನಲ್ ಅಮ್ಮ ಹೇಳಿದ್ನ
ಹಾಸ್ಯ ಅಂತ ತಿಳ್ಕೊಂಡಿದ್ದೆ
ದುಡ್ಡೂ ಕೂಡ ಹಾಳೆಯಂತೆ! ಬೆಲ್ಲೆಯಂತೆ!
ಹೇಗೆ ಬೆಳೆಸೋದ್ ಅಂದ್ಕೊಂಡಿದ್ದೆ

ವಸುಂಧರೆ ತಾಯಿ ನೀನು
ಬೀಜ ಹಾಕಿದ್ರೆ ಮರ ಮಾಡ್ತಿ
ನಾಣ್ಯವೊಂದ ಬಿತ್ತುತ್ತೀನಿ
ದುಡ್ಡಿನ ಗಿಡ ಮಾಡ್ತೀಯಾ?

ಜೀವಕ್ ಬೇಕಾದ್ ಅನ್ನ, ನೀರು
ಎಲ್ಲಾ ನೀನೆ ಕೊಡ್ತೀಯಾ
ಜೀವನ ಸಾಗಿಸೋಕ್ ಬೇಕೀ ದುಡ್ಡು
ಇನ್ನೂ ಯಾಕೆ ಕೊಟ್ಟಿಲ್ಲ?

ನಾಣ್ಯಕ್ ಜೀವ ಕೊಟ್ಟು ನೋಡು
ಬಿತ್ತಿ ಪ್ರಯತ್ನ ಮಾಡ್ತೀನಿ!
ದುಡ್ಡಿನ ಗಿಡ ಬಂದ್ರೆ ಸಾಕು
ಬಡವರ ಸಮಸ್ಯೆ ಪರಿಹರಿಸ್ತೀನಿ.

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು.

Friday, 2 October, 2009

ನಿನಗಾಗಿ...

ನಿನ್ನ ಮರೆತಿಹ ಚಣಗಳೆಲ್ಲಿದೆ
ನಿನ್ನ ನೆನೆಯದ ದಿನಗಳೆಲ್ಲಿದೆ
ನೀನು ನನ್ನೊಳಗಿರುವ ಸತ್ಯವ ನಾನು ಮರೆತಿಲ್ಲ
ನನ್ನ ಮೊಗದಲಿ ನಗುವ ತರಿಸುವೆ
ನನ್ನ ನಯನದಿ ಬಿಂದು ಸುರಿಸುವೆ
ನನ್ನ ಕಂಬನಿ ಒರೆಸುವ ನಿನ್ನ ಹೇಗೆ ಮರೆಯಲಿ ನಾ

[ಇದನ್ನು ಯಾರ ಕುರಿತಾಗಿ ಬರೆದಿದ್ದೇನೆಂದು ಬಿಡಿಸಿ ಹೇಳ ಬೇಕಿಲ್ಲ ಅನಿಸುತ್ತೆ. ಮತ್ತೊಂದು ಭಾಮಿನೀ ಷಟ್ಪದಿಯ ಪ್ರಯತ್ನ]