Monday 25 January, 2010

ಫಿನ್ ಲ್ಯಾಂಡಿಗೆ ಪ್ರವಾಸ(೩) - ಬಸ್ ಪಾಸ್ ಮಾಡಿಸಿದೆ

[ ಹಿಂದಿನ ಭಾಗ ಇಲ್ಲಿದೆ ]
ಬೆಳಿಗ್ಗೆ ಬೇಗ ಎದ್ದೆ ಅಂದರೆ ಸುಳ್ಳಾಗುತ್ತೆ. ಅಮ್ಮ ಕಾಫಿ ಕೊಟ್ಟು ಎಬ್ಬಿಸ್ತಾರೆ ಅಂತ ಮನಸಲ್ಲೇ ಇತ್ತು. ಆಮೇಲೆ ತಿಳಿಯಿತು ಅಮ್ಮನಿಂದ ಸುಮಾರು ೭೫೦೦ ಕಿ.ಮೀ ದೂರದಲ್ಲಿದ್ದೀನಿ ಅಂತ! ಕಷ್ಟ ಪಟ್ಟು ಎದ್ದೆ. ಕಾಫಿ ಮೇಕರ್ ಇತ್ತು. ಹಾಲು ಇರಲಿಲ್ಲ, ಕಾಫಿಪುಡಿಯೂ ಇರಲಿಲ್ಲ. ಸರಿ ಕಾಫಿಯೇ ಬೇಡ ಅಂತ ಸ್ನಾನ ಮಾಡಿ, ತಿಂದು, ಹೊರಡಲನುವಾದೆ.

ಬಸ್ ವೇಳಾ ಪಟ್ಟಿಯನ್ನೂ ನನ್ನೊಡನೆ ಸದಾ ಇರಲಿ ಅಂತ ಇಟ್ಟುಕೊಂಡು ಬಸ್ಸಿಗಾಗಿ ಕಾಯದೇ ಕಾಲ್ನಡಿಗೆಯಲ್ಲೇ ತಾಂಪರೆಯ ಸೌಂದರ್ಯವನ್ನು ನೋಡುತ್ತಾ ಸಾಗಿ, ನಾನು ಹಿಂದಿನ ದಿನ ಬಂದು ಇಳಿದ ಬಸ್ ನಿಲ್ದಾಣದ ಬಳಿ ಬಂದೆ. ಅಲ್ಲಿ ಬಸ್ ಪಾಸನ್ನು ಕೇಳಿದೆ. ನಾನು ಸರಿಯಾದ ಜಾಗಕ್ಕೆ ಬಂದಿಲ್ಲ ಅಂತ ಅಲ್ಲಿಯ ಸಿಬ್ಬಂದಿ ಹೇಳಿ, ಒಂದು ನಕ್ಷೆ ತೆಗೆದು ಕೊಂಡು ಎಲ್ಲಿ ಹೋದರೆ ಪಾಸ್ ಕೊಡುತ್ತಾರೆ ಅಂತ ಹೇಳಿದರು. ಅಲ್ಲಿಂದ ನಾನು ಆ ಜಾಗಕ್ಕೆ ಹೋಗಿ ಸೇರಿದೆ. ಸರಿಯಾದ ಫಲಕ ಕಾಣದ ಕಾರಣ ನನಗೆ ಆ ಜಾಗ ಯಾವುದೆಂದು ತಿಳಿಯಲಿಲ್ಲ. ಅಲ್ಲಿದ್ದೊಬ್ಬರನ್ನು ಕೇಳುತ್ತಿದ್ದ ಹಾಗೆ... ನಾನು ಏನೋ ಮಾಡಿದೆನೆನೋ ಎಂಬಂತೆ ಮಾತಾಡುತ್ತಾ ಹೋದರು. ಸುಓಮಿ ಭಾಷೆಯಲ್ಲಿ ಏನೋ ಹೇಳುತ್ತಿದ್ದರು. ಆಮೇಲೆ ಮತ್ತೊಬ್ಬ ಯುವತಿಯನ್ನು ಕೇಳಿದೆ. ( ಹುಡುಗಿಯರು ಬುದ್ಧಿವಂತರು ಸರಿಯಾಗಿ ಹೇಳುತ್ತಾರೆ ಅಂತ) ಅವಳು ಒಂದು ಜಾಗವನ್ನು ತೋರಿಸಿದಳು. ಥ್ಯಾಂಕ್ಸ್ ಕಣಮ್ಮ ಅಂತ ಹೋಗಿ ಆ ಜಾಗ ನೋದಿದರೆ... ಅದೊಂದು ಮಾಲ್! ಮಾಲ್ ಗಳಲ್ಲಿ ಬಸ್ ಪಾಸ್ ಸಿಗುತ್ತಾ??? ಅಂತ ಪ್ರಶ್ನಿಸಿಕೊಂಡೆ. ಆದರೂ ಯಾಕೋ ನಂಬಿಕೆಯಿರಲಿಲ್ಲ. ಅಲ್ಲಿದ್ದಾಕೆಯನ್ನು ಕೇಳಿದೆ.. ಬಸ್ ಪಾಸ್ ಸಿಗುತ್ತೇನಮ್ಮ ಇಲ್ಲಿ ಅಂತ? ಅವಳು ಹೋ! ನೀನು ದಾರಿ ತಪ್ಪಿದ ಮಗ! ಇಲ್ಲಿ ಅವೆಲ್ಲ ಸಿಗಲ್ಲ ಅಂತ ಹೇಳಿ, ನನ್ನೊಟ್ಟಿಗೆ ಹೊರಗೆ ಬಂದು, "ಎದುರುಗಡೆ ಕಾಣಿಸುತ್ತಿದೆಯಾ ದೊಡ್ಡ ಗಡಿಯಾರ?" ಅದಕ್ಕೆ ನಾನು "ಹು!" ಅಂದೆ. ಅದರ ಕೆಳಗೆ ದೊಡ್ಡ ಗೇಟ್ ಇದೆ ಅಲ್ವಾ? ಅದರೊಳಗೆ ಹೋಗು ಅಲ್ಲಿ ಕೊಡ್ತಾರೆ ಬಸ್ ಪಾಸ್ ಅಂದಳು. ಸರಿ ಕಣಮ್ಮ ಅಂತ ಅಲ್ಲಿ ಹೋಗಿ, ಬಸ್ ಪಾಸ್ ಕೊಡಮ್ಮ.. ೨ ತಿಂಗಳಿಗೆ ಅಂತ ಕೇಳಿದೆ. ಅಲ್ಲಿದ್ದಾಕೆ, ನಿಮ್ಮ ಗುರುತಿನ ಚೀಟಿ ಏನಾದರೂ ಇದೆಯಾ? ಅಂತ ಕೇಳಿದಳು. ಪಾಸ್ ಪೋರ್ಟ್ ಕೊಟ್ಟು ನನ್ನ ಬಸ್ ಪಾಸ್ ಪಡೆದೆ. ಈಗ ೯೪ ಯೂರೋಗಳು ಕೊಡು. ನೀನು ಭಾರತಕ್ಕೆ ಹೋಗುವಾಗ ನಿನಗೆ ೬ ಯೂರೋಗಳನ್ನು ಹಿಂದಿರುಗಿಸುತ್ತೇವೆ. ಅಂತ ಹೇಳಿದಳು. ನಮ್ಮ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ಈ ತರಹದ ವ್ಯವಸ್ಥೆಯಿಲ್ಲ ನೋಡಿ. ಪಾಸಿನಿಂದಿಗೆ ಎರಡು ಹಾಳೆಗಳನ್ನು ಕೊಟ್ಟಳು. ಒಂದು ಸುಓಮಿ ಭಾಷೆಯಲ್ಲಿತ್ತು. ಅದರ ಆಂಗ್ಲ ಭಾಷೆಯ ತರ್ಜುಮೆ ಮತ್ತೊಂದರಲ್ಲಿತ್ತು. ಪಾಸನ್ನು ಬಳಸುವ ನಿಯಮಗಳಿದ್ದವು ಆ ಹಾಳೆಯಲ್ಲಿ.

ಪಾಸಿನೊಂದಿಗೆ ಮೊದಲ ಭಾರಿ ಬಸ್ ಏರಿ,  ಚಾಲಕನ ಹತ್ತಿರವಿದ್ದ ಒಂದು ಯಂತ್ರಕ್ಕೆ ಪಾಸ್ ತೋರಿಸಿದಾಗ ಅದು "ಹಸಿರು" ಬಣ್ಣದ ಚಿಹ್ನೆ ತೋರಿಸಿತು. ನಂತರ ನನ್ನ ಆಫೀಸಿನ ಬಳಿ ಬಂದಿಳಿದೆ. ಆಗ ನನಗೆ ಆರ್ಕುಟ್ ಹುಚ್ಚು ಸ್ವಲ್ಪ ಇತ್ತು.( ಈಗ ಬಿಟ್ಟು ಹೋಗಿದೆ).
ಸ್ವಲ್ಪ ಹೊತ್ತಿನ ನಂತರ, ಮನೆಗೆ ಬಂದು ಊಟ ಮಾಡಿ ಮಲಗಿದೆ. ಅದೇಕೋ ವಿಪರೀತ ನಿದ್ದೆಯಿತ್ತು. ಮಧ್ಯಾಹ್ನ ಮಲಗಿ ಸಂಜೆ ೬ಕ್ಕೆ ಎದ್ದೆ. ಆಮೇಲೆ ಮತ್ತೆ ಮಲಗಿ ೯ಕ್ಕೆ ಎದ್ದು, ಊಟ ಮಾಡಿ ನಿದ್ದೆಗೆ ಜಾರಿದೆ. ಇಷ್ಟು  ಕಾಲ ನಿದ್ದೆಯನ್ನು ನನ್ನ ಜೀವನದಲ್ಲಿ ಮಾಡಿರಲಿಲ್ಲ!