Tuesday, 30 December, 2008

ಮೊಬೈಲು ಮರೆತಾಗ...

ಬೆಳಿಗ್ಗೆ ಗಡಿಬಿಡಿಯಲ್ಲಿದ್ದೆ. ಆಫೀಸಿಗೆ ಹೋಗಲು ತಡವಾಗುತ್ತಾಯಿತ್ತು. ಅಮ್ಮ ನನ್ನ ಊಟದ ಡಬ್ಬಿಯನ್ನು ಬ್ಯಾಗಿನೊಳಗೆ ಇಟ್ಟಿದ್ದರು. ತುಂಬಾ ಗಡಿಬಿಡಿಯಲ್ಲಿದ್ದಿದ್ದರಿಂದ ಬ್ಯಾಗನ್ನು ಮರೆತು ಆಫೀಸಿಗೆ ಹೊರಟೆ. ಮಧ್ಯ ದಾರಿಯಲ್ಲಿ ಬ್ಯಾಗು ನನ್ನ ಬಳಿ ಇಲ್ಲವೆಂದು ಅರಿವಿಗೆ ಬಂತಾದರೂ ತಲೆ ಕೆಡೆಸಿಕೊಳ್ಳದೇ ಹೋಗಿ ಆಫೀಸು ಬಸ್ ಹತ್ತಿದೆ.

ಈ ದಿನ ಬಸ್ಸಿನಲ್ಲಿ ಹೊಸ ಮುಖವನ್ನು ನೋಡಿದೆ. ಅವರು ನನ್ನ ಪಕ್ಕದಲ್ಲೇ ಕುಳಿತಿದ್ದರು. ನಾನು ಎಂದಿನಂತೆ ಮೌನ ರಾಜ! ಸ್ವಲ್ಪ ಹೊತ್ತಿನಲ್ಲೇ ಯಾಕೋ ನನ್ನ ಮೊಬೈಲಿಗಾಗೆ ಜೇಬಿನೊಳಗೆ ಹುಡುಕಿದೆ. ಆದರೆ ಅದು ಸಿಗಲಿಲ್ಲ. ನಂತರ ಈ ವ್ಯಕ್ತಿ ತಮ್ಮ ಮೊಬೈಲನ್ನು ಕೊಟ್ಟು ಕರೆ ಮಾಡು.. ಇಲ್ಲೇ ಬಿದ್ದಿದ್ದರೆ ಸಿಗುತ್ತದೆ ಎಂದರು. ನನಗೆ ಅವರ SIMಯಿಂದ ಕರೆ ಮಾಡಲು ಮುಜುಗರವಾಯಿತು. ಅದಕ್ಕೆ ನನ್ನ Walletಯಿಂದ ನನ್ನ "SIM" Card ತೆಗೆದೆ! ನಂತರ ಅದನ್ನು ಆತನ ಫೋನಿನೊಳಗೆ ಹಾಕಿ, ನನ್ನ ನಂಬರಿಗೆ ಕರೆ ಮಾಡಿದೆ. ಅದನ್ನು ಅಮ್ಮ ಸ್ವೀಕರಿಸಿದರು. "ಮಗು, ಮನೆಯಲ್ಲೇ ಮೊಬೈಲ್ ಹಾಗು ಬ್ಯಾಗು ಬಿಟ್ಟೀದ್ದೀಯಲ್ಲಾ?, ಊಟದ ಡಬ್ಬಿ ಕೂಡ ಇಲ್ಲೇ ಇದೆ" ಅಂದರು. ಇರಲಿ ಅಮ್ಮ.. ನಾನು ಊಟ ಆಫೀಸಿನಲ್ಲೇ ಮಾಡುತ್ತೇನೆ, ಸದ್ಯ ಫೋನು ಮನೆಯಲ್ಲೇ ಇದೆ ಅಲ್ವ ಸಾಕು ಎಂದೆ. ನನ್ನ ಫೋನು ಮನೆಯಲ್ಲಿ ಜೋಪಾನವಾಗಿದೆ ಎಂದು ಸಂತಸ ಪಟ್ಟೆ.

ಆತನಿಗೆ ಧನ್ಯವಾದ ಹೇಳಿ, ಫೋನು ಹಿಂದಿರುಗಿಸಲು ಹೋದಾಗ, "ಇದು ನಿಮ್ಮ ಬಳಿಯೇ ಇರಲಿ, ನಿಮ್ಮ ಫೋನು ನಿಮ್ಮ ಕೈಗೆ ಬಂದ ಮೇಲೆ ನನಗೆ ಹಿಂದಿರುಗಿಸಿ" ಎಂದರು. ಇಂತಹ ಸದ್ಗುಣವುಳ್ಳವರೂ ಇದ್ದಾರಲ್ಲಾ ನಮ್ಮ ಪ್ರಪಂಚದಲ್ಲಿ ಎಂದು ಅನಿಸಿತು. ನಂತರ ಆತ ಮತ್ತೆ ಸಿಗದೇ ಹೋದರೆ ಫೋನು ಹಿಂದಿರುಗಿಸಲು ಅಸಾಧ್ಯವಾಗಬಹುದೆಂದು, ನನ್ನ ಪಕ್ಕದಲ್ಲೇ ಇದ್ದ ನನ್ನ ಬ್ಯಾಗಿನಿಂದ ಪುಸ್ತಕ ತೆಗೆದು ಆತನ ವಿ-ಅಂಚೆ ವಿಳಾಸ ಬರೆಸಿಕೊಂಡೆ.

ಇದೆಲ್ಲಾ ಆದ ಮೇಲೆ ಒಂದು ದಿನ ಆತ ನನಗೆ ಸಿಕ್ಕಿದ. ಅವನ ಫೋನು ಹಿಂದಿರುಗಿಸಲು ಹೋದಾಗ ಏನಾಯಿತೋ ಗೊತ್ತಾಗಲಿಲ್ಲ... ಅಮ್ಮ ಬಂದು "ಮಗು, ಎದ್ದೇಳು... ೬ ಗಂಟೆ ಆಯ್ತು"ಅಂದರು.

---
ಎರಡು ದಿನಗಳ ನಂತರ
---

ನಾನು ಯಥಾ ಪ್ರಕಾರ ಮೊಬೈಲು ಮರೆತು ಆಫೀಸಿಗೆ ಹೋಗಿದ್ದೆ. ಮೊಬೈಲು ಶೋಕೇಸಿನಲ್ಲಿ ಇದ್ದದ್ದು ಗಮನಿಸಿದ ಅಮ್ಮ, "ಅಯ್ಯೋ! ಗೂಬೆ... ಫೋನು ಮರೆತು ಹೋಗಿದ್ದಾನಲ್ಲ..." ಎಂದು ಹೇಳಿ, ಫೋನು ತೆಗೆದು ಕೊಂಡು ನನಗೆ ಫೋನು ಮಾಡಿದರು. ನನ್ನ ಫೋನು ರಿಂಗ ಕೂಡ ಆಯ್ತು ಆದರೆ ನಾನು ಸ್ವೀಕರಿಸಲಿಲ್ಲ. ಯಾಕೆ ಸ್ವೀಕರಿಸುತ್ತಿಲ್ಲ ಎಂದು ಯೋಚನೆ ಮಾಡುತ್ತಾಯಿದ್ದರಂತೆ ಎಚ್ಚರವಾದ ಮೇಲೆ ತಿಳಿಯಿತು ಅದು ಫೋನಿನ ರಿಂಗಿಂಗ್ ಅಲ್ಲ..... ನಮ್ಮ ಮನೆ Alarm ಕೂಗುತ್ತಿತ್ತು!


ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಿಮ್ಮ ಮೊಗದಲ್ಲಿ ನಗು ಸದಾ ಇರಲಿ

Tuesday, 23 December, 2008

ಹಿಡಿ ಪ್ರೀತಿ

ಚಿತ್ರಾರವರ ಬ್ಲಾಗಲ್ಲಿ "ಏನೂ ಬೇಡ.. ಒಂದು ಹಿಡಿ ಪ್ರೀತಿ ಕೊಡ್ತೀರಾ?!" ಲೇಖನ ಓದಿ ಆ ಸಾರಾಂಶವನ್ನೇ ಕವನದಲ್ಲಿ ಬರೆದಿದ್ದೇನೆ. ಇದರ ವಿಚಾರವೆಲ್ಲಾ ಆಕೆಯದ್ದೇ. ಅವರ ಅನುಮತಿಯಿಲ್ಲದೆ ಕವನ ಬರೆದಿದ್ದೆ. ಆಮೇಲೆ ಅವರೇ ತಮ್ಮ ಬ್ಲಾಗಿನಲ್ಲೂ ಈ ಕವನಕ್ಕೆ ಸ್ಥಾನ ಕೊಟ್ಟಿದ್ದಾರೆ. ಅವರಿಗೆ ವಂದನೆಗಳು.

ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು
ಯಾರು ಬರುವರು ಇದ ಬೆಳಗಲು?
ಸೂರ್ಯನೋ? ಸೋಮನೋ?

ಪ್ರೀತಿಯ ಹುಡುಕಿ ಬಳಲಿದೆ ಜೀವ
ಎಲ್ಲಡಗಿರ ಬಹುದು ಈ ಪ್ರೀತಿ?
ಸಂಸಾರದಲ್ಲೋ? ಸಂದೇಶಗಳಲ್ಲೋ?

ದಿನವೆಲ್ಲಾ ಅಹಿಂಸೆಯ ವರದಿ
ಮನದಲ್ಲಿ ನೋವಿನ ಸರದಿ
ಹೇಳುವುದೋ? ಬಿಡುವುದೋ?

ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ*
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!

--
*"ಪ್ರೀತಿಯ ಕಿಡಿಯಿಂದ"- ಇದು ನನ್ನ ಸ್ವಂತದ್ದು.

Friday, 19 December, 2008

ನೆಲದ ಮೇಲೆ ಕಾಮನಬಿಲ್ಲು


ಈ ಚಿತ್ರಕ್ಕೆ ಶ್ರೀ ಶಿವು ಅವರಿಗೆ ರಾಷ್ಟ್ರೀಯ ಮಟ್ಟದ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. "ನೆಲದ ಮೇಲೆ ಕಾಮನಬಿಲ್ಲು" ಶೀರ್ಷಿಕೆ ಕೂಡ ಶಿವು ಅವರದ್ದೇ. ಈ ಚಿತ್ರಕ್ಕೆ ಒಂದು ಕವನ ಬರೆಯ ಬೇಕೆಂಬ ಆಸೆಯಾಗಿ ಅವರಲ್ಲಿ ಕೇಳಿಕೊಂಡಾಗ ನನಗೆ ಚಿತ್ರ ಕಳುಹಿಸಿಕೊಟ್ಟಿದ್ದಕ್ಕೆ ಅವರಿಗೆ ವಂದಿಸುತ್ತೇನೆ. ಅವರಿಗೆ ಈ ಕವನದ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ.ಏನೀ ನೀರಿನಾಟ ? ಏನೀ ಪ್ರಕೃತಿ ಮಾಟ?
ಏನು ಸೋಜಿಗವೀ ಒಡನಾಟ?

ಕತ್ತಲು ಬೆಳಕ ನಡುವೆ
ಕಣ್ಣ ಹಾಯಿಸಿದಾಗ ಮೋಜು
ಸುತ್ತಲು ಹರಡಿಹ ಹನಿಗಳ
ಸೆರೆ ಹಿಡಿದಿದೆ ಗಾಜು!

ತುಂತುರಿನಾಟದಲ್ಲಿ ಮೂಡಿದೆ
ಅಂಬರದಲ್ಲಿ ಕಾಮನಬಿಲ್ಲು!
ಮಕ್ಕಳಾಟದಲ್ಲಿ ಮೂಡಿದೆ
ನೆಲದ ಮೇಲೆ ಕಾಮನಬಿಲ್ಲು!

ಛಲವಿದ್ದರೆ ಸಾಕು ನಮ್ಮಲ್ಲಿ
ಸಾಧಿಸ ಬಹುದು ಏನನ್ನಾದರೂ
ಊಹಿಸಿದ್ದರೇ ಮಕ್ಕಳು ಮೊದಲು
ಮೂಡಿಸವೆವು ನೆಲದ ಮೇಲೆ ಕಾಮನಬಿಲ್ಲು!

Monday, 15 December, 2008

ಸಂಗಾತಿಯ ಚಿಂತೆಯಲ್ಲಿ


[ಚಿತ್ರವನ್ನು ಕಳುಹಿಸಿದ ಶ್ರೀಮತಿ ತೇಜಸ್ವಿನಿಯವರಿಗೆ ವಂದನೆಗಳು]ಅಂದದ ತುಂಟ ಕಂಗಳು
ಕಂಬನಿ ಹಂಚದೆ;
ಸಂಕಟ ನುಂಗಿವೆ
ಸಂಗಾತಿಯ ಚಿಂತೆಯಲ್ಲಿ

ಬೆಳದಿಂಗಳಲ್ಲಿ ಸೌಂದರ್ಯವಿಲ್ಲ!
ಸಂಗೀತದಲ್ಲಿ ಇಂಚರವಿಲ್ಲ!
ಶ್ರೀಗಂಧದಲ್ಲಿ ಸುಗಂಧವಿಲ್ಲ!
ಸಂಗಾತಿಯ ಚಿಂತೆಯಲ್ಲಿ

ಬೆಂಕಿಗೆ ಸ್ಪಂದಿಸುವುದಿಲ್ಲ!
ನಿಂದಿಸುವರಿಗೆ ನಿಂದನೆಯಿಲ್ಲ!
ಅಂಗಾಂಗಗಳು ಅಂಕೆಯಿಲ್ಲಿಲ್ಲ!
ಸಂಗಾತಿಯ ಚಿಂತೆಯಲ್ಲಿ

ವಿ.ಸೂ: ಈ ಕವನದ ಪ್ರತಿಯೊಂದು ಪದವೂ ಅನುಸ್ವಾರಯುಕ್ತವಾದದ್ದು. ಹಿಂದೆ ಬರೆದ "ಅಂಬಿಗನ ಮಮತೆ"ಯ ಪಲ್ಲವಿ ಮಾತ್ರವೇ ಅನುಸ್ವಾರದಲ್ಲಿತ್ತು. ಬಹು ದಿನಗಳ ಪ್ರಯತ್ನ "ಅನುಸ್ವಾರಗಳ ಕವನ" ಈಗ ಫಲಕಾರಿಯಾಗಿದೆಯೆಂದು ಭಾವಿಸಿದ್ದೇನೆ.

Thursday, 11 December, 2008

ಸಂವತ್ಸರ ಪೂರೈಸಿದ ಸಂತಸದಲ್ಲಿ...

ಡಿಸೆಂಬರ್ ೧೨ನೇ ಮಾಸ. ಇವತ್ತು ೧೨ ನೇ ದಿನ. ಇದಕ್ಕೆ ನನ್ನ ಬದುಕಿನಲ್ಲಿ ಒಂದು ವಿಶೇಷವಿದೆ. ಕಳೆದ ವರ್ಷ ಡಿಸೆಂಬರ್ ೧೨ ರಂದು ಮೊದಲ ಪೋಸ್ಟ್ ಮಾಡಿ ನಾನೂ ಒಬ್ಬ ಕನ್ನಡದ ಬ್ಲಾಗರ್ ಎನಿಸಿಕೊಂಡೆ. ಆದರೆ ಕವನಗಳು ಅದಕ್ಕಿಂತ ಮುಂಚೆಯೇ ಇದ್ದವು. ಬ್ಲಾಗು ಶುರುಮಾಡಿದಾಗ ನನ್ನ ಕಾವ್ಯನಾಮವಾದ "ಅಗ್ರಜ" ಅಂತ ಇಟ್ಟಿದ್ದೆ. ಆಮೇಲೆ ಅದು ಹೋಗಿ ಬೇರೊಂದು ಹೆಸರು ಇಟ್ಟೆ. ಅದೂ ಸಮಾಧಾನ ಸಿಕ್ಕಿರಲಿಲ್ಲ. ಸುಮಾರು ೨೦ ಪೋಸ್ಟ್ ಆದ ಮೇಲೆ, "ಅಂತರ್ವಾಣಿ" ಪದ ಸಿಕ್ಕಿತು. ತುಂಬಾ ಹಿಡಿಸಿತು ಹಾಗು ಸೂಕ್ತ ಅನಿಸಿತು. ಹೀಗೆ ಬರೆಯುತ್ತಾ ಒಂದು ವರ್ಷ ಕಳೆದೇ ಹೋಯಿತು.

ಮೊದಲಿನಿಂದ ನನ್ನ ಬ್ಲಾಗನ್ನು ಓದಿದವರಲ್ಲಿ ಮೊದಲ ಸ್ಥಾನವನ್ನು ಕುಮಾರಿ ಲಕ್ಷ್ಮಿ ಪಡೆದಿರುತ್ತಾರೆ. ಅವರ ನಂತರದಲ್ಲಿ ಕುಮಾರಿ ಪುಷ್ಟ, ಶ್ರೀ ಸುಧೀರ್, ಶ್ರೀ ಶಿವ ಹಂಚಿಕೊಂಡಿರುತ್ತಾರೆ. ಆರ್ಕುಟ್, ಕನ್ನಡಿಗರು.ಕಾಂ ಹಾಗು ಮಜಾ ಮಾಡಿ ತಾಣದಲ್ಲಿ ಸಿಕ್ಕ ಅನೇಕ "ಬೆಮಿ" [ಬೆರಳಂಚಿನ ಮಿತ್ರರು] ಓದಿ ಪ್ರೋತ್ಸಾಹಿಸಿದ್ದಾರೆ. ಇವರಲ್ಲಿ ಶ್ರೀ ತ.ವಿ.ಶ್ರೀ, ಶ್ರೀ ಮಧು, ಶ್ರೀಮತಿ ಲಿಲ್ಲಿ ಇದ್ದಾರೆ. ಈ ಸಮಯದಲ್ಲೇ ಶ್ರೀಮತಿ ತೇಜಸ್ವಿನಿ ಅವರ ಪರಿಚಯವಾಯಿತು. ಅಂದಿನಿಂದ ನನ್ನೆಲ್ಲಾ ಕವನಗಳನ್ನು, ಲೇಖನಗಳನ್ನೂ ಓದಿ ತಪ್ಪುಗಳನ್ನು ತಿದ್ದಿ, ನನಗೆ ಪ್ರೋತ್ಸಾಹಿಸುತ್ತಾಯಿದ್ದಾರೆ. ನಂತರ ನನ್ನೀ ಚಿಕ್ಕ ಬ್ಲಾಗು ಶ್ರೀ ಅರುಣ್, ಶ್ರೀ ಹರೀಶ್ , ಶ್ರೀ ಸುನಾಥಂಕಲ್, ಶ್ರೀ ರಾಜು, ಶ್ರೀ ಶಿವಣ್ಣ, ಶ್ರೀ ಪ್ರಕಾಶಣ್ಣ , ಶ್ರೀ ಸುಧೇಶ್ ಕಣ್ಣಿಗೂ ಬಿದ್ದಿದೆ. ಇವರೆಲ್ಲರ ಸತತ ಪ್ರೋತ್ಸಾಹದಿಂದ ಹೆಚ್ಚು ಬರೆಯ ಬೇಕೆಂಬ ಬಯಕೆ ಮನಕ್ಕಾಗಿದೆ.

ನನಗೆ ಪ್ರೋತ್ಸಾಹ ನೀಡುತ್ತಾ ಬಂದಿರು ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.

"ಅಂತರ್ವಾಣಿ" ಪದಕ್ಕೆ ನಾ ಬರೆದ ಕವನ:

"ಹೇಳುವೆನು ನನ್ನೀ ಅಂತರ್ವಾಣಿಯ
ಕೇಳಿದರು ಸರಿ, ಕೇಳದಿದ್ದರೂ ಸರಿ
ಬರೆಯುವೆನು ನನ್ನೀ ಚೇತನವಿರುವವರೆಗೂ
ಓದಿದರು ಸರಿ, ಓದದಿದ್ದರೂ ಸರಿ"

Sunday, 7 December, 2008

ಕಲ್ಲಿಗೊಂದು ಕೊಕ್ಕರೆ

ನಮ್ಮ ಮನೆಯ ಎದುರು ಇರುವ ಕೊಳಕು ನೀರಿನಿಂದಾದ ಕೊಳದಲ್ಲಿ ಈ ಮಿತ್ರರು ಸಂಸಾರ ಹೂಡಿದ್ದಾರೆ. (ಹಿಂದೆ ಇದೇ ಕೊಳದಲ್ಲಿ ಕಪ್ಪೆಗಳು ಇದ್ದವು.) ಅವರ ಮಾತುಕತೆ ಅವರಿಂದಲೇ ಕೇಳಿ.


[ ನಾವೆಲ್ಲಾ ಶಂಕ್ರಣ್ಣನ ಮನೆ ಎದುರು ಇದ್ದೀವಿ. ನೀವೆಲ್ಲಾ ನೋಡಲು ಬನ್ನಿ ][ಹಾರ ಬೇಡಿ... ಇರಿ ಫೋಟೋ ತೆಗಿತಾನಂತೆ..]

[ನಮ್ಮ ಚಿತ್ರಾನೆ ತೆಗಿ...ಅವರಿಗಿಲ್ಲ ಅದೃಷ್ಟ!]


[ನೀವು ಹಾರಿಬಿಟ್ರಾ? ನಿಮಗೂ ಇಲ್ಲ ಅದೃಷ್ಟ!]

[ನನ್ನ ಫೋಟೋನೆ ತೆಗೆ. ಚೆನ್ನಾಗಿ ಪೋಸ್ ಕೊಡುತ್ತಾಯಿದ್ದೀನಾ...?]

[ಹಾಯ್ ಶಂಕ್ರಣ್ಣ.. ನಾವಿಲ್ಲಿದ್ದೀವಿ... ತೆಗೆ... ದೂರ ಆದರೂ ಪರ್ವಾಗಿಲ್ಲ...ಹಸಿರಿನ ಮಧ್ಯೆ ಬಿಳಿ ಜೀವಿಗಳು ನಾವು...]


[ಅಯ್ಯೋ! ಎಷ್ಟು ಹೇಳಿದರೂ ಕೇಳೋದಿಲ್ವಲ್ಲಾ ನೀವುಗಳು...ಬನ್ನಿ Group ಫೋಟೋ ತೆಗೆಸಿಕೊಳ್ಳೋಣ....]

[ಸಾಲಾಗಿ ಕೂತಿದ್ದೀವಿ.. ಈಗ ತೆಗೆ Group ಫೋಟೋ.]

ವಿ.ಸೂ: ಫೋಟೋಗ್ರಾಫಿ ಒಂದು ಹವ್ಯಾಸವಷ್ಟೇ.

Thursday, 4 December, 2008

ಕಾಲಿಗೊಂದು ಕಪ್ಪೆ

"ಬೋಲೋ ವಟ ವಟ ಮಹಾರಾಜ್ ಕೀ ಜಯ್"

ಮಳೆ ಬಂದ ಕಾಲದಿ
ರಸ್ತೆ ಬದಿಯ ಕೊಳದಿ
ಕಪ್ಪೆಗಳ ಸಂಸಾರವೊಂದಿತ್ತು

ಅರೆ ಕ್ಷಣ ಬಿಡದೇ
ಅವುಗಳ "ವಟ ವಟ" ಕರ್ಣಗಳಿಗಿತ್ತು
ಅಲ್ಪ ದಿನಗಳಲ್ಲೇ
ಎಮ್ಮ ಮನೆಯಂಗಳದಲ್ಲಿ
ಕಾಲಿಗೊಂದು ಕಪ್ಪೆ ಸಿಗುತ್ತಿತ್ತು!


"ಭೋಲೋ ವಟ ವಟ ಮಹಾರಾಜ್ ಕೀ ಜಯ್"