Showing posts with label ವಿಶೇಷ ಕವನಗಳು. Show all posts
Showing posts with label ವಿಶೇಷ ಕವನಗಳು. Show all posts

Saturday, 31 March 2012

ಪಂಜರದಿಂದ ಪ್ರಪಂಚಕ್ಕೆ!

ಕುಳಿತಿದ್ದೆವು ನಾವು, ತಿಳಿಯದೆ ಅನ್ಯ ಪ್ರಪಂಚ
ಸಾಕಿದ್ದರು ನಮ್ಮ, ತೋರದೆ ಕರುಣೆ ಕೊಂಚ

ಕೋಮಲವಾದ ಕರಗಳಲ್ಲಿ ಸೇರಿದಾಗಲೂ ನಾವು
ತಿಳಿದಿದ್ದೆವೂ ಇನ್ನು ಮುಂದೂ ನಮಗೆ ಬೇವು

ಸಹೃದಯದ ಪೋರಿಗೆ ತಿಳಿಯಿತಾದರೂ ಹೇಗೆ
ಈ ಪ್ರಣಯ ಹಕ್ಕಿಗಳ ಪ್ರತಿದಿನದ ಬೇಗೆ?

ಉಡುಗೊರೆಯಾಗಿ ಕೊಡುತ್ತಾ ನಮ್ಮನ್ನು,
ಬಿಡುಗಡೆ ಮಾಡಿಸಿದಳು... ಪಂಜರದಿಂದ ಪ್ರಪಂಚಕ್ಕೆ!

Thursday, 22 March 2012

ದ್ವಿಜ ಉವಾಚ


ನನ್ನ ತಮ್ಮ ತೆಗೆದ ಈ ಅತ್ಯದ್ಭುತವಾದ ಛಾಯಾಚಿತ್ರಕ್ಕೆ  ನನ್ನ ಕವನ. 
 
 
 
ಹಕ್ಕಿ ತಾನು ಹಾರುವುದ ಮರೆತು
ಬಂದಿಲ್ಲಿ ಕುಳಿತಿದೆ
ತನಗೆ ತಿಳಿದ ಚಿಲಿಪಿಲಿಯ
ಹಾಡಲಿಲ್ಲಿ ಬಯಸಿದೆ

ರೆಕ್ಕೆಯುಂಟು ಹಾರಬಲ್ಲೆ
ಅಳೆಯ ಬಹುದು ಇಳೆಯನು
ಸಲ್ಲದು ನನಗದು;
ಸಾಗಬೇಕಿದೆ ಸತ್ಯದ ಕಡೆಗೆ!

ರವಿ,ಚಂದ್ರರ ನೋಡಬಲ್ಲೆ
ತಿಳಿಯುವುದು ಹಗಲಿರುಳು
ಒಲ್ಲೆ ಇರುಳ ಜೀವನ;
ಕಾಣ ಬಯಸುವೆ ಹಗಲನು

ಕಟ್ಟಿಗೆಯಿಂದ ಕಾಯವ ಸುಡುವರು
ತೆನೆಯು ತನುವ ಸಾಗಿಸುವುದು
ಮರಣದ ಚಿಂತೆಯಾಕೆ ?
ಮೃತ್ಯುವ ಮರೆತು ಜೀವಿಸೋಣ!

Tuesday, 13 October 2009

ದುಡ್ಡಿನ ಗಿಡ

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು

ಚಿಕ್ಕ ವಯಸ್ನಲ್ ಅಮ್ಮ ಹೇಳಿದ್ನ
ಹಾಸ್ಯ ಅಂತ ತಿಳ್ಕೊಂಡಿದ್ದೆ
ದುಡ್ಡೂ ಕೂಡ ಹಾಳೆಯಂತೆ! ಬೆಲ್ಲೆಯಂತೆ!
ಹೇಗೆ ಬೆಳೆಸೋದ್ ಅಂದ್ಕೊಂಡಿದ್ದೆ

ವಸುಂಧರೆ ತಾಯಿ ನೀನು
ಬೀಜ ಹಾಕಿದ್ರೆ ಮರ ಮಾಡ್ತಿ
ನಾಣ್ಯವೊಂದ ಬಿತ್ತುತ್ತೀನಿ
ದುಡ್ಡಿನ ಗಿಡ ಮಾಡ್ತೀಯಾ?

ಜೀವಕ್ ಬೇಕಾದ್ ಅನ್ನ, ನೀರು
ಎಲ್ಲಾ ನೀನೆ ಕೊಡ್ತೀಯಾ
ಜೀವನ ಸಾಗಿಸೋಕ್ ಬೇಕೀ ದುಡ್ಡು
ಇನ್ನೂ ಯಾಕೆ ಕೊಟ್ಟಿಲ್ಲ?

ನಾಣ್ಯಕ್ ಜೀವ ಕೊಟ್ಟು ನೋಡು
ಬಿತ್ತಿ ಪ್ರಯತ್ನ ಮಾಡ್ತೀನಿ!
ದುಡ್ಡಿನ ಗಿಡ ಬಂದ್ರೆ ಸಾಕು
ಬಡವರ ಸಮಸ್ಯೆ ಪರಿಹರಿಸ್ತೀನಿ.

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು.

Friday, 14 August 2009

ಯಾರೆ ನೀನು ಚೆಲುವೆ...?

ನೆನೆಯುವೆ ಮಳೆಯಲಿ
ನಿನ್ನ ಜೊತೆಯಲಿ
ಅಂತರಂಗದ ಮಾತುಗಳ
ಮೌನ ಸಂಭಾಷಣೆಯಲಿ!

ಮಳೆಯಿಂದ ನೀ ನೆನೆದು
ಮೈದುಂಬಿ ಬರುವಾಗ
ತೆರೆದ ಕಂಗಳಲಿ ನಿಂದೆ
ನಿನ್ನ ಪಾದದಡಿಯಲಿ

ಮಂಜಿನೂರಿನಲ್ಲಿ ಜನನ
ಕೊರೆಯುವಂತ ದೇಹ ರಚನ!
ಮತ್ತೆ ನೋಡ ಬಯಸುವೆ
ಸೌಂದರ್ಯವತಿ ನಿನ್ನ!

--
ಈ ಸೌಂದರ್ಯವತಿ ಯಾರು ಅಂತ ನಿಮಗೆ ಗೊತ್ತಿದ್ದಲ್ಲಿ ತಿಳಿಸಿ. ಸರಿಯಾದ ಉತ್ತರಕ್ಕೆ ಬಹುಮಾನ ಖಚಿತ! ಒಂದು ಸುಳಿವು ಕೊಡುತ್ತೀನಿ. ಕೊನೆ ಚರಣದ ಮೊದಲೆರಡು ಸಾಲುಗಳನ್ನು ಹಲವು ಬಾರಿ ಓದಿದರೆ ಏನಾದರೂ ಹೊಳಿಯಬಹುದು.

Friday, 5 June 2009

ಹೂವಿನಂತೆ ಬಾಳು

ಈದಿನ ನನಗೆ ತುಂಬಾ ಬೇಕಾದಳ ಹುಟ್ಟು ಹಬ್ಬ. ಕಳೆದ ಎರಡು ವರ್ಷದಿಂದ ಈ ದಿನ ಅವಳಿಗೆ ಉಡುಗೊರೆ ಕೊಡುತ್ತಾ ಬಂದಿದ್ದೀನಿ. ಈ ಬಾರಿಯ ಉಡುಗೊರೆ ಸ್ವೀಕರಿಸೇ....
--
ಹೂವಿನಂತೆ ಬಾಳು
ಕಂಪನ್ನು ಎಲ್ಲೆಡೆ ಬೀರುತ
ಬಾಡಿದ ಹೂ ಕಸದ ಪಾಲು
ಬಾಡದ ಹೂ ದೇವರ ಪಾಲು

ಚೆಲುವಿರಲಿ ನೋಟಕೆ
ಪರಿಮಳವಿರಲಿ ಆಕರ್ಷಣೆಗೆ
ಮುಳ್ಳಿರಲಿ ನಿನ್ನ ರಕ್ಷಣೆಗೆ
ಮಕರಂದವಿರಲಿ ಸದುದ್ದೇಶಕೆ

ಮುಡಿಯಲು ಬೇಕು ಹೂ
ಮಡಿದಾಗಲೂ ಬೇಕು ಹೂ
ಎಲ್ಲರ ಪಾಲಿಗು ಹೂವಾಗು
ಎಲ್ಲರ ಪಾಲಿಗು ಬೇಕಾಗು

Friday, 29 May 2009

ಪೆದ್ದ ನಾನು..

ಹಾರುವ ಹಕ್ಕಿಯ ಹಿಡಿಯಲು ಹೋದ ಪೆದ್ದ ನಾನು
ಬಾನಿನ ಚುಕ್ಕಿಯ ಎಣಿಸಲು ಹೋದ ಪೆದ್ದ ನಾನು
ಮೋಡದಿ ಮಹಲನು ಕಟ್ಟಲು ಹೋದ ಪೆದ್ದ ನಾನು
ಏರುವ ಅಲೆಗಳ ಅಳೆಯಲು ಹೋದ ಪೆದ್ದ ನಾನು

ಹೂವಿನ ಪರಿಮಳ ಮೂಸದೆ ಹೋದ ಪೆದ್ದ ನಾನು
ಬಣ್ಣದ ಚಿತ್ತಾರವ ಅಳಿಸಲು ಹೋದ ಪೆದ್ದ ನಾನು
ಬಿಟ್ಟ ಶರವ ಹಿಂದೆ ತರಲು ಹೋದ ಪೆದ್ದ ನಾನು
ಕೊಟ್ಟ ಜೇನನು ಸವಿಯದೇ ಹೋದ ಪೆದ್ದ ನಾನು

Wednesday, 6 May 2009

ಹಕ್ಕಿ ಹಾರ ಬಯಸಿದೆ...

ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ

ಹಕ್ಕಿಗಳದೊಂದು ಪುಟ್ಟ ಸಂಸಾರ
ಸಂಬಂಧಗಳು ಸೇರಿದಾಗದು ಸಾಗರ

ಮರವೊಂದ ಹುಡುಕಿತು ಗೂಡು ಕಟ್ಟಲು
ಉಳಿದ ಹಕ್ಕಿಗಳು ಬಂದು ಬೆನ್ನ ತಟ್ಟಲು

ಬಲವಿಲ್ಲದ ರೆಕ್ಕೆಗಳಿರೆ ಹಾರಲಸಾಧ್ಯ
ಬಲ ತುಂಬುವ ಹಕ್ಕಿಗಳಿರಲದು ಸಾಧ್ಯ

ಕಟ್ಟಾಯಿತು ಹಕ್ಕಿಗೊಂದು ಗೂಡು
ಎಷ್ಟು ಚೆಂದವಿದೆ ಅದು ನೀನೆ ನೋಡು

ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ

Friday, 6 February 2009

ಮೊದಲ ಭಾಮಿನಿ

ಬಾಳ ದೋಣಿಯ ಅಂಬಿಗ ಶ್ರೀ ಹರೀಶ್, ಭಾಮಿನಿ ಷಟ್ಪದಿಯಲ್ಲೊಂದು ಕವನ ರಚಿಸುವಂತೆ ಹುಳ ಬಿಟ್ಟು, ಭಾಮಿನಿಯ ಕುರಿತು ಮಾಹಿತಿ ಕೊಟ್ಟು, ಈ ಕೆಲಸಕ್ಕೆ ಕೈ ಹಾಕುವಂತೆ ಮಾಡಿದ್ದಕ್ಕೆ ವಂದನೆಗಳನ್ನು ಹೇಳುತ್ತೇನೆ.

ಸದ್ಯದ ನನ್ನ ಪರಿಸ್ಥಿತಿಯನ್ನು ಭಾಮಿನಿಯಲ್ಲೇ ಹೇಳುತ್ತಾಯಿದ್ದೀನಿ.


ಮನದಿ ಭಾಮಿನಿಯ ಆಸೆಯಿಟ್ಟ
ಬಾನ ನೋಡುತ ಯೋಚಿಸಿದೆ ನಾ
ಜೇನಿನ ನುಡಿಗಳು ಸಿಗುವ ಕಾಯಕ ನಡೆದಿದೆ ಈಗ
ಕಾನನದಿ, ಪರಿಸರದಿ ಹುಡುಕಿಹೆ
ಅನವರತ ಮನಸನ್ನು ಕೆದಕಿಹೆ
ನನಗೆ ತಿಳಿಯದ ಶಕ್ತಿ ಬರೆಸಿಹ ಮೊದಲ ಕವನವಿದು

Friday, 30 January 2009

ಬೆಕ್ಕಿಗೆ ಕೋಪ ಬಂದಿದೆ

ಬೆಕ್ಕಿಗೆ ಕೋಪ ಬಂದಿದೆ
ಹಾಲು ಮೊಸರು ಕಾಣದೆ
ಇನ್ನೂ ಕೋಪ ಬಂದಿದೆ
ಇಲಿಗಳು ಕಣ್ಣಿಗೆ ಬೀಳದೆ!

ಸದ್ದಿಲ್ಲದೆ ಬರುವುದು ಸದಾ
ಎಣಿಸದೆ ರಾತ್ರಿ ಹಗಲು
ಹತ್ತಾರು ಮನೆಗಳು ಇದಕ್ಕಿದೆ
ಹಾಲು ಮೊಸರು ಸವಿಯಲು

ಗಿಡ್ದ ದೇಹ, ದೊಡ್ಡ ದನಿ
ಕಣ್ಣಿನೊಳಗಿದೆ ಕನಿ!
ಬಿಡುವಿಲ್ಲದ ಮಿಯಾವಿಗೆ
ಕೊಡುತ್ತಿದ್ದೇನೆ ಕಿವಿ!

[ ಇದು "ಶಿಶುವಾಣಿ" ವಿಭಾಗದಲ್ಲಿನ ಎರಡನೆ ಕವನ]

Monday, 26 January 2009

ಕಪ್ಪು ಝರಿ

ಬಿಳಿ ಬಂಡೆಯಿಂದ ಉದ್ಭವಿಸಿದ ಕಪ್ಪು ಝರಿ
ಸಹಸ್ರಾರು ರಂಧ್ರಗಳ ಕೊರೆದು ಹರಿಯುತಿದೆ
ಸೂರ್ಯನ ಪ್ರತಿಬಿಂಬವ ತೋರಿಸುವ ಕಪ್ಪು ಝರಿ
ಅಲೆ ಅಲೆಯಾಗಿ ಕರದ ಮೇಲೆ ಹರಿಯುತಿದೆ.

ಇಂದುಮುಖಿಯ ಹಿಂದಿರುವ ಕಪ್ಪು ಝರಿ
ತಂಗಾಳಿಗೆ ತೂರಾಡುತಿದೆ
ತನು ಮನವ ತಂಪುಗೊಳಿಸುವ ಕಪ್ಪು ಝರಿ
ನಯಾಗರಕ್ಕೆ ಸವಾಲೊಡ್ಡಿದೆ!

Tuesday, 23 December 2008

ಹಿಡಿ ಪ್ರೀತಿ

ಚಿತ್ರಾರವರ ಬ್ಲಾಗಲ್ಲಿ "ಏನೂ ಬೇಡ.. ಒಂದು ಹಿಡಿ ಪ್ರೀತಿ ಕೊಡ್ತೀರಾ?!" ಲೇಖನ ಓದಿ ಆ ಸಾರಾಂಶವನ್ನೇ ಕವನದಲ್ಲಿ ಬರೆದಿದ್ದೇನೆ. ಇದರ ವಿಚಾರವೆಲ್ಲಾ ಆಕೆಯದ್ದೇ. ಅವರ ಅನುಮತಿಯಿಲ್ಲದೆ ಕವನ ಬರೆದಿದ್ದೆ. ಆಮೇಲೆ ಅವರೇ ತಮ್ಮ ಬ್ಲಾಗಿನಲ್ಲೂ ಈ ಕವನಕ್ಕೆ ಸ್ಥಾನ ಕೊಟ್ಟಿದ್ದಾರೆ. ಅವರಿಗೆ ವಂದನೆಗಳು.

ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು
ಯಾರು ಬರುವರು ಇದ ಬೆಳಗಲು?
ಸೂರ್ಯನೋ? ಸೋಮನೋ?

ಪ್ರೀತಿಯ ಹುಡುಕಿ ಬಳಲಿದೆ ಜೀವ
ಎಲ್ಲಡಗಿರ ಬಹುದು ಈ ಪ್ರೀತಿ?
ಸಂಸಾರದಲ್ಲೋ? ಸಂದೇಶಗಳಲ್ಲೋ?

ದಿನವೆಲ್ಲಾ ಅಹಿಂಸೆಯ ವರದಿ
ಮನದಲ್ಲಿ ನೋವಿನ ಸರದಿ
ಹೇಳುವುದೋ? ಬಿಡುವುದೋ?

ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ*
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!

--
*"ಪ್ರೀತಿಯ ಕಿಡಿಯಿಂದ"- ಇದು ನನ್ನ ಸ್ವಂತದ್ದು.

Friday, 19 December 2008

ನೆಲದ ಮೇಲೆ ಕಾಮನಬಿಲ್ಲು


ಈ ಚಿತ್ರಕ್ಕೆ ಶ್ರೀ ಶಿವು ಅವರಿಗೆ ರಾಷ್ಟ್ರೀಯ ಮಟ್ಟದ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. "ನೆಲದ ಮೇಲೆ ಕಾಮನಬಿಲ್ಲು" ಶೀರ್ಷಿಕೆ ಕೂಡ ಶಿವು ಅವರದ್ದೇ. ಈ ಚಿತ್ರಕ್ಕೆ ಒಂದು ಕವನ ಬರೆಯ ಬೇಕೆಂಬ ಆಸೆಯಾಗಿ ಅವರಲ್ಲಿ ಕೇಳಿಕೊಂಡಾಗ ನನಗೆ ಚಿತ್ರ ಕಳುಹಿಸಿಕೊಟ್ಟಿದ್ದಕ್ಕೆ ಅವರಿಗೆ ವಂದಿಸುತ್ತೇನೆ. ಅವರಿಗೆ ಈ ಕವನದ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ.



ಏನೀ ನೀರಿನಾಟ ? ಏನೀ ಪ್ರಕೃತಿ ಮಾಟ?
ಏನು ಸೋಜಿಗವೀ ಒಡನಾಟ?

ಕತ್ತಲು ಬೆಳಕ ನಡುವೆ
ಕಣ್ಣ ಹಾಯಿಸಿದಾಗ ಮೋಜು
ಸುತ್ತಲು ಹರಡಿಹ ಹನಿಗಳ
ಸೆರೆ ಹಿಡಿದಿದೆ ಗಾಜು!

ತುಂತುರಿನಾಟದಲ್ಲಿ ಮೂಡಿದೆ
ಅಂಬರದಲ್ಲಿ ಕಾಮನಬಿಲ್ಲು!
ಮಕ್ಕಳಾಟದಲ್ಲಿ ಮೂಡಿದೆ
ನೆಲದ ಮೇಲೆ ಕಾಮನಬಿಲ್ಲು!

ಛಲವಿದ್ದರೆ ಸಾಕು ನಮ್ಮಲ್ಲಿ
ಸಾಧಿಸ ಬಹುದು ಏನನ್ನಾದರೂ
ಊಹಿಸಿದ್ದರೇ ಮಕ್ಕಳು ಮೊದಲು
ಮೂಡಿಸವೆವು ನೆಲದ ಮೇಲೆ ಕಾಮನಬಿಲ್ಲು!

Monday, 15 December 2008

ಸಂಗಾತಿಯ ಚಿಂತೆಯಲ್ಲಿ


[ಚಿತ್ರವನ್ನು ಕಳುಹಿಸಿದ ಶ್ರೀಮತಿ ತೇಜಸ್ವಿನಿಯವರಿಗೆ ವಂದನೆಗಳು]



ಅಂದದ ತುಂಟ ಕಂಗಳು
ಕಂಬನಿ ಹಂಚದೆ;
ಸಂಕಟ ನುಂಗಿವೆ
ಸಂಗಾತಿಯ ಚಿಂತೆಯಲ್ಲಿ

ಬೆಳದಿಂಗಳಲ್ಲಿ ಸೌಂದರ್ಯವಿಲ್ಲ!
ಸಂಗೀತದಲ್ಲಿ ಇಂಚರವಿಲ್ಲ!
ಶ್ರೀಗಂಧದಲ್ಲಿ ಸುಗಂಧವಿಲ್ಲ!
ಸಂಗಾತಿಯ ಚಿಂತೆಯಲ್ಲಿ

ಬೆಂಕಿಗೆ ಸ್ಪಂದಿಸುವುದಿಲ್ಲ!
ನಿಂದಿಸುವರಿಗೆ ನಿಂದನೆಯಿಲ್ಲ!
ಅಂಗಾಂಗಗಳು ಅಂಕೆಯಿಲ್ಲಿಲ್ಲ!
ಸಂಗಾತಿಯ ಚಿಂತೆಯಲ್ಲಿ

ವಿ.ಸೂ: ಈ ಕವನದ ಪ್ರತಿಯೊಂದು ಪದವೂ ಅನುಸ್ವಾರಯುಕ್ತವಾದದ್ದು. ಹಿಂದೆ ಬರೆದ "ಅಂಬಿಗನ ಮಮತೆ"ಯ ಪಲ್ಲವಿ ಮಾತ್ರವೇ ಅನುಸ್ವಾರದಲ್ಲಿತ್ತು. ಬಹು ದಿನಗಳ ಪ್ರಯತ್ನ "ಅನುಸ್ವಾರಗಳ ಕವನ" ಈಗ ಫಲಕಾರಿಯಾಗಿದೆಯೆಂದು ಭಾವಿಸಿದ್ದೇನೆ.

Monday, 24 November 2008

ಎಮ್ಮ ಮನೆಯಂಗಳದಿ

ಎಮ್ಮ ಮನೆಯಂಗಳದಿ
ಬಂದಿತೊಂದು ಪುಟ್ಟ ಜೀವ
ನನ್ನ ಕಾಲ ಪಕ್ಕ ಇದ್ದು,
ಕಾಣದಂತೆ ನಾನಿದ್ದೆ!

ಅದನ್ನು ಕಂಡ ಕ್ಷಣದಲಿ,
ಬಂತು ಮೊಬೈಲು ಕೈಯಲಿ,
ಸೆರೆಹಿಡಿಯುತ ಅದರ ಚಲನ
ಮನಸಿನಲಿ ಮೂಡಿಸಿದೆ ಕವನ

ಶಂಕರನ ಕೊರಳಲ್ಲಿ ಇರದೇ
ಶಂಕರನ ಮನೆ ಅಂಗಳದಲಿ
ಬಂದಿತೊಂದು ಪುಟ್ಟ ಜೀವ
ಸದ್ಯ! ಯಾರಿಗೂ ಕೊಡಲಿಲ್ಲ ನೋವ.

Tuesday, 23 September 2008

’ಮ’ಕಾರದ ಮಾನಿನಿಯರು!

[ ಇದು ಪೋಸ್ಟ್ ಆಗುತ್ತಾಯಿರುವ ೫೦ನೇ ಕವನ. ಆದರೆ ಇದು ೫೦ನೇ ಕವನ ಅಲ್ಲ. 2006 ರಲ್ಲಿ, ನನ್ನ ತಂಗಿ ಹಾಗು ತಮ್ಮ ಕೆಲವು ಹುಡುಗೀಯರ ಹೆಸರುಗಳನ್ನು ಕೊಟ್ಟು ಒಂದು ಕವನ ರಚಿಸಲು ಹೇಳಿದರು. ಅವರ ಬಲವಂತಕ್ಕೆ ಬರೆದದ್ದು. ಅದೇಕೋ ನನ್ನ ಆರಂಭದ ಕವನಗಳು ’ಮ’ ಕಾರದಿಂದ ಪ್ರಾರಂಭ ಮಾಡಿದ್ದೆ. ಆಮೇಲೆ, ನನ್ನ ಕವನ / ಲೇಖನದ ಶೀರ್ಷಿಕೆಗಳು ಕೆಲವು ’ಮ’ಕಾರದಿಂದ ಆರಂಭವಾಗಿವೆ: ಮೆಲೋಡಿಯಸ್ ಮೋಹನ, ಮಾಲ್ @ಮಲ್ಲೇಶ್ವರ, ಮಲೆಯಲ್ಲೊಂದು ಮಾಣಿಕ್ಯ, ಮರುಳು ಮಾತುಗಳು, ಮಗುವಾಗಬಾರದಿತ್ತೇ? ಇತ್ಯಾದಿಗಳು. ಇಂದಿನ ಕವನದ ಶೀರ್ಷಿಕೆ ಬೇರೆ ಏಕೆ ಇಡಲಿ ಎಂದು ’ಮ’ಕಾರದಿಂದ ಪ್ರಾರಂಭ ಮಾಡಿದೆ. ಖಂಡಿತವಾಗಿಯೂ ಟಿ.ಎನ್.ಸೀತಾರಾಮ್ ಅವರ ಪ್ರಭಾವವಿಲ್ಲ! ]

ಹುಡುಗಿಯರ ಹೆಸರಿನ ಕವನವಿದು
ತಂಗಿಯು ಇಟ್ಟ ಪ್ರಶ್ನೆಯಿದು
ಹತ್ತಾರು ಚೆಲುವೆಯರು ಬರುವ
ಪುಟ್ಟದೊಂದು ಕವನವಿದು.

ಮೀರಾ.. ನಿನ್ನ ಮೆಚ್ಚಿದೆ ಮನಸಾರ
ಕೊಡಲೇ ನಿನಗೆ "ಮುತ್ತಿನ" ಹಾರ?
ಮೀನ, ಮೀನಾ ನೋಡು ನನ್ನ
ಹಾಡುವೆ ನಿನಗೆ ಮೊದಲ ಗಾನ.

ಮಧುವಿನ ಹಾಗಿದ್ದ ನಿನ್ನ ಮಾತು
ಮಗುವಿನ ಹಾಗೆ ನನ್ನ ಮಾಡಿತು.
ಮಾಧುರಿ ನಿನ್ನ ಕಾಣಲು
ಬಿಡಳು ಮಂಡೋದರಿ
ಅವಳಂಥ ನಾರಿ, ರಾವಣನಿಗೆ ಸರಿ.

ಮಲ್ಲಿಕಾ ಜೊತೆಗೆ ಮಂದಿರಕ್ಕೆ ಹೋಗುವೆನೆಂದರೆ
ಹಿಂದೆ ಓಡಿ ಬರುವಳು ಮೇನಕ.
ಮೋನಿಕಾ ಜೊತೆಗೆ ಹಾಡಲು ಹೋಗುವೆನೆಂದರೆ
ಬಂದು ಕಾಡುವಳು ಮಲೈಕಾ.

ಮಧುರವಾದ ಮಾತಿಂದ ಮೌನ ಮಾಡಿದೆ
ಮೇಘ ಸಂದೇಶ ಕಳಿಸಿದರೆ ಮಾಯ ಮಾಡಿದೆ.

ಮನೀಷ ನೀ ಬಾರೆ, ನಗು ನಗುತಾ
ನಿನ್ನ ಮೊಗವ ನೋಡುತ
ಕಾಲ ಕಳೆಯುವ ತವಕ.
ಮಯೂರಿ, ನಿನ್ನ ಲಾಸ್ಯಕೆ
ಗರಿ ಮುಚ್ಚಿತು ಮಯೂರ!

Monday, 28 April 2008

ಹೆಣ ಮಾತಾಡಿತು!

ಎಲ್ಲರಂತೆ ನಾನು ಉಸಿರಾಡುತ್ತಿದ್ದೆ
ಎಂದು ಉಸಿರಾಟ ನಿಂತಿತೋ ತಿಳಿಯದಾದೆ!

ದಾಹ! ಎಂದಾಗ ನೀರಿಟ್ಟರು
ದೇಹ, ಹೆಣವಾದಾಗ ಕಣ್ಣೀರಿಟ್ಟರು!

ಹಸಿವೆಂದಾಗ ಮಣೆ ಹಾಕಿ, ತಟ್ಟೆ ಇಟ್ಟರು
ಅಸು ನೀಗಿದಾಗ ಚಾಪೆ ಹಾಸಿ, ಬಟ್ಟೆ ಹೊದಿಸಿದರು!

ಹುಟ್ಟಿದ ದಿನದಂದು ಆರತಿ ಎತ್ತಿದರು ಹಲವಾರು ಮಂದಿ
ಚಟ್ಟವ ಏರಿದ ದಿನವಿಂದು, ಎತ್ತಿದರು ನಾಲ್ಕು ಮಂದಿ!

ಮದುವೆಯ ಮೆರವಣಿಗೆಯೆಂದು ಇದ್ದರು ಅನೇಕರು
ಮಸಣಕ್ಕೆ ಮೆರವಣಿಗೆಯಿಂದು, ಇದ್ದಾರೆ ಕೆಲವರು!

ಸುತನು ಕೊಳ್ಳಿ ಇಟ್ಟನು
ಸತ್ತವನು ಬರಲಾರನೆಂದು ಹೊರಟನು!

ಬುವಿಯ ಮೇಲೆ ಬೂದಿಯಾದೆನು
ಬೂದಿಯು ಗಂಗೆಯ ಪಾಲಾಯಿತು!

ಹಿಂದೆ, ದೇಹವು ಚೆಲುವಿನ ಬೀಡಾಗಿತ್ತು
ಇಂದು, ಮಸಣದ ಎಲುಬಿನ ಗೂಡಾಗಿದೆ!


ವಿ.ಸೂ: ತಿಂಗಳ ಹಿಂದೆ, ಕುವೆಂಪುರವರ ಕವನ ಓದಿದಾಗ ೨ ಸಾಲುಗಳು ಮನಕ್ಕೆ ತುಂಬಾ ಇಷ್ಟವಾಗಿತ್ತು. ಅದರ ಪ್ರಭಾವದಿಂದ ಬರೆದ ಕವನವಿದು. ಆ ಸಾಲುಗಳನ್ನು ಸ್ವಲ್ಪ ಬದಲಿಸಿ ನನ್ನ ಕವನದ ಕೊನೆ ಸಾಲುಗಳಾಗಿಸಿದೆ. ಅದರ ಮೂಲ:
"ಇಂದೀ ದೇಹವು ಚೆಲುವಿನ ಬೀಡು
ಮುಂದಿದು ಮಸಣದ ಎಲುಬಿನ ಗೂಡು"

Thursday, 17 April 2008

ರತ್ನ - ಪ್ರಯತ್ನ


[ಜಿ.ಪಿ. ರಾಜರತ್ನಂ ಅವರ ಬಗ್ಗೆ ಹೇಳಲು ನಾನು ಅನರ್ಹ! ಅವರ ಕೆಲವು ಕವನಗಳನ್ನು ಓದಿದಾಗ, ಅವರ ಶೈಲಿಯಲ್ಲಿ ಬರೆಯ ಬೇಕು ಅಂತ ಮನಸ್ಸಿಗೆ ಅನ್ನಿಸಿ ಬರೆದಿದ್ದೇನೆ. ಹಿಂದೆ, Traffic ಮಾಮ ದಲ್ಲಿ ಆಡು ಭಾಷೆಯ ಪ್ರಯೋಗ ಮಾಡಿದ್ದೆ. ಆದರೆ ರತ್ನನ ಕನ್ನಡ ಬಳಸಿರಲಿಲ್ಲ! ಅವರ ಕನ್ನಡಕ್ಕೆ ಅವರೇ ಒಂದು ಕನ್ನಡಿ (ನಿಘಂಟು) ಕೊಟ್ಟಿದ್ದಾರೆ. ಅದರ ಸಹಾಯದಿಂದ ಬರೆದಿದ್ದೀನಿ.]

ರತ್ನನ್ ಪದಗೋಳ್ ಆಡ್ತಾಯಿದ್ರೆ
ಮತ್ ಮತ್ ಆಡ್ಬೇಕ್ ಅನ್ಸುತ್ತೆ
ಯೆಂಡಾವ್ ಬಾಯಾಗ್ ಆಕಳ್ದೇನೆ
’ಮತ್ತ್’ ಬಂದ್ ಕೂರುತ್ತೆ.

’ಯೆಂಡ’ ಯಿಲ್ಲದೆ ರತ್ನನ್ ಪದ್ಗಳ್ ಆವು ಯಿರಕಿಲ್ಲ
’ಯೆಂಡ’, ’ಯೆಡ್ತಿ’ ಇಚಾರ ಬುಟ್ಟು
ಬೊರೋನವ್ರು ಮಾತಾಡಕಿಲ್ಲ.

ಬ್ರಹ್ಮಂಗ್ ಕೈ ಜೋಡ್ಸಿ ಮುಗ್ದೋರು
ಸಂಜೆ ಸೂರಪ್ಪಂಗೆಂಡ ಕುಡ್ಸ್ದೋರು
ಸರಸೊತ್ತಮ್ಮನ್ ಯೀಣೆ ಮೀಟಿದಂಗ್ ಮಾತಾಡೋರು
ಕವಿ ಕಾಣದ್ದ ಕುಡುಕ ಕಂಡ! ಅಂದೋರು

ನನ್ದೊಂದ್ ಸನ್ ಪ್ರಯತ್ನ ಕಣ್ರೀ
ಏಗಿದೆ ಅಂತ ಏಳೋದ್ ಮರಿಬ್ಯಾಡ್ರೀ
ಮುನಿಯನ್ ಪಡುಕಾನೆ ತಾಕ್ ಸೇರೋಣ್ವೇನ್ರೀ?
ಬುಂಡೆ ತುಂಬಾ ಯೆಂಡ ತುಮ್ಸೋಣ್ವೇನ್ರೀ?


ರತ್ನನ ಕನ್ನಡಿ:

ಆಡ್ತಾಯಿದ್ರೆ : ಹಾಡುತ್ತಾಯಿದ್ದರೆ
ಆಕಳ್ದೇನೆ: ಹಾಕಿಕೊಳ್ಳದೇನೆ
ಯಿಲ್ಲದೆ: ಇಲ್ಲದೆ
ಆವು : ಯಾವುದೊಂದೂ
ಯಿರಕಿಲ್ಲ: ಇರೋದಿಲ್ಲ
ಯೆಡ್ತಿ: ಹಂಡತಿ
ಇಚಾರ: ವಿಚಾರ
ಬುಟ್ಟು: ಬಿಟ್ಟು
ಬೊರೋನವ್ರು: ಬೇರೇನು ಅವರು
ಸರಸೊತ್ತಮ್ಮ: ಸರಸ್ವತಿ
ಯೀಣೆ : ವೀಣೆ
ಸನ್: ಸಣ್ಣ
ಏಗಿದ: ಹೇಗಿದೆ
ಪಡುಕಾನೆ: ಹಂಡದ ಅಂಗಡಿ
ಬುಂಡೆ: ತಲೆ
ತುಮ್ಸೋಣ್ವೇನ್ರೀ: ತುಂಬಿಸೋಣ

ವಿ.ಸೂ:
ಜನರಲ್ಲಿ ಹೆಚ್ಚುತ್ತಿದೆ ಧೂಮಪಾನ, ಮದ್ಯಪಾನ.

Generally, ಏನಿರಬಹುದು ಇದಕ್ಕೆ ಕಾರಣ?
ಈ ಚಟಗಳ ಬಿಡುವುದರ ಕಡೆ ಹರಿಸಿ ನಿಮ್ಮ ಗಮನ
ಇಲ್ಲವಾದರೆ ಹೋದೀತು ಪ್ರಾಣ... ಜೋಪಾನ..!!

Thursday, 3 April 2008

ಕಂಗಳ


ಕಂಗಳ
= ಕುರುಡ

[ "A Person who can explain color to a blind man, can explain anything in life to anyone!" - ಮಾತನ್ನು ಯಾರು ಹೇಳಿದರೋ ನನಗೆ ತಿಳಿದಿಲ್ಲ. ಅವರಿಗೆ ನನ್ನ ಧನ್ಯವಾದಗಳು. ಇದನ್ನು ಕಿರು ಸಂದೇಶದ ಮೂಲಕ ಕಳುಹಿಸಿದ ನನ್ನ ಬೆಮಿ ರಾಧಾಳಿಗೂ ಧನ್ಯವಾದಗಳು. ತುಂಬಾ ಥ್ಯಾಂಕ್ಸ್ ಕಣಮ್ಮ!]

ಅಣ್ಣ! ಅಣ್ಣ!, ಕೆಂಪು ಬಣ್ಣ ಹೇಗಿರುವುದಣ್ಣ?
ನಮ್ಮ ನೆತ್ತರಿನ ಹಾಗಿರುವುದು ತಮ್ಮ
ನೆತ್ತರವ ಮುಟ್ಟಿರುವೆಯಷ್ಟೇ, ತಿಳಿಯದದರ ಬಣ್ಣ!


ಅಣ್ಣ! ಅಣ್ಣ!, ಹಸಿರು ಬಣ್ಣ ಹೇಗಿರುವುದಣ್ಣ?
ತೋಟದ ವೀಳ್ಯದೆಲೆ ಹಾಗಿರುವುದು ತಮ್ಮ
ವೀಳ್ಯದೆಲೆ ಜಗಿದಿರುವೆಯಷ್ಟೇ, ತಿಳಿಯದದರ ಬಣ್ಣ!


ಅಣ್ಣ! ಅಣ್ಣ!, ಬಿಳಿ ಬಣ್ಣ ಹೇಗಿರುವುದಣ್ಣ?
ಹಾಲಿನ, ಮೊಸರಿನ, ಹಾಗಿರುವುದು ತಮ್ಮ

ಹಾಲು, ಮೊಸರು ಕುಡಿದಿರುವೆಯಷ್ಟೇ, ತಿಳಿಯದದರ ಬಣ್ಣ!


ಅಣ್ಣ! ಅಣ್ಣ!, ನೀಲಿ ಬಣ್ಣ ಹೇಗಿರುವುದಣ್ಣ?
ಮೇಲಿನ ಆಗಸದ ಹಾಗಿರುವುದು ತಮ್ಮ
ಮಣ್ಣ ಸೇರಿದ ಮೇಲೆ, ನಾನು ಹೋಗುವ ಜಾಗ

ಅಲ್ಲಿರುವುದಲ್ಲವೇ ಅಣ್ಣ?


ಕಿತ್ತಳೆ ಹಣ್ಣು ತಿಂದಿರುವೆ,

ಕಿತ್ತಳೆ ಬಣ್ಣ ತಿಳಿದಿಲ್ಲ!
ನೇರಳೆ ಹಣ್ಣು ತಿಂದಿರುವೆ,

ನೇರಳೆ ಬಣ್ಣ ತಿಳಿದಿಲ್ಲ!


ನಿಂಬೆಯ ಪಾನಕ ಕುಡಿದಿರುವೆ,

ಹಳದಿಬಣ್ಣ ತಿಳಿದಿಲ್ಲ!

ತಂಗಿಯ ಕಣ್ಣಿಗೆ ಕಾಡಿಗೆ ಹಚ್ಚಿರುವೆ,

ಕಪ್ಪು ಬಣ್ಣ ತಿಳಿದಿಲ್ಲ!

ಅರ್ಧಾಂಗಿಯ ಮುಡಿಗೆ, ಗುಲಾಬಿ ಮುಡಿಸಿರುವೆ,

ಗುಲಾಬಿಯ ಬಣ್ಣ ತಿಳಿದಿಲ್ಲ!


ರಾಷ್ಟ್ರಧ್ವಜಕ್ಕೆ ನಮಿಸಿರುವೆ,

ಕೇಸರಿ ಬಣ್ಣ ತಿಳಿದಿಲ್ಲ!

ನವಿಲ ಜೊತೆಗೆ ನರ್ತಿಸಿರುವೆ,

ಅವುಗಳಲ್ಲಿನ ಬಣ್ಣ ತಿಳಿದಿಲ್ಲ!


ಅಣ್ಣ! ಅಣ್ಣ!,ಏನಾದರು ಮಾತಾಡಣ್ಣ

ಅಣ್ಣ! ಅಣ್ಣ!, ಬಣ್ಣದ ಬಗ್ಗೆ ತಿಳಿಸಣ್ಣ
ಸುಮ್ಮನಿರುವೆ ನೀನು ಏಕಣ್ಣ?
ತಮ್ಮ ! ಅದು___________________
____________________________
____________________________

____________________________


( ಬಿಟ್ಟ ಸ್ಥಳಗಳಲ್ಲಿ ಪದಗಳನ್ನು ಪೋಣಿಸುವ ಶಕ್ತಿ ನನ್ನಲ್ಲಿಲ್ಲ. ನನಗೆ ಏನೂ ಬರೆಯಲು ತೋಚುತ್ತಿಲ್ಲ.)


Tuesday, 18 March 2008

ಆತ್ಮಹತ್ಯೆ

[ಕೆಲವು ದಿನಗಳ ಹಿಂದೆ ಬರೆದೆ ಈ ಕವನ. ಅದನ್ನು ಇಂದು ಪ್ರಕಟಿಸಬೇಕೆಂದು.. ಗೂಗಲ್ ಟಾಕ್ ನಲ್ಲಿ "Love Failure.. committing suicide tonight" ಅಂತ ಹಾಕಿದ್ದೆ. ಇದನ್ನು ನೋಡಿದ ನನ್ನ ಮಿತ್ರ ಯುವಕನ ಆತ್ಮಹತ್ಯೆ ಬಗ್ಗೆ ಹೇಳಿದ. ನಾನು ಅದರಿಂದ ಸ್ಪೂರ್ತಿ ಪಡೆದು ಆ ಸಲುಗಳನ್ನು ಹಾಕಿದ್ದೇನೆಂದು ಭಾವಿಸಿದ್ದ. ಇವತ್ತು ನಿಜಕ್ಕು ಇದು ನನಗೆ ಆಶ್ಚರ್ಯ ತಂದಿತು.]

ಹೊತ್ತು ಮುಳುಗುವುದ ಕಾದು
ಹೆತ್ತವರಿಗೂ ತಿಳಿಸದೇ
ಹೊರಟೆನು ಕಡಲ ತೀರಕೆ
ಹೆಣವಾಗಿ ಬರಲು!

ಎದೆಗಾಗಿದೆ ಇಂದು ಬೇಸರ
ಪ್ರೇಮ ವೈಫಲ್ಯದಿಂದ!
ಸಾವೊಂದೇ ಉಳಿದಿರುವ ಗತ್ಯಂತರ
ಸಾಗರದೆಡೆಗೆ ಸಾಗಿದೆ ಸಂಕಟದಿಂದ!

ಸಾಗರವೇ! ನಿನ್ನ ಅಗಲವಾದ
ಕೈಗಳಿಂದ ಬಾಚಿ ನನ್ನ ಅಪ್ಪಿಕೊ
ಕೈಗಳ ಬಿಡದೇ ಹಾಗೆ ನನ್ನ ಎಳೆದುಕೊ
ಹೋಗಲಿ ಪ್ರಾಣ! ಅವಳಿಲ್ಲದ ಜೇವನವೇಕೆ?

ಪೋರನೆ! ಮೇಲೆ ನೋಡು ಪೂರ್ಣ ಚಂದಿರನು,
ನನಗಾಗೆ ಕಾದಿಹನು ಪಕ್ಷದಿಂದ
ಈ ಮಧುರ ಕ್ಷಣಕ್ಕಾಗಿ
ನನ್ನ ಅವನ ಮಿಲನಕ್ಕಾಗಿ!

ನಾನೀಗ ಉಕ್ಕಿಬರುವ ಸಮಯ
ನಿನ್ನ ನುಡಿಯಾಲಿಸಿದೊಡನೆ
ಬದಲಿಸಿದೆ ನನ್ನ ಹೃದಯ
ಶಾಂತಳಾದೆನು ಸುಮ್ಮನೆ!

ಜೀವಿಸು ನಿನಗಾಗಿ; ನಿಮ್ಮವರಿಗಾಗಿ
ಮರೆತೆಯಾ ನಿನ್ನ ಹಡೆದವರ?
ನಿನ್ನ ಸಾಕಲು ಅವರು ಪಟ್ಟ ಕಷ್ಟಗಳಾ?
ಹೋಗು ಮನೆಗೆ ಸಂತೋಷವಾಗಿ

ಸಾಗರ! ಅವಳಿಲ್ಲದ ಬದುಕೂ ಬದುಕೆ
ನಿನ್ನಿಂದಾಯಿತು ಬದುಕುವ ಬಯಕೆ!
ಎದೆಗಾಯಿತು ಇಂದು ಸಂತಸ
ಕಳೆದೆ ನನ್ನ ಜೀವನದ ತಾಮಸ!


ಸೂಚನೆ: "ಪ್ರಾಣವು, ದೇವರ ಇಚ್ಛೆಯೆಂತೆ ಹೋಗಬೇಕು. ನಿಮ್ಮಿಚ್ಛೆಯಿಂದ ದೇವರಿಗೆ ಕೊಡಬೇಡಿ".

ಆತ್ಮಹತ್ಯೆ ಮಹಾಪಾಪ!

Thursday, 6 March 2008

ನೆನಪು - ಕನಸು

ನೆನಪು

ಕಳೆದು ಹೋದ ಬಾಲ್ಯವ
ಹಿಂದಿರುಗಿ ಕರೆದರೆ,
ಬರುವುದು ಬರೀ ನೆನಪು


ವ್ಯರ್ಥ ಮಾಡಿದ ಸಮಯವ
ಮರಳಿ ಬಾ ಎಂದರೆ,
ಸಿಗುವುದು ಬರೀ ನೆನಪು

ಜೊತೆಗೆ ಬೆಳೆದ ಜೀವ
ಅಗ್ನಿಗಾಹುತಿಯಾದರೆ,
ಉಳಿಯುವುದು ಬರೀ ನೆನಪು


ಕನಸು

ಮನದಟ್ಟಾಗದ ಅಕ್ಷರಗಳು
ಹೊತ್ತಿಗೆಯಲ್ಲೇ ಉಳಿದರೆ,
ಜ್ಞಾನಾರ್ಜನೆಯು ಬರೀ ಕನಸು

ಬಾಯಿಗೆ ದೊರೆಯದ ನೀರು
ಬಾವಿಯಲ್ಲೇ ಬತ್ತಿಹೋದರೆ,
ದಾಹ ನೀಗುವುದು ಬರೀ ಕನಸು

ಹಸಿದಾಗ ಉಣ್ಣದ ಗಂಜಿ
ಪಾತ್ರೆಯಲ್ಲೇ ಹಳಸಿದರೆ,
ಹೊಟ್ಟೆ ತುಂಬುವುದು ಬರೀ ಕನಸು