Monday 27 October, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಪ್ರಾಜೆಕ್ಟ್ ಡೆಮೊ

ಹಿಂದಿನ ಭಾಗ ಇಲ್ಲಿದೆ

ಮೂರನೆ ವಾರದಲ್ಲಿ:
ನಾವು ಇಲ್ಲಿಗೆ ಬಂದ ಮೊದಲನೆ ಅಥವಾ ಎರಡನೆ ದಿನವೇ ನಮ್ಮ Senior Executive ನನ್ನ ಬಳಿ ಬಂದು, "ನೀನು ಕಲ್ತಿರೋ Toolನಲ್ಲಿ ಪ್ರಾಜೆಕ್ಟ್ ಹೇಗೆ execute ಮಾಡುತ್ತೀಯ? ಅದರ Demo ನ ನೀನು ಹೋಗುವ ಮೊದಲು ತೋರಿಸೋದಕ್ಕೆ ಆಗುತ್ತಾ?" ಅಂತ ಕೇಳಿದರು. ಅವರಿಗೆ ನಾನು ಸರಿ, Basic Module ತೋರಿಸ ಬಹುದು ಎಂದೆ. ಅದಕ್ಕೆ ಅವರು ನಾವು ಹೋಗುವ ಮುನ್ನ ಒಂದು ದಿನವನ್ನು ನಿಶ್ಚಯಿಸಿ ಆ ದಿನಕ್ಕೆ ನಾನು Demo ಕೊಡ ಬೇಕೆಂದು ಹೇಳಿದರು. ಇದಕ್ಕಾಗಿ ನಾನು ಪ್ರಾಜೆಕ್ಟಿನ ಬಹು ಮುಖ್ಯ ವಿಷಯಗಳನ್ನು ಚೆನ್ನಾಗಿ ಅರಿತು ಕೊಳ್ಳುತ್ತಾಯಿದ್ದೆ. ಎರಡು ವಾರಗಳ ಸತತ ಅಭ್ಯಾಸದಿಂದ ಹಾಗು Sergey, Jarkko ರವರಿಂದಲೂ ಮಾರ್ಗದರ್ಶನ ಪಡೆದು Demo ಕೊಡಲು ಸಿದ್ಧತೆ ನೆಡೆಸುತ್ತಾಯಿದ್ದೆ.

ತೆರೋ ಇಲ್ಲಿಗೆ ಬಂದ ದಿನ Execution ಹೇಗೆ ಪ್ರಾರಂಭಿಸಿ ಬೇಕು ಎಂದು KT ತೆಗೆದು ಕೊಂಡಿದ್ದರು. ಆದರೆ ನಾನು ಪ್ರಾರಂಭಿಸುವುದಕ್ಕೆ ಆಗಲಿಲ್ಲ. ಅವರ Laptopನಲ್ಲಿದ್ದ Software ಇಂದ execution ಬಗ್ಗೆ ಹೇಳಿದರು. ಆದರೆ ನನ್ನ Computerನಲ್ಲಿ ಆ Software Install ಆಗಿದ್ದರೂ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಈ ಸಮಸ್ಯೆಗೆ ಕಾರಣ ಹುಡುಕಲು ನನಗಾಗಲೀ, ತೆರೋಗಾಗಲಿ ತಿಳಿಯಲಿಲ್ಲ. ಆದ್ದರಿಂದ ತೆರೋ ಆ Tool ಕಂಪನಿಯ Support Teamಗೆ ಒಂದು Mail ಕಳುಹಿಸಿದರು. ನಮ್ಮ ದುರಾದೃಷ್ಟ, ಮಾರನೆ ದಿನವೇ ಉತ್ತರವು Suomi ಭಾಷೆಯಲ್ಲಿ ಬಂದು ಸೇರಿತು. ಅದರೊಂದಿಗೆ ಕೆಲವು Attachmentsಗಳು ಇದ್ದವು. ಅವೆನ್ನಲ್ಲಾ Download ಮಾಡಿ, ಯಾರ್ಕ್ಕೊ ಬಳಿ ಹೋದೆವು. "ಯಾರ್ಕ್ಕೊ, ಆ Mailನಲ್ಲಿ ಏನು ಬರೆದಿದ್ದಾರೆ ಎಂಬುದನ್ನು ತಿಳಿಸಿ ಎಂದು ಕೇಳಿಕೊಂಡೆವು. ಅದಕ್ಕೆ ಯಾಕ್ಕೊ ತಮ್ಮ mail ನೋಡಿ, ಇದನ್ನು ನಿಮಗೆ ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡಿ ಕಳುಹಿಸುತ್ತೇನೆ ಎಂದು ಹೇಳಿ, ಸ್ವಲ್ಪ ಸಮಯದಲ್ಲೇ ಆಂಗ್ಲ ಆವೃತ್ತಿ ನಮ್ಮ Mailboxಗೆ ಬಂದು ಸೇರುವಂತೆ ಮಾಡಿದರು. ಅದನ್ನು ಓದಿದ ಮೇಲೆ, ನನ್ನ ಸಮಸ್ಯೆಗೆ ತಕ್ಕೆ ಉತ್ತರವನ್ನು ಕಳುಹಿಸಿರುವುದು ತಿಳಿಯಿತು. ತದನಂತರ ನನ್ನ ಕೆಲಸ ಅತಿ ವೇಗದಲ್ಲಿ ಸಾಗಿತು. ನಾನು Demo ಕೊಡಲು ಸಿದ್ಧನಾಗಿದ್ದೆ.

ನಾಲ್ಕನೆ ವಾರ:
ನಾನು Demo ಕೊಡಬೇಕಾದ ದಿನ ಬಂತು. ಆ ದಿನ Tapani,( ನಮ್ಮ Sr. Executive), Jarkko, Michael Bevesdorf ಹಾಗು ಇನ್ನು ಕೆಲವರು ಇದ್ದರು. Demo ಮುಗಿದ ನಂತರ ಅವರಿಗೆ ಪ್ರಾಜೆಕ್ಟ್ ಸಾಗುತ್ತಿರುವ ಬಗ್ಗೆ ಹೆಮ್ಮೆಯಾಯಿತು.

ಆ ದಿನ ಶುಕ್ರವಾರವಾದ್ದರಿಂದ ಎಲ್ಲರೂ ಹೋಗುವ ಮುನ್ನ ನಮ್ಮ ಪ್ರಯಾಣಕ್ಕೆ ಶುಭ ಹಾರೈಸಿದರು. "Convey my regards to ಬಾಂಗಲೋರ್ Team" ಅಂತ ಹೇಳಿದರು. ಅಲ್ಲಿಯವರೆಲ್ಲಾ ನಮಗೆ ಅಲ್ಲಾದ ಅನುಭವವೇನು ಎಂಬುದಾಗಿ ಕೇಳಿ, ಅತೀ ಆತ್ಮೀಯತೆಯಿಂದ ಮಾತನಾಡಿಸಿದರು. ಯಾರ್ಕ್ಕೊ ನಮಗೆ ಮತ್ತಷ್ಟು ಪ್ರವಾಸಿ ತಾಣಗಳ ಬಗ್ಗೆ ಹೇಳಿದರು. Demo ವಿಚಾರವನ್ನು ಈಗ ಮರೆತು, ನನ್ನ ನಾಲ್ಕನೆ ವಾರದ ವಿಷಯಕ್ಕೆ ಬರುತ್ತೇನೆ.

ಇದು ಕಡೆಯ ವಾರವಾದ್ದರಿಂದ ನನಗೆ, ನನ್ನ ಗೆಳಯರಿಂದಲೂ, ನೆಂಟರಿಂದಲೂ ತಮಗಾಗಿ ಏನಾದರು ತರುವುದಕ್ಕೆ ಮೇಲಿಂದ ಮೇಲೆ ಬೇಡಿಕೆಗಳು ಬರುತ್ತಾಯಿದ್ದವು. ಒಂದು ದಿನ ನಮ್ಮ ಕಚೇರಿಯ ಸಮೀಪದಲ್ಲೇ ಇದ್ದ Verkkokauppa mall ಗೆ ಹೋದೆ. ಎಂದಿನಂತೆ ಅಲ್ಲಿ Window shopping ಮಾಡಿ, ಕೆಲವು ಪ್ರತಿಷ್ಠಿತ ಮೊಬೈಲ್ ಫೋನಿನ ಬೆಲೆಗಳನ್ನು ಬರೆದು ಕೊಂಡು ಬಂದೆ. ನನಗಾಗಿ ಬೇಕಾದ ವಸ್ತುವೆಂದರೆ ಒಂದು ಡಿಜಿಟಲ್ ಕ್ಯಾಮರ. ಅದರ ಬೆಲೆಯನ್ನೂ ಬರೆದು ಕೊಂಡು ಬಂದೆ. ನನಗೆ ಅವೆಲ್ಲಾ ತುಂಬಾ ದುಬಾರಿಯೆನಿಸಿತು. ಭಾರತದಲ್ಲಿ ಇಲ್ಲಿಗಿಂತ ಕಡಿಮೆ ದರಕ್ಕೆ ಫೋನುಗಳು ಸಿಗುತ್ತವೆಯೆಂದು ಗೊತ್ತಾಯಿತು. ನಂತರ ನನಗೆ ಕೇಳಿದವರಿಗೆ ಅದರ ಬೆಲೆಯನ್ನು ಹೇಳಿ, ಭಾರತದ ಬೆಲೆಯನ್ನೂ ಹೇಳಿದೆ. ಆಗ ಅವರೆಲ್ಲಾ ಏನೂ ತರ ಬೇಡ ಅಲ್ಲಿಂದ ಎಂದು ಸುಮ್ಮನಾದರು. ನನ್ನ ಡಿಜಿಟಲ್ ಕ್ಯಾಮರಾದ ಕನಸು ಕನಸಾಯಿತು.

ಈ ವಾರಾಂತ್ಯಕ್ಕೆ ನಾವು ಸುಮನ್ ಮನೆಗೆ ಹೋಗ ಬೇಕಿತ್ತು. ಈತ ನಮ್ಮ ಮಾಜಿ ಸಹೋದ್ಯೋಗಿ. ಅವರಿಗೆ ಭಾನುವಾರ ಬರುವುದಾಗಿ Scrap ಮೂಲಕ್ ಕೋಶಿ ಹೇಳಿದ. ಹೀಗಿರುವಾಗ ಒಂದು ಸಂಜೆ ನಾನು ಕೆಲವು Chocolates ಖರೀದಿಸಲು ಅಂಗಡಿಗೆ ಹೋದೆ. ನಾನು ಕೆಲವು ಅಂಗಡಿಗಳಲ್ಲಿ ತಿರುಗಾಡಿ, ಯಾವುದೋ ಒಂದು ಅಂಗಡಿಯಲ್ಲಿ ಕೆಲವು chocolatesಗಳನ್ನು ಖರೀದಿಸಿದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ಒಂದು ಆಟಿಕೆ (Cruise). ಅದನ್ನು ನನ್ನ ಗುಂಡ ನಂಬರ್ ೧ (ಆದಿತ್ಯ)ಗೆ ತೆಗೆದು ಕೊಂಡೆ. ಆಮೇಲೆ ಒಂದು Dianosorus ಆಟಿಕೆಯನ್ನು ನನ್ನ ಪುಟಾಣಿ ನಂ ೨ (ಸಹನ)ಗೆ ತೆಗೆದು ಕೊಂಡೆ. ನನ್ನ ಪುಟಾಣಿ ನಂ ೧ (ಶದ್ದು)ಗೆ ಮೆಚ್ಚುಗೆಯಾಗುವ Barbie ಬೊಂಬೆಗಳು ನನ್ನ ಕಣ್ಣಿಗೆ ಬೀಳಲಿಲ್ಲ. ಇಷ್ಟನ್ನೆಲ್ಲಾ ಕೊಂಡು ಕೊಂಡು ಹೊಟೆಲಿಗೆ ಬಂದೆ. ನಂತರ ನನ್ನ Packing ಕಾರ್ಯವನ್ನು ಸ್ವಲ್ಪ ಸ್ವಲ್ಪವಾಗಿಯೇ ಶುರುಮಾಡಿದೆ.

Tuesday 21 October, 2008

ಫಿನ್ ಲ್ಯಾಂಡಿಗೆ ಪ್ರವಾಸ(೧) - ಕೃಷ್ಣ ದರ್ಶನ - ಭಾರಿ ಭೋಜನ!

Moi (Hi)

ಹಿಂದಿನ ಭಾಗ ಇಲ್ಲಿದೆ

ಬಟ್ಟೆ ಒಗೆಯುವುದು:
ಈ ಭಾಗ ಎರಡನೆ ವಾರದ ಮಧ್ಯದಲ್ಲೆ ಪ್ರಾರಂಭವಾಗ ಬೇಕಿತ್ತು ಆದರೆ ಈಗ ಬರೆಯುತ್ತಿದ್ದೇನೆ. ವಾರದಲ್ಲಿ ಧರಿಸಿದ ಬಟ್ಟೆಯನ್ನು ವಾರಾಂತ್ಯದಲ್ಲಿ ಒಗೆಯುವುದೆಂದು ಅಂದುಕೊಂಡರೂ ವಾರದ ಮಧ್ಯದಲ್ಲೇ ಸಮಯವಿದ್ದರಿಂದ ಆಗಲೆ ಒಗೆಯುವುದಕ್ಕೆ ತೀರ್ಮಾನ ಮಾಡಿದೆ. ಹೊಟೆಲಿನಲ್ಲಿ ಬಟ್ಟೆ ಒಗೆಯುವು ವ್ಯವಸ್ಥೆ ಇದ್ದರೂ ಕೂಡ ನಾನೆ ಒಗೆಯುವುದು ಸರಿ ಎಂದು ಭಾವಿಸಿದ್ದೆ. ನಮ್ಮ ಮನೆಯಲ್ಲಿ ವಾರಾಂತ್ಯಗಳಲ್ಲಿ ಹಾಗು ಈಗಲೂ ಅಮ್ಮನಿಗೆ ಬಟ್ಟೆ ಒಗೆಯಲು ಸಹಾಯ ಮಾಡಿ ಅನುಭವವಿದ್ದರಿಂದ ನನಗೆ ಬಟ್ಟೆ ಒಗೆಯುವುದು ಬೇಜಾರಾಗಲಿಲ್ಲಿ. ಅದಕ್ಕಾಗಿಯೇ ಅಮ್ಮ ನನಗೊಂದು Soapನ್ನೂ ಕೂಡ ಲಗ್ಗೇಜ್ ಜೊತೆ ಇಟ್ಟಿದ್ದರು. ನಾನು ಬಹಳ ಉತ್ಸಾಹದಿಂದ ಬಚ್ಚಲು ಮನೆಗೆ ಬಟ್ಟೆ ನೆನೆಸೋಕೆ ಹೋದೆ. ಆದರೆ ಅಲ್ಲಿ ನೆನೆಸೋಕೆ ಒಂದು bucket ಕೂಡ ಇರಲಿಲ್ಲ. ಆಮೇಲೆ ತಲೆ ಉಪಯೋಗಿಸಿದೆ. Wash basin ನ ನೀರು ಹೋಗದಂತೆ ಮಾಡಿ, ಬಟ್ಟೆಯನ್ನು ಅಲ್ಲಿ ನೆನೆಸಿದೆ.
ನಾನು ಷರ್ಟ್ ಹಾಗು ಪ್ಯಾಂಟನ್ನು ನೆನೆಸಿ ಮೊದಲು ಒಗೆದೆ. ಅದೇನೋ ಸಕ್ಕತ್ತಾಗಿ ಸ್ವಚ್ಛವಾಯಿತು. ಅಲ್ಲಿಯೇ ಇದ್ದ ಒಂದು ಪೈಪಿನ ಮೇಲೆ ಒಣ ಹಾಕಿದೆ. ಆಮೇಲೆ ನನ್ನ Thermal Wearನ್ನು ನೆನೆಸಿದೆ. ಅದನ್ನು ನೆನೆಸಿ ಸ್ವಲ್ಪ ಕ್ಷಣದಲ್ಲೆ ಗಬ್ಬು ವಾಸನೆ ನನ್ನ ರೂಮನ್ನೆಲ್ಲಾ ಆವರಿಸಿತು. ನನಗಂತೂ ಇದನ್ನು ನೆನೆಸಿದ್ದೇ ತಪ್ಪಾಯಿತೇನೋ ಅನಿಸಿತು. ಈಗಲು ಆ ದುರ್ನಾತ ನನ್ನ ಮೂಗಿಗೆ ಬಂದಂತೆ ಆಗುತ್ತಿದೆ. ಆ ದುರ್ನಾತದಲ್ಲೂ ಒಮ್ಮೊಮ್ಮೆ ನನ್ನ ಕೈ ಮೂಸಿಕೊಂಡು ನೋಡಿಕೊಳ್ಳುತ್ತಾಯಿದ್ದೆ. ಈ ದುರ್ನಾತಕ್ಕೆ ಏನು ಕಾರಣವೆಂದು ಕಂಡು ಹಿಡಿಯ ಬೇಕೆಂದು ಕೊಂಡೆ. ಆದರೆ ನಾನು ವಿಜ್ಞಾನಿಯಲ್ಲವೆಂದು ಅಂತರ್ವಾಣಿ ಹೇಳಿತು. ಬಹುಶಃ ಪ್ರಾಣಿಯ ಚರ್ಮದ ವಾಸನೆ ಆಗಿರಬೇಕು.

ಈ ಬಟ್ಟೆ ಒಗೆಯೋ ಕಾರ್ಯ ೨ ವಾರ ನಡೆಯಿತಷ್ಟೆ. ಕಡೆಯ ವಾರದಂದು ಒಗೆಯುವ ಕಾರ್ಯವನ್ನು ಮುಂದೂಡಿಸಿದೆ. ಏಕೆಂದರೆ ಭಾರತಕ್ಕೆ ತರಳ ಬೇಕಿತ್ತು. ಅಲ್ಲಿ ಅಮ್ಮ ನನಗಿಂತಲೂ ಸ್ವಚ್ಛ ಮಾಡುವಾಗ ನಾನೇಕೆ ಒಗೆಯಲಿ ಎಂದು ಸುಮ್ಮನಾದೆ.

ಅಲ್ಲಿಯ ಜನರು:

ಅಲ್ಲಿಯ ಜನರಂತೂ ಸಹಾಯ ಹಸ್ತಕ್ಕೆ ಎತ್ತಿದ ಕೈ ಎನಿಸಿತು. ಯಾರನ್ನಾದರೂ ಸಹಾಯ ಬೇಡ ಬಹುದಾಗಿತ್ತು. ನಮ್ಮ ಪ್ರಾಜೆಕ್ಟ್ ಅಲ್ಲದೇ ಬೇರೊಂಡು ಪ್ರಾಜೆಕ್ಟಿನವರು ಇದ್ದರು. ನನ್ನ ಪರಿಚಯವಿಲ್ಲದಿದ್ದರೂ ಬೆಳಿಗ್ಗೆ ಬಂದ ತಕ್ಷಣ "Terve" (ತೆರ್ವೆ..) (Hello) ಎನ್ನುತ್ತಾಯಿದ್ದರು. ನನಗೆ ಅವರ ಭಾಷೆ ಗೊತ್ತಿಲ್ಲದಿದ್ದರಿಂದ, "Good Morning" ಎನ್ನುತ್ತಿದ್ದೆ.

ಈಗ ಮತ್ತೆ ನನ್ನ ವಾರ ಹಾಗು ವಾರಾಂತ್ಯದ ಬದುಕಿನ ಕಡೆಗೆ.

ಮೂರನೆ ವಾರ:
ಈ ವಾರದಲ್ಲಿ ನಮಗೆ ಇನ್ನೊಂದು Knowledge Transfer (KT) ಕಾರ್ಯಕ್ರಮ ಇತ್ತು. ಬರುವ ವ್ಯಕ್ತಿಯ ಹೆಸರು ತೆರೊ ಮಾಯ್ಸಿಯೋ (Tero Moisio). ಆತ ತಾಂಪರೆ (Tampere) ಊರಿಂದ ಬರಬೇಕಿತ್ತು. ಈ ವ್ಯಕ್ತಿಯನ್ನು ನಾನು ಮುಂದಿನ ಲೇಖನಗಳಲ್ಲೂ ಹೇಳುತ್ತೇನೆ. ಆತನೊಂದಿಗೆ ಬೆಂಗಳೂರಿಂದ ಪ್ರತಿ ವಾರದಲ್ಲೂ Status Call ಮೂಲಕ ಸಂಪರ್ಕದಲ್ಲಿದ್ದೆ. ಅದಲ್ಲದೆ MSN Messenger ಮೂಲಕವೂ ಪ್ರತಿ ದಿನ ನನ್ನ ಮೊದಲ Project ಬಗ್ಗೆ ಮಾತು ಕತೆಯಾಡುತ್ತಾಯಿದ್ದೆವು. ಈಗ ನಾನು ಹೋಗಿದ್ದು ನನ್ನ ಎರಡನೆ ಪ್ರಾಜೆಕ್ಟ್.

ತೆರೋರನ್ನು ಭೇಟಿ ಮಾಡಿ, ಅವರಿಂದ KT ಮುಗಿದ ಮೇಲೆ ಮತ್ತೆ ನನ್ನ ಕೆಲಸದ ಕಡೆ ಗಮನ ಕೊಟ್ಟೆ. ನಮ್ಮ ಇಡೀ ಕಂಪನಿಯಲ್ಲಿ ತೆರೋ ಹಾಗು ನನಗೆ ಬಿಟ್ಟು ಇನ್ನುಳಿದವರಿಗ್ಯಾರಿಗೂ ನಾವು ಉಪಯೋಗಿಸುತ್ತಾಯಿದ್ದ Tool (Software) ತಿಳಿದಿರಲಿಲ್ಲ. ಈ software ಅನ್ನು ಮರೆಯುವಂತಿಲ್ಲ. ಅದರಿಂದಲೇ ನನಗೆ ಫಿನ್ ಲ್ಯಾಂಡಿಗೆ ಬರೋ ಯೋಗ ಸಿಕ್ಕಿತೆಂದು ಭಾವಿಸಿದ್ದೇನೆ. ಇದನ್ನು ಅತಿಶಯೋಕ್ತಿಗೆ ಹೇಳುತ್ತಿಲ್ಲ. ನನಗೆ ಏನಾದರು ಸಂಶಯ ಬಂದರೆ ಅದನ್ನು ಪೂರ್ಣವಾಗಿ ನಾನೇ ನಿಭಾಯಿಸಬೇಕು. ತೆರೊ ಇದ್ದರಾದರೂ ಅವರಿಗೆ Coding ಹೆಚ್ಚಾಗಿ ಬರುತ್ತಿರಲಿಲ್ಲ. ಮೇಲ್ನೋಟದ ವಿಚಾರಗಳನ್ನು ತುಂಬಾ ಸ್ಪಷ್ಟವಾಗಿ ಹೇಳುತ್ತಾಯಿದ್ದರು. ಅದನ್ನು ನಮ್ಮ projectಗೆ ಹೊಂದುವಂತೆ ಮಾಡಬೇಕಾದ ದೊಡ್ಡ ಜವಾಬ್ದಾರಿ ನನ್ನ ಮೇಲೆ ಇತ್ತು.

ಪ್ರತಿ ದಿನ ನನ್ನ ಅಪ್ಪ ಹಾಗು ಅಮ್ಮ ಕೃಷ್ಟನ ದೇವಸ್ಥಾನಕ್ಕೆ ಹೋಗು ಅಂತ ಹೇಳುತ್ತಲೇ ಇದ್ದರು. ಹಾಗಾಗಿ ಒಂದು ದಿನ ಕೆಲಸವಾದ ಮೇಲೆ ಒಮ್ಮೆ ನೋಡಿ ಕೊಂಡು ಬರೋಣ. ಶನಿವಾರ ಹಾಗು ಭಾನುವಾರ ಪ್ರಾರ್ಥನೆ ಹಾಗು ಭೋಜನ ಮಾಡೋಣ ಅಂತ ಯೋಚಿಸಿ, ದೇವಸ್ಥಾನವಿದ್ದ ರಸ್ತೆಯ ಹೆಸರನ್ನು (Ruoholahdenkatu) ಒಂದು ಹಾಳೆಯ ಮೇಲೆ ಬರೆದು ಕೊಂಡು Google Maps ತೋರಿಸಿದ ದಾರಿಯಲ್ಲೇ ನಡೆದೆ. ಅಲ್ಲಿ ರಸ್ತೆಯ ಹೆಸರು ಎಲ್ಲಿ ಹುಡುಕಿದರೂ ನನ್ನ ಕಣ್ಣಿಗೆ ಬೀಳಲೇಯಿಲ್ಲ. ಹಾಗಾಗಿ ಅಲ್ಲಿಂದ ಒಬ್ಬಾಕೆಯ ಬಳಿ ದಾರಿ ಕೇಳಲು ಹೋದೆ. ಆಕೆ ಆಗಲೇ ತನ್ನ ಕಾರನ್ನು ಏರುತ್ತಾಯಿದ್ದಳು. Hi. "Where is this Road?" ಅಂತ ಕೇಳಿದೆ. ಆಗ ಆಕೆ ಕಾರನ್ನು ಏರದೇ.. ಸ್ವಲ್ಪ ನಡೆದು ಬಂದು ಆ ರಸ್ತೆಯ ಕಡೆ ಕೈ ತೋರಿಸುತ್ತಾ, "Here it is" ಎಂದಳು. ಅವಳಿಗೆ ಧನ್ಯವಾದ ಹೇಳಿ, ಕೃಷ್ಣನ ಹುಡುಕುವ ಪ್ರಯತ್ನ ಮಾಡಿದೆ. ಆ ರಸ್ತೆಯಲ್ಲಿ ಹಾಗೆ ಸಾಗಿ ಬಂದು Google ನಮೂದಿಸಿರುವ ನಂಬರನ್ನು ಹುಡುಕಿದೆ. ಅಲ್ಲಿ ದೊಡ್ಡ ಗೇಟೊಂದಿತ್ತು. ತಲೆ ಮೇಲೆತ್ತಿ ನೋಡಿದರೆ ಗೋಪುರವೇ ಇಲ್ಲ! ನನ್ನ ಮನಸ್ಸಿನಲ್ಲಿ ದೇವಸ್ಥಾನ ಭಾರತದಲ್ಲಿಯ ಹಾಗೆಯೇ ಒಂದು ಗೋಪುರವೆಲ್ಲಾ ಇರುತ್ತೆ ಅಂತ ತಿಳಿದಿದ್ದೆ. ಇಲ್ಲಿ ಹಾಗಿರಲಿಲ್ಲ. ಆ ಗೇಟಿಂದ ಇಣುಕಿ ನೋಡಿದೆ. ಒಂದು ಮೈದಾನದ ರೀತಿ ಇತ್ತು. ಅಲ್ಲಿ ದೇವಸ್ಥಾನವಿರ ಬಹುದು ಎಂದು ತೀರ್ಮಾನಿಸಿ, ಈ ವಾರಾಂತ್ಯ ಕಾರ್ಯಕ್ರಮ ಇಲ್ಲೇ ಅಂತ ಅಂದುಕೊಂಡೆ.

ಈ ಮಧ್ಯೆ ನಮ್ಮ ಕಂಪನಿಯ ಮಾಜಿ ನೌಕರರಿಬ್ಬರು Helsinki ಹತ್ತಿರಕ್ಕೆ ಇರುವ ಊರು Espoo ನಲ್ಲಿ ಒಂದು ಕಂಪನಿಗೆ ದುಡಿಯುತ್ತಾಯಿದ್ದರು. ನನ್ನ ಸಹೋದ್ಯೋಗಿ ಅವರೊಂದಿಗೆ ಆರ್ಕುಟ್ ಮೂಲಕ ಸಂಪರ್ಕದಲ್ಲಿದ್ದ. ಅವರು ನಮ್ಮಿಬ್ಬರನ್ನು ಒಂದು ವಾರಾಂತ್ಯಕ್ಕೆ ಅವರ ಮನೆಗೆ ಬರಲು ಆಮಂತ್ರಿಸಿದರು. ಈ ವಿಷಯವನ್ನು ನನಗೆ ಹೇಳಿದ. ನಾನು ಒಪ್ಪಿದೆ. ಹಾಗಾಗಿ ಈ ವಾರಾಂತ್ಯಕ್ಕೆ ಅವರಲ್ಲಿ ಒಬ್ಬನ ಮನೆಯಲ್ಲಿ ಕಳೆಯುವುದು ,ಮುಂದಿನ ವಾರ ಇನ್ನೊಬ್ಬನ ಮನೆಯಲ್ಲಿ ಎಂದು ತೀರ್ಮಾನವಾಯಿತು.


ಶನಿವಾರ ಬಂತು. ನಾವಿಬ್ಬರೂ ಹೊರಡಲು ತಯಾರಾಗಿದ್ದೆವು. ಆಗ ನನ್ನ ಸಹೋದ್ಯೋಗಿ, Espooನಲ್ಲಿದ್ದ ಗಿರೀಶ್ ನ ಜೊತೆ ಚಾಟ್ ಮಾಡಿ, ಅವನಿದ್ದ ಊರನ್ನು ತಲುಪುವುದು ಹೇಗೆಂದು ಪ್ರಶ್ನಿಸಿದನು. ಅವನು ಒಂದು ಬಸ್ಸಿನ ನಂಬರ್ ಹೇಳಿದ. ಹಾಗೆ ಒಂದು ಬಸ ವೇಳಾ ಪಟ್ಟಿಯ Linkನ್ನೂ ಕಳುಹಿಸಿದ. ನಾವು ಆ ಲಿಂಕಿಂದ್ದ ನಮಗೆ ಹತ್ತಿರದ ನಿಲ್ದಾಣಕ್ಕೆ ಎಷ್ಟು ಸಮಯಕ್ಕೆ ಬರುತ್ತದೆ ಎಂಬ ವಿಚಾರ ತಿಳಿದೆವು. ಗಿರೀಶ್ ನಮಗೆ ಹೇಳಿದ್ದು Espoo bus stop ಎದುರುಗಡೆ ದೊಡ್ದದೊಂದು ಮಾಲ್ ಇದೆ. ಅಲ್ಲಿ ಒಂದು ಅಂಗಡಿಯ ಬಳಿ ಬನ್ನಿ. ಅಲ್ಲಿಗೆ ಬರುತ್ತೇನೆ.

ನಾವಿಬ್ಬರು ಬಸ್ಸಿಗೆ ಕಾದೆವು. ಹೇಳಿದ ಸಮಯಕ್ಕೆ ಸರಿಯಾಗಿ ಬಸ್ ಬಂದಿತು. ನಾವಿಬ್ಬರೂ ಹತ್ತಿದೆವು. ನಂತರ Driverಗೆ ಆ ಮಾಲಿನ ಹೆಸರನ್ನು ಹೇಳಿ ಟಿಕೆಟ್ ಪಡೆದು, ಆ ಮಾಲು ಬಂದೊಡನೆ ನಮಗೆ ತಿಳಿಸಿ ಎಂದು ಕೇಳಿಕೊಂಡೆವು. ಟಿಕೆಟಿನ ಬೆಲೆ ೩ Euro ೬೦ Cents ( ಹೆಚ್ಚು ಕಡಿಮೆ.. ೨೧೫ ರೂಗಳು).ಇಲ್ಲೂ ಅಷ್ಟೇ ಟಿಕೆಟಿನ ಅವಧಿ, ೧ ಗಂಟೆ ೩೦ ನಿಮಿಷಗಳು. ನಂತರ ಮೊದಲ ಆಸನದಲ್ಲೇ ಕುಳಿತೆವು. ಭಾರತದ ಹಾಗೆ ಅದು ಮಹಿಳೆಯರಿಗಾಗೇ ಮೀಸಲ್ಪಟ್ಟ ಆಸನವಲ್ಲ! ಬಸ್ಸು ಹಾಗೆ ಸಾಗಿ, ೧೫-೨೦ ನಿಮಿಷಗಳಲ್ಲಿ ನಾವು ಇಳಿಯ ಬೇಕಿದ್ದ ಮಾಲಿನ ಸಮೀಪಕ್ಕೆ ಬಂದಿತು. ಡ್ರೈವರ್ ನಮ್ಮನು ಇಳಿಯಲು ಸೂಚಿಸಿದನು. ಅವನಿಗೆ ಒಂದು ಕಿರು ನಗೆ ಬೀರಿ, ಧನ್ಯವಾದ ಅರ್ಪಿಸಿ ಸಾಗಿದೆವು. ಮಾಲಿನ ಒಳಗೆ ಹೋಗಿ, ಎಲ್ಲಾ ಅಂಗಡಿಗಳಲ್ಲೂ Window Shopping ಮಾಡಿ, ಅವನು ಹೇಳಿದ ಅಂಗಡಿ ಮುಂದೆ ಬಂದೆವು. ಆದರೆ ಅವನು ಅಲ್ಲಿಗೆ ಇನ್ನು ಬಂದಿರಲಿಲ್ಲ. ಸ್ವಲ್ಪ ಸಮಯ ಕಳೆದೆವು. ನಂತರ ಬಂದ ಪುಣ್ಯಾತ್ಮ! ಬಂದೊಡನೆ ಕ್ಷೇಮ ಸಮಾಚಾರ... ಫಿನ್ ಲ್ಯಾಂಡಿನ ಚಳಿ ಬಗ್ಗೆ ಪ್ರಶ್ನಿಸಿದ. ಎಲ್ಲ ವಿಚಾರಗಳು ಆದ ಮೇಲೆ, ಅಂಗಡಿಯೊಂದರಲ್ಲಿ ಕೆಲವು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ. ಎಲ್ಲಾರು ಅವನ ಮನೆಗೆ ಹೋದೆವು. ಅವನೊಂದಿಗೆ ಇನ್ನು ೬-೭ ಜನ ಹುಡುಗರು ವಾಸವಾಗಿದ್ದರು. ಅದೇ ಮನೆಯಲ್ಲಿ ನಮ್ಮ ಇನ್ನೊಬ್ಬ ಮಾಜಿ ಸಹೋದ್ಯಾಗಿಯೂ ಇದ್ದ. ಆದರೆ ಅವನು ಬೇರೇ ಮನೆಯಲ್ಲಿದ್ದ. ವಾರಾಂತ್ಯಕ್ಕೆ ಮಾತ್ರ ಇಲ್ಲಿಗೆ ಬಂದಿದ್ದ. ಅಲ್ಲಿ ಎಲ್ಲರ ಪರಿಚಯವಾಯ್ತು. ನಮ್ಮ ಮನೆಯಲ್ಲಿ ಊದುಬತ್ತಿಯ ವಾಸನೆ ಮಾತ್ರ ಸೇವಿಸಿದ್ದ ನನಗೆ ಸ್ವಲ್ಪ ಹೊತ್ತಿನಲ್ಲೇ ಆ ಮನೆಯಲ್ಲಿ ಧೂಮಪಾನದ ವಾಸನೆ ಸೇವಿಸ ಬೇಕಾಯಿತು. ನನ್ನ ಸಹೋದ್ಯಾಗಿ ಧೂಮಪಾನ ಮಾಡುತ್ತಾಯಿರಲಿಲ್ಲ. ಸದ್ಯ ನನ್ನ ಜೊತೆ ಅವನೊಬ್ಬನಾದರೂ ಇದ್ದಾನಲ್ಲ. ಅಷ್ಟೇ ಸಮಾಧಾನ. ಮಿಕ್ಕವರೆಲ್ಲಾ ಹೊಗೆ ಬಂಡಿ ಬಿಡುತ್ತಾಯಿದ್ದರು.

ಸ್ವಲ್ಪ ಸಮಯದಲ್ಲೆ ನಿಮ್ಮ ತಿಂಡಿ ಆಗಿದೆಯೇ? ಇಲ್ಲದಿದ್ದರೆ ಇಲ್ಲಿ ತಿನ್ನಿ ಅಂತ ಹೇಳಿದರು. ನಾವು ಅದಕ್ಕೆ ಉತ್ತರವಾಗಿ, ತಿಂಡಿ ಆಗಿದೆ ಅಂದೆವು. ನಂತರ ಬಾಳೆಹಣ್ಣಿನ Milk shake ಮಾಡುತ್ತೇವೆ ಎಂದು ಹೇಳಿ, ಮಾಡಿದರು. ಅದನ್ನು ಕುಡಿದ ಮೇಲೆ ಹೀಗೆ ಮಾತು ಕಥೆ ಆಡುತ್ತಾಯಿದ್ದೆವು. ಚಲನ ಚಿತ್ರಕ್ಕೆ ಯಾವ ರೀತಿ ಹಿನ್ನೆಲೆ ಸಂಗೀತ ಇರುತ್ತದೆಯೋ ಅದೇ ರೀತಿ ಇಲ್ಲಿ ಹಿನ್ನೆಲೆ ವಾಸನೆ! ಆಮೇಲೆ ಯಾವುದೋ ಒಂದು ಸಿನೆಮಾ ಹಾಕಿ ಎಲ್ಲರೂ ನೋಡುತ್ತಾಯಿದ್ದರು. ನಾನು ಸೋಫಾದ ಮೇಲೆ ಮಲಗಿಕೊಂಡು ನೋಡುತ್ತಾಯಿದ್ದೆ. ಗೊತ್ತಿಲ್ಲದೆ ಸುಮಾರು ೧ ಗಂಟೆಗಳ ಕಾಲ ನಿದ್ರಿಸಿದೆ. ಈ ಒಂದು ಗಂಟೆಯೇ ನನ್ನ ಮನಸ್ಸು ಸರಿಯಿದ್ದ ಸಮಯವೆಂದು ಈಗ ತಿಳಿಯಿತು.

ಆ ಮನೆಯಲ್ಲಿದ್ದವರು ಯಾರೂ ನನಗೆ ಹೊಂದುವಂತವರಾಗಿರಲಿಲ್ಲ. ಒಂದು ವಾಕ್ಯ ಮಾತಾಡಿದರೆ ಅದರಲ್ಲಿ ಮುಕ್ಕಾಲು ಭಾಗದಷ್ಟು ಅವಾಚ್ಯ ಪದಗಳೇ! ನನಗೆ ಕೇಳೋಕೆ ಅಸಹ್ಯವೆನಿಸಿತು. ಸಂಜೆ ಹೊರಡುತ್ತೇನಲ್ಲ ಹೇಗೋ ಸಹಿಸಿಕೊಳ್ಳೋಣವೆಂದು ಸುಮ್ಮನಿದ್ದೆ.
ಈ ಮನೆಯವರ ಪೈಕಿ ಒಬ್ಬ ಎಲ್ಲಿಂದಲೋ ಇಲ್ಲಿಗೆ ಬರುವವನಿದ್ದ. ಆಗೆ ಅವನಿಗೆ ಇಲ್ಲಿಂದ ಒಂದು ಕರೆ ಹೋಯಿತು. ೧೨ ಬಾಟಲ್ಲುಗಳ ಒಂದು ಕೇಸನ್ನು ತೆಗೆದು ಕೊಂಡು ಬಾ ಅಂತ. ಅವನು ಇವರ ಮಾತಿನಂತೆ ತಂದು ಬಿಟ್ಟು.

Milk Shake ಹಾಗು ಇನ್ನಿತರ ಆಹಾರವನ್ನು ಸೇವಿಸಿದ್ದರಿಂದ ನನಗೆ ಮಧ್ಯಾಹ್ನ ಊಟವನ್ನೇ ಮಾಡಲಿಲ್ಲ. ಸಂಜೆಯಾದ ಮೇಲೆ ಹೊರಡಲು ತಯಾರಿ ನಡೆಸುವಾಗ ಅವರೆಲ್ಲಾ ಬಂದು ಇವತ್ತು ಇಲ್ಲೇ ಇದ್ದು ಬಿಡಿ. Beachಗೆ ಹೋಗೋಣ. Beach ಮೇಲೆ walking ಮಾಡೋಣ ಅಂದರು. ಹೇಗೂ ನೀರೆಲ್ಲಾ ಗೆಡ್ಡೆಯಾಗಿತ್ತು. ನನಗೂ ಹೊಸ ಅನುಭವವಾಗುತ್ತೆ ಅಂತ ಒಪ್ಪಿದೆ. ಆ ಎಲ್ಲಾ ಬಾಟಲ್ಲುಗಳ ಜೊತೆಗೆ ನಾನು ಕುಡಿಯುವ ಬಾಟಲ್ಲು (Orange juice, apple juice) ಎಲ್ಲವನ್ನು ಹೊತ್ತು ಮನೆಯಿಂದ Beachನ ಅತ್ತ ಸಾಗಿದೆವು.

Beachಗೆ ಹೋಗಿ, ಅದರ ಮೇಲೆಲ್ಲಾ ಓಡಾಗಿ, ಅವರೆಲ್ಲರೂ ತಮ್ಮ ತಮ್ಮ ಬಾಟಲ್ಲುಗಳನ್ನು ಮುಗಿಸಿದರು. ನಾನೂ ಕೂಡ ನನ್ನ ಬಾಟಲ್ಲನ್ನು ಮುಗಿಸಿದೆ. ಮನೆಗೆ ಬಾಟಲ್ಲುಗಳನ್ನು ತಂದ ವ್ಯಕ್ತಿಯೇ ನನ್ನೊಂದಿಗೆ ಆರೆಂಜ್ ಜ್ಯೂಸ್, ಆಪಲ್ ಜ್ಯೂಸ್ ಕುಡಿದ. ಸಮುದ್ರದ ಗೆಡ್ಡೆಯಲ್ಲಿ ಒಂದು ರಂಧ್ರ ಮಾಡಿ ಕೇಲಗಿದ್ದ ನೀರನ್ನು ಬಾಟಲಿನೊಳಗೆ ತುಂಬಿ ಆಟವಾಡುತ್ತಾ, ಒಂದು ಖಾಲಿ ಬಾಟಲನ್ನು ಒಬ್ಬ ಸಮುದ್ರದ ಪಾಲು ಮಾಡಿದ. ಆಗ ಇನ್ನೊಬ್ಬ ಬೇಸರ ಪಟ್ಟು, ಎಂಥ ಅನ್ಯಾಯದ ಕೆಲಸ ಮಾಡಿದೆಯಲ್ಲೋ ಅಂತ ಹೇಳಿದ. ಅಲ್ಲಿ ಈ ರೀತಿ ಕುಡಿದ ಬಾಟಲ್ಲನ್ನು ಅಂಗಡಿಯವರಿಗೆ ಹಿಂದಿರುಗಿಸಿದರೆ ೧ ಖಾಲಿ ಬಾಟಲ್ಲಿಗೆ ೧೦ Cents ಕೊಡುತ್ತಾರೆಂಬ ವಿಷಯ ತಿಳಿಯಿತು. ಭಾರತದಲ್ಲಿ ಖಾಲಿ ಬಾಟಲ್ಲನ್ನು ಅಂಗಡಿಯವರು ತೆಗೆದು ಕೊಳ್ಳುತ್ತಾರೋ ಇಲ್ಲವೋ ಎಂಬ ವಿಷಯ ನನಗೆ ತಿಳಿಯದು. ಆದರೂ "ಖಾಲಿ ಬಾಟಲ್ಲಿ... "ಅಂತ ಕೂಗಿ ಕೊಂಡು ಮನೆ ಬಾಗಿಲಿಗೆ ಬರೋರು ಇದ್ದಾರೆ.

ಇನ್ನೇನು ಸೂರ್ಯ ಭೂಮಿಗೆ ಟಾಟಾ ಹೋಳೋ ಸಮಯ ಬಂತು. ನಾವೆಲ್ಲಾ ಮನೆ ಸೇರ ಬೇಕು ಎಂದು ಅವಸರವಸರದಲ್ಲೇ ಸಾಗಿ ಮನೆಗೆ ಬಂದೆವು. ಆನಂತರ ಅವರಲ್ಲಿ ಒಂದಿಬ್ಬರು ಸೇರಿ, ಅಡುಗೆ ಮಾಡಿದರು. ದಾಲ್ ಹಾಗು ಅನ್ನ ಮಾಡಿದರು. ಬೇಗ ತಿಂದು ಯಾವುದೋ ಒಂದು ರೂಮಿನಲ್ಲಿ ಸಿಕ್ಕಿದ್ದನ್ನು ಹಾಸಿಕೊಂಡಿ, ದಿಂಬಿಲ್ಲದೆ ದುಃಖ ತುಂಬಿಕೊಂಡು, ಸಿಕ್ಕಿದ್ದನ್ನು ಹೊದ್ದು ನಿದ್ದೆ ಮಾಡಿದೆ. ಸ್ವಲ್ಪ ಹೊತ್ತಿನಲ್ಲೇ ಯಾರೋ ಬಂದು "Jay.. Jay" ಅಂತ ಕೂಗಿದರು. ನಾನು ಎಚ್ಚರವಾಗಿದ್ದರೂ ಅವರಿಗೆ ಉತ್ತರ ಕೊಡಲಿಲ್ಲ. ಸುಮ್ಮನಿದ್ದೆ. ಮರು ದಿನ ಬೇಗನೇ ಎಚ್ಚರವಾಯಿತು. ಸ್ನಾನವನ್ನು ಮಾಡಿ ಕೂತು ಬಿಟ್ಟೆ.

ಇಷೆಲ್ಲಾ ಆಗುವಾಗಲೇ ಫಿನ್ ಲ್ಯಾಂಡಿಗೆ ಬರುವ ಮುನ್ನ ನಡೆದ ಒಂದು ಕಹಿ ಘಟನೆಗೆ ಕವನ ರೂಪ ಕೊಟ್ಟು ಬರೆಯುತ್ತಿದ್ದ ದುರಾದೃಷ್ಟ ಪೂರ್ತಿಯಾಯಿತು. ಈ ಮಧ್ಯೆ ಅವರಲ್ಲಿ ಒಬ್ಬ ಕ್ಯಾರೆಟ್ ಹಲ್ವಾ ಮಾಡುವುದಾಗಿ ಹೇಳಿದ. ನಂತರ ಅವರ ಮನೆಗೆ ಕರೆ ಮಾಡಿ ಅದರ ವಿಧಾನವನ್ನು ಕೇಳಿ ನಮಗೆಲ್ಲಾ ಸಿಹಿ ಸಿಹಿಯಾದ ಹಲ್ವಾ ತಯಾರಿಸಿದ. ಕಹಿಯ ಜೊತೆ ಸಿಹಿ ಸೇರಿತು. ಅಲ್ಲಿ ಊಟವಾದ ಮೇಲೆ ನಾನು ಹಾಗು ಕೋಶಿ ಹೊಟೆಲಿನ ಕಡೆ ಬಂದೆವು. ಆಮೇಲೆ ಕೃಷ್ಣನ ದೇವಾಲಯಕ್ಕೆ ಹೋಗಬೇಕೆಂದು ತೀರ್ಮಾನಿಸಿದೆ.

ಕೋಶಿಯ ರೂಮಿಗೆ ಹೋಗಿ, ಈ ರಾತ್ರಿ ನಾನು ಊಟಕ್ಕೆ ಇರೋದಿಲ್ಲ. ನೀನೆ ಮಾಡಿಕೊ. ನಾನು ಬೆಳಿಗ್ಗೆ ಸಿಗುತ್ತೇನೆ ಎಂದು ಹೇಳಿ ಕೃಷ್ಣನ ದೇವಾಲಯಕ್ಕೆ ಹೋದೆ. ಆ ಗೇಟನ್ನು ತೆಗೆಯಲು ಪ್ರಯತ್ನ ಪಟ್ಟೆ. ಆದರೆ ಆಗಲಿಲ್ಲ. ಇನ್ನೊಮ್ಮೆ ಪ್ರಯತ್ನ ಪಟ್ಟೆ ಆದರೂ ಆಗಲಿಲ್ಲ. ಒಂದು ಕ್ಷಣ ಏನೂ ತೋಚದಂತಾಯಿತು. ನಂತರ ನನ್ನ ಸಹಾಯಕ್ಕೆ ಬಂದದ್ದು ನಾನು ನೋಡಿದ ಸಿನಿಮಾಗಳು! ಯಾರಾದರು ಒಂದು ವೇಳೆ ಆ ಕಡೆಯಿಂದ ಬಂದರೆ ಅಥವಾ ಈ ಕಡೆಯಿಂದ ಹೋದರೆ, ಬಾಗಿಲು ಮುಚ್ಚುವುದರೊಳಗೆ ಒಳಗೆ ಹೋಗಿ ಬಿಡೋಣ ಅಂತ ಅಂದುಕೊಂಡೆ. ಬಾಗಿಲ ಬಳಿ ಇರುವುದು ಬೇಡವೆಂದು ಸ್ವಲ್ಪ ದೂರದಲ್ಲಿ ನಿಂತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ .. ಕೂಗಿದರು ಧ್ವನಿ ಕೇಳಲಿಲ್ಲವೆ ?" ಅಂತ ಹಾಡುತ್ತಾಯಿದ್ದೆನು. ಕನಕದಾಸರು ನನಗೂ ಅನ್ವಯವಾಗುವಂತೆ ಶತಮಾನಗಳ ಹಿಂದೆಯೇ ಬರೆದಿದ್ದರು. ಕನಕದಾಸರು ಮೈ ಮರೆತು ಹಾಡಿದ ಈ ಹಾಡನ್ನು ನಾನು ಶ್ರುತಿ, ತಾಳ, ರಾಗ, ಭಾವವನ್ನೆಲ್ಲಾ ಮರೆತು ಹಾಡಿದೆ. ಕೊನೆಯ ಸಾಲುಗಳನ್ನು ಹಾಡಿ, "ಬಾಗಿಲನು ತೆರೆದು.. ಟಣ್ ಟಣ್ ಟಣ್ಣ್" ಅಂತ ಹಿನ್ನೆಲೆ ಸಂಗೀತ ಕೊಡುತ್ತಾಯಿದ್ದೆ, ತಕ್ಷಣವೇ ಕೃಷ್ಣನ ಅನುಗ್ರಹವೆಂಬಂತೆ ಆ ಕಡೆಯಿಂದ ಯಾರೋ ವ್ಯಕ್ತಿಯೊಬ್ಬ ಬಂದನು. ಆತ ಬಾಗಿಲನ್ನು ತೆಗೆದು ಹೊರಗಡೆ ಸಾಗಿದೆ. ನಾನು ರಸ್ತೆಯ ಆ ಭಾಗಿದಿಂದ ಸಂತೋಷದಿಂದ ಓಡಿ ಬಂದೆ. ಅಷ್ಟರಲ್ಲಿ ಬಾಗಿಲು ಮುಚ್ಚಿ ಹೋಯಿತು. ಒಟ್ಟು ಸುಮಾರು ೧೫ ನಿಮಿಷಗಳ ಕಾಲ ಅಲ್ಲೇ ಇದ್ದೆ. ಆದರೂ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿ ಯಾರೂ ನನ್ನ ಕಣ್ಣಿಗೆ ಕಾಣಿಸಲಿಲ್ಲ ಸಹಾಯ ಬೇಡೋಣವೆಂದರೆ. ಆಮೇಲೆ ಯಾಕೋ ದೇವರು ನನ್ನನ್ನು ಬಲಗಡೆಗೆ ನೋಡಲು ಹೇಳಿದ ಅನ್ನಿಸುತ್ತೆ. ಅಲ್ಲಿ ೪ Buttons ಇದ್ದವು.

೧. ******
೨ *******
೩ Krishna Temple
೪. ******

ಆಗ ನಾನು ಮೂರನೆ button ಒತ್ತಿ ನಂತರ ಬಾಗಿಲು ತೆಗೆಯಲು ಪ್ರಯತ್ನ ಪಟ್ಟೆ. ಕೃಷ್ಣನ ದಯೆ, ಬಾಗಿಲು ತೆಗೆಯಿತು. ಈಗ ಒಳಗೆ ಹೋಗಿ, ಮೈದಾನ ಹತ್ತಿರ ನೋಡಿದರೆ ದೇವಸ್ಥಾನವೇ ಇಲ್ಲ. ಅಲ್ಲಿ ಮೂರನೆ button ಒತ್ತಿದ್ದರಿಂದ, ಮೂರನೆ ಮಹಡಿಗೆ ಹೋಗಿ ನೋಡೋಣವೆಂದು ಮೂರನೆ ಮಹಡಿಗೆ ಹೋದೆ. ಅಲ್ಲಿ ಆಚೆ ಕಡೆ ಅನೇಕ ಪಾದರಕ್ಷೆಗಳು ಇದ್ದವು. ನನ್ನ shoes ಕಳಚಿ, ಒಳಗೆ ಹೋದೆ. ಅಲ್ಲಿ ಸಿಕ್ಕ ಫಿನ್ ಲ್ಯಾಂಡಿನ ಪ್ರಜೆ ನನಗೆ ಹೇಳಿದ ಮಾತು "ನಮಸ್ಕಾರ್!" ಆಗ ಸ್ವಲ್ಪ ಆಶ್ಚರ್ಯವಾಯಿತು. ನಾನೂ "ನಮಸ್ಕರಾ" ಅಂತ ಹೇಳಿದೆ. ಆತ ಭಾರತದ ಉಡುಪುಗಳಾದ ಪಂಚೆ, ಹಾಗು ಜುಬ್ಬದಲ್ಲಿದ್ದೆ. ಹಣೆಯ ಮೇಲೆ ISKCON ಮುದ್ರೆಯಿತ್ತು. ಆಮೇಲೆ ದೇವಾಲಯದ ಒಳಗೆ ಪ್ರವೇಶ ಮಾಡಿದೆ. ಅಲ್ಲಿ ಕೃಷ್ಣನ ವಿಗ್ರಹಕ್ಕೆ ನಮಿಸಿ, ಕುಳಿತುಕೊಂಡೆ. ದೇವಾಲಯಕ್ಕೆ ಸಂಬಂಧ ಪಟ್ಟ ಅಲ್ಲಿಯ ಪ್ರಜೆಯೊಬ್ಬ ಭಗವದ್ಗೀತೆಯ ಒಂದು ಅಧ್ಯಾಯದ ವಿಚಾರ ಮಾತಾಡುತ್ತಾಯಿದ್ದರು. ಅವರು ಅದನ್ನು ಸಂಸ್ಕೃತದಲ್ಲಿ ಹಾಗು ಆಂಗ್ಲ ಭಾಷೆಯಲ್ಲಿ ಹೇಳುತ್ತಾಯಿದ್ದರು. ಇನ್ನೊಬ್ಬರು Suomi ಭಾಷೆಯಲ್ಲಿ ಅದರ ಅರ್ಥವನ್ನು ಹೇಳುತ್ತಾಯಿದ್ದರು. ಅಲ್ಲಿ ನೆರೆದಿದ್ದವರು ಸುಮಾರು ೨೫ - ೩೦ ಮಂದಿ. ಅವರಲ್ಲಿ ಭಾರತೀಯರೂ ಹಾಗು ಅಲ್ಲಿಯ ಜನರೂ ಸೇರಿದ್ದರು. ದೇವಾಲಯಕ್ಕೆ ಸಂಬಂಧ ಪಟ್ಟವರು ಬ್ರಾಹ್ಮಣರಾಗಿ ಮತಾಂತರ ಗೊಂಡವರಂತೆ ಕಾಣಿಸುತ್ತಿದ್ದರು. ಅಲ್ಲಿಯ ಜನತೆಗೆ ನಮ್ಮ ಭಗವದೀತೆಯ ಮೇಲೆ ಅಪಾರಾದ ಗೌರವ ಇದೆಯೆಂಬುದು ತಿಳಿಯಿತು. ಅಲ್ಲಿಯ ಜನರೆಲ್ಲರೂ ಗೀತೆಯ ಚೆರ್ಚೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. ಅಲ್ಲಿಯ ಹೆಂಗಸರು ಸೀರೆಯನ್ನು ಉಡುವುದನ್ನು ರೂಢಿ ಮಾಡಿಕೊಂಡಿದ್ದರು. ಭಾರತದ ಕೆಲವು ಮಾನಿನಿಯರು ಸೀರೆಯಲ್ಲಿರಲಿಲ್ಲ! ಪಾಶ್ಚಾತ್ಯ ದೇಶದವರು ನಮ್ಮ ಸಂಸ್ಕೃತಿ ಅಳವಡಿಸಿಕೊಂಡರೆ ಇಲ್ಲಿಯವರು ಅವರ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಇದೆಲ್ಲಾ ಆದ ಮೇಲೆ ಪ್ರಸಾದ ವಿನಿಯೋಗವೆಂದು, ಎಲ್ಲರಿಗೂ ತಟ್ಟೆ ಹಾಕಿದರು. ಮಾಡಿದ ಅಡುಗೆಯನ್ನು ಪ್ರತಿಯೊಬ್ಬರಿಗೂ ಚೆನ್ನಾಗಿ ಬಡಿಸಿದರು. ನಾನು ಅಲ್ಲಿ ತಿಂದ ತಿನಿಸು, ಅನ್ನ ಹಾಗು ಸೊಪ್ಪಿನ ಹುಳಿ ಜೊತೆಗೆ ಯಾವುದೋ ಒಂದು ಪಲ್ಯ. ಇದಾದ ಮೇಲೆ ಹಲ್ವಾ ಅನ್ನೋ ಹೆಸರಿನಲ್ಲಿ ಒಂದು ತಿನಿಸನ್ನು ಬಡಿಸಿದರು. ಅದನ್ನು ನೋಡಿದಾಗಲೆ ತಿಳಿಯಿತು ಅದು ಸಜ್ಜಿಗೆ ಅಂತ. (ತಿಂಡಿ ಒಂದೇ ನಾಮ ಹಲವು). ನಾನು ದೇವರ ಸನ್ನಿಧಿಯಲ್ಲಿ ಆ ಸಂಜೆ ಕಳೆದೆನು. ಆದರೆ ಹೀಗೆ apartment ನಲ್ಲಿ ದೇವಸ್ಥಾನ ಇರೋದು ನನಗೆ ಸರಿಯೆನಿಸಲಿಲ್ಲ.


ಅಲ್ಲಿಂದ ಹೊಟೆಲಿಗೆ ಬಂದು ಮಲಗಿದೆ. ಅಲಾರ್ಮ್ ಹೊಡೆದಾಗಲೆ ನನ್ನಗೆ ಎಚ್ಚರ.

ಹೆಲ್ಸಿಂಕಿಯ ಕೃಷ್ಣ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲಿಂಕಿನಲ್ಲಿ ನೋಡ ಬಹುದು:
http://www.saunalahti.fi/~krishna/html/in_english.html

ಈ ವೆಬ್ ಸೈಟಿನಲ್ಲಿ, ಸುಓಮಿ ಭಾಷೆಯನ್ನೂ ಸಹ ನೋಡ ಬಹುದು.

ಮುಂದಿನ ಪೋಸ್ಟ್ ಮಾಡುವವರೆಗು Moi Moi (Bye)

Thursday 16 October, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಸುಓಮೆನ್ಲಿನ್ನ ಕೋಟೆ

ಹಿಂದಿನ ಭಾಗ ಇಲ್ಲಿದೆ

ಕಳೆದ ಪೋಸ್ಟಿನಲ್ಲಿ ಕೋಟೆಗೆ ಹೋಗಿದ್ವಿ ಎಂದು ಹೇಳಿದ್ದೆ. ಆ ಕೋಟೆ ಹೇಗಿರುತ್ತೆ ಅಂತ ಸುನಾಥ್ ಅಂಕಲ್ ಕೇಳಿದ್ದರು. ಅದರ ಬಗ್ಗೆ ಈಗ ಇಲ್ಲಿ ಹೇಳುತ್ತೇನೆ.

ನಾವು Ferry ಒಳಗೆ ಕೂತು, ಐಸ್ ಗೆಡ್ಡೆಯ ಮೇಲೆ (ಸಮುದ್ರದ ನೀರು ಗೆಡ್ಡೆಯಾಗಿತ್ತು), ಸಾಗಿ ೧೦-೧೫ ನಿಮಿಷಗಳಲ್ಲಿ ಆ ಕೋಟೆಗೆ ತಲುಪಿದೆವು. ಹವ್ಯಾಸಕ್ಕೆ ಫೋಟೋಗಳನ್ನು ತೆಗೆಯುವವನು ನಾನು. ಹಾಗಾಗಿ ಆ ಗೆಡ್ಡೆಯನ್ನು ಸೆರೆ ಹಿಡಿಯುವು ಕೆಲಸದಲ್ಲಿ ನನಗೆ ತುಂಬಾ ಖುಶಿಕೊಡುತ್ತಾಯಿತ್ತು. ನಾವು ಆ ಕೋಟೆಯ ಹತ್ತಿರ ಹೋಗಿ ಇಳಿದೆವು. ನಮ್ಮಂದಿಗೆ ಅನೇಕ ಪ್ರವಾಸಿಗರು, ಅಲ್ಲಿಯ ಜನರೂ ಇದ್ದರು. ಅಲ್ಲಿಂದ ಮುಂದೆ ಸಾಗಿ ಹೆಬ್ಬಾಗಿಲ ಬಳಿ ಹೋದೆವು. ಅಲ್ಲಿ ಪ್ರವೇಶಕ್ಕೆ ಯಾವುದೇ ಶುಲ್ಕವಿರಲಿಲ್ಲ. ಹೆಬ್ಬಾಗಿಲನ್ನು ನೋಡಿ ನನಗೆ ಮೊದಲು ಜ್ಞಾಪಕವಾದದ್ದು ನಾನು ಓದಿದ್ದ ಸರ್ಕಾರಿ ಜ್ಯೂನಿಯರ ಕಾಲೇಜು.
ಇಲ್ಲಿಂದ ಸಾಗಿ ಮುಂದೆ ಹೋಗುತ್ತಲೇ ಕಣ್ಣಿಗೆ ಬಿದ್ದದ್ದು "ಬಿಳಿ ಮರಳು" (ಎಲ್ಲಾ ಕಡೆ ಐಸ್ ಐಸ್... ವೆರಿ ವೆರಿ ನೈಸ್!). ಈ ಕೋಟೆಗೆ ೨೫೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ ಹಾಗು ಇದನ್ನು UNESCO ದವರು World's Heritage List ನಲ್ಲಿ ದಾಖಲಾಯಿಸಿದ್ದಾರೆ. ಇದನ್ನು ಮಿಲಿಟರಿಯವರು ಉಪಯೋಗಿಸುತ್ತಾಯಿದ್ದರಂತೆ. ಇದರೊಳಗೆ ಒಂದು ಚರ್ಚ್ ಇತ್ತು. ಅದರ ಬಯಲಲ್ಲಿ ಮಕ್ಕಳು ಆಟವಾಡುತ್ತಾಯಿದ್ದರು. ಇದರ ಜೊತೆಗೆ ಚಳಿ ಅನ್ನೋ ಮಹಾ ಶತ್ರು ನಮ್ಮೊಂದಿಗೆ ಇದ್ದ! ನಾವು ಉಳಿದವರನ್ನು ಹಿಂಬಾಲಿಸಿ ಹೋದಂತೆ ಸ್ವಲ್ಪ ನಾನು ಹೊಟೆಲಿನಿಂದ ಹೊರಟಾಗ ಹೊಳೆದ ಸಾಲಿಗೆ ತಕ್ಕಂತೆ ಇಲ್ಲೊಂದು ಚಿತ್ರ ಸಿಕ್ಕಿತು.

"ಸೂರ್ಯನಿದ್ದರೂ ಇಲ್ಲಿ
ತುಂಬಾ ತುಂಬಾ ಚಳಿ"


ಸುಮಾರು ದೂರ ಹೋದ ಮೇಲೆ ಒಂದು ವಸ್ತು ಸಂಗ್ರಹಾಲಯವಿತ್ತು. ಅಲ್ಲೂ ಅಷ್ಟೆ ಪ್ರವೇಶಕ್ಕೆ ಶುಲ್ಕವಿರಲಿಲ್ಲ. ಆ ಸಂಗ್ರಹಾಲಯ, ಈ ಕೋಟೆಗೆ ಸಂಬಂಧಿಸಿದ ವಿಷಯಗಳು ಹಾಗು ಚಿತ್ರಣಗಳಿಂದ ತುಂಬಿ ಕೊಂಡು ಅದ್ಭುತವಾಗಿತ್ತು. ಎಲ್ಲಾ ಚಿತ್ರವನ್ನು ನೋಡಿ, ಅಲ್ಲಿಂದ ಹೊರಟೆವು. ಮುಂದೆ ನಮ್ಮ ಕಣ್ಣಿಗೆ ಬಿದ್ದದ್ದು, ಅಲ್ಲಿ ೧೮೦೦, ೧೮೫೦ ಯ ಕಾಲದಲ್ಲಿ ನಿರ್ಮಿಸಿದ ಅನೇಕ ಕಟ್ಟಡಗಳು.
ಒಂದೆರಡು ಚಿತ್ರಗಳು...ಆ ಎಲ್ಲಾ ವಿಷಯಗಳ ಬಗ್ಗೆ ಬರೆಯಲು ನನ್ನ ನೆನಪಿನ ಶಕ್ತಿ ಅಡ್ಡಿ ಪಡಿಸುತ್ತಾಯಿದೆ. ಒಂದೂವರೆ ವರ್ಷದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳೋದು ತುಂಬಾ ಕಷ್ಟ. ಆಗ ನನಗೆ ಪ್ರವಾಸ ಕಥನ ಬರೆಯಬೇಕೆಂಬ ಆಸೆ ಇರಲಿಲ್ಲ.

ಹೆಚ್ಚಿನ ಮಾಹಿತಿಗೆ: ಸುಓಮೆನ್ಲಿನ್ನ ಕೋಟೆ

Saturday 11 October, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ವಾರಾಂತ್ಯದ ಬದುಕು

ಹಿಂದಿನ ಭಾಗ ಇಲ್ಲಿದೆ.

ಮೊದಲನೆ ವಾರ:
ಶುಕ್ರವಾರ ರಾತ್ರಿ ಟಿ.ವಿ. ವೀಕ್ಷಿಸಿ, ಯಾವಾಗ ಮಲಗಿದನೋ ನನಗೇ ಗೊತ್ತಿಲ್ಲ. ಬೆಳಿಗ್ಗೆ ಎದ್ದು ಸ್ನಾನವನ್ನು ಮುಗಿಸಿ, ತಿಂಡಿ ತಿನ್ನಲು ನಾನು ಹಾಗು ಅವನು ಹೋದ್ವಿ. ಏನು ವಿಶೇಷವಿರಲಿಲ್ಲ. ಅದೇ Bread- Jam, ೧ ಲೋಟ Juice, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣು, ಹಾಲು.

ತಿಂಡಿ ಆದ ಮೇಲೆ ಏನು ಮಾಡೋದು ಅಂತ ಯೋಚನೆ ಮಾಡಲೇ ಇಲ್ಲ. ಸ್ವಲ್ಪ ಹೊತ್ತು ಟಿ.ವಿ. ನೋಡಿದ್ವಿ. ಆಮೇಲೆ ತಾಯಿ ಕರುಳು ನನ್ನ ಕರೆಯಿತು. ಓಡಿ ಹೋದೆ ಆಫೀಸಿಗೆ, ಚಾಟ್ ಮಾಡೋಕೆ... Laptop ಇರಲಿಲ್ಲವೇ ಅಂತ ಪ್ರಶ್ನಿಸಿದರೆ... ನಮ್ಮ ಕಂಪನಿ ಕೊಡಲಿಲ್ಲ ಅಂತ ಉತ್ತರ ಕೊಡುತ್ತೀನಿ. ಇಲ್ಲಿಗೆ ಬಂದ ಮೇಲೆ, ಸಹೋದ್ಯೋಗಿಗೆ ಸರಿಯಾದ Computer ಸಿಗದೆ Laptop ಕೊಟ್ಟಿದ್ದರು. ನಾನು ಅದನ್ನು ಉಪಯೋಗಿಸಲಿಲ್ಲ. ಅವನು ದೆಹಲಿ ವಿಮಾನ ನಿಲ್ದಾಣದಲ್ಲಿ ಫೋನಿನ ಪ್ರಸಂಗ ನೋಡಿದ್ದರಿಂದ Laptop ಅವನ ಉಪಯೋಗಕ್ಕೆ ಬೇಕಾಗುತ್ತದೆ ಎಂದು ಆಫೀಸಿನ ಕಡೆ ಹೊರಟೆ.

ನಾನು ಆಫೀಸಿಗೆ ಹೋಗಿ, ತುಂಬಾ ಹೊತ್ತು ಚಾಟಿಂಗ್ ಮಾಡಿ, ಶುಕ್ರವಾರ ಸಂಜೆಯಿಂದ ಹಿಡಿದು ಅದುವರೆಗೂ ಏನು ವಿಷಯಗಳು ನಡೆಯಿತು ಅಂತ ಹೇಳಿದೆ. ಅಮ್ಮ ಹೇಳಿದ್ರು ಅಲ್ಲಿ ಕೃಷ್ಣನ ದೇವಸ್ಥಾನಕ್ಕೆ ಹೋಗು ಅಂತ . ಆಶ್ಚರ್ಯವಾಗುವ ಸಂಗತಿಯಲ್ಲ. ಇಲ್ಲಿ ISKCON ಸಂಸ್ಥೆಯ ಕೃಷ್ಣನ ದೇವಾಲಯವಿದೆ. ನಾನು Google Maps ಸಹಾಯದಿಂದ ಅದರ ವಿಳಾಸ ಹಾಗು ಮಾರ್ಗ ತಿಳಿದು ಕೊಂಡೆ. ನಮ್ಮ ಹೋಟೆಲಿನಿಂದ ಸುಮಾರು ೫ ನಿಮಿಷಗಳ ಕಾಲ್ನಡಿಗೆ ಅದು ಇತ್ತು. ಹೆಲ್ಸಿಂಕಿಗೆ ಬರಬೇಕು ಅಂತ ತಿಳಿದಾಗಲೇ ಮೊದಲು ನಾನು ಹುಡುಕಿದ್ದು "Vegetarian Foods / Hotels in Helsinki". ಆಗ ಹೇಗೋ ಇದು ಕಣ್ಣಿಗೆ ಬಿತ್ತು. ಶನಿವಾರ ಹಾಗು ಭಾನುವಾರಗಳಲ್ಲಿ, ಪ್ರಾರ್ಥನೆ ಹಾಗು ಭೋಜನವಿರುತ್ತದೆ ಅಂತ ಗೊತ್ತಾಯಿತು. ಹಾಗಾಗಿ ಇಲ್ಲಿಗೆ ಬಂದ ಮೇಲೆ ಅದರ ವಿಳಾಸ ಹುಡುಕಿದೆ. ಅದಲ್ಲದೆ ಇನ್ನು ಕೆಲವು ಭಾರತದ ಹೋಟೆಲುಗಳು ಇದ್ದವು.

ಚಾಟಿಂಗೆಲ್ಲಾ ಮುಗಿಸಿ, ಸ್ವಲ್ಪ ಹೊತ್ತಾದ ಮೇಲೆ, ನಾನು ಹೋಟೆಲಿಗೆ ಹೋದೆ ಭೋಜನಕ್ಕೆ. ಆಮೇಲೆ ಹಾಗೆ ಸಮಯ ಕಳೆದೇ ಹೋಯಿತು. ಶನಿವಾರ ಮುಗಿದು ಭಾನುವಾರ ಬಂತು. ನನ್ನ Breakfast ಬಗ್ಗೆ ಹೆಚ್ಚಿನ ವಿಷಯವಿಲ್ಲ ಏಕೆಂದರೆ ಅವಷ್ಟನ್ನು ಬಿಟ್ಟು ಇನ್ನೇನನ್ನೂ ತಿನ್ನಲಿಲ್ಲ. ಇಡೀ ತಿಂಗಳು ಅಷ್ಟೇ ನನ್ನ ಬೆಳಗಿನ ಆಹಾರವಾಗಿತ್ತು.

ಯಾಕೆ ನಾವು ಹೀಗೆ ಸೋಮಾರಿಗಳು ಯಾಕೆ ಆದೆವೋ ನಮಗೇ ಗೊತ್ತಿಲ್ಲ. ಶನಿವಾರದಂತೆ ಭಾನುವಾರ ಕೂಡ ವ್ಯರ್ಥವಾಯಿತು. ಆಚೆ ತಿರುಗಾಡಲು ಮನಸ್ಸೇ ಬರಲಿಲ್ಲ! ಪ್ರಾಯಶಃ ಮನೆ ಬಿಟ್ಟು ಬಂದ ನೋವು ನಮಗರಿಯದೇ ನಮ್ಮ ಮನಸ್ಸಿಗೆ ತಿಳಿದಿತ್ತು ಅನಿಸುತ್ತೆ.

ಎರಡನೆ ವಾರ:

ನಮ್ಮ ಕೆಲಸಕ್ಕೆ ಸಂಬಂಧಿಸಿದಂತೆ Project Architect ಬೇರೇ ದೇಶ (Latvia) ದಿಂದ ಬರಬೇಕಿತ್ತು ನಮಗೆ Project ಬಗ್ಗೆ ಅತೀ ಸೂಕ್ಷ್ಮ ವಿಚಾರಗಳನ್ನು ತಿಳಿಸಲು. ಆತನ ಹೆಸರು Sergejs Brosalvskis. ಸೆರ್ಗೆ ಅಂತ ಅವರನ್ನು ಸಂಭೋದಿಸ ಬಹುದಾಗಿತ್ತು. ಆತ ನಮ್ಮೊಂದಿಗೆ ಎರಡು ದಿನಗಳ ಕಾಲ Projectನ ಎಲ್ಲಾ ವಿಚಾರಗಳನ್ನು ಹೇಳಿದರು. ಅವರೂ ಸಹ ನಮ್ಮ ಹೊಟೆಲಿನಲ್ಲೇ ತಂಗಿದ್ದರು. ನಮಗೂ ಒಬ್ಬ ಜೊತೆಗರ ಸಿಕ್ಕಂತಾಯಿತು. ಅವರು ಶುಕ್ರವಾರ ಹೊರಟು ಹೋದರು. ಅದಾದ ಮೇಲೆ, Jarkko ನಮ್ಮನ್ನು ಕೇಳಿದರು "What are your plans for this weekend?" ನಾವಿಬ್ಬರೂ ಊರು ಸುತ್ತೋದು ಅಂತ ಹೇಳಿದೆವು. ಆಗ ಆತ, ಇಲ್ಲೊಂದು ಕೋಟೆ ಇದೆ, ಅಲ್ಲಿಗೆ ಹೋಗಿ, ಚೆನ್ನಾಗಿದೆ ಅಂತ ಹೇಳಿದರು. ಆ ಕೋಟೆಯ ಮಾರ್ಗವನ್ನು Google Maps ಸಹಾಯದಿಂದ ತೋರಿಸಿದರು. ನಮಗೂ ಅಲ್ಲಿಗೆ ಹೋಗುವೆ ಆಸೆಯಾಯಿತು. ಅದರ ಹೆಸರು "Suomenlinna Fortress" (ಹೆಚ್ಚಿನ ಮಾಹಿತಿಗೆ ಲಿಂಕ್ ಒತ್ತಿ).

ನಾವು ಅಲ್ಲಿಗೆ ಹೋಗ ಬೇಕೆಂದು, ಬೆಳಿಗ್ಗೆ ತಿಂಡಿ ತಿಂದು, Reception ಬಳಿ ಹೋಗಿ ಅವರನ್ನು ಕೇಳಿದೆವು ಆ ಕೋಟೆಗೆ ಹೋಗುವುದು ಹೇಗೆ. ಆಗ ಆತ, ಅಲ್ಲೇ ಇದ್ದ Helsinki Map ನ್ನು ತೆಗೆದು, ಮೊದಲಿಗೆ ನಮ್ಮ ಹೋಟೆಲನ್ನು ಗುರುತು ಮಾಡಿ, "ನಾವೀಗ ಇಲ್ಲಿದ್ದೇವೆ. ನೀವು ಈ ಮಾರ್ಗವಾಗಿ ಸಮುದ್ರ ತಲುಪುತ್ತೀರ. ಅಲ್ಲಿ ನಿಮಗೆ ಗಂಟೆಗೊಂದು Ferry ಇರುತ್ತೆ. ಅದರೊಂದಿಗೆ ಹೋಗ ಬಹುದು." ಅಂತ ಹೇಳಿದ. ಅವನಿಗೆ ಧನ್ಯವಾದ ಅರ್ಪಿಸಿ, ನಾವು ಹೋಟೆಲಿನ ಬಾಗಿಲ ಬಳಿ ಹೋದೆವು. ನನಗೆ ಮೊದಲು ಎದುರಿಗೆ ಕಾಣಿಸಿದವನು ಆದಿತ್ಯ. ಅಲ್ಲಿಂದ ಹೊರಗೆ ಸಾಗುತ್ತಿದ್ದಂತೆ ಅನುಭವಿಸಿದ್ದು.. ಚಳಿ! ಆಗಲೇ ಹೊಳೆದ ಸಾಲುಗಳು..
"ಸೂರ್ಯನಿದ್ದರೂ ಇಲ್ಲಿ
ತುಂಬಾ ತುಂಬಾ ಚಳಿ.."
ಮುಂದೆ ನನ್ನೆಲ್ಲಾ ಅನುಭವಗಳನ್ನು ಸೇರಿಸಿ ಬರೆದ Finland ಚಳಿ ಕವನವಾಯಿತು.

ನಾವು ಹಾಗೆ ಸಾಗುತ್ತಾಯಿದ್ದಾಗ ಅಲ್ಲಿಯ ಕಟ್ಟಡಗಳ ಫೋಟೋ, ರಸ್ತೆಯ ಫೋಟೋ ತೆಗೆಯುತ್ತಾಯಿದ್ದೆ. ಸುಮಾರು ೨೦೦ಕ್ಕೂ ಹೆಚ್ಚು ಫೋಟೋಗಳನ್ನು ತೆಗೆದಿದ್ದೇನೆ ನನ್ನ ಒಂದು ತಿಂಗಳ ಪ್ರವಾಸದಲ್ಲಿ. ಅಷ್ಟರಲ್ಲಿ ನಾನು ಕೇವಲ ೮ ರಲ್ಲಿ ಮಾತ್ರ ಮುಖ ತೋರಿಸಿದ್ದೇನೆ. ಅಂತದೊಂದು ಫೋಟೊ ಇಲ್ಲಿದೆ.

ನನ್ನ ನೋಡದವರು ದಪ್ಪಗಿದ್ದಾನೆ ಅಂತ ತಿಳಿಯ ಬೇಡಿ. Winter Dress, ದಪ್ಪದಾದ T Shirt, ಅದರ ಮೇಲೆ Sweater, ಅದರ ಮೇಲೆ Jerkin ಎಲ್ಲವನ್ನು ಧರಿಸಿದ್ದಕ್ಕೆ ಹಾಗಿ ಕಾಣಿಸುತ್ತಾಯಿದ್ದೆ. ಒಂದು Match Stickಗೂ ಇಷ್ಟನ್ನೆಲ್ಲಾ ಹಾಕಿದರೆ ಅದು Walking Stick ಥರ ಕಾಣುತ್ತೆ. :). ಸಾಮಾನ್ಯವಾಗಿ ಕಣ್ಣುಗಳು, ಹಾಗು ಮೂಗು ಮಾತ್ರ ಹೊರಗಿನ ಪ್ರಪಂಚಕ್ಕೆ ತೋರುತ್ತಾಯಿದ್ದೆ. ಈ ದಿನ ಕೋತಿ ಟೋಪಿಯನ್ನು ಸ್ವಲ್ಪ ಕೆಳಗಿಳಿಸಿದ್ದೆ. ನಾನೇ ಅದು ಅಂತ ತಿಳಿಯಲಿ ಎಂದು.

ಮುಂದೆ ಸಾಗುತ್ತಾ Ferry ಇದ್ದ ಕಡೆಗೆ ಹೋದೆವು. ಅಲ್ಲಿ ಟಿಕೆಟ್ ಖರೀದಿಸುವ ಕೆಲಸ ಈಗ ನಮ್ಮದಾಗಿತ್ತು. ಭಾರತದ ಥರ ಇಲ್ಲಿ ಒಬ್ಬರನ್ನೋ ಇಬ್ಬರನ್ನೋ ನೇಮಿಸಿರುವುದಿಲ್ಲ ಟಿಕೆಟ್ ಕೊಡಲು. ಎರಡು - ಮೂರು Ticket Machineಗಳು ಇರುತ್ತವೆ. ಅದರಲ್ಲಿ ೨ Euro ಹಾಕಿದರೆ ಸಾಕು, ಒಂದು ಟಿಕೆಟ್ ಹೊರ ಬರುತ್ತೆ. ಅದರ ಅವಧಿ ೧ ಗಂಟೆ ೩೦ ನಿಮಿಷ. ಅಷ್ಟರಲ್ಲಿ ಪ್ರಯಾಣ ಮಾಡಿ, ಕೋಟೆ ನೋಡಿ ಬರ ಬೇಕು. ಇಲ್ಲದೆ ಇದ್ದಲ್ಲಿ, ಕೋಟೆಯ ಬಳಿ ಇರುವ Machine ನಿಂದ ಮತ್ತೆ ೨ Euro ಹಾಕಿ ಇನ್ನೊಂದು ಟಿಕೆಟ್ ಖರೀದಿಸಬೇಕು. ಟಿಕೆಟ್ machineದು ಇನ್ನೊಂದು ವಿಶೇಷವೆಂದರೆ ಅತೀ ಹೆಚ್ಚು ಅಂದರೆ, ೧೯ Euro ೯೦ Cents ಮಾತ್ರ ಚಿಲ್ಲರೆಯ ರೂಪದಲ್ಲಿ ಕೊಡುತ್ತದೆ. ನಾವೇನಾದರು ೨ Euro Ticketಗೆ ೫೦ Euro ನ Machine ಹಾಕಿದರೆ, ಟಿಕೆಟ್ ಜೊತೆಗೆ ೧೯ Euro ೯0 Cents ಮಾತ್ರ ಹೊರ ಬರುತ್ತೆ. ಮಿಕ್ಕಿದ ಹಣವೆಲ್ಲಾ ಕೃಷ್ಟಾರ್ಪಣಮಸ್ತು!

ಅಲ್ಲಿ ಎರಡು ಟಿಕೆಟ್ ಖರೀದಿಸಿ, ಹೊರೆಟೆವು, ಕೋಟೆಗೆ. ಕೋಟೆಯಲ್ಲಿ ತಿರುಗಾಡಿ, ಸುಸ್ತಾಗಿ, ಪುನಃ ಬಂದೆವು Ferry ಹತ್ತಲು. Ferry ಸ್ವಲ್ಪ ತಡವಾಗಿಯೇ ಬಂದಿತು. ಅದರಿಂದ ಹೆಲ್ಸಿಂಕಿಗೆ ಬಂದೆವು. ಅಲ್ಲಿ ಮತ್ತೆ ಊರು ಸುತ್ತಿ, ಹೊಟೆಲಿಗೆ ಹೋದೆವು ತಿಂದು ಮಲಗಲು. ಸ್ವಲ್ಪ ನಿದ್ದೆ ಆದಮೇಲೆ, ನಾನು ಆಫೀಸಿಗೆ ಹೋದೆ. ಚಾಟ್, ಆರ್ಕುಟ್, ಇತ್ಯಾದಿಗಳ ಕಡೆ ಗಮನ ಕೊಡೋಕೆ. ಅಲ್ಲಿಂದ ಬಂದು, ಟಿ.ವಿ ನೋಡಿದೆ. ಆಗ ಎಲ್ಲೆಡೆ ಹಿಮ ಇದ್ದಿದ್ದರಿಂದ ಅಲ್ಲಿಯ ಜನರು Skiing ಮಾಡುತ್ತಾಯಿದ್ದರು. ಈ ಆಟವನ್ನು ನೋಡೋದು ಒಂದು ಅದ್ಭುತ ರೋಮಾಂಚನಕಾರಿ ಅನುಭವ! ಅದರೊಂದಿಗೆ ಶನಿವಾರ ಕಳೆದು ಭಾನುವಾರ ಬಂದಿತು. ನಾನು ಪ್ರತಿದಿನ ಅದನ್ನೇ ನೋಡುತ್ತಾಯಿದ್ದೆ. ಕೆಲವೊಮ್ಮೆ ಫುಟ್ಬಾಲ್ ಕೂಡ ಪ್ರಸಾರವಾಗುತ್ತಾಯಿತ್ತು.

ಭಾನುವಾರ ಮತ್ತೆ ಊರು ಸುತ್ತೋದು, ಫೋಟೋಗಳು ತೆಗೆಯೋದು.

Monday 6 October, 2008

ಕನಸಲ್ಲು ನಿನ್ನ ರೂಪ -- ಈ ಮನದಲ್ಲಿ ತರಲು ತಾಪ!

ನನ್ನ ಪರಿಸ್ಥಿತಿಗೆ ಹೊಂದುವಂತಹ ಶೀರ್ಷಿಕೆ ಕೊಟ್ಟ ನನ್ನ ಆರ್. ಎನ್. ಜಯಗೋಪಾಲರಿಗೆ ವಂದಿಸುತ್ತ, ನಿಮಗೆಲ್ಲರಿಗೂ ಮತ್ತೆ ಸ್ವಾಗತ ನನ್ನ ಕನಸಿನ ಬಗ್ಗೆ ಕೇಳೋದಕ್ಕೆ.

ಆರು ತಿಂಗಳ ಹಿಂದೆ ನನ್ನ ಕನಸನ್ನು ನಿಮ್ಮೊಂದಿಗೆ ಹಂಚಿ ಕೊಂಡಿದ್ದೆ ( Mall @ Malleshwara.) ಈಗ ಮತ್ತೆ ಬಂತು ಕಾಲ ನನ್ನದೊಂದು ಕನಸನ್ನು ಹೇಳಲು.

ಇತ್ತೀಚೆಗೆ ಕೆಲಸ ಬಹಳಯಿದೆ ಅಂತ ಕೆಲವರಿಗೆ ಹೇಳಿದ್ದೆ. ಪ್ರತಿ ದಿನ ನಾನು ಮನೆ ತಲುಪುವ ವೇಳೆಗೆ ರಾತ್ರಿ ೧೦.೩೦ ಆಗಿರುತ್ತೆ. ಬಂದ ಮೇಲೆ ಮಮ್ಮು ಆಮೇಲೆ ತಾಚಿ. ರಾತ್ರಿ ಕನಸಲ್ಲಿ ಈಗ ಯಾರು ಬರ ಬಹುದು ಸ್ವಲ್ಪ ಯೋಚನೆ ಮಾಡಿ........?

ಹಿಂದಿ ಚಿತ್ರ ತಾರೆಯರು ಅಂತ ಊಹಿಸಿದ್ದೀರಾ? No Chances.... ನನಗೆ ಹಿಂದಿಯಲ್ಲಿ ಗೊತ್ತಿರೋರು ಕೇವಲ ನಾಕು ಮಂದಿ. ಅವರ್ಯಾರೂ ಬಂದಿಲ್ಲ. ಇನ್ನು ಕನ್ನಡ ತಾರೆಯರು ಅಂತೀರಾ? ಅವರೂ ಇಲ್ಲ ಬಿಡಿ. ಹೆಚ್ಚಾಗಿ ಸಿನಿಮಾ ನೋಡೋನಲ್ಲ ನಾನು. ಹಾಗಾದರೆ ಯಾರು ಬಂದಾರು....? ನಮ್ಮ Manager, Team Lead ಅಂತೀರ ಅವರೂ ಬರೋದಿಲ್ಲ.

ನನ್ನ ಕನಸಲ್ಲಿ ಬಂದದ್ದು ನಾನು ಮತ್ತೆ ನನ್ನ ಕೆಲಸ! ಅದೇನೋ ೯ ರಿಂದ ೮ ರ ವರೆಗೆ ಕೆಲಸ ಮಾಡಿ, ಸದ್ಯ ಮನೆ ತಲುಪಿದನಲ್ಲಾ ಅಂತ ನಿದ್ದ ಮಾಡಿದರೆ.. ಕನಸಲ್ಲೆಲಾ ನಾನು computer ಕುಟ್ಟುತ್ತಿರುವ ಹಾಗೆ, ಬೆಳಿಗ್ಗೆ ನನಗೆ ವಹಿಸಿದ ಕೆಲಸವನ್ನು ಮಾಡುತ್ತಿರುವ ಹಾಗೆ ಕನಸು ಕಾಣುತ್ತೀನಿ. ಇದು ಒಂದು ದಿನ ಬಂದರೆ ಪರವಾಗಿಲ್ಲ. ಆದರೆ ಬೇರೇ ಕನಸುಗಳಂತೆ ಇದು ಪ್ರತಿ ರಾತ್ರಿ ಬರುತ್ತೆ. ಕನಸಲ್ಲೂ ನಾನು ಕೆಲಸ ನಿರ್ವಹಿಸುತ್ತಿರುವ ಹಾಗೆ ಅನ್ನಿಸುತ್ತೆ. ನಮ್ಮ Client ಹಾಗು company ನನಗೆ ಹೆಚ್ಚು ಸಂಬಳ ಕೊಡ ಬೇಕು. ಯಾಕೆಂದರೆ ಮನೇಲೂ ಅವರ ಕೆಲಸ ಮಾಡುತ್ತೀನಲ್ಲ ಅದಕ್ಕೆ. (ನಗಲಿಲ್ವಾ ನೀವು?... ಅಯ್ಯೋ ಜೋಕ್ ಮಾಡಿದೆ ರೀ ನಾನು.. ಸ್ವಲ್ಪ ನಕ್ಕು ಬಿಡಿ....). ಇನ್ನೂ ಕೆಲಸ ಮುಗಿದಿರೋದಿಲ್ಲ ಅಷ್ಟರಲ್ಲಿ ಅಮ್ಮ ಆಫೀಸಿಗೆ ಬರುತ್ತಾರೆ. ಆಗ ನಾನು, "ಇಲ್ಲಿಯಾಕೆ ಬಂದ್ಯಮ್ಮ?" ಅಂತ ಕೇಳಿದಾಗ ಅವರು ಕೊಡುವ ಉತ್ತರ "೬.೧೫ ಆಯ್ತು ಏಳೋ ಬೇಗಾ... ಹೋಗಲ್ವಾ ಆಫೀಸಿಗೆ????". ಎಚ್ಚರವಾದ ಮೇಲೆ ಅಬ್ಬಬ್ಬಾ ಅಂದರೆ ೩ ಗಂಟೆ ಆರಾಮಾಗಿರುತ್ತೇನೆ ಆಮೇಲೆ ಮತ್ತೆ ಕೆಲಸ....

ಇಷ್ಟೇ ಆಗಿದಿದ್ದರೆ ಸುಮ್ಮನಿರುತ್ತಿದ್ದೆ. ನಿನ್ನೆ ರಾತ್ರಿ ನನಗೆ ಇವನೆಲ್ಲಾ ಬ್ಲಾಗಿನಲ್ಲಿ ಬರೆಯುವ ಹಾಗೆಯೇ ಕನಸಾಯ್ತು. ಅದಕ್ಕೆ ಕಡೇ ಪಕ್ಷ ಇದಾದರೂ ನನಸಾಗಲಿ ಎಂದು ಬರೆದೆ.

ಇನ್ನೊಂದು ವಿಷಯ ನೆನಪಾಯ್ತು ಈಗ. ನಾನು PUC ವ್ಯಾಸಂಗ ಮಾಡುವಾಗ ಪ್ರತಿ ರಾತ್ರಿ, Physics ಹಾಗು Chemistry Experiments ಮಾಡುತ್ತಾಯಿದ್ದೆ. BE ಓದುತ್ತಿರುವಾಗಲೂ ಅಷ್ಟೇ, IC ಗಳನ್ನೆಲಾ ಜೋಡಿಸಿ ಏನೋ experiments ಮಾಡಿಕೊಳ್ಳುತ್ತಾಯಿದ್ದೆ. ಹಾಳದ Experimentಗಳು ಕನಸಲ್ಲೂ ಸರಿಯಾದ Output ಬರುತ್ತಾಯಿರಲಿಲ್ಲ!

ರಾತ್ರಿ ಹೊತ್ತು ನನ್ನ ಜೊತೆ ಮಾತಾಡುವ ಬೆಮಿ ಗಳಿಗೆ ಹೇಳುತ್ತಾಯಿರುತ್ತೇನೆ.. "ನನಗೆ Good Night ಮಾತ್ರ wish ಮಾಡಿ. ಅದರ ಜೊತೆಗೆ Sweet Dreams ಅಂತ ದಯವಿಟ್ಟೂ Wish ಮಾಡಬೇಡಿ." ಅದರೂ ಕೆಲವರು ಇದನ್ನು ಮರೆತಿರುತ್ತಾರೆ. "sweet dreams... sweeeetest Dreams " ಅಂತೆಲ್ಲಾ ಹೇಳ್ತಾರೆ. ಆ ರಾತ್ರಿ ನನಗೋ "ಯಾವಾಗ ಹಲ್ಲು ಮುರಿಯುತ್ತೇ", "ಯಾವ ಮಾಲಿನಲ್ಲಿ ಹೋಗಿ ಚಿಂದಿ ಬಟ್ಟೇ ಖರೀದಿಸುತ್ತೇನೋ" ಹೀಗೆ ಅವೆಲ್ಲಾ ನೆನೆಪಾಗುತ್ತೆ. ಕೆಲವೊಮ್ಮೆ ಅಂತೂ ನಿದ್ದೆ ಮಾಡಲೋ ಬೇಡವೋ ಅನ್ನಿಸುತ್ತೆ. ನಿದ್ದ ಮಾಡಿದಾಗಲೂ ಭಯ ನನಗೆ!

ಇದರಿಂದ ನಾನು ನಿಮ್ಮನ್ನು ಕೇಳಿ ಕೊಳ್ಳುವುದು ಏನೆಂದರೆ, ನೀವು ಇನ್ನು ಮುಂದೆ "May all your dreams come true!" ಅಂತ ದಯವಿಟ್ಟೂ ಹಾರೈಸದಿರಿ. ನಾನು ಈ ರೀತಿ ಕನಸು ಕಂಡಿರುತ್ತೇನೆ. ನಿಮ್ಮ ಬಾಯಿ ಹಾರೈಕೆಯಿಂದ ಅದು ನನಸಾದರೇ... ನಾನು ಹಲ್ಲು ಮುರಿದ ಮುದುಕನಾಗಿ ಮಲ್ಲೇಶ್ವರದಲ್ಲಿ ಚಿಂದಿ ಬಟ್ಟೆ ಹಾಕಿ ಕೊಂಡು ಓಡಾಡುತ್ತಾಯಿರುತ್ತೇನೆ... ಇಲ್ಲ ಇಲ್ಲ... ೨೪ ಗಂಟೆನೂ Computer ಕುಟ್ಟುತ್ತಾ ಕೆಲಸ ಮಾಡುತ್ತಾಯಿರುತ್ತೇನೆ. ಬ್ಲಾಗಿಗೂ ಸಮಯ ಕೊಡೋಕೆ ಆಗೋದಿಲ್ಲ. ಆಮೇಲೆ ನಿದ್ದ ಯಾವಾಗ ಮಾಡಲಿ ನಾನು?

ಬೇರೆಯವರಿಗೆ "May all your dreams come true!" ಅಂತ ಹಾರೈಸುವ ಮೊದಲು ಒಂದು ಸಲ ಯೋಚನೆ ಮಾಡಿರಿ. ಅವರಿಗೆ ಏನಾದರು ಈ ರೀತಿಯಾದ ಕನಸಾಗಿದೆಯೇ ಎಂದು ಕೇಳಿ, Confirm ಆದ ಮೇಲೆ ಹಾರೈಸಿ. ನನಗೆ ಮಾತ್ರ ಹಾರೈಸ ಬೇಡಿ.

ಕಡೇದಾಗಿ ಅಂತರ್ವಾಣಿ ಹೇಳೋದು,

ಕಾಯಕವೇ ಕೈಲಾಸ
ಅಂದರು ಆಗ ಬಸವಣ್ಣ
ಕಾಯಕದಲ್ಲೇ ವಾಸ
ಅಂದನು ಈಗ ಶಂಕ್ರಣ್ಣ

ಮತ್ತೆ ಒಳ್ಳೆ ಕನಸು ಬಂದಾಗ ಬರೆಯುತ್ತೇನೆ.

Thursday 2 October, 2008

ಉಲ್ಟಾ ಪಲ್ಟಾ!

ಹೊಸ ಪ್ರಾಜೆಕ್ಟ್ ಸೇರಿದ ಮೇಲೆ, ಬಿಡುವು ಅಂದರೆ ಏನು ಅನ್ನೋದನ್ನೆ ಮರೆತಿದ್ದೆ. ಒಂದು ದಿನ ಸ್ವಲ್ಪ ಬಿಡುವು ಸಿಕ್ಕಿತು. ಆಗ ಬರೆದದ್ದು

ಬಿಡುವು:

ನಿರಂತರದ ಕೆಲಸದ ಮಧ್ಯೆ
ಉಸಿರಾಟಕ್ಕೆ ಸಿಗುವ

ಅಮೂಲ್ಯ ಕ್ಷಣ!


ಇದು ಯಾವಾಗ ಬರೆದನೋ ಎಲ್ಲಾ ಉಲ್ಟಾ ಪಲ್ಟಾ ಆಯ್ತು. ವಿಪರೀತ ಕೆಲಸ. ರಾತ್ರಿ ೧೦.೩೦ ಕ್ಕೆ ಮನೆ ಸೇರುತ್ತಾಯಿದ್ದೆ. ಸ್ವಲ್ಪ ದಿನಗಳಾದ ಮೇಲೆ, ಮತ್ತೆ ಬಿಡುವು ಆಗ ಬರೆದದ್ದು:

ಹಾಗೆ ಕುಳಿತಿರುವೆ
ಏನು ಮಾಡಲಿ?
ಏನಿದೆ ಮಾಡಲು?
ಹಾಗೆ ಬರೆಯುತ್ತಿರುವೆ

ಮೂರು ದಿನಗಳೇ ಆದವು
ಹೆಚ್ಚಿಲ್ಲ ಕೆಲಸ
ಬ್ಲಾಗುಗಳೆಲ್ಲಾ ಬ್ಲಾಕು
ನನ್ನ ಟೈಂಪಾಸಿಗೆ ಬ್ರೇಕು!

ಕೆಲಸವಿಲ್ಲ ಕಚೇರಿಯಲ್ಲಿ
ಎಲ್ಲೋ ಏನೋ ವಿಘ್ನ!
ಸ್ಫೂರ್ತಿಯಿದೆ ಮನದಲ್ಲಿ
ಕವನಗಳಿಗೇಕೆ ವಿಘ್ನ?

ಹಾಗೆ ಕುಳಿತಿರುವಂತೆ ನನ್ನಿಂದಾಗದು
ಎದ್ದು ಮನೆಗೆ ಬರುವಂತಿಲ್ಲ
ವಿಘ್ನ ಬಗೆ ಹರಿಯುವವರೆಗೂ
ಕಾದು ಕುಳಿತಿರ ಬೇಕು......
ಹಾಗೆ ಕುಳಿತಿರ ಬೇಕು.....

ಇದನ್ನು ಬರೆದ ಮೇಲೆ ಆಕಸ್ಮಿಕವಾಗಿ ಬ್ಲಾಗ್ ಓಪನ್ ಆಯ್ತು. ಆಗ ಬರೆದದ್ದು ನಾನಿದ್ದೆ ಆನೆಯಂತೆ. ಇದಾದ ಮೇಲೆ ಮತ್ತೆ ಉಲ್ಟಾ ಪಲ್ಟಾ! ಈಗ ಏನು ಹೇಳುತ್ತೇನೆ ಅಂದರೆ....

ಹಾಗೆ ಕುಳಿತಿರಲಾರೆ
ಏನಾದರು ಮಾಡ ಬೇಕು
ಏನೇನೋ ಇದೆ ಮಾಡಲು
ಹಾಗೆ ಮಾಡುತ್ತಿರಬೇಕು.

ಬಹಳ ದಿನಗಳೇ ಆದವು
ಎಂಟಕ್ಕೆ ಮನೆಗೆ ಹೋಗಿ
ಬ್ಲಾಗುಗಳಿಗೆ ಬ್ರೇಕು
ಈ ಕೆಲಸ ಸಾಕಪ್ಪಾ ಸಾಕು!

ಬಿಡುವಿಲ್ಲ ಕಚೇರಿಯಲ್ಲಿ
ಬಿಡುವಿಗೇ ವಿಘ್ನ!
ಸ್ಫೂರ್ತಿಯಿದ್ದರೂ ಮನದಲ್ಲಿ
ಕವನಗಳಿಗೆ ವಿಘ್ನ!

ಹಾಗಾಗಿ ತೀರ್ಮಾನ ಮಾಡಿಬಿಟ್ಟೆ... ಕಚೇರಿಯಲ್ಲಿ ಬಿಡುವು ಸಿಕ್ಕರೂ ಕವನಗಳನ್ನು ಬರೆಯೋದಿಲ್ಲ...