Wednesday, 22 July, 2009

ಗುಬ್ಬಿ ಮರಿ ಕಂಡೆನಮ್ಮ

ಅಂದು ಈ ರೀತಿ ಕೇಳಿದ್ದೆ,

"ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ....

ಪೂರ್ತಿ ಕವನ ಇಲ್ಲಿದೆ.

ಆದರೆ ಇಂದು (ತಿಂಗಳ ಹಿಂದೆ) ಮತ್ತೆ ಗುಬ್ಬಿ ಮರಿಯನ್ನು ಬೆಂಗಳೂರಿನಲ್ಲಿ ಕಂಡೆ! ಆ ಕ್ಷಣಕ್ಕೆ ನನಗಾದ ಆನಂದವನ್ನು ಕವನದ ಮೂಲಕ ಹೇಳಬೇಕೆಂದು, ಆ ಕವನದ ಧಾಟಿಯಲ್ಲೇ ಈ ಕವನವನ್ನು ಬರೆದೆ.

ಗುಬ್ಬಿ ಮರಿ ಕಂಡೆನಮ್ಮ
ಕಣ್ಣಿಗಿಂದು ಹಬ್ಬವಮ್ಮ
ನನ್ನ ನೋಡ ಬೇಕೆಂದು
ಮತ್ತೆ ಹಾರಿ ಬಂತೇನಮ್ಮ?

ನನ್ನ ಊಟ ಸುಲಭವಮ್ಮ
ನಿನ್ನ ಓಟ ನಿಲ್ಲಿಸಮ್ಮ
ಮನೆಯ ಅಂಗಳದಿ ಬಂದ
ಗುಬ್ಬಿ ಮರಿ ತೋರಿಸಮ್ಮ

ಆಟಿಕೆ ಗುಬ್ಬಿ ಏಕಮ್ಮ?
ಹಾರುವ ಗುಬ್ಬಿ ಇದೆಯಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂತಿಹ ಗುಬ್ಬಿ ತೋರಿಸಮ್ಮ

Saturday, 11 July, 2009

ಯಾವ ಚೆಲುವ ಬರುತ್ತಾನೋ..?

ಯಾವ ಚೆಲುವ ಬರುತ್ತಾನೋ
ಚೆಲುವೆಯ ನೋಡಲು?
ಯಾವ ಸುರನು ಬರುತ್ತಾನೋ
ದೇವತೆಯ ಪಡೆಯಲು?

ಎಲ್ಲೂ ಕಾಣದ ಮೂಗುತಿ ಸುಂದರಿ
ಇಲ್ಲೇ ಇಹಳು ಮೇನಕೆ ಸೋದರಿ!
ಕಣ್ಣ ಸನ್ನೆಯಲೆ ಮಾತು ಬೆಳೆಯಿತು
ತುಟಿಯು ಅದರುತ ಮುತ್ತ ಬಯಸಿತು!

ನಿನ್ನ ದನಿಕೇಳಲು
ಚಡಪಡಿಸಿತು ಅವನ ಕಿವಿ
ನಿನ್ನ ಕುರಿತು ಗೀಚುತ
ಅವನಾದನು ಕವಿ!