Showing posts with label ಕವನಗಳು. Show all posts
Showing posts with label ಕವನಗಳು. Show all posts

Saturday, 20 July 2013

ನಿನ್ನೊಳಗಿರಲು ನಾ ಯಾರೇ...?

ನೀರೊಳಗಿರಲು ನಾ ಮೀನೇ?
ಚಿಪ್ಪೊಳಗಿರಲು ನಾ ಮುತ್ತೇ?
ಗೂಡೊಳಗಿರಲು ನಾ ಜೇನೇ ?
ನಿನ್ನೊಳಗಿರಲು ನಾ ಯಾರೇ?

ಹೂವೊಳಗಿರಲು ನಾ ಕಂಪೇ?
ಹಣ್ಣೊಳಗಿರಲು ನಾ ರುಚಿಯೇ?
ಅದಿರೊಳಗಿರಲು ನಾ ಹೊನ್ನೇ?
ನಿನ್ನೊಳಗಿರಲು ನಾ ಯಾರೇ?

ಮುಗಿಲಲಿರಲು ನಾ ರವಿಯೇ?
ಜಯದೊಳಿರಲು ನಾ ನಗುವೇ?
ಭಂಡಾರದೊಳಿರಲು ನಾ ಸಿರಿಯೇ?
ನಿನ್ನೊಳಗಿರಲು ನಾ ಯಾರೇ?

Saturday, 31 March 2012

ಪಂಜರದಿಂದ ಪ್ರಪಂಚಕ್ಕೆ!

ಕುಳಿತಿದ್ದೆವು ನಾವು, ತಿಳಿಯದೆ ಅನ್ಯ ಪ್ರಪಂಚ
ಸಾಕಿದ್ದರು ನಮ್ಮ, ತೋರದೆ ಕರುಣೆ ಕೊಂಚ

ಕೋಮಲವಾದ ಕರಗಳಲ್ಲಿ ಸೇರಿದಾಗಲೂ ನಾವು
ತಿಳಿದಿದ್ದೆವೂ ಇನ್ನು ಮುಂದೂ ನಮಗೆ ಬೇವು

ಸಹೃದಯದ ಪೋರಿಗೆ ತಿಳಿಯಿತಾದರೂ ಹೇಗೆ
ಈ ಪ್ರಣಯ ಹಕ್ಕಿಗಳ ಪ್ರತಿದಿನದ ಬೇಗೆ?

ಉಡುಗೊರೆಯಾಗಿ ಕೊಡುತ್ತಾ ನಮ್ಮನ್ನು,
ಬಿಡುಗಡೆ ಮಾಡಿಸಿದಳು... ಪಂಜರದಿಂದ ಪ್ರಪಂಚಕ್ಕೆ!

Thursday, 22 March 2012

ದ್ವಿಜ ಉವಾಚ


ನನ್ನ ತಮ್ಮ ತೆಗೆದ ಈ ಅತ್ಯದ್ಭುತವಾದ ಛಾಯಾಚಿತ್ರಕ್ಕೆ  ನನ್ನ ಕವನ. 
 
 
 
ಹಕ್ಕಿ ತಾನು ಹಾರುವುದ ಮರೆತು
ಬಂದಿಲ್ಲಿ ಕುಳಿತಿದೆ
ತನಗೆ ತಿಳಿದ ಚಿಲಿಪಿಲಿಯ
ಹಾಡಲಿಲ್ಲಿ ಬಯಸಿದೆ

ರೆಕ್ಕೆಯುಂಟು ಹಾರಬಲ್ಲೆ
ಅಳೆಯ ಬಹುದು ಇಳೆಯನು
ಸಲ್ಲದು ನನಗದು;
ಸಾಗಬೇಕಿದೆ ಸತ್ಯದ ಕಡೆಗೆ!

ರವಿ,ಚಂದ್ರರ ನೋಡಬಲ್ಲೆ
ತಿಳಿಯುವುದು ಹಗಲಿರುಳು
ಒಲ್ಲೆ ಇರುಳ ಜೀವನ;
ಕಾಣ ಬಯಸುವೆ ಹಗಲನು

ಕಟ್ಟಿಗೆಯಿಂದ ಕಾಯವ ಸುಡುವರು
ತೆನೆಯು ತನುವ ಸಾಗಿಸುವುದು
ಮರಣದ ಚಿಂತೆಯಾಕೆ ?
ಮೃತ್ಯುವ ಮರೆತು ಜೀವಿಸೋಣ!

Tuesday, 7 February 2012

ವ(ಹ)ರ್ಷ ಕವನ

೨೦೧೨ರ ಹೊಸ ವರ್ಷವನ್ನು ನಾನು ಪುಟಾಣಿಗಳ (ದೀಪು, ರಶ್ಮಿ, ರಾಧಿಕ, ರಂಜಿತಾ, ಸಂಧ್ಯಾ) ಜೊತೆ ಆಚರಿಸಿದೆ. ಈ ಕುರಿತಾಗಿ ಬರೆದ ಕವನ.

ನೆನ್ನೆ  ಇತ್ತು ಆಚರಣೆ
ಬೆಳಗಿನವರೆಗೂ ಜಾಗರಣೆ !

ಸೇರಿದೆವು ಸಂಜೆ ಕೊಳದ ಬಳಿ
ಜೊತೆಯಾಯಿತು ತಂಗಾಳಿ
ಆಡಿದೆವಲ್ಲಿ ಹಲವಾರು ಆಟ
ಯಾರು ಕಳಿಸಿಕೊಟ್ಟರೋ ಸಮಯಕ್ಕೆ ಓಟ !

ಗಡಿಯಾರದ ಮುಳ್ಳಿಗೋ
ಗುರಿ ಮುಟ್ಟುವ ಕಾತರ
ಅಡುಗೆ ಮನೆಯ ಊಟವ
ಬಯಸಲಿಲ್ಲ ನಮ್ಮುದರ!

ಮಾತಿನರಮನೆಯೇ ನೆಲೆಸಿತ್ತಲ್ಲಿ
ಮೌನ ಮಂಕಾಯಿತು
ಭಾವನೆಗಳು ತುಂಬಿತ್ತಲ್ಲಿ
ಗಾನ ಲಾಸ್ಯ ಮೂಡಿತು

ಕೊರೆವ ಆ ಚಳಿಯಲ್ಲೂ  
ನಮಗೊಂದೇ ಆಸೆ, ಐಸ್ ಕ್ರೀಮು ತಿನ್ನಬೇಕೆಂದು
ನೆನೆಪಿಸಿ ಕೊಂಡರೆ ಈಗಲೂ
ನಮಗೊಂದೇ ಆಸೆ, ಹೊಸ ವರ್ಷ ಬರಬೇಕೆಂದು

ನೆನ್ನೆ  ಇತ್ತು ಆಚರಣೆ
ಹೊಸ ವರ್ಷಕೆ ಜಾಗರಣೆ!

Saturday, 3 December 2011

.......ನಿನ್ನ ಹೆಸರೇನೆ?

ದಿನಕ್ಕೊಮ್ಮೆ ನಾಕು ನಿಮಿಷ ನೋಡಿ
ದಿನವೆಲ್ಲ ನೆನೆವಂತೆ ಮಾಡಿದೆಯಲ್ಲೇ
ನಿನ್ನ ಹೆಸರೇನೆ?

ಕಲ್ಪನೆಗೂ ಮೀರಿದ ಚೆಲುವಿರಲು
ನಿನ್ನೆದುರು ನುಡಿಯದಂತೆ ಮಾಡಿದೆಯಲ್ಲೇ
ನಿನ್ನ ಹೆಸರೇನೆ?

ನಿನ್ನ ಮೊಗದಿಂದ, ನಗುವಿನಿಂದ
ಚಂದಿರನ ನೆನೆಯದಂತೆ ಮಾಡಿದೆಯಲ್ಲೇ      
ನಿನ್ನ ಹೆಸರೇನೆ?

ಚೊಚ್ಚಲ ನೋಟದಲ್ಲೇ ನನ್ನೆದೆಗೆ
ಪ್ರೇಮ ಬಾಣ ಚುಚ್ಚಿದೆಯಲ್ಲೇ
ನಿನ್ನ ಹೆಸರೇನೆ?
 

Thursday, 29 October 2009

ಸವಿತ

ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ
ಕಾರ್ಮೋಡಗಳ ಹೊದಿಕೆಯ ಪಕ್ಕಕೆ ಸರಿಸುತ
ಕೋಗಿಲೆಗಳ ಕಂಠದಿ ಸುಪ್ರಭಾತವ ಹಾಡಿಸುತ
ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ

ಎಲೆಗಳ ಮೇಲಿನ ಹನಿಗಳ ಕಣ್ಣಿಗೆ ಎರಚುತ
ಅರಳಿದ ಹೂಗಳು ಕಂಪನು ಬೀರುತ
ಹಾರುವ ಹಕ್ಕಿಯ ಸಾಲಿನ ಮೆರವಣಿಗೆಯಿಂದ
ಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನ

ಆಗಸದಿ ತುಂಬಿಹ ಇಬ್ಬನಿ ಹಾಸು
ಇರುಳೆಂಬ ಭ್ರಮೆಯ ನೀಡುತಿದೆ!
ಗಂಟೆ ಏಳಾದರೂ ನೀ ಏಳ ಬಾರದೆ?
ಇರುಳನ್ನು ನೂಕಿ, ಬೆಳಕ ನೀಡ ಬಾರದೆ?

[ನಮಗಿಂತ ಬೇಗ ಏಳ ಬೇಕಾದ ಸೂರ್ಯ, ಆಲಸ್ಯದಿಂದ ಮಲಗಿದರೆ, ಈ ರೀತಿ ಪ್ರಾರ್ಥನೆ ಮಾಡ ಬಹುದಲ್ವಾ? ]

Tuesday, 13 October 2009

ದುಡ್ಡಿನ ಗಿಡ

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು

ಚಿಕ್ಕ ವಯಸ್ನಲ್ ಅಮ್ಮ ಹೇಳಿದ್ನ
ಹಾಸ್ಯ ಅಂತ ತಿಳ್ಕೊಂಡಿದ್ದೆ
ದುಡ್ಡೂ ಕೂಡ ಹಾಳೆಯಂತೆ! ಬೆಲ್ಲೆಯಂತೆ!
ಹೇಗೆ ಬೆಳೆಸೋದ್ ಅಂದ್ಕೊಂಡಿದ್ದೆ

ವಸುಂಧರೆ ತಾಯಿ ನೀನು
ಬೀಜ ಹಾಕಿದ್ರೆ ಮರ ಮಾಡ್ತಿ
ನಾಣ್ಯವೊಂದ ಬಿತ್ತುತ್ತೀನಿ
ದುಡ್ಡಿನ ಗಿಡ ಮಾಡ್ತೀಯಾ?

ಜೀವಕ್ ಬೇಕಾದ್ ಅನ್ನ, ನೀರು
ಎಲ್ಲಾ ನೀನೆ ಕೊಡ್ತೀಯಾ
ಜೀವನ ಸಾಗಿಸೋಕ್ ಬೇಕೀ ದುಡ್ಡು
ಇನ್ನೂ ಯಾಕೆ ಕೊಟ್ಟಿಲ್ಲ?

ನಾಣ್ಯಕ್ ಜೀವ ಕೊಟ್ಟು ನೋಡು
ಬಿತ್ತಿ ಪ್ರಯತ್ನ ಮಾಡ್ತೀನಿ!
ದುಡ್ಡಿನ ಗಿಡ ಬಂದ್ರೆ ಸಾಕು
ಬಡವರ ಸಮಸ್ಯೆ ಪರಿಹರಿಸ್ತೀನಿ.

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು.

Friday, 2 October 2009

ನಿನಗಾಗಿ...

ನಿನ್ನ ಮರೆತಿಹ ಚಣಗಳೆಲ್ಲಿದೆ
ನಿನ್ನ ನೆನೆಯದ ದಿನಗಳೆಲ್ಲಿದೆ
ನೀನು ನನ್ನೊಳಗಿರುವ ಸತ್ಯವ ನಾನು ಮರೆತಿಲ್ಲ
ನನ್ನ ಮೊಗದಲಿ ನಗುವ ತರಿಸುವೆ
ನನ್ನ ನಯನದಿ ಬಿಂದು ಸುರಿಸುವೆ
ನನ್ನ ಕಂಬನಿ ಒರೆಸುವ ನಿನ್ನ ಹೇಗೆ ಮರೆಯಲಿ ನಾ

[ಇದನ್ನು ಯಾರ ಕುರಿತಾಗಿ ಬರೆದಿದ್ದೇನೆಂದು ಬಿಡಿಸಿ ಹೇಳ ಬೇಕಿಲ್ಲ ಅನಿಸುತ್ತೆ. ಮತ್ತೊಂದು ಭಾಮಿನೀ ಷಟ್ಪದಿಯ ಪ್ರಯತ್ನ]

Friday, 14 August 2009

ಯಾರೆ ನೀನು ಚೆಲುವೆ...?

ನೆನೆಯುವೆ ಮಳೆಯಲಿ
ನಿನ್ನ ಜೊತೆಯಲಿ
ಅಂತರಂಗದ ಮಾತುಗಳ
ಮೌನ ಸಂಭಾಷಣೆಯಲಿ!

ಮಳೆಯಿಂದ ನೀ ನೆನೆದು
ಮೈದುಂಬಿ ಬರುವಾಗ
ತೆರೆದ ಕಂಗಳಲಿ ನಿಂದೆ
ನಿನ್ನ ಪಾದದಡಿಯಲಿ

ಮಂಜಿನೂರಿನಲ್ಲಿ ಜನನ
ಕೊರೆಯುವಂತ ದೇಹ ರಚನ!
ಮತ್ತೆ ನೋಡ ಬಯಸುವೆ
ಸೌಂದರ್ಯವತಿ ನಿನ್ನ!

--
ಈ ಸೌಂದರ್ಯವತಿ ಯಾರು ಅಂತ ನಿಮಗೆ ಗೊತ್ತಿದ್ದಲ್ಲಿ ತಿಳಿಸಿ. ಸರಿಯಾದ ಉತ್ತರಕ್ಕೆ ಬಹುಮಾನ ಖಚಿತ! ಒಂದು ಸುಳಿವು ಕೊಡುತ್ತೀನಿ. ಕೊನೆ ಚರಣದ ಮೊದಲೆರಡು ಸಾಲುಗಳನ್ನು ಹಲವು ಬಾರಿ ಓದಿದರೆ ಏನಾದರೂ ಹೊಳಿಯಬಹುದು.

Wednesday, 22 July 2009

ಗುಬ್ಬಿ ಮರಿ ಕಂಡೆನಮ್ಮ

ಅಂದು ಈ ರೀತಿ ಕೇಳಿದ್ದೆ,

"ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ....

ಪೂರ್ತಿ ಕವನ ಇಲ್ಲಿದೆ.

ಆದರೆ ಇಂದು (ತಿಂಗಳ ಹಿಂದೆ) ಮತ್ತೆ ಗುಬ್ಬಿ ಮರಿಯನ್ನು ಬೆಂಗಳೂರಿನಲ್ಲಿ ಕಂಡೆ! ಆ ಕ್ಷಣಕ್ಕೆ ನನಗಾದ ಆನಂದವನ್ನು ಕವನದ ಮೂಲಕ ಹೇಳಬೇಕೆಂದು, ಆ ಕವನದ ಧಾಟಿಯಲ್ಲೇ ಈ ಕವನವನ್ನು ಬರೆದೆ.

ಗುಬ್ಬಿ ಮರಿ ಕಂಡೆನಮ್ಮ
ಕಣ್ಣಿಗಿಂದು ಹಬ್ಬವಮ್ಮ
ನನ್ನ ನೋಡ ಬೇಕೆಂದು
ಮತ್ತೆ ಹಾರಿ ಬಂತೇನಮ್ಮ?

ನನ್ನ ಊಟ ಸುಲಭವಮ್ಮ
ನಿನ್ನ ಓಟ ನಿಲ್ಲಿಸಮ್ಮ
ಮನೆಯ ಅಂಗಳದಿ ಬಂದ
ಗುಬ್ಬಿ ಮರಿ ತೋರಿಸಮ್ಮ

ಆಟಿಕೆ ಗುಬ್ಬಿ ಏಕಮ್ಮ?
ಹಾರುವ ಗುಬ್ಬಿ ಇದೆಯಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂತಿಹ ಗುಬ್ಬಿ ತೋರಿಸಮ್ಮ

Saturday, 11 July 2009

ಯಾವ ಚೆಲುವ ಬರುತ್ತಾನೋ..?

ಯಾವ ಚೆಲುವ ಬರುತ್ತಾನೋ
ಚೆಲುವೆಯ ನೋಡಲು?
ಯಾವ ಸುರನು ಬರುತ್ತಾನೋ
ದೇವತೆಯ ಪಡೆಯಲು?

ಎಲ್ಲೂ ಕಾಣದ ಮೂಗುತಿ ಸುಂದರಿ
ಇಲ್ಲೇ ಇಹಳು ಮೇನಕೆ ಸೋದರಿ!
ಕಣ್ಣ ಸನ್ನೆಯಲೆ ಮಾತು ಬೆಳೆಯಿತು
ತುಟಿಯು ಅದರುತ ಮುತ್ತ ಬಯಸಿತು!

ನಿನ್ನ ದನಿಕೇಳಲು
ಚಡಪಡಿಸಿತು ಅವನ ಕಿವಿ
ನಿನ್ನ ಕುರಿತು ಗೀಚುತ
ಅವನಾದನು ಕವಿ!

Friday, 26 June 2009

ಅಗ್ರಜಾನುಭವ - ೩

ಜ್ಞಾನದ ಶಾಯಿ ಲೇಖನಿಯೊಳಿರಲು
ಹೊಮ್ಮುವುದು ಲೇಖನವು
ಜ್ಞಾನದ ಶಾಯಿ ಬರಿದಾದ ಮೇಲೆ
ಹೊಮ್ಮದು ಒಂದಕ್ಷರವೂ - ಅಗ್ರಜ

Friday, 5 June 2009

ಹೂವಿನಂತೆ ಬಾಳು

ಈದಿನ ನನಗೆ ತುಂಬಾ ಬೇಕಾದಳ ಹುಟ್ಟು ಹಬ್ಬ. ಕಳೆದ ಎರಡು ವರ್ಷದಿಂದ ಈ ದಿನ ಅವಳಿಗೆ ಉಡುಗೊರೆ ಕೊಡುತ್ತಾ ಬಂದಿದ್ದೀನಿ. ಈ ಬಾರಿಯ ಉಡುಗೊರೆ ಸ್ವೀಕರಿಸೇ....
--
ಹೂವಿನಂತೆ ಬಾಳು
ಕಂಪನ್ನು ಎಲ್ಲೆಡೆ ಬೀರುತ
ಬಾಡಿದ ಹೂ ಕಸದ ಪಾಲು
ಬಾಡದ ಹೂ ದೇವರ ಪಾಲು

ಚೆಲುವಿರಲಿ ನೋಟಕೆ
ಪರಿಮಳವಿರಲಿ ಆಕರ್ಷಣೆಗೆ
ಮುಳ್ಳಿರಲಿ ನಿನ್ನ ರಕ್ಷಣೆಗೆ
ಮಕರಂದವಿರಲಿ ಸದುದ್ದೇಶಕೆ

ಮುಡಿಯಲು ಬೇಕು ಹೂ
ಮಡಿದಾಗಲೂ ಬೇಕು ಹೂ
ಎಲ್ಲರ ಪಾಲಿಗು ಹೂವಾಗು
ಎಲ್ಲರ ಪಾಲಿಗು ಬೇಕಾಗು

Friday, 29 May 2009

ಪೆದ್ದ ನಾನು..

ಹಾರುವ ಹಕ್ಕಿಯ ಹಿಡಿಯಲು ಹೋದ ಪೆದ್ದ ನಾನು
ಬಾನಿನ ಚುಕ್ಕಿಯ ಎಣಿಸಲು ಹೋದ ಪೆದ್ದ ನಾನು
ಮೋಡದಿ ಮಹಲನು ಕಟ್ಟಲು ಹೋದ ಪೆದ್ದ ನಾನು
ಏರುವ ಅಲೆಗಳ ಅಳೆಯಲು ಹೋದ ಪೆದ್ದ ನಾನು

ಹೂವಿನ ಪರಿಮಳ ಮೂಸದೆ ಹೋದ ಪೆದ್ದ ನಾನು
ಬಣ್ಣದ ಚಿತ್ತಾರವ ಅಳಿಸಲು ಹೋದ ಪೆದ್ದ ನಾನು
ಬಿಟ್ಟ ಶರವ ಹಿಂದೆ ತರಲು ಹೋದ ಪೆದ್ದ ನಾನು
ಕೊಟ್ಟ ಜೇನನು ಸವಿಯದೇ ಹೋದ ಪೆದ್ದ ನಾನು

Wednesday, 6 May 2009

ಹಕ್ಕಿ ಹಾರ ಬಯಸಿದೆ...

ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ

ಹಕ್ಕಿಗಳದೊಂದು ಪುಟ್ಟ ಸಂಸಾರ
ಸಂಬಂಧಗಳು ಸೇರಿದಾಗದು ಸಾಗರ

ಮರವೊಂದ ಹುಡುಕಿತು ಗೂಡು ಕಟ್ಟಲು
ಉಳಿದ ಹಕ್ಕಿಗಳು ಬಂದು ಬೆನ್ನ ತಟ್ಟಲು

ಬಲವಿಲ್ಲದ ರೆಕ್ಕೆಗಳಿರೆ ಹಾರಲಸಾಧ್ಯ
ಬಲ ತುಂಬುವ ಹಕ್ಕಿಗಳಿರಲದು ಸಾಧ್ಯ

ಕಟ್ಟಾಯಿತು ಹಕ್ಕಿಗೊಂದು ಗೂಡು
ಎಷ್ಟು ಚೆಂದವಿದೆ ಅದು ನೀನೆ ನೋಡು

ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ

Saturday, 25 April 2009

ಹುಟ್ಟು - ಸಾವು

ಹುಟ್ಟಿನಲ್ಲಿ ಸಂತಸ
ಸಾವಿನಲ್ಲಿ ಶೋಕ
ಹೋಯಿತೊಂದು ಜೀವ
ಬಿಟ್ಟು ಈ ಲೋಕ

ಹುಟ್ಟಿನಲ್ಲಿ ಆನಂದ
ಸಾವಿನಲ್ಲಿ ಕಂಬನಿ
ನನ್ನ ಪ್ರೀತಿಸಿದ ಜೀವ
ಬಿಟ್ಟು ಹೋಯಿತು ಧರಣಿ

ಹುಟ್ಟಿನಲ್ಲಿ ಸಂಭ್ರಮ
ಸಾವಿನಲ್ಲಿ ಸಂಕಟ
ನಾ ಪ್ರೀತಿಸಿದ ಜೀವಕೆ
ಮುಂದಿಲ್ಲ ಲೋಕದ ಜಂಜಾಟ

---
ಬದುಕಿದ್ದಿದ್ದರೆ ೭೯ ವರ್ಷವಾಗಿರೋದು..
ಈಗ ೩ ತಿಂಗಳಾಗಿದೆ..

Friday, 10 April 2009

ಮನ ಮೆಚ್ಚಿದ...

ಆಕಸ್ಮಿಕದಿ ಸಿಕ್ಕ ಈ ಪೋರ
ಆ ದೇವರು ಕೊಟ್ಟ ವರ!
ಆಗಂತುಕನೆನೆಸಿದರೂ
ಆತ್ಮೀಯನಾದ ಚೋರ!

ಸ್ನೇಹಕ್ಕೊಪ್ಪಿಗೆ ನೀಡಿದೆ
ಸ್ನೇಹಕೂಪವ ನೋಡಿದೆ
ಮನವು ಮೆಚ್ಚಿದ ಮಿತ್ರನಿವನೆ
ಎಂದು ನಾನು ಹಿಗ್ಗಿದೆ!

ಅಭಿರುಚಿಯು ಒಂದಾಗಿದೆ
ಅಭಿಮಾನವು ಹೆಚ್ಚಾಗಿದೆ
ಜೀವನದಂತ್ಯದವರೆಗೂ
ಇವನ ಸ್ನೇಹ ಬೇಕಾಗಿದೆ!

ಅಣ್ಣನಾದ ನನಗೆ
ತಮ್ಮನಾದೆ ಅವನಿಗೆ
ವಂದಿಸುವೆ ಆ ವಿಧಿಗೆ
ವಂದಿಸುವೆ ಈ ನಿಧಿಗೆ!

Friday, 3 April 2009

ಅಲ್ಲೋ..? ಇಲ್ಲೋ..??

ಅಲ್ಲಿ ನೋಡಲೋ? ಇಲ್ಲಿ ನೋಡಲೋ?
ಚಂದಿರನಲ್ಲಿ, ಚಂದ್ರಮುಖಿಯಿಲ್ಲಿ!
ಭಾವನೆ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!

ಅಲ್ಲಿ ನೋಡಲೋ? ಇಲ್ಲಿ ನೋಡಲೋ?
ಜಲಪಾತವಲ್ಲಿ, ಕಪ್ಪು ಝರಿಯಿಲ್ಲಿ!
ಕಣ್ಣ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!

ಅದ ಸವಿಯಲೋ? ಇದ ಸವಿಯಲೋ?
ಜೇನು ಅಲ್ಲಿ, ಗುಲಾಬಿ ತುಟಿಯಿಲ್ಲಿ
ತುಟಿಯ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!

ಅಲ್ಲಿ ಕೇಳಲೋ? ಇಲ್ಲಿ ಕೇಳಲೋ?
ಕೋಗಿಲೆಯು ಅಲ್ಲಿ, ಇಂಪಾದ ದನಿಯಿಲ್ಲಿ
ಕಿವಿಯ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ

ಅದ ಬಯಸಲೋ? ಇದ ಬಯಸಲೋ?
ಗೊಂದಲ ನನ್ನದು
ಅದನ್ನು ಬಯಸುತಾ, ಇದನ್ನೂ ಬಯಸುವ
ಹಂಬಲ ನನ್ನದು

Monday, 23 March 2009

ಗುಬ್ಬಿ ಮರಿ ಎಲ್ಲಮ್ಮ?

ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ
ನನ್ನ ಸಂಗ ಬೇಡವೆಂದು
ತೊರೆದು ಹೋಯಿತೇನಮ್ಮ?

ಕಾಗೆಗೆ ಗೆಳೆಯನಿಲ್ಲಮ್ಮ
ಕಾಳನು ತಿನ್ನುವರಿಲ್ಲಮ್ಮ
ಏಕೆ ಹೀಗಾಯಿತೆಂದು
ಒಮ್ಮೆ ನನಗೆ ಹೇಳಮ್ಮ

ಆಟಿಕೆ ಗುಬ್ಬಿ ಬೇಡಮ್ಮ
ಹಾರುವ ಗುಬ್ಬಿ ತೋರಿಸಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂರುವ ಗುಬ್ಬಿ ಬೇಕಮ್ಮ

Friday, 6 February 2009

ಮೊದಲ ಭಾಮಿನಿ

ಬಾಳ ದೋಣಿಯ ಅಂಬಿಗ ಶ್ರೀ ಹರೀಶ್, ಭಾಮಿನಿ ಷಟ್ಪದಿಯಲ್ಲೊಂದು ಕವನ ರಚಿಸುವಂತೆ ಹುಳ ಬಿಟ್ಟು, ಭಾಮಿನಿಯ ಕುರಿತು ಮಾಹಿತಿ ಕೊಟ್ಟು, ಈ ಕೆಲಸಕ್ಕೆ ಕೈ ಹಾಕುವಂತೆ ಮಾಡಿದ್ದಕ್ಕೆ ವಂದನೆಗಳನ್ನು ಹೇಳುತ್ತೇನೆ.

ಸದ್ಯದ ನನ್ನ ಪರಿಸ್ಥಿತಿಯನ್ನು ಭಾಮಿನಿಯಲ್ಲೇ ಹೇಳುತ್ತಾಯಿದ್ದೀನಿ.


ಮನದಿ ಭಾಮಿನಿಯ ಆಸೆಯಿಟ್ಟ
ಬಾನ ನೋಡುತ ಯೋಚಿಸಿದೆ ನಾ
ಜೇನಿನ ನುಡಿಗಳು ಸಿಗುವ ಕಾಯಕ ನಡೆದಿದೆ ಈಗ
ಕಾನನದಿ, ಪರಿಸರದಿ ಹುಡುಕಿಹೆ
ಅನವರತ ಮನಸನ್ನು ಕೆದಕಿಹೆ
ನನಗೆ ತಿಳಿಯದ ಶಕ್ತಿ ಬರೆಸಿಹ ಮೊದಲ ಕವನವಿದು