Sunday 13 December, 2009

ಫಿನ್ ಲ್ಯಾಂಡಿಗೆ ಪ್ರವಾಸ(೩) - ಆಫೀಸು..ಅಲ್ಲಿಂದ ಅಪಾರ್ಟ್ಮೆಂಟ್ಟು

[ ಮೊದಲನೆ ಭಾಗ ಇಲ್ಲಿದೆ ]

ನನ್ನೆಲ್ಲಾ ಲಗ್ಗೇಜಿನೊಂದಿಗೆ, ಬಸ್ ನಿಲ್ದಾಣದ ಹತ್ತಿರದಲ್ಲೇ ಇದ್ದ ನಮ್ಮ ಕಚೇರಿಗೆ  ಹೋದೆ. ಸಾಮಿ ನನ್ನ ಸ್ವಾಗತಿಸಿದರು. ನನ್ನ  ಲಗ್ಗೇಜುಗಳನ್ನು ಸೂಕ್ತ ಸ್ಥಳದಲ್ಲಿಟ್ಟು ಸಾಮಿಯನ್ನೂ ಮಾತಾಡಿಸುತ್ತಿದ್ದೆ. ಅವರೊಂದಿಗೆ ಇತರ ಸಹೋದ್ಯೋಗಿಗಳು ನನ್ನ ವಿಚಾರಿಸಿಕೊಂಡರು. ಮೀಟಿಂಗ್ ಮುಗಿಸಿ ಯಾರ್ಕ್ಕೊ ಬಂದರು. ಅವರ ಜೊತೆ ಕಾಫಿ ಹಾಗು ಸಲ್ಲಾಪವಾದ ಮೇಲೆ ನನ್ನ
ಕೆಲಸಗಳ ಕಡೆ ಗಮನ ಕೊಟ್ಟೆ. ಯಾರ್ಕ್ಕೋ ಅವರು ಹೊಸ ಮ್ಯಾನೇಜರ್ ನ ಪರಿಚಯಿಸಿದರು. ಆಗ ತಿಳಿಯಿತು ನನಗೆ ಯಾರ್ಕ್ಕೋ ರಾಜಿನಾಮೆ ಕೊಟ್ಟಿದ್ದಾರೆ ಎಂದು. ಆ ಹೊಸ ಮ್ಯಾನೇಜರ್ ಹೆಸರು ಯುಕ್ಕಾ.(Jukka). 

ಧೂಮಪಾನ ಮುಗಿಸಿ ಬಂದ ಕ್ರಿಸ್ಟಾ "ಜಯ್! ನಿನ್ನ ಅಪಾರ್ಟ್ಮೆಂಟ್ ಸಿದ್ಧವಿದೆ. ಸಂಜೆ ೪ಕ್ಕೆ ಒಬ್ಬ ವ್ಯಕ್ತಿ ಬಂದು ನಿನ್ನ ಕರೆದುಕೊಂಡು ಹೋಗುತ್ತಾನೆ" ಎಂದಳು. ನಾನು ತಾಂಪರೆ ಸೇರಿದ ವಿಷಯವನ್ನು ಅಮ್ಮನಿಗೆ ವಿ-ಅಂಚೆ ಮೂಲಕ ಸಂದೇಶ ಕಳುಹಿಸಿದೆ. ಸ್ವಲ್ಪ ಹೊತ್ತಿನಲ್ಲೆ ಅಮ್ಮನೂ ಸಹ ಚಾಟಿಗಿಳಿದರು. ಸ್ವಲ್ಪ ಹೊತ್ತಿನಲ್ಲೆ ಎಲ್ಲರೂ ಊಟಕ್ಕೆ ಹೊರಟರು. ನನಗೆ ಹಸಿವಿರಲಿಲ್ಲ.ಅಮ್ಮನೊಂದಿಗೆ ಸ್ವಲ್ಪ ಹೊತ್ತು ಚಾಟಿಸಿ, ತಂದಿದ್ದ MTR ತಿನಿಸನ್ನು ಬಿಸಿ ಮಾಡಿ ಊಟ ಮುಗಿಸಿದೆ.

ಕಳೆದ ಬಾರಿ ನಾನು ಇಲ್ಲಿದ್ದಾಗ ಆಡುತ್ತಿದ್ದ Darts ಮತ್ತೆ ಶುರುಮಾಡಿದೆ. ತೆರೋ, ಕಾರಿ, ಕ್ರಿಶ್ಟಾ, ಸಾಮಿ ಕೂಡ ಸೇರಿದರು. ಅಂದು ಶುಕ್ರವಾಗಿದ್ದರಿಂದ ಪ್ರತಿಯೊಬ್ಬರೂ ಬೇಗ ಹೊರಡಲು ಸಿದ್ಧವಾಗಿದ್ದರು. ಕ್ರಿಸ್ಟಾ ಬೇಗನೆ ಹೊರಟಳು. ತೆರೋ ನನ್ನೊಟ್ಟಿಗೆ ಟ್ಯಾಕ್ಸಿಯವರು ಬರುವವರೆಗೂ ಇದ್ದು, ಮಾತಾಡಿಸುತ್ತಿದ್ದರು. ನನ್ನ ಒಂದು Suitcase ಸ್ವತಃ ಅವರೇ ತೆಗೆದು ಕೊಂಡು ಹೊರಗಡೆಗೆ ತಂದರು. ಟ್ಯಾಕ್ಸಿ ಬಂದ ಕೂಡಲೇ ತೆರೋಗೆ ಟಾಟಾ ಮಾಡಿ, ಟ್ಯಾಕ್ಸಿ ಏರಿದೆ.

ಅಪಾರ್ಟ್ಮೆಂಟ್ ಎಷ್ಟು ದೂರ ? ಎಲ್ಲಿದೆ ಹೀಗೆಲ್ಲಾ ಪ್ರಶ್ನೆಗಳೊಂದಿಗೆ ಚಾಲಕನೊಂದಿಗೆ ಮಾತಿಗಿಳಿದೆ. ೪-೫ ನಿಮಿಷ ಆಗುವುದರೊಳಗೆ ಅಪಾರ್ಟ್ಮೆಂಟ್ ಸಿಕ್ಕಿತು. ಅವರು ನನಗೆ ಅಪಾರ್ಟ್ಮೆಂಟಿನ ವ್ಯವಸ್ಥೆಯಲ್ಲ ತೋರಿಸಿ, ಟಿ.ವಿಯನ್ನು ತಂದಿಟ್ಟು, ಇದಕ್ಕೆ connection ಸೋಮವಾರ ಸಿಗುತ್ತೆ ಅಂತ ಹೇಳಿದ.

ಅವನು ಹೊರಟ ಕೂಡಲೆ, Fresh ಆಗಿ ಬಂದು, ಸಿಹಿ ತಿನಿಸುಗಳನ್ನು Fridge ಒಳಗೆ ಇಡದೇ ಮೊದಲು ಕೆಲವನ್ನು ಹೊಟ್ಟೆಯ ಒಳಗೆ ಇಟ್ಟೆ. ಆಮೇಲೆ, ಹಾಗೆ ವಾಯುವಿಹಾರಕ್ಕೆ ಹೊರಗಡೆ ಹೋದೆ. ಹೇಳಿ ಕೇಳಿ ಫಿನ್ ಲ್ಯಾಂಡು ಸರೋವರಗಳ ದೇಶ. ನಮ್ಮ ಅಪಾರ್ಟ್ಮೆಂಟಿನ ಎದುರುಗಡೆಯೇ ಒಂದು ಚಿಕ್ಕ ಸರೋವರವಿತ್ತು. ಅದನ್ನು ವೀಕ್ಷಿಸುತ್ತಿದೆ. ನನಗರಿವಿಲ್ಲದಂತೆಯೇ ನನ್ನ ಕೈಗಳು ಪ್ರಕೃತಿಯ ಸೊಬಗನ್ನು ಸೆರೆ ಹಿಡಿಯುತ್ತಿತ್ತು. ಆ ಪ್ರಕೃತಿಯಲ್ಲಿ ನಾನೂ ಒಬ್ಬನಾಗಿದ್ದರಿಂದ ನನ್ನನ್ನೂ ಸರೆ ಹಿಡಿಯುತ್ತಿತ್ತು. ನಮ್ಮ ಅಪಾರ್ಟ್ಮೆಂಟಿನಿಂದ ೧೦ ಹೆಚ್ಚೆಗಳಿಗೆ ಒಂದು ಬಸ್ ನಿಲ್ದಾಣವಿತ್ತು. ಅಲ್ಲಿ ಆ ಜಾಗದ ಹೆಸರು ಬರೆದಿದ್ದು. ಅದರ ಹೆಸರು "Kuoppamäentie 28". ಈ ಹೆಸರ ರೆತು ಹೋಗ ಬಾರದೆಂದು ಚೀಟಿಯಲ್ಲಿ ಬರೆದು ನನ್ನ ವ್ಯಾಲೆಟ್ಟಿನೊಳಗಡೆ ಇಟ್ಟೆ . ಅಕಸ್ಮಾತ್ ದಾರಿ ತಪ್ಪಿದರೂ ಇದು ನನ್ನ ಸಹಾಯಕ್ಕಿರಲಿ ಅಂತ.

 

ನಂತರ ನನ್ನ ರೂಮಿಗೆ ಬಂದು, ಟೇಬಲ್ ಮೇಲಿದ್ದ ಒಂದು ಪುಟ್ಟ ಪುಸ್ತಕ ಕಂಡೆ. ಕುತೂಹಲದಿಂದ ಯಾವುದಿರ ಬಹುದು ಎಂದು ನೋಡಿದಾಗ ಗೊತ್ತಾಯಿತು, ಅದು ಬಸ್ಸಿನ ವೇಳಾ ಪಟ್ಟಿ ಅಂತ. ನನಗಿಂತ ಹಿಂದೆ ಇದ್ದವರು ಯಾರೋ ಬಿಟ್ಟಿರ ಬಹುದು ಅಥವಾ ಈ ಅಪಾರ್ಟ್ಮೆಂಟಿನವರೇ ಇಟ್ಟಿರಬಹುದು. ಇದರಿಂದ ನನ್ನ ನಿಲ್ದಾಣಕ್ಕೆ ಯಾವ ಬಸ್ ಬರುತ್ತದೆಂದು ಹುಡುಕಿದೆ. ಆ ಬಸ್ಸಿನ ಸಂಖ್ಯೆ ೧೫.  ಅಲ್ಲಿಯ ವೇಳಾ ಪಟ್ಟಿಯಲ್ಲಿದ್ದ ಅಂಶವೆಂದರೆ, ಸೋಮವಾರದಿಂದ ಶುಕ್ರವಾರಕ್ಕೆ ಒಂದು ವೇಳಾ ಪಟ್ಟಿ, ಶನಿವಾರಕ್ಕೊಂದು ಹಾಗು ಭಾನುವಾರಕ್ಕೊಂದು! ನನ್ನ ಆಫೀಸಿಗೆ ಹೋಗುವುದಕ್ಕೆ ಯಾವುದು ಸೂಕ್ತ ಅಂತ ನೋಡುತ್ತಿದ್ದೆ. ನನ್ನ ನಿಲ್ದಾಣಕ್ಕೆ ಬಸ್ ಬರುವ ಹೊತ್ತು ಈ ರೀತಿಯಿತ್ತು. ೮:೫೨, ೯:೦೨, ೯:೧೨ ಹೀಗೆ, ೧೦ ನಿಮಿಷಕ್ಕೊಂದರಂತೆ ಬಸ್ ಸಂಚಾರವಿತ್ತು. ಶನಿವಾರದಂದು ೨೦ ನಿಮಿಷಕ್ಕೊಂದು ಬಸ್ ಆದರೆ ಬಾನುವಾರ ೩೦ ನಿಮಿಷಕ್ಕೊಂದು!  ಇದನ್ನೆಲ್ಲಾ ಓದುತ್ತಾ ಆಚೆ ನೋಡಿದರೆ ಬಸ್ಸೊಂದು ಬರುತ್ತಿತ್ತು. ಅದೂ ಸರಿಯಾದ ಸಮಯಕ್ಕೆ! ಟಿಕೆಟಿನ ಮೂಲಕ ಹೋಗುವುದಾದರೆ ಒಮ್ಮೆ ಬಸ್ ಹತ್ತಿದರೆ ೨ ಯೂರೋ. ಆ ಟಿಕೆಟಿನ ಅವಧಿ ೧.೩೦ ಗಂಟೆ. ಅಲ್ಲಿ "Bus Pass"ನ ವ್ಯವಸ್ಥೆ ಕೂಡ ಇತ್ತು. ಸರಿ ನಾಳೆಯ ಮೊದಲ ಕೆಲಸ ಈ ಪಾಸ್ ಮಾಡಿಸ ಬೇಕು ಅಂತ ತೀರ್ಮಾನ ಮಾಡಿದೆ. ತಾಂಪರೆಯ ನಕ್ಷೆ ನೋಡುತ್ತಾ, ಯಾವ ಜಾಗ ನೋಡಬಹುದು ಎಂದು ನೋಡುತ್ತಿದ್ದೆ. ಹೊಟ್ಟೆ ಹಸಿವಾಗಿ, MTR ತಿಂದು ಮಲಗಿದೆ.