Saturday, 25 April 2009

ಹುಟ್ಟು - ಸಾವು

ಹುಟ್ಟಿನಲ್ಲಿ ಸಂತಸ
ಸಾವಿನಲ್ಲಿ ಶೋಕ
ಹೋಯಿತೊಂದು ಜೀವ
ಬಿಟ್ಟು ಈ ಲೋಕ

ಹುಟ್ಟಿನಲ್ಲಿ ಆನಂದ
ಸಾವಿನಲ್ಲಿ ಕಂಬನಿ
ನನ್ನ ಪ್ರೀತಿಸಿದ ಜೀವ
ಬಿಟ್ಟು ಹೋಯಿತು ಧರಣಿ

ಹುಟ್ಟಿನಲ್ಲಿ ಸಂಭ್ರಮ
ಸಾವಿನಲ್ಲಿ ಸಂಕಟ
ನಾ ಪ್ರೀತಿಸಿದ ಜೀವಕೆ
ಮುಂದಿಲ್ಲ ಲೋಕದ ಜಂಜಾಟ

---
ಬದುಕಿದ್ದಿದ್ದರೆ ೭೯ ವರ್ಷವಾಗಿರೋದು..
ಈಗ ೩ ತಿಂಗಳಾಗಿದೆ..

Friday, 10 April 2009

ಮನ ಮೆಚ್ಚಿದ...

ಆಕಸ್ಮಿಕದಿ ಸಿಕ್ಕ ಈ ಪೋರ
ಆ ದೇವರು ಕೊಟ್ಟ ವರ!
ಆಗಂತುಕನೆನೆಸಿದರೂ
ಆತ್ಮೀಯನಾದ ಚೋರ!

ಸ್ನೇಹಕ್ಕೊಪ್ಪಿಗೆ ನೀಡಿದೆ
ಸ್ನೇಹಕೂಪವ ನೋಡಿದೆ
ಮನವು ಮೆಚ್ಚಿದ ಮಿತ್ರನಿವನೆ
ಎಂದು ನಾನು ಹಿಗ್ಗಿದೆ!

ಅಭಿರುಚಿಯು ಒಂದಾಗಿದೆ
ಅಭಿಮಾನವು ಹೆಚ್ಚಾಗಿದೆ
ಜೀವನದಂತ್ಯದವರೆಗೂ
ಇವನ ಸ್ನೇಹ ಬೇಕಾಗಿದೆ!

ಅಣ್ಣನಾದ ನನಗೆ
ತಮ್ಮನಾದೆ ಅವನಿಗೆ
ವಂದಿಸುವೆ ಆ ವಿಧಿಗೆ
ವಂದಿಸುವೆ ಈ ನಿಧಿಗೆ!

Friday, 3 April 2009

ಅಲ್ಲೋ..? ಇಲ್ಲೋ..??

ಅಲ್ಲಿ ನೋಡಲೋ? ಇಲ್ಲಿ ನೋಡಲೋ?
ಚಂದಿರನಲ್ಲಿ, ಚಂದ್ರಮುಖಿಯಿಲ್ಲಿ!
ಭಾವನೆ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!

ಅಲ್ಲಿ ನೋಡಲೋ? ಇಲ್ಲಿ ನೋಡಲೋ?
ಜಲಪಾತವಲ್ಲಿ, ಕಪ್ಪು ಝರಿಯಿಲ್ಲಿ!
ಕಣ್ಣ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!

ಅದ ಸವಿಯಲೋ? ಇದ ಸವಿಯಲೋ?
ಜೇನು ಅಲ್ಲಿ, ಗುಲಾಬಿ ತುಟಿಯಿಲ್ಲಿ
ತುಟಿಯ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!

ಅಲ್ಲಿ ಕೇಳಲೋ? ಇಲ್ಲಿ ಕೇಳಲೋ?
ಕೋಗಿಲೆಯು ಅಲ್ಲಿ, ಇಂಪಾದ ದನಿಯಿಲ್ಲಿ
ಕಿವಿಯ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ

ಅದ ಬಯಸಲೋ? ಇದ ಬಯಸಲೋ?
ಗೊಂದಲ ನನ್ನದು
ಅದನ್ನು ಬಯಸುತಾ, ಇದನ್ನೂ ಬಯಸುವ
ಹಂಬಲ ನನ್ನದು