Showing posts with label ಕನಸುಗಳು. Show all posts
Showing posts with label ಕನಸುಗಳು. Show all posts

Friday, 22 May 2009

ನಾ ಕಂಡ ವಿಮಾನ ದುರಂತ

ನಮ್ಮ ಮನೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸ್ವಲ್ಪ ಮಟ್ಟಿಗೆ ಹತ್ತಿರವೆನ್ನ ಬಹುದು. ಅದೂ ಅಲ್ಲದೆ ಜಕ್ಕೂರಿನಲ್ಲಿ ತರಬೇತಿ ನಡೆಸುವ ಪೈಲಟ್ ಗಳು, ವಿಮಾನವನ್ನು ನಮ್ಮ ಮನೆ ಮೇಲೆ ಹಾರಾಟ ನಡೆಸುತ್ತಾಯಿರುತ್ತಾರೆ.

ಹೀಗಿರುವಾಗ ಒಂದು ದಿನ ನಮ್ಮ ಮನೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ವಿದೇಶಕ್ಕೆ ಹಾರ ಬೇಕಿದ್ದ ವಿಮಾನವು ನಾನು ನೋಡುತ್ತಿದ್ದಂತೆಯೇ..ದುರಂತಕ್ಕೀಡಾಯಿತು. ಕ್ಷಣ ಕಾಲ ಏನೂ ತೋಚದಂತಾಯಿತು. ವಿಮಾನಕ್ಕೆ ಬೆಂಕಿ ತಗುಲಿದ್ದರಿಂದ ಸುತ್ತ ಮುತ್ತಲಿನ ಮನೆಗಳಿಗೆ ಹಾನಿ ಮಾಡ ಬಹುದೆಂದು ತಿಳಿದು ಕೂಡಲೆ ನಮ್ಮ ಮನೆಯಿಂದ ದೊಡ್ಡ ಪೈಪು ತಂದು, ಟ್ಯಾಂಕಿನ ಸಹಾಯದಿಂದ ವಿಮಾನದ ಬೆಂಕಿಯನ್ನು ಆರಿಸ ತೊಡಗಿದೆ. ಅಷ್ಟು ಹೊತ್ತಿಗೆ ನಮ್ಮ ಬಡಾವಣೆಯ ಜನರು ಅಲ್ಲಿ ಸೇರಿದ್ದರು. ಎಂದೂ ಯಾರ ಮೇಲೂ ರೀಗಾಡದ ನಾನು ಅಂದು ಏನಾಯಿತೋ ಗೊತ್ತಿಲ್ಲ. ಎಲ್ಲರ ಮೇಲು ರೇಗಾಡಿಬಿಟ್ಟೆ. "ಇಲ್ಲೇನ್ರಿ ನೋಡುತ್ತಿದ್ದೀರ. ನಿಮ್ಮ ಮನೆಯಿಂದ ನೀರು ತಂದು ವಿಮಾನ ನಂದಿಸಲು ಸಹಾಯ ಮಾಡಿ. ಇನ್ನೊಂದು ವಿಷಯ ಕೇಳಿಸಿಕೊಳ್ಳಿ, ಇವತ್ತಿನಿಂದ ಎಲ್ಲರ ಮನೆಯ ಮುಂದೆ Fire Extinguisher ಇಡಿ. ಇಲ್ಲಿ ತುಂಬಾ ವಿಮಾನಗಳು ಹಾರಾಡುತ್ತಾಯಿರುತ್ತವೆ. ಯಾವಾಗ ಏನು ಆಗುವುದೋ ತಿಳಿಯೋದಿಲ್ಲ"

ಆ ಸಮಯಕ್ಕೆ ಅಗ್ನಿ ಶಾಮಕ ದಳದವರು ಬಂದರು. ಬಂದ ಮೇಲೆ, ನನ್ನ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು..." ಏನಪ್ಪಾ ಇವನು ನಮಗೆ ಜಾಸ್ತಿ ಕೆಲ್ಸ ಉಳಿಸಿಲ್ಲ.. ಬೆಂಕಿyಯನ್ನು ಇವನೇ ನಂದಿಸುತ್ತಾಯಿದ್ದಾನೆ." ನಂತರ ಒಂದು ನಿಮಿಷದೊಳಗೆ ಅವರು ಹೊರಟು ಹೋದರು.

ನನಗೆ ತುಂಬಾ ಬೇಜಾರಾಗಿತ್ತು. ಆ ವಿಮಾನ ದುರಂತದಿಂದ ಒಬ್ಬ ಪ್ರಯಾಣಿಕ ಕೂಡ ಜೀವಂತವಾಗಿರಲು ಸಾಧ್ಯವಿರಲಿಲ್ಲ! ಆ ಕಪ್ಪಾಗಿದ್ದ ಪ್ರದೇಶವನ್ನು ನೋಡಿ ಬರಲು ಹೊರೆಟೆ. ದಾರಿಯಲ್ಲಿ ನಾಲ್ವರು ಮಲಗಿದ್ದರು. ನಾನು ಅವರನ್ನು ಎಚ್ಚರಿಸಿ, "ಇಲ್ಲಿಯಾಕೆ ಮಲಗಿದ್ದೀರಾ?" ಅಂತ ಕೇಳಿದೆ. ಅದಕ್ಕೆ ಅವರಲ್ಲೊಬ್ಬನು "ನಾನು Spainಗೆ ಹೋಗಿಲ್ವಾ? ಎಲ್ಲಿದ್ದೀನಿ?" ಅಂತ ನನ್ನನ್ನೇ ಕೇಳಿದ. "ಅಯ್ಯೋ ನಿನ್ನ!. ನೀನು ಹೋಗುತ್ತಿದ್ದ ವಿಮಾನ ಅಪಘಾತವಾಗಿದೆ. ಅಲ್ಲಿ ನೋಡು. ಅದೇನು ಆಶ್ಚರ್ಯ ನೀವು ಇಷ್ಟೂ ಜನರು ಯಾವ ಪೆಟ್ಟಿಲ್ಲದೆ ಬದುಕುಳಿದ್ದಿದ್ದೀರ?" ಅಂತ ಮತ್ತೆ ಪ್ರಶ್ನಿಸಿದೆ.

ವಿಮಾನ ಈತರ ಕೆಳಕ್ಕೆ ಬಿದ್ದಿರೋದಕ್ಕೆ ಏನು ಕಾರಣವಿರಬಹುದು ಅಂತ ಎಲ್ಲರೂ ಯೋಚಿಸುತ್ತಿದ್ದೆವು. ಆಗ ಅವನು, "Mostly Pilot ಕುಡಿದು ಬಂದಿದ್ದಾನೆ ಅನಿಸುತ್ತೆ. ತಲೆ ಸುತ್ತಿದೆ.. ವಿಮಾನ ಓಡಿಸೋದಕ್ಕೆ ಆಗದೆ ನೆಲಕ್ಕೆ ಉರುಳಿಸಿದ್ದಾನೆ" ಅಂದ. ಅದಕ್ಕೆ ಇನ್ನೊಬ್ಬ ಇರಬಹುದು ಎಂದು ತಲೆಯಾಡಿಸಿದ. ಆಗ ನಾನು " Pilot ಕುಡಿದಿರೋದಕ್ಕೆ ಸಾಧ್ಯವಿಲ್ಲ." ಅಂದೆ. ಆಗ ಮತ್ತೊಬ್ಬ "ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳು ನಮ್ಮ ಬ್ಯಾಗುಗಳನ್ನು ಚೆಕ್ ಮಾಡುತ್ತಾರೇ ಹೊರತು ನಮ್ಮ ಬಾಯಿಯನ್ನು ಅಲ್ಲ" ಅಂದ. ಹೀಗೆ ನಾವೆಲ್ಲ ಆ pilot ಕುಡಿತದ ಬಗ್ಗೆ ಮಾತಾಡುತ್ತಿರುವಾಗ ಅಮ್ಮ ಬಂದು "ಮಗು... ಎದ್ದೇಳು.. ಕಾಫಿ ಕುಡಿ... ಆಫೀಸಿಗೆ..ಹೋಗ ಬೇಕು...." ಅಂದರು..

Sunday, 4 January 2009

ನಾನು ಸತ್ತ ಮೇಲೆ

ಬಹಳ ದಿನಗಳ ಹಿಂದೆ ನನಗೆ ವಿಪರೀತ ಜ್ವರವಿತ್ತು. ಆ ರಾತ್ರಿ ನಾನು ಮಲಗಿದೆ. ಮುಂಜಾನೆಯ ರವಿಯನ್ನು ನೋಡುತ್ತೇನೋ ಇಲ್ಲವೋ ಅನ್ನಿಸಿತ್ತು. ಇದ್ದಕ್ಕಿದ್ದ ಹಾಗೆ ನನ್ನ ದೇಹದ ತಾಪಮಾನ ಹೆಚ್ಚಾಗಿ ನಾನು ಸತ್ತು ಹೋದೆ!

ನನ್ನ ಸಂಸ್ಕಾರಕ್ಕೆ ಮನೆಯವರು ಸಿದ್ಧತೆ ನಡೆಸುತ್ತಿದ್ದದ್ದು ನನಗೆ ಗೊತ್ತಾಗುತ್ತಿತ್ತು. ಗೆಳೆಯರು, ಬಂಧು ಬಳಗದವರೆಲ್ಲರೂ ಸೇರಿದ್ದರು. ಅವರ ಕಂಬನಿಯು ನನಗೆ ಕಾಣುತ್ತಿತ್ತು. ನನ್ನ ಬಗ್ಗೆ ಆಡುತ್ತಿದ್ದ ಒಳ್ಳೆ ಮಾತುಗಳು ಕೇಳಿಸುತ್ತಾಯಿತ್ತು. ಅವರಿಗೆ ಸಮಾಧಾನ ಹೇಳ ಬೇಕೆಂದೆನಿಸಿತು. ಆದರೆ ನಾನು ಹೆಣ! ಹೇಗೆ ಮಾತನಾಡಲು ಸಾಧ್ಯ?

ಮಸಣದ ಕಡೆಗೆ ನನ್ನ ಹೊತ್ತಿಕೊಂಡು ಹೋದರು. ಇದೆಲ್ಲಾ ನನಗೆ ಗೊತ್ತಾಗುತ್ತಿತ್ತು. ನಾನು ನನ್ನಲ್ಲೇ ಹೇಳಿಕೊಂಡೆನು "ನಾನು ಸತ್ತಿರೋದು ನಿಜ. ಆದರೂ ನಾನು ಸಾಮಾನ್ಯರಂತೆ ಇದ್ದೀನಲ್ಲ. ಹೋ!...ಬಹುಶಃ ಮೊದಲ ಬಾರಿ ಸತ್ತಿದ್ದರಿಂದ ಈ ರೀತಿ ಎಲ್ಲವೂ ತಿಳಿಯುತ್ತಿದೆ" ಎಂದು ಸಮಾಧಾನ ಮಾಡಿಕೊಂಡೆ. ಅಗ್ನಿ ಸ್ಪರ್ಶ ಮಾಡುವುನ್ನು ನಾನು ತಡೆಯಲೇ ಇಲ್ಲ. ಅಗ್ನಿ ನನ್ನ ಸುಟ್ಟಾಗ ಎಷ್ಟರ ಮಟ್ಟಿಗೆ ಬಿಸಿಯಾಗಬಹುದು? ಅಂತ ಯೋಚನೆ ಮಾಡುತ್ತಾಯಿದ್ದೆ. ಬೇಗ ಸುಟ್ಟು ನನ್ನ ಬೂದಿ ಮಾಡಿದರೆ ಸಾಕಪ್ಪ... ಈ ಪ್ರಪಂಚದ ಋಣ ತೀರಿತೆಂದು ಆರಾಮವಾಗಿರ ಬಹುದು ಅಂತ ಯೋಚಿಸುತ್ತಿದ್ದೆ. ಅಗ್ನಿಯು ನನ್ನ ದಹಿಸುತ್ತಾಯಿದ್ದ. ನನ್ನ ಬೆನ್ನಿಗೆ ಅದರ ಅರಿವಾಗುತ್ತಾಯಿತ್ತು. ಆದರೂ ಕಿರುಚಲಿಲ್ಲ. ಅಗ್ನಿಗೆ ನನ್ನ ಮುಖವನ್ನು ಸುಡುವ ಆಸೆಯಾಯಿತು. ಆ ಕೆಲಸವನ್ನು ಪ್ರಾರಂಭಿಸಿದ. ಅವನ ಶಾಖ ಈಗ ವಿಪರೀತವಿತ್ತು. ನನ್ನ ಹೆಣಕ್ಕೆ ಅದನ್ನು ತಡೆಯಲು ಶಕ್ತಿಯಿರಲಿಲ್ಲ! ಚಿತೆಯಿಂದ ಎದ್ದು ಬಿಡ ಬೇಕು ಅಂತ ಅನ್ನಿಸಿತು. ಆದರೆ ನನ್ನನ್ನು ಕಟ್ಟಿಗೆಗಳಿಂದ ಮುಚ್ಚಿದ್ದರಿಂದ ಸ್ವಲ್ಪ ಕಷ್ಟವಾಯಿತು. ಅಗ್ನಿಯ ಶಾಖಕ್ಕಿಂತ ಎದ್ದು ಓಡುವುದು ಉತ್ತಮೆವೆಂದು ಹೇಗೋ ಕಷ್ಟ ಪಟ್ಟು ಚಿತೆಯಿಂದ ಎದ್ದು ನೋಡಿದರೆ.. ನನ್ನ ಮುಖಕ್ಕೆ ಸೂರ್ಯನ ಕಿರಣಗಳು ಚುಂಬಿಸುತ್ತಾಯಿದ್ದವು. ಆಮೇಲೆ ಗೊತ್ತಾಗಿದ್ದು ಅವು ಕಟ್ಟಿಗೆಗಳಲ್ಲ.. ಕಂಬಳಿಗಳು! ಜ್ವರ ಬಂದಿರಲಿಲ್ಲ.. ಕಂಬಳಿಯ ಶಾಖಕ್ಕೆ ಮೈ ಬಿಸಿಯಾಗಿತ್ತು.

Tuesday, 30 December 2008

ಮೊಬೈಲು ಮರೆತಾಗ...

ಬೆಳಿಗ್ಗೆ ಗಡಿಬಿಡಿಯಲ್ಲಿದ್ದೆ. ಆಫೀಸಿಗೆ ಹೋಗಲು ತಡವಾಗುತ್ತಾಯಿತ್ತು. ಅಮ್ಮ ನನ್ನ ಊಟದ ಡಬ್ಬಿಯನ್ನು ಬ್ಯಾಗಿನೊಳಗೆ ಇಟ್ಟಿದ್ದರು. ತುಂಬಾ ಗಡಿಬಿಡಿಯಲ್ಲಿದ್ದಿದ್ದರಿಂದ ಬ್ಯಾಗನ್ನು ಮರೆತು ಆಫೀಸಿಗೆ ಹೊರಟೆ. ಮಧ್ಯ ದಾರಿಯಲ್ಲಿ ಬ್ಯಾಗು ನನ್ನ ಬಳಿ ಇಲ್ಲವೆಂದು ಅರಿವಿಗೆ ಬಂತಾದರೂ ತಲೆ ಕೆಡೆಸಿಕೊಳ್ಳದೇ ಹೋಗಿ ಆಫೀಸು ಬಸ್ ಹತ್ತಿದೆ.

ಈ ದಿನ ಬಸ್ಸಿನಲ್ಲಿ ಹೊಸ ಮುಖವನ್ನು ನೋಡಿದೆ. ಅವರು ನನ್ನ ಪಕ್ಕದಲ್ಲೇ ಕುಳಿತಿದ್ದರು. ನಾನು ಎಂದಿನಂತೆ ಮೌನ ರಾಜ! ಸ್ವಲ್ಪ ಹೊತ್ತಿನಲ್ಲೇ ಯಾಕೋ ನನ್ನ ಮೊಬೈಲಿಗಾಗೆ ಜೇಬಿನೊಳಗೆ ಹುಡುಕಿದೆ. ಆದರೆ ಅದು ಸಿಗಲಿಲ್ಲ. ನಂತರ ಈ ವ್ಯಕ್ತಿ ತಮ್ಮ ಮೊಬೈಲನ್ನು ಕೊಟ್ಟು ಕರೆ ಮಾಡು.. ಇಲ್ಲೇ ಬಿದ್ದಿದ್ದರೆ ಸಿಗುತ್ತದೆ ಎಂದರು. ನನಗೆ ಅವರ SIMಯಿಂದ ಕರೆ ಮಾಡಲು ಮುಜುಗರವಾಯಿತು. ಅದಕ್ಕೆ ನನ್ನ Walletಯಿಂದ ನನ್ನ "SIM" Card ತೆಗೆದೆ! ನಂತರ ಅದನ್ನು ಆತನ ಫೋನಿನೊಳಗೆ ಹಾಕಿ, ನನ್ನ ನಂಬರಿಗೆ ಕರೆ ಮಾಡಿದೆ. ಅದನ್ನು ಅಮ್ಮ ಸ್ವೀಕರಿಸಿದರು. "ಮಗು, ಮನೆಯಲ್ಲೇ ಮೊಬೈಲ್ ಹಾಗು ಬ್ಯಾಗು ಬಿಟ್ಟೀದ್ದೀಯಲ್ಲಾ?, ಊಟದ ಡಬ್ಬಿ ಕೂಡ ಇಲ್ಲೇ ಇದೆ" ಅಂದರು. ಇರಲಿ ಅಮ್ಮ.. ನಾನು ಊಟ ಆಫೀಸಿನಲ್ಲೇ ಮಾಡುತ್ತೇನೆ, ಸದ್ಯ ಫೋನು ಮನೆಯಲ್ಲೇ ಇದೆ ಅಲ್ವ ಸಾಕು ಎಂದೆ. ನನ್ನ ಫೋನು ಮನೆಯಲ್ಲಿ ಜೋಪಾನವಾಗಿದೆ ಎಂದು ಸಂತಸ ಪಟ್ಟೆ.

ಆತನಿಗೆ ಧನ್ಯವಾದ ಹೇಳಿ, ಫೋನು ಹಿಂದಿರುಗಿಸಲು ಹೋದಾಗ, "ಇದು ನಿಮ್ಮ ಬಳಿಯೇ ಇರಲಿ, ನಿಮ್ಮ ಫೋನು ನಿಮ್ಮ ಕೈಗೆ ಬಂದ ಮೇಲೆ ನನಗೆ ಹಿಂದಿರುಗಿಸಿ" ಎಂದರು. ಇಂತಹ ಸದ್ಗುಣವುಳ್ಳವರೂ ಇದ್ದಾರಲ್ಲಾ ನಮ್ಮ ಪ್ರಪಂಚದಲ್ಲಿ ಎಂದು ಅನಿಸಿತು. ನಂತರ ಆತ ಮತ್ತೆ ಸಿಗದೇ ಹೋದರೆ ಫೋನು ಹಿಂದಿರುಗಿಸಲು ಅಸಾಧ್ಯವಾಗಬಹುದೆಂದು, ನನ್ನ ಪಕ್ಕದಲ್ಲೇ ಇದ್ದ ನನ್ನ ಬ್ಯಾಗಿನಿಂದ ಪುಸ್ತಕ ತೆಗೆದು ಆತನ ವಿ-ಅಂಚೆ ವಿಳಾಸ ಬರೆಸಿಕೊಂಡೆ.

ಇದೆಲ್ಲಾ ಆದ ಮೇಲೆ ಒಂದು ದಿನ ಆತ ನನಗೆ ಸಿಕ್ಕಿದ. ಅವನ ಫೋನು ಹಿಂದಿರುಗಿಸಲು ಹೋದಾಗ ಏನಾಯಿತೋ ಗೊತ್ತಾಗಲಿಲ್ಲ... ಅಮ್ಮ ಬಂದು "ಮಗು, ಎದ್ದೇಳು... ೬ ಗಂಟೆ ಆಯ್ತು"ಅಂದರು.

---
ಎರಡು ದಿನಗಳ ನಂತರ
---

ನಾನು ಯಥಾ ಪ್ರಕಾರ ಮೊಬೈಲು ಮರೆತು ಆಫೀಸಿಗೆ ಹೋಗಿದ್ದೆ. ಮೊಬೈಲು ಶೋಕೇಸಿನಲ್ಲಿ ಇದ್ದದ್ದು ಗಮನಿಸಿದ ಅಮ್ಮ, "ಅಯ್ಯೋ! ಗೂಬೆ... ಫೋನು ಮರೆತು ಹೋಗಿದ್ದಾನಲ್ಲ..." ಎಂದು ಹೇಳಿ, ಫೋನು ತೆಗೆದು ಕೊಂಡು ನನಗೆ ಫೋನು ಮಾಡಿದರು. ನನ್ನ ಫೋನು ರಿಂಗ ಕೂಡ ಆಯ್ತು ಆದರೆ ನಾನು ಸ್ವೀಕರಿಸಲಿಲ್ಲ. ಯಾಕೆ ಸ್ವೀಕರಿಸುತ್ತಿಲ್ಲ ಎಂದು ಯೋಚನೆ ಮಾಡುತ್ತಾಯಿದ್ದರಂತೆ ಎಚ್ಚರವಾದ ಮೇಲೆ ತಿಳಿಯಿತು ಅದು ಫೋನಿನ ರಿಂಗಿಂಗ್ ಅಲ್ಲ..... ನಮ್ಮ ಮನೆ Alarm ಕೂಗುತ್ತಿತ್ತು!


ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಿಮ್ಮ ಮೊಗದಲ್ಲಿ ನಗು ಸದಾ ಇರಲಿ

Monday, 6 October 2008

ಕನಸಲ್ಲು ನಿನ್ನ ರೂಪ -- ಈ ಮನದಲ್ಲಿ ತರಲು ತಾಪ!

ನನ್ನ ಪರಿಸ್ಥಿತಿಗೆ ಹೊಂದುವಂತಹ ಶೀರ್ಷಿಕೆ ಕೊಟ್ಟ ನನ್ನ ಆರ್. ಎನ್. ಜಯಗೋಪಾಲರಿಗೆ ವಂದಿಸುತ್ತ, ನಿಮಗೆಲ್ಲರಿಗೂ ಮತ್ತೆ ಸ್ವಾಗತ ನನ್ನ ಕನಸಿನ ಬಗ್ಗೆ ಕೇಳೋದಕ್ಕೆ.

ಆರು ತಿಂಗಳ ಹಿಂದೆ ನನ್ನ ಕನಸನ್ನು ನಿಮ್ಮೊಂದಿಗೆ ಹಂಚಿ ಕೊಂಡಿದ್ದೆ ( Mall @ Malleshwara.) ಈಗ ಮತ್ತೆ ಬಂತು ಕಾಲ ನನ್ನದೊಂದು ಕನಸನ್ನು ಹೇಳಲು.

ಇತ್ತೀಚೆಗೆ ಕೆಲಸ ಬಹಳಯಿದೆ ಅಂತ ಕೆಲವರಿಗೆ ಹೇಳಿದ್ದೆ. ಪ್ರತಿ ದಿನ ನಾನು ಮನೆ ತಲುಪುವ ವೇಳೆಗೆ ರಾತ್ರಿ ೧೦.೩೦ ಆಗಿರುತ್ತೆ. ಬಂದ ಮೇಲೆ ಮಮ್ಮು ಆಮೇಲೆ ತಾಚಿ. ರಾತ್ರಿ ಕನಸಲ್ಲಿ ಈಗ ಯಾರು ಬರ ಬಹುದು ಸ್ವಲ್ಪ ಯೋಚನೆ ಮಾಡಿ........?

ಹಿಂದಿ ಚಿತ್ರ ತಾರೆಯರು ಅಂತ ಊಹಿಸಿದ್ದೀರಾ? No Chances.... ನನಗೆ ಹಿಂದಿಯಲ್ಲಿ ಗೊತ್ತಿರೋರು ಕೇವಲ ನಾಕು ಮಂದಿ. ಅವರ್ಯಾರೂ ಬಂದಿಲ್ಲ. ಇನ್ನು ಕನ್ನಡ ತಾರೆಯರು ಅಂತೀರಾ? ಅವರೂ ಇಲ್ಲ ಬಿಡಿ. ಹೆಚ್ಚಾಗಿ ಸಿನಿಮಾ ನೋಡೋನಲ್ಲ ನಾನು. ಹಾಗಾದರೆ ಯಾರು ಬಂದಾರು....? ನಮ್ಮ Manager, Team Lead ಅಂತೀರ ಅವರೂ ಬರೋದಿಲ್ಲ.

ನನ್ನ ಕನಸಲ್ಲಿ ಬಂದದ್ದು ನಾನು ಮತ್ತೆ ನನ್ನ ಕೆಲಸ! ಅದೇನೋ ೯ ರಿಂದ ೮ ರ ವರೆಗೆ ಕೆಲಸ ಮಾಡಿ, ಸದ್ಯ ಮನೆ ತಲುಪಿದನಲ್ಲಾ ಅಂತ ನಿದ್ದ ಮಾಡಿದರೆ.. ಕನಸಲ್ಲೆಲಾ ನಾನು computer ಕುಟ್ಟುತ್ತಿರುವ ಹಾಗೆ, ಬೆಳಿಗ್ಗೆ ನನಗೆ ವಹಿಸಿದ ಕೆಲಸವನ್ನು ಮಾಡುತ್ತಿರುವ ಹಾಗೆ ಕನಸು ಕಾಣುತ್ತೀನಿ. ಇದು ಒಂದು ದಿನ ಬಂದರೆ ಪರವಾಗಿಲ್ಲ. ಆದರೆ ಬೇರೇ ಕನಸುಗಳಂತೆ ಇದು ಪ್ರತಿ ರಾತ್ರಿ ಬರುತ್ತೆ. ಕನಸಲ್ಲೂ ನಾನು ಕೆಲಸ ನಿರ್ವಹಿಸುತ್ತಿರುವ ಹಾಗೆ ಅನ್ನಿಸುತ್ತೆ. ನಮ್ಮ Client ಹಾಗು company ನನಗೆ ಹೆಚ್ಚು ಸಂಬಳ ಕೊಡ ಬೇಕು. ಯಾಕೆಂದರೆ ಮನೇಲೂ ಅವರ ಕೆಲಸ ಮಾಡುತ್ತೀನಲ್ಲ ಅದಕ್ಕೆ. (ನಗಲಿಲ್ವಾ ನೀವು?... ಅಯ್ಯೋ ಜೋಕ್ ಮಾಡಿದೆ ರೀ ನಾನು.. ಸ್ವಲ್ಪ ನಕ್ಕು ಬಿಡಿ....). ಇನ್ನೂ ಕೆಲಸ ಮುಗಿದಿರೋದಿಲ್ಲ ಅಷ್ಟರಲ್ಲಿ ಅಮ್ಮ ಆಫೀಸಿಗೆ ಬರುತ್ತಾರೆ. ಆಗ ನಾನು, "ಇಲ್ಲಿಯಾಕೆ ಬಂದ್ಯಮ್ಮ?" ಅಂತ ಕೇಳಿದಾಗ ಅವರು ಕೊಡುವ ಉತ್ತರ "೬.೧೫ ಆಯ್ತು ಏಳೋ ಬೇಗಾ... ಹೋಗಲ್ವಾ ಆಫೀಸಿಗೆ????". ಎಚ್ಚರವಾದ ಮೇಲೆ ಅಬ್ಬಬ್ಬಾ ಅಂದರೆ ೩ ಗಂಟೆ ಆರಾಮಾಗಿರುತ್ತೇನೆ ಆಮೇಲೆ ಮತ್ತೆ ಕೆಲಸ....

ಇಷ್ಟೇ ಆಗಿದಿದ್ದರೆ ಸುಮ್ಮನಿರುತ್ತಿದ್ದೆ. ನಿನ್ನೆ ರಾತ್ರಿ ನನಗೆ ಇವನೆಲ್ಲಾ ಬ್ಲಾಗಿನಲ್ಲಿ ಬರೆಯುವ ಹಾಗೆಯೇ ಕನಸಾಯ್ತು. ಅದಕ್ಕೆ ಕಡೇ ಪಕ್ಷ ಇದಾದರೂ ನನಸಾಗಲಿ ಎಂದು ಬರೆದೆ.

ಇನ್ನೊಂದು ವಿಷಯ ನೆನಪಾಯ್ತು ಈಗ. ನಾನು PUC ವ್ಯಾಸಂಗ ಮಾಡುವಾಗ ಪ್ರತಿ ರಾತ್ರಿ, Physics ಹಾಗು Chemistry Experiments ಮಾಡುತ್ತಾಯಿದ್ದೆ. BE ಓದುತ್ತಿರುವಾಗಲೂ ಅಷ್ಟೇ, IC ಗಳನ್ನೆಲಾ ಜೋಡಿಸಿ ಏನೋ experiments ಮಾಡಿಕೊಳ್ಳುತ್ತಾಯಿದ್ದೆ. ಹಾಳದ Experimentಗಳು ಕನಸಲ್ಲೂ ಸರಿಯಾದ Output ಬರುತ್ತಾಯಿರಲಿಲ್ಲ!

ರಾತ್ರಿ ಹೊತ್ತು ನನ್ನ ಜೊತೆ ಮಾತಾಡುವ ಬೆಮಿ ಗಳಿಗೆ ಹೇಳುತ್ತಾಯಿರುತ್ತೇನೆ.. "ನನಗೆ Good Night ಮಾತ್ರ wish ಮಾಡಿ. ಅದರ ಜೊತೆಗೆ Sweet Dreams ಅಂತ ದಯವಿಟ್ಟೂ Wish ಮಾಡಬೇಡಿ." ಅದರೂ ಕೆಲವರು ಇದನ್ನು ಮರೆತಿರುತ್ತಾರೆ. "sweet dreams... sweeeetest Dreams " ಅಂತೆಲ್ಲಾ ಹೇಳ್ತಾರೆ. ಆ ರಾತ್ರಿ ನನಗೋ "ಯಾವಾಗ ಹಲ್ಲು ಮುರಿಯುತ್ತೇ", "ಯಾವ ಮಾಲಿನಲ್ಲಿ ಹೋಗಿ ಚಿಂದಿ ಬಟ್ಟೇ ಖರೀದಿಸುತ್ತೇನೋ" ಹೀಗೆ ಅವೆಲ್ಲಾ ನೆನೆಪಾಗುತ್ತೆ. ಕೆಲವೊಮ್ಮೆ ಅಂತೂ ನಿದ್ದೆ ಮಾಡಲೋ ಬೇಡವೋ ಅನ್ನಿಸುತ್ತೆ. ನಿದ್ದ ಮಾಡಿದಾಗಲೂ ಭಯ ನನಗೆ!

ಇದರಿಂದ ನಾನು ನಿಮ್ಮನ್ನು ಕೇಳಿ ಕೊಳ್ಳುವುದು ಏನೆಂದರೆ, ನೀವು ಇನ್ನು ಮುಂದೆ "May all your dreams come true!" ಅಂತ ದಯವಿಟ್ಟೂ ಹಾರೈಸದಿರಿ. ನಾನು ಈ ರೀತಿ ಕನಸು ಕಂಡಿರುತ್ತೇನೆ. ನಿಮ್ಮ ಬಾಯಿ ಹಾರೈಕೆಯಿಂದ ಅದು ನನಸಾದರೇ... ನಾನು ಹಲ್ಲು ಮುರಿದ ಮುದುಕನಾಗಿ ಮಲ್ಲೇಶ್ವರದಲ್ಲಿ ಚಿಂದಿ ಬಟ್ಟೆ ಹಾಕಿ ಕೊಂಡು ಓಡಾಡುತ್ತಾಯಿರುತ್ತೇನೆ... ಇಲ್ಲ ಇಲ್ಲ... ೨೪ ಗಂಟೆನೂ Computer ಕುಟ್ಟುತ್ತಾ ಕೆಲಸ ಮಾಡುತ್ತಾಯಿರುತ್ತೇನೆ. ಬ್ಲಾಗಿಗೂ ಸಮಯ ಕೊಡೋಕೆ ಆಗೋದಿಲ್ಲ. ಆಮೇಲೆ ನಿದ್ದ ಯಾವಾಗ ಮಾಡಲಿ ನಾನು?

ಬೇರೆಯವರಿಗೆ "May all your dreams come true!" ಅಂತ ಹಾರೈಸುವ ಮೊದಲು ಒಂದು ಸಲ ಯೋಚನೆ ಮಾಡಿರಿ. ಅವರಿಗೆ ಏನಾದರು ಈ ರೀತಿಯಾದ ಕನಸಾಗಿದೆಯೇ ಎಂದು ಕೇಳಿ, Confirm ಆದ ಮೇಲೆ ಹಾರೈಸಿ. ನನಗೆ ಮಾತ್ರ ಹಾರೈಸ ಬೇಡಿ.

ಕಡೇದಾಗಿ ಅಂತರ್ವಾಣಿ ಹೇಳೋದು,

ಕಾಯಕವೇ ಕೈಲಾಸ
ಅಂದರು ಆಗ ಬಸವಣ್ಣ
ಕಾಯಕದಲ್ಲೇ ವಾಸ
ಅಂದನು ಈಗ ಶಂಕ್ರಣ್ಣ

ಮತ್ತೆ ಒಳ್ಳೆ ಕನಸು ಬಂದಾಗ ಬರೆಯುತ್ತೇನೆ.

Saturday, 29 March 2008

Mall @ Malleshwara

ಕಳೆದ ಶುಕ್ರವಾರ, ನಗರದ ಮಲ್ಲೇಶ್ವರದಲ್ಲಿ ನೂತನವಾಗಿ ಒಂದು ಬಟ್ಟೆಯ ಮಳಿಗೆ ಪ್ರಾರಂಭಗೊಂಡಿತ್ತು. ನನಗೂ ಹೊಸ ಬಟ್ಟೆ ಖರೀದಿಸುವ ಆಸೆ , ವಿದ್ಯಾರಣ್ಯಪುರದಲ್ಲಿ ಬಸ್ ಹತ್ತಿ, ಮಲ್ಲೇಶ್ವರದಲ್ಲಿ ಇಳಿದೆ. ಸಂಪಿಗೆ ರಸ್ತೆಯಲ್ಲಿ ಇದ್ದ ಆ ಮಳಿಗೆಯನ್ನು ಹುಡುಕಿದೆ.
ಅಲ್ಲಿ, ಅಂಗಡಿ ಮುಂದಿದ್ದ ಆಕರ್ಷಕವಾದ ಫಲಕ ನನ್ನ ಕೈ ಬೀಸಿ ಕರೆಯಿತು. ಅದು ಈ ರೀತಿ ಹೇಳಿತು. "ಇಲ್ಲಿ ವಿದೇಶೀ ಬಟ್ಟೆಗಳು ಅತಿ ಕಡಿಮೆ ದರದಲ್ಲಿ ಸಿಗುವುದು ಹಾಗು 2 ಷರ್ಟಿಗೆ 1 ಪ್ಯಾಂಟು ಉಚಿತ". ಸರಿ, ಒಳಗೆ ಹೋದೆ. ಬಾಗಿಲ ಬಳಿಯೇ ಒಬ್ಬ ಎದುರಾದ. ಅವನ ಕೈಯಲ್ಲಿ ಕೆಲವು ಹಾಳೆಗಳು ಇದ್ದವು. ಅವನು ನನಗೆ ಆ ಹಾಳೆಯನ್ನು ಕೆಲವು ಮಾಹಿತಿಯೊಂದಿಗೆ ತುಂಬುವಂತೆ ಹೇಳಿದ. ಕೊನೆಯಲ್ಲಿ ಸಹಿ ಹಾಕಿ ಅಂದ. ನಾನು,ಇದೊಂದು ಸಮೀಕ್ಷೆ ಇರಬಹುದು ಎಂದು ತಿಳಿದೆ. ಕಣ್ಣಿಗೆ ಕಾಣಿಸದ ಹಾಗಿರುವ ಅಕ್ಷರಗಳಿಂದ ಕೂಡಿದ ಮಾಹಿತಿಯು ಇತ್ತು. ನಾನು ಯಾವುದನ್ನೂ ಓದದೆ ಸಹಿ ಹಾಕಿದೆ.

ನನ್ನ ವಿಚಾರಿಸೋದಕ್ಕೆ ಅಂಗಡಿ ಹುಡುಗ ಬಂದ. ನಾನು ಅವನಲ್ಲಿ ಕೇಳಿದೆ, "ಷರ್ಟ್ ಅಳತೆ 40 , ಪ್ಯಾಂಟ್ ಅಳತೆ 32, ಇದಕ್ಕೆ ಬಟ್ಟೆ ತೋರಿಸು". ಅದಕ್ಕೆ ಅವನು, "ಸಾರ್, ಇಲ್ಲಿ 150 ದೇಶದ ಬಟ್ಟೆಗಳು ಇವೆ. ನಿಮಗೆ ಯಾವ ದೇಶದ ಬಟ್ಟೆ ಬೇಕು?". ಆಗ ನಾನು,"2 - 3 ದೇಶದ ಬಟ್ಟೆಗಳನ್ನು ತೋರಿಸು ಅದರಲ್ಲಿ ನಾನಗೆ ಬೇಕಾದದ್ದನ್ನು ಕೊಳ್ಳೂತ್ತೇನೆ". "ನಮ್ಮ ಗೋದಾಮಿನಿಂದ ತರ್ತೀನಿ ಸಾರ್, ಸ್ವಲ್ಪ ಸಮಯ ಆಗುತ್ತೆ. ಇಲ್ಲೆ ಇರಿ" ಅಂದ.

ತುಂಬಾ ಸಮಯ ಕಳೆದರೂ ಹೋದ ಹುಡುಗ ಬರಲೇ ಇಲ್ಲ. ಬೇರೆ ಅಂಗಡಿಗೆ ಹೋಗುವ ನಿರ್ಧಾರ ಮಾಡಿದೆ. ಅಷ್ಟರಲ್ಲಿ ಅಲ್ಲಿದ್ದ ಇನ್ನೊಬ್ಬ, "ಹಾಗೆ ಆಗೋದಿಲ್ಲ ಸಾರ್, ನೀವು ಬಾಗಿಲ ಬಳಿ ಸಹಿ ಹಾಕಿದೀರ, ಅದರಂತೆ ಒಂದು ಜೊತೆ ಬಟ್ಟೆ ಖರೀದಿಸಿಯೇ ಇಲ್ಲಿಂದ ಹೋಗ್ಬೇಕು". ನಾನು ಏನು ಮಾತಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನಂತರ ಅವನು, "ನೀವು ಪಕ್ಕದಲ್ಲೇ ಇರುವ ನಮ್ಮ ಉಪಾಹಾರ ಮಂದಿರಕ್ಕೆ ಹೋಗಿ, ತಿಂಡಿ, ಕಾಫಿ, ಮುಗಿಸಿ ಬನ್ನಿ, ಅಷ್ಟರಲ್ಲಿ ನಿಮಗೆ ಸೂಕ್ತವಾದ ಬಟ್ಟೆ ಬಂದಿರುತ್ತ " ಅಂದ. "ಅದ್ಯಾಕ್ಕೆ? ನಾನು ಇಲ್ಲೆ ಇರ್ತೀನಿ" ಅಂದೆ. ಅದಕ್ಕೆ ಅವನು, ನಾನು ಸಹಿ ಮಾಡಿದ ಹಾಳೇ ಇದೆ, ಅದರಂತೆ ನಡೆದುಕೊಳ್ಳದಿದ್ದರೆ, ಕೋರ್ಟಿನಲ್ಲಿ ಕೇಸೆ ಹಾಕಬಹುದು ಅಂದ. ನಾನು ದಿಗ್ಭ್ರಾಂತನಾದೆ. ಬೇರೆ ದಾರಿಯಿಲ್ಲದೆ ಆ ಉಪಾಹಾರ ಮಂದಿರಕ್ಕೆ ಹೋದೆ.

ಅಲ್ಲಿ, ಟೇಬಲ್ಲಿನಲ್ಲಿ ಕುಳಿತು, ದೋಸೆಯನ್ನು ತರುವಂತ ಸಪ್ಲೈಯರ್ಗೆ ಹೇಳಿದೆ. ಅವನು, ಸ್ವಲ್ಪ ಹೊತ್ತಿನಲ್ಲೇ ಬಂದು ಒಂದು ಹಾಳೆಯನ್ನು ಮುಂದೆ ಇಟ್ಟ. "ನಾನು ಕೇಳಿದ್ದು ದೋಸೆ, ನೀನೇನು ಕೊಡ್ತಾಯಿರೋದು?". "ಇದು ಪದಬಂಧ ಸಾರ್. ನೀವು ಇದನ್ನ ಉತ್ತರಿಸಿ. ಸರಿಯಾದ ಉತ್ತರಕ್ಕೆ ಬಹುಮಾನವಿದೆ."

ಬೇಡವಾದ ಮಾತುಗಳನ್ನು ಕೇಳಿ ಕೇಳಿ ನನ್ನ ಪಿತ್ತ ಈಗಾಗಲೇ ನೆತ್ತಿಗೇರಿತ್ತು. ಎಲ್ಲರ ಮೇಲಿನ ಕೋಪ ಇವನ ಮೇಲೆ ತಿರಿಸೋಣ ಎಂದು, "ಯಾಕಪ್ಪ ಹೇಗಿದೆ ಮೈಗೆ?" ಅಂದಾಗ, ಅವನು ಮತ್ತೆ ಆ ಒಪ್ಪಂದದ ಬಗ್ಗೆ ಹೇಳಿದ. ಮರು ಮಾತನಾಡದೆ, ನಾನು ಅದನ್ನು ಬಿಡಿಸೋಕೆ ಕೂತೆ. ಕೆಲವೇ ಕ್ಷಣಗಳಲ್ಲಿ ಅದನ್ನು ಬಿಡಿಸಿದೆ. ತಕ್ಷಣ ಅವನು ದೋಸೆ ತಂದು ಕೊಟ್ಟ. ದೋಸೆಯು ಆಯ್ತು. ಬಿಸಿ ಬಿಸಿ ಕಾಫಿಯು ಆಯ್ತು. ಪುನಃ ಬಂದೆ ನನ್ನ ಬಟ್ಟೆ ಕೊಂಡುಕೊಳ್ಳಲು.

ಬಟ್ಟೆ ತರಲು ಹೋಗಿದ್ದ ಹುಡುಗ ಆಗಲೆ ಬಂದು ನನ್ನ ಎದುರು ನೋಡುತ್ತಿದ್ದ. ಹೋದ ತಕ್ಷಣವೇ ಅವನು "ಸಾರ್, ನಿಮಗೆ ಹೊಂದುವ ಬಟ್ಟೆಗಳು ಇಲ್ಲಿ ಇವೆ ನೋಡಿ" ಅಂದ. ನೋಡಿದರೆ.. ಅವ್ಯಾವೂ ವಿದೇಶೀ ಉಡುಪು ತರಹ ಕಾಣಿಸಲಿಲ್ಲ! ಆದರೂ ಏನೋ ಖರೀದಿಸಲೇ ಬೆಕಲ್ವಾ ಅಂತ 2 ಷರ್ಟ್ ಆರಿಸಿದೆ. ಅವನಿಗೆ ಪ್ಯಾಂಟ್ ಉಚಿತ ಅಲ್ವ ಅದನ್ನು ಕೊಡು ಅಂತ ಕೇಳಿದೆ. ಅದಕ್ಕೆ ಅವನು, ಒಂದು ಜೀನ್ಸ್ ತೋರಿಸಿದ. ಅದನ್ನು ಬಿಡಿಸಿ ನೋಡಲು ಸುಮಾರು ೨೫ ತೇಪೆಗಳಿದ್ದವು. "ಯಾವುದೋ ಹಳೆ ಪ್ಯಾಂಟಿಗೆ ತೇಪೆ ಮಾಡಿರೋ ಹಾಗೆ ಇದೆ "ಅಂದೆ, ಆಗ ಅವನು, "ಇದು ಲೇಟೆಸ್ಟ್ ಫ್ಯಾಶನ್ ಸಾರ್"ಅಂತ ಹೇಳಿ ನನ್ ಬಾಯಿ ಮುಚ್ಚಿಸಿದ.

ಕೊನೆಗೆ ಆ ಬಟ್ಟೆ ಪ್ಯಾಕ್ ಮಾಡಿಸಿ, ಮನೆಗೆ ತೆಗೆದುಕೊಂಡು ಬರಲು ಸಿದ್ಧನಾದೆ. ಅಷ್ಟರಲ್ಲಿ ಅಮ್ಮ ಬಂದು," ಮಗೂ! 6.15 ಆಯ್ತು, ಆಫೀಸ್ ಗೆ ಹೋಗಲ್ವಾ?" ಅಂತ ಎಚ್ಚರಿಸಿದಾಗಲೇ ತಿಳಿಯಿತು ನಾ ಕಂಡಿದ್ದು ಕನಸು ಅಂತ.

ಎದ್ದ ತಕ್ಷಣ ನನ್ನ ಮನದಲ್ಲಿದ್ದ ಆತಂಕವೆಲ್ಲಾ ಮಾಯವಾಯಿತು. ಸದ್ಯ! ಆ ತೇಪೆ ಪ್ಯಾಂಟ್ ಧರಿಸಿ ಊರೆಲ್ಲಾ ತಿರುಗಾಡುವಂತಿಲ್ಲವಲ್ಲ ಅಂತ.

Friday, 14 December 2007

ಕನಸು

ಎಲ್ಲರಿಗು ಕನಸು ಬೀಳೊದು ಸಾಮನ್ಯ. ಕನಸುಗಳು ಯಾವಾಗಲು ವಿಚಿತ್ರವಾಗಿರುತ್ತವೆ. ಒಂದು ಕನಸು ಒಬ್ಬ ಮನುಷ್ಯನಿಗೆ ಏಷ್ಟು ಬಾರಿ ಬೀಳಬಹುದು..? ಇವತ್ತು ಬಂದ ಕನಸು ನಾಳೆ ಬರಬಹುದೇ ಅಂತ ನಿಮ್ಮನ್ನ ನೀವೆ ಪ್ರಶ್ನಿಸಿಕೊಳ್ಳಿ?

ನನಗೆ ಪದೇ ಪದೇ ಒಂದು ಕನಸು ಪುನರಾವರ್ತನೆ ಆಗ್ತಾ ಇದೆ..ಯಾಕೆ ಅಂತ ಗೊತ್ತಿಲ್ಲ. ಇದು ಸುಮಾರು ವರ್ಷದಿಂದ ನಡೆದುಬರುತ್ತಾಯಿದೆ. ಹುಡುಗೀರು ಕನಸಲ್ಲಿ ಬರ್ತಿರಬೇಕು ಅಂತ ನಿಮಗೆ ಅನಿಸಿದ್ದರೆ ಅದು ತಪ್ಪು.. ಈ ಕನಸು ನನ್ನ ದೇಹ ಬಾಗಕ್ಕೆ ಸಂಬಂಧಿಸಿದ ಕನಸು.


ಕನಸು: ಎಲ್ಲೋ ಒಂದು ಮದುವೆ ಮನೆಯಲ್ಲಿ ಚೆನ್ನಾಗಿ ಊಟ ಮಾಡಿದ ಹಾಗೆ ಕನಸು...(ವಿವಾಹ ಭೊಜನವಿದು... ವಿಶಿಷ್ಟ ಭಕ್ಷ್ಯಗಳಿವು... ಹ ಹ ಹ ಹ)..ಹಾಡು ಮುಗಿತಾ ಇದ್ದಂತೆನೆ ಊಟ ಮುಗಿಯುತ್ತೆ...ನಂತರ ಕೈ ತೊಳೆದು, ಬಾಯಿ ಮುಕ್ಕಳಿಸಿದಾಗ.. ನನ್ನ ಎಲ್ಲ ಹಲ್ಲುಗಳು ಕೆಳಗೆ ಬೀಳುತ್ತವೆ..ಎಂಥಾ ಆಶ್ಚರ್ಯ!!. ನಂತರ ನನಗೆ ಮುಂದಿನ ದಿನಗಳ ಚಿಂತೆ.. ಇನ್ನು ಮದುವೆಗೆ ಮುಂಚೆನೆ ಹಲ್ಲು ಬಿದ್ದೋಗಿದೆ ಯಾರೂ ಹೆಣ್ಣು ಕೊಡೋದಿಲ್ಲವಲ್ಲ ಅಂತ , ಕೆಲಸಕ್ಕೆ ಹೋಗೋದಾದರು ಹೇಗೆ

ಈ ಕನಸು ಮುಗಿತಿದ್ದ ಹಾಗೆ ಭಯದಿಂದ ಎಚ್ಚರವಾಗುತ್ತೆ.. ನನ್ನ ಹಲ್ಲುಗಳನ್ನ ಒಮ್ಮೆ ನೋಡ್ಕೋತೀನಿ.. ಎಲ್ಲ ಭಧ್ರವಾಗಿದೆ ಅಂದ್ಮೇಲೆ ಮನಸ್ಸಿಗೆ ನೆಮ್ಮದಿ..