Sunday, 19 August, 2012

ಅಗ್ರಜಾನುಭವ


ಫಲವ ಬಯಸದೇ ನಿನ್ನ
ಕೆಲಸವ ಮಾಡುತಿರು,
ಫಲವೇ ನಿನ್ನರಸುವುದು ಅಗ್ರಜ

ಚಿಕ್ಕ ಮೌಲ್ಯವೆಂದು ಒಂದನ್ನು,
ಪಕ್ಕದಲ್ಲಿಟ್ಟು ಕಡೆಗಣಿಸಿದರೆ
ಮಿಕ್ಕ ತೊಂಬತ್ತೊಂಬತರ ಮೌಲ್ಯ
ಲೆಕ್ಕಕ್ಕೆ ದೊರೆಯುವುದಿಲ್ಲ ಅಗ್ರಜ

ಹೊಸ ವಸ್ತು, ಹೊಸ ವಸ್ತ್ರ, ಹೊಸ ವರ್ಷವೆನ್ನುತ್ತಾರೆ
ತಾಸು, ದಣಿಯದೆ ಓಡುತಿರಲು
ಹೊಸದೇನಿರುವುದು ವಸುಂಧರೆಯಲಿ ಅಗ್ರಜ

Saturday, 31 March, 2012

ಪಂಜರದಿಂದ ಪ್ರಪಂಚಕ್ಕೆ!

ಕುಳಿತಿದ್ದೆವು ನಾವು, ತಿಳಿಯದೆ ಅನ್ಯ ಪ್ರಪಂಚ
ಸಾಕಿದ್ದರು ನಮ್ಮ, ತೋರದೆ ಕರುಣೆ ಕೊಂಚ

ಕೋಮಲವಾದ ಕರಗಳಲ್ಲಿ ಸೇರಿದಾಗಲೂ ನಾವು
ತಿಳಿದಿದ್ದೆವೂ ಇನ್ನು ಮುಂದೂ ನಮಗೆ ಬೇವು

ಸಹೃದಯದ ಪೋರಿಗೆ ತಿಳಿಯಿತಾದರೂ ಹೇಗೆ
ಈ ಪ್ರಣಯ ಹಕ್ಕಿಗಳ ಪ್ರತಿದಿನದ ಬೇಗೆ?

ಉಡುಗೊರೆಯಾಗಿ ಕೊಡುತ್ತಾ ನಮ್ಮನ್ನು,
ಬಿಡುಗಡೆ ಮಾಡಿಸಿದಳು... ಪಂಜರದಿಂದ ಪ್ರಪಂಚಕ್ಕೆ!

Thursday, 22 March, 2012

ದ್ವಿಜ ಉವಾಚ


ನನ್ನ ತಮ್ಮ ತೆಗೆದ ಈ ಅತ್ಯದ್ಭುತವಾದ ಛಾಯಾಚಿತ್ರಕ್ಕೆ  ನನ್ನ ಕವನ. 
 
 
 
ಹಕ್ಕಿ ತಾನು ಹಾರುವುದ ಮರೆತು
ಬಂದಿಲ್ಲಿ ಕುಳಿತಿದೆ
ತನಗೆ ತಿಳಿದ ಚಿಲಿಪಿಲಿಯ
ಹಾಡಲಿಲ್ಲಿ ಬಯಸಿದೆ

ರೆಕ್ಕೆಯುಂಟು ಹಾರಬಲ್ಲೆ
ಅಳೆಯ ಬಹುದು ಇಳೆಯನು
ಸಲ್ಲದು ನನಗದು;
ಸಾಗಬೇಕಿದೆ ಸತ್ಯದ ಕಡೆಗೆ!

ರವಿ,ಚಂದ್ರರ ನೋಡಬಲ್ಲೆ
ತಿಳಿಯುವುದು ಹಗಲಿರುಳು
ಒಲ್ಲೆ ಇರುಳ ಜೀವನ;
ಕಾಣ ಬಯಸುವೆ ಹಗಲನು

ಕಟ್ಟಿಗೆಯಿಂದ ಕಾಯವ ಸುಡುವರು
ತೆನೆಯು ತನುವ ಸಾಗಿಸುವುದು
ಮರಣದ ಚಿಂತೆಯಾಕೆ ?
ಮೃತ್ಯುವ ಮರೆತು ಜೀವಿಸೋಣ!

Tuesday, 7 February, 2012

ವ(ಹ)ರ್ಷ ಕವನ

೨೦೧೨ರ ಹೊಸ ವರ್ಷವನ್ನು ನಾನು ಪುಟಾಣಿಗಳ (ದೀಪು, ರಶ್ಮಿ, ರಾಧಿಕ, ರಂಜಿತಾ, ಸಂಧ್ಯಾ) ಜೊತೆ ಆಚರಿಸಿದೆ. ಈ ಕುರಿತಾಗಿ ಬರೆದ ಕವನ.

ನೆನ್ನೆ  ಇತ್ತು ಆಚರಣೆ
ಬೆಳಗಿನವರೆಗೂ ಜಾಗರಣೆ !

ಸೇರಿದೆವು ಸಂಜೆ ಕೊಳದ ಬಳಿ
ಜೊತೆಯಾಯಿತು ತಂಗಾಳಿ
ಆಡಿದೆವಲ್ಲಿ ಹಲವಾರು ಆಟ
ಯಾರು ಕಳಿಸಿಕೊಟ್ಟರೋ ಸಮಯಕ್ಕೆ ಓಟ !

ಗಡಿಯಾರದ ಮುಳ್ಳಿಗೋ
ಗುರಿ ಮುಟ್ಟುವ ಕಾತರ
ಅಡುಗೆ ಮನೆಯ ಊಟವ
ಬಯಸಲಿಲ್ಲ ನಮ್ಮುದರ!

ಮಾತಿನರಮನೆಯೇ ನೆಲೆಸಿತ್ತಲ್ಲಿ
ಮೌನ ಮಂಕಾಯಿತು
ಭಾವನೆಗಳು ತುಂಬಿತ್ತಲ್ಲಿ
ಗಾನ ಲಾಸ್ಯ ಮೂಡಿತು

ಕೊರೆವ ಆ ಚಳಿಯಲ್ಲೂ  
ನಮಗೊಂದೇ ಆಸೆ, ಐಸ್ ಕ್ರೀಮು ತಿನ್ನಬೇಕೆಂದು
ನೆನೆಪಿಸಿ ಕೊಂಡರೆ ಈಗಲೂ
ನಮಗೊಂದೇ ಆಸೆ, ಹೊಸ ವರ್ಷ ಬರಬೇಕೆಂದು

ನೆನ್ನೆ  ಇತ್ತು ಆಚರಣೆ
ಹೊಸ ವರ್ಷಕೆ ಜಾಗರಣೆ!