Showing posts with label ಚಿತ್ರ ಕವನ. Show all posts
Showing posts with label ಚಿತ್ರ ಕವನ. Show all posts

Thursday, 22 March 2012

ದ್ವಿಜ ಉವಾಚ


ನನ್ನ ತಮ್ಮ ತೆಗೆದ ಈ ಅತ್ಯದ್ಭುತವಾದ ಛಾಯಾಚಿತ್ರಕ್ಕೆ  ನನ್ನ ಕವನ. 
 
 
 
ಹಕ್ಕಿ ತಾನು ಹಾರುವುದ ಮರೆತು
ಬಂದಿಲ್ಲಿ ಕುಳಿತಿದೆ
ತನಗೆ ತಿಳಿದ ಚಿಲಿಪಿಲಿಯ
ಹಾಡಲಿಲ್ಲಿ ಬಯಸಿದೆ

ರೆಕ್ಕೆಯುಂಟು ಹಾರಬಲ್ಲೆ
ಅಳೆಯ ಬಹುದು ಇಳೆಯನು
ಸಲ್ಲದು ನನಗದು;
ಸಾಗಬೇಕಿದೆ ಸತ್ಯದ ಕಡೆಗೆ!

ರವಿ,ಚಂದ್ರರ ನೋಡಬಲ್ಲೆ
ತಿಳಿಯುವುದು ಹಗಲಿರುಳು
ಒಲ್ಲೆ ಇರುಳ ಜೀವನ;
ಕಾಣ ಬಯಸುವೆ ಹಗಲನು

ಕಟ್ಟಿಗೆಯಿಂದ ಕಾಯವ ಸುಡುವರು
ತೆನೆಯು ತನುವ ಸಾಗಿಸುವುದು
ಮರಣದ ಚಿಂತೆಯಾಕೆ ?
ಮೃತ್ಯುವ ಮರೆತು ಜೀವಿಸೋಣ!

Tuesday, 23 December 2008

ಹಿಡಿ ಪ್ರೀತಿ

ಚಿತ್ರಾರವರ ಬ್ಲಾಗಲ್ಲಿ "ಏನೂ ಬೇಡ.. ಒಂದು ಹಿಡಿ ಪ್ರೀತಿ ಕೊಡ್ತೀರಾ?!" ಲೇಖನ ಓದಿ ಆ ಸಾರಾಂಶವನ್ನೇ ಕವನದಲ್ಲಿ ಬರೆದಿದ್ದೇನೆ. ಇದರ ವಿಚಾರವೆಲ್ಲಾ ಆಕೆಯದ್ದೇ. ಅವರ ಅನುಮತಿಯಿಲ್ಲದೆ ಕವನ ಬರೆದಿದ್ದೆ. ಆಮೇಲೆ ಅವರೇ ತಮ್ಮ ಬ್ಲಾಗಿನಲ್ಲೂ ಈ ಕವನಕ್ಕೆ ಸ್ಥಾನ ಕೊಟ್ಟಿದ್ದಾರೆ. ಅವರಿಗೆ ವಂದನೆಗಳು.

ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು
ಯಾರು ಬರುವರು ಇದ ಬೆಳಗಲು?
ಸೂರ್ಯನೋ? ಸೋಮನೋ?

ಪ್ರೀತಿಯ ಹುಡುಕಿ ಬಳಲಿದೆ ಜೀವ
ಎಲ್ಲಡಗಿರ ಬಹುದು ಈ ಪ್ರೀತಿ?
ಸಂಸಾರದಲ್ಲೋ? ಸಂದೇಶಗಳಲ್ಲೋ?

ದಿನವೆಲ್ಲಾ ಅಹಿಂಸೆಯ ವರದಿ
ಮನದಲ್ಲಿ ನೋವಿನ ಸರದಿ
ಹೇಳುವುದೋ? ಬಿಡುವುದೋ?

ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ*
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!

--
*"ಪ್ರೀತಿಯ ಕಿಡಿಯಿಂದ"- ಇದು ನನ್ನ ಸ್ವಂತದ್ದು.

Friday, 19 December 2008

ನೆಲದ ಮೇಲೆ ಕಾಮನಬಿಲ್ಲು


ಈ ಚಿತ್ರಕ್ಕೆ ಶ್ರೀ ಶಿವು ಅವರಿಗೆ ರಾಷ್ಟ್ರೀಯ ಮಟ್ಟದ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. "ನೆಲದ ಮೇಲೆ ಕಾಮನಬಿಲ್ಲು" ಶೀರ್ಷಿಕೆ ಕೂಡ ಶಿವು ಅವರದ್ದೇ. ಈ ಚಿತ್ರಕ್ಕೆ ಒಂದು ಕವನ ಬರೆಯ ಬೇಕೆಂಬ ಆಸೆಯಾಗಿ ಅವರಲ್ಲಿ ಕೇಳಿಕೊಂಡಾಗ ನನಗೆ ಚಿತ್ರ ಕಳುಹಿಸಿಕೊಟ್ಟಿದ್ದಕ್ಕೆ ಅವರಿಗೆ ವಂದಿಸುತ್ತೇನೆ. ಅವರಿಗೆ ಈ ಕವನದ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ.



ಏನೀ ನೀರಿನಾಟ ? ಏನೀ ಪ್ರಕೃತಿ ಮಾಟ?
ಏನು ಸೋಜಿಗವೀ ಒಡನಾಟ?

ಕತ್ತಲು ಬೆಳಕ ನಡುವೆ
ಕಣ್ಣ ಹಾಯಿಸಿದಾಗ ಮೋಜು
ಸುತ್ತಲು ಹರಡಿಹ ಹನಿಗಳ
ಸೆರೆ ಹಿಡಿದಿದೆ ಗಾಜು!

ತುಂತುರಿನಾಟದಲ್ಲಿ ಮೂಡಿದೆ
ಅಂಬರದಲ್ಲಿ ಕಾಮನಬಿಲ್ಲು!
ಮಕ್ಕಳಾಟದಲ್ಲಿ ಮೂಡಿದೆ
ನೆಲದ ಮೇಲೆ ಕಾಮನಬಿಲ್ಲು!

ಛಲವಿದ್ದರೆ ಸಾಕು ನಮ್ಮಲ್ಲಿ
ಸಾಧಿಸ ಬಹುದು ಏನನ್ನಾದರೂ
ಊಹಿಸಿದ್ದರೇ ಮಕ್ಕಳು ಮೊದಲು
ಮೂಡಿಸವೆವು ನೆಲದ ಮೇಲೆ ಕಾಮನಬಿಲ್ಲು!

Monday, 15 December 2008

ಸಂಗಾತಿಯ ಚಿಂತೆಯಲ್ಲಿ


[ಚಿತ್ರವನ್ನು ಕಳುಹಿಸಿದ ಶ್ರೀಮತಿ ತೇಜಸ್ವಿನಿಯವರಿಗೆ ವಂದನೆಗಳು]



ಅಂದದ ತುಂಟ ಕಂಗಳು
ಕಂಬನಿ ಹಂಚದೆ;
ಸಂಕಟ ನುಂಗಿವೆ
ಸಂಗಾತಿಯ ಚಿಂತೆಯಲ್ಲಿ

ಬೆಳದಿಂಗಳಲ್ಲಿ ಸೌಂದರ್ಯವಿಲ್ಲ!
ಸಂಗೀತದಲ್ಲಿ ಇಂಚರವಿಲ್ಲ!
ಶ್ರೀಗಂಧದಲ್ಲಿ ಸುಗಂಧವಿಲ್ಲ!
ಸಂಗಾತಿಯ ಚಿಂತೆಯಲ್ಲಿ

ಬೆಂಕಿಗೆ ಸ್ಪಂದಿಸುವುದಿಲ್ಲ!
ನಿಂದಿಸುವರಿಗೆ ನಿಂದನೆಯಿಲ್ಲ!
ಅಂಗಾಂಗಗಳು ಅಂಕೆಯಿಲ್ಲಿಲ್ಲ!
ಸಂಗಾತಿಯ ಚಿಂತೆಯಲ್ಲಿ

ವಿ.ಸೂ: ಈ ಕವನದ ಪ್ರತಿಯೊಂದು ಪದವೂ ಅನುಸ್ವಾರಯುಕ್ತವಾದದ್ದು. ಹಿಂದೆ ಬರೆದ "ಅಂಬಿಗನ ಮಮತೆ"ಯ ಪಲ್ಲವಿ ಮಾತ್ರವೇ ಅನುಸ್ವಾರದಲ್ಲಿತ್ತು. ಬಹು ದಿನಗಳ ಪ್ರಯತ್ನ "ಅನುಸ್ವಾರಗಳ ಕವನ" ಈಗ ಫಲಕಾರಿಯಾಗಿದೆಯೆಂದು ಭಾವಿಸಿದ್ದೇನೆ.

Tuesday, 20 May 2008

ಅಮ್ಮನಿಗೆ


[ಬಾನುಲಿ.ಕಾಂ ನಲ್ಲಿ ಪ್ರಕಟಿತ]



ಬಾಯಿ ತೆರೆದು ಕೂತೆನಮ್ಮ
ಮಮ್ಮು ತಿನಿಸು ಬಾರಮ್ಮ

ಬಾನ ಕಡೆ ತೋರಿಸಮ್ಮ

ಬಂದಿಹನು ಚಂದಮಾಮ

ಅವನಿಗೆ ಉಣಿಸದಿರಮ್ಮ

ತಿಂದು ಗುಂಡಗಾಗಿಹನಮ್ಮ


ತಿನ್ನಲು ಹಠವ ಮಾಡೆನಮ್ಮ
ನಿನ್ನ ಮುದ್ದು ಕಂದಮ್ಮ....ನಾನಮ್ಮ
ಆಡಲು ಹಠವ ಮಾಡದಿರಮ್ಮ
ನನ್ನ ಮುದ್ದು ಅಮ್ಮ........ನೀನಮ್ಮ

ರಾಮ, ಕೃಷ್ಣರ ಕಥೆಯ ಹೇಳಮ್ಮ
ಪಂಚತಂತ್ರದ ನೀತಿ ಬೋಧಿಸಮ್ಮ
ಕಾಗಕ್ಕ, ಗುಬ್ಬಕ್ಕರ ಸ್ನೇಹ ತಿಳಿಸಮ್ಮ
ನನ್ನ ಒಳ್ಳೆ ಪ್ರಜೆಯಾಗಿಸಮ್ಮ

ನನ್ನ ಬೆಳವಣಿಗೆಗೆ ನೀನು ಅಗತ್ಯ
ನಿನ್ನ ಜೊತೆಯಲಿ ನಾನಿರುವೆ ನಿತ್ಯ!
ಈ ಮಾತು ನಾನಿರುವವರೆಗು ಸತ್ಯ
ಇದಕ್ಕೆ ಸಾಕ್ಷಿಗಳೇ ಚಂದ್ರಾದಿತ್ಯ!

Monday, 14 April 2008

ದುಃಖ ದೂರ



ಓಡಿ ಬಂದು ದುಃಖದಿಂದ
ಆಪ್ತ ಮಿತ್ರೆಯ ಸನಿಹ ಸೇರಿದ
ತನ್ನಂತರಾಳದ ನೋವುಗಳ
ಒಂದೂ ಬಿಡದೆ ಅವಳಲ್ಲಿ ಹೇಳಿಕೊಂಡ

ಗೆಳೆಯನ ನೆರವಿಗೆ ತಾನಾದಳು,
ನೊಂದ ಮನಕೆ ಸಾಂತ್ವಾನ ಹೇಳಲು,
ಪ್ರೀತಿ ನುಡಿಗಳ ಔಷಧಿಯ ನೀಡಿದಳು!

Tuesday, 11 March 2008

ಕಂದಮ್ಮ


ಮೊನ್ನೆ ಈ-ಮೈಲ್ ನಲ್ಲಿ ಈ ಚಿತ್ರ ಬಂತು. ತಕ್ಷಣ ನನ್ನ ಕೈಗಳು ಈ ಸಾಲುಗಳನ್ನು ಟೈಪ್ ಮಾಡಿದವು.

ಮುಚ್ಚಿರುವ ಕಣ್ಣುಗಳಿಂದ ಯಾರ ನೆನೆಯುತ್ತಿರುವೆ ?
ಮೆಚ್ಚಿರುವ ಕಂದಮ್ಮ ನೀನಾಗಿರುವೆ.

ಮುದ್ದಾದ ತುಟಿಗೆ ಮುತ್ತಿಟ್ಟು
ನಿದ್ದೆಯಿಂದ ಎಚ್ಚರಿಸುವೆ
ಬರಿದಾದ ಹಣೆಗೆ ಬೊಟ್ಟಿಟ್ಟು
ಚಂದ್ರನನ್ನು ಎಚ್ಚರಿಸುವೆ!