Friday, 30 January, 2009

ಬೆಕ್ಕಿಗೆ ಕೋಪ ಬಂದಿದೆ

ಬೆಕ್ಕಿಗೆ ಕೋಪ ಬಂದಿದೆ
ಹಾಲು ಮೊಸರು ಕಾಣದೆ
ಇನ್ನೂ ಕೋಪ ಬಂದಿದೆ
ಇಲಿಗಳು ಕಣ್ಣಿಗೆ ಬೀಳದೆ!

ಸದ್ದಿಲ್ಲದೆ ಬರುವುದು ಸದಾ
ಎಣಿಸದೆ ರಾತ್ರಿ ಹಗಲು
ಹತ್ತಾರು ಮನೆಗಳು ಇದಕ್ಕಿದೆ
ಹಾಲು ಮೊಸರು ಸವಿಯಲು

ಗಿಡ್ದ ದೇಹ, ದೊಡ್ಡ ದನಿ
ಕಣ್ಣಿನೊಳಗಿದೆ ಕನಿ!
ಬಿಡುವಿಲ್ಲದ ಮಿಯಾವಿಗೆ
ಕೊಡುತ್ತಿದ್ದೇನೆ ಕಿವಿ!

[ ಇದು "ಶಿಶುವಾಣಿ" ವಿಭಾಗದಲ್ಲಿನ ಎರಡನೆ ಕವನ]

Monday, 26 January, 2009

ಕಪ್ಪು ಝರಿ

ಬಿಳಿ ಬಂಡೆಯಿಂದ ಉದ್ಭವಿಸಿದ ಕಪ್ಪು ಝರಿ
ಸಹಸ್ರಾರು ರಂಧ್ರಗಳ ಕೊರೆದು ಹರಿಯುತಿದೆ
ಸೂರ್ಯನ ಪ್ರತಿಬಿಂಬವ ತೋರಿಸುವ ಕಪ್ಪು ಝರಿ
ಅಲೆ ಅಲೆಯಾಗಿ ಕರದ ಮೇಲೆ ಹರಿಯುತಿದೆ.

ಇಂದುಮುಖಿಯ ಹಿಂದಿರುವ ಕಪ್ಪು ಝರಿ
ತಂಗಾಳಿಗೆ ತೂರಾಡುತಿದೆ
ತನು ಮನವ ತಂಪುಗೊಳಿಸುವ ಕಪ್ಪು ಝರಿ
ನಯಾಗರಕ್ಕೆ ಸವಾಲೊಡ್ಡಿದೆ!

Monday, 19 January, 2009

ಕನ್ನಡಿಯೊಳಗಿನ ಗಂಟು!

ಕನ್ನಡಿ ತೋರುತಿಹ ಪ್ರತಿಬಿಂಬ ನಿನ್ನದೆ
ಕಣ್ಣು ನೋಡುತಿಹ ಪ್ರತಿ ನೋಟವೂ ನಿನ್ನದೆ

ಪ್ರತಿಬಿಂಬವ ಹಿಡಿದರೆ ನಿನ್ನ ಗಲ್ಲ ಹಿಡಿದಂತಲ್ಲ!
ಪ್ರತಿಬಿಂಬವ ಚುಂಬಿಸಿದರೆ ನಿನ್ನ ತುಟಿ ಸಿಹಿಯಾದಂತಲ್ಲ!
ಪ್ರತಿಬಿಂಬವ ಅಪ್ಪಿದರೆ ನೀ ನನ್ನವಳೆಂದಲ್ಲ
ಪುಷ್ಪವೃಷ್ಟಿಯ ಹರಿಸಿದರೆ ನಿನ್ನ ಪೂಜಿಸಿದಂತಲ್ಲ

ಪ್ರತಿಬಿಂಬಕ್ಕೆ ಸೀರೆ ಉಡಿಸಲಾದೀತೆ?
ಪ್ರತಿಬಿಂಬದ ಹಣೆ ಸಿಂಗರಿಸಲಾದೀತೆ?
ಪ್ರತಿಬಿಂಬಕ್ಕೆ ಜಡೆ ಹೆಣೆಯಲಾದೀತೆ?
ಪ್ರತಿಬಿಂಬಕ್ಕೆ ಹೂವ ಮುಡಿಸಲಾದೀತೆ?

ಭ್ರಮೆಯ ಲೋಕದಲ್ಲಿದ್ದವನು ನಾನು
ನೈಜ ಲೋಕದ ವಿಚಾರ ಹೇಳಬೇಕಿನ್ನು
ನನಗೂ ನಿನಗೂ ಎಲ್ಲಿಯ ನಂಟು
ನೀನೊಂದು ಕನ್ನಡಿಯೊಳಗಿನ ಗಂಟು!

Saturday, 10 January, 2009

ನಿರೀಕ್ಷೆಗಳೇ ಬೇಸರದ ಮೂಲ

ವಿಧ ವಿಧವಾದ ನಿರೀಕ್ಷೆಗಳೇತಕೆ?
ವಿಧಾತನು ಅದನ್ನು ವಿರೋಧಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ

ಪರಿ ಪರಿಯ ನಿರೀಕ್ಷೆಗಳೇಕೆ ಮನದಲ್ಲಿ?
ಹರಿಯು ಅದನ್ನು ಹುಸಿಯಾಗಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ

ನಿರೀಕ್ಷೆಗಳಿಗಿಡು ಪೂರ್ಣವಿರಾಮ
ಈಡೇರದಿರೆ ಅವು, ಚಿತ್ತ ನಿರ್ನಾಮ!
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ

Sunday, 4 January, 2009

ನಾನು ಸತ್ತ ಮೇಲೆ

ಬಹಳ ದಿನಗಳ ಹಿಂದೆ ನನಗೆ ವಿಪರೀತ ಜ್ವರವಿತ್ತು. ಆ ರಾತ್ರಿ ನಾನು ಮಲಗಿದೆ. ಮುಂಜಾನೆಯ ರವಿಯನ್ನು ನೋಡುತ್ತೇನೋ ಇಲ್ಲವೋ ಅನ್ನಿಸಿತ್ತು. ಇದ್ದಕ್ಕಿದ್ದ ಹಾಗೆ ನನ್ನ ದೇಹದ ತಾಪಮಾನ ಹೆಚ್ಚಾಗಿ ನಾನು ಸತ್ತು ಹೋದೆ!

ನನ್ನ ಸಂಸ್ಕಾರಕ್ಕೆ ಮನೆಯವರು ಸಿದ್ಧತೆ ನಡೆಸುತ್ತಿದ್ದದ್ದು ನನಗೆ ಗೊತ್ತಾಗುತ್ತಿತ್ತು. ಗೆಳೆಯರು, ಬಂಧು ಬಳಗದವರೆಲ್ಲರೂ ಸೇರಿದ್ದರು. ಅವರ ಕಂಬನಿಯು ನನಗೆ ಕಾಣುತ್ತಿತ್ತು. ನನ್ನ ಬಗ್ಗೆ ಆಡುತ್ತಿದ್ದ ಒಳ್ಳೆ ಮಾತುಗಳು ಕೇಳಿಸುತ್ತಾಯಿತ್ತು. ಅವರಿಗೆ ಸಮಾಧಾನ ಹೇಳ ಬೇಕೆಂದೆನಿಸಿತು. ಆದರೆ ನಾನು ಹೆಣ! ಹೇಗೆ ಮಾತನಾಡಲು ಸಾಧ್ಯ?

ಮಸಣದ ಕಡೆಗೆ ನನ್ನ ಹೊತ್ತಿಕೊಂಡು ಹೋದರು. ಇದೆಲ್ಲಾ ನನಗೆ ಗೊತ್ತಾಗುತ್ತಿತ್ತು. ನಾನು ನನ್ನಲ್ಲೇ ಹೇಳಿಕೊಂಡೆನು "ನಾನು ಸತ್ತಿರೋದು ನಿಜ. ಆದರೂ ನಾನು ಸಾಮಾನ್ಯರಂತೆ ಇದ್ದೀನಲ್ಲ. ಹೋ!...ಬಹುಶಃ ಮೊದಲ ಬಾರಿ ಸತ್ತಿದ್ದರಿಂದ ಈ ರೀತಿ ಎಲ್ಲವೂ ತಿಳಿಯುತ್ತಿದೆ" ಎಂದು ಸಮಾಧಾನ ಮಾಡಿಕೊಂಡೆ. ಅಗ್ನಿ ಸ್ಪರ್ಶ ಮಾಡುವುನ್ನು ನಾನು ತಡೆಯಲೇ ಇಲ್ಲ. ಅಗ್ನಿ ನನ್ನ ಸುಟ್ಟಾಗ ಎಷ್ಟರ ಮಟ್ಟಿಗೆ ಬಿಸಿಯಾಗಬಹುದು? ಅಂತ ಯೋಚನೆ ಮಾಡುತ್ತಾಯಿದ್ದೆ. ಬೇಗ ಸುಟ್ಟು ನನ್ನ ಬೂದಿ ಮಾಡಿದರೆ ಸಾಕಪ್ಪ... ಈ ಪ್ರಪಂಚದ ಋಣ ತೀರಿತೆಂದು ಆರಾಮವಾಗಿರ ಬಹುದು ಅಂತ ಯೋಚಿಸುತ್ತಿದ್ದೆ. ಅಗ್ನಿಯು ನನ್ನ ದಹಿಸುತ್ತಾಯಿದ್ದ. ನನ್ನ ಬೆನ್ನಿಗೆ ಅದರ ಅರಿವಾಗುತ್ತಾಯಿತ್ತು. ಆದರೂ ಕಿರುಚಲಿಲ್ಲ. ಅಗ್ನಿಗೆ ನನ್ನ ಮುಖವನ್ನು ಸುಡುವ ಆಸೆಯಾಯಿತು. ಆ ಕೆಲಸವನ್ನು ಪ್ರಾರಂಭಿಸಿದ. ಅವನ ಶಾಖ ಈಗ ವಿಪರೀತವಿತ್ತು. ನನ್ನ ಹೆಣಕ್ಕೆ ಅದನ್ನು ತಡೆಯಲು ಶಕ್ತಿಯಿರಲಿಲ್ಲ! ಚಿತೆಯಿಂದ ಎದ್ದು ಬಿಡ ಬೇಕು ಅಂತ ಅನ್ನಿಸಿತು. ಆದರೆ ನನ್ನನ್ನು ಕಟ್ಟಿಗೆಗಳಿಂದ ಮುಚ್ಚಿದ್ದರಿಂದ ಸ್ವಲ್ಪ ಕಷ್ಟವಾಯಿತು. ಅಗ್ನಿಯ ಶಾಖಕ್ಕಿಂತ ಎದ್ದು ಓಡುವುದು ಉತ್ತಮೆವೆಂದು ಹೇಗೋ ಕಷ್ಟ ಪಟ್ಟು ಚಿತೆಯಿಂದ ಎದ್ದು ನೋಡಿದರೆ.. ನನ್ನ ಮುಖಕ್ಕೆ ಸೂರ್ಯನ ಕಿರಣಗಳು ಚುಂಬಿಸುತ್ತಾಯಿದ್ದವು. ಆಮೇಲೆ ಗೊತ್ತಾಗಿದ್ದು ಅವು ಕಟ್ಟಿಗೆಗಳಲ್ಲ.. ಕಂಬಳಿಗಳು! ಜ್ವರ ಬಂದಿರಲಿಲ್ಲ.. ಕಂಬಳಿಯ ಶಾಖಕ್ಕೆ ಮೈ ಬಿಸಿಯಾಗಿತ್ತು.