Saturday, 15 April 2017

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಮನೆಯಲ್ಲೆಲ್ಲ ಸದ್ದು
ಹೆಂಡತಿಯೊಬ್ಬಳು ಹತ್ತಿರವಿದ್ದರೆ
ನನಗವಳೇ ಮುದ್ದು

ನಲ್ಲಿಯ ತಿರುಗಿಸಿ ನೀರನು ಹರಿಸಿ
ಮನೆಯಲ್ಲಾ ಕೊಳವು
ನಾನು ಮನೆಗೆ ಬರುವ ವೇಳೆಗೆ
ಏನೂಯಿಲ್ಲ ಸುಳಿವು

ಕೋಸಿನ ಹುಳಿಯನು ಮಾಡಿದಳಂದು
ತುಂಬಾ ಪ್ರೀತಿಯಿಂದ
ತೊಗರಿಯ ಬದಲು ಕಡ್ಲೆ ಬೇಳೆ
ತಪ್ಪೇನಾಯಿತದರಿಂದ

ದಿನವೂ ನಾ ಹಾಕುವ ಬಟ್ಟೆಯು
ಇವಳದೇ ನಿರ್ಧಾರ
ಎಲ್ಲರ ಮುಂದೆ ಮಿಂಚುವ ನಾನು
ಇವಳಿಗೆ ಸರ್ದಾರ

ಕಷ್ಟವು ಸರಿಯೇ ಸುಖವೂ ಸರಿಯೇ
ಜೊತೆಗೆ ಇರುತ್ತಾಳೆ
ನನ್ನ ಜೀವನ ಸಾರ್ಥಕಗೂಳಿಸಲು
ಭೂಮಿಗೆ ಬಂದಿದ್ದಾಳೆ 

ವಿ.ಸೂ:  ಕೆ ಎಸ್ ನ ಅವರ ಕವನದ ಶೈಲಿಯಲ್ಲಿ. 

Saturday, 20 July 2013

ನಿನ್ನೊಳಗಿರಲು ನಾ ಯಾರೇ...?

ನೀರೊಳಗಿರಲು ನಾ ಮೀನೇ?
ಚಿಪ್ಪೊಳಗಿರಲು ನಾ ಮುತ್ತೇ?
ಗೂಡೊಳಗಿರಲು ನಾ ಜೇನೇ ?
ನಿನ್ನೊಳಗಿರಲು ನಾ ಯಾರೇ?

ಹೂವೊಳಗಿರಲು ನಾ ಕಂಪೇ?
ಹಣ್ಣೊಳಗಿರಲು ನಾ ರುಚಿಯೇ?
ಅದಿರೊಳಗಿರಲು ನಾ ಹೊನ್ನೇ?
ನಿನ್ನೊಳಗಿರಲು ನಾ ಯಾರೇ?

ಮುಗಿಲಲಿರಲು ನಾ ರವಿಯೇ?
ಜಯದೊಳಿರಲು ನಾ ನಗುವೇ?
ಭಂಡಾರದೊಳಿರಲು ನಾ ಸಿರಿಯೇ?
ನಿನ್ನೊಳಗಿರಲು ನಾ ಯಾರೇ?

Sunday, 19 August 2012

ಅಗ್ರಜಾನುಭವ


ಫಲವ ಬಯಸದೇ ನಿನ್ನ
ಕೆಲಸವ ಮಾಡುತಿರು,
ಫಲವೇ ನಿನ್ನರಸುವುದು ಅಗ್ರಜ

ಚಿಕ್ಕ ಮೌಲ್ಯವೆಂದು ಒಂದನ್ನು,
ಪಕ್ಕದಲ್ಲಿಟ್ಟು ಕಡೆಗಣಿಸಿದರೆ
ಮಿಕ್ಕ ತೊಂಬತ್ತೊಂಬತರ ಮೌಲ್ಯ
ಲೆಕ್ಕಕ್ಕೆ ದೊರೆಯುವುದಿಲ್ಲ ಅಗ್ರಜ

ಹೊಸ ವಸ್ತು, ಹೊಸ ವಸ್ತ್ರ, ಹೊಸ ವರ್ಷವೆನ್ನುತ್ತಾರೆ
ತಾಸು, ದಣಿಯದೆ ಓಡುತಿರಲು
ಹೊಸದೇನಿರುವುದು ವಸುಂಧರೆಯಲಿ ಅಗ್ರಜ

Saturday, 31 March 2012

ಪಂಜರದಿಂದ ಪ್ರಪಂಚಕ್ಕೆ!

ಕುಳಿತಿದ್ದೆವು ನಾವು, ತಿಳಿಯದೆ ಅನ್ಯ ಪ್ರಪಂಚ
ಸಾಕಿದ್ದರು ನಮ್ಮ, ತೋರದೆ ಕರುಣೆ ಕೊಂಚ

ಕೋಮಲವಾದ ಕರಗಳಲ್ಲಿ ಸೇರಿದಾಗಲೂ ನಾವು
ತಿಳಿದಿದ್ದೆವೂ ಇನ್ನು ಮುಂದೂ ನಮಗೆ ಬೇವು

ಸಹೃದಯದ ಪೋರಿಗೆ ತಿಳಿಯಿತಾದರೂ ಹೇಗೆ
ಈ ಪ್ರಣಯ ಹಕ್ಕಿಗಳ ಪ್ರತಿದಿನದ ಬೇಗೆ?

ಉಡುಗೊರೆಯಾಗಿ ಕೊಡುತ್ತಾ ನಮ್ಮನ್ನು,
ಬಿಡುಗಡೆ ಮಾಡಿಸಿದಳು... ಪಂಜರದಿಂದ ಪ್ರಪಂಚಕ್ಕೆ!