ವಿಧ ವಿಧವಾದ ನಿರೀಕ್ಷೆಗಳೇತಕೆ?
ವಿಧಾತನು ಅದನ್ನು ವಿರೋಧಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ
ಪರಿ ಪರಿಯ ನಿರೀಕ್ಷೆಗಳೇಕೆ ಮನದಲ್ಲಿ?
ಹರಿಯು ಅದನ್ನು ಹುಸಿಯಾಗಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ
ನಿರೀಕ್ಷೆಗಳಿಗಿಡು ಪೂರ್ಣವಿರಾಮ
ಈಡೇರದಿರೆ ಅವು, ಚಿತ್ತ ನಿರ್ನಾಮ!
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ
Saturday, 10 January 2009
ನಿರೀಕ್ಷೆಗಳೇ ಬೇಸರದ ಮೂಲ
Posted By ಅಂತರ್ವಾಣಿ at 5:25 pm 13 ಜನ ಸ್ಪಂದಿಸಿರುವರು
ವಿಭಾಗ: ಅಗ್ರಜಾನುಭವ, ಕವನಗಳು
Sunday, 4 January 2009
ನಾನು ಸತ್ತ ಮೇಲೆ
ಬಹಳ ದಿನಗಳ ಹಿಂದೆ ನನಗೆ ವಿಪರೀತ ಜ್ವರವಿತ್ತು. ಆ ರಾತ್ರಿ ನಾನು ಮಲಗಿದೆ. ಮುಂಜಾನೆಯ ರವಿಯನ್ನು ನೋಡುತ್ತೇನೋ ಇಲ್ಲವೋ ಅನ್ನಿಸಿತ್ತು. ಇದ್ದಕ್ಕಿದ್ದ ಹಾಗೆ ನನ್ನ ದೇಹದ ತಾಪಮಾನ ಹೆಚ್ಚಾಗಿ ನಾನು ಸತ್ತು ಹೋದೆ!
ನನ್ನ ಸಂಸ್ಕಾರಕ್ಕೆ ಮನೆಯವರು ಸಿದ್ಧತೆ ನಡೆಸುತ್ತಿದ್ದದ್ದು ನನಗೆ ಗೊತ್ತಾಗುತ್ತಿತ್ತು. ಗೆಳೆಯರು, ಬಂಧು ಬಳಗದವರೆಲ್ಲರೂ ಸೇರಿದ್ದರು. ಅವರ ಕಂಬನಿಯು ನನಗೆ ಕಾಣುತ್ತಿತ್ತು. ನನ್ನ ಬಗ್ಗೆ ಆಡುತ್ತಿದ್ದ ಒಳ್ಳೆ ಮಾತುಗಳು ಕೇಳಿಸುತ್ತಾಯಿತ್ತು. ಅವರಿಗೆ ಸಮಾಧಾನ ಹೇಳ ಬೇಕೆಂದೆನಿಸಿತು. ಆದರೆ ನಾನು ಹೆಣ! ಹೇಗೆ ಮಾತನಾಡಲು ಸಾಧ್ಯ?
ಮಸಣದ ಕಡೆಗೆ ನನ್ನ ಹೊತ್ತಿಕೊಂಡು ಹೋದರು. ಇದೆಲ್ಲಾ ನನಗೆ ಗೊತ್ತಾಗುತ್ತಿತ್ತು. ನಾನು ನನ್ನಲ್ಲೇ ಹೇಳಿಕೊಂಡೆನು "ನಾನು ಸತ್ತಿರೋದು ನಿಜ. ಆದರೂ ನಾನು ಸಾಮಾನ್ಯರಂತೆ ಇದ್ದೀನಲ್ಲ. ಹೋ!...ಬಹುಶಃ ಮೊದಲ ಬಾರಿ ಸತ್ತಿದ್ದರಿಂದ ಈ ರೀತಿ ಎಲ್ಲವೂ ತಿಳಿಯುತ್ತಿದೆ" ಎಂದು ಸಮಾಧಾನ ಮಾಡಿಕೊಂಡೆ. ಅಗ್ನಿ ಸ್ಪರ್ಶ ಮಾಡುವುನ್ನು ನಾನು ತಡೆಯಲೇ ಇಲ್ಲ. ಅಗ್ನಿ ನನ್ನ ಸುಟ್ಟಾಗ ಎಷ್ಟರ ಮಟ್ಟಿಗೆ ಬಿಸಿಯಾಗಬಹುದು? ಅಂತ ಯೋಚನೆ ಮಾಡುತ್ತಾಯಿದ್ದೆ. ಬೇಗ ಸುಟ್ಟು ನನ್ನ ಬೂದಿ ಮಾಡಿದರೆ ಸಾಕಪ್ಪ... ಈ ಪ್ರಪಂಚದ ಋಣ ತೀರಿತೆಂದು ಆರಾಮವಾಗಿರ ಬಹುದು ಅಂತ ಯೋಚಿಸುತ್ತಿದ್ದೆ. ಅಗ್ನಿಯು ನನ್ನ ದಹಿಸುತ್ತಾಯಿದ್ದ. ನನ್ನ ಬೆನ್ನಿಗೆ ಅದರ ಅರಿವಾಗುತ್ತಾಯಿತ್ತು. ಆದರೂ ಕಿರುಚಲಿಲ್ಲ. ಅಗ್ನಿಗೆ ನನ್ನ ಮುಖವನ್ನು ಸುಡುವ ಆಸೆಯಾಯಿತು. ಆ ಕೆಲಸವನ್ನು ಪ್ರಾರಂಭಿಸಿದ. ಅವನ ಶಾಖ ಈಗ ವಿಪರೀತವಿತ್ತು. ನನ್ನ ಹೆಣಕ್ಕೆ ಅದನ್ನು ತಡೆಯಲು ಶಕ್ತಿಯಿರಲಿಲ್ಲ! ಚಿತೆಯಿಂದ ಎದ್ದು ಬಿಡ ಬೇಕು ಅಂತ ಅನ್ನಿಸಿತು. ಆದರೆ ನನ್ನನ್ನು ಕಟ್ಟಿಗೆಗಳಿಂದ ಮುಚ್ಚಿದ್ದರಿಂದ ಸ್ವಲ್ಪ ಕಷ್ಟವಾಯಿತು. ಅಗ್ನಿಯ ಶಾಖಕ್ಕಿಂತ ಎದ್ದು ಓಡುವುದು ಉತ್ತಮೆವೆಂದು ಹೇಗೋ ಕಷ್ಟ ಪಟ್ಟು ಚಿತೆಯಿಂದ ಎದ್ದು ನೋಡಿದರೆ.. ನನ್ನ ಮುಖಕ್ಕೆ ಸೂರ್ಯನ ಕಿರಣಗಳು ಚುಂಬಿಸುತ್ತಾಯಿದ್ದವು. ಆಮೇಲೆ ಗೊತ್ತಾಗಿದ್ದು ಅವು ಕಟ್ಟಿಗೆಗಳಲ್ಲ.. ಕಂಬಳಿಗಳು! ಜ್ವರ ಬಂದಿರಲಿಲ್ಲ.. ಕಂಬಳಿಯ ಶಾಖಕ್ಕೆ ಮೈ ಬಿಸಿಯಾಗಿತ್ತು.
Posted By ಅಂತರ್ವಾಣಿ at 9:00 am 15 ಜನ ಸ್ಪಂದಿಸಿರುವರು
Tuesday, 30 December 2008
ಮೊಬೈಲು ಮರೆತಾಗ...
ಬೆಳಿಗ್ಗೆ ಗಡಿಬಿಡಿಯಲ್ಲಿದ್ದೆ. ಆಫೀಸಿಗೆ ಹೋಗಲು ತಡವಾಗುತ್ತಾಯಿತ್ತು. ಅಮ್ಮ ನನ್ನ ಊಟದ ಡಬ್ಬಿಯನ್ನು ಬ್ಯಾಗಿನೊಳಗೆ ಇಟ್ಟಿದ್ದರು. ತುಂಬಾ ಗಡಿಬಿಡಿಯಲ್ಲಿದ್ದಿದ್ದರಿಂದ ಬ್ಯಾಗನ್ನು ಮರೆತು ಆಫೀಸಿಗೆ ಹೊರಟೆ. ಮಧ್ಯ ದಾರಿಯಲ್ಲಿ ಬ್ಯಾಗು ನನ್ನ ಬಳಿ ಇಲ್ಲವೆಂದು ಅರಿವಿಗೆ ಬಂತಾದರೂ ತಲೆ ಕೆಡೆಸಿಕೊಳ್ಳದೇ ಹೋಗಿ ಆಫೀಸು ಬಸ್ ಹತ್ತಿದೆ.
ಈ ದಿನ ಬಸ್ಸಿನಲ್ಲಿ ಹೊಸ ಮುಖವನ್ನು ನೋಡಿದೆ. ಅವರು ನನ್ನ ಪಕ್ಕದಲ್ಲೇ ಕುಳಿತಿದ್ದರು. ನಾನು ಎಂದಿನಂತೆ ಮೌನ ರಾಜ! ಸ್ವಲ್ಪ ಹೊತ್ತಿನಲ್ಲೇ ಯಾಕೋ ನನ್ನ ಮೊಬೈಲಿಗಾಗೆ ಜೇಬಿನೊಳಗೆ ಹುಡುಕಿದೆ. ಆದರೆ ಅದು ಸಿಗಲಿಲ್ಲ. ನಂತರ ಈ ವ್ಯಕ್ತಿ ತಮ್ಮ ಮೊಬೈಲನ್ನು ಕೊಟ್ಟು ಕರೆ ಮಾಡು.. ಇಲ್ಲೇ ಬಿದ್ದಿದ್ದರೆ ಸಿಗುತ್ತದೆ ಎಂದರು. ನನಗೆ ಅವರ SIMಯಿಂದ ಕರೆ ಮಾಡಲು ಮುಜುಗರವಾಯಿತು. ಅದಕ್ಕೆ ನನ್ನ Walletಯಿಂದ ನನ್ನ "SIM" Card ತೆಗೆದೆ! ನಂತರ ಅದನ್ನು ಆತನ ಫೋನಿನೊಳಗೆ ಹಾಕಿ, ನನ್ನ ನಂಬರಿಗೆ ಕರೆ ಮಾಡಿದೆ. ಅದನ್ನು ಅಮ್ಮ ಸ್ವೀಕರಿಸಿದರು. "ಮಗು, ಮನೆಯಲ್ಲೇ ಮೊಬೈಲ್ ಹಾಗು ಬ್ಯಾಗು ಬಿಟ್ಟೀದ್ದೀಯಲ್ಲಾ?, ಊಟದ ಡಬ್ಬಿ ಕೂಡ ಇಲ್ಲೇ ಇದೆ" ಅಂದರು. ಇರಲಿ ಅಮ್ಮ.. ನಾನು ಊಟ ಆಫೀಸಿನಲ್ಲೇ ಮಾಡುತ್ತೇನೆ, ಸದ್ಯ ಫೋನು ಮನೆಯಲ್ಲೇ ಇದೆ ಅಲ್ವ ಸಾಕು ಎಂದೆ. ನನ್ನ ಫೋನು ಮನೆಯಲ್ಲಿ ಜೋಪಾನವಾಗಿದೆ ಎಂದು ಸಂತಸ ಪಟ್ಟೆ.
ಆತನಿಗೆ ಧನ್ಯವಾದ ಹೇಳಿ, ಫೋನು ಹಿಂದಿರುಗಿಸಲು ಹೋದಾಗ, "ಇದು ನಿಮ್ಮ ಬಳಿಯೇ ಇರಲಿ, ನಿಮ್ಮ ಫೋನು ನಿಮ್ಮ ಕೈಗೆ ಬಂದ ಮೇಲೆ ನನಗೆ ಹಿಂದಿರುಗಿಸಿ" ಎಂದರು. ಇಂತಹ ಸದ್ಗುಣವುಳ್ಳವರೂ ಇದ್ದಾರಲ್ಲಾ ನಮ್ಮ ಪ್ರಪಂಚದಲ್ಲಿ ಎಂದು ಅನಿಸಿತು. ನಂತರ ಆತ ಮತ್ತೆ ಸಿಗದೇ ಹೋದರೆ ಫೋನು ಹಿಂದಿರುಗಿಸಲು ಅಸಾಧ್ಯವಾಗಬಹುದೆಂದು, ನನ್ನ ಪಕ್ಕದಲ್ಲೇ ಇದ್ದ ನನ್ನ ಬ್ಯಾಗಿನಿಂದ ಪುಸ್ತಕ ತೆಗೆದು ಆತನ ವಿ-ಅಂಚೆ ವಿಳಾಸ ಬರೆಸಿಕೊಂಡೆ.
ಇದೆಲ್ಲಾ ಆದ ಮೇಲೆ ಒಂದು ದಿನ ಆತ ನನಗೆ ಸಿಕ್ಕಿದ. ಅವನ ಫೋನು ಹಿಂದಿರುಗಿಸಲು ಹೋದಾಗ ಏನಾಯಿತೋ ಗೊತ್ತಾಗಲಿಲ್ಲ... ಅಮ್ಮ ಬಂದು "ಮಗು, ಎದ್ದೇಳು... ೬ ಗಂಟೆ ಆಯ್ತು"ಅಂದರು.
---
ಎರಡು ದಿನಗಳ ನಂತರ
---
ನಾನು ಯಥಾ ಪ್ರಕಾರ ಮೊಬೈಲು ಮರೆತು ಆಫೀಸಿಗೆ ಹೋಗಿದ್ದೆ. ಮೊಬೈಲು ಶೋಕೇಸಿನಲ್ಲಿ ಇದ್ದದ್ದು ಗಮನಿಸಿದ ಅಮ್ಮ, "ಅಯ್ಯೋ! ಗೂಬೆ... ಫೋನು ಮರೆತು ಹೋಗಿದ್ದಾನಲ್ಲ..." ಎಂದು ಹೇಳಿ, ಫೋನು ತೆಗೆದು ಕೊಂಡು ನನಗೆ ಫೋನು ಮಾಡಿದರು. ನನ್ನ ಫೋನು ರಿಂಗ ಕೂಡ ಆಯ್ತು ಆದರೆ ನಾನು ಸ್ವೀಕರಿಸಲಿಲ್ಲ. ಯಾಕೆ ಸ್ವೀಕರಿಸುತ್ತಿಲ್ಲ ಎಂದು ಯೋಚನೆ ಮಾಡುತ್ತಾಯಿದ್ದರಂತೆ ಎಚ್ಚರವಾದ ಮೇಲೆ ತಿಳಿಯಿತು ಅದು ಫೋನಿನ ರಿಂಗಿಂಗ್ ಅಲ್ಲ..... ನಮ್ಮ ಮನೆ Alarm ಕೂಗುತ್ತಿತ್ತು!
Posted By ಅಂತರ್ವಾಣಿ at 11:00 pm 14 ಜನ ಸ್ಪಂದಿಸಿರುವರು
Tuesday, 23 December 2008
ಹಿಡಿ ಪ್ರೀತಿ
ಚಿತ್ರಾರವರ ಬ್ಲಾಗಲ್ಲಿ "ಏನೂ ಬೇಡ.. ಒಂದು ಹಿಡಿ ಪ್ರೀತಿ ಕೊಡ್ತೀರಾ?!" ಲೇಖನ ಓದಿ ಆ ಸಾರಾಂಶವನ್ನೇ ಕವನದಲ್ಲಿ ಬರೆದಿದ್ದೇನೆ. ಇದರ ವಿಚಾರವೆಲ್ಲಾ ಆಕೆಯದ್ದೇ. ಅವರ ಅನುಮತಿಯಿಲ್ಲದೆ ಕವನ ಬರೆದಿದ್ದೆ. ಆಮೇಲೆ ಅವರೇ ತಮ್ಮ ಬ್ಲಾಗಿನಲ್ಲೂ ಈ ಕವನಕ್ಕೆ ಸ್ಥಾನ ಕೊಟ್ಟಿದ್ದಾರೆ. ಅವರಿಗೆ ವಂದನೆಗಳು. 
ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು
ಯಾರು ಬರುವರು ಇದ ಬೆಳಗಲು?
ಸೂರ್ಯನೋ? ಸೋಮನೋ?
ಪ್ರೀತಿಯ ಹುಡುಕಿ ಬಳಲಿದೆ ಜೀವ
ಎಲ್ಲಡಗಿರ ಬಹುದು ಈ ಪ್ರೀತಿ?
ಸಂಸಾರದಲ್ಲೋ? ಸಂದೇಶಗಳಲ್ಲೋ?
ದಿನವೆಲ್ಲಾ ಅಹಿಂಸೆಯ ವರದಿ
ಮನದಲ್ಲಿ ನೋವಿನ ಸರದಿ
ಹೇಳುವುದೋ? ಬಿಡುವುದೋ?
ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ*
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!
--
*"ಪ್ರೀತಿಯ ಕಿಡಿಯಿಂದ"- ಇದು ನನ್ನ ಸ್ವಂತದ್ದು.
Posted By ಅಂತರ್ವಾಣಿ at 10:11 pm 14 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಚಿತ್ರ ಕವನ, ವಿಶೇಷ ಕವನಗಳು