Thursday, 14 August 2008

ಲಕ್ಷ್ಮಿ.....

ಯಾರೀ ಲಕ್ಷ್ಮಿ?.....
ಕ್ಷೀರಸಮುದ್ರ ರಾಜನ ಮಗಳೇ?
ವಿಷ್ಣುವಿನ ಮಡದಿಯೇ?
ದುಡ್ಡಿನ ದೇವತೆಯೇ? ಅಥವಾ
ಇಂದು ಎಲ್ಲಾರು ಆಚರಿಸುತ್ತಾಯಿರುವ ವರಮಹಾಲಕ್ಷ್ಮಿಯೇ?

ಇದೆಲ್ಲವೂ ಸರಿ. ಆದರೆ ನಾನು ಹೇಳೋ ಲಕ್ಷ್ಮಿ ಇವರ್ಯಾರೂ ಅಲ್ಲ. ನನ್ನ ಬಾಲ್ಯ ಜೀವನದಲ್ಲಿ ಕಂಡವಳು. ನನ್ನ ಕಾಲೇಜು ಜೀವನದಲ್ಲೂ ಇವಳನ್ನು ನೋಡಿದ್ದೇನೆ. ನನ್ನ ವೃತ್ತಿ ಪ್ರಾರಂಭವಾದ ಮೇಲೆ ಅವಳನ್ನು ನೋಡಲು ಆಗಲಿಲ್ಲ. ಅವಳ ಕುರಿತು ಬರೆಯಬೇಕೆಂದು ಇಂದು ಅನ್ನಿಸಿ ಬರೆಯ್ಯುತ್ತಿದ್ದೇನೆ.

ಶನಿವಾರ ನಮ್ಮ ಶಾಲೆ ೧೨.೩೦ಕ್ಕೆ ಮುಗಿಯುತ್ತಾಯಿತ್ತು. ಮನೆಗೆ ಬಂದು ಊಟವಾದ ಮೇಲೆ ನಾನು ಹಾಗು ನನ್ನ ಮಾವನ ಮಗ ಇವಳನ್ನು ನೋಡಲು ಹೋಗುತ್ತಾಯಿದ್ದೆವು. ಒಂದು ಹೆಣ್ಣು... ಎರಡು ಗಂಡು ಎಂದು ಯೋಚನೆ ಮಾಡಬೇಡಿ. ನಮ್ಮ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲೇ ಇವಳಿದ್ದಳು. ಅವಳು ಯಾರೆಂದರೆ.. ಸಿನಿಮಾ ಟೆಂಟು! ಆ ಟೆಂಟಿನಲ್ಲಿ ನಾವು ನೋಡುತ್ತಿದ್ದ ಸಿನಿಮಾಗಳ ಸಂಖ್ಯೆ ನಮಗೇ ನೆನಪಿಲ್ಲ! ಅದನ್ನು ಕರೆಯುತ್ತಾಯಿದ್ದದ್ದು ಲಕ್ಷ್ಮಿ ಟೆಂಟ್.

ಅಲ್ಲಿ ೨.೧೫ ಗೆ ಮ್ಯಾಟಿನಿ ಶೋ ಪ್ರಾರಂಭವಾಗುತ್ತಾಯಿತ್ತು. ನಾವು ೧೫ ನಿಮಿಷಗಳು ಮುಂಚಿತವಾಗಿಯೇ ಅಲ್ಲಿ ಇರುತ್ತಾಯಿದ್ದೆವು. ಆ ಸಾಲಿನಲ್ಲಿ ನಿಂತು, ೫ ರೂಪಾಯಿಯ ಎರಡು ಟಿಕೆಟ್ ಪಡೆದುಕೊಂಡು ಬಂದು ಕಬ್ಬಿಣದ ಚೇರಿನ ಮೇಲೆ, ಫ್ಯಾನಿನ ಕೆಳಗೆ ಕೂರಲು ಸಾಲುಗಳಲ್ಲಿ ಮುನ್ನುಗ್ಗುತ್ತಾಯಿದ್ದೆವು. ಅಲ್ಲಿ ಚಿತ್ರ ನೋಡಲು ಏನೋ ಆನಂದ. ಮಧ್ಯಂತರದಲ್ಲಿ ಹೊರಗಡೆ ಬಂದು, ಸೀಬೇ ಹಣ್ಣು, ತೋತಾಪುರಿ ಮಾವಿನ ಹಣ್ಣು ತಿಂದು, ಮತ್ತೆ ನಮ್ಮ ಸೀಟಲ್ಲಿ ಕುಳಿತು ಚಿತ್ರ ಮುಗಿದ ಮೇಲೆ, ಮನೆಗೆ ಹೋಗಿ, ಮನೆಯವರಿಗೆಲ್ಲಾ ಚಿತ್ರದ ಕಥೆಯನ್ನು ಹೇಳುತ್ತಾಯಿದ್ದೆವು. ನಾವು ಆಗ ೨ ಅಥವಾ ೩ ನೆ ತರಗತಿಯಲ್ಲಿದ್ದೆವು.

ಚಿಕ್ಕ ಮಕ್ಕಳನ್ನು ಸಿನಿಮಾಗೆ ಕಳುಹಿಸಲು ಮನೆಯವರಲ್ಲಿ ಆತಂಕ ಹುಟ್ಟುವುದು ಸಹಜವೇ. ಅದಕ್ಕಾಗಿ ಮೊದಲು ನಮ್ಮಿಬ್ಬರನ್ನೇ ಹೋಗಲು ಬಿಡುತ್ತಿರಲಿಲ್ಲ. ಜೊತೆಗೆ ದೊಡ್ಡವರೊಬ್ಬರು ಬರುತ್ತಿದ್ದರು. ಹೀಗಿದ್ದಾಗ, ಒಮ್ಮೆ ಪ್ರೇಮಲೋಕ ಸಿನಿಮಾದ ಹಾಡುಗಳು ಚಿತ್ರಮಂಜರಿಯಲ್ಲೂ ವೀಕ್ಷಿಸಿ, ಅಂತ್ಯಾಕ್ಷರಿಯಲ್ಲೂ ಹಾಡಿ, ನಮಗೆ ಆ ಸಿನಿಮಾ ನೋಡಲು ಆಸೆ ಅತೀಯಾಗಿತ್ತು. ಆ ಸಿನಿಮಾ ಲಕ್ಶ್ಮಿ ಟೆಂಟಿಗೆ ಬಂದಾಗ ಹೋಗೋಣ ಅಂತ ನಾವಿಬ್ಬರೂ ಮಾತಾಡುತ್ತಾಯಿದ್ದೆವು. ಒಂದು ದಿನ ಆ ಕಾಲ ಕೂಡಿ ಬಂದಿತು. ಶುಕ್ರವಾರದಂದು ಶಾಲೆಗೆ ಹೋಗುವ ದಾರಿಯಲ್ಲಿ ವಾಲ್ಪೋಸ್ಟ್ ನೋಡಿದೆವು. ಪ್ರೇಮಲೋಕ ಸಿನಿಮಾ ಲಕ್ಶ್ಮಿ ಟೆಂಟಿನಲ್ಲಿ!

ಶನಿವಾರದ ಊಟ ಮುಗಿಯುತ್ತಾಯಿದ್ದಂತೆ ಅಮ್ಮನಿಗೆ ನಮ್ಮ ಜೊತೆಗೆ ಬರಲು ಕೇಳಿಕೊಂಡೆವು. ಆದರೆ ಅವರಿಗೆ ತುಂಬಾ ಕೆಲಸ ಇದ್ದುದ್ದರಿಂದ ನಮ್ಮ ಅಜ್ಜಿಯವರನ್ನು ನಮ್ಮ ಜೊತೆಗೆ ಕಳುಹಿಸುವುದಾಗಿ ಹೇಳಿದರು. ಜೂಹಿ ಚಾವ್ಲಾ ಇದ್ದಾಳೆ ಸಿನಿಮಾದಲ್ಲಿ ಹಾಗಾಗಿ ಒಮ್ಮೆಯಾದರೂ ಹೋಗಿ ನೋಡ ಬೇಕು ಎನ್ನುವ ಯೋಚನೆ ನಮಗೆ ಆ ವಯಸ್ಸಿನಲ್ಲಿ ಇರಲಿಲ್ಲ. :). ಇದರ ಜೊತೆಗೆ, "ಸುಂದರ ಯುವಕ ದುಶ್ಯಂತ ರಾಜ ಬೇಟೆಯನಾಡಲು ಬಂದ" ಅಂತ ನಮ್ಮ ಗುರು ವಿಷ್ಣು ಕನ್ನಡ ಪುಸ್ತಕವನ್ನು ಕೆಳಗಿಳಿಸಿ ನನಗೆ ಮುಖ ತೋರಿಸಿದ್ದರು. ಇದನ್ನು ಮರೆಯಲು ಆಗುತ್ತಾ ಹೇಳಿ? ನಾವೇನೋ ಸಿನಿಮಾವನ್ನು ಆನಂದದಿಂದ ನೋಡಿದೆವು. ಆದರೆ ಆ ಸಿನಿಮಾದಲ್ಲಿ ಜೂಹಿಯ ಉಡುಗೆ ಹೇಗಿದೆ ಅಂತಾ ಎಲ್ಲಾರಿಗೂ ಗೊತ್ತೇಯಿದೆ. ಇದನ್ನು ನಮ್ಮಜ್ಜಿಗೆ ನೋಡಲು ಅಸಮಾಧಾನವಿತ್ತು. "ಇದೆಂತಾ ಸಿನಿಮಾ! ಇವಳಿಗೆ ಏನು ಮಾನ ಮರ್ಯಾದೆ ಇಲ್ವಾ? ಚಡ್ದಿ ಹಾಕೊಂಡು ಕುಣಿತಾಳೆ" ಅಂತೆಲ್ಲಾ ಹೇಳುತ್ತಾಯಿದ್ದರು. ನಾವು ಅದರ ಕಡೆಗೆ ಗಮನವೇ ಇಡಲಿಲ್ಲ.

ನಾವಿಬ್ಬರೇ ಅಲ್ಲ. ನಮ್ಮ ಕುಟುಂಬ ವರ್ಗದವರೆಲ್ಲಾ ಕೆಲವೊಮ್ಮೆ ಶನಿವಾರದಂದು ಮನೆಗೆ ಬೀಗಾ ಹಾಕಿ, ಎಲ್ಲಾರೂ ಒಟ್ಟಿಗೆ ಸೆಕೆಂಡ್ ಶೋ ಗೆ ಹೋಗುತ್ತಾಯಿದ್ದೆವು. ಅದು ಸುಮಾರು ೯ಕ್ಕೆ ಇರುತಿತ್ತು. ನಿದ್ದೆ ಕಣ್ಣಂಚಿಗೆ ಬಂದರೂ ಸಿನೆಮಾಗೋಸ್ಕರ ಎಚ್ಚರವಾಗಿರುತ್ತಾಯಿದ್ದೆ.

ನಾನು ಹಾಗು ನನ್ನ ಮಾವನ ಮಗ ಒಂದು ನಿನಿಮಾ ನೋಡಿದೆವು. ಅದರ ಹೆಸರು "ನನಗೂ ಹೆಂಡ್ತಿ ಬೇಕು". ಆ ಶೀರ್ಷಿಕೆ ಹೇಳೋ ಕಾಲ ಆಗ ನಮ್ಮದಾಗಿರಲಿಲ್ಲ! ಈಗ?... ಗೊತ್ತಿಲ್ಲ.. ನಾನಿನ್ನೂ ಚಿಕ್ಕ ಹುಡುಗ... :)

ಆಗೊಮ್ಮೆ ....ಈಗೊಮ್ಮ ಹೀಗೆ ಬಾಲ್ಯ ನೆನಪಾದಾಗ... ಒಂದು ಚೂರು ಏನೋ ಬರ್ಕೊತೀನಿ...

5 ಜನ ಸ್ಪಂದಿಸಿರುವರು:

Male 21 bangalore said...

ellarigu chik hudga aagirodakke ishta JS, aadre en madodu, yavaglu nodak chenagirak aagatta, doddor agta agta hendti bandu, tuppa tinsi, neev dappa aagi amel appa aagi.. ellanu aagle beku. aamel ond divsa ivattin bagge blog baritira..
Funny alwa, u laugh when u think of bad times.. but remembering good times will always bring tears in ur eyes, :)

ಅಂತರ್ವಾಣಿ said...

ಬೆಂಗಳೂರಿನ ೨೧ರ ಹರೆಯ,
ತುಪ್ಪ, ದಪ್ಪ, ಅಪ್ಪ ಹೀಗೆ ಪ್ರಾಸವನ್ನು ಉಪಯೋಗಿಸಿ ಚೆನ್ನಾಗಿ ಸ್ಪಂದಿಸಿದ್ದೀರ. ತುಂಬಾ ಸಂತೋಷವಾಯಿತು.
ನಿಜ. ಇಂದಿನ ಬಗ್ಗೆ ಮುಂದೆ ಎಂದೋ ಬರೆಯುತ್ತೇನೆ.ಆಗಲೂ ಓದಿ ಅಭಿಪ್ರಾಯ ಕೊಡಿ.

ತೇಜಸ್ವಿನಿ ಹೆಗಡೆ said...

ಶಂಕರ್,

ಸವಿನೆನಪುಗಳು ಬೇಕು.. ಮರೆಯದೀ ಬದುಕು. ನನ್ನನ್ನು ನನ್ನ ಗತಕಾಲಕ್ಕೆ ಕೊಂಡೊಯ್ಯಿತು ನಿಮ್ಮ ಬರಹ.

Lakshmi Shashidhar Chaitanya said...

ಬ್ಲಾಗ್ ಟೈಟಲ್ಲನ್ನು ಕಣ್ಣುಜ್ಜಿಕೊಂಡು ಓದಿದೆ.

"ಕ್ಷೀರಸಮುದ್ರ ರಾಜನ ಮಗಳೇ " ಎಂಬ ವಾಕ್ಯ ಓದಿ ನನ್ನ ಬ್ಲಾಗ್ ಯೂಆರೆಲ್ಲಿನ ಸಮರ್ಥ ತರ್ಜುಮೆ ಎಂದು ಶ್ಲಾಘಿಸಿದೆ :-)

ಆರ್ಟಿಕಲ್ಲು ಓದುತ್ತಾ ಹೋಗುತ್ತಿದ್ದಂತೆ, ತಿನ್ನುತ್ತಿದ್ದ ತಿಂಡಿ ನೆತ್ತಿಗೆ ಹತ್ತಿ, ನೀರು ಕುಡಿಯಲಾಗದಷ್ಟು ನಕ್ಕೆ.

ನೀವಿನ್ನು ಚಿಕ್ಕ ಹುಡುಗ ಎಂಬ ವಾಕ್ಯ ಓದಿ ಇದು ಕಾಮಿಡಿಯ ಪರಾಕಾಷ್ಟೆ ಎಂದು ವಿಪರೀತ ಜೋರಾಗಿ, ಸಿಕ್ಕ್ ಸಿಕ್ಕಾಪಟ್ಟೆ ನಕ್ಕೆ.

ನನ್ನ ಹೆಸರಿನ ಟೆಂಟು ಇರುವುದು ಸಂತೋಷ ತಂದಿದೆ. ಬರೀ ವೈನ್ ಶಾಪುಗಳನ್ನು ನೋಡಿ ನೋಡಿ ಸುಸ್ತಾಗಿದ್ದೆ ! ನನ್ನ ಹೆಸರಿಗೆ ಇಷ್ಟು ಮರ್ಯಾದೆ ಇದ್ಯಲ್ಲಾ...ಸಾಕು ! :-)

ಸೂಪರಾತೀತ ಪೋಸ್ಟು ! ಹೀಗೆ ಸಾಗಲಿ ನೆನಪಿನ ಬಂಡಿಯಲ್ಲಿ ನಗು-ನೆನಹಿನ ಊರಿಗೆ ಪಯಣ !

sunaath said...

ಟೆಂಟ್ ಸಿನಿಮಾದಲ್ಲಿ ನೋಡಿದ ಚಿತ್ರಗಳ ರಂಜನೆ ಈಗಿನ ಮಲ್ಟಿಪ್ಲೆಕ್ಸ್ ಚಿತ್ರಗಳಲ್ಲಿ ಸಿಗೋದಿಲ್ಲ.
ನೆನಪು ಮಾಡಿಕೊಟ್ಟಿರಿ, ಧನ್ಯವಾದಗಳು.