Tuesday, 1 April, 2008

ಯಾರು ಮೂರ್ಖರು ಈ ಮೂವರೊಳಗೆ?

ಪುರಂದರ ದಾಸರೇ, ದಯವಿಟ್ಟು ಕ್ಷಮಿಸಿ, ನಿಮ್ಮ ಹಾಡಿನ ಸಾಲುಗಳ ಶೈಲಿಯಲ್ಲಿ ನನ್ನ ಲೇಖನದ ಶೀರ್ಷಿಕೆ ಬರೆದ ಕಾರಣಕ್ಕೆ. ಇದು ಯಾಕೆ ಅಂತ ಆಮೇಲೆ ತಿಳಿಯುತ್ತೆ. ಆದರೂ ಈ ಪಾಮರನನ್ನು ಕ್ಷಮಿಸ್ತೀರ ಅಲ್ವಾ?

ಈ ದಿನ ಏಪ್ರಿಲ್ ೧. ವಿಶ್ವದಲ್ಲೆಲ್ಲಾ ಮೂರ್ಖರ ದಿನ ಅಂತ ಆಚರಿಸುತ್ತಾರೆ. ಗೆಳೆಯರನ್ನು ಮೂರ್ಖರನ್ನಾಗಿ ಮಾಡಬೇಕು, ಗೆಳತಿಯನ್ನು ಮೂರ್ಖಳನ್ನಾಗಿ ಮಾಡಬೇಕು ಅಂತ ಯೋಚನೆ ಹಾಗು ಯೋಜನೆಗಳ ಮಾಡಿ ಮಾಡಿ ತಲೆ ಕೆಡಸಿಕೊಳ್ಳುತ್ತಾಯಿರ್ತಾರೆ.

ನೋಡಿ, ನಮ್ಮ ಜೀವನದಲ್ಲಿ ನಾವು ಹಲವಾರು ಬಾರಿ ಮೂರ್ಖರಾಗಿರ್ತೀವಿ. ಆದರೆ ಸ್ವಲ್ಪ ನಾಚಿಕೆ ಇರುತ್ತೆ ಬೇರೆಯವರ ಬಳಿ ಹೇಳಿಕೊಳ್ಳಲು.ಇಂಥಹ ಒಂದು ವಿಚಾರ ಹೇಳೋ ಪ್ರಯತ್ನವಷ್ಟೇ ಇಲ್ಲಿದೆ. ನಾನು ತೆಗೆದು ಕೊಂದಿರೋ ವಿಚಾರ, ಕಿರುತೆರೆಯಲ್ಲಿ ಪ್ರಸಾರ ವಾಗುವ "ಮೆಗಾ ಧಾರಾವಾಹಿ"ಗಳು.

ನನ್ನ ಶಾಲಾ ದಿನಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳು ವಾರಕ್ಕೆ ಒಂದು ದಿನ, ಒಂದೇ ಅಧ್ಯಾಯ ಮಾತ್ರ. ರವಿಕಿರಣ್, ನಾಗಾಭರಣ ಮುಂತಾದವರ ಧಾರಾವಾಹಿಗಳು ಅದ್ಭುತ ಕತೆ ಹಾಗು ಉತ್ತಮ ನಿರೂಪಣೆಯಿಂದ ಕೂಡಿತ್ತು. ಖಾಸಗಿ ವಾಹಿನಿಗಳು ಪ್ರಾರಂಭವಾದ ಮೇಲೆ, ಅವರುಗಳು ವಾರದ ಐದು ದಿನಗಳಲ್ಲಿ ಪ್ರಸಾರ ಮಾಡುವ ನಿರ್ಧಾರ ಮಾಡಿದ್ದರು. ಬೆಳ್ಳಿತೆರೆಯ ಅನೇಕಾನೇಕ ಪ್ರತಿಭಾವಂತ ನಿರ್ದೇಶಕರು, ಕಿರುತೆರೆಯಲ್ಲಿ ಬಂದು ಧಾರಾವಾಹಿ ಮಾಡುವುದು ಸಾಮಾನ್ಯವಾದ ವಿಷಯವಾಯಿತು. ಅವರ ಪ್ರತಿಭೆಯ ಬಗ್ಗೆ ನಾನು ಮಾತಾಡಲು ಅನರ್ಹ. ಅಂದಿನ ಧಾರಾವಾಹಿಗಳು, ೧೩ ಕಂತಿನಲ್ಲೇ ಪೂರ್ಣವಾಗುತ್ತಿತ್ತು. ನಂತರ ಮತ್ತೊಂದು ಹೊಸ ಕತೆಯೊಂದಿಗೆ ಬರುತ್ತಿದ್ದರು. ಇಂದಿನ ಧಾರಾವಾಹಿಗಳಲ್ಲಿ ..ಕಥೆ ಇದೆಯಾ? ಅಂತ ಯೋಚನೆ ಮಾಡ್ತಾಯಿರ್ತೀನಿ. ಎಳೆದು, ಎಳೆದು, ಹಿಂದಿನ ಅಧ್ಯಾಯಗಳಲ್ಲಿ ನಡೆದಿರೋ ಘಟನೆಗಳು ಮರೆತು ಹೋಗಿರ್ತಾವೆ. ಅಮ್ಮನಿಗೂ, ಅಜ್ಜಿಗೂ, ಹೇಳ್ತಾಯಿರ್ತೀನಿ, ಒಂದು ವರ್ಷ ಬಿಟ್ಟು ನೋಡಿ.. ಕತೆ ಎಲ್ಲೂ ಹೋಗಿರೋದಿಲ್ಲ. ಅಲ್ಲೇ ಇರುತ್ತೆ ಅಂತ! ಇದು ಸತ್ಯ ಅಲ್ವಾ?


ಕನ್ನಡದ ಸಾರಸ್ವತ ಲೋಕದಲ್ಲಿ ಬರಹಗಳಿಗೇನು ಬರ? ಕಾದಂಬರಿ ಆಧಾರಿತ ಚಿತ್ರಗಳು ಯಶಸ್ವಿಯಾಗಿಲ್ವೆ? ನಿರ್ಮಾಪಕರು ಹಣ ಗಳಿಸಿಕೊಂದಿಲ್ಲವೇ? ರಾಜ್ಯವಲ್ಲದೆ, ರಾಷ್ಟ್ರವಲ್ಲದೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿಕೊಂಡಿಲ್ಲವೇ? "ಸ್ವರ್ಣ ಕಮಲ"ಗಳು ಅನೇಕ ಬಂದಿಲ್ಲವೇ? ಆ ಕಾದಂಬರಿಗಳು ಬೆಳ್ಳಿತೆರೆಯಲ್ಲಿ ಬಂದರೆ ೨ ಘಂಟೆ ೩೦ ನಿಮಿಷಕ್ಕೆ ಮುಗಿಯುತ್ತವೆ. ಅದು ಮೆಗಾ ಧಾರಾವಾಹಿಯಾಗಿ ಬಂದರೆ, ೨ ವರ್ಷಕ್ಕೆ ಮುಗಿಯುತ್ತಾ?... ಮುಗಿಯ ಬಹುದು. ಮುಗಿಯದೇ ಇರಬಹುದು.

"ಜ್ಞಾನಪೀಠ ಪ್ರಶಸ್ತಿ" ಪಡೆದ ಕೃತಿಯೊಂದನ್ನು ಧಾರಾವಾಹಿಯಾಗಿ ಮಾಡುತ್ತಾಯಿದ್ದಾರೆ. ಏನಿಲ್ಲಾ ಅಂದರು ೫ - ೬* ವರ್ಷಗಳಿಂದ ಪ್ರಸಾರವಾಗುತ್ತಾಯಿದೆ. ( *ಈ ಮಾಹಿತಿ ತಪ್ಪಾದಲ್ಲಿ, ನಿಖರವಾದ ಮಾಹಿತಿ ಒದಗಿಸಿ. ಆ ಧಾರವಾಹಿಯ ವೀಕ್ಷಣೆ ಮಾಡಿಲ್ಲ ನಾನು) .
ಅದರಲ್ಲಿ ಬರೋ ಸನ್ನಿವೇಶ ಅ'ವರ'ದ್ದೋ ('ಕವಿ') ಅಥವಾ ಇವರದ್ದೋ (ನಿರ್ದೇಶಕರು)? ಆ ಮಹಾನ್ ಕೃತಿ ರಚಿಸೋಕು ಅಷ್ಟು ಸಮಯ ಹಿಡಿದಿರೋದಿಲ್ಲ ಅನಿಸುತ್ತೆ ಆ ಅಜ್ಜರಿಗೆ.

ಧಾರಾವಾಹಿಗಳ ಹಿನ್ನಲೆ ಸಂಗೀತದ ವಿಷಯ, ನನ್ನ ಅನಿಸಿಕೆ "ಅದು ಅಗತ್ಯಕ್ಕೂ ಮೀರಿದ ಅಬ್ಬರ!", ಎರಡು ಮಾತು ಆಡ್ತಾರೆ.. ೧೦ ಬಾರಿ "ಡುಷ್ ಡುಷ್ ...ಕೂಂಯಿ ಕೂಂಯಿ " ಬರುತ್ತೆ. ಯಾವ ದೇವರಿಗೆ ಪ್ರೀತಿ?

ಗ್ರೀಕ್ ಭಾಷೆಯಲ್ಲಿ, 'ಮೆಗಾ' ಅಂದರೆ ಹತ್ತು ಲಕ್ಷಕ್ಕೆ ಸಮ! ಸಾರವಿಲ್ಲದೆ... ಸಾವಿರ ಕಂತಿನ ಗಡಿ ದಾಟಿರೋ ಧಾರಾವಾಹಿಗಳು ಇವೆ. ನಮ್ಮ ಪುಣ್ಯ ಯಾವೊಂದು ಧಾರಾವಾಹಿ "ಮೆಗಾ" ಗುರಿ ಮುಟ್ಟಿಲ್ಲ! ಮುಟ್ಟುತ್ತಿಲ್ಲ! ಮುಂದೆ ಮುಟ್ಟುವುದೋ ಗೊತ್ತಿಲ್ಲ. ನಿರ್ದೇಶಕರಿಗೆ "ಮೆಗಾ"ದ ಅರ್ಥ ಗೊತ್ತಿಲ್ಲ ಅನ್ನಿಸುತ್ತೆ. ದಯವಿಟ್ಟು ಯಾರು ಇದನ್ನು ನಿರ್ದೇಶಕರ ಕಿವಿಗೆ ಮುಟ್ಟಿಸಬೇಡಿ.


" ಇದು "ಅ ಆ ಇ" ಮೆಗಾ ಧಾರಾವಾಹಿ, ಪ್ರತಿ ಸಂಜೆ....." ಅಂತ ಜಾಹೀರಾತು, ಧಾರಾವಾಹಿ ಶುರುವಾಗುವ ತಿಂಗಳ ಮುಂಚಿತವಾಗಿಯೇ ಬಂದಿರುತ್ತೆ. ಹಾಗು ಹೀಗೂ


" ಆರಂಭದ ೫೦ ಅಥವಾ ೬೦ ಕಂತುಗಳವರೆಗೂ
ಸುಸ್ಥಿತಿಯಲ್ಲಿರುತ್ತೆ ಧಾರಾವಾಹಿಗಳು.
ಮುಂದಿನ ೫೦೦ ಅಥವಾ ೬೦೦ ಕಂತುಗಳವರೆಗೂ,
ಅವು ಹಳಿ ತಪ್ಪಿದು ರೈಲುಗಳು".

-- ಕೊನೆಯಲ್ಲಿ ಹೇಗೋ ಮುಗಿಸ ಬೇಕಪ್ಪ ಅಂತ ಮುಗಿಸ್ತಾರೆ.


ದಾಸರ ಕ್ಷಮೆ ಕೋರಿ,
ಯಾರು ಮೂರ್ಖರು ಈ ಮೂವರೊಳಗೆ?
--ಸೀರಿಯಲ್ ತೆಗೆಯುವವರಾ?
--ಅದರಲಿ ನಟಿಸುವರಾ?
--ತಪ್ಪದೆ ವೀಕ್ಷಿಸುವರಾ?


ಉತ್ತರ ಸಿಕ್ಕಿಲ್ಲ! ಆದರೆ ಅದು ಅನಿವಾರ್ಯವಾದ್ದರಿಂದ ಅವರುಗಳು ಈ ರೀತಿ ಮಾಡ್ತಾರೆ ಎಂಬ ತೀರ್ಮಾನಕ್ಕೆ ಬಂದಿರುವೆ. ಅವರ ಕಾಯಕೆವಷ್ಟೇ ಈ ರೀತಿ ಅವರನ್ನು ಮಾಡಿದೆ.


ಸೀರಿಯಲ್ ತೆಗೆಯುವವರಾ?
--ಕತೆಗಾರ, ಸಂಭಾಷಣೆಗಾರ, ಹಾಗು ಎಲ್ಲಾ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುವವರ ಹೊಟ್ಟೆ ಪಾಡು.ಕಥೆ ಬರೆದು ಧಾರಾವಾಹಿ ಮಾಡ್ತಾರೆ. ಆದರೆ ಸ್ವಲ್ಪ ಯೋಚನೆ ಮಾಡೋದಿಲ್ಲ ಅನ್ನೋದು ನನ್ನ ಅನಿಸಿಕೆ. ಚಿಕ್ಕದಾಗಿ, ಚೊಕ್ಕವಾಗಿ ಕತೆ ಹೇಳಬಹುದು. ಆದರೆ ಅವರು ನನ್ನ ಮಾತು ಕೇಳ್ತಾರ?


ಅದರಲಿ ನಟಿಸುವರಾ?
--ನಟನೆಯೇ ಉದ್ಯೋಗ ಅಂತ ನಟಿಸುವರು ಇದ್ದರೆ. ಅವರ ಹೊಟ್ಟೆ ಪಾಡು. ಅವರು ನಿರ್ದೇಶಕ ಹೇಳಿದಂತೆ ನಟಿಸುತ್ತಾರೆ ಅಷ್ಟೆ. ಅನಗತ್ಯ ದೃಶ್ಯಗಳಾಗಲೀ, ಸಂಭಾಷಣೆಗಳಾಗಲೀ ಬೇಡ ಸ್ವಾಮಿ ಅಂತ ಹೇಳ್ತಾರ? ಇಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೆ.. ಅವರ ಸ್ಥಾನದಲ್ಲಿ ಬೇರೊಬ್ಬ ನಟ/ ನಟಿ ಬರುತ್ತಾರೆ. ಅಥವಾ.. ಆ ಪಾತ್ರ ಧಾರವಾಹಿಯಿಂದ ದೂರ ಸರೆಯುತ್ತೆ, ಅಥವಾ ಸತ್ತೇ ಹೋಗುತ್ತೆ.


ಇವರುಗಳಿಗೆ ಮತ್ತೆ ದಾಸರ ವಾಣಿಯೇ ಸರಿ ಹೊಂದುತ್ತೆ.
"ಎಲ್ಲರು ಮಾಡುವುದು ಹೊಟ್ಟೆಗಾಗಿ,
ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ"


ತಪ್ಪದೆ ವೀಕ್ಷಿಸುವರಾ?
--ಹೆಚ್ಚಾಗಿ ಗೃಹಿಣಿಯರು ಈ ಗುಂಪಿಗೆ ಸೇರುತ್ತಾರೆ. ಮಧ್ಯಾಹ್ನ ಅವರುಗಳೇ ತಾನೆ ಮನೆಗೆ ಒಡತಿಯರು! ಮನೆಗೆಲಸದಿಂದ ಬೇಸತ್ತು, ಮನಸ್ಸಿನ ಶಾಂತಿಗೆ ವೀಕ್ಷಿಸುತ್ತಾರೆ. ಹೋಗಲಿ ಪಾಪ ಅಂತ ಬಿಟ್ಟು ಬಿಡೋಣ. ನಾವು ಅಪರೂಪಕ್ಕೆ ರಜೆದಿನದಂದು ನಮಗೆ ಇಷ್ಟವಾದ ಕ್ರಿಕೆಟ್ ಪಂದ್ಯ ನೋಡೋದಕ್ಕು ಬಿಡೋದಿಲ್ಲ!.. "ಆ ಸೀರಿಯಲ್ ನಲ್ಲಿ ಅವಳು ಕೊಲೆ ಮಾಡ್ತಾಳೋ ಇಲ್ವೋ?" "ಈ ಸೀರಿಯಲ್ ನಲ್ಲಿ ಮಗು ವಿಚಾರ ಏನಾಯ್ತೋ?" ಅಂತ ತಲೆ ತಿನ್ತಾರೆ.


ಅರ್ಥಗರ್ಭಿತ ಧಾರಾವಾಹಿಗಳು ಮುಂದೆ ಬರುತ್ತಾ? ಅಥವಾ "ಬರುತ್ತೆ ಕಾಯುತ್ತಾಯಿರಿ" ಅಂತ ನಮ್ಮನ್ನು ಮೂರ್ಖರನ್ನಾಗಿ ಮಾಡ್ತಾರೋ? ನೀವೇ ಹೇಳಿ.

1 ಜನ ಸ್ಪಂದಿಸಿರುವರು:

maddy said...

eega arthapoorna vaada daaravahigala kaala alla..
adu endo hoyitu...

dooradarshanadalli vaarakkomme navu aaga noduttidda halavu serials tumbane chennagidvu..

eegina mega serial bharategalu kevala 'commercialzed' agi tamma swantike kaledu kondive..

nimma abhipraya oppuve Jay...