ಎಲ್ಲರಂತೆ ನಾನು ಉಸಿರಾಡುತ್ತಿದ್ದೆ
ಎಂದು ಉಸಿರಾಟ ನಿಂತಿತೋ ತಿಳಿಯದಾದೆ!
ದಾಹ! ಎಂದಾಗ ನೀರಿಟ್ಟರು
ದೇಹ, ಹೆಣವಾದಾಗ ಕಣ್ಣೀರಿಟ್ಟರು!
ಹಸಿವೆಂದಾಗ ಮಣೆ ಹಾಕಿ, ತಟ್ಟೆ ಇಟ್ಟರು
ಅಸು ನೀಗಿದಾಗ ಚಾಪೆ ಹಾಸಿ, ಬಟ್ಟೆ ಹೊದಿಸಿದರು!
ಹುಟ್ಟಿದ ದಿನದಂದು ಆರತಿ ಎತ್ತಿದರು ಹಲವಾರು ಮಂದಿ
ಚಟ್ಟವ ಏರಿದ ದಿನವಿಂದು, ಎತ್ತಿದರು ನಾಲ್ಕು ಮಂದಿ!
ಮದುವೆಯ ಮೆರವಣಿಗೆಯೆಂದು ಇದ್ದರು ಅನೇಕರು
ಮಸಣಕ್ಕೆ ಮೆರವಣಿಗೆಯಿಂದು, ಇದ್ದಾರೆ ಕೆಲವರು!
ಸುತನು ಕೊಳ್ಳಿ ಇಟ್ಟನು
ಸತ್ತವನು ಬರಲಾರನೆಂದು ಹೊರಟನು!
ಬುವಿಯ ಮೇಲೆ ಬೂದಿಯಾದೆನು
ಬೂದಿಯು ಗಂಗೆಯ ಪಾಲಾಯಿತು!
ಹಿಂದೆ, ದೇಹವು ಚೆಲುವಿನ ಬೀಡಾಗಿತ್ತು
ಇಂದು, ಮಸಣದ ಎಲುಬಿನ ಗೂಡಾಗಿದೆ!
ವಿ.ಸೂ: ತಿಂಗಳ ಹಿಂದೆ, ಕುವೆಂಪುರವರ ಕವನ ಓದಿದಾಗ ೨ ಸಾಲುಗಳು ಮನಕ್ಕೆ ತುಂಬಾ ಇಷ್ಟವಾಗಿತ್ತು. ಅದರ ಪ್ರಭಾವದಿಂದ ಬರೆದ ಕವನವಿದು. ಆ ಸಾಲುಗಳನ್ನು ಸ್ವಲ್ಪ ಬದಲಿಸಿ ನನ್ನ ಕವನದ ಕೊನೆ ಸಾಲುಗಳಾಗಿಸಿದೆ. ಅದರ ಮೂಲ:
"ಇಂದೀ ದೇಹವು ಚೆಲುವಿನ ಬೀಡು
ಮುಂದಿದು ಮಸಣದ ಎಲುಬಿನ ಗೂಡು"
Monday, 28 April 2008
ಹೆಣ ಮಾತಾಡಿತು!
Posted By ಅಂತರ್ವಾಣಿ at 10:50 pm 5 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
Saturday, 26 April 2008
ಅಂತರ್ವಾಣಿಗೆ ೫೦!
ದೇವರಿಗೆ ನಮನಗಳು!
ನನ್ನ ಬ್ಲಾಗನ್ನು ಓದುವವರಿಗೆ, ಪ್ರೋತ್ಸಾಹಿಸುತ್ತಿರುವರಿಗೆ, ತಪ್ಪುಗಳನ್ನು ತಿದ್ದಿ ಸನ್ಮಾರ್ಗಕ್ಕೆ ಕರೆದೊಯ್ಯುತ್ತಿರುವರಿಗೆ, ನನ್ನ ನಮನಗಳು.
ನನ್ನ ಅಂತರ್ವಾಣಿಗೆ ಈಗ ೫೦ನೆ ಪೋಸ್ಟ್ ನುಡಿಯುವ ಸಂಭ್ರಮ. ಹೀಗೆ ಮುಂದುವರಿಸುತ್ತಿರುತ್ತೇನೆ. ನನ್ನ ಬರಹಗಳು ನನಗೆ ಸಂತಸ ನೀಡಿದೆ. ನಿಮಗೂ ಸಂತಸ ನೀಡುತ್ತಿದೆಯೆಂದು ತಿಳಿದಿದ್ದೇನೆ.
--
ಅಂತರ್ವಾಣಿ ಜಯಶಂಕರ್
Posted By ಅಂತರ್ವಾಣಿ at 8:26 pm 6 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು
ಅಗ್ರಜಾನುಭವ
ಕಸಗುಡಿಸುವನೆಂದು ಕಸದಂತೆ ಕಾಣಬೇಡ;
ಅವನಲ್ಲಿಯು ಇರುವನು ಕೈಲಾಸ ವಾಸಿಯು !
ದುರದೃಷ್ಟವೆಂದು ಚಿಂತಿಸಬೇಡ,
ಅದೃಷ್ಟವು ನಿನ್ನೆಡೆಗೆ ಬರುವವರೆಗು
____
ನೋವು ನಲಿವು ದಿನ ನಿತ್ಯಕೆ
ಸಾವು ಪ್ರತಿಯೊಂದು ಜೀವಿಗೆ - ಅಗ್ರಜ
____
ಗುಣವಂತನಿಗೆ ಎಲ್ಲೆಡೆ ಮನ್ನಣೆ.
ಸದ್ಗುಣವಿಲ್ಲದವ ಕೇವಲ ಚರ್ಮದಿಂದ
ಮುಚ್ಚಿರುವ ಮಾಂಸದ ಮುದ್ದೆ - ಅಗ್ರಜ
Posted By ಅಂತರ್ವಾಣಿ at 8:14 pm 2 ಜನ ಸ್ಪಂದಿಸಿರುವರು
ವಿಭಾಗ: ಅಗ್ರಜಾನುಭವ, ಕವನಗಳು
Thursday, 17 April 2008
ಅಂತರ್ವಾಣಿಯಿಂದ ಆಫೀಸಿಗೆ...
ನಾನು ನೋಡ್ತಾಯಿದ್ದೆ, ಏನು ದಿನ ಬರೆದಿದ್ದೋ ಬರೆದಿದ್ದು! ನಿದ್ದೆ ಕೆಡೋದು, ದಿನಕ್ಕೊಂದು ಪೋಸ್ಟ್ ಮಾಡೋದು, ಬೆಮಿಗೆ ಹೇಳೋದು, ಸ್ಟೇಟಸ್ ಮೆಸ್ಸೇಜ್ನಲ್ಲಿ ಬೇರೆ ಹಾಕೋದು, ಅವರಲ್ಲಿ ಕೆಲವರು ಕೊಡೋ ಪ್ರತಿಕ್ರಿಯೆ ಮನಸ್ಸಿಗೆ ಸಂತಸ ಕೊಡುತ್ತಿತ್ತು. ಇವೆಲ್ಲಾ ಈಗ....ಸಾಕಪ್ಪಾ ಸಾಕು! ಈಗ ಸ್ವಲ್ಪ ದಿನ ಆರಾಮಾಗಿರಿ. ನಾನು ಆರಾಮಾಗಿರ್ತೀನಿ. ಅಂತರ್ವಾಣಿಗೆ ಸ್ವಲ್ಪ ದಿನಗಳ ಕಾಲ ಬಿಡುವು ಕೊಡೋ ಸಮಯ ಬಂದಿದೆ. ಆದರೆ ಬರೆಯೋದು ನಿಲ್ಲಿಸೋದಿಲ್ಲ!
ಮುಂದೆ ನುಡಿಯುವ ಅಂತರ್ವಾಣಿ:
೧. ಫಿನ್ ಲ್ಯಾಂಡ್ ಪ್ರವಾಸ - ಮೊದಲನೆ ಬಾರಿ (ಭಾಗ ೨)
೨. ಫಿನ್ ಲ್ಯಾಂಡ್ ಪ್ರವಾಸ - ಎರಡನೆ ಬಾರಿ
೩. ಫಿನ್ ಲ್ಯಾಂಡ್ ಪ್ರವಾಸ - ಮೂರನೆ ಬಾರಿ
೪. ಭೇಟಿಗಿಂತ ಪಾರ್ಟಿನಾ?
೫. I Love you ******* (Special article. ******* ಯಾರು ಅಂತ ಕೇಳ್ಬೇಡಿ.)
ನಾನ್ನ Drafts ನಲ್ಲಿ ಇದ್ದ ಕೆಲವು ಕವನಗಳನ್ನು ಒಂದೇ ಸಲ ಪೋಸ್ಟ್ ಮಾಡಿದ್ದೀನಿ.
ನಾನು ಕಳೆದ ಒಂದೂವರೆ ತಿಂಗಳಿಂದ ಕಚೇರಿಯಲ್ಲಿ ಕೆಲಸವಿಲ್ಲದೆ, ಕವನಗಳ ಕಡೆ ಗಮನ ಕೊಟ್ಟಿದ್ದೆ. ನಿನ್ನೆ, ೧೬ ಏಪ್ರಿಲ್ ದಿಂದ ಹೊಸ ಪ್ರಾಜೆಕ್ಟ್ ಸಿಕ್ತು. ಅಲ್ಲಿ ಕೆಲಸ ಹೆಚ್ಚಾಗಿದೆ. ಆದ ಕಾರಣ ಅಂತವಾಣಿಯಿಂದ ಆಫೀಸಿನ ಕಡೆ ಗಮನ ಕೊಡುತ್ತೀನಿ. ಇಲ್ಲವಾದರೆ, ಆಫೀಸಿಂದ ನಿರ್ಗಮನವಾಗ ಬೇಕಾಗುತ್ತೆ! :)
Posted By ಅಂತರ್ವಾಣಿ at 9:24 pm 5 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು
ಒಮ್ಮೆಯಾದರೂ.....
ಒಮ್ಮೆಯಾದರು ನೋಡಿ ನಗಬಾರದೇ?
ನನ್ನ ಮನಸು ಹೇಳಿತು
ನಿನ್ನ ಮನಸಲ್ಲಿ ನಾನು ನಲೆಸಿರುವುದೆಂದು
ತಿಳಿದ ಮೇಲೂ ಸುಮ್ಮನಿರುವುದೇ?
ಒಮ್ಮೆಯಾದರು ನೋಡಿ ನಗಬಾರದೇ?
ನನ್ನಾಸೆ ನಿನ್ನಲ್ಲಿದೆಯೋ?
ನಿನ್ನಾಸೆ ನನ್ನಲ್ಲೋ?
ಇದನರಿಯುವ ಕಾತರ
ಒಮ್ಮೆ ನಕ್ಕು, ನುಡಿಬಾರದೇ?
Posted By ಅಂತರ್ವಾಣಿ at 9:22 pm 3 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
ರತ್ನ - ಪ್ರಯತ್ನ
[ಜಿ.ಪಿ. ರಾಜರತ್ನಂ ಅವರ ಬಗ್ಗೆ ಹೇಳಲು ನಾನು ಅನರ್ಹ! ಅವರ ಕೆಲವು ಕವನಗಳನ್ನು ಓದಿದಾಗ, ಅವರ ಶೈಲಿಯಲ್ಲಿ ಬರೆಯ ಬೇಕು ಅಂತ ಮನಸ್ಸಿಗೆ ಅನ್ನಿಸಿ ಬರೆದಿದ್ದೇನೆ. ಹಿಂದೆ, Traffic ಮಾಮ ದಲ್ಲಿ ಆಡು ಭಾಷೆಯ ಪ್ರಯೋಗ ಮಾಡಿದ್ದೆ. ಆದರೆ ರತ್ನನ ಕನ್ನಡ ಬಳಸಿರಲಿಲ್ಲ! ಅವರ ಕನ್ನಡಕ್ಕೆ ಅವರೇ ಒಂದು ಕನ್ನಡಿ (ನಿಘಂಟು) ಕೊಟ್ಟಿದ್ದಾರೆ. ಅದರ ಸಹಾಯದಿಂದ ಬರೆದಿದ್ದೀನಿ.]
ರತ್ನನ್ ಪದಗೋಳ್ ಆಡ್ತಾಯಿದ್ರೆ
ಮತ್ ಮತ್ ಆಡ್ಬೇಕ್ ಅನ್ಸುತ್ತೆ
ಯೆಂಡಾವ್ ಬಾಯಾಗ್ ಆಕಳ್ದೇನೆ
’ಮತ್ತ್’ ಬಂದ್ ಕೂರುತ್ತೆ.
’ಯೆಂಡ’ ಯಿಲ್ಲದೆ ರತ್ನನ್ ಪದ್ಗಳ್ ಆವು ಯಿರಕಿಲ್ಲ
’ಯೆಂಡ’, ’ಯೆಡ್ತಿ’ ಇಚಾರ ಬುಟ್ಟು
ಬೊರೋನವ್ರು ಮಾತಾಡಕಿಲ್ಲ.
ಬ್ರಹ್ಮಂಗ್ ಕೈ ಜೋಡ್ಸಿ ಮುಗ್ದೋರು
ಸಂಜೆ ಸೂರಪ್ಪಂಗೆಂಡ ಕುಡ್ಸ್ದೋರು
ಸರಸೊತ್ತಮ್ಮನ್ ಯೀಣೆ ಮೀಟಿದಂಗ್ ಮಾತಾಡೋರು
ಕವಿ ಕಾಣದ್ದ ಕುಡುಕ ಕಂಡ! ಅಂದೋರು
ನನ್ದೊಂದ್ ಸನ್ ಪ್ರಯತ್ನ ಕಣ್ರೀ
ಏಗಿದೆ ಅಂತ ಏಳೋದ್ ಮರಿಬ್ಯಾಡ್ರೀ
ಮುನಿಯನ್ ಪಡುಕಾನೆ ತಾಕ್ ಸೇರೋಣ್ವೇನ್ರೀ?
ಬುಂಡೆ ತುಂಬಾ ಯೆಂಡ ತುಮ್ಸೋಣ್ವೇನ್ರೀ?
ರತ್ನನ ಕನ್ನಡಿ:
ಆಡ್ತಾಯಿದ್ರೆ : ಹಾಡುತ್ತಾಯಿದ್ದರೆ
ಆಕಳ್ದೇನೆ: ಹಾಕಿಕೊಳ್ಳದೇನೆ
ಯಿಲ್ಲದೆ: ಇಲ್ಲದೆ
ಆವು : ಯಾವುದೊಂದೂ
ಯಿರಕಿಲ್ಲ: ಇರೋದಿಲ್ಲ
ಯೆಡ್ತಿ: ಹಂಡತಿ
ಇಚಾರ: ವಿಚಾರ
ಬುಟ್ಟು: ಬಿಟ್ಟು
ಬೊರೋನವ್ರು: ಬೇರೇನು ಅವರು
ಸರಸೊತ್ತಮ್ಮ: ಸರಸ್ವತಿ
ಯೀಣೆ : ವೀಣೆ
ಸನ್: ಸಣ್ಣ
ಏಗಿದ: ಹೇಗಿದೆ
ಪಡುಕಾನೆ: ಹಂಡದ ಅಂಗಡಿ
ಬುಂಡೆ: ತಲೆ
ತುಮ್ಸೋಣ್ವೇನ್ರೀ: ತುಂಬಿಸೋಣ
ವಿ.ಸೂ:
ಜನರಲ್ಲಿ ಹೆಚ್ಚುತ್ತಿದೆ ಧೂಮಪಾನ, ಮದ್ಯಪಾನ.
ಇಲ್ಲವಾದರೆ ಹೋದೀತು ಪ್ರಾಣ... ಜೋಪಾನ..!!
Posted By ಅಂತರ್ವಾಣಿ at 9:19 pm 2 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
ಬೇಸಿಗೆಯಲ್ಲೂ ತಂಪಾದ ಜಾಗ
ನೆತ್ತಿಯ ಸುಡಲು ಸೂರ್ಯನಿಗಿರಲಿಲ್ಲ ಅವಕಾಶ!
ನಿದಿರಾ ದೇವಿ ನನ್ನಿಂದ ದೂರವಾಗಲು
ಬೇಕಾಯಿತು ತುಸು ತಾಸುಗಳು!
ಸುಡು ಬಿಸಿಲಲ್ಲಿ ಮರಗಳೇ ತಂಪಾದ ಜಾಗಗಳು.
Posted By ಅಂತರ್ವಾಣಿ at 8:53 pm 2 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
ಅಪ್ಸರೆ!
ಬರೆಯದಾದೆ ಮನದಲ್ಲಿ ಮೂಡಿದ ಭಾವನೆಗಳ
ಮರೆಯದಾದೆ ಇರುಳಲ್ಲಿ ನಾ ಕಂಡ ಕನಸುಗಳ
ನೀಲಾಕಾಶದಿ ತೇಲಿ ಬಂದ ಅಪ್ಸರೆ!
ಮರಳಿ ನೀ ಬಾರೆ! ಮರಳಿ ನೀ ಬಾರೆ!
ಬರೆಯುವೆ ನನ್ನಲ್ಲಾದ ಭಾವನೆಗಳ
ಶ್ವೇತ ವಸ್ತ್ರ ಧರಿಸಿ,
ಕೈ ಬೀಸಿ ಕರೆದೆ.
ನಿನ್ನ ಬಳಿ ಸೇರುವ ಮೊದಲೇ
ಎಲ್ಲಿ ಮಾಯವಾದೆ?
ನಿನ್ನನ್ವೇಷಣೆಯ ವ್ರತ
ಕೈಗೊಳ್ಳುವೆ ಇಂದೆ.
Posted By ಅಂತರ್ವಾಣಿ at 8:51 pm 2 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
ಬಿನ್ನಹ
[ ನನ್ನ ಜೊತೆ ಸದಾ ಇರುವ ಹಾಗು ನನ್ನ ಬರಹಕ್ಕೆ ಕಾರಣನಾದ ಪರಮಾತ್ಮನಿಗೆ ಬಿನ್ನಹ]
(1)
ಪ್ರಾಮಾಣಿಕ ಪ್ರಯತ್ನ ಮಾಡುವೆ ನಾನು,
ಪಲಿತಾಂಶ ಹೇಳುವವ ನೀನು
ಪಂಡಿತನಲ್ಲ, ಪಾಮರ ನಾನು!
ಪ್ರಸಾದ ಬೇಡಿ ಬಂದಿಹೆನು
(2)
ಯೋಗ್ಯತೆ ನಿರ್ಧರಿಸುವ ನೀನು
ಯೋಗ್ಯನೋ? ಅಯೋಗ್ಯನೋ?
ಯಾವುದೊಂದೂ ಅರಿಯದವ ನಾನು
ಯಾತನೆಯ ಬಗೆ ಹರಿಸುವವ ನೀನು
(3)
ಚಿಂತೆ ಇರುವುದು ನನ್ನ ಮನಸ್ಸಲ್ಲಿಚಿರಕಾಲ ಬರೆಯುತ್ತಿರಬೇಕೆಂದು
ಚಿಕ್ಕವ ನಾನಲ್ಲವೇ ನಿನ್ನೆದುರಲ್ಲಿ?
ಚಿಕ್ಕದಾದ ಈ ಆಸೆಯ ಈಡೇರಿಸುವೆಯಾ?
Posted By ಅಂತರ್ವಾಣಿ at 8:42 pm 1 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
ಹಣ್ಣಿನ ಜೀವನ
ಕಾಯಿಯು, ಕನಸ ಕಂಡಿತೇ
ಹಣ್ಣಾಗುವೆನೆಂದು?
Posted By ಅಂತರ್ವಾಣಿ at 8:41 pm 1 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Monday, 14 April 2008
ದುಃಖ ದೂರ
ಆಪ್ತ ಮಿತ್ರೆಯ ಸನಿಹ ಸೇರಿದ
ತನ್ನಂತರಾಳದ ನೋವುಗಳ
ಒಂದೂ ಬಿಡದೆ ಅವಳಲ್ಲಿ ಹೇಳಿಕೊಂಡ
ನೊಂದ ಮನಕೆ ಸಾಂತ್ವಾನ ಹೇಳಲು,
ಪ್ರೀತಿ ನುಡಿಗಳ ಔಷಧಿಯ ನೀಡಿದಳು!
Posted By ಅಂತರ್ವಾಣಿ at 10:35 pm 2 ಜನ ಸ್ಪಂದಿಸಿರುವರು
Saturday, 12 April 2008
ಚುರುಮುರಿ
ತಿನ್ನುವೆವು ದಿನಕ್ಕೆ ಹಲವಾರು ಬಾರಿ
ಹರಟೆ ಹೊಡೆಯಬಹುದು.
ಸಲ್ಲಬೇಕು ಕೆಲವರಿಗೆ ಮಾನ್ಯತೆ.
Posted By ಅಂತರ್ವಾಣಿ at 6:44 pm 2 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Wednesday, 9 April 2008
ಮೂರು ಪದಗಳು
ಕವನ ರಚಿಸುವ ಹಂಬಲ
ಆವರಿಸಿತು ಮನದ ಮೂಲೆಗೆ.
ಚಿತ್ತವದು ಚಂಚಲ!
ಭಾವನೆಗಳ ಹೇಳಲು
ಯಾವೊಂದು ಪದವು ಸಿಗಲಿಲ್ಲ!
ಅತ್ತ ಇತ್ತ ಅಲೆದಾಡಿದೆ! ದಣಿದೆ!
ಲೇಖನಿ ಕರದಲ್ಲಿ ಹಿಡಿದಿದ್ದರೂ
ಹಾಳೆಯು ಕಣ್ಮುಂದೆ ಹರಡಿದ್ದರೂ
ಮನಕ್ಕೆ ಕವಿದಿತ್ತು ಮಂಪರು!
ಭಾವನೆಗಳ ಹೇಳಿಕೊಳ್ಳಲು
ಪದಗಳ ಹುಡುಕಿದರೂ
ಗಮನಕ್ಕೆ ಬಂದದ್ದು ಕೇವಲ ಮೂರು!
ಮೂಡಣದ ಚಂದ್ರನ ವರ್ಣಿಸಲೇ?
ಪಡುವಣದ ಸೂರ್ಯನ ಬಣ್ಣಿಸಲೇ? ಇಬ್ಬರ
ನಡುವಿನ ನೀಲಿ ಸೀರೆಯ
ಹೊದಿಸಲೇ ಹಾಳೆಯ ಮೇಲೆ?
ಪದಗಳಿಲ್ಲದಿರೆ ಏನು? ಮನದ
ಕದವ ತೆರೆದು ನೋಡು ನೀನು
ರವಿ, ಶಶಿ, ಆಗಸವೆಲ್ಲಾ ಮಾಯವಾಗಿ,
ನೆಲೆಸಿವೆ ಕವನದಲ್ಲಿ ಪದಗಳಾಗಿ!
Posted By ಅಂತರ್ವಾಣಿ at 10:32 pm 4 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
ಮೆಲೋಡಿಯಸ್ ಮೋಹನ
"ಸರಸದ ಈ ರಸ ನಿಮಿಷ
ಸ್ವರಸ್ವರವೂ ನವ ಮೋಹನ ರಾಗ"
"ಈ ಸಂಭಾಷಣೆ... ನಮ್ಮ ಈ ಪ್ರೇಮ ಸಂಭಾಷಣೆ..ಅತಿ ನವ್ಯ
ರಸ ಕಾವ್ಯ ಮಧುರ ಮಧುರ ಮಧುರ...."
ಹರಿಯುವ ನದಿಯ ಕಲರವ ಮೋಹನ.......
"ಒಲವೆ ಜೀವನ ಸಾಕ್ಷಾತ್ಕಾರ...
ಒಲವೆ ಮರೆಯದ ಮಮಕಾರ..."
"ಬಾನಲ್ಲು ನೀನೆ... ಭುವಿಯಲ್ಲು ನೀನೆ..
ಎಲ್ಲೆಲ್ಲು ನೀನೆ...... ನನ್ನಲ್ಲು ನೀನೆ......"
"ಓಂಕಾರದಿ ಕಂಡೆ ಪ್ರೇಮ ನಾದವ
ಈ ತಾಣದಿ ತಂದೆ ನೀ ಶುಭೋದಯ "
"ಈ ಹಸಿರು ಸಿರಿಯಲಿ, ಮನಸು ಮರೆಯಲಿ...
ನವಿಲೇ......... ನಿನ್ಹಾಂಗೆಯೆ ಕುಣಿವೆ...."
ಮೇಲೆ ಹೇಳಿರುವ ಹಾಡುಗಳನ್ನು ಕೇಳಿ ನೀವು ಮೈ ಮರೆತಿರದೆ ಇರುವುದೇ ಇಲ್ಲ! ಒಂದಕ್ಕಿಂತ ಒಂದು ಮಾಧುರ್ಯ! ಇವೆಲ್ಲಾ ಹಳೇ ಹಾಡುಗಳು.
ಯಾವುದೋ ಒಂದು "ಪಂಚ ಸ್ವರ" ರಾಗಕ್ಕೆ "ಮೋಹನ" ಅಂತ ನಾಮಕರಣ ಮಾಡಿದಾಗ, ನಾನಿಲ್ಲಿ ಪ್ರಸ್ತಾಪಿಸಿರುವ ಹಾಡುಗಳ್ಯಾವುವು ಹುಟ್ಟಿರಲಿಲ್ಲ. ಆದರೂ ನೋಡಿ, ಈ ಹಾಡುಗಳು ನಮ್ಮನ್ನು "ಮೈ ಮರೆಸುತ್ತೆ", ಯಾವುದೋ ಒಂದು ಲೋಕಕ್ಕೆ ಕರೆದೊಯ್ಯುತ್ತೆ. ಇಷ್ಟಕ್ಕೆಲ್ಲಾ ಕಾರಣವಾದ ಮೋಹನಕ್ಕೆ ಹಾಗು ಅದನ್ನು ಉತ್ತಮವಾಗಿ ಉಪಯೋಗಿಸುವ ಸಂಗೀತ ನಿರ್ದೇಶಕರಿಗೆ ವಂದನೆಗಳು.
ಅದಿರಲಿ, ಮೋಹನ ಗುಂಗಲ್ಲಿ, ನನ್ನ ಕಾಫಿ ಸಮಯ ೩.೩೦ ದಾಟಿ, ಈಗ ೪.೩೦ ಆಗೋಗಿದೆ. ಈ ರಾಗದಲ್ಲಿ ಮಾತ್ರವಲ್ಲ, ಆ ಪದದಲ್ಲೂ ಎನೋ ಸೆಳೆತವಿರಬೇಕು. ಅದರ ಬಗ್ಗೆ ಬರೆಯುತ್ತ, ಸಮಯ ಹೋಗಿದ್ದೆ ಗೊತ್ತಾಗಲಿಲ್ಲ!
ಎಷ್ಟು ಜನ ಇದಕ್ಕೆ ಸಮ್ಮತಿ ಸೂಚಿಸುತ್ತೀರ ಅಂತ ನೋಡೋದೆ ನನ್ನ ಆಸೆ.
Posted By ಅಂತರ್ವಾಣಿ at 9:38 pm 3 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು
Saturday, 5 April 2008
ಫಿನ್ ಲ್ಯಾಂಡಿಗೆ ಪ್ರವಾಸ- ಮೊದಲನೆ ಬಾರಿ
ಇದೇನಪ್ಪಾ ಶೀರ್ಷಿಕೆ ಈ ರೀತಿ ಇದೆ ಅಂತ ನೋಡ್ತಾಯಿದ್ದೀರಾ? ನಾನು ಕಳೆದ ವರ್ಷ ಮೂರು ಬಾರಿ ಫಿನ್ ಲ್ಯಾಂಡಿಗೆ ಹೋಗಿ ಬಂದಿದ್ದೆ ಕೆಲಸದ ಸಲುವಾಗಿ. ಕೆಲವರು ಅಪಹಾಸ್ಯ ಕೂಡ ಮಾಡಿದರು. ಏನೊ ಅಲ್ಲೊಂದು ಸಂಸಾರ ಮಾಡಿದ್ದೀಯ ? ಆ ಕಥೆ ಅಲ್ಲಿಗೆ ಬಿಟ್ಟು ನನ್ನ ಅನುಭವವನ್ನು ನಾನು ಮರೆಯುವ ಮುನ್ನ ಬರೆದು ಬಿಡೋಣ ಅಂತ. ಇದು ಮರೆಯುವ ವಿಚಾರವಲ್ಲ. ಆದರೂ ವಯಸ್ಸಾಯ್ತು. ಮರೆತರೆ? ಅಂತ ಯೋಚನೆ. ಇತ್ತೀಚೆಗೆ ನಾನು ೨೫ನೆ ಫಾಲ್ಗುಣ ಕಂಡೆ. ಈಗ ನೇರವಾಗಿ ವಿಷಯಕ್ಕೆ ಬರ್ತೀನಿ.
ಫೆಬ್ರವರಿ ಮಾಹೆ, ದಿನಾಂಕ ೧೩. ನನ್ನ ಮನೆಯಲ್ಲಿ ನನ್ನ ಪ್ರವಾಸಕ್ಕೆ ಎಲ್ಲಾ ತಯಾರಿ ಮಾಡ್ತಾಯಿದ್ದರು. ಮರುದಿನ ಸಂಜೆ ೬.೩೦ ಗೆ ಬೆಂಗಳೂರಿನಿಂದ ದೆಹಲಿಗೆ, ನಂತರ ಬೆಳಿಗ್ಗಿನ ಜಾವ ೩.೦೦ ಕ್ಕೆ ದೆಹಲಿಯಿಂದ ಫಿನ್ ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿಗೆ ವಿಮಾನಗಳ ಟಿಕೆಟ್ ಕಾದಿರಿಸಿದ್ದೆ. ನನ್ನ ಮನೆಯವರಿಗೆಲ್ಲಾ ಒಂದೇ ಚಿಂತೆ ವಿದೇಶದಲ್ಲಿ ನನ್ನ ಆಹಾರದ ಬಗ್ಗೆ. ಕಾರಣ ನಾವು ಸಸ್ಯಹಾರಿಗಳು.
ನನ್ನೊಂದಿಗೆ ಫಿನ್ ಲ್ಯಾಂಡಿಗೆ ಬರುವ ಸಹೋದ್ಯೋಗಿ ಒಬ್ಬ ಕೂಡ ಇದ್ದ. ಆದರೆ ಅವನು ಮಾಂಸಹಾರಿ. ನನ್ನ ವಿಷಯ ತಿಳಿದಿತ್ತು ಅವನಿಗೆ. ಪ್ರಯಾಣಕ್ಕೆ ವಾರವಿರುವಾಗಲೇ ನಾವಿಬ್ಬರು ಅಲ್ಲಿಯ ಊಟದ ಯೋಚನೆಯಲ್ಲಿ ತೊಡಗಿದ್ವಿ. ಅಮ್ಮ ಹೇಳಿದ್ದರು, ರವೆಯನ್ನು ಹುರಿದು, ಅದಕ್ಕೆ ಒಗ್ಗರಣೆ ಹಾಕಿರ್ತೀನಿ, ಅದಕ್ಕೆ ನೀರು ಹಾಕಿ ಓವೆನ್ನಿನಲ್ಲಿ ಬೇಯಿಸಿಕೊಳ್ಳಿ, ಉಪ್ಪಿಟ್ಟು ಆಗುತ್ತೆ. ಇದಲ್ಲದೆ, ಅವಲಕ್ಕಿಗೆ ಬೆಲ್ಲ, ಕೊಬ್ಬರಿ ಸೇರಿಸಿ ಕೊಟ್ಟಿದ್ದರು. (ಇದು ನನ್ನ ಇಷ್ಟವಾದ ತಿನಿಸುಗಳಲ್ಲಿ ಒಂದು). ಅದಲ್ಲದೆ ಗೊಜ್ಜು ಅವಲಕ್ಕಿಯನ್ನು ಸಹ ಕೊಟ್ಟಿದ್ದರು. ಅವನಿಗೆ MTR ಅವರ ಅನ್ನಕ್ಕೆ ಸಂಬಂಧಿಸಿದ ತಿನಿಸುಗಳನ್ನು , ನೂಡಲ್ಸುಗಳನ್ನು ತರುವುದಾಗಿ ಹೇಳಿದ್ದೆ. ಅವನು ಅದರಂತೆ ಎಲ್ಲಾ ಸಿದ್ದಪಡಿಸಿದ್ದ.
ದುರಾದೃಷ್ಟ ಅಂದರೆ, ಆ ದಿನ ನನ್ನ ಕೈಯಲ್ಲಿ ಪಾಸ್ಪೋರ್ಟ್ ಇರಲಿಲ್ಲ! ವೀಸಾಗೆ ಅಂತ ದೆಹಲಿಯಲ್ಲಿ ಅಪ್ಲಿಕೇಷನ್ ಕೊಟ್ಟಿದ್ದೆ. ನನ್ನ ಸಹೋದ್ಯೋಗಿಯ ವೀಸಾ ಸಿದ್ಧವಾಗಿತ್ತು, ಅವನ ಕೈಯಲ್ಲಿ ಪಾಸ್ಪೋರ್ಟು ಇತ್ತು. ವೀಸಾದ ಚಿಂತೆ ಬಹಳವಿತ್ತು ನನ್ನಲ್ಲಿ. ಆದರೂ ಆ ದೇವರನ್ನು ನಂಬಿದ್ದೆ. ೧೩ರ ರಾತ್ರಿಯವರೆಗು, ನನ್ನ ಆಫೀಸಿನ ಈ-ಮೈಲ್ಗಳನ್ನು ನೋಡುತ್ತಾಯಿದ್ದೆ. ವೀಸಾದ ಬಗ್ಗೆ ಬರಬೇಕಿದ್ದ ಮೈಲು ಬರಲೇ ಇಲ್ಲ.
ಮರುದಿನ, ಎಂದಿನಂತೆ ಆಫೀಸಿಗೆ ಹೋದೆ. ನನ್ನ ಬಸ್ಸಿನಲ್ಲಿ ಪ್ರಯಾಣ ಮಾಡುವ ಸಹೋದ್ಯೋಗಿಗಳು "ಏನ್ ಶಂಕರ್ ಇವತ್ತು ಟ್ರಾವೆಲ್ ಮಾಡ್ಬೇಕು ಅಂದಿದ್ರೀ. ಮತ್ತೆ ಬಂದಿರಿ ?" ಅಂತ ಪ್ರಶ್ನಿಸಿದ್ರು. ಅವರಿಗೆ ಈ ವೀಸಾ ವಿಚಾರ ತಿಳಿಸಿದೆ. ನಾನು ಇತ್ತ ಹೋಗುತ್ತಿದ್ದಂತೆಯೆ, ನನ್ನ ದೊಡಪ್ಪ, ದೊಡ್ಡಮ್ಮ ಬಂದರು, ಅವರ ಜೊತೆ ನನಗಿಷ್ಟವಾದ ಹೆಸರು ಹಿಟ್ಟಿನ ಉಂಡೆ, ಚಕ್ಕುಲಿ, ಕೋಡುಬಳೆಗಳೂ ಬಂದವು. ನನ್ನ ಸೋದರತ್ತೆಯವರು ನನಗಾಗಿ ಕಡುಬು, ಲಾಡುಗಳನ್ನು ತಂದಿದ್ದರು.
ಎಲ್ಲರೂ ಸೇರಿ ನನ್ನ ಸೂಟ್ಕೇಸ್ ಸಿದ್ಧ ಪಡಿಸಿದರು. ನಾನು ಆಫೀಸಿನಲ್ಲಿ ಕುಳಿತು ವೀಸಾ ವಿಚಾರವನ್ನು ನನ್ನ ಮ್ಯಾನೇಜರ್ ಬಳಿ ಚರ್ಚಿಸಿದೆ. ಅಷ್ಟು ಹೊತ್ತಿಗೆ ದೇವರ ಆಶೀರ್ವಾದ ಫಲಿಸಿತು. ವೀಸಾ ತಯಾರಾಗಿದೆ. ಅದನ್ನು ಒಬ್ಬ ವ್ಯಕ್ತಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ನನ್ನ ಕೈಗೆ ತಲುಪಿಸ್ತಾನೆ ಎಂಬ ಸುದ್ದಿ ನನ್ನ ಕಣ್ಣುಗಳಿಗೆ ಬಿತ್ತು. ತಕ್ಷಣ ಅಮ್ಮನಿಗೆ ಫೋನು ಹಾಯಿಸಿದೆ. ಅವರಿಗೂ ಸಮಾಧಾನವಾಯಿತು. ತದನಂತರ ನಾನು, ಬಿ.ಎಂ.ಟಿ.ಸಿ. ಹತ್ತಿ, ಮನೆಗೆ ತಲುಪಿದೆ. ಅಡುಗೆ ತಯಾರಿ ಆಗ್ತಾಯಿತ್ತು. ನಾನು ನನ್ನೆಲ್ಲಾ "ಆಸ್ತಿ"ಗಳು ಸರಿಯಿದೆಯೇ ಅಂತ ನೋಡಿಕೊಂಡೆ. ವಿಮಾನ ಏರಲೂ ಸಿದ್ಧನಾಗಿದ್ದೆ. ಊಟವಾದ ನಂತರ, ವಿಮಾನ ನಿಲ್ದಾಣಕ್ಕೆ ಹೋಗಲು, ಟ್ಯಾಕ್ಸಿ ಮನೆ ಬಾಗಿಲಿಕೆ ಬಂದು ನಿಂತಿತ್ತು. ಎಲ್ಲಾ ಹಿರಿಯರಿಂದ ಆಶೀರ್ವಾದ ಪಡೆದು, ಟ್ಯಾಕ್ಸಿ ಏರಿದೆ. ನನ್ನ ಜೊತೆಗೆ, ಅಮ್ಮ, ಅಪ್ಪ ಕೂಡ ಬಂದರು.
ವಿಮಾನ ನಿಲ್ದಾಣಕ್ಕೆ ತಲುಪಿದ ಮೇಲೆ, ಅಪ್ಪ ಅಮ್ಮ ನಿಗೆ ಟಾಟ, ಮಾಡಿ, ಬೊರ್ಡಿಂಗ್ ಪಾಸ್ ತೊಗೊಳೋಕೆ ಹೋದೆ. ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯಿತು. ಪಾಸ್ ತೊಗೊಂಡು, ಸೆಕ್ಯುರಿಟಿ ಚೆಕ್ ಬಳಿ ಹೋದೆ. ಅಲ್ಲಿಂದ ಹೋಗಿ ವಿಮಾನಕ್ಕೆ ಕಾದು ಕೂತಿದ್ದೆ. ಅಷ್ಟು ಹೊತ್ತಿಗೆ ನನ್ನ ಸಹೋದ್ಯೋಗಿ ಬಂದು ಫೋನಿನಲ್ಲಿ ತುಂಬಾ ಹೊತ್ತಿನಿಂದ ಮಾತಾಡುತ್ತ ಇದ್ದ. ನಾನು ಅಮ್ಮನಿಗೆ ಫೋನು ಮಾಡಿ, ಎಲ್ಲಾ ಶಾಸ್ತ್ರಗಳು ಮುಗಿಸಿದೆ, ವಿಮಾನ ಹಾರೋ ಮುಂಚೆ ಫೋನ್ ಮಾಡ್ತೀನಿ ಅಂತ ಹೇಳಿದೆ. ಆಮೇಲೆ ನನ್ನ ಗೆಳೆಯರ, ಬಂಧುಗಳ ಕರೆಗಳು ಬರ ತೊಡಗಿತು. ಸ್ವಲ್ಪ ಹೊತ್ತಿನಲ್ಲೇ ವಿಮಾನದ ಬಳಿ ಹೋಗೋ ಕರೆ ಕೊಟ್ಟರು. ನಾನು ಹೋದದ್ದು, ಜೆಟ್ ಏರ್ವೇಸ್ ನಲ್ಲಿ. ಈ ಹಿಂದೆ ದೆಹಲಿಗೆ ಪ್ರಯಾಣ ಮಾಡಿದಾಗ ಹೋದದ್ದು ಕಿಂಗ್ ಫಿಷರ್ ನಲ್ಲಿ. ಅಲ್ಲಿ ಇದ್ದ ಕೆಂ(ತಂ)ಪು ಬೆಡಗಿಯರ ತರಹ ಇಲ್ಲೂ ಇರ್ತಾರೆ ಅಂತ ಭಾವಿಸಿದ್ದು ತಪ್ಪು ಅಂತ ತಿಳಿಯಿತು. ಇಲ್ಲಿ ಪುರುಷರು ಏರ್ ಹೋಸ್ಟ್ ಗಳಿದ್ದರು.
ವಿಮಾನ ಹಾರುವ ಮುನ್ನ ರನ್ ವೇ ವರೆಗೆ ಸಾಗುವ ಸಮಯದಲ್ಲಿ, ಪೈಲೆಟ್ ತನ್ನ ಹಾಗು ಕ್ಯಾಬಿನ್ ಕ್ರೀವ್ ಬಗ್ಗೆ ಪರಿಚಯ ಕೊಡುತ್ತಾನೆ.
[ಅವರ ಮಾತುಗಳು ನೆನಪಿರುವಷ್ಟು ಹೇಳ್ತೀನಿ]
"ಈ ವಿಮಾನ ದೆಹಲಿಗೆ ಹಾರಲಿದೆ. ಅದಕ್ಕೆ ಸಮಯ ಸುಮಾರು ೨. ೨೦ ಘಂಟೆ ಆಗಬೇಕು. ಹೆಚ್ಚು ಕಡಿಮೆ ಆದರೆ ನಾವು ಜವಾಬ್ದಾರರಲ್ಲಿ. ಏರ್ ಟ್ರಾಫಿಕ್ ಹಾಗು ಹವಾಮಾನದ ತೊಂದರೆಗಳು ನಮ್ಮ ಕೈಯಲಿಲ್ಲ. "
ಏರ್ ಹೋಸ್ಟ್ ಗಳು, ಬೆಲ್ಟನ್ನು ಹೇಗೆ ಹಾಕಿ ಕೊಳ್ಳೋದು ಅನ್ನೋದನ್ನು ತಿಳಿಸುತ್ತಾರೆ.
[ಅವರ ಕೆಲವು ಮಾತುಗಳು..]
" ಈ ವಿಮಾನಕ್ಕೆ ೮ ಬಾಗಿಲುಗಳಿವೆ... ಹೆಚ್ಚು ಕಡಿಮೆಯಾದಲ್ಲಿ ನಿಮ್ಮ ಹತ್ತಿರದ ಬಾಗಿಲಿಂದ ತಪ್ಪಿಸಿಕೊಳ್ಳಿ. ಕಾರಾಣಾಂತರದಿಂದ ನಾವೇನಾದರು, ನೀರಿನಲ್ಲಿ ವಿಮಾನ ಇಳಿಸುವ ಸಮಯ ಬಂದರೆ... ಹೆದರ ಬೇಡಿ, ನಿಮ್ಮ ಸೀಟ್ ಕೆಳಗೆ ಲೈಫ್ ಸೇವಿಂಗ್ ಜ್ಯಾಕೆಟ್ ಇದೆ. ಹಾಕಿಕೊಳ್ಳೀ ಬದುಕೊತೀರ. ಹವಾಮಾನದ ತೊಂದರೆಯಿಂದ ಗಾಳಿಯ ಪ್ರೆಶರ್ರು ಕಡಿಮೆಯಾದಲ್ಲಿ.. ಏರ್ ಮಾಸ್ಕ್ ನಿಮ್ಮ ಮೇಲಿನ ಕ್ಯಾಬಿನ್ ನಿಂದ ಬರುತ್ತೆ. ಬೆರೆಯವರಿಗೆ ಹಾಕುವ ಮುನ್ನ ನಿಮ್ಮದನ್ನು ಹಾಕಿಕೊಳ್ಳಿ. ಎಲ್ಲಾ ಎಲೆಕ್ಟ್ರಾನಿಕ್ ಉಪಕರಣ ಬಂಧ್ ಮಾಡಿ.ನಿಮಗೆ ತಿನ್ನೋಕೆ, ಕುಡಿಯೋಕೆ ಏನಾದರು ಕೊಡ್ತೀವಿ" ಇದನ್ನೆಲ್ಲ ಹೇಳಿ, ನಮ್ಮ ಮನದಲ್ಲಿ ಆತಂಕ ಮೂಡಿಸುತ್ತಾರೆ....
ಇಷ್ಟೆಲ್ಲಾ ಕೇಳಿದ ಮೇಲೆ, ನಾವು ಕ್ಷೇಮವಾಗಿ ದೆಹಲಿ ಸೇರ್ತೀವಾ? ಅನ್ನಿಸಿ ಬಿಟ್ಟಿತು.
ಸದ್ಯ! ಸರಿಯಾದ ಸಮಯಕ್ಕೆ ವಿಮಾನ ಗಗನಕ್ಕೆ ಹಾರಿತು. ಸ್ವಲ್ಪ ಹೊತ್ತಿಗೆ ಕುಡಿಯೋಕೆ ತಂಪು ಪಾನೀಯ ಹಿಡಿದು, ಬಂದರು. ೩-೪ ಬಗೆಯ ಪಾನೀಯ ಇರುತ್ತೆ. ಅತಿಯಾದ ವಿನಯದಿಂದ, ನಿಮಗೆ ಕುಡಿಯೋಕೆ ಏನು ಬೇಕು ಸರ್ ಅಂತ ಕೇಳಿದ್ರು. (ನೀನು ಏನು ಕೊಟ್ಟರೂ ಅದು ಚೆನ್ನಾಗಿರುತ್ತೆ ಕಣಮ್ಮ....) ಏನೋ ಕೂಡಿದೆ.... ಆಮೇಲೆ ಸ್ವಲ್ಪ ಹೊತ್ತಿನಲ್ಲಿ, ತಿನ್ನೋಕೆ ತಂದು, "ವೆಜ್ ಆರ್ ನಾನ್-ವೆಜೆ ಸರ್" ಅಂದರು. ವೆಜ್ ಕೊಡಮ್ಮ ಅಂದೆ.
೨.೩೦ ನಿಮಿಷದ ಯಾನದ ನಂತರ, ರಾಷ್ಟದ ರಾಜಧಾನಿಗೆ ಭೂಸ್ಪರ್ಶ ಮಾಡಿತು. ಫೋನನ್ನು ಆನ್ ಮಾಡಿದ ತಕ್ಷಣವೆ, ಪಾಸ್ ಪೋರ್ಟ್ ಕೊಡಬೇಕಿದ್ದ ವ್ಯಕ್ತಿಯ ಕರೆ ಬಂದಿತು. ನನಗೆ ತೋಚಿದ ಅಲ್ಪ ಸ್ವಲ್ಪ ಹಿಂದಿಯಲ್ಲೆ... "ಅಭಿ ಏರೊಪ್ಲೇನ್ ಮೆ ಹೂಂ. ದಸ್ ಮಿನಿಟ್ ಮೆ ಆವುಂಗಾ" ಅಂದೆ, ಅವನು "ಓಕೆ ಸಾಬ್" ಅಂದ. ಅಲ್ಲಿಂದ ನನ್ನ ಕ್ಯಾಬಿನ್ ಬ್ಯಾಗ್ ತೊಗೊಂಡು, ನನ್ನ ದೊಡ್ಡ ಸೂಟ್ ಕೇಸ್ ತೊಗೋಳೊಕ್ಕೆ ಹೋದೆ. ಅದನ್ನು ತೊಗೊಂಡು, ಅವನಿಗೆ ಫೋನ್ ಮಾಡಿದೆ. ಅವನು, ಅರೈವಲ್ ನಲ್ಲಿ ಇದ್ದೀನಿ ಅಂದ. ನಾನು ಹೋಗಿ, ನನ್ನ ಪಾಸ್ ಪೋರ್ಟ್ ತೊಗೊಂಡು. "ಥ್ಯಾಂಕ್ಸ್ ಸಾಬ್ "ಅಂದೆ.
ಅಲ್ಲಿಂದ ನಾವು, ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗ ಬೇಕಿತ್ತು. ಅಲ್ಲಿ ಇದಕ್ಕೆ ವ್ಯವಸ್ಥೆ ಇತ್ತು. ನಮ್ಮ ವಿದೇಶ ಪ್ರಯಾಣದ ಟಿಕೆಟನ್ನು ತೋರಿಸಿದರೆ, ಅದನ್ನು ಗುರುತು ಹಾಕಿಕೊಂಡು, ಬಸ್ಸಿನ ವ್ಯವಸ್ಥೆ ಮಾಡ್ತಾರೆ. ಆ ಬಸ್ಸಿನಿಂದ, ಅಲ್ಲಿಗೆ ತಲುಪಿದ ಕೂಡಲೆ, ಆ ಜನರ ಜಾತ್ರೆ ನೋಡಿ.. ಅಬ್ಬಾ! ಏನಿದು ಅನ್ನಿಸಿತು. ಆ ಜಾತ್ರೆ ಮಧ್ಯೆ ನುಗ್ಗಿ... ಒಳಗೆ ಹೋದೆ. ಅಲ್ಲಿ ನಾನು ಹೋಗಬೇಕಿದ್ದ ವಿಮಾನ "ಫಿನ್ ಏರ್". ಅದಕ್ಕೆ ಬೋರ್ಡಿಂಗ್ ಪಾಸ್ ತೊಗೋಳೋಕೆ ಹೋದೆ. ವಿದೇಶ ಪ್ರಯಾಣವಾದ್ದರಿಂದ ಇಲ್ಲಿ ಶಾಸ್ತ್ರಗಳು ಸ್ವಲ್ಪ ಹೆಚ್ಚು. ನನ್ನ ಪಾಸ್ ಪೋರ್ಟು ನೋಡಿ, ವೀಸಾ ಸರಿಯಿದೆಯೇ? ಅಂತ ನೋಡಿದರು. ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಎಲ್ಲಿಗೆ ? ಏಕೆ? ಹೋಗ್ತಾಯಿರೋದು? (ಏನು ಘನ ಕಾರ್ಯಯಿದೆ ಅಲ್ಲಿ?) ಯಾವತ್ತು ಬರೋದು? (ಆಷಾಡಕ್ಕೆ ಹೋದ ಪತ್ನಿಗೆ ಪತಿ ಕೇಳಿದ ಹಾಗೆ...) ಆಮೇಲೆ ಎಲ್ಲ ಸರಿಯಿದೆ ಅಂತ ಬೊರ್ಡಿಂಗ್ ಪಾಸ್ ಕೊಟ್ಟು ಅದರ ಜೊತೆಗೆ, ಇಮ್ಮೈಗ್ರೇಷನ್ ಫಾರ್ಮ್ (immigration)ಕೊಟ್ಳು. ಅದನ್ನು ಫಿಲ್ ಮಾಡಿ ಕೌಂಟರ್ ನಲ್ಲಿ ಕೊಟ್ಟೆ. ಆಮೇಲೆ ನಮ್ಮ ವಿಮಾನ ಬರುವ ಗೇಟಿನ ಬಳಿ ಹೋಗಲು ಸಿದ್ಧರಾಗಿದ್ವಿ. ನಾನು ಅಮ್ಮನಿಗೆ ಫೋನ್ ಮಾಡಿ, ಎಲ್ಲಾ ಆಯ್ತು. ಹೆಲ್ಸಿಂಕಿ ವಿಮಾನಕ್ಕೆ ಕಾಯ್ತಾಯಿದ್ದೀನಿ ಅಂತ ಹೇಳಿ, ವಿಮಾನ ಹಾರುವ ಮುನ್ನ ಕರೆ ಮಾಡುವುದಾಗಿ ತಿಳಿಸಿ, ಅವರಿಗೆ ಮಲಗಲು ಹೇಳಿದೆ. ನನ್ನ ಜೊತೆಗಾರ ಪುಣ್ಯಾತ್ಮ....ಕಿವಿಗೆ ಫೋನನ್ನು ಅಂಟಿಸಿ ಕೊಂಡ. ಸ್ವಲ್ಪ ಹೊತ್ತು ಆಯ್ತು. ಆದರು ಫೋನು ಕಿವಿಯಿಂದ ಪ್ಯಾಂಟಿನ ಜೇಬಿಗೆ ಬರಲೇ ಇಲ್ಲ. ಇನ್ನು ಸ್ವಲ್ಪ ಹೊತ್ತು ಆಯ್ತು.. ಆದರೂ ಬರಲಿಲ್ಲ. ತಂದೆ, ತಾಯಿಯರ ಜೊತೆ ಮಾತಾಡಿದ ಹಾಗಿರಲಿಲ್ಲ. ಪರರ ಚಿಂತೆ ನಮಗ್ಯಾತಕೆ ಅಂತ ಸುಮ್ಮನಾದೆ. ವಿಮಾನ ಹೊರಡುವ ಸಮಯವಾಯ್ತು. ಅಮ್ಮನಿಗೆ ಫೋನ್ ಮಾಡಿ, ನನ್ನ ಮೊಬೈಲನ್ನು ಆಫ್ ಮಾಡಿದೆ. ವಿಮಾನ ಗಗನಕ್ಕೆ ಹಾರಿತು. ಸಮಯ ೪ ಆದ್ದರಿಂದ ನಿದ್ದೆ ವಿಪರೀತ ಇತ್ತು. ಹೆಲ್ಸಿಂಕಿಗೆ ಸುಮಾರು ೭.೩೦ ನಿಮಿಷ ಪ್ರಯಾಣ ಮಾಡ ಬೇಕಿತ್ತು. ನನಗೆ ಗೊತ್ತಿಲ್ಲದ ಹಾಗೆ ನಿದ್ದೆ ಮಾಡಿದ್ದೆ. ಯಾವಾಗಲೋ ಎಚ್ಚರ ವಾದಾಗ ನೋಡಿದರೆ, ನನ್ನ ಪಾಲಿನ ತಿನಿಸು, ಬಂದಿತ್ತು. ಹಾಗೆ ನಿದ್ದೆ ಕಣ್ಣಲ್ಲೇ ತಿಂದು, ಕಾಫಿ ಕುಡಿದೆ. ತದನಂತರ, ಇದು ವಿದೇಶ ವಿಮಾನವಾದ್ದರಿಂದ, ಮದ್ಯಪಾನ ಸೇವನೆಗೆ ಅವಕಾಶವಿತ್ತು. ಅವಳು ಬಂದಾಗ, ಬೇಡಮ್ಮ ಮುಂದೆ ಹೋಗು ಅಂತ ಕಳಿಸಿ ಬಿಟ್ಟೆ. ನಿದ್ದೆ ಹೊಡೆದೇ ಬಿಟ್ಟೆ. ಇನ್ನು ಸ್ವಲ್ಪ ಹೊತ್ತು ಆದ್ಮೇಲೆ, ಪ್ರಕೃತಿ ಮಾತೆಯ ಕರೆಗೋಸ್ಕರ ಎಚ್ಚರ ಮಾಡಿಕೊಂಡೆ. ಅದಕ್ಕೂ ದೊಡ್ಡ ಸಾಲೇ ಇತ್ತು. ಆಗ ವಿಮಾನದ ಟಿ.ವಿ. ಯಲ್ಲಿ ಯವುದೋ ಹಿಂದಿ ಚಿತ್ರ ಬರ್ತಾಯಿತ್ತು. ಸ್ವಲ್ಪ ನೋಡಿದೆ. (ಅರ್ಥ ಆಯ್ತು...ಇಂಗ್ಲಿಷ್ ನಲ್ಲಿ ಸಬ್ ಟೈಟಲ್ಸ್ ಬರ್ತಾಯಿತ್ತು.) ನನ್ನ ಕೆಲಸ ಆದ್ಮೇಲೆ ಮಲಗಿಬಿಟ್ಟೆ. ಆಮೇಲೆ, ಇನ್ನೊಮ್ಮೆ ತಿನ್ನಲು ಏನೋ ಕೊಟ್ಟರು. "ಇದು ವೆಜ್ಜಾ ?" ಅಂತ ಕೇಳಿದೆ, ಅವರು ಹೌದೆಂದರು. ಅದು ಹೊಟ್ಟೆಗೆ ಹೋಯಿತು. ಫಿನ್ ಲ್ಯಾಂಡ್ ಸಮೀಪಿಸುತ್ತಿರುವ ವಿಚಾರ ಟಿ.ವಿ. ಪರದೆಯ ಮೇಲೆ ಬಂದ ನಕ್ಷೆಯಿಂದ ತಿಳಿಯಿತು.
ಆಗ ಹೊರಗಿನ ವಾತವರಣ ಹೇಗಿದೆ ಅಂತ ನೋಡಿದಾಗ .... ಆಶ್ಚರ್ಯ ಕಾದಿತ್ತು. ಎಲ್ಲೆಡೆ, ಬಿಳೀ ಮಂಜಿನ ಗೆಡ್ಡೆಗಳಿಂದ ರಸ್ತೆಗಳು ತುಂಬಿ ಕೊಂಡಿದ್ದವು. ಈ ರೀತಿಯಾದ ಮಂಜು ಕೇವಲ ಚಲನ ಚಿತ್ರದಲ್ಲೇ ನೋಡಿದ್ದೆ.... ಈಗ ಅದು ಸಾಕ್ಷತ್ಕಾರವಾಯಿತು.
[ಹೆಲ್ಸಿಂಕಿನಲ್ಲಿ ಏನು ಆಯಿತು... ಅಂತ ಮುಂದಿನ ಭಾಗದಲ್ಲಿ ಹೇಳ್ತೀನಿ...]
Posted By ಅಂತರ್ವಾಣಿ at 9:14 pm 3 ಜನ ಸ್ಪಂದಿಸಿರುವರು
ವಿಭಾಗ: ಪ್ರವಾಸ ಕಥನ
Thursday, 3 April 2008
ಕಂಗಳ
ಕಂಗಳ = ಕುರುಡ
[ "A Person who can explain color to a blind man, can explain anything in life to anyone!" - ಈ ಮಾತನ್ನು ಯಾರು ಹೇಳಿದರೋ ನನಗೆ ತಿಳಿದಿಲ್ಲ. ಅವರಿಗೆ ನನ್ನ ಧನ್ಯವಾದಗಳು. ಇದನ್ನು ಕಿರು ಸಂದೇಶದ ಮೂಲಕ ಕಳುಹಿಸಿದ ನನ್ನ ಬೆಮಿ ರಾಧಾಳಿಗೂ ಧನ್ಯವಾದಗಳು. ತುಂಬಾ ಥ್ಯಾಂಕ್ಸ್ ಕಣಮ್ಮ!]
ಅಣ್ಣ! ಅಣ್ಣ!, ಕೆಂಪು ಬಣ್ಣ ಹೇಗಿರುವುದಣ್ಣ?
ನಮ್ಮ ನೆತ್ತರಿನ ಹಾಗಿರುವುದು ತಮ್ಮ
ನೆತ್ತರವ ಮುಟ್ಟಿರುವೆಯಷ್ಟೇ, ತಿಳಿಯದದರ ಬಣ್ಣ!
ಅಣ್ಣ! ಅಣ್ಣ!, ಹಸಿರು ಬಣ್ಣ ಹೇಗಿರುವುದಣ್ಣ?
ತೋಟದ ವೀಳ್ಯದೆಲೆ ಹಾಗಿರುವುದು ತಮ್ಮ
ವೀಳ್ಯದೆಲೆ ಜಗಿದಿರುವೆಯಷ್ಟೇ, ತಿಳಿಯದದರ ಬಣ್ಣ!
ಅಣ್ಣ! ಅಣ್ಣ!, ಬಿಳಿ ಬಣ್ಣ ಹೇಗಿರುವುದಣ್ಣ?
ಹಾಲಿನ, ಮೊಸರಿನ, ಹಾಗಿರುವುದು ತಮ್ಮ
ಹಾಲು, ಮೊಸರು ಕುಡಿದಿರುವೆಯಷ್ಟೇ, ತಿಳಿಯದದರ ಬಣ್ಣ!
ಅಣ್ಣ! ಅಣ್ಣ!, ನೀಲಿ ಬಣ್ಣ ಹೇಗಿರುವುದಣ್ಣ?
ಮೇಲಿನ ಆಗಸದ ಹಾಗಿರುವುದು ತಮ್ಮ
ಮಣ್ಣ ಸೇರಿದ ಮೇಲೆ, ನಾನು ಹೋಗುವ ಜಾಗ
ಅಲ್ಲಿರುವುದಲ್ಲವೇ ಅಣ್ಣ?
ಕಿತ್ತಳೆ ಹಣ್ಣು ತಿಂದಿರುವೆ,
ಕಿತ್ತಳೆ ಬಣ್ಣ ತಿಳಿದಿಲ್ಲ!
ನೇರಳೆ ಹಣ್ಣು ತಿಂದಿರುವೆ,
ನೇರಳೆ ಬಣ್ಣ ತಿಳಿದಿಲ್ಲ!
ನಿಂಬೆಯ ಪಾನಕ ಕುಡಿದಿರುವೆ,
ಹಳದಿಯ ಬಣ್ಣ ತಿಳಿದಿಲ್ಲ!
ತಂಗಿಯ ಕಣ್ಣಿಗೆ ಕಾಡಿಗೆ ಹಚ್ಚಿರುವೆ,
ಕಪ್ಪು ಬಣ್ಣ ತಿಳಿದಿಲ್ಲ!
ಅರ್ಧಾಂಗಿಯ ಮುಡಿಗೆ, ಗುಲಾಬಿ ಮುಡಿಸಿರುವೆ,
ಗುಲಾಬಿಯ ಬಣ್ಣ ತಿಳಿದಿಲ್ಲ!
ರಾಷ್ಟ್ರಧ್ವಜಕ್ಕೆ ನಮಿಸಿರುವೆ,
ಕೇಸರಿ ಬಣ್ಣ ತಿಳಿದಿಲ್ಲ!
ನವಿಲ ಜೊತೆಗೆ ನರ್ತಿಸಿರುವೆ,
ಅವುಗಳಲ್ಲಿನ ಬಣ್ಣ ತಿಳಿದಿಲ್ಲ!
ಅಣ್ಣ! ಅಣ್ಣ!,ಏನಾದರು ಮಾತಾಡಣ್ಣ
ಅಣ್ಣ! ಅಣ್ಣ!, ಬಣ್ಣದ ಬಗ್ಗೆ ತಿಳಿಸಣ್ಣ
ಸುಮ್ಮನಿರುವೆ ನೀನು ಏಕಣ್ಣ?
ತಮ್ಮ ! ಅದು___________________
____________________________
____________________________
____________________________
(ಈ ಬಿಟ್ಟ ಸ್ಥಳಗಳಲ್ಲಿ ಪದಗಳನ್ನು ಪೋಣಿಸುವ ಶಕ್ತಿ ನನ್ನಲ್ಲಿಲ್ಲ. ನನಗೆ ಏನೂ ಬರೆಯಲು ತೋಚುತ್ತಿಲ್ಲ.)
Posted By ಅಂತರ್ವಾಣಿ at 9:49 pm 3 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
Wednesday, 2 April 2008
ಅನ್ನದಾತ ಸುಖೀ ಭವ!
ಈ ಕವನ ಇಲ್ಲಿ ಪ್ರಕಟವಾಗಿದೆ. ಬಾನುಲಿ.ಕಾಂ
ಬಾನುಲಿ ತಂಡಕ್ಕೆ ನನ್ನ ಧನ್ಯವಾದಗಳು
ಬೆಳೆಯ ಕನಸು ಕಾಣುವ ಮುನ್ನ
ಬೇಕಾದದ್ದನ್ನು ಬೆಳೆಯುವರಣ್ಣ!
Posted By ಅಂತರ್ವಾಣಿ at 10:22 pm 1 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Tuesday, 1 April 2008
ಯಾರು ಮೂರ್ಖರು ಈ ಮೂವರೊಳಗೆ?
ಅದರಲ್ಲಿ ಬರೋ ಸನ್ನಿವೇಶ ಅ'ವರ'ದ್ದೋ ('ಕವಿ') ಅಥವಾ ಇವರದ್ದೋ (ನಿರ್ದೇಶಕರು)? ಆ ಮಹಾನ್ ಕೃತಿ ರಚಿಸೋಕು ಅಷ್ಟು ಸಮಯ ಹಿಡಿದಿರೋದಿಲ್ಲ ಅನಿಸುತ್ತೆ ಆ ಅಜ್ಜರಿಗೆ.
" ಆರಂಭದ ೫೦ ಅಥವಾ ೬೦ ಕಂತುಗಳವರೆಗೂ
ಮುಂದಿನ ೫೦೦ ಅಥವಾ ೬೦೦ ಕಂತುಗಳವರೆಗೂ,
-- ಕೊನೆಯಲ್ಲಿ ಹೇಗೋ ಮುಗಿಸ ಬೇಕಪ್ಪ ಅಂತ ಮುಗಿಸ್ತಾರೆ.
--ಸೀರಿಯಲ್ ತೆಗೆಯುವವರಾ?
--ಅದರಲಿ ನಟಿಸುವರಾ?
--ತಪ್ಪದೆ ವೀಕ್ಷಿಸುವರಾ?
ಉತ್ತರ ಸಿಕ್ಕಿಲ್ಲ! ಆದರೆ ಅದು ಅನಿವಾರ್ಯವಾದ್ದರಿಂದ ಅವರುಗಳು ಈ ರೀತಿ ಮಾಡ್ತಾರೆ ಎಂಬ ತೀರ್ಮಾನಕ್ಕೆ ಬಂದಿರುವೆ. ಅವರ ಕಾಯಕೆವಷ್ಟೇ ಈ ರೀತಿ ಅವರನ್ನು ಮಾಡಿದೆ.
"ಎಲ್ಲರು ಮಾಡುವುದು ಹೊಟ್ಟೆಗಾಗಿ,
ಗೇಣು ಬಟ್ಟೆಗಾಗಿ, ತುತ್ತು ಹಿಟ್ಟಿಗಾಗಿ"
Posted By ಅಂತರ್ವಾಣಿ at 10:34 pm 1 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು