Saturday, 5 April, 2008

ಫಿನ್ ಲ್ಯಾಂಡಿಗೆ ಪ್ರವಾಸ- ಮೊದಲನೆ ಬಾರಿ

ಇದೇನಪ್ಪಾ ಶೀರ್ಷಿಕೆ ಈ ರೀತಿ ಇದೆ ಅಂತ ನೋಡ್ತಾಯಿದ್ದೀರಾ? ನಾನು ಕಳೆದ ವರ್ಷ ಮೂರು ಬಾರಿ ಫಿನ್ ಲ್ಯಾಂಡಿಗೆ ಹೋಗಿ ಬಂದಿದ್ದೆ ಕೆಲಸದ ಸಲುವಾಗಿ. ಕೆಲವರು ಅಪಹಾಸ್ಯ ಕೂಡ ಮಾಡಿದರು. ಏನೊ ಅಲ್ಲೊಂದು ಸಂಸಾರ ಮಾಡಿದ್ದೀಯ ? ಆ ಕಥೆ ಅಲ್ಲಿಗೆ ಬಿಟ್ಟು ನನ್ನ ಅನುಭವವನ್ನು ನಾನು ಮರೆಯುವ ಮುನ್ನ ಬರೆದು ಬಿಡೋಣ ಅಂತ. ಇದು ಮರೆಯುವ ವಿಚಾರವಲ್ಲ. ಆದರೂ ವಯಸ್ಸಾಯ್ತು. ಮರೆತರೆ? ಅಂತ ಯೋಚನೆ. ಇತ್ತೀಚೆಗೆ ನಾನು ೨೫ನೆ ಫಾಲ್ಗುಣ ಕಂಡೆ. ಈಗ ನೇರವಾಗಿ ವಿಷಯಕ್ಕೆ ಬರ್ತೀನಿ.

ಫೆಬ್ರವರಿ ಮಾಹೆ, ದಿನಾಂಕ ೧೩. ನನ್ನ ಮನೆಯಲ್ಲಿ ನನ್ನ ಪ್ರವಾಸಕ್ಕೆ ಎಲ್ಲಾ ತಯಾರಿ ಮಾಡ್ತಾಯಿದ್ದರು. ಮರುದಿನ ಸಂಜೆ ೬.೩೦ ಗೆ ಬೆಂಗಳೂರಿನಿಂದ ದೆಹಲಿಗೆ, ನಂತರ ಬೆಳಿಗ್ಗಿನ ಜಾವ ೩.೦೦ ಕ್ಕೆ ದೆಹಲಿಯಿಂದ ಫಿನ್ ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿಗೆ ವಿಮಾನಗಳ ಟಿಕೆಟ್ ಕಾದಿರಿಸಿದ್ದೆ. ನನ್ನ ಮನೆಯವರಿಗೆಲ್ಲಾ ಒಂದೇ ಚಿಂತೆ ವಿದೇಶದಲ್ಲಿ ನನ್ನ ಆಹಾರದ ಬಗ್ಗೆ. ಕಾರಣ ನಾವು ಸಸ್ಯಹಾರಿಗಳು.

ನನ್ನೊಂದಿಗೆ ಫಿನ್ ಲ್ಯಾಂಡಿಗೆ ಬರುವ ಸಹೋದ್ಯೋಗಿ ಒಬ್ಬ ಕೂಡ ಇದ್ದ. ಆದರೆ ಅವನು ಮಾಂಸಹಾರಿ. ನನ್ನ ವಿಷಯ ತಿಳಿದಿತ್ತು ಅವನಿಗೆ. ಪ್ರಯಾಣಕ್ಕೆ ವಾರವಿರುವಾಗಲೇ ನಾವಿಬ್ಬರು ಅಲ್ಲಿಯ ಊಟದ ಯೋಚನೆಯಲ್ಲಿ ತೊಡಗಿದ್ವಿ. ಅಮ್ಮ ಹೇಳಿದ್ದರು, ರವೆಯನ್ನು ಹುರಿದು, ಅದಕ್ಕೆ ಒಗ್ಗರಣೆ ಹಾಕಿರ್ತೀನಿ, ಅದಕ್ಕೆ ನೀರು ಹಾಕಿ ಓವೆನ್ನಿನಲ್ಲಿ ಬೇಯಿಸಿಕೊಳ್ಳಿ, ಉಪ್ಪಿಟ್ಟು ಆಗುತ್ತೆ. ಇದಲ್ಲದೆ, ಅವಲಕ್ಕಿಗೆ ಬೆಲ್ಲ, ಕೊಬ್ಬರಿ ಸೇರಿಸಿ ಕೊಟ್ಟಿದ್ದರು. (ಇದು ನನ್ನ ಇಷ್ಟವಾದ ತಿನಿಸುಗಳಲ್ಲಿ ಒಂದು). ಅದಲ್ಲದೆ ಗೊಜ್ಜು ಅವಲಕ್ಕಿಯನ್ನು ಸಹ ಕೊಟ್ಟಿದ್ದರು. ಅವನಿಗೆ MTR ಅವರ ಅನ್ನಕ್ಕೆ ಸಂಬಂಧಿಸಿದ ತಿನಿಸುಗಳನ್ನು , ನೂಡಲ್ಸುಗಳನ್ನು ತರುವುದಾಗಿ ಹೇಳಿದ್ದೆ. ಅವನು ಅದರಂತೆ ಎಲ್ಲಾ ಸಿದ್ದಪಡಿಸಿದ್ದ.

ದುರಾದೃಷ್ಟ ಅಂದರೆ, ಆ ದಿನ ನನ್ನ ಕೈಯಲ್ಲಿ ಪಾಸ್ಪೋರ್ಟ್ ಇರಲಿಲ್ಲ! ವೀಸಾಗೆ ಅಂತ ದೆಹಲಿಯಲ್ಲಿ ಅಪ್ಲಿಕೇಷನ್ ಕೊಟ್ಟಿದ್ದೆ. ನನ್ನ ಸಹೋದ್ಯೋಗಿಯ ವೀಸಾ ಸಿದ್ಧವಾಗಿತ್ತು, ಅವನ ಕೈಯಲ್ಲಿ ಪಾಸ್ಪೋರ್ಟು ಇತ್ತು. ವೀಸಾದ ಚಿಂತೆ ಬಹಳವಿತ್ತು ನನ್ನಲ್ಲಿ. ಆದರೂ ಆ ದೇವರನ್ನು ನಂಬಿದ್ದೆ. ೧೩ರ ರಾತ್ರಿಯವರೆಗು, ನನ್ನ ಆಫೀಸಿನ ಈ-ಮೈಲ್ಗಳನ್ನು ನೋಡುತ್ತಾಯಿದ್ದೆ. ವೀಸಾದ ಬಗ್ಗೆ ಬರಬೇಕಿದ್ದ ಮೈಲು ಬರಲೇ ಇಲ್ಲ.

ಮರುದಿನ, ಎಂದಿನಂತೆ ಆಫೀಸಿಗೆ ಹೋದೆ. ನನ್ನ ಬಸ್ಸಿನಲ್ಲಿ ಪ್ರಯಾಣ ಮಾಡುವ ಸಹೋದ್ಯೋಗಿಗಳು "ಏನ್ ಶಂಕರ್ ಇವತ್ತು ಟ್ರಾವೆಲ್ ಮಾಡ್ಬೇಕು ಅಂದಿದ್ರೀ. ಮತ್ತೆ ಬಂದಿರಿ ?" ಅಂತ ಪ್ರಶ್ನಿಸಿದ್ರು. ಅವರಿಗೆ ಈ ವೀಸಾ ವಿಚಾರ ತಿಳಿಸಿದೆ. ನಾನು ಇತ್ತ ಹೋಗುತ್ತಿದ್ದಂತೆಯೆ, ನನ್ನ ದೊಡಪ್ಪ, ದೊಡ್ಡಮ್ಮ ಬಂದರು, ಅವರ ಜೊತೆ ನನಗಿಷ್ಟವಾದ ಹೆಸರು ಹಿಟ್ಟಿನ ಉಂಡೆ, ಚಕ್ಕುಲಿ, ಕೋಡುಬಳೆಗಳೂ ಬಂದವು. ನನ್ನ ಸೋದರತ್ತೆಯವರು ನನಗಾಗಿ ಕಡುಬು, ಲಾಡುಗಳನ್ನು ತಂದಿದ್ದರು.

ಎಲ್ಲರೂ ಸೇರಿ ನನ್ನ ಸೂಟ್ಕೇಸ್ ಸಿದ್ಧ ಪಡಿಸಿದರು. ನಾನು ಆಫೀಸಿನಲ್ಲಿ ಕುಳಿತು ವೀಸಾ ವಿಚಾರವನ್ನು ನನ್ನ ಮ್ಯಾನೇಜರ್ ಬಳಿ ಚರ್ಚಿಸಿದೆ. ಅಷ್ಟು ಹೊತ್ತಿಗೆ ದೇವರ ಆಶೀರ್ವಾದ ಫಲಿಸಿತು. ವೀಸಾ ತಯಾರಾಗಿದೆ. ಅದನ್ನು ಒಬ್ಬ ವ್ಯಕ್ತಿ ದೆಹಲಿಯ ವಿಮಾನ ನಿಲ್ದಾಣದಲ್ಲಿ ನನ್ನ ಕೈಗೆ ತಲುಪಿಸ್ತಾನೆ ಎಂಬ ಸುದ್ದಿ ನನ್ನ ಕಣ್ಣುಗಳಿಗೆ ಬಿತ್ತು. ತಕ್ಷಣ ಅಮ್ಮನಿಗೆ ಫೋನು ಹಾಯಿಸಿದೆ. ಅವರಿಗೂ ಸಮಾಧಾನವಾಯಿತು. ತದನಂತರ ನಾನು, ಬಿ.ಎಂ.ಟಿ.ಸಿ. ಹತ್ತಿ, ಮನೆಗೆ ತಲುಪಿದೆ. ಅಡುಗೆ ತಯಾರಿ ಆಗ್ತಾಯಿತ್ತು. ನಾನು ನನ್ನೆಲ್ಲಾ "ಆಸ್ತಿ"ಗಳು ಸರಿಯಿದೆಯೇ ಅಂತ ನೋಡಿಕೊಂಡೆ. ವಿಮಾನ ಏರಲೂ ಸಿದ್ಧನಾಗಿದ್ದೆ. ಊಟವಾದ ನಂತರ, ವಿಮಾನ ನಿಲ್ದಾಣಕ್ಕೆ ಹೋಗಲು, ಟ್ಯಾಕ್ಸಿ ಮನೆ ಬಾಗಿಲಿಕೆ ಬಂದು ನಿಂತಿತ್ತು. ಎಲ್ಲಾ ಹಿರಿಯರಿಂದ ಆಶೀರ್ವಾದ ಪಡೆದು, ಟ್ಯಾಕ್ಸಿ ಏರಿದೆ. ನನ್ನ ಜೊತೆಗೆ, ಅಮ್ಮ, ಅಪ್ಪ ಕೂಡ ಬಂದರು.

ವಿಮಾನ ನಿಲ್ದಾಣಕ್ಕೆ ತಲುಪಿದ ಮೇಲೆ, ಅಪ್ಪ ಅಮ್ಮ ನಿಗೆ ಟಾಟ, ಮಾಡಿ, ಬೊರ್ಡಿಂಗ್ ಪಾಸ್ ತೊಗೊಳೋಕೆ ಹೋದೆ. ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯಿತು. ಪಾಸ್ ತೊಗೊಂಡು, ಸೆಕ್ಯುರಿಟಿ ಚೆಕ್ ಬಳಿ ಹೋದೆ. ಅಲ್ಲಿಂದ ಹೋಗಿ ವಿಮಾನಕ್ಕೆ ಕಾದು ಕೂತಿದ್ದೆ. ಅಷ್ಟು ಹೊತ್ತಿಗೆ ನನ್ನ ಸಹೋದ್ಯೋಗಿ ಬಂದು ಫೋನಿನಲ್ಲಿ ತುಂಬಾ ಹೊತ್ತಿನಿಂದ ಮಾತಾಡುತ್ತ ಇದ್ದ. ನಾನು ಅಮ್ಮನಿಗೆ ಫೋನು ಮಾಡಿ, ಎಲ್ಲಾ ಶಾಸ್ತ್ರಗಳು ಮುಗಿಸಿದೆ, ವಿಮಾನ ಹಾರೋ ಮುಂಚೆ ಫೋನ್ ಮಾಡ್ತೀನಿ ಅಂತ ಹೇಳಿದೆ. ಆಮೇಲೆ ನನ್ನ ಗೆಳೆಯರ, ಬಂಧುಗಳ ಕರೆಗಳು ಬರ ತೊಡಗಿತು. ಸ್ವಲ್ಪ ಹೊತ್ತಿನಲ್ಲೇ ವಿಮಾನದ ಬಳಿ ಹೋಗೋ ಕರೆ ಕೊಟ್ಟರು. ನಾನು ಹೋದದ್ದು, ಜೆಟ್ ಏರ್ವೇಸ್ ನಲ್ಲಿ. ಈ ಹಿಂದೆ ದೆಹಲಿಗೆ ಪ್ರಯಾಣ ಮಾಡಿದಾಗ ಹೋದದ್ದು ಕಿಂಗ್ ಫಿಷರ್ ನಲ್ಲಿ. ಅಲ್ಲಿ ಇದ್ದ ಕೆಂ(ತಂ)ಪು ಬೆಡಗಿಯರ ತರಹ ಇಲ್ಲೂ ಇರ್ತಾರೆ ಅಂತ ಭಾವಿಸಿದ್ದು ತಪ್ಪು ಅಂತ ತಿಳಿಯಿತು. ಇಲ್ಲಿ ಪುರುಷರು ಏರ್ ಹೋಸ್ಟ್ ಗಳಿದ್ದರು.
ವಿಮಾನ ಹಾರುವ ಮುನ್ನ ರನ್ ವೇ ವರೆಗೆ ಸಾಗುವ ಸಮಯದಲ್ಲಿ, ಪೈಲೆಟ್ ತನ್ನ ಹಾಗು ಕ್ಯಾಬಿನ್ ಕ್ರೀವ್ ಬಗ್ಗೆ ಪರಿಚಯ ಕೊಡುತ್ತಾನೆ.
[ಅವರ ಮಾತುಗಳು ನೆನಪಿರುವಷ್ಟು ಹೇಳ್ತೀನಿ]
"ಈ ವಿಮಾನ ದೆಹಲಿಗೆ ಹಾರಲಿದೆ. ಅದಕ್ಕೆ ಸಮಯ ಸುಮಾರು ೨. ೨೦ ಘಂಟೆ ಆಗಬೇಕು. ಹೆಚ್ಚು ಕಡಿಮೆ ಆದರೆ ನಾವು ಜವಾಬ್ದಾರರಲ್ಲಿ. ಏರ್ ಟ್ರಾಫಿಕ್ ಹಾಗು ಹವಾಮಾನದ ತೊಂದರೆಗಳು ನಮ್ಮ ಕೈಯಲಿಲ್ಲ. "
ಏರ್ ಹೋಸ್ಟ್ ಗಳು, ಬೆಲ್ಟನ್ನು ಹೇಗೆ ಹಾಕಿ ಕೊಳ್ಳೋದು ಅನ್ನೋದನ್ನು ತಿಳಿಸುತ್ತಾರೆ.
[ಅವರ ಕೆಲವು ಮಾತುಗಳು..]
" ಈ ವಿಮಾನಕ್ಕೆ ೮ ಬಾಗಿಲುಗಳಿವೆ... ಹೆಚ್ಚು ಕಡಿಮೆಯಾದಲ್ಲಿ ನಿಮ್ಮ ಹತ್ತಿರದ ಬಾಗಿಲಿಂದ ತಪ್ಪಿಸಿಕೊಳ್ಳಿ. ಕಾರಾಣಾಂತರದಿಂದ ನಾವೇನಾದರು, ನೀರಿನಲ್ಲಿ ವಿಮಾನ ಇಳಿಸುವ ಸಮಯ ಬಂದರೆ... ಹೆದರ ಬೇಡಿ, ನಿಮ್ಮ ಸೀಟ್ ಕೆಳಗೆ ಲೈಫ್ ಸೇವಿಂಗ್ ಜ್ಯಾಕೆಟ್ ಇದೆ. ಹಾಕಿಕೊಳ್ಳೀ ಬದುಕೊತೀರ. ಹವಾಮಾನದ ತೊಂದರೆಯಿಂದ ಗಾಳಿಯ ಪ್ರೆಶರ್ರು ಕಡಿಮೆಯಾದಲ್ಲಿ.. ಏರ್ ಮಾಸ್ಕ್ ನಿಮ್ಮ ಮೇಲಿನ ಕ್ಯಾಬಿನ್ ನಿಂದ ಬರುತ್ತೆ. ಬೆರೆಯವರಿಗೆ ಹಾಕುವ ಮುನ್ನ ನಿಮ್ಮದನ್ನು ಹಾಕಿಕೊಳ್ಳಿ. ಎಲ್ಲಾ ಎಲೆಕ್ಟ್ರಾನಿಕ್ ಉಪಕರಣ ಬಂಧ್ ಮಾಡಿ.ನಿಮಗೆ ತಿನ್ನೋಕೆ, ಕುಡಿಯೋಕೆ ಏನಾದರು ಕೊಡ್ತೀವಿ" ಇದನ್ನೆಲ್ಲ ಹೇಳಿ, ನಮ್ಮ ಮನದಲ್ಲಿ ಆತಂಕ ಮೂಡಿಸುತ್ತಾರೆ....
ಇಷ್ಟೆಲ್ಲಾ ಕೇಳಿದ ಮೇಲೆ, ನಾವು ಕ್ಷೇಮವಾಗಿ ದೆಹಲಿ ಸೇರ್ತೀವಾ? ಅನ್ನಿಸಿ ಬಿಟ್ಟಿತು.

ಸದ್ಯ! ಸರಿಯಾದ ಸಮಯಕ್ಕೆ ವಿಮಾನ ಗಗನಕ್ಕೆ ಹಾರಿತು. ಸ್ವಲ್ಪ ಹೊತ್ತಿಗೆ ಕುಡಿಯೋಕೆ ತಂಪು ಪಾನೀಯ ಹಿಡಿದು, ಬಂದರು. ೩-೪ ಬಗೆಯ ಪಾನೀಯ ಇರುತ್ತೆ. ಅತಿಯಾದ ವಿನಯದಿಂದ, ನಿಮಗೆ ಕುಡಿಯೋಕೆ ಏನು ಬೇಕು ಸರ್ ಅಂತ ಕೇಳಿದ್ರು. (ನೀನು ಏನು ಕೊಟ್ಟರೂ ಅದು ಚೆನ್ನಾಗಿರುತ್ತೆ ಕಣಮ್ಮ....) ಏನೋ ಕೂಡಿದೆ.... ಆಮೇಲೆ ಸ್ವಲ್ಪ ಹೊತ್ತಿನಲ್ಲಿ, ತಿನ್ನೋಕೆ ತಂದು, "ವೆಜ್ ಆರ್ ನಾನ್-ವೆಜೆ ಸರ್" ಅಂದರು. ವೆಜ್ ಕೊಡಮ್ಮ ಅಂದೆ.

೨.೩೦ ನಿಮಿಷದ ಯಾನದ ನಂತರ, ರಾಷ್ಟದ ರಾಜಧಾನಿಗೆ ಭೂಸ್ಪರ್ಶ ಮಾಡಿತು. ಫೋನನ್ನು ಆನ್ ಮಾಡಿದ ತಕ್ಷಣವೆ, ಪಾಸ್ ಪೋರ್ಟ್ ಕೊಡಬೇಕಿದ್ದ ವ್ಯಕ್ತಿಯ ಕರೆ ಬಂದಿತು. ನನಗೆ ತೋಚಿದ ಅಲ್ಪ ಸ್ವಲ್ಪ ಹಿಂದಿಯಲ್ಲೆ... "ಅಭಿ ಏರೊಪ್ಲೇನ್ ಮೆ ಹೂಂ. ದಸ್ ಮಿನಿಟ್ ಮೆ ಆವುಂಗಾ" ಅಂದೆ, ಅವನು "ಓಕೆ ಸಾಬ್" ಅಂದ. ಅಲ್ಲಿಂದ ನನ್ನ ಕ್ಯಾಬಿನ್ ಬ್ಯಾಗ್ ತೊಗೊಂಡು, ನನ್ನ ದೊಡ್ಡ ಸೂಟ್ ಕೇಸ್ ತೊಗೋಳೊಕ್ಕೆ ಹೋದೆ. ಅದನ್ನು ತೊಗೊಂಡು, ಅವನಿಗೆ ಫೋನ್ ಮಾಡಿದೆ. ಅವನು, ಅರೈವಲ್ ನಲ್ಲಿ ಇದ್ದೀನಿ ಅಂದ. ನಾನು ಹೋಗಿ, ನನ್ನ ಪಾಸ್ ಪೋರ್ಟ್ ತೊಗೊಂಡು. "ಥ್ಯಾಂಕ್ಸ್ ಸಾಬ್ "ಅಂದೆ.

ಅಲ್ಲಿಂದ ನಾವು, ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗ ಬೇಕಿತ್ತು. ಅಲ್ಲಿ ಇದಕ್ಕೆ ವ್ಯವಸ್ಥೆ ಇತ್ತು. ನಮ್ಮ ವಿದೇಶ ಪ್ರಯಾಣದ ಟಿಕೆಟನ್ನು ತೋರಿಸಿದರೆ, ಅದನ್ನು ಗುರುತು ಹಾಕಿಕೊಂಡು, ಬಸ್ಸಿನ ವ್ಯವಸ್ಥೆ ಮಾಡ್ತಾರೆ. ಆ ಬಸ್ಸಿನಿಂದ, ಅಲ್ಲಿಗೆ ತಲುಪಿದ ಕೂಡಲೆ, ಆ ಜನರ ಜಾತ್ರೆ ನೋಡಿ.. ಅಬ್ಬಾ! ಏನಿದು ಅನ್ನಿಸಿತು. ಆ ಜಾತ್ರೆ ಮಧ್ಯೆ ನುಗ್ಗಿ... ಒಳಗೆ ಹೋದೆ. ಅಲ್ಲಿ ನಾನು ಹೋಗಬೇಕಿದ್ದ ವಿಮಾನ "ಫಿನ್ ಏರ್". ಅದಕ್ಕೆ ಬೋರ್ಡಿಂಗ್ ಪಾಸ್ ತೊಗೋಳೋಕೆ ಹೋದೆ. ವಿದೇಶ ಪ್ರಯಾಣವಾದ್ದರಿಂದ ಇಲ್ಲಿ ಶಾಸ್ತ್ರಗಳು ಸ್ವಲ್ಪ ಹೆಚ್ಚು. ನನ್ನ ಪಾಸ್ ಪೋರ್ಟು ನೋಡಿ, ವೀಸಾ ಸರಿಯಿದೆಯೇ? ಅಂತ ನೋಡಿದರು. ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ಎಲ್ಲಿಗೆ ? ಏಕೆ? ಹೋಗ್ತಾಯಿರೋದು? (ಏನು ಘನ ಕಾರ್ಯಯಿದೆ ಅಲ್ಲಿ?) ಯಾವತ್ತು ಬರೋದು? (ಆಷಾಡಕ್ಕೆ ಹೋದ ಪತ್ನಿಗೆ ಪತಿ ಕೇಳಿದ ಹಾಗೆ...) ಆಮೇಲೆ ಎಲ್ಲ ಸರಿಯಿದೆ ಅಂತ ಬೊರ್ಡಿಂಗ್ ಪಾಸ್ ಕೊಟ್ಟು ಅದರ ಜೊತೆಗೆ, ಇಮ್ಮೈಗ್ರೇಷನ್ ಫಾರ್ಮ್ (immigration)ಕೊಟ್ಳು. ಅದನ್ನು ಫಿಲ್ ಮಾಡಿ ಕೌಂಟರ್ ನಲ್ಲಿ ಕೊಟ್ಟೆ. ಆಮೇಲೆ ನಮ್ಮ ವಿಮಾನ ಬರುವ ಗೇಟಿನ ಬಳಿ ಹೋಗಲು ಸಿದ್ಧರಾಗಿದ್ವಿ. ನಾನು ಅಮ್ಮನಿಗೆ ಫೋನ್ ಮಾಡಿ, ಎಲ್ಲಾ ಆಯ್ತು. ಹೆಲ್ಸಿಂಕಿ ವಿಮಾನಕ್ಕೆ ಕಾಯ್ತಾಯಿದ್ದೀನಿ ಅಂತ ಹೇಳಿ, ವಿಮಾನ ಹಾರುವ ಮುನ್ನ ಕರೆ ಮಾಡುವುದಾಗಿ ತಿಳಿಸಿ, ಅವರಿಗೆ ಮಲಗಲು ಹೇಳಿದೆ. ನನ್ನ ಜೊತೆಗಾರ ಪುಣ್ಯಾತ್ಮ....ಕಿವಿಗೆ ಫೋನನ್ನು ಅಂಟಿಸಿ ಕೊಂಡ. ಸ್ವಲ್ಪ ಹೊತ್ತು ಆಯ್ತು. ಆದರು ಫೋನು ಕಿವಿಯಿಂದ ಪ್ಯಾಂಟಿನ ಜೇಬಿಗೆ ಬರಲೇ ಇಲ್ಲ. ಇನ್ನು ಸ್ವಲ್ಪ ಹೊತ್ತು ಆಯ್ತು.. ಆದರೂ ಬರಲಿಲ್ಲ. ತಂದೆ, ತಾಯಿಯರ ಜೊತೆ ಮಾತಾಡಿದ ಹಾಗಿರಲಿಲ್ಲ. ಪರರ ಚಿಂತೆ ನಮಗ್ಯಾತಕೆ ಅಂತ ಸುಮ್ಮನಾದೆ. ವಿಮಾನ ಹೊರಡುವ ಸಮಯವಾಯ್ತು. ಅಮ್ಮನಿಗೆ ಫೋನ್ ಮಾಡಿ, ನನ್ನ ಮೊಬೈಲನ್ನು ಆಫ್ ಮಾಡಿದೆ. ವಿಮಾನ ಗಗನಕ್ಕೆ ಹಾರಿತು. ಸಮಯ ೪ ಆದ್ದರಿಂದ ನಿದ್ದೆ ವಿಪರೀತ ಇತ್ತು. ಹೆಲ್ಸಿಂಕಿಗೆ ಸುಮಾರು ೭.೩೦ ನಿಮಿಷ ಪ್ರಯಾಣ ಮಾಡ ಬೇಕಿತ್ತು. ನನಗೆ ಗೊತ್ತಿಲ್ಲದ ಹಾಗೆ ನಿದ್ದೆ ಮಾಡಿದ್ದೆ. ಯಾವಾಗಲೋ ಎಚ್ಚರ ವಾದಾಗ ನೋಡಿದರೆ, ನನ್ನ ಪಾಲಿನ ತಿನಿಸು, ಬಂದಿತ್ತು. ಹಾಗೆ ನಿದ್ದೆ ಕಣ್ಣಲ್ಲೇ ತಿಂದು, ಕಾಫಿ ಕುಡಿದೆ. ತದನಂತರ, ಇದು ವಿದೇಶ ವಿಮಾನವಾದ್ದರಿಂದ, ಮದ್ಯಪಾನ ಸೇವನೆಗೆ ಅವಕಾಶವಿತ್ತು. ಅವಳು ಬಂದಾಗ, ಬೇಡಮ್ಮ ಮುಂದೆ ಹೋಗು ಅಂತ ಕಳಿಸಿ ಬಿಟ್ಟೆ. ನಿದ್ದೆ ಹೊಡೆದೇ ಬಿಟ್ಟೆ. ಇನ್ನು ಸ್ವಲ್ಪ ಹೊತ್ತು ಆದ್ಮೇಲೆ, ಪ್ರಕೃತಿ ಮಾತೆಯ ಕರೆಗೋಸ್ಕರ ಎಚ್ಚರ ಮಾಡಿಕೊಂಡೆ. ಅದಕ್ಕೂ ದೊಡ್ಡ ಸಾಲೇ ಇತ್ತು. ಆಗ ವಿಮಾನದ ಟಿ.ವಿ. ಯಲ್ಲಿ ಯವುದೋ ಹಿಂದಿ ಚಿತ್ರ ಬರ್ತಾಯಿತ್ತು. ಸ್ವಲ್ಪ ನೋಡಿದೆ. (ಅರ್ಥ ಆಯ್ತು...ಇಂಗ್ಲಿಷ್ ನಲ್ಲಿ ಸಬ್ ಟೈಟಲ್ಸ್ ಬರ್ತಾಯಿತ್ತು.) ನನ್ನ ಕೆಲಸ ಆದ್ಮೇಲೆ ಮಲಗಿಬಿಟ್ಟೆ. ಆಮೇಲೆ, ಇನ್ನೊಮ್ಮೆ ತಿನ್ನಲು ಏನೋ ಕೊಟ್ಟರು. "ಇದು ವೆಜ್ಜಾ ?" ಅಂತ ಕೇಳಿದೆ, ಅವರು ಹೌದೆಂದರು. ಅದು ಹೊಟ್ಟೆಗೆ ಹೋಯಿತು. ಫಿನ್ ಲ್ಯಾಂಡ್ ಸಮೀಪಿಸುತ್ತಿರುವ ವಿಚಾರ ಟಿ.ವಿ. ಪರದೆಯ ಮೇಲೆ ಬಂದ ನಕ್ಷೆಯಿಂದ ತಿಳಿಯಿತು.
ಆಗ ಹೊರಗಿನ ವಾತವರಣ ಹೇಗಿದೆ ಅಂತ ನೋಡಿದಾಗ .... ಆಶ್ಚರ್ಯ ಕಾದಿತ್ತು. ಎಲ್ಲೆಡೆ, ಬಿಳೀ ಮಂಜಿನ ಗೆಡ್ಡೆಗಳಿಂದ ರಸ್ತೆಗಳು ತುಂಬಿ ಕೊಂಡಿದ್ದವು. ಈ ರೀತಿಯಾದ ಮಂಜು ಕೇವಲ ಚಲನ ಚಿತ್ರದಲ್ಲೇ ನೋಡಿದ್ದೆ.... ಈಗ ಅದು ಸಾಕ್ಷತ್ಕಾರವಾಯಿತು.

[ಹೆಲ್ಸಿಂಕಿನಲ್ಲಿ ಏನು ಆಯಿತು... ಅಂತ ಮುಂದಿನ ಭಾಗದಲ್ಲಿ ಹೇಳ್ತೀನಿ...]

3 ಜನ ಸ್ಪಂದಿಸಿರುವರು:

maddy said...

nimma anubhava kathana chennagide jay...

hanchikondadakke dhanyavaadagalu..

Sridhar Raju said...

chennagide pravaasa kathaana..
kuthoohala maintain maadatte..
igo next post odakke hogtideeni :-)

Harisha - ಹರೀಶ said...

ಹೆಲ್ಸಿಂಕಿಗೆ ಬರೀ ೭.೩೦ ನಿಮಿಷ ಪ್ರಯಾಣವಾ? ಗ್ರೇಟ್ ;-)